ಸಂಸ್ಕೃತ ಸಾಹಿತ್ಯದಲ್ಲಿ ಯಾವ ವಿಷಯವೂ ಇಲ್ಲದಿಲ್ಲ.ಮಾನವ ಅನುಭವದ ವೈವಿಧ್ಯಮಯ ಮುಖಗಳನ್ನು ನಾವಿಲ್ಲಿ ಕಾಣಬಹುದು.ಅಂತೆಯೇ ಶೃಂಗಾರವೂ ಹೌದು.ಸರಳವಾಗಿ ಹೇಳಬಹುದಾದರೆ ಶೃಂಗಾರವೆಂದರೆ ಗಂಡು, ಹೆಣ್ಣುಗಳ ಪ್ರೇಮ.ಆದರೆ ಅಷ್ಟಕ್ಕೇ ಸೀಮಿತವಾಗದೇ, ಭೋಜರಾಜನು ತನ್ನ ಶೃಂಗಾರಪ್ರಕಾಶವೆಂಬ ಗ್ರಂಥದಲ್ಲಿ ಶೃಂಗಾರವನ್ನು, 'ಯೇನ ಶೃಂಗಂ ರೀಯತೇ ಗಮ್ಯತೇ ಸ ಶೃಂಗಾರ:' ಎಂದು ವಿವರಿಸುತ್ತಾನೆ.ಅಂದರೆ ಯಾವುದರಿಂದ ಒಂದು ಶೃಂಗದ ತುಟ್ಟ ತುದಿಯನ್ನು ಮುಟ್ಟುವುದೋ ಅದು ಶೃಂಗಾರ ಎಂದು.ಹಾಗಾಗಿ ಶೃಂಗಾರವೆಂದರೆ ಅತ್ಯುನ್ನತ ಸುಖವನ್ನು ಹೊಂದುವುದು.ಅದು ಸ್ತ್ರೀ,ಪುರುಷರ ಕ್ಷಣಿಕ ಮಿಲನವಷ್ಟೇ ಅಲ್ಲದೇ ಸಂಪೂರ್ಣ ದೈಹಿಕ, ಭಾವನಾತ್ಮಕ ಸುಖ ಹೊಂದುವುದಾಗಿರುತ್ತದೆ.ವಾತ್ಸ್ಯಾಯನನೆಂಬ ಋಷಿ ಕಾಮಸೂತ್ರವೆಂಬ ತನ್ನ ಗ್ರಂಥದಲ್ಲಿ ಕಾಮವನ್ನು ಒಂದು ಕಲೆಯಾಗಿ ಹೇಗೆ ಆನಂದವುಂಟಾಗುವಂತೆ ಅನುಭವಿಸಬೇಕೆಂದು ಬಗೆಬಗೆಯಾಗಿ ವರ್ಣಿಸಿದ್ದಾನೆ.ಅನಂತರ ಬಂದ ಕೊಕ್ಕೋಕ ಪಂಡಿತನ ರತಿರಹಸ್ಯ, ಕಲ್ಯಾಣಮಲ್ಲನ ಅನಂಗರಂಗ, ಮೊದಲಾದ ಗ್ರಂಥಗಳು ಕಾಮಶಾಸ್ತ್ರವನ್ನು ವಿಸ್ತರಿಸಿದವು.ಈ ಗ್ರಂಥಗಳು ಒಂದು ಬಗೆಯ ಶಾಸ್ತ್ರ ಅಥವಾ ಪಠ್ಯ ಗ್ರಂಥಗಳು.ಆದರೆ ಇವಲ್ಲದೇ, ಸಂಸ್ಕೃತದಲ್ಲಿ ಭಾವನಾತ್ಮಕವಾದ ಶೃಂಗಾರ ಪದ್ಯಗಳಿವೆ ಹಾಗೂ ಅವುಗಳ ಸಂಕಲನಗಳಿವೆ.ಅವುಗಳ ಮೇಲೆ ಕಾಮಸೂತ್ರ ಮೊದಲಾದ ಈ ಗ್ರಂಥಗಳ ಪ್ರಭಾವವಾಗಿದೆ.ಶೃಂಗಾರವು ಅಶ್ಲೀಲವಲ್ಲ.ಅದನ್ನು ರಸವಾಗಿ ಅನುಭವಿಸಿದಾಗ ಅಶ್ಲೀಲದ ಭಾವನೆ ಬರುವುದಿಲ್ಲ.ನಾಟ್ಯಶಾಸ್ತ್ರದ ನವರಸಗಳಲ್ಲಿ ಶೃಂಗಾರವೇ ಪ್ರಮುಖವಾಗಿದೆ ಹಾಗೂ ನಾರಾಯಣನೇ ಅದರ ದೇವತೆಯಾಗಿದ್ದಾನೆ. ಭೋಜರಾಜನು ಶೃಂಗಾರೇಕ ರಸ: , ಅಂದರೆ, ಶೃಂಗಾರವೊಂದೇ ರಸ ಎಂದು ಉತ್ಪ್ರೇಕ್ಷೆಯೆಂಬಂತೆ ಹೇಳುತ್ತಾನೆ.
ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರದ ವರ್ಣನೆಗಳು ಹಾಸುಹೊಕ್ಕಾಗಿ ಬರುತ್ತವೆ.ಸ್ತ್ರೀಸೌಂದರ್ಯ, ಚುಂಬನಾಲಿಂಗನಾದಿ ಪ್ರೇಮ ಕ್ರೀಡೆಗಳು, ಸುರತ ಕ್ರೀಡೆ, ಜಲಕ್ರೀಡೆ, ಮೊದಲಾದ ವರ್ಣನೆಗಳನ್ನು ಕಾಳಿದಾಸಾದಿ ಕವಿಗಳು ತಮ್ಮ ಕಾವ್ಯಗಳಲ್ಲಿ ಆಕರ್ಷಕವಾಗಿ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಕಾವ್ಯ, ನಾಟಕಗಳ ಮಧ್ಯೆ ಇಂಥ ವರ್ಣನೆಗಳು ಹೇರಳವಾಗಿ ದೊರೆಯುವುದು ಒಂದು ಬಗೆಯಾದರೆ, ಶೃಂಗಾರ ಪದ್ಯಗಳ ಸಂಗ್ರಹಗಳೇ ಸಂಸ್ಕೃತದಲ್ಲಿರುವುದು ಇನ್ನೊಂದು ಬಗೆ.ಈ ಶೃಂಗಾರ ಕಾವ್ಯಗಳು ಸಾಮಾನ್ಯವಾಗಿ ಒಂದಕ್ಕೊಂದು ಸಂಬಂಧವಿಲ್ಲದ ಬಿಡಿ ಬಿಡಿ ಪದ್ಯಗಳನ್ನು ಹೊಂದಿರುತ್ತವೆ.ಇಂಥ ಬಿಡಿ ಪದ್ಯಗಳನ್ನು ಮುಕ್ತಕಗಳು ಎಂದು ಕರೆಯುತ್ತಾರೆ.ಮುಕ್ತಕಗಳೆಂದರೆ ಮುತ್ತುಗಳು.ನೂರು ಪದ್ಯಗಳುಳ್ಳ ಒಂದು ಸಂಕಲನಕ್ಕೆ ಶತಕ ಎನ್ನುತ್ತಾರೆ.ಶತಕಗಳು ನೀತಿ, ಅನ್ಯೋಕ್ತಿ ಸುಭಾಷಿತಗಳು, ವೈರಾಗ್ಯದ ಚಿಂತನೆಗಳು, ಮೊದಲಾದ ವಿಷಯಗಳನ್ನೊಳಗೊಂಡಂತೆ ಶೃಂಗಾರದ ವಿಷಯವನ್ನೂ ಹೊಂದಿರುತ್ತವೆ. ಭರ್ತೃಹರಿಯ ಶೃಂಗಾರ ಶತಕ, ಹಾಗೂ ಅಮರುಕ ಕವಿಯ ಶೃಂಗಾರ ಶತಕ ಇದಕ್ಕೆ ಉದಾಹರಣೆಗಳು.ಅಂತೆಯೇ ಈ ಶೃಂಗಾರ ಕಾವ್ಯಗಳಲ್ಲಿ ಪ್ರೇಮಿಗಳನ್ನು ನಾಯಕ ಮತ್ತು ನಾಯಿಕೆ ಎಂದು ಕರೆದಿರುತ್ತಾರೆ.ಇವರಲ್ಲಿ ಇನ್ನೂ ಹಲವು ವಿಧಗಳಿವೆ! ಶೃಂಗಾರದಲ್ಲಿ ಮುಖ್ಯವಾಗಿ ಎರಡು ಬಗೆಗಳಿವೆ.ಅವು ಸಂಭೋಗ ಶೃಂಗಾರ ಮತ್ತು ವಿಪ್ರಲಂಭ ಶೃಂಗಾರ.ಸಂಭೋಗ ಶೃಂಗಾರ ಪ್ರೇಮಿಗಳು ಜೊತೆಯಲ್ಲಿ ಅನುಭವಿಸುವ ಪ್ರೇಮವನ್ನು ವರ್ಣಿಸಿದರೆ, ವಿಪ್ರಲಂಭ ಶೃಂಗಾರ, ಪ್ರೇಮಿಗಳು ವಿರಹದಲ್ಲಿರುವುದನ್ನು ವರ್ಣಿಸುತ್ತವೆ.
ಭರ್ತೃಹರಿ, ಸಂಸ್ಕೃತ ವಿದ್ಯಾರ್ಥಿಗಳಿಗೆ ಚಿರಪರಿಚಿತ ಹೆಸರು.ಅವನು ನೀತಿ, ವೈರಾಗ್ಯ ಶತಕಗಳ ಜೊತೆಗೆ ಶೃಂಗಾರ ಶತಕವನ್ನೂ ರಚಿಸಿದ್ದಾನೆ.ಇದರಲ್ಲಿ ಅವನು ಸ್ತ್ರೀ ಸೌಂದರ್ಯವನ್ನು ಬಗೆಬಗೆಯಾಗಿ ವರ್ಣಿಸುತ್ತಾನೆ.ಅಂತೆಯೇ ವಿವಿಧ ಋತುಗಳಲ್ಲಿ ಪ್ರೇಮಿಗಳು ಹೇಗೆ ಪ್ರೀತಿಸುತ್ತಾರೆ ಎಂಬುದನ್ನೂ ವರ್ಣಿಸುತ್ತಾನೆ.
ಭರ್ತೃಹರಿಯ ಶೃಂಗಾರ ಶತಕದ ಒಂದೆರಡು ಉದಾಹರಣೆಗಳನ್ನು ನೋಡೋಣ.
ಸತಿ ಪ್ರದೀಪೇ ಸತ್ಯಗ್ನೌ ಸತ್ಸು ತಾರಾಮಣೀಂದುಷು /
ವಿನಾ ಮೇ ಮೃಗಶಾವಕ್ಷ್ಯಾ ತಮೋಭೂತಮಿದಂ ಜಗತ್//
ವಿರಹದಲ್ಲಿರುವ ಒಬ್ಬ ನಾಯಕನು ಹೇಳುತ್ತಾನೆ,' ಪ್ರಕಾಶ ಬೀರುವ ದೀಪವೇ ಇರಲಿ, ಬೆಳಕು ಬೀರುವ ಅಗ್ನಿಯೇ ಇರಲಿ,ಹಳೆಹೊಳೆಯುವ ನಕ್ಷತ್ರಗಳೇ ಇರಲಿ, ಉಜ್ವಲವಾಗಿ ಬೆಳಗುವ ಚಂದ್ರಮನೇ ಇರಲಿ, ಜಿಂಕೆಯ ಮರಿಯ ಕಂಗಳಂಥ ಸುಂದರ ಕಂಗಳುಳ್ಳ ನನ್ನ ಪ್ರಿಯತಮೆಯು ನನ್ನ ಬಳಿ ಇರದಿದ್ದರೆ, ಈ ಇಡೀ ಜಗತ್ತು ಕತ್ತಲಾಗಿ ಕಾಣುವುದು!'
ಹಂತ ಹಂತವಾಗಿ ರತಿಯಾಸೆ ಹೇಗೆ ಹೆಚ್ಚುವುದೆಂದು ಈ ಪದ್ಯದಲ್ಲಿ ಭರ್ತೃಹರಿಯು ಸೊಗಸಾಗಿ ಹೇಳುತ್ತಾನೆ:
ಅದರ್ಶನೇ ದರ್ಶನಮಾತ್ರಕಾಮಾ
ದೃಷ್ಟ್ವಾ ಪರಿಷ್ವಂಗಸುಖೈಕಲೋಲಾ/
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ-
ಮಾಶಾಸ್ಮಹೇ ವಿಗ್ರಹಯೋರಭೇದಮ್//
' ನೋಡುವವರೆಗೆ ನೋಡುವ ಆಸೆಯೊಂದೇ ಇರುತ್ತದೆ! ನೋಡಿದ ಬಳಿಕ ಆಲಿಂಗನ ಸುಖದ ಆಸೆಯೊಂದೇ ಇರುತ್ತದೆ! ವಿಶಾಲಾಕ್ಷಿಯಾದ ಹೆಣ್ಣನ್ನು ಆಲಿಂಗಿಸಿದ ಬಳಿಕ, ಇಬ್ಬರ ತನುಗಳ ನಡುವೆ ಭೇದವೇ ಆಗಬಾರದೆಂದು ( ಸದಾ ಒಂದಾಗಿಯೇ ಇರಬೇಕೆಂಬ) ನಾವು ಆಸೆಪಡುತ್ತೇವೆ!'
ವರ್ಷ ಋತುವಿನ ಒಂದು ವರ್ಣನೆಯನ್ನು ನೋಡಿ:
ಆಸಾರೇಣ ನ ಹರ್ಮ್ಯತ: ಪ್ರಿಯತಮೈರ್ಯಾತುಂ ಬಹಿ: ಶಕ್ಯತೇ
ಶೀತೋತ್ಕಂಪನಿಮಿತ್ತಮಾಯತದೃಶಾ ಗಾಢಂ ಸಮಾಲಿಂಗ್ಯತೇ/
ಜಾತಾ: ಶೀಕರಶೀತಲಾಶ್ಚ ಮರುತೋ ರತ್ಯಂತಖೇದಚ್ಛಿದೋ
ಧನ್ಯಾನಾಂ ಬತ ದುರ್ದಿನಂ ಸುದಿನತಾಂ ಯಾತಿ ಪ್ರಿಯಾಸಂಗಮೇ//
' ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ, ಪ್ರಿಯತಮರು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.ವಿಶಾಲಾಕ್ಷಿಯರಾದ ಅವರ ಮುದ್ದು ನಲ್ಲೆಯರು ಚಳಿಯಿಂದ ನಡುಗುವ ನೆಪ ಮಾಡಿಕೊಂಡು ತಾವಾಗಿಯೇ ಅವರನ್ನು ಗಾಢವಾಗಿ ಅಪ್ಪಿಕೊಳ್ಳುತ್ತಾರೆ! ಮಳೆಹನಿಗಳಿಂದ ತಂಪಾದ ಗಾಳಿಯು ಮೆಲ್ಲನೆ ಬೀಸುತ್ತಾ ರತಿಕೇಳಿಯಾಡಿದ ನಲ್ಲನಲ್ಲೆಯರ ಶ್ರಮವನ್ನು ಪರಿಹರಿಸುತ್ತದೆ! ಹೀಗೆ ಪ್ರಿಯತಮೆಯರ ಸಂಗಮವನ್ನು ಹೊಂದಿದ ಧನ್ಯಪುರುಷರ ಮಳೆಗಾಲದ ಇಂಥ ದುರ್ದಿನಗಳೂ ಸುದಿನಗಳಾಗಿ ಪರಿಣಮಿಸುತ್ತವೆ!'
ಪ್ರೇಮದ ಸೂಕ್ಷ್ಮ ಸಂವೇದನೆಗಳು ಮತ್ತು ನವಿರಾದ ಭಾವನೆಗಳನ್ನು ವರ್ಣಿಸುವುದರಲ್ಲಿ ಅಮರುಕ ಕವಿಯು ಎತ್ತಿದ ಕೈ! ಅವನು ಅಮರುಶತಕ ಸಂಸ್ಕೃತ ಸಾಹಿತ್ಯದಲ್ಲೇ ಅತ್ಯಂತ ಉತ್ಕೃಷ್ಟ ಶೃಂಗಾರ ಕಾವ್ಯವೆನ್ನಬಹುದು.ವ್ಯಾಖ್ಯಾನಕಾರರು ಅಮರುಶತಕವನ್ನು ಅಮೃತಕಾವ್ಯ ಎಂದಿದ್ದಾರೆ.'ಅಮರುಕಕವೇರೇಕ: ಶ್ಲೋಕ: ಪ್ರಬಂಧಶತಾಯತೇ ' ಎಂಬ ಮಾತಿದೆ - ಅಂದರೆ ಅಮರುಕ ಕವಿಯ ಒಂದೊಂದು ಶ್ಲೋಕವೂ ನೂರು ಪ್ರಬಂಧಗಳಿಗೆ ಸಮ ಎಂದು ಅರ್ಥ!ಅಮರುಕ ಕವಿಯ ಡಮರುಗವನ್ನಾಲಿಸಿದ ಬಳಿಕ ಬೇರಾವ ಶೃಂಗಾರ ಕಾವ್ಯವೂ ರುಚಿಸದು ಎಂದಿದ್ದಾರೆ! ಪಾಶ್ಚಾತ್ಯ ವಿದ್ವಾಂಸರಿಗೂ ಇದು ಬಹಳ ಪ್ರಿಯವಾದುದು.ಪ್ರೊ.ಮೆಕ್ ಡೊನಾಲ್ಡ್ ಅವರು,' ವಿಷಯದ ಚಿಕ್ಕ ಪರಿಮಿತಿಯಲ್ಲೇ, ಸಮಾನವಾದ ಭಾವಗಳ ಮತ್ತು ಸನ್ನಿವೇಶಗಳಲ್ಲೇ, ಕವಿಯು ಆಲೋಚನೆಗಳ ಆಶ್ಚರ್ಯಕರ ತಿರುವುಗಳೊಂದಿಗೆ ಎಲ್ಲೆಲ್ಲೂ ಹೊಸ ಹೊಸ ಸೂಕ್ಷ್ಮ ಸ್ಪರ್ಶಗಳನ್ನು ನೀಡುತ್ತಾ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ!' ಎಂದಿದ್ದಾರೆ.ಅಮರುಶತಕವು ಚಿತ್ರಕಲೆಯನ್ನೂ ಪ್ರೇರೇಪಿಸಿದೆ.ಅಮರುಶತಕದ ಎಲ್ಲಾ ಪದ್ಯಗಳಿಗೂ ಚಿತ್ರಗಳನ್ನು ರಚಿಸಲಾಗಿದೆ.ಈಗ ಅಮರುಶತಕದ ಎರಡು ಉದಾಹರಣೆಗಳನ್ನು ನೋಡೋಣ:
ಏಕಸ್ಮಿನ್ ಶಯನೇ ಪರಾಙ್ಮುಖತಯಾ ವೀತೋತ್ತರ: ತಾಮ್ಯತೋ -
ರನ್ಯೋನ್ಯಂ ಹೃದಯಸ್ಥಿತೇsಪ್ಯನುನಯೇ ಸಂರಕ್ಷತೋರ್ಗೌರವಮ್/
ದಂಪತ್ಯೋ: ಶನಕೈರಪಾಂಗವಲನಾನ್ಮಿಶ್ರೀಭವಚ್ಚಕ್ಷುಷೋ -
ರ್ಭಗ್ನೋ ಮಾನಕಲಿ: ಸಹಾಸರಭಸಂ ವ್ಯಾವೃತ್ತಕಂಠಗ್ರಹ: //
ದಂಪತಿಗಳು ಒಮ್ಮೆ ಜಗಳವಾಡಿ ಪುನಃ ಹೇಗೆ ಒಂದಾದರೆಂದು ಕವಿಯು ಇಲ್ಲಿ ನವಿರಾಗಿ ವರ್ಣಿಸುತ್ತಾನೆ,' ಒಮ್ಮೆ ದಂಪತಿಗಳಿಬ್ಬರೂ ಜಗಳವಾಡಿ ಮಂಚದ ಮೇಲೆ ಮಾತುಕತೆಯಿಲ್ಲದೇ ಮುಖ ತಿರುಗಿಸಿಕೊಂಡು ಮಲಗಿದರು! ಇದರಿಂದ ಇಬ್ಬರೂ ಒಳಗೊಳಗೇ ತಪಿಸುತ್ತಾ ಒಬ್ಬರನ್ನೊಬ್ಬರು ಸಮಾಧಾನಪಡಿಸಬೇಕೆಂದು ಆಶಿಸುತ್ತಿದ್ದರೂ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಮೌನವಾಗಿದ್ದರು! ಆದರೆ ಅವರು ನಿಧಾನವಾಗಿ ಮುಖವನ್ನು ಪುನಃ ಒಬ್ಬರ ಕಡೆಗೊಬ್ಬರು ತಿರುಗಿಸಿ ಕಡೆಗಣ್ಣಿನಿಂದ ನೋಡತೊಡಗಿದರು.ನೋಟಗಳು ಮಿಳಿತವಾಗಲು, ಅವರ ಕೋಪಕಲಹ ಮಾಯವಾಗಿ ಇಬ್ಬರೂ ನಗುತ್ತಾ ವೇಗವಾಗಿ ಕೊರಳ ಸುತ್ತ ತೋಳು ಬಳಸಿ ಬಿಸಿಯಪ್ಪುಗೆಯಲ್ಲಿ ಬಂಧಿತರಾದರು!'
ಶೂನ್ಯಂ ವಾಸಗೃಹಂ ವಿಲೋಕ್ಯ ಶಯನಾದುತ್ಥಾಯ ಕಿಂಚಿಚ್ಛನೈ-
ರ್ನಿದ್ರಾವ್ಯಾಜಮುಪಾಗತಸ್ಯ ಸುಚಿರಂ ನಿರ್ವರ್ಣ್ಯ ಪತ್ಯುರ್ಮುಖಮ್/
ವಿಸ್ರಬ್ಧಂ ಪರಿಚುಂಬ್ಯ ಜಾತಪುಲಕಾಮಾಲೋಕ್ಯ ಗಂಡಸ್ಥಲೀಂ
ಲಜ್ಜಾನಮ್ರಮುಖೀ ಪ್ರಿಯೇಣ ಹಸತಾ ಬಾಲಾ ಚಿರಂ ಚುಂಬಿತಾ//
ನವವಿವಾಹಿತ ಹೆಣ್ಣಿನ ಒಂದು ಪ್ರೇಮಸನ್ನಿವೇಶವನ್ನು ಕವಿಯು ಇಲ್ಲಿ ಸೊಗಸಾಗಿ ವರ್ಣಿಸುತ್ತಾನೆ,' ಶಯ್ಯಾಗೃಹದಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ, ಮಲಗಿದ್ದ ಆ ಬಾಲೆಯು ಮೆಲ್ಲನೆ ಎದ್ದು, ನಿದ್ರೆ ಹೋದಂತೆ ನಟಿಸುತ್ತಿದ್ದ ಪತಿಯ ಮುಖವನ್ನೇ ಬಹಳ ಹೊತ್ತು ನೋಡುತ್ತಾ ಅವನು ನಿದ್ರಿಸಿದ್ದಾನೆಂದು ಖಚಿತಪಡಿಸಿಕೊಂಡು ನಿಧಾನವಾಗಿ ಅವನ ಕೆನ್ನೆಯನ್ನು ಚುಂಬಿಸಿದಳು! ಆದರೆ ಅವನ ಕೆನ್ನೆಯ ಮೇಲೆ ಮೂಡಿದ ರೋಮಾಂಚನವನ್ನು ಗಮನಿಸಿ ಅವನು ನಿಜವಾಗಿಯೂ ನಿದ್ರಿಸಿಲ್ಲವೆಂದು ತಿಳಿದು ನಾಚಿಕೆಯಿಂದ ತಲೆಬಾಗಿಸಿದಳು! ಆಗ ಅವಳ ಪ್ರಿಯತಮನು ಎದ್ದು ನಗುತ್ತಾ ಅವಳನ್ನು ಸುದೀರ್ಘವಾಗಿ ಚುಂಬಿಸಿದನು!'
ಮುಗ್ಧೇ ಮುಗ್ಧತಯೈವನೇತುಮಖಿಲ: ಕಾಲ: ಕಿಮಾರಭ್ಯತೇ
ಮಾನಂ ಧತ್ಸ್ವ ಧೃತಿಂ ಬಧಾನ ಋಜುತಾಂ ದೂರೇ ಕುರು ಪ್ರೇಯಸಿ /
ಸಖ್ಯೈವಂ ಪ್ರತಿಬೋಧಿತಾ ಪ್ರತಿವಚಸ್ತಾಮಾಹ ಭೀತಾನನಾ
ನೀಚೈ: ಶಂಸ ಹೃದಿ ಸ್ಥಿತೋ ಹಿ ನನು ಮೇ ಪ್ರಾಣೇಶ್ವರ: ಶ್ರೋಷ್ಯತಿ //
ಸಖಿಯು ಮುಗ್ಧ ನಾಯಿಕೆಯೊಬ್ಬಳಿಗೆ ಕೋಪ ಮಾಡಿಕೊಳ್ಳುವುದು ಹೇಗೆಂದು ಕಲಿಸುವಾಗ ನಡೆದ ಸಂಭಾಷಣೆ:
' ಮುಗ್ಧ ಹೆಣ್ಣೇ! ಇಷ್ಟು ಮುಗ್ಧತನದಿಂದಲೇ ನಿನ್ನ ಇಡೀ ಜೀವನವನ್ನು ಕಳೆಯಲು ಆರಂಭಿಸಿರುವೆಯೇಕೆ? ಆಗಾಗ ಕೋಪ ಮಾಡಿಕೋ! ತುಂಬಾ ವಿಧೆಯತೆಯಿಂದಿರದೇ ಸ್ವಲ್ಪ ಗಟ್ಟಿ ಮನಸ್ಸು ಮಾಡಿಕೋ! ಈ ಮುಗ್ಧತೆಯನ್ನು ದೂರ ಮಾಡು!' ಎಂದು ಸಖಿಯು ನವವಧುವಿಗೆ ಬೋಧಿಸುತ್ತಿರಲು, ಭಯಭೀತಿಗೊಂಡ ಮುಖದಿಂದ ಅವಳು,' ಏ ಸಖಿ! ಸ್ವಲ್ಪ ಮೆಲ್ಲನೆ ಮಾತನಾಡು! ನನ್ನ ಹೃದಯದಲ್ಲಿರುವ ಪ್ರಾಣೇಶ್ವರನು ಕೇಳಿಸಿಕೊಂಡುಬಿಡುತ್ತಾನೆ!' ಎಂದಳು!'
ಹೆಣ್ಣಿನ ನವಿರಾದ ಭಾವನೆಗಳನ್ನು ಬಹಳ ಸೊಗಸಾಗಿ, ವೈವಿಧ್ಯಮಯವಾಗಿ ವರ್ಣಿಸಿರುವ ಅಮರುಕನು ನೂರು ಹೆಣ್ಣಿನ ಜನ್ಮಗಳನ್ನು ಕಳೆದು ಅನಂತರ ಗಂಡಾಗಿ ಹುಟ್ಟಿದ ಎಂದು ಒಂದು ದಂತಕಥೆಯಿದೆ.ಇನ್ನೊಂದು ದಂತಕಥೆಯ ಪ್ರಕಾರ, ಶಂಕರಾಚಾರ್ಯರು ಮಂಡನಮಿಶ್ರರ ಪತ್ನಿ ಉಭಯಭಾರತಿ ಕಾಮಶಾಸ್ತ್ರದ ಬಗ್ಗೆ ಪ್ರಶ್ನಿಸಲು, ಅದನ್ನು ಅರಿಯಲು ಸತ್ತುಹೋಗಿದ್ದ ಅಮರುಕನೆಂಬ ರಾಜನ ದೇಹದೊಳಗೆ ಪ್ರವೇಶಿಸಿ ಕಾಮದ ಬಗ್ಗೆ ತಿಳಿದು ಈ ಅಮರುಶಕವನ್ನು ರಚಿಸಿದರಂತೆ! ಅನಂತರ ಇದರ ಪದ್ಯಗಳಿಗೆ ಆಧ್ಯಾತ್ಮಿಕ ಅರ್ಥವನ್ನೂ ಹೇಳಿದರಂತೆ! ಹೀಗೆ ಪ್ರತಿಭಾವಂತನಾದ ಅಮರೂಕನ ಮೇಲೆ ಅನೇಕ ದಂತಕಥೆಗಳು ಹುಟ್ಟಿಕೊಂಡಿವೆ!
ಮೊಘಲ್ ದೊರೆ ಶಹಜಹಾನ್ ನ ಆಸ್ಥಾನದಲ್ಲಿದ್ದ ಜಗನ್ನಾಥ ಪಂಡಿತನೆಂಬ ತೈಲಂಗ ಕವಿ, ಭಾಮಿನೀವಿಲಾಸವೆಂಬ ಕಾವ್ಯವನ್ನು ರಚಿಸಿದ್ದಾನೆ.ಇದರಲ್ಲಿ ನಾಲ್ಕು ಭಾಗಗಳಿವೆ.ಅವು, ಪ್ರಾಸ್ತಾವಿಕವಿಲಾಸ ಅಥವಾ ಅನ್ಯೋಕ್ತಿವಿಲಾಸ, ಶೃಂಗಾರವಿಲಾಸ, ಕರುಣಾವಿಲಾಸ, ಮತ್ತು ಶಾಂತವಿಲಾಸ.ಇವುಗಳಲ್ಲಿ ಶೃಂಗಾರವಿಲಾಸದಲ್ಲಿ ಸ್ವಾರಸ್ಯಕರ ಪದ್ಯಗಳಿವೆ.ಒಂದು ಉದಾಹರಣೆ ನೋಡೋಣ.
ತೀರೇ ತರುಣ್ಯಾ ವದನಂ ಸಹಾಸಂ
ನೀರೇ ಸರೋಜಂ ಚ ಮಿಲದ್ವಿಕಾಸಮ್/
ಆಲೋಕ್ಯ ಧಾವತ್ಯುಭಯತ್ರ ಮುಗ್ಧಾ
ಮರಂದಲುಬ್ಧಾಲಿಕಿಶೋರಮಾಲಾ//
' ತೀರದಲ್ಲಿ ಕುಳಿತ ತರುಣಿಯ ನಗುಮೊಗವನ್ನು ನೋಡಿ, ಹಾಗೆಯೇ ಸರೋವರದ ನೀರಿನಲ್ಲಿ ತೆರೆದುಕೊಳ್ಳುತ್ತಿರುವ ಕಮಲಪುಷ್ಪವನ್ನು ನೋಡಿ, ಜೇನಿನ ಆಸೆಯಿಂದ ಮರಿದುಂಬಿಗಳ ಸಾಲು ಗೊಂದಲಕ್ಕೊಳಗಾಗಿ ಎರಡೂ ಕಡೆಗೂ ಹಾರುತ್ತಿದೆ ( ಯಾವುದು ಕಮಲಪುಷ್ಪ ಎಂದು ಗೊಂದಲಕ್ಕೊಳಗಾಗಿ ಮರಿದುಂಬಿಗಳು ಹೆಣ್ಣಿನ ಮುಖದ ಬಳಿಗೂ ನಿಜವಾದ ಕಮಲದ ಬಳಿಗೂ ಹಾರುತ್ತಿವೆ)!'
ಶೃಂಗಾರ ಕಾವ್ಯಗಳಲ್ಲಿ ಕಾಶ್ಮೀರದ ಕವಿ ಬಿಲ್ಹಣನ ಚೌರಸುರತಪಂಚಾಶಿಕಾ ಅಥವಾ ಚೌರಪಂಚಾಶಿಕಾ ಎಂಬ ಐವತ್ತು ಪದ್ಯಗಳ ಪುಟ್ಟ ಕಾವ್ಯವೂ ಮುಖ್ಯವಾಗಿದೆ.ಬಿಲ್ಹಣನನ್ನು ದಕ್ಷಿಣದ ರಾಜನೊಬ್ಬನು ತನ್ನ ಮಗಳಿಗೆ ಸಂಸ್ಕೃತ ಪಾಠ ಕಲಿಸಲು ನೇಮಿಸಿದಾಗ ಅವನು ಅವಳೊಡನೆ ಪ್ರೇಮದಲ್ಲಿ ತೊಡಗುತ್ತಾನೆ.ಇದನ್ನು ಪತ್ತೆಮಾಡಿದ ರಾಜ, ಅವನಿಗೆ ಮರಣದಂಡನೆ ವಿಧಿಸಿದನು! ಆದರೆ ಶಿಕ್ಷೆಯಾಗುವ ಸ್ಥಾನದಲ್ಲೇ ಅವನು ಐವತ್ತು ಶ್ಲೋಕಗಳ ಈ ಕಾವ್ಯವನ್ನು ರಚಿಸಿದನು! ಇದನ್ನು ಕೇಳಿ ಬೆರಗಾದ ರಾಜನು ಅವನನ್ನು ಶಿಕ್ಷೆಯಿಂದ ಮುಕ್ತಗೊಳಿಸಿ ತನ್ನ ಮಗಳಿನೊಂದಿಗೆ ಮದುವೆ ಮಾಡಿಸಿದನು! ಈ ಕಾವ್ಯದಲ್ಲಿ ಬಿಲ್ಹಣನು ತಾನು ಹೇಗೆ ಆ ರಾಜಕುಮಾರಿಯನ್ನು ಗುಪ್ತವಾಗಿ ಪ್ರೇಮಿಸಿದೆನೆಂದು ವಿವರವಾಗಿ ವರ್ಣಿಸಿದ್ದಾನೆ! ಇದರಲ್ಲಿ ಪ್ರತಿ ಶ್ಲೋಕವೂ,' ಅದ್ಯಾಪಿ ತಾಂ ' ಅಂದರೆ ಇಂದಿಗೂ ಅವಳನ್ನು ಸ್ಮರಿಸುತ್ತೇನೆ ಎಂದು ಆರಂಭವಾಗುತ್ತದೆ. ಇದರಲ್ಲಿ ಬೇರೆ ಬೇರೆ ಆವೃತ್ತಿಗಳಿದ್ದು ಅವುಗಳಲ್ಲಿ ರಾಜಕುಮಾರಿಯ ಅಥವಾ ನಾಯಿಕೆಯ ಹೆಸರು, ವಿದ್ಯಾ, ಯಾಮಿನೀ, ಶಶಿಕಲಾ, ಪೂರ್ಣತಿಲಕಾ, ಚಂದ್ರಕಲಾ ಚಂದ್ರಲೇಖಾ, ಚೋರೀ ಮೊದಲಾಗಿವೆ. ನಾಯಕನ ಹೆಸರು ಬಿಲ್ಹಣ, ಚೋರ, ಸುಂದರ, ವರರುಚಿಯೆಂದು ಬೇರೆ ಬೇರೆ ಇದೆ.ಪ್ರೇಮಿಗಳು ಗುಪ್ತವಾಗಿ ಕಳ್ಳತನದಲ್ಲಿ ಪ್ರೇಮಿಸಿದ್ದರಿಂದ ಇದರ ಹೆಸರು ಚೌರಪಂಚಾಶಿಕಾ ಎಂದಿದೆ.ಈ ಕಾವ್ಯಕ್ಕೆ ಒಂದು ಚಿತ್ರಕಲಾ ಪರಂಪರೆಯೂ ಇದೆ! ಇದರ ಕೊನೆಯ ಶ್ಲೋಕದಲ್ಲಿ ಕವಿಯು ಪೌರಾಣಿಕ ಉದಾಹರಣೆಗಳನ್ನು ಕೊಡುತ್ತಾ ತಾನು ಅಂಗೀಕರಿಸಿದ ಪ್ರೇಮವನ್ನು ಬಿಡುವುದಿಲ್ಲ ಎಂಬ ಅರ್ಥದಲ್ಲಿ ಹೇಳುತ್ತಾನೆ:
ಅದ್ಯಾಪಿ ನೋಜ್ಝತಿ ಹರ: ಕಿಲ ಕಾಲಕೂಟಂ
ಕೂರ್ಮೋ ಬಿಭರ್ತಿ ಧರಣೀಂ ಖಲು ಪೃಷ್ಠಭಾಗೇ/
ಅಂಭೋನಿಧಿರ್ವಹತಿ ದು:ಸಹವಾಡವಾಗ್ನಿಂ
ಅಂಗೀಕೃತಂ ಸುಕೃತಿನ: ಪರಿಪಾಲಯಂತಿ //
' ಇಂದಿಗೂ ಭಗವಾನ್ ಶಿವನು ತಾನು ಕಂಠದಲ್ಲಿ ಧರಿಸಿರುವ ವಿಷವನ್ನು ಬಿಡುವುದಿಲ್ಲ! ಮಹಾಕೂರ್ಮನು ತಾನು ಬೆನ್ನ ಮೇಲೆ ಧರಿಸಿರುವ ಭೂಮಿಯನ್ನು ಬಿಡುವುದಿಲ್ಲ! ಸಮುದ್ರವು ಇಂದಿಗೂ ದು:ಸಹವಾದ ವಾಡವಾಗ್ನಿಯನ್ನು ಧರಿಸಿದೆ! ಮಹಾನ್ ವ್ಯಕ್ತಿಗಳು ತಾವು ಅಂಗೀಕರಿಸಿದುದನ್ನು ಬಿಡದೇ ಪಾಲಿಸುವರು ( ಅಂತೆಯೇ ನಾನೂ ನನ್ನ ಪ್ರೇಮವನ್ನು ಬಿಡದೇ ಪಾಲಿಸುತ್ತೇನೆ)!'
ಪ್ರಾಕೃತದ ಹಾಲಮಹಾರಾಜನ ಒಂದು ಅದ್ಭುತ ಸಂಗ್ರಹವಾದ ಗಾಥಾಸಪ್ತಶತೀ ಎಂಬ ಗ್ರಂಥದಿಂದ ಪ್ರೇರೇಪಣೆಗೊಂಡು ಗೋವರ್ಧನಾಚಾರ್ಯನೆಂಬ ಕವಿ ಸಂಸ್ಕೃತದಲ್ಲಿ ಏಳುನೂರು ಶ್ಲೋಕಗಳ ಆರ್ಯಾಸಪ್ತಶತೀ ಎಂಬ ಸೊಗಸಾದ ಗ್ರಂಥವನ್ನು ರಚಿಸಿದ್ದಾನೆ.ಇದರ ಪದ್ಯಗಳು ಆರ್ಯಾ ಛಂದಸ್ಸಿನಲ್ಲಿರುವುದರಿಂದ ಈ ಹೆಸರು ಕೊಟ್ಟಿದ್ದಾನೆ.ಇದೂ ಒಂದು ಮುಖ್ಯವಾದ ಶೃಂಗಾರ ಕಾವ್ಯ.ಈ ಆರ್ಯಾಸಪ್ತಶತಿಯ ಒಂದು ಉದಾಹರಣೆ ನೋಡೋಣ:
ಆರಂಭದ ಪ್ರಾರ್ಥನಾಶ್ಲೋಕಗಳಲ್ಲಿ ಕವಿಯು ಒಂದು ಚಮತ್ಕಾರದ ಶೃಂಗಾರ ಶ್ಲೋಕ ರಚಿಸಿದ್ದಾನೆ:
ಕೇಲಿಚಲಾಂಗುಲಿಲಂಭಿತಲಕ್ಷ್ಮೀನಾಭಿರ್ಮುರದ್ವಿಷಶ್ಚರಣ: /
ಸ ಜಯತಿ ಯೇನ ಕೃತಾ ಶ್ರೀರನುರೂಪಾ ಪದ್ಮನಾಭಸ್ಯ //
' ಭಗವಾನ್ ವಿಷ್ಣುವು, ಲಕ್ಷ್ಮಿಯು ಅವನ ಚರಣಸೇವೆ ಮಾಡುತ್ತಿರುವಾಗ, ಆಟಕ್ಕಾಗಿ ತನ್ನ ಚರಣಾಂಗುಲಿಯನ್ನು ಅವಳ ನಾಭಿಯ ಮೇಲೆ ಆಡಿಸಿದನು! ಹೀಗೆ ಮಾಡಿದುದರಿಂದ, ಅವಳೂ ಆ ಚರಣಾಂಗುಲಿಯ ಸ್ಪರ್ಶ ಪಡೆದು ಪದ್ಮನಾಭನಾದ ಅವನಿಗೆ ಅನುರೂಪಳಾದಳು (ವಿಷ್ಣುವಿನ ಪಾದವು ಪದ್ಮದಂತಿರುವುದರಿಂದ, ಅದು ಲಕ್ಷ್ಮಿಯ ನಾಭಿಯನ್ನು ಸ್ಪರ್ಶಿಸಲು, ಅವಳೂ ಅವನಂತೆ ಪದ್ಮನಾಭಿಯುಳ್ಳವಳಾದಳು)! ಇಂಥ ಶ್ರೀಹರಿಯು ಜಯಿಸುತ್ತಾನೆ!'
ಹೀಗೆಯೇ ಸುಂದರೀಶತಕವೆಂಬ ಶತಕವನ್ನು ಉತ್ಪ್ರೇಕ್ಷಾವಲ್ಲಭನೆಂಬ ಕವಿ ರಚಿಸಿದ್ದಾನೆ.ಇದರಲ್ಲಿ ಕವಿಯು ಸ್ತ್ರೀ ಸೌಂದರ್ಯವನ್ನು ಸಮಗ್ರವಾಗಿ ವರ್ಣಿಸಿದ್ದಾನೆ.ಒಂದು ಉದಾಹರಣೆ ಹೀಗಿದೆ:
ಕೃತಚಂದನರಾಗೋ ಮದನಸಖ: ಶ್ರೀಫಲದ್ವೇಷೀ /
ಸುಂದರಿ ಸುವರ್ಣವರ್ಣೋ ವಕ್ಷೋಜ: ಕೀದೃಶೋ ರುದ್ರ: //
' ಎಲೈ ಸುಂದರಿ! ಚಂದನಲೇಪವುಳ್ಳ, ಮನ್ಮಥನ ಸಖನಾದ, ಶ್ರೀಫಲವನ್ನು ದ್ವೇಷಿಸುವ ( ಅದನ್ನು ಮೀರಿಸಿರುವ) ಸುವರ್ಣವರ್ಣದ ನಿನ್ನ ವಕ್ಷೋಜವು ಹೇಗೆ ತಾನೇ ರುದ್ರವಾಗಿದೆ (ಘೋರವಾಗಿದೆ)?'
ಗೀತ ಗೋವಿಂದ, ಜಯದೇವ ಕವಿಯ ಒಂದು ಅದ್ಭುತ ಶೃಂಗಾರ ಕಾವ್ಯ.ಇದು ಭಕ್ತಿ ಮತ್ತು ಶೃಂಗಾರ ಎರಡನ್ನೂ ಒಟ್ಟಿಗೆ ಹೊಂದಿರುವ ಒಂದು ಗೇಯಕಾವ್ಯ, ಅಂದರೆ ಹಾಡುವ ಕಾವ್ಯ.ಆರಂಭದಲ್ಲೇ ಕವಿಯು ಹೇಳುತ್ತಾನೆ:
ಯದಿ ಹರಿಸ್ಮರಣೇ ಸರಸಂ ಮನೋ ಯದಿ ವಿಲಾಸಕಲಾಸು ಕುತೂಹಲಮ್ /
ಮಧುರಕೋಮಲಕಾಂತಪದಾವಲೀಂ ಶೃಣು ತದಾ ಜಯದೇವಸರಸ್ವತೀಮ್ //
' ಹರಿಸ್ಮರಣೆಯಲ್ಲಿ ಆಸಕ್ತಿಯಿದ್ದರೆ, ಹಾಗೂ ವಿಲಾಸಕಲೆಗಳಲ್ಲಿ ಕುತೂಹಲವಿದ್ದರೆ, ಆಗ ಮಧುರಕೋಮಲಕಾಂತಪದಾವಲಿಯಾದ ಜಯದೇವನ ಸಾಹಿತ್ಯವನ್ನು ಕೇಳು!'
ಗೀತಗೋವಿಂದದ ಎಲ್ಲಾ ಹಾಡುಗಳೂ ಮಧುರವಾಗಿಯೂ ಶೃಂಗಾರಾತ್ಮಕವಾಗಿಯೂ ಇವೆ! ಬರೆಯುವ ಆವೇಶದಲ್ಲೊಮ್ಮೆ ಕವಿಯು, ಕೃಷ್ಣನು ರಾಧೆಗೆ,' ಸ್ಮರಗರಲಖಂಡನಂ ಮಮ ಶಿರಸಿ ಮಂಡನಂ ದೇಹಿ ಪದಪಲ್ಲವಮುದಾರಮ್ ', ಅಂದರೆ,' ವಿಷದಂಥ ಮನ್ಮಥನ ಬಾಧೆಯನ್ನು ಕಳೆಯಲು ನಿನ್ನ ಪಾದಪಲ್ಲವವನ್ನು ನನ್ನ ಶಿರದ ಮೇಲಿಡು ' ಎಂದು ಹೇಳುವಂತೆ ಬರೆಯಲು ಹೊರಟ.ಆದರೆ ಭಗವಂತನಿಗೆ ಇದರಿಂದ ಅಪಚಾರವಾಗುವುದೆಂದು ಬರೆಯದೇ ಸ್ನಾನಕ್ಕೆ ಹೋದ.ಆಗ ಶ್ರೀ ಕೃಷ್ಣನೇ ಅವನ ವೇಷದಲ್ಲಿ ಬಂದು ಆ ಸಾಲನ್ನು ಬರೆದು ಹೊರಟುಹೋದ! ಸ್ನಾನದಿಂದ ಹಿಂದಿರುಗಿದ ಜಯದೇವ ಆ ಸಾಲು ಬರೆದಿರುವುದನ್ನು ಕಂಡು ಆಶ್ಚರ್ಯ,ಸಂತೋಷಗಳಿಗೊಳಗಾದ! ಹೀಗೆ ಜಯದೇವನ ಬಗ್ಗೆ ಅನೇಕ ಐತಿಹ್ಯಗಳಿವೆ.
ಕಾಳಿದಾಸನು ನಾಟಕಗಳನ್ನೂ ಮಹಾಕಾವ್ಯಗಳನ್ನೂ ರಚಿಸಿರುವುದರೊಂದಿಗೆ ಶೃಂಗಾರ ಖಂಡಕಾವ್ಯಗಳನ್ನೂ ರಚಿಸಿದ್ದಾನೆ.ಋತುಸಂಹಾರ ಆರು ಋತುಗಳ ಮತ್ತು ಆ ಋತುಗಳಲ್ಲಿ ಪ್ರೇಮಿಗಳ ಕ್ರೀಡೆಗಳ ಒಂದು ಖಂಡ ಕಾವ್ಯವಾಗಿದೆ! ಋತುಸಂಹಾರದ ಒಂದೆರಡು ಉದಾಹರಣೆಗಳನ್ನು ನೋಡೋಣ:
ವಸಂತ ಋತುವಿನ ಒಂದು ವರ್ಣನೆ:
ಪ್ರಫುಲ್ಲಚೂತಾಂಕುರತೀಕ್ಷ್ಣಸಾಯಕೋ
ದ್ವಿರೇಫಮಾಲಾವಿಲಸದ್ಧನುರ್ಗುಣ: /
ಮನಾಂಸಿ ಭೇತ್ತುಂ ಸುರತಪ್ರಸಂಗಿನಾಂ
ವಸಂತಯೋದ್ಧಾ ಸಮುಪಾಗತ: ಪ್ರಿಯೇ//
' ಹೇ ಪ್ರಿಯೇ! ಎಳೆಯ ಮಾವಿನ ಚಿಗುರುಗಳೆಂಬ ತೀಕ್ಷ್ಣ ಬಾಣಗಳೊಂದಿಗೂ, ದುಂಬಿಗಳ ಸಾಲೆಂಬ ಕಾಂತಿಯುತ ಹೆದೆಯ ಧನುಸ್ಸಿನೊಂದಿಗೂ, ಸುರತಕ್ರೀಡೆಯಾಡುತ್ತಿರುವ ಪ್ರೇಮಿಗಳ ಹೃದಯಗಳಿಗೆ ಹೊಡೆಯಲು ವಸಂತನೆಂಬ ಯೋಧನು ಬಂದಿದ್ದಾನೆ!'
ಇಲ್ಲಿ ಶರದೃತುವನ್ನು ನವವಧುವಿನಂತೆ ಸೊಗಸಾಗಿ ವರ್ಣಿಸಿದ್ದಾನೆ:
ಕಾಶಾಂಶುಕಾ ವಿಕಚಪದ್ಮಮನೋಜ್ಞವಕ್ತ್ರಾ
ಸೋನ್ಮಾದಹಂಸರವಂನೂಪುರನಾದರಮ್ಯಾ /
ಆಪಕ್ವಶಾಲಿರುಚಿರಾನತಗಾತ್ರಯಷ್ಟಿ:
ಪ್ರಾಪ್ತಾ ಶರನ್ನವವಧೂರಿವ ರೂಪರಮ್ಯಾ //
'ಕಾಶ ಪುಷ್ಪಗಳನ್ನು ಬಿಳಿಯ ವಸ್ತ್ರವಾಗುಳ್ಳ, ಅರಳಿದ ಕಮಲಪುಷ್ಪವನ್ನು ಮನೋಜ್ಞ ಮುಖವಾಗುಳ್ಳ, ಉನ್ಮತ್ತ ಹಂಸಗಳ ಕಲರವವನ್ನು ಗೆಜ್ಜೆಯ ರಮ್ಯ ನಾದವನ್ನಾಗಿ ಹೊಂದಿರುವ, ಪಕ್ವವಾದ ಭತ್ತದ ತೆನೆಯನ್ನು ಮನೋಹರವಾದ, ಬಾಗಿದ, ತೆಳುತನುವಾಗುಳ್ಳ ಶರದೃತುವು ನವವಧುವಿನಂತೆ ರಮ್ಯವಾದ ರೂಪದಲ್ಲಿ ಆಗಮಿಸಿದೆ!'
ಕಾಳಿದಾಸನ ಇನ್ನೊಂದು ಮುಖ್ಯವಾದ ಶೃಂಗಾರ ಕಾವ್ಯ ಮೇಘದೂತ. ನವವಿವಾಹಿತ ಯಕ್ಷನೊಬ್ಬನು ಹೆಂಡತಿಯಿಂದ ಒಂದು ವರ್ಷ ದೂರವಿರುವಂತೆ ಕುಬೇರನಿಂದ ಶಾಪಗ್ರಸ್ತನಾಗುತ್ತಾನೆ.ಆಗ ಅವನು ಒಂದು ಮೇಘದ ಮೂಲಕ ತನ್ನ ಹೆಂಡತಿಗೆ ಒಂದು ಪ್ರೇಮಸಂದೇಶ ಕಳಿಸುತ್ತಾನೆ.ಮೇಘವು ಹೋಗಬೇಕಾದ ದಾರಿಯನ್ನು ವರ್ಣಿಸುತ್ತಾ ಪ್ರೇಮಿಗಳ ಪ್ರೇಮಕ್ರೀಡೆಯ ವರ್ಣನೆ, ನದಿಯನ್ನು ಸ್ತ್ರೀಗೆ ಹೋಲಿಸಿ ಮಾಡುವ ವರ್ಣನೆ, ಇವೆಲ್ಲವನ್ನೂ ಯಕ್ಷನ ಮೂಲಕ ಕಾಳಿದಾಸನು ಸೊಗಸಾಗಿ ಮಾಡಿದ್ದಾನೆ.ಆಗ ಅಲ್ಲಿ ತನ್ನ ಹೆಂಡತಿಯು ಹೇಗಿರುವಳೆಂದು ಹೇಳುವ ಒಂದು ಶ್ಲೋಕ, ಸ್ತ್ರೀ ಸೌಂದರ್ಯದ ಒಂದು ಸಮಗ್ರ, ಸುಂದರ ಚಿತ್ರಣವಾಗಿದೆ.
ತನ್ವೀ ಶ್ಯಾಮಾ ಶಿಖರಿ ದಶನಾ ಪಕ್ವಬಿಂಬಾಧರೋಷ್ಠೀ ಮಧ್ಯೇ ಕ್ಷಾಮಾ ಚಕಿತ ಹರಿಣೀಪ್ರೇಕ್ಷಣಾ ನಿಮ್ನನಾಭಿ: /
ಶ್ರೋಣೀಭಾರಾದಲಸಗಮನಾ ಸ್ತೋಕನಮ್ರಾ ಸ್ತನಾಭ್ಯಾಂ
ಯಾ ತತ್ರ ಸ್ಯಾದ್ಯುವತಿವಿಷಯೇ ಸೃಷ್ಟಿರಾದ್ಯೇವ ಧಾತು: //
' ಅವಳು ತೆಳುತನುವುಳ್ಳವಳಾಗಿ, ಚೂಪಾದ ಸುಂದರ ಹಲ್ಲುಗಳುಳ್ಳವಳಾಗಿ, ಪಕ್ವವಾದ ಬಿಂಬಫಲದಂಥ ಕೆಂಪಾದ ಅಧರವುಳ್ಳವಳಾಗಿ, ನಡುವು ಸಣ್ಣವಿದ್ದು, ಚಕಿತಗೊಂಡ ಜಿಂಕೆಯಂಥ ಕಣ್ಣುಗಳುಳ್ಳವಳಾಗಿ, ನಾಭಿಯು ಆಳವಾಗಿದ್ದು, ನಿತಂಬಗಳ ಭಾರದಿಂದ ನಿಧಾನವಾಗಿ ನಡೆಯುವ, ಸ್ತನಭಾರದಿಂದ ಸ್ವಲ್ಪ ಬಾಗಿರುವವಳ, ಯುವತಿಯರ ಸೃಷ್ಟಿಯಲ್ಲಿ ಸೃಷ್ಟಿಕರ್ತನ ಮೊದಲ ಪ್ರಯತ್ನವೆಂಬಂತೆ ಅಲ್ಲಿರುವಳು!'
ಹೀಗೆ ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಶೃಂಗಾರ ಕಾವ್ಯಗಳಿವೆ.ಆಗಲೇ ಹೇಳಿದಂತೆ, ಇತರ ಕಾವ್ಯ,ನಾಟಕಗಳಲ್ಲೂ ಶೃಂಗಾರ ಪದ್ಯಗಳು ಹೇರಳವಾಗಿ ಸಿಗುತ್ತವೆ.ಇವಲ್ಲದೇ, ವಲ್ಲಭದೇವನ ಸುಭಾಷಿತಾವಲಿ, ಶಾರ್ಙಧರನ ಶಾರ್ಙಧರ ಪದ್ಧತಿ, ಶ್ರೀಧರದಾಸನ ಸದುಕ್ತಿಕರ್ಣಾಮೃತ, ವಿದ್ಯಾಕರನ ಸುಭಾಷಿತರತ್ನಕೋಶ, ಕಾಶೀನಾಥ ಶರ್ಮರ ಸುಭಾಷಿತರತ್ನಭಾಂಡಾಗಾರ, ಮೊದಲಾದ ಅನೇಕ ಸುಭಾಷಿತ ಸಂಕಲನಗಳಲ್ಲಿ ಶೃಂಗಾರ ಸೂಕ್ತಿಗಳು ಹೇರಳವಾಗಿ ಸಿಗುತ್ತವೆ.ಅಂತೆಯೇ ಜಗನ್ನಾಥ ಪಂಡಿತನ ರಸಗಂಗಾಧರ, ಭೋಜನ ಸರಸ್ವತೀಕಂಠಾಭರಣ, ಹಾಗೂ ಶೃಂಗಾರ ಪ್ರಕಾಶ, ವಿಶ್ವನಾಥನ ಸಾಹಿತ್ಯದರ್ಪಣ, ರಾಜಶೇಖರನ ಕಾವ್ಯಮೀಮಾಂಸಾ, ಮೊದಲಾದ ಕಾವ್ಯ ಮೀಮಾಂಸೆ ಕುರಿತ ಗ್ರಂಥಗಳಲ್ಲೂ ಶೃಂಗಾರ ಪದ್ಯಗಳು ಸಿಗುತ್ತವೆ. ಈ ಶೃಂಗಾರ ಪದ್ಯಗಳನ್ನು ಎಲ್ಲರೂ ಓದಿ ಆನಂದಿಸಿ ಜೀವನವನ್ನು ಹಸನಾಗಿಸಿಕೊಳ್ಳಬಹುದು.
ಡಾ.ಬಿ.ಆರ್.ಸುಹಾಸ್