ಬುಧವಾರ, ಆಗಸ್ಟ್ 28, 2024

ಪೌರಾಣಿಕ ಸ್ವಾರಸ್ಯಗಳು - ಕಂಸನ ತಂದೆ ಉಗ್ರಸೇನನು ಒಳ್ಳೆಯವನಾದರೂ ಕಂಸನು ಏಕೆ ದುಷ್ಟನಾದ?

ಕಂಸನ ತಂದೆ ಉಗ್ರಸೇನನು ಒಳ್ಳೆಯವನಾದರೂ ಕಂಸನು ಏಕೆ ದುಷ್ಟನಾದ?
ನಾವು ನಿತ್ಯ ಜೀವನದಲ್ಲಿ ತಂದೆಯು ಒಳ್ಳೆಯವನಾಗಿ ಮಗನು ಕೆಟ್ಟವನಾಗಿರುವುದೋ ಅಥವಾ ಮಗನೇ ಒಳ್ಳೆಯವನಾಗಿ ತಂದೆಯು ಕೆಟ್ಟವನಾಗಿರುವುದನ್ನೋ ನೋಡುತ್ತೇವೆ.ಇದು ಸಾಮಾನ್ಯವಾಗಿ ಕಂಡುಬರುತ್ತದೆ.ತಂದೆಯು ಒಳ್ಳೆಯವನಾಗಿದ್ದರೂ ತನ್ನ ಕೆಲಸಕಾರ್ಯಗಳ ಒತ್ತಡದಲ್ಲಿ ಮಗನಿಗೆ ಪ್ರೀತಿ ತೋರಿಸದೇ ಅವನ ತಪ್ಪುಗಳನ್ನು ತಿದ್ದದೇ ಒಳ್ಳೆಯ ಶಿಕ್ಷಣ ಕೊಡದೇ ಹೋದಾಗ ಮಗನು ದುಷ್ಟರ ಸಹವಾಸಕ್ಕೆ ಬಿದ್ದು ಕೆಟ್ಟವನಾಗಬಹುದು.ಅಥವಾ ತಂದೆಯು ದುಷ್ಟನಾಗಿದ್ದರೂ ಮಗನು ಸಜ್ಜನರ ಸಹವಾಸದಿಂದ ಒಳ್ಳೆಯವನಾಗಬಹುದು.ಇಂಥ ಉದಾಹರಣೆಗಳು ಪುರಾಣಗಳಲ್ಲಿ ಬಹಳ ಸಿಗುತ್ತವೆ.ಆದರೆ ಅಲ್ಲಿ ನಮಗೆ ಇದಕ್ಕೆ ಸ್ವಾರಸ್ಯಕರ ಕಾರಣಗಳು ಸಿಗುತ್ತವೆ.ಅಂಥ ಒಂದು ಉದಾಹರಣೆ ಉಗ್ರಸೇನ ಮತ್ತು ಆವನ ಮಗ ಕಂಸ.ಎಲ್ಲರಿಗೂ ಗೊತ್ತಿರುವಂತೆ ಯಾದವರ ರಾಜನಾದ ಉಗ್ರಸೇನನು ಒಬ್ಬ ಸಜ್ಜನ.ಆದರೆ ಅವನ ಮಗ ಕಂಸನು ಮಹಾದುಷ್ಟ! ತನ್ನ ತಂದೆ, ತಾಯಿಯರನ್ನೇ ಸೆರೆಮನೆಗೆ ತಳ್ಳಿ ಮಥುರಾ ರಾಜ್ಯವನ್ನಾಳುತ್ತಿದ್ದನಲ್ಲದೇ ಪ್ರಜೆಗಳನ್ನೂ ಹಿಂಸಿಸುತ್ತಿದ್ದ.ಅವನ ತಂದೆ ಉಗ್ರಸೇನನ ಸಹೋದರ ದೇವಕನ ಮಗಳಾದ ದೇವಕಿಯನ್ನು ವಸುದೇವನು ಮದುವೆಯಾದಾಗ, ಅವರ ರಥವನ್ನು ಕಂಸನೇ ನಡೆಸುತ್ತಿದ್ದ.ಆಗ ಅಶರೀರವಾಣಿಯಾಗಿ ಈ ದೇವಕಿಗೆ ಹುಟ್ಟುವ ಎಂಟನೆಯ ಮಗನೇ ಅವನ ಮೃತ್ಯುವಾಗುತ್ತಾನೆ ಎಂದಾಗ, ಕಂಸನು ದೇವಕಿಯನ್ನೇ ಕೊಲ್ಲಲು ಹೊರಟ! ಆಗ ವಸುದೇವನು ಅವನನ್ನು ಪರಿಪರಿಯಾಗಿ ಬೇಡಿಕೊಂಡು ಹುಟ್ಟುವ ಮಕ್ಕಳನ್ನೆಲ್ಲಾ ಅವನಿಗೇ ಕೊಡುತ್ತೇನೆಂದು ವಾಗ್ದಾನ ಮಾಡಿದಾಗ ಅವನು ಸುಮ್ಮನಾದ.ಅನಂತರ ಅವನು ವಸುದೇವನ ಮಕ್ಕಳನ್ನೆಲ್ಲಾ ಕೊಂದುದಲ್ಲದೇ ಅವನನ್ನೂ ದೇವಕಿಯನ್ನೂ ಸೆರೆಯಲ್ಲಿಟ್ಟ.ವಸುದೇವನ ಮಗ ಬೇರೆಲ್ಲೋ ಇದ್ದಾನೆಂದು ತಿಳಿದಾಗ ಅವನನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸಿದ.ಕೊನೆಗೆ ತನ್ನ ಸೋದರಳಿಯ ಕೃಷ್ಣನಿಂದಲೇ ಹತನಾದ.ಕಂಸನು ಏಕೆ ಇಷ್ಟೊಂದು ದುಷ್ಟನಾದ?
        ಇದಕ್ಕೆ ಮಹಾಭಾರತದ ಖಿಲಭಾಗವಾದ ಹರಿವಂಶದಲ್ಲಿ ಸ್ವಾರಸ್ಯಕರವಾದ ಒಂದು ಕಾರಣವಿದೆ.ಅದನ್ನು ನಾರದರೇ ಕಂಸನಿಗೆ ಹೇಳುತ್ತಾರೆ.ಅದರಂತೆ, ವಾಸ್ತವವಾಗಿ ಉಗ್ರಸೇನನು ಕಂಸನ ತಂದೆಯಾಗಿರಲಿಲ್ಲ.ದ್ರುಮಿಲನೆಂಬ ರಾಕ್ಷಸ ಕಂಸನ ನಿಜವಾದ ತಂದೆಯಾಗಿದ್ದ.ಒಮ್ಮೆ ಉಗ್ರಸೇನನ ಪತ್ನಿ ರಜಸ್ವಲೆಯಾಗಿದ್ದಾಗ, ಅವಳು ಇತರ ಸಖಿಯರೊಂದಿಗೆ ಸುಯಾಮುನವೆಂಬ ಪರ್ವತವನ್ನು ನೋಡಲು ಹೋದಳು.ಆ ಪರ್ವತದ ಪ್ರಕೃತಿ ಸೌಂದರ್ಯ ಅವಳನ್ನು ಮನಸೆಳೆಯಿತು! ಸುಂದರ ವೃಕ್ಷಗಳು, ತಂಪಾದ ಗಾಳಿ, ನವಿಲುಗಳ ಕೇಕಾಧ್ವನಿ, ಇತರ ಪಕ್ಷಿಗಳ ಕಲರವ, ಕಿನ್ನರರ ಗಾಯನ, ಇವುಗಳಿಂದ ಕೂಡಿದ್ದ ಆ ಪರ್ವತದ ಶಿಖರಗಳಲ್ಲೂ ಗುಹೆಗಳಲ್ಲೂ ನದೀತೀರಗಳಲ್ಲೂ ಅವಳು ವಿಹರಿಸಿದಳು! ಆಹ್ಲಾದಕರವಾದ ಆ ವಾತಾವರಣ ಕಾಮೋದ್ದೀಪನಗೊಳಿಸುತ್ತಿತ್ತು! ಅಂತೆಯೇ ಅವಳಿಗೂ ಪುರುಷಸಮಾಗಮದ ಇಚ್ಛೆಯಾಯಿತು! ಅದೇ ಸಮಯದಲ್ಲಿ ದ್ರುಮಿಲನೆಂಬ ದಾನವನು ವಿಧಿಪ್ರೇರಿತವಾಗಿ ಅಲ್ಲಿಗೆ ಬಂದನು.ಅವನು ಸೌಭವೆಂಬ ವಿಮಾನಕ್ಕೆ ಅಧಿಪತಿಯಾಗಿದ್ದನು.ಆ ಸುಯಾಮುನ ಪರ್ವತವನ್ನು ನೋಡುವ ಇಚ್ಛೆಯಿಂದ ಅವನು ವಿಮಾನವನ್ನು ಅಲ್ಲಿಯೇ ನಿಲ್ಲಿಸಿ ತನ್ನ ಸಾರಥಿಯೊಂದಿಗೆ ಆ ಪರ್ವತದಲ್ಲಿ ಸಂಚರಿಸತೊಡಗಿದನು.ಸುಂದರವಾದ ಆ ಪರ್ವತವನ್ನೂ ಅದರ ಉಪವನವನ್ನೂ ನೋಡಿ ಅವನೂ ಆನಂದಗೊಂಡನು! ಆಗ ಅವನು, ಮೇಘಗಳ ಮಧ್ಯೆ ಮಿಂಚಿನ ಬಳ್ಳಿಯಂತೆ ಸಖಿಯರ ಮಧ್ಯೆ ವಿಹರಿಸುತ್ತಿದ್ದ ಉಗ್ರಸೇನನ ಪತ್ನಿಯನ್ನು ನೋಡಿ ಕಾಮವಶನಾದನು! ಆದರೆ ಎಷ್ಟು ಯೋಚಿಸಿದರೂ ಅವಳು ಯಾರೆಂದು ಅವನಿಗೆ ತಿಳಿಯಲಿಲ್ಲ.ಅದನ್ನೇ ತನ್ನ ಸಾರಥಿಗೆ ಹೇಳಿ, ಅವಳು ಯಾರೆಂದು ತಿಳಿದು ಬರುವವರೆಗೂ ಅಲ್ಲಿಯೇ ಕಾಯಲು ಹೇಳಿ ಒಬ್ಬನೇ ಹೋದನು.ಆದರೆ ಅವಳ‌ ಸಮೀಪ ಹೋಗುವ ಮೊದಲು ತನ್ನ ಶಕ್ತಿಯಿಂದ ಧ್ಯಾನಿಸಿ ಅವಳು ಉಗ್ರಸೇನನ ಪತ್ನಿಯೆಂದು ತಿಳಿದುಕೊಂಡನು! ಕೂಡಲೇ ಅವನು ಉಗ್ರಸೇನನ ರೂಪವನ್ನು ಧರಿಸಿ ನಗುನಗುತ್ತಾ ಅವಳ ಬಳಿಗೆ ಹೋದನು! ಸುರತಸುಖವನ್ನಾಶಿಸಿದ ಅವಳಿಗೆ ಪತಿಯನ್ನೇ ಕಂಡು ಬಹಳ ಆಶ್ಚರ್ಯ,ಸಂತೋಷಗಳುಂಟಾದವು! ಉಗ್ರಸೇನನ ರೂಪದಲ್ಲಿದ್ದ ದ್ರುಮಿಲ ದಾನವನು ಅವಳನ್ನು ಆಲಿಂಗಿಸಿ ರಮಿಸಿದನು! ಅವಳೂ ಅವನು ತನ್ನ ಪತಿಯೆಂದೇ ಭಾವಿಸಿ ಪ್ರೀತ್ಯಾದರಗಳಿಂದ ಜೊತೆಗೂಡಿದಳು! ಆದರೆ ಅವನು ಬಹಳ ಭಾರವಾಗಿದ್ದುದರಿಂದ ಅವಳಿಗೆ ಅನುಮಾನವುಂಟಾಗಿ,ಬಹಳ ಭಯಗೊಂಡು, " ಎಲೈ ದುರಾತ್ಮನೇ! ನೀನು ನಿಶ್ಚಯವಾಗಿ ನನ್ನ ಪತಿಯಲ್ಲ! ಯಾರು ನೀನು? ಯಾರ ಮಗನು? ಏಕೆ ಹೀಗೆ ನನ್ನನ್ನು ಕಳಂಕಿತಳನ್ನಾಗಿಸಿದೆ? ಈಗ ನನ್ನ ಬಂಧುಗಳು, ನನ್ನ ಪತಿಯ ಬಂಧುಗಳು ನನ್ನನ್ನು ಪರಿತ್ಯಜಿಸುತ್ತಾರೆ! ಅನಂತರ ನಾನು ಜುಗುಪ್ಸಿತಳಾಗಿ ಜೀವನ ಕಳೆಯಬೇಕಾಗುತ್ತದೆ! ನಿನಗೆ ಧಿಕ್ಕಾರ!"ಎಂದು ಹೇಳಿದಳು.
       ಅದಕ್ಕೆ ದ್ರುಮಿಲನು, " ಮೂಢ ಹೆಣ್ಣೇ! ನಾನು ಸೌಭವೆಂಬ ವಿಮಾನಕ್ಕೆ ಅಧಿಪತಿಯಾದ ದ್ರುಮಿಲನೆಂಬ ದಾನವನು! ನೀನು ಮಹಾವಿದ್ಯಾವತಿಯೆಂದು ತಿಳಿದುಕೊಂಡಿರುವೆ! ನಾನು ಓಜಸ್ಸಿನಿಂದಲೂ ತೇಜಸ್ಸಿನಿಂಲೂ ಕೂಡಿದ್ದೇನೆ! ಆದರೆ ನೀನು ಮೃತ್ಯುವಿಗೆ ವಶನಾಗಿರುವ ಒಬ್ಬ ತುಚ್ಛ ಮನುಷ್ಯನನ್ನು ಪತಿಯಾಗಿ ಪಡೆದು ನನ್ನನ್ನೇಕೆ ದೂಷಿಸುವೆ? ದೇವತೆಗಳೊಂದಿಗೋ ದಾನವರೊಂದಿಗೋ ಹೀಗೆ ಸಮಾಗಮವಾದರೆ ಸ್ತ್ರೀಯರಿಗೇನೂ ಕಳಂಕವಾಗುವುದಿಲ್ಲ! ಇಂಥ ವ್ಯಭಿಚಾರದಿಂದಲೂ ಅವರಿಗೆ ಪರಾಕ್ರಮಿಗಳಾದ ಮಕ್ಕಳೇ ಹುಟ್ಟುವರೆಂದು ಕೇಳಿದ್ದೇವೆ! ಮಾನವ ಸ್ತ್ರೀಯರಿಗೆ ಬುದ್ಧಿ ಸ್ಥಿರವಾಗಿರುವುದಿಲ್ಲ! ಆದರೆ ನೀನು ನಿನ್ನನ್ನು ಮಾತ್ರ ದೊಡ್ಡ ಪತಿವ್ರತೆ ಎಂದು ಭಾವಿಸಿಕೊಂಡು ಕೂಗಾಡತ್ತಿರುವೆ! ನೀನೀಗ ' ಕಸ್ಯ ತ್ವಂ ( ಯಾರವನು ನೀನು)' ಎಂದು ನನ್ನನ್ನು ಪ್ರಶ್ನಿಸಿದೆ! ಆದ್ದರಿಂದ ನಿನಗೆ ಕಂಸನೆಂಬ ಶತ್ರುಧ್ವಂಸಕನಾದ ಪುತ್ರನು ಜನಿಸುತ್ತಾನೆ!" ಎಂದು ಹೇಳಿದನು.
        ಇದರಿಂದ ಬಹಳ ದುಃಖಿತಳೂ ಕುಪಿತಳೂ ಆಗಿ ಅವಳು ಹೇಳಿದಳು," ಎಲೈ ದುರಾಚಾರಿ ದಾನವನೇ! ನೀನು ಎಲ್ಲಾ ಸ್ತ್ರೀಯರನ್ನೂ ನಿಂದಿಸುತ್ತಿರುವೆ! ಆದರೆ ನೀಚರಾದ ಸ್ತ್ರೀಯರಿರುವಂತೆಯೇ ಅರುಂಧತಿಯಂಥ ಸಚ್ಚಾರಿತ್ರ್ಯವುಳ್ಳ ಸ್ತ್ರೀಯರೂ ಇರುತ್ತಾರೆಂದು ತಿಳಿದುಕೋ! ಈ ನಿನ್ನ ಮಗನು ನಿನ್ನಂತೆಯೇ ದುರಾಚಾರಿಯಾಗುತ್ತಾನೆ! ಅವನೆಂದಿಗೂ ನನ್ನ ಆದರಕ್ಕೆ ಪಾತ್ರನಾಗುವುದಿಲ್ಲ! ನನ್ನ ಪತಿಯ ಕುಲದಲ್ಲಿ ಭಗವಂತನೇ ಜನಿಸಿ ನಿನಗೂ ನಿನ್ನ ಮಗನಿಗೂ ಮೃತ್ಯುವಾಗುತ್ತಾನೆ!" 
      ಇದನ್ನು ಕೇಳಿ ದ್ರುಮಿಲನು ಮರುಮಾತನಾಡದೇ ವಿಮಾನ ಹತ್ತಿ ಆಕಾಶ ಮಾರ್ಗದಲ್ಲಿ ಹೊರಟುಹೋದನು! ಉಗ್ರಸೇನನ ಪತ್ನಿಯೂ ದುಃಖಿತಳಾಗಿ ನಗರಕ್ಕೆ ಹಿಂದಿರುಗಿದಳು.
       ಹೀಗೆ ದ್ರುಮಿಲ ದಾನವನಿಂದ ಹುಟ್ಟಿದ ಕಂಸನು ದುಷ್ಟನಾದನು.ಅಲ್ಲದೇ ಅವನು ಹಿಂದಿನ ಜನ್ಮದಲ್ಲಿ ಕಾಲನೇಮಿಯೆಂಬ ರಾಕ್ಷಸನಾಗಿದ್ದು ಮಹಾವಿಷ್ಣುವಿನಿಂದ ವಧಿಸಲ್ಪಟ್ಟಿದ್ದನು.

ಸೋಮವಾರ, ಆಗಸ್ಟ್ 26, 2024

ಬಾಲಕೃಷ್ಣನ ಪರಾಕ್ರಮ

ಶ್ರೀ ಕೃಷ್ಣನು ಬಾಲಕನಾಗಿದ್ದಾಗ ಯಾವ ಯಾವ ರಾಕ್ಷಸರನ್ನು ಕೊಂದಿದ್ದನು ಹಾಗೂ ಅವರು ಯಾವ ರೂಪಗಳಲ್ಲಿ ಬಂದಿದ್ದರೆಂದು ನೋಡೋಣ.ಅಂತೆಯೇ ಯಾವ ಇತರರನ್ನು ಮಣಿಸಿದನೆಂದೂ ನೋಡೋಣ:

೧.ಪೂತನಿ - ಸುಂದರ ತರುಣಿ 
೨.ತೃಣಾವರ್ತ- ಸುಂಟರಗಾಳಿ 
೩.ಶಕಟಾಸುರ- ಗಾಡಿ 
೪.ವತ್ಸಾಸುರ- ಕರು
೫.ಬಕಾಸುರ- ಕೊಕ್ಕರೆ 
೬.ಅಘಾಸುರ- ಬೃಹತ್ ಹಾವು 
೭.ಧೇನುಕಾಸುರ-ಕತ್ತೆ( ಬಲರಾಮನಿಂದ ಹತನಾದನು)
೮.ಪ್ರಲಂಬಾಸುರ-ಗೋಪಬಾಲಕ(ಬಲರಾಮನಿಂದ ಹತನಾದನು)
೯.ಅರಿಷ್ಟಾಸುರ-ಎತ್ತು
೧೦.ಕೇಶಿ-ಕುದುರೆ
೧೧.ಕಾಲಿಯ ಅಥವಾ ಕಾಳಿಂಗ ಸರ್ಪ -ಸಾವಿರ ಹೆಡೆಗಳ ಸರ್ಪ( ಕೊಲ್ಲಲಿಲ್ಲ, ಮಣಿಸಿ ಕಳಿಸಿದನು)
೧೨.ಯಮಳಾರ್ಜುನ ವೃಕ್ಷಗಳು - ಎರಡು ಜೋಡಿ ಮರಗಳು ( ತಾಯಿ ಯಶೋದೆಯು ಕೃಷ್ಣನನ್ನು ಕಟ್ಟಿದ್ದ ಒರಳುಕಲ್ಲನ್ನು ಎಳೆದುಕೊಂಡು ಈ ಮರಗಳ ಮಧ್ಯೆ ಹೋದಾಗ ಅವು ಉರುಳಿ ಬಿದ್ದವು.ಅವು ನಾರದರಿಂದ ಶಾಪಗ್ರಸ್ತರಾಗಿದ್ದ ಕುಬೇರನ ಮಕ್ಕಳಾದ ನಳಕೂಬರ ಮತ್ತು ಮಣಿಗ್ರೀವ.ಇಬ್ಬರೂ ಶಾಪವಿಮುಕ್ತರಾಗಿ ಹೋದರು)
೧೩.ಶಂಖಚೂಡ- ತಲೆಯಲ್ಲಿ  ಮಣಿಯಿದ್ದ ರಾಕ್ಷಸ, ಗೋಪಿಯರನ್ನು ಅನುಸರಿಸುತ್ತಿದ್ದ.ಕೃಷ್ಣ ಅವನನ್ನು ಕೊಂದು ಗೋಪಿಯರನ್ನು ಬಿಡಿಸಿ, ಮಣಿಯನ್ನು ಬಲರಾಮನಿಗೆ ಕೊಟ್ಟ)
೧೪.ಸುದರ್ಶನ ವಿದ್ಯಾಧರ - ಶಾಪದಿಂದ ಹೆಬ್ಬಾವಾಗಿದ್ದ ಇವನು ನಂದನನ್ನು ಹಿಡಿಯಲು, ಕೃಷ್ಣನು ಅವನನ್ನು ಒದ್ದು ಶಾಪವಿಮುಕ್ತಿಗೊಳಿಸಿದ)
೧೪.ಪಂಚಜನ- ಶಂಖದಲ್ಲಿದ್ದ ರಾಕ್ಷಸ, ಸಾಂದೀಪನಿ ಗುರುಗಳ ಪುತ್ರನನ್ನು ಅಪಹರಿಸಿದ್ದ.ಕೃಷ್ಣ ಅವನನ್ನು ಕೊಂದು ಪಾಂಚಜನ್ಯ ಶಂಖ ತೆಗೆದುಕೊಂಡು ಯಮಲೋಕದಿಂದ ಗುರುಪುತ್ರನನ್ನು ಕರೆತಂದ)
೧೫.ಕುವಲಯಾಪೀಡ- ಮದಿಸಿದ ಆನೆ
೧೬.ಕಂಸ- ಮಥುರೆಯ ರಾಜ, ಮಾವ

ಶನಿವಾರ, ಆಗಸ್ಟ್ 17, 2024

ಪೌರಾಣಿಕ ಸ್ವಾರಸ್ಯಗಳು -ರಾವಣನಿಗೆ ಆ ಹೆಸರು ಹೇಗೆ ಬಂದಿತು?

        ರಾವಣನಿಗೆ ಮೂಲತಃ ಆ ಹೆಸರು ಇರಲಿಲ್ಲ.ಹುಟ್ಟಿದಾಗಲೇ ಹತ್ತು ತಲೆಗಳಿದ್ದ ಕಾರಣ, ಅವನ ತಂದೆ, ತಾಯಿಯರಾದ ವಿಶ್ರವಸ್ ಋಷಿ ಹಾಗೂ ಕೈಕಸಿ ಅವನಿಗೆ ದಶಗ್ರೀವ ಎಂದು ಹೆಸರಿಟ್ಟರು.ಹಾಗೆಯೇ, ಅದೇ ಅರ್ಥದ ದಶಾನನ, ದಶಕಂಠ ಎಂಬ ಹೆಸರುಗಳಿಂದಲೂ ಅವನು ಪ್ರಖ್ಯಾತನಾದನು.ದಶಗ್ರೀವನು ದೊಡ್ಡವನಾದ ಬಳಿಕ ತನ್ನ ಅಣ್ಣ ಕುಬೇರನನ್ನು ಜಯಿಸಿ, ಅವನ ಪುಷ್ಪಕ ವಿಮಾನವನ್ನು ಅಪಹರಿಸಿ ಅದರಲ್ಲಿ ಕುಳಿತು ಸಂಚರಿಸುತ್ತಿದ್ದನು.ಎಲ್ಲೆಲ್ಲೂ ಸಂಚರಿಸುತ್ತಿದ್ದ ಆ ವಿಮಾನ ಕೈಲಾಸ ಪರ್ವತದ ಬಳಿ ಬಂದಾಗ ಅದನ್ನು ದಾಟಿ ಮುಂದೆ ಹೋಗಲಾರದಾಯಿತು! ಇದೇಕೆಂದು ದಶಗ್ರೀವನಿಗೂ ಆವನ ಮಂತ್ರಿಗಳಿಗೂ ಅರ್ಥವಾಗಲಿಲ್ಲ! ಆಗ ಶಿವನ ಅನುಚರನಾದ ನಂದೀಶ್ವರನು ಬಂದು," ಎಲೈ ದಶಗ್ರೀವ! ಇಲ್ಲಿಂದ ಹಿಂದಿರುಗು! ಈ ಪರ್ವತದ ಮೇಲೆ ಶಿವನು ಪಾರ್ವತಿಯೊಡನೆ ಕ್ರೀಡಿಸುತ್ತಿದ್ದಾನೆ! ದೇವಗಂಧರ್ವನಿಗಯಕ್ಷರಾಕ್ಷಸರಾದಿಯಾಗಿ ಯಾವ ಪ್ರಾಣಿಯೂ ಈಗ ಅಲ್ಲಿಗೆ ಹೋಗುವಂತಿಲ್ಲ!" 
     ಇದನ್ನು ಕೇಳಿ ಕ್ರುದ್ಧನಾದ ದಶಗ್ರೀವನು ವಿಮಾನದಿಂದ ಕೆಳಗಿಳಿದು," ನನ್ನ ಮಾರ್ಗವನ್ನು ತಡೆಯುವ ಆ ಶಿವನಾರು?" ಎನ್ನುತ್ತಾ ಪರ್ವತದ ಬುಡದ ಬಳಿಗೆ ಹೋದನು.ಅಲ್ಲಿ ನಂದೀಶ್ವರನನ್ನು ನೋಡಿ, ಅವನ ಮುಖ ವಾನರ ಮುಖದಂತಿದ್ದುದನ್ನು ನೋಡಿ ಗಹಗಹಿಸಿ ನಕ್ಕನು! ಇದರಿಂದ ನಂದಿಯು ಕುಪಿತನಾಗಿ, " ವಾನರ ಮುಖದಂತಿರುವ ನನ್ನನ್ನು ನೋಡಿ ನಗುವೆಯಾ? ನಿನ್ನ ಕುಲವು ನನ್ನಂಥ ವಾನರರಿಂದಲೇ ನಾಶವಾಗುತ್ತದೆ!" ಎಂದು ಶಾಪ ಕೊಡುತ್ತಾ," ನಿನ್ನನ್ನೀಗಲೇ ನಾನು ಸಂಹರಿಸಬಲ್ಲೆ! ಆದರೆ ನಿನ್ನ ಕುತ್ಸಿತ ಕರ್ಮಗಳಿಂದ ನೀನೀಗಾಗಲೇ ಸತ್ತಿರುವೆ! ಸತ್ತಿರುವವನನ್ನು ನಾನೇಕೆ ಕೊಲ್ಲಲಿ?" ಎಂದನು!
     ನಂದಿಯ ಮಾತನ್ನು ಲೆಕ್ಕಿಸದೇ ದಶಗ್ರೀವನು," ಎಲೈ ಪಶುಪತಿಯೇ! ಯಾವ ಕಾರಣದಿಂದ ನನ್ನ ಪುಷ್ಪಕ ವಿಮಾನಕ್ಕೆ ಅಡ್ಡಿಯಾಯಿತೋ, ಆ ನಿನ್ನ ಪರ್ವತವನ್ನೇ ಕಿತ್ತೆಸೆದು ಮುಂದೆ ಹೋಗುತ್ತೇನೆ! ಯಾವ ಪ್ರಭಾವದಿಂದ ಆ ಶಿವನು ರಾಜನಂತೆ ಈ ಪರ್ವತದಲ್ಲಿ ಕ್ರೀಡಿಸುತ್ತಿದ್ದಾನೆ? ಭಯವು ಹತ್ತಿರ ಬಂದಿದ್ದರೂ ಅವನಿಗೆ ತಿಳಿದಿಲ್ಲ!" ಎಂದು ಗುಡುಗುತ್ತಾ ಆ ಪರ್ವತವನ್ನು ತನ್ನ ಇಪ್ಪತ್ತು ಕೈಗಳಿಂದ ಎತ್ತಿಯೇಬಿಟ್ಟನು! ಆಗ ಪರ್ವತದ ಮೇಲೆ ಅಲ್ಲೋಲಕಲ್ಲೋಲವಾಯಿತು! ಶಿವಗಣಗಳು ನಡುಗಿಹೋದರು! ಪಾರ್ವತಿಯೂ ಭಯಭೀತಳಾಗಿ ಶಿವನನ್ನು ಗಟ್ಟಿಯಾಗಿ ತಬ್ಬಿಕೊಂಡಳು! ಆಗ ಶಿವನು ತನ್ನ ಕಾಲಿನ ಹೆಬ್ಬೆರಳಿನಿಂದ ಲೀಲೆಯೆಂಬಂತೆ ಆ ಪರ್ವತವನ್ನು ಅದುಮಿದನು! ಆಗ ಆ ಪರ್ವತವು ದಶಗ್ರೀವನ ತೋಳುಗಳ ಮೇಲೆ ಬಿದ್ದು ಅವು ಜಜ್ಜಿಹೋದವು! ಆಗ ನೋವಿನಿಂದಲೂ ಕೋದಿಂದಲೂ ದಶಗ್ರೀವನು ಗಟ್ಟಿಯಾಗಿ ಆರಚಿದನು! ಆಗ ಕೂಗಿಗೆ ಮೂರು ಲೋಕಗಳೂ ನಡುಗಿದವು! ಸಮುದ್ರಗಳು ಅಲ್ಲೋಲಕಲ್ಲೋಲಗೊಂಡವು! ಪರ್ವತಗಳು ನಡುಗಿದವು! ಸಿಧ್ಧಯಕ್ಷವಿದ್ಯಾಧರರು," ಇದೇನಿದು?" ಎಂದು ಮಾತನಾಡಿಕೊಂಡರು! ದಶಗ್ರೀವನ ಮಂತ್ರಿಗಳು ಇದು ಪ್ರಳಯಕಾಲದ ಸಿಡಿಲಿನ ಆರ್ಭಟವೆಂದು ಭಾವಿಸಿದರು! ಕೂಡಲೇ ಅವರಿಗೆ ಇದೇನೆಂದು ತಿಳಿಯಲೇ ಇಲ್ಲ!
      ಅನಂತರ ವಿಷಯವನ್ನು ತಿಳಿದ ಮಂತ್ರಿಗಳು ದಶಾನನಿಗೆ ಶಿವನನ್ನೇ ಸ್ತುತಿಸಲು ಹೇಳಿದರು.ಅವನನ್ನು ಬಿಟ್ಟರೆ ಈಗ ಬೇರಾರೂ ಗತಿಯಿಲ್ಲವೆಂದೂ ಹೇಳಿದರು.ಅಂತೆಯೇ ದಶಾನನನು ಶಿವನನ್ನು ರೋದನ ಮಾಡುತ್ತಲೇ ಸಾಮಗಳಿಂದಲೂ ಸ್ತುತಿಗಳಿಂದಲೂ ಪ್ರಸನ್ನಗೊಳಿಸಿದನು.ಶಿವನು ಪ್ರಸನ್ನನಾಗಿ ಪರ್ವತವನ್ನು ಸಡಿಲಗೊಳಿಸಿ ಅವನ ತೋಳುಗಳನ್ನು ಬಿಡಿಸಿ ಅವನಿಗೆ ಕಾಣಿಸಿಕೊಂಡು ಹೇಳಿದನು," ಎಲೈ ದಶಾನನ! ನಿನ್ನ ಪರಾಕ್ರಮವನ್ನು ಮೆಚ್ಚಿದೆನು! ಯಾವ ನಿನ್ನ ಕೂಗಿನಿಂದ ಮೂರು ಲೋಕಗಳೂ ಭೀತಿಗೊಂಡು ರಾವಿತವಾಗುವಂತೆ (ಕೂಗಿಕೊಳ್ಳುವಂತೆ) ಮಾಡಿದೆಯೋ, ಆ ಕಾರಣದಿಂದ ನೀನು ಇನ್ನು ಮುಂದೆ ರಾವಣ ಎಂದು ಪ್ರಸಿದ್ಧನಾಗುವೆ!

ಯಸ್ಮಾಲ್ಲೋಕತ್ರಯಂ ಚೈತದ್ರಾವಿತಂ ಭಯಮಾಗತಮ್ /
ತಸ್ಮಾತ್ತ್ವಂ ರಾವಣೋ ನಾಮ ನಾಮ್ನಾ ರಾಜನ್ಭವಿಷ್ಯಸಿ //

ನೀನಿನ್ನು ಹೋಗಬಹುದು!"
       ಆಗ ರಾವಣನು ತಾನು ದೆವಗಂಧರ್ವರಾಕ್ಷಸಗುಹ್ಯಕನಾಗರಿಂದಲೂ ಇತರ ಮಹಾಸತ್ತ್ವಶಾಲಿ ಪ್ರಾಣಿಗಳಿಂದಲೂ ವಧಿಸಲ್ಪಡಬಾರದೆಂಬ ವರವನ್ನು ಯಾಚಿಸಿದನು.ಮಾನವರು ಅಲ್ಪಬಲವುಳ್ಳವರಾದ್ದರಿಂದ ಅವರನ್ನು ತಾನು ಲೆಕ್ಕಿಸುವುದಿಲ್ಲವೆಂದನು.ಅವನು ಈಗಾಗಲೇ ಬ್ರಹ್ಮನಿಂದ ಈ ವರವನ್ನು ಪಡೆದಿದ್ದರೂ ಪುನಃ ಯಾಚಿಸಿದನು.ಅಲ್ಲದೇ ಬ್ರಹ್ಮನು ತನಗೆ ದೀರ್ಘಾಯುಷ್ಯ ನೀಡಿದ್ದಾಗಿ ಅದರಲ್ಲಿ ಉಳಿದ ಆಯುಷ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಪೂರ್ಣವಾಗಿ ಅನುಭವಿಸುವಂತೆ ವರ ಬೇಡಿದನು.ಅಲ್ಲದೇ ಒಂದು ಶಸ್ತ್ರವನ್ನೂ ಬೇಡಿದನು.ಶಿವನು ಆ ವರಗಳನ್ನಿತ್ತು ಚಂದ್ರಹಾಸವೆಂಬ ಉಜ್ವಲವಾದ ಶ್ರೇಷ್ಠ ಖಡ್ಗವನ್ನು ನೀಡಿ, ಅದನ್ನು ಎಂದಿಗೂ ಅವಮಾನ ಮಾಡಬಾರದೆಂದೂ ಹಾಗೆ ಮಾಡಿದರೆ ಅದು ಪುನಃ ತನ್ನ ಬಳಿಗೇ ಹಿಂದಿರುಗುವುದೆಂದೂ ಹೇಳಿದನು.
       ಹೀಗೆ ದಶಾನನನು ಶಿವನಿಂದ ರಾವಣ ಎಂದು ನಾಮಕರಣಗೊಂಡು ವರಗಳನ್ನು ಪಡೆದು ಪುಷ್ಪಕ ವಿಮಾನ ಹತ್ತಿ ದಿಗ್ವಿಜಯಕ್ಕೆ ಹೊರಟನು.

ಬುಧವಾರ, ಆಗಸ್ಟ್ 14, 2024

ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ

ಸಂಸ್ಕೃತ ಸಾಹಿತ್ಯದಲ್ಲಿ ಯಾವ ವಿಷಯವೂ ಇಲ್ಲದಿಲ್ಲ.ಮಾನವ ಅನುಭವದ ವೈವಿಧ್ಯಮಯ ಮುಖಗಳನ್ನು ನಾವಿಲ್ಲಿ ಕಾಣಬಹುದು.ಅಂತೆಯೇ ಶೃಂಗಾರವೂ ಹೌದು.ಸರಳವಾಗಿ ಹೇಳಬಹುದಾದರೆ ಶೃಂಗಾರವೆಂದರೆ ಗಂಡು, ಹೆಣ್ಣುಗಳ ಪ್ರೇಮ.ಆದರೆ ಅಷ್ಟಕ್ಕೇ ಸೀಮಿತವಾಗದೇ, ಭೋಜರಾಜನು ತನ್ನ ಶೃಂಗಾರಪ್ರಕಾಶವೆಂಬ ಗ್ರಂಥದಲ್ಲಿ ಶೃಂಗಾರವನ್ನು, 'ಯೇನ ಶೃಂಗಂ ರೀಯತೇ ಗಮ್ಯತೇ ಸ  ಶೃಂಗಾರ:' ಎಂದು ವಿವರಿಸುತ್ತಾನೆ.ಅಂದರೆ ಯಾವುದರಿಂದ ಒಂದು ಶೃಂಗದ ತುಟ್ಟ ತುದಿಯನ್ನು ಮುಟ್ಟುವುದೋ ಅದು ಶೃಂಗಾರ ಎಂದು.ಹಾಗಾಗಿ ಶೃಂಗಾರವೆಂದರೆ ಅತ್ಯುನ್ನತ ಸುಖವನ್ನು ಹೊಂದುವುದು.ಅದು ಸ್ತ್ರೀ,ಪುರುಷರ ಕ್ಷಣಿಕ ಮಿಲನವಷ್ಟೇ ಅಲ್ಲದೇ ಸಂಪೂರ್ಣ ದೈಹಿಕ, ಭಾವನಾತ್ಮಕ ಸುಖ ಹೊಂದುವುದಾಗಿರುತ್ತದೆ.ವಾತ್ಸ್ಯಾಯನನೆಂಬ ಋಷಿ ಕಾಮಸೂತ್ರವೆಂಬ ತನ್ನ ಗ್ರಂಥದಲ್ಲಿ ಕಾಮವನ್ನು ಒಂದು ಕಲೆಯಾಗಿ ಹೇಗೆ ಆನಂದವುಂಟಾಗುವಂತೆ ಅನುಭವಿಸಬೇಕೆಂದು ಬಗೆಬಗೆಯಾಗಿ ವರ್ಣಿಸಿದ್ದಾನೆ.ಅನಂತರ ಬಂದ ಕೊಕ್ಕೋಕ ಪಂಡಿತನ ರತಿರಹಸ್ಯ, ಕಲ್ಯಾಣಮಲ್ಲನ ಅನಂಗರಂಗ, ಮೊದಲಾದ ಗ್ರಂಥಗಳು ಕಾಮಶಾಸ್ತ್ರವನ್ನು ವಿಸ್ತರಿಸಿದವು.ಈ ಗ್ರಂಥಗಳು ಒಂದು ಬಗೆಯ ಶಾಸ್ತ್ರ ಅಥವಾ ಪಠ್ಯ ಗ್ರಂಥಗಳು.ಆದರೆ ಇವಲ್ಲದೇ, ಸಂಸ್ಕೃತದಲ್ಲಿ ಭಾವನಾತ್ಮಕವಾದ ಶೃಂಗಾರ ಪದ್ಯಗಳಿವೆ ಹಾಗೂ ಅವುಗಳ ಸಂಕಲನಗಳಿವೆ.ಅವುಗಳ ಮೇಲೆ ಕಾಮಸೂತ್ರ ಮೊದಲಾದ ಈ ಗ್ರಂಥಗಳ ಪ್ರಭಾವವಾಗಿದೆ.ಶೃಂಗಾರವು ಅಶ್ಲೀಲವಲ್ಲ.ಅದನ್ನು ರಸವಾಗಿ ಅನುಭವಿಸಿದಾಗ ಅಶ್ಲೀಲದ ಭಾವನೆ ಬರುವುದಿಲ್ಲ.ನಾಟ್ಯಶಾಸ್ತ್ರದ ನವರಸಗಳಲ್ಲಿ ಶೃಂಗಾರವೇ ಪ್ರಮುಖವಾಗಿದೆ ಹಾಗೂ ನಾರಾಯಣನೇ ಅದರ ದೇವತೆಯಾಗಿದ್ದಾನೆ. ಭೋಜರಾಜನು ಶೃಂಗಾರೇಕ ರಸ: , ಅಂದರೆ, ಶೃಂಗಾರವೊಂದೇ ರಸ ಎಂದು ಉತ್ಪ್ರೇಕ್ಷೆಯೆಂಬಂತೆ ಹೇಳುತ್ತಾನೆ.
     ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರದ ವರ್ಣನೆಗಳು ಹಾಸುಹೊಕ್ಕಾಗಿ ಬರುತ್ತವೆ.ಸ್ತ್ರೀಸೌಂದರ್ಯ, ಚುಂಬನಾಲಿಂಗನಾದಿ ಪ್ರೇಮ ಕ್ರೀಡೆಗಳು, ಸುರತ ಕ್ರೀಡೆ, ಜಲಕ್ರೀಡೆ, ಮೊದಲಾದ ವರ್ಣನೆಗಳನ್ನು ಕಾಳಿದಾಸಾದಿ ಕವಿಗಳು ತಮ್ಮ ಕಾವ್ಯಗಳಲ್ಲಿ ಆಕರ್ಷಕವಾಗಿ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಕಾವ್ಯ, ನಾಟಕಗಳ ಮಧ್ಯೆ ಇಂಥ ವರ್ಣನೆಗಳು ಹೇರಳವಾಗಿ ದೊರೆಯುವುದು ಒಂದು ಬಗೆಯಾದರೆ, ಶೃಂಗಾರ ಪದ್ಯಗಳ ಸಂಗ್ರಹಗಳೇ ಸಂಸ್ಕೃತದಲ್ಲಿರುವುದು ಇನ್ನೊಂದು ಬಗೆ.ಈ ಶೃಂಗಾರ ಕಾವ್ಯಗಳು ಸಾಮಾನ್ಯವಾಗಿ ಒಂದಕ್ಕೊಂದು ಸಂಬಂಧವಿಲ್ಲದ ಬಿಡಿ ಬಿಡಿ ಪದ್ಯಗಳನ್ನು ಹೊಂದಿರುತ್ತವೆ.ಇಂಥ ಬಿಡಿ ಪದ್ಯಗಳನ್ನು ಮುಕ್ತಕಗಳು ಎಂದು ಕರೆಯುತ್ತಾರೆ.ಮುಕ್ತಕಗಳೆಂದರೆ ಮುತ್ತುಗಳು.ನೂರು ಪದ್ಯಗಳುಳ್ಳ ಒಂದು ಸಂಕಲನಕ್ಕೆ ಶತಕ ಎನ್ನುತ್ತಾರೆ.ಶತಕಗಳು ನೀತಿ, ಅನ್ಯೋಕ್ತಿ ಸುಭಾಷಿತಗಳು, ವೈರಾಗ್ಯದ ಚಿಂತನೆಗಳು, ಮೊದಲಾದ ವಿಷಯಗಳನ್ನೊಳಗೊಂಡಂತೆ ಶೃಂಗಾರದ ವಿಷಯವನ್ನೂ ಹೊಂದಿರುತ್ತವೆ. ಭರ್ತೃಹರಿಯ ಶೃಂಗಾರ ಶತಕ, ಹಾಗೂ ಅಮರುಕ ಕವಿಯ ಶೃಂಗಾರ ಶತಕ ಇದಕ್ಕೆ ಉದಾಹರಣೆಗಳು.ಅಂತೆಯೇ ಈ ಶೃಂಗಾರ ಕಾವ್ಯಗಳಲ್ಲಿ ಪ್ರೇಮಿಗಳನ್ನು ನಾಯಕ ಮತ್ತು ನಾಯಿಕೆ ಎಂದು ಕರೆದಿರುತ್ತಾರೆ.ಇವರಲ್ಲಿ ಇನ್ನೂ ಹಲವು ವಿಧಗಳಿವೆ! ಶೃಂಗಾರದಲ್ಲಿ ಮುಖ್ಯವಾಗಿ ಎರಡು ಬಗೆಗಳಿವೆ.ಅವು ಸಂಭೋಗ ಶೃಂಗಾರ ಮತ್ತು ವಿಪ್ರಲಂಭ ಶೃಂಗಾರ.ಸಂಭೋಗ ಶೃಂಗಾರ ಪ್ರೇಮಿಗಳು ಜೊತೆಯಲ್ಲಿ ಅನುಭವಿಸುವ ಪ್ರೇಮವನ್ನು ವರ್ಣಿಸಿದರೆ, ವಿಪ್ರಲಂಭ ಶೃಂಗಾರ, ಪ್ರೇಮಿಗಳು ವಿರಹದಲ್ಲಿರುವುದನ್ನು ವರ್ಣಿಸುತ್ತವೆ.
             ಭರ್ತೃಹರಿ, ಸಂಸ್ಕೃತ ವಿದ್ಯಾರ್ಥಿಗಳಿಗೆ ಚಿರಪರಿಚಿತ ಹೆಸರು.ಅವನು ನೀತಿ, ವೈರಾಗ್ಯ ಶತಕಗಳ ಜೊತೆಗೆ ಶೃಂಗಾರ ಶತಕವನ್ನೂ ರಚಿಸಿದ್ದಾನೆ.ಇದರಲ್ಲಿ ಅವನು ಸ್ತ್ರೀ ಸೌಂದರ್ಯವನ್ನು ಬಗೆಬಗೆಯಾಗಿ ವರ್ಣಿಸುತ್ತಾನೆ.ಅಂತೆಯೇ ವಿವಿಧ ಋತುಗಳಲ್ಲಿ ಪ್ರೇಮಿಗಳು ಹೇಗೆ ಪ್ರೀತಿಸುತ್ತಾರೆ ಎಂಬುದನ್ನೂ ವರ್ಣಿಸುತ್ತಾನೆ.
     ಭರ್ತೃಹರಿಯ ಶೃಂಗಾರ ಶತಕದ ಒಂದೆರಡು ಉದಾಹರಣೆಗಳನ್ನು ನೋಡೋಣ.

ಸತಿ ಪ್ರದೀಪೇ ಸತ್ಯಗ್ನೌ ಸತ್ಸು ತಾರಾಮಣೀಂದುಷು /
ವಿನಾ ಮೇ ಮೃಗಶಾವಕ್ಷ್ಯಾ ತಮೋಭೂತಮಿದಂ ಜಗತ್//

  ವಿರಹದಲ್ಲಿರುವ ಒಬ್ಬ ನಾಯಕನು ಹೇಳುತ್ತಾನೆ,' ಪ್ರಕಾಶ ಬೀರುವ ದೀಪವೇ ಇರಲಿ, ಬೆಳಕು ಬೀರುವ ಅಗ್ನಿಯೇ ಇರಲಿ,ಹಳೆಹೊಳೆಯುವ ನಕ್ಷತ್ರಗಳೇ ಇರಲಿ, ಉಜ್ವಲವಾಗಿ ಬೆಳಗುವ ಚಂದ್ರಮನೇ ಇರಲಿ, ಜಿಂಕೆಯ ಮರಿಯ ಕಂಗಳಂಥ ಸುಂದರ ಕಂಗಳುಳ್ಳ ನನ್ನ ಪ್ರಿಯತಮೆಯು ನನ್ನ ಬಳಿ ಇರದಿದ್ದರೆ, ಈ ಇಡೀ ಜಗತ್ತು ಕತ್ತಲಾಗಿ ಕಾಣುವುದು!'

ಹಂತ ಹಂತವಾಗಿ ರತಿಯಾಸೆ ಹೇಗೆ ಹೆಚ್ಚುವುದೆಂದು ಈ ಪದ್ಯದಲ್ಲಿ ಭರ್ತೃಹರಿಯು ಸೊಗಸಾಗಿ ಹೇಳುತ್ತಾನೆ:

ಅದರ್ಶನೇ ದರ್ಶನಮಾತ್ರಕಾಮಾ 
ದೃಷ್ಟ್ವಾ ಪರಿಷ್ವಂಗಸುಖೈಕಲೋಲಾ/
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ-
ಮಾಶಾಸ್ಮಹೇ ವಿಗ್ರಹಯೋರಭೇದಮ್//
' ನೋಡುವವರೆಗೆ ನೋಡುವ ಆಸೆಯೊಂದೇ ಇರುತ್ತದೆ! ನೋಡಿದ ಬಳಿಕ ಆಲಿಂಗನ ಸುಖದ ಆಸೆಯೊಂದೇ ಇರುತ್ತದೆ! ವಿಶಾಲಾಕ್ಷಿಯಾದ ಹೆಣ್ಣನ್ನು ಆಲಿಂಗಿಸಿದ  ಬಳಿಕ, ಇಬ್ಬರ ತನುಗಳ ನಡುವೆ ಭೇದವೇ ಆಗಬಾರದೆಂದು ( ಸದಾ ಒಂದಾಗಿಯೇ ಇರಬೇಕೆಂಬ) ನಾವು ಆಸೆಪಡುತ್ತೇವೆ!' 

ವರ್ಷ ಋತುವಿನ ಒಂದು ವರ್ಣನೆಯನ್ನು ನೋಡಿ:

ಆಸಾರೇಣ ನ ಹರ್ಮ್ಯತ: ಪ್ರಿಯತಮೈರ್ಯಾತುಂ ಬಹಿ: ಶಕ್ಯತೇ 
ಶೀತೋತ್ಕಂಪನಿಮಿತ್ತಮಾಯತದೃಶಾ ಗಾಢಂ ಸಮಾಲಿಂಗ್ಯತೇ/
ಜಾತಾ: ಶೀಕರಶೀತಲಾಶ್ಚ ಮರುತೋ ರತ್ಯಂತಖೇದಚ್ಛಿದೋ 
ಧನ್ಯಾನಾಂ ಬತ ದುರ್ದಿನಂ ಸುದಿನತಾಂ ಯಾತಿ ಪ್ರಿಯಾಸಂಗಮೇ//

' ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ, ಪ್ರಿಯತಮರು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.ವಿಶಾಲಾಕ್ಷಿಯರಾದ ಅವರ ಮುದ್ದು ನಲ್ಲೆಯರು ಚಳಿಯಿಂದ ನಡುಗುವ ನೆಪ ಮಾಡಿಕೊಂಡು ತಾವಾಗಿಯೇ ಅವರನ್ನು ಗಾಢವಾಗಿ ಅಪ್ಪಿಕೊಳ್ಳುತ್ತಾರೆ! ಮಳೆಹನಿಗಳಿಂದ ತಂಪಾದ ಗಾಳಿಯು ಮೆಲ್ಲನೆ ಬೀಸುತ್ತಾ ರತಿಕೇಳಿಯಾಡಿದ ನಲ್ಲನಲ್ಲೆಯರ ಶ್ರಮವನ್ನು ಪರಿಹರಿಸುತ್ತದೆ! ಹೀಗೆ ಪ್ರಿಯತಮೆಯರ ಸಂಗಮವನ್ನು ಹೊಂದಿದ ಧನ್ಯಪುರುಷರ ಮಳೆಗಾಲದ ಇಂಥ ದುರ್ದಿನಗಳೂ ಸುದಿನಗಳಾಗಿ ಪರಿಣಮಿಸುತ್ತವೆ!'
       ಪ್ರೇಮದ ಸೂಕ್ಷ್ಮ ಸಂವೇದನೆಗಳು ಮತ್ತು ನವಿರಾದ ಭಾವನೆಗಳನ್ನು ವರ್ಣಿಸುವುದರಲ್ಲಿ ಅಮರುಕ ಕವಿಯು ಎತ್ತಿದ ಕೈ! ಅವನು ಅಮರುಶತಕ ಸಂಸ್ಕೃತ ಸಾಹಿತ್ಯದಲ್ಲೇ ಅತ್ಯಂತ ಉತ್ಕೃಷ್ಟ ಶೃಂಗಾರ ಕಾವ್ಯವೆನ್ನಬಹುದು.ವ್ಯಾಖ್ಯಾನಕಾರರು ಅಮರುಶತಕವನ್ನು ಅಮೃತಕಾವ್ಯ ಎಂದಿದ್ದಾರೆ.'ಅಮರುಕಕವೇರೇಕ: ಶ್ಲೋಕ: ಪ್ರಬಂಧಶತಾಯತೇ ' ಎಂಬ ಮಾತಿದೆ - ಅಂದರೆ ಅಮರುಕ ಕವಿಯ ಒಂದೊಂದು ಶ್ಲೋಕವೂ ನೂರು ಪ್ರಬಂಧಗಳಿಗೆ ಸಮ ಎಂದು ಅರ್ಥ!ಅಮರುಕ ಕವಿಯ ಡಮರುಗವನ್ನಾಲಿಸಿದ ಬಳಿಕ ಬೇರಾವ ಶೃಂಗಾರ ಕಾವ್ಯವೂ ರುಚಿಸದು ಎಂದಿದ್ದಾರೆ! ಪಾಶ್ಚಾತ್ಯ ವಿದ್ವಾಂಸರಿಗೂ ಇದು ಬಹಳ ಪ್ರಿಯವಾದುದು.ಪ್ರೊ.ಮೆಕ್ ಡೊನಾಲ್ಡ್ ಅವರು,' ವಿಷಯದ ಚಿಕ್ಕ ಪರಿಮಿತಿಯಲ್ಲೇ, ಸಮಾನವಾದ ಭಾವಗಳ ಮತ್ತು ಸನ್ನಿವೇಶಗಳಲ್ಲೇ, ಕವಿಯು ಆಲೋಚನೆಗಳ ಆಶ್ಚರ್ಯಕರ ತಿರುವುಗಳೊಂದಿಗೆ ಎಲ್ಲೆಲ್ಲೂ ಹೊಸ ಹೊಸ ಸೂಕ್ಷ್ಮ ಸ್ಪರ್ಶಗಳನ್ನು ನೀಡುತ್ತಾ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ!' ಎಂದಿದ್ದಾರೆ.ಅಮರುಶತಕವು ಚಿತ್ರಕಲೆಯನ್ನೂ ಪ್ರೇರೇಪಿಸಿದೆ.ಅಮರುಶತಕದ ಎಲ್ಲಾ ಪದ್ಯಗಳಿಗೂ ಚಿತ್ರಗಳನ್ನು ರಚಿಸಲಾಗಿದೆ.ಈಗ ಅಮರುಶತಕದ ಎರಡು ಉದಾಹರಣೆಗಳನ್ನು ನೋಡೋಣ:

ಏಕಸ್ಮಿನ್ ಶಯನೇ ಪರಾಙ್ಮುಖತಯಾ ವೀತೋತ್ತರ: ತಾಮ್ಯತೋ -
ರನ್ಯೋನ್ಯಂ ಹೃದಯಸ್ಥಿತೇsಪ್ಯನುನಯೇ ಸಂರಕ್ಷತೋರ್ಗೌರವಮ್/
ದಂಪತ್ಯೋ: ಶನಕೈರಪಾಂಗವಲನಾನ್ಮಿಶ್ರೀಭವಚ್ಚಕ್ಷುಷೋ -
ರ್ಭಗ್ನೋ ಮಾನಕಲಿ: ಸಹಾಸರಭಸಂ ವ್ಯಾವೃತ್ತಕಂಠಗ್ರಹ: //

   ದಂಪತಿಗಳು ಒಮ್ಮೆ ಜಗಳವಾಡಿ ಪುನಃ ಹೇಗೆ ಒಂದಾದರೆಂದು ಕವಿಯು ಇಲ್ಲಿ ನವಿರಾಗಿ ವರ್ಣಿಸುತ್ತಾನೆ,' ಒಮ್ಮೆ ದಂಪತಿಗಳಿಬ್ಬರೂ ಜಗಳವಾಡಿ ಮಂಚದ ಮೇಲೆ ಮಾತುಕತೆಯಿಲ್ಲದೇ ಮುಖ ತಿರುಗಿಸಿಕೊಂಡು ಮಲಗಿದರು! ಇದರಿಂದ ಇಬ್ಬರೂ ಒಳಗೊಳಗೇ ತಪಿಸುತ್ತಾ ಒಬ್ಬರನ್ನೊಬ್ಬರು ಸಮಾಧಾನಪಡಿಸಬೇಕೆಂದು ಆಶಿಸುತ್ತಿದ್ದರೂ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಮೌನವಾಗಿದ್ದರು! ಆದರೆ ಅವರು ನಿಧಾನವಾಗಿ ಮುಖವನ್ನು ಪುನಃ ಒಬ್ಬರ ಕಡೆಗೊಬ್ಬರು ತಿರುಗಿಸಿ ಕಡೆಗಣ್ಣಿನಿಂದ ನೋಡತೊಡಗಿದರು.ನೋಟಗಳು ಮಿಳಿತವಾಗಲು, ಅವರ ಕೋಪಕಲಹ ಮಾಯವಾಗಿ ಇಬ್ಬರೂ ನಗುತ್ತಾ ವೇಗವಾಗಿ ಕೊರಳ ಸುತ್ತ ತೋಳು ಬಳಸಿ ಬಿಸಿಯಪ್ಪುಗೆಯಲ್ಲಿ ಬಂಧಿತರಾದರು!' 

ಶೂನ್ಯಂ ವಾಸಗೃಹಂ ವಿಲೋಕ್ಯ ಶಯನಾದುತ್ಥಾಯ ಕಿಂಚಿಚ್ಛನೈ-
ರ್ನಿದ್ರಾವ್ಯಾಜಮುಪಾಗತಸ್ಯ ಸುಚಿರಂ ನಿರ್ವರ್ಣ್ಯ ಪತ್ಯುರ್ಮುಖಮ್/
ವಿಸ್ರಬ್ಧಂ ಪರಿಚುಂಬ್ಯ ಜಾತಪುಲಕಾಮಾಲೋಕ್ಯ ಗಂಡಸ್ಥಲೀಂ
ಲಜ್ಜಾನಮ್ರಮುಖೀ ಪ್ರಿಯೇಣ ಹಸತಾ ಬಾಲಾ ಚಿರಂ ಚುಂಬಿತಾ//

ನವವಿವಾಹಿತ ಹೆಣ್ಣಿನ ಒಂದು ಪ್ರೇಮಸನ್ನಿವೇಶವನ್ನು ಕವಿಯು ಇಲ್ಲಿ ಸೊಗಸಾಗಿ ವರ್ಣಿಸುತ್ತಾನೆ,' ಶಯ್ಯಾಗೃಹದಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ, ಮಲಗಿದ್ದ ಆ ಬಾಲೆಯು ಮೆಲ್ಲನೆ ಎದ್ದು, ನಿದ್ರೆ ಹೋದಂತೆ ನಟಿಸುತ್ತಿದ್ದ ಪತಿಯ ಮುಖವನ್ನೇ ಬಹಳ ಹೊತ್ತು ನೋಡುತ್ತಾ ಅವನು ನಿದ್ರಿಸಿದ್ದಾನೆಂದು ಖಚಿತಪಡಿಸಿಕೊಂಡು ನಿಧಾನವಾಗಿ ಅವನ ಕೆನ್ನೆಯನ್ನು ಚುಂಬಿಸಿದಳು! ಆದರೆ ಅವನ ಕೆನ್ನೆಯ ಮೇಲೆ ಮೂಡಿದ ರೋಮಾಂಚನವನ್ನು ಗಮನಿಸಿ ಅವನು ನಿಜವಾಗಿಯೂ ನಿದ್ರಿಸಿಲ್ಲವೆಂದು ತಿಳಿದು ನಾಚಿಕೆಯಿಂದ ತಲೆಬಾಗಿಸಿದಳು! ಆಗ ಅವಳ ಪ್ರಿಯತಮನು ಎದ್ದು ನಗುತ್ತಾ ಅವಳನ್ನು ಸುದೀರ್ಘವಾಗಿ ಚುಂಬಿಸಿದನು!'

ಮುಗ್ಧೇ ಮುಗ್ಧತಯೈವನೇತುಮಖಿಲ: ಕಾಲ: ಕಿಮಾರಭ್ಯತೇ 
ಮಾನಂ ಧತ್ಸ್ವ ಧೃತಿಂ ಬಧಾನ ಋಜುತಾಂ ದೂರೇ ಕುರು ಪ್ರೇಯಸಿ /
ಸಖ್ಯೈವಂ ಪ್ರತಿಬೋಧಿತಾ ಪ್ರತಿವಚಸ್ತಾಮಾಹ ಭೀತಾನನಾ 
ನೀಚೈ: ಶಂಸ ಹೃದಿ ಸ್ಥಿತೋ ಹಿ ನನು ಮೇ ಪ್ರಾಣೇಶ್ವರ: ಶ್ರೋಷ್ಯತಿ //

     ಸಖಿಯು ಮುಗ್ಧ ನಾಯಿಕೆಯೊಬ್ಬಳಿಗೆ ಕೋಪ ಮಾಡಿಕೊಳ್ಳುವುದು ಹೇಗೆಂದು ಕಲಿಸುವಾಗ ನಡೆದ ಸಂಭಾಷಣೆ:
' ಮುಗ್ಧ ಹೆಣ್ಣೇ! ಇಷ್ಟು ಮುಗ್ಧತನದಿಂದಲೇ ನಿನ್ನ ಇಡೀ ಜೀವನವನ್ನು ಕಳೆಯಲು ಆರಂಭಿಸಿರುವೆಯೇಕೆ? ಆಗಾಗ ಕೋಪ ಮಾಡಿಕೋ! ತುಂಬಾ ವಿಧೆಯತೆಯಿಂದಿರದೇ ಸ್ವಲ್ಪ ಗಟ್ಟಿ ಮನಸ್ಸು ಮಾಡಿಕೋ! ಈ ಮುಗ್ಧತೆಯನ್ನು ದೂರ ಮಾಡು!' ಎಂದು ಸಖಿಯು ನವವಧುವಿಗೆ ಬೋಧಿಸುತ್ತಿರಲು, ಭಯಭೀತಿಗೊಂಡ ಮುಖದಿಂದ ಅವಳು,' ಏ ಸಖಿ! ಸ್ವಲ್ಪ ಮೆಲ್ಲನೆ ಮಾತನಾಡು! ನನ್ನ ಹೃದಯದಲ್ಲಿರುವ ಪ್ರಾಣೇಶ್ವರನು ಕೇಳಿಸಿಕೊಂಡುಬಿಡುತ್ತಾನೆ!' ಎಂದಳು!'
       ಹೆಣ್ಣಿನ ನವಿರಾದ ಭಾವನೆಗಳನ್ನು ಬಹಳ ಸೊಗಸಾಗಿ, ವೈವಿಧ್ಯಮಯವಾಗಿ ವರ್ಣಿಸಿರುವ ಅಮರುಕನು ನೂರು ಹೆಣ್ಣಿನ ಜನ್ಮಗಳನ್ನು ಕಳೆದು ಅನಂತರ ಗಂಡಾಗಿ ಹುಟ್ಟಿದ ಎಂದು ಒಂದು ದಂತಕಥೆಯಿದೆ.ಇನ್ನೊಂದು ದಂತಕಥೆಯ ಪ್ರಕಾರ, ಶಂಕರಾಚಾರ್ಯರು ಮಂಡನಮಿಶ್ರರ ಪತ್ನಿ ಉಭಯಭಾರತಿ ಕಾಮಶಾಸ್ತ್ರದ ಬಗ್ಗೆ ಪ್ರಶ್ನಿಸಲು, ಅದನ್ನು ಅರಿಯಲು ಸತ್ತುಹೋಗಿದ್ದ ಅಮರುಕನೆಂಬ ರಾಜನ ದೇಹದೊಳಗೆ ಪ್ರವೇಶಿಸಿ ಕಾಮದ ಬಗ್ಗೆ ತಿಳಿದು ಈ ಅಮರುಶಕವನ್ನು ರಚಿಸಿದರಂತೆ! ಅನಂತರ ಇದರ ಪದ್ಯಗಳಿಗೆ ಆಧ್ಯಾತ್ಮಿಕ ಅರ್ಥವನ್ನೂ ಹೇಳಿದರಂತೆ! ಹೀಗೆ ಪ್ರತಿಭಾವಂತನಾದ ಅಮರೂಕನ ಮೇಲೆ ಅನೇಕ ದಂತಕಥೆಗಳು ಹುಟ್ಟಿಕೊಂಡಿವೆ! 
      ಮೊಘಲ್ ದೊರೆ ಶಹಜಹಾನ್ ನ ಆಸ್ಥಾನದಲ್ಲಿದ್ದ ಜಗನ್ನಾಥ ಪಂಡಿತನೆಂಬ ತೈಲಂಗ ಕವಿ, ಭಾಮಿನೀವಿಲಾಸವೆಂಬ ಕಾವ್ಯವನ್ನು ರಚಿಸಿದ್ದಾನೆ.ಇದರಲ್ಲಿ ನಾಲ್ಕು ಭಾಗಗಳಿವೆ.ಅವು, ಪ್ರಾಸ್ತಾವಿಕವಿಲಾಸ ಅಥವಾ ಅನ್ಯೋಕ್ತಿವಿಲಾಸ, ಶೃಂಗಾರವಿಲಾಸ, ಕರುಣಾವಿಲಾಸ, ಮತ್ತು ಶಾಂತವಿಲಾಸ.ಇವುಗಳಲ್ಲಿ ಶೃಂಗಾರವಿಲಾಸದಲ್ಲಿ ಸ್ವಾರಸ್ಯಕರ ಪದ್ಯಗಳಿವೆ.ಒಂದು ಉದಾಹರಣೆ ನೋಡೋಣ.

ತೀರೇ ತರುಣ್ಯಾ ವದನಂ ಸಹಾಸಂ 
    ನೀರೇ ಸರೋಜಂ ಚ ಮಿಲದ್ವಿಕಾಸಮ್/
ಆಲೋಕ್ಯ ಧಾವತ್ಯುಭಯತ್ರ ಮುಗ್ಧಾ 
     ಮರಂದಲುಬ್ಧಾಲಿಕಿಶೋರಮಾಲಾ//

' ತೀರದಲ್ಲಿ ಕುಳಿತ ತರುಣಿಯ ನಗುಮೊಗವನ್ನು ನೋಡಿ, ಹಾಗೆಯೇ ಸರೋವರದ ನೀರಿನಲ್ಲಿ ತೆರೆದುಕೊಳ್ಳುತ್ತಿರುವ ಕಮಲಪುಷ್ಪವನ್ನು ನೋಡಿ, ಜೇನಿನ ಆಸೆಯಿಂದ ಮರಿದುಂಬಿಗಳ ಸಾಲು ಗೊಂದಲಕ್ಕೊಳಗಾಗಿ ಎರಡೂ ಕಡೆಗೂ ಹಾರುತ್ತಿದೆ ( ಯಾವುದು ಕಮಲಪುಷ್ಪ ಎಂದು ಗೊಂದಲಕ್ಕೊಳಗಾಗಿ ಮರಿದುಂಬಿಗಳು ಹೆಣ್ಣಿನ ಮುಖದ ಬಳಿಗೂ ನಿಜವಾದ ಕಮಲದ ಬಳಿಗೂ ಹಾರುತ್ತಿವೆ)!' 
      ಶೃಂಗಾರ ಕಾವ್ಯಗಳಲ್ಲಿ  ಕಾಶ್ಮೀರದ ಕವಿ ಬಿಲ್ಹಣನ ಚೌರಸುರತಪಂಚಾಶಿಕಾ ಅಥವಾ ಚೌರಪಂಚಾಶಿಕಾ ಎಂಬ ಐವತ್ತು ಪದ್ಯಗಳ ಪುಟ್ಟ ಕಾವ್ಯವೂ ಮುಖ್ಯವಾಗಿದೆ.ಬಿಲ್ಹಣನನ್ನು ದಕ್ಷಿಣದ ರಾಜನೊಬ್ಬನು ತನ್ನ ಮಗಳಿಗೆ ಸಂಸ್ಕೃತ ಪಾಠ ಕಲಿಸಲು ನೇಮಿಸಿದಾಗ ಅವನು ಅವಳೊಡನೆ ಪ್ರೇಮದಲ್ಲಿ ತೊಡಗುತ್ತಾನೆ.ಇದನ್ನು ಪತ್ತೆಮಾಡಿದ ರಾಜ, ಅವನಿಗೆ ಮರಣದಂಡನೆ ವಿಧಿಸಿದನು! ಆದರೆ ಶಿಕ್ಷೆಯಾಗುವ ಸ್ಥಾನದಲ್ಲೇ ಅವನು ಐವತ್ತು ಶ್ಲೋಕಗಳ ಈ ಕಾವ್ಯವನ್ನು ರಚಿಸಿದನು! ಇದನ್ನು ಕೇಳಿ ಬೆರಗಾದ ರಾಜನು ಅವನನ್ನು ಶಿಕ್ಷೆಯಿಂದ ಮುಕ್ತಗೊಳಿಸಿ ತನ್ನ ಮಗಳಿನೊಂದಿಗೆ ಮದುವೆ ಮಾಡಿಸಿದನು! ಈ ಕಾವ್ಯದಲ್ಲಿ ಬಿಲ್ಹಣನು ತಾನು ಹೇಗೆ ಆ ರಾಜಕುಮಾರಿಯನ್ನು ಗುಪ್ತವಾಗಿ ಪ್ರೇಮಿಸಿದೆನೆಂದು ವಿವರವಾಗಿ ವರ್ಣಿಸಿದ್ದಾನೆ! ಇದರಲ್ಲಿ ಪ್ರತಿ ಶ್ಲೋಕವೂ,' ಅದ್ಯಾಪಿ ತಾಂ ' ಅಂದರೆ ಇಂದಿಗೂ ಅವಳನ್ನು ಸ್ಮರಿಸುತ್ತೇನೆ ಎಂದು ಆರಂಭವಾಗುತ್ತದೆ. ಇದರಲ್ಲಿ ಬೇರೆ ಬೇರೆ ಆವೃತ್ತಿಗಳಿದ್ದು ಅವುಗಳಲ್ಲಿ ರಾಜಕುಮಾರಿಯ ಅಥವಾ ನಾಯಿಕೆಯ ಹೆಸರು, ವಿದ್ಯಾ, ಯಾಮಿನೀ, ಶಶಿಕಲಾ, ಪೂರ್ಣತಿಲಕಾ, ಚಂದ್ರಕಲಾ ಚಂದ್ರಲೇಖಾ, ಚೋರೀ ಮೊದಲಾಗಿವೆ. ನಾಯಕನ ಹೆಸರು ಬಿಲ್ಹಣ, ಚೋರ, ಸುಂದರ, ವರರುಚಿಯೆಂದು ಬೇರೆ ಬೇರೆ ಇದೆ.ಪ್ರೇಮಿಗಳು ಗುಪ್ತವಾಗಿ ಕಳ್ಳತನದಲ್ಲಿ ಪ್ರೇಮಿಸಿದ್ದರಿಂದ ಇದರ ಹೆಸರು ಚೌರಪಂಚಾಶಿಕಾ ಎಂದಿದೆ.ಈ ಕಾವ್ಯಕ್ಕೆ ಒಂದು ಚಿತ್ರಕಲಾ ಪರಂಪರೆಯೂ ಇದೆ! ಇದರ ಕೊನೆಯ ಶ್ಲೋಕದಲ್ಲಿ ಕವಿಯು ಪೌರಾಣಿಕ ಉದಾಹರಣೆಗಳನ್ನು ಕೊಡುತ್ತಾ ತಾನು ಅಂಗೀಕರಿಸಿದ ಪ್ರೇಮವನ್ನು ಬಿಡುವುದಿಲ್ಲ ಎಂಬ ಅರ್ಥದಲ್ಲಿ ಹೇಳುತ್ತಾನೆ:
     ಅದ್ಯಾಪಿ ನೋಜ್ಝತಿ ಹರ: ಕಿಲ ಕಾಲಕೂಟಂ
        ಕೂರ್ಮೋ ಬಿಭರ್ತಿ ಧರಣೀಂ ಖಲು ಪೃಷ್ಠಭಾಗೇ/
    ಅಂಭೋನಿಧಿರ್ವಹತಿ ದು:ಸಹವಾಡವಾಗ್ನಿಂ 
         ಅಂಗೀಕೃತಂ ಸುಕೃತಿನ: ಪರಿಪಾಲಯಂತಿ //
    ' ಇಂದಿಗೂ ಭಗವಾನ್ ಶಿವನು ತಾನು ಕಂಠದಲ್ಲಿ ಧರಿಸಿರುವ ವಿಷವನ್ನು ಬಿಡುವುದಿಲ್ಲ! ಮಹಾಕೂರ್ಮನು ತಾನು ಬೆನ್ನ ಮೇಲೆ ಧರಿಸಿರುವ ಭೂಮಿಯನ್ನು ಬಿಡುವುದಿಲ್ಲ! ಸಮುದ್ರವು ಇಂದಿಗೂ ದು:ಸಹವಾದ ವಾಡವಾಗ್ನಿಯನ್ನು ಧರಿಸಿದೆ! ಮಹಾನ್ ವ್ಯಕ್ತಿಗಳು ತಾವು ಅಂಗೀಕರಿಸಿದುದನ್ನು ಬಿಡದೇ ಪಾಲಿಸುವರು ( ಅಂತೆಯೇ ನಾನೂ ನನ್ನ ಪ್ರೇಮವನ್ನು ಬಿಡದೇ ಪಾಲಿಸುತ್ತೇನೆ)!'
      ಪ್ರಾಕೃತದ ಹಾಲಮಹಾರಾಜನ ಒಂದು ಅದ್ಭುತ ಸಂಗ್ರಹವಾದ ಗಾಥಾಸಪ್ತಶತೀ ಎಂಬ ಗ್ರಂಥದಿಂದ ಪ್ರೇರೇಪಣೆಗೊಂಡು ಗೋವರ್ಧನಾಚಾರ್ಯನೆಂಬ ಕವಿ ಸಂಸ್ಕೃತದಲ್ಲಿ ಏಳುನೂರು ಶ್ಲೋಕಗಳ ಆರ್ಯಾಸಪ್ತಶತೀ ಎಂಬ ಸೊಗಸಾದ ಗ್ರಂಥವನ್ನು ರಚಿಸಿದ್ದಾನೆ.ಇದರ ಪದ್ಯಗಳು ಆರ್ಯಾ ಛಂದಸ್ಸಿನಲ್ಲಿರುವುದರಿಂದ ಈ ಹೆಸರು ಕೊಟ್ಟಿದ್ದಾನೆ.ಇದೂ ಒಂದು ಮುಖ್ಯವಾದ ಶೃಂಗಾರ ಕಾವ್ಯ.ಈ ಆರ್ಯಾಸಪ್ತಶತಿಯ ಒಂದು ಉದಾಹರಣೆ ನೋಡೋಣ:

ಆರಂಭದ ಪ್ರಾರ್ಥನಾಶ್ಲೋಕಗಳಲ್ಲಿ ಕವಿಯು ಒಂದು ಚಮತ್ಕಾರದ ಶೃಂಗಾರ ಶ್ಲೋಕ ರಚಿಸಿದ್ದಾನೆ:

ಕೇಲಿಚಲಾಂಗುಲಿಲಂಭಿತಲಕ್ಷ್ಮೀನಾಭಿರ್ಮುರದ್ವಿಷಶ್ಚರಣ: /
ಸ ಜಯತಿ ಯೇನ ಕೃತಾ ಶ್ರೀರನುರೂಪಾ ಪದ್ಮನಾಭಸ್ಯ //

' ಭಗವಾನ್ ವಿಷ್ಣುವು, ಲಕ್ಷ್ಮಿಯು ಅವನ ಚರಣಸೇವೆ ಮಾಡುತ್ತಿರುವಾಗ, ಆಟಕ್ಕಾಗಿ ತನ್ನ ಚರಣಾಂಗುಲಿಯನ್ನು ಅವಳ ನಾಭಿಯ ಮೇಲೆ ಆಡಿಸಿದನು! ಹೀಗೆ ಮಾಡಿದುದರಿಂದ, ಅವಳೂ ಆ ಚರಣಾಂಗುಲಿಯ ಸ್ಪರ್ಶ ಪಡೆದು ಪದ್ಮನಾಭನಾದ ಅವನಿಗೆ ಅನುರೂಪಳಾದಳು (ವಿಷ್ಣುವಿನ ಪಾದವು ಪದ್ಮದಂತಿರುವುದರಿಂದ, ಅದು ಲಕ್ಷ್ಮಿಯ ನಾಭಿಯನ್ನು ಸ್ಪರ್ಶಿಸಲು, ಅವಳೂ ಅವನಂತೆ ಪದ್ಮನಾಭಿಯುಳ್ಳವಳಾದಳು)! ಇಂಥ ಶ್ರೀಹರಿಯು ಜಯಿಸುತ್ತಾನೆ!' 
     ಹೀಗೆಯೇ ಸುಂದರೀಶತಕವೆಂಬ ಶತಕವನ್ನು ಉತ್ಪ್ರೇಕ್ಷಾವಲ್ಲಭನೆಂಬ ಕವಿ ರಚಿಸಿದ್ದಾನೆ.ಇದರಲ್ಲಿ ಕವಿಯು ಸ್ತ್ರೀ ಸೌಂದರ್ಯವನ್ನು ಸಮಗ್ರವಾಗಿ ವರ್ಣಿಸಿದ್ದಾನೆ.ಒಂದು ಉದಾಹರಣೆ ಹೀಗಿದೆ:

ಕೃತಚಂದನರಾಗೋ ಮದನಸಖ: ಶ್ರೀಫಲದ್ವೇಷೀ /
ಸುಂದರಿ ಸುವರ್ಣವರ್ಣೋ ವಕ್ಷೋಜ: ಕೀದೃಶೋ ರುದ್ರ: //

' ಎಲೈ ಸುಂದರಿ! ಚಂದನಲೇಪವುಳ್ಳ, ಮನ್ಮಥನ ಸಖನಾದ, ಶ್ರೀಫಲವನ್ನು ದ್ವೇಷಿಸುವ ( ಅದನ್ನು ಮೀರಿಸಿರುವ) ಸುವರ್ಣವರ್ಣದ ನಿನ್ನ ವಕ್ಷೋಜವು ಹೇಗೆ ತಾನೇ ರುದ್ರವಾಗಿದೆ (ಘೋರವಾಗಿದೆ)?' 
     ಗೀತ ಗೋವಿಂದ, ಜಯದೇವ ಕವಿಯ ಒಂದು ಅದ್ಭುತ ಶೃಂಗಾರ ಕಾವ್ಯ.ಇದು ಭಕ್ತಿ ಮತ್ತು ಶೃಂಗಾರ ಎರಡನ್ನೂ ಒಟ್ಟಿಗೆ ಹೊಂದಿರುವ ಒಂದು ಗೇಯಕಾವ್ಯ, ಅಂದರೆ ಹಾಡುವ ಕಾವ್ಯ.ಆರಂಭದಲ್ಲೇ ಕವಿಯು ಹೇಳುತ್ತಾನೆ:

ಯದಿ ಹರಿಸ್ಮರಣೇ ಸರಸಂ ಮನೋ ಯದಿ ವಿಲಾಸಕಲಾಸು ಕುತೂಹಲಮ್ /
ಮಧುರಕೋಮಲಕಾಂತಪದಾವಲೀಂ ಶೃಣು ತದಾ ಜಯದೇವಸರಸ್ವತೀಮ್ //

' ಹರಿಸ್ಮರಣೆಯಲ್ಲಿ ಆಸಕ್ತಿಯಿದ್ದರೆ, ಹಾಗೂ ವಿಲಾಸಕಲೆಗಳಲ್ಲಿ ಕುತೂಹಲವಿದ್ದರೆ, ಆಗ ಮಧುರಕೋಮಲಕಾಂತಪದಾವಲಿಯಾದ ಜಯದೇವನ ಸಾಹಿತ್ಯವನ್ನು ಕೇಳು!' 
      ಗೀತಗೋವಿಂದದ ಎಲ್ಲಾ ಹಾಡುಗಳೂ ಮಧುರವಾಗಿಯೂ ಶೃಂಗಾರಾತ್ಮಕವಾಗಿಯೂ ಇವೆ! ಬರೆಯುವ ಆವೇಶದಲ್ಲೊಮ್ಮೆ ಕವಿಯು, ಕೃಷ್ಣನು ರಾಧೆಗೆ,' ಸ್ಮರಗರಲಖಂಡನಂ ಮಮ ಶಿರಸಿ ಮಂಡನಂ ದೇಹಿ ಪದಪಲ್ಲವಮುದಾರಮ್ ', ಅಂದರೆ,' ವಿಷದಂಥ ಮನ್ಮಥನ ಬಾಧೆಯನ್ನು ಕಳೆಯಲು ನಿನ್ನ ಪಾದಪಲ್ಲವವನ್ನು ನನ್ನ ಶಿರದ ಮೇಲಿಡು ' ಎಂದು ಹೇಳುವಂತೆ ಬರೆಯಲು ಹೊರಟ.ಆದರೆ ಭಗವಂತನಿಗೆ ಇದರಿಂದ ಅಪಚಾರವಾಗುವುದೆಂದು ಬರೆಯದೇ ಸ್ನಾನಕ್ಕೆ ಹೋದ.ಆಗ ಶ್ರೀ ಕೃಷ್ಣನೇ ಅವನ ವೇಷದಲ್ಲಿ ಬಂದು ಆ ಸಾಲನ್ನು ಬರೆದು ಹೊರಟುಹೋದ! ಸ್ನಾನದಿಂದ ಹಿಂದಿರುಗಿದ ಜಯದೇವ ಆ ಸಾಲು ಬರೆದಿರುವುದನ್ನು ಕಂಡು ಆಶ್ಚರ್ಯ,ಸಂತೋಷಗಳಿಗೊಳಗಾದ! ಹೀಗೆ ಜಯದೇವನ ಬಗ್ಗೆ ಅನೇಕ ಐತಿಹ್ಯಗಳಿವೆ.
ಕಾಳಿದಾಸನು ನಾಟಕಗಳನ್ನೂ ಮಹಾಕಾವ್ಯಗಳನ್ನೂ ರಚಿಸಿರುವುದರೊಂದಿಗೆ ಶೃಂಗಾರ ಖಂಡಕಾವ್ಯಗಳನ್ನೂ ರಚಿಸಿದ್ದಾನೆ.ಋತುಸಂಹಾರ ಆರು ಋತುಗಳ ಮತ್ತು ಆ ಋತುಗಳಲ್ಲಿ ಪ್ರೇಮಿಗಳ ಕ್ರೀಡೆಗಳ ಒಂದು ಖಂಡ ಕಾವ್ಯವಾಗಿದೆ! ಋತುಸಂಹಾರದ ಒಂದೆರಡು ಉದಾಹರಣೆಗಳನ್ನು ನೋಡೋಣ:
ವಸಂತ ಋತುವಿನ ಒಂದು ವರ್ಣನೆ:

ಪ್ರಫುಲ್ಲಚೂತಾಂಕುರತೀಕ್ಷ್ಣಸಾಯಕೋ 
    ದ್ವಿರೇಫಮಾಲಾವಿಲಸದ್ಧನುರ್ಗುಣ: /
ಮನಾಂಸಿ ಭೇತ್ತುಂ ಸುರತಪ್ರಸಂಗಿನಾಂ
    ವಸಂತಯೋದ್ಧಾ ಸಮುಪಾಗತ: ಪ್ರಿಯೇ//

' ಹೇ ಪ್ರಿಯೇ! ಎಳೆಯ ಮಾವಿನ ಚಿಗುರುಗಳೆಂಬ ತೀಕ್ಷ್ಣ ಬಾಣಗಳೊಂದಿಗೂ,  ದುಂಬಿಗಳ ಸಾಲೆಂಬ ಕಾಂತಿಯುತ ಹೆದೆಯ ಧನುಸ್ಸಿನೊಂದಿಗೂ,  ಸುರತಕ್ರೀಡೆಯಾಡುತ್ತಿರುವ ಪ್ರೇಮಿಗಳ ಹೃದಯಗಳಿಗೆ ಹೊಡೆಯಲು ವಸಂತನೆಂಬ ಯೋಧನು ಬಂದಿದ್ದಾನೆ!' 
ಇಲ್ಲಿ ಶರದೃತುವನ್ನು ನವವಧುವಿನಂತೆ ಸೊಗಸಾಗಿ ವರ್ಣಿಸಿದ್ದಾನೆ:

ಕಾಶಾಂಶುಕಾ ವಿಕಚಪದ್ಮಮನೋಜ್ಞವಕ್ತ್ರಾ 
      ಸೋನ್ಮಾದಹಂಸರವಂನೂಪುರನಾದರಮ್ಯಾ /
ಆಪಕ್ವಶಾಲಿರುಚಿರಾನತಗಾತ್ರಯಷ್ಟಿ:
     ಪ್ರಾಪ್ತಾ ಶರನ್ನವವಧೂರಿವ ರೂಪರಮ್ಯಾ //

 'ಕಾಶ ಪುಷ್ಪಗಳನ್ನು ಬಿಳಿಯ ವಸ್ತ್ರವಾಗುಳ್ಳ, ಅರಳಿದ ಕಮಲಪುಷ್ಪವನ್ನು ಮನೋಜ್ಞ ಮುಖವಾಗುಳ್ಳ, ಉನ್ಮತ್ತ ಹಂಸಗಳ ಕಲರವವನ್ನು ಗೆಜ್ಜೆಯ ರಮ್ಯ ನಾದವನ್ನಾಗಿ ಹೊಂದಿರುವ, ಪಕ್ವವಾದ ಭತ್ತದ ತೆನೆಯನ್ನು ಮನೋಹರವಾದ, ಬಾಗಿದ, ತೆಳುತನುವಾಗುಳ್ಳ ಶರದೃತುವು ನವವಧುವಿನಂತೆ ರಮ್ಯವಾದ ರೂಪದಲ್ಲಿ ಆಗಮಿಸಿದೆ!'
     ಕಾಳಿದಾಸನ ಇನ್ನೊಂದು ಮುಖ್ಯವಾದ ಶೃಂಗಾರ ಕಾವ್ಯ ಮೇಘದೂತ. ನವವಿವಾಹಿತ ಯಕ್ಷನೊಬ್ಬನು ಹೆಂಡತಿಯಿಂದ ಒಂದು ವರ್ಷ ದೂರವಿರುವಂತೆ ಕುಬೇರನಿಂದ ಶಾಪಗ್ರಸ್ತನಾಗುತ್ತಾನೆ.ಆಗ ಅವನು ಒಂದು ಮೇಘದ ಮೂಲಕ ತನ್ನ ಹೆಂಡತಿಗೆ ಒಂದು ಪ್ರೇಮಸಂದೇಶ ಕಳಿಸುತ್ತಾನೆ.ಮೇಘವು ಹೋಗಬೇಕಾದ ದಾರಿಯನ್ನು ವರ್ಣಿಸುತ್ತಾ ಪ್ರೇಮಿಗಳ ಪ್ರೇಮಕ್ರೀಡೆಯ ವರ್ಣನೆ, ನದಿಯನ್ನು ಸ್ತ್ರೀಗೆ ಹೋಲಿಸಿ ಮಾಡುವ ವರ್ಣನೆ, ಇವೆಲ್ಲವನ್ನೂ ಯಕ್ಷನ ಮೂಲಕ ಕಾಳಿದಾಸನು ಸೊಗಸಾಗಿ ಮಾಡಿದ್ದಾನೆ.ಆಗ ಅಲ್ಲಿ ತನ್ನ ಹೆಂಡತಿಯು ಹೇಗಿರುವಳೆಂದು ಹೇಳುವ ಒಂದು ಶ್ಲೋಕ, ಸ್ತ್ರೀ ಸೌಂದರ್ಯದ ಒಂದು ಸಮಗ್ರ, ಸುಂದರ ಚಿತ್ರಣವಾಗಿದೆ. 

    ತನ್ವೀ ಶ್ಯಾಮಾ ಶಿಖರಿ ದಶನಾ ಪಕ್ವಬಿಂಬಾಧರೋಷ್ಠೀ ಮಧ್ಯೇ ಕ್ಷಾಮಾ ಚಕಿತ ಹರಿಣೀಪ್ರೇಕ್ಷಣಾ ನಿಮ್ನನಾಭಿ: /
    ಶ್ರೋಣೀಭಾರಾದಲಸಗಮನಾ ಸ್ತೋಕನಮ್ರಾ ಸ್ತನಾಭ್ಯಾಂ
ಯಾ ತತ್ರ ಸ್ಯಾದ್ಯುವತಿವಿಷಯೇ ಸೃಷ್ಟಿರಾದ್ಯೇವ ಧಾತು: //
     ' ಅವಳು ತೆಳುತನುವುಳ್ಳವಳಾಗಿ, ಚೂಪಾದ ಸುಂದರ ಹಲ್ಲುಗಳುಳ್ಳವಳಾಗಿ, ಪಕ್ವವಾದ ಬಿಂಬಫಲದಂಥ ಕೆಂಪಾದ ಅಧರವುಳ್ಳವಳಾಗಿ, ನಡುವು ಸಣ್ಣವಿದ್ದು, ಚಕಿತಗೊಂಡ ಜಿಂಕೆಯಂಥ ಕಣ್ಣುಗಳುಳ್ಳವಳಾಗಿ, ನಾಭಿಯು ಆಳವಾಗಿದ್ದು, ನಿತಂಬಗಳ ಭಾರದಿಂದ ನಿಧಾನವಾಗಿ ನಡೆಯುವ, ಸ್ತನಭಾರದಿಂದ ಸ್ವಲ್ಪ ಬಾಗಿರುವವಳ, ಯುವತಿಯರ ಸೃಷ್ಟಿಯಲ್ಲಿ ಸೃಷ್ಟಿಕರ್ತನ ಮೊದಲ ಪ್ರಯತ್ನವೆಂಬಂತೆ ಅಲ್ಲಿರುವಳು!' 
      ಹೀಗೆ ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಶೃಂಗಾರ ಕಾವ್ಯಗಳಿವೆ.ಆಗಲೇ ಹೇಳಿದಂತೆ, ಇತರ ಕಾವ್ಯ,ನಾಟಕಗಳಲ್ಲೂ ಶೃಂಗಾರ ಪದ್ಯಗಳು ಹೇರಳವಾಗಿ ಸಿಗುತ್ತವೆ.ಇವಲ್ಲದೇ, ವಲ್ಲಭದೇವನ ಸುಭಾಷಿತಾವಲಿ, ಶಾರ್ಙಧರನ ಶಾರ್ಙಧರ ಪದ್ಧತಿ, ಶ್ರೀಧರದಾಸನ ಸದುಕ್ತಿಕರ್ಣಾಮೃತ, ವಿದ್ಯಾಕರನ ಸುಭಾಷಿತರತ್ನಕೋಶ, ಕಾಶೀನಾಥ ಶರ್ಮರ ಸುಭಾಷಿತರತ್ನಭಾಂಡಾಗಾರ, ಮೊದಲಾದ ಅನೇಕ ಸುಭಾಷಿತ ಸಂಕಲನಗಳಲ್ಲಿ ಶೃಂಗಾರ ಸೂಕ್ತಿಗಳು ಹೇರಳವಾಗಿ ಸಿಗುತ್ತವೆ.ಅಂತೆಯೇ ಜಗನ್ನಾಥ ಪಂಡಿತನ ರಸಗಂಗಾಧರ, ಭೋಜನ ಸರಸ್ವತೀಕಂಠಾಭರಣ, ಹಾಗೂ ಶೃಂಗಾರ ಪ್ರಕಾಶ, ವಿಶ್ವನಾಥನ ಸಾಹಿತ್ಯದರ್ಪಣ, ರಾಜಶೇಖರನ ಕಾವ್ಯಮೀಮಾಂಸಾ, ಮೊದಲಾದ ಕಾವ್ಯ ಮೀಮಾಂಸೆ ಕುರಿತ ಗ್ರಂಥಗಳಲ್ಲೂ ಶೃಂಗಾರ ಪದ್ಯಗಳು ಸಿಗುತ್ತವೆ. ಈ ಶೃಂಗಾರ ಪದ್ಯಗಳನ್ನು ಎಲ್ಲರೂ ಓದಿ ಆನಂದಿಸಿ ಜೀವನವನ್ನು ಹಸನಾಗಿಸಿಕೊಳ್ಳಬಹುದು.
                                   ಡಾ.ಬಿ.ಆರ್.ಸುಹಾಸ್


      

ಭಾನುವಾರ, ಜೂನ್ 9, 2024

ಬೆಳಗಾವಿಯ ಕಮಲ ಬಸದಿಯಲ್ಲಿ ಒಂದು ಶಿಲ್ಪಚಾತುರ್ಯ


ಬೆಳಗಾವಿಯ ಕಮಲ ಬಸದಿಯಲ್ಲಿ ಒಂದು ಶಿಲ್ಪ ಚಾತುರ್ಯ 


ಬೆಳಗಾವಿಯ ಕಮಲ ಬಸದಿ ಎಂಬ ಜೈನ .ದೇವಾಲಯದ ಗೋಡೆಯ ಮೇಲಿನ ಒಂದು ಶಿಲ್ಪ ಮನಸೆಳೆಯುತ್ತದೆ.ಇದು ಮೂರು ನರ್ತಕರನ್ನು ಒಟ್ಟಿಗೆ ತೋರಿಸುವ ಶಿಲ್ಪವಾಗಿದೆ.ಆದರೆ ಎರಡೇ ಕಾಲುಗಳಿವೆ.ಎಡ ಮತ್ತು ಬಲ ಬದಿಗಳ ಶಿಲ್ಪಗಳ ಮೇಲ್ಭಾಗಗಳನ್ನು  ಕೈಗಳಲ್ಲಿ ಮುಚ್ಚಿದರೆ ಮಧ್ಯದ ನರ್ತಕನ ಶಿಲ್ಪ ಪೂರ್ಣವಾಗಿ ಕಾಣುತ್ತದೆ.ಮಧ್ಯದ ನರ್ತಕನ ಎಡ ಅರ್ಧ ಭಾಗವನ್ನು ಮುಚ್ಚಿದರೆ ಅವನ ಬಲಗಾಲು ಬಲಭಾಗದ ನರ್ತಕನಿಗೆ ಹೊಂದಿಕೊಂಡು ಅವನ ಶಿಲ್ಪ ಪೂರ್ಣವಾಗುತ್ತದೆ.ಹಾಗೆಯೇ ಮಧ್ಯದ ನರ್ತಕನ ಬಲ ಅರ್ಧ ಭಾಗವನ್ನು ಮುಚ್ಚಿದರೆ, ಅವನ ಎಡಗಾಲು ಎಡಭಾಗದ ನರ್ತಕನಿಗೆ ಹೊಂದಿಕೊಂಡು ಅವನ ಶಿಲ್ಪ ಪೂರ್ಣವಾಗುತ್ತದೆ.ಹೀಗೆ ಮೂರು ನರ್ತಕರನ್ನು ಒಂದೇ ಶಿಲ್ಪದಲ್ಲಿ ತೋರಿಸಿದ್ದಾನೆ ಶಿಲ್ಪಿ.ಜಾಗ ಉಳಿಸಲು ಈ ಚಮತ್ಕಾರವನ್ನು ಅವನು ಬಳಸಿರಬಹುದು.ಇದು ಅವನ ಚಾತುರ್ಯವನ್ನು ತೋರಿಸುತ್ತದೆ.
       

ಮಾನೀಟರ್ ಹಲ್ಲಿ

ಮಾನೀಟರ್ ಹಲ್ಲಿ 
      ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋದಾಗ ವಿಶ್ರಮಿಸುತ್ತಿದ್ದ ಈ ಮಾನೀಟರ್ ಹಲ್ಲಿ ಅಥವಾ ಉಡ ಕಂಡುಬಂದಿತು.ಉರಗ ಜಾತಿಯ ಬೃಹತ್ ಹಲ್ಲಿಯಾದ ಇದು ಏಷ್ಯಾ,ಆಫ್ರಿಕಾ ಖಂಡಗಳಲ್ಲೆಲ್ಲಾ ಕಂಡುಬರುವುದಾಗಿದ್ದು, ನಮ್ಮ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ.ಇದು ಉದ್ದವಾದ ಕುತ್ತಿಗೆಯನ್ನೂ, ಬಲಶಾಲಿಯಾದ ಬಾಲವನ್ನೂ ಪಂಜುಗಳನ್ನೂ ಹೊಂದಿದ್ದು ಬಹುತೇಕ ನೆಲದ ಮೇಲೆ ವಾಸಿಸುತ್ತದೆ ಹಾಗೂ ಕೆಲವು ಪ್ರಭೇದಗಳು ಮರಗಳ ಮೇಲೂ ಭಾಗಶಃ ನೀರಿನಲ್ಲೂ ವಾಸಿಸುತ್ತವೆ.ವಯಸ್ಕ ಉಡವು ಕೆಲವು ಪ್ರಭೇದಗಳಲ್ಲಿ ಇಪ್ಪತ್ತು ಸೆಂಟಿಮೀಟರ್ ನಿಂದ ಮೂರು ಮೀಟರ್ ಉದ್ದದವರೆಗೂ ಬೆಳೆಯಬಲ್ಲದು! ಈ ಉಡಗಳು ಮಾಂಸಾಹಾರಿಗಳಾಗಿದ್ದು, ಮೊಟ್ಟೆಗಳು, ಪುಟ್ಟ ಉರಗಗಳು, ಪಕ್ಷಿಗಳು, ಸಸ್ತನಿಗಳು, ಮತ್ತು ಕೀಟಗಳನ್ನು, ಹಾಗೂ ಕೆಲವು, ಹಣ್ಣುಗಳು ಮತ್ತು ಸಸ್ಯಗಳನ್ನೂ ತಿನ್ನುತ್ತವೆ. 


ಗುರುವಾರ, ಜೂನ್ 6, 2024

ಅಪರೂಪದ ಪಳೆಯುಳಿಕೆ


ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಅಥವಾ ಮೈಸೂರು ಮೃಗಾಲಯದಲ್ಲಿ ಅನೇಕ ವಿಧವಾದ ಪ್ರಾಣಿ ಪಕ್ಷಿಗಳನ್ನಷ್ಟೇ ಅಲ್ಲದೇ ಇನ್ನೂ ಕೆಲವು ಆಕರ್ಷಣೆಗಳನ್ನು ಕಾಣಬಹುದು.ಅಂಥ ಒಂದು ಆಕರ್ಷಣೆ, ೧೫೦ ಮಿಲಿಯನ್ ವರ್ಷಗಳ ಹಿಂದಿನ ಹಳೆಯದಾದ ಒಂದು ಮರದ ಕಾಂಡದ ಪಳೆಯುಳಿಕೆ! ಪಳೆಯುಳಿಕೆ ಎಂದರೆ, ಹಿಂದೆ ಇದ್ದ ಪ್ರಾಣಿ,ಪಕ್ಷಿಗಳ ಹಾಗೂ ಗಿಡ,ಮರಗಳ ಅವಶೇಷಗಳು.ಇವು ಕಲ್ಲು, ಆಂಬರ್. ಮೊದಲಾದ ವಸ್ತುಗಳಲ್ಲಿ ಸಿಕ್ಕಿಕೊಂಡು ತಮ್ಮ ಗುರುತನ್ನು ಬಿಟ್ಟಿರುತ್ತವೆ ಅಥವಾ ಆ ಕಲ್ಲಾಗಿಯೇ ಪರಿವರ್ತನೆ ಹೊಂದಿರುತ್ತವೆ.ಈಗ ಇಲ್ಲಿರುವ ಈ ಮರದ ಕಾಂಡದ ಪಳೆಯುಳಿಕೆಯನ್ನು ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯ ಯಮನಪಲ್ಲಿ ಹಳ್ಳಿಯಿಂದ ತರಲಾಗಿದೆ.ಅದು ಅಲ್ಲಿ ಜುರಾಸಿಕ್ ಯುಗದ ಕೋಟಾ ಎಂಬ ಶಿಲಾ ಸ್ತರಗಳಲ್ಲಿ ಸಿಕ್ಕಿರುವುದಾಗಿದೆ.ಈ ಪಳೆಯುಳಿಕೆಯಲ್ಲಿ ಮರದ ಸೂಕ್ಷ್ಮ ರಚನೆಗಳನ್ನು ಕಾಣಬಹುದಾಗಿದೆ! ಹೀಗೆ ಇದೊಂದು ಪ್ರಾಕೃತಿಕ ವಿಸ್ಮಯವಾಗಿದೆ.