ಭಾನುವಾರ, ಜೂನ್ 9, 2024

ಬೆಳಗಾವಿಯ ಕಮಲ ಬಸದಿಯಲ್ಲಿ ಒಂದು ಶಿಲ್ಪಚಾತುರ್ಯ


ಬೆಳಗಾವಿಯ ಕಮಲ ಬಸದಿಯಲ್ಲಿ ಒಂದು ಶಿಲ್ಪ ಚಾತುರ್ಯ 


ಬೆಳಗಾವಿಯ ಕಮಲ ಬಸದಿ ಎಂಬ ಜೈನ .ದೇವಾಲಯದ ಗೋಡೆಯ ಮೇಲಿನ ಒಂದು ಶಿಲ್ಪ ಮನಸೆಳೆಯುತ್ತದೆ.ಇದು ಮೂರು ನರ್ತಕರನ್ನು ಒಟ್ಟಿಗೆ ತೋರಿಸುವ ಶಿಲ್ಪವಾಗಿದೆ.ಆದರೆ ಎರಡೇ ಕಾಲುಗಳಿವೆ.ಎಡ ಮತ್ತು ಬಲ ಬದಿಗಳ ಶಿಲ್ಪಗಳ ಮೇಲ್ಭಾಗಗಳನ್ನು  ಕೈಗಳಲ್ಲಿ ಮುಚ್ಚಿದರೆ ಮಧ್ಯದ ನರ್ತಕನ ಶಿಲ್ಪ ಪೂರ್ಣವಾಗಿ ಕಾಣುತ್ತದೆ.ಮಧ್ಯದ ನರ್ತಕನ ಎಡ ಅರ್ಧ ಭಾಗವನ್ನು ಮುಚ್ಚಿದರೆ ಅವನ ಬಲಗಾಲು ಬಲಭಾಗದ ನರ್ತಕನಿಗೆ ಹೊಂದಿಕೊಂಡು ಅವನ ಶಿಲ್ಪ ಪೂರ್ಣವಾಗುತ್ತದೆ.ಹಾಗೆಯೇ ಮಧ್ಯದ ನರ್ತಕನ ಬಲ ಅರ್ಧ ಭಾಗವನ್ನು ಮುಚ್ಚಿದರೆ, ಅವನ ಎಡಗಾಲು ಎಡಭಾಗದ ನರ್ತಕನಿಗೆ ಹೊಂದಿಕೊಂಡು ಅವನ ಶಿಲ್ಪ ಪೂರ್ಣವಾಗುತ್ತದೆ.ಹೀಗೆ ಮೂರು ನರ್ತಕರನ್ನು ಒಂದೇ ಶಿಲ್ಪದಲ್ಲಿ ತೋರಿಸಿದ್ದಾನೆ ಶಿಲ್ಪಿ.ಜಾಗ ಉಳಿಸಲು ಈ ಚಮತ್ಕಾರವನ್ನು ಅವನು ಬಳಸಿರಬಹುದು.ಇದು ಅವನ ಚಾತುರ್ಯವನ್ನು ತೋರಿಸುತ್ತದೆ.
       

ಮಾನೀಟರ್ ಹಲ್ಲಿ

ಮಾನೀಟರ್ ಹಲ್ಲಿ 
      ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋದಾಗ ವಿಶ್ರಮಿಸುತ್ತಿದ್ದ ಈ ಮಾನೀಟರ್ ಹಲ್ಲಿ ಅಥವಾ ಉಡ ಕಂಡುಬಂದಿತು.ಉರಗ ಜಾತಿಯ ಬೃಹತ್ ಹಲ್ಲಿಯಾದ ಇದು ಏಷ್ಯಾ,ಆಫ್ರಿಕಾ ಖಂಡಗಳಲ್ಲೆಲ್ಲಾ ಕಂಡುಬರುವುದಾಗಿದ್ದು, ನಮ್ಮ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ.ಇದು ಉದ್ದವಾದ ಕುತ್ತಿಗೆಯನ್ನೂ, ಬಲಶಾಲಿಯಾದ ಬಾಲವನ್ನೂ ಪಂಜುಗಳನ್ನೂ ಹೊಂದಿದ್ದು ಬಹುತೇಕ ನೆಲದ ಮೇಲೆ ವಾಸಿಸುತ್ತದೆ ಹಾಗೂ ಕೆಲವು ಪ್ರಭೇದಗಳು ಮರಗಳ ಮೇಲೂ ಭಾಗಶಃ ನೀರಿನಲ್ಲೂ ವಾಸಿಸುತ್ತವೆ.ವಯಸ್ಕ ಉಡವು ಕೆಲವು ಪ್ರಭೇದಗಳಲ್ಲಿ ಇಪ್ಪತ್ತು ಸೆಂಟಿಮೀಟರ್ ನಿಂದ ಮೂರು ಮೀಟರ್ ಉದ್ದದವರೆಗೂ ಬೆಳೆಯಬಲ್ಲದು! ಈ ಉಡಗಳು ಮಾಂಸಾಹಾರಿಗಳಾಗಿದ್ದು, ಮೊಟ್ಟೆಗಳು, ಪುಟ್ಟ ಉರಗಗಳು, ಪಕ್ಷಿಗಳು, ಸಸ್ತನಿಗಳು, ಮತ್ತು ಕೀಟಗಳನ್ನು, ಹಾಗೂ ಕೆಲವು, ಹಣ್ಣುಗಳು ಮತ್ತು ಸಸ್ಯಗಳನ್ನೂ ತಿನ್ನುತ್ತವೆ. 


ಗುರುವಾರ, ಜೂನ್ 6, 2024

ಅಪರೂಪದ ಪಳೆಯುಳಿಕೆ


ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಅಥವಾ ಮೈಸೂರು ಮೃಗಾಲಯದಲ್ಲಿ ಅನೇಕ ವಿಧವಾದ ಪ್ರಾಣಿ ಪಕ್ಷಿಗಳನ್ನಷ್ಟೇ ಅಲ್ಲದೇ ಇನ್ನೂ ಕೆಲವು ಆಕರ್ಷಣೆಗಳನ್ನು ಕಾಣಬಹುದು.ಅಂಥ ಒಂದು ಆಕರ್ಷಣೆ, ೧೫೦ ಮಿಲಿಯನ್ ವರ್ಷಗಳ ಹಿಂದಿನ ಹಳೆಯದಾದ ಒಂದು ಮರದ ಕಾಂಡದ ಪಳೆಯುಳಿಕೆ! ಪಳೆಯುಳಿಕೆ ಎಂದರೆ, ಹಿಂದೆ ಇದ್ದ ಪ್ರಾಣಿ,ಪಕ್ಷಿಗಳ ಹಾಗೂ ಗಿಡ,ಮರಗಳ ಅವಶೇಷಗಳು.ಇವು ಕಲ್ಲು, ಆಂಬರ್. ಮೊದಲಾದ ವಸ್ತುಗಳಲ್ಲಿ ಸಿಕ್ಕಿಕೊಂಡು ತಮ್ಮ ಗುರುತನ್ನು ಬಿಟ್ಟಿರುತ್ತವೆ ಅಥವಾ ಆ ಕಲ್ಲಾಗಿಯೇ ಪರಿವರ್ತನೆ ಹೊಂದಿರುತ್ತವೆ.ಈಗ ಇಲ್ಲಿರುವ ಈ ಮರದ ಕಾಂಡದ ಪಳೆಯುಳಿಕೆಯನ್ನು ಆಂಧ್ರಪ್ರದೇಶದ ಆದಿಲಾಬಾದ್ ಜಿಲ್ಲೆಯ ಯಮನಪಲ್ಲಿ ಹಳ್ಳಿಯಿಂದ ತರಲಾಗಿದೆ.ಅದು ಅಲ್ಲಿ ಜುರಾಸಿಕ್ ಯುಗದ ಕೋಟಾ ಎಂಬ ಶಿಲಾ ಸ್ತರಗಳಲ್ಲಿ ಸಿಕ್ಕಿರುವುದಾಗಿದೆ.ಈ ಪಳೆಯುಳಿಕೆಯಲ್ಲಿ ಮರದ ಸೂಕ್ಷ್ಮ ರಚನೆಗಳನ್ನು ಕಾಣಬಹುದಾಗಿದೆ! ಹೀಗೆ ಇದೊಂದು ಪ್ರಾಕೃತಿಕ ವಿಸ್ಮಯವಾಗಿದೆ.
                         

ಶುಕ್ರವಾರ, ಮೇ 31, 2024

ಮಾತೆಯ ವಾತ್ಸಲ್ಯ - ಮಹಾಭಾರತದ ಒಂದು ಉಪಕಥೆ

ಮಾತೆಯ ವಾತ್ಸಲ್ಯ


ಮಹಾಭಾರತದಲ್ಲಿ ಒಂದು ಉಪಕಥೆ ಬರುತ್ತದೆ. ವೇದವ್ಯಾಸರು ಧೃತರಾಷ್ಟ್ರನಿಗೆ ಹೇಳುವ ಕಥೆ.
      ಒಮ್ಮೆ ಸ್ವರ್ಗದಲ್ಲಿ ಕಾಮಧೇನುವು ಅಳುತ್ತಿತ್ತು.ಈ ವಿಷಯವು ತಿಳಿಯಲು, ಇಂದ್ರನು ಕಾಮಧೇನುವನ್ನು ಸಭೆಗೆ ಕರೆಸಿ ಅನುಕಂಪದಿಂದ ಕೇಳಿದನು,"ಭದ್ರೆ! ಏಕೆ ಹೀಗೆ ಅಳುತ್ತಿರುವೆ? ದೇವತೆಗಳೆಲ್ಲರೂ ಸೌಖ್ಯದಿಂದಿದ್ದಾರಷ್ಟೇ? ಮಾನವರಿಗೂ ಗೋವುಗಳಿಗೂ ಏನಾದರೂ ಆಪತ್ತು ಉಂಟಾಗಿರುವುದೇ? ಎಲ್ಲವನ್ನೂ ವಿಶದವಾಗಿ ಹೇಳು!ಅಳಬೇಡ!"
     ಅದಕ್ಕೆ ಕಾಮಧೇನುವು ಇಂದ್ರನಿಗೆ ಭೂಮಿಯ ಕಡೆ ತೋರಿಸುತ್ತಾ,"ಅಲ್ಲಿ ನೋಡು ದೇವೇಂದ್ರ! ಕ್ರೂರಿಯಾದ ಆ ರೈತನು ದುರ್ಬಲನಾದ ನನ್ನ ಮಗನನ್ನು (ಎತ್ತನ್ನು) ಹೇಗೆ ಚಾವಟಿಯಿಂದ ಹೊಡೆಯುತ್ತಿರುವನು! ನನ್ನ ಮಗನ ಹೆಗಲ ಮೇಲೆ ಭಾರವಾದ ನೇಗಿಲನ್ನಿಟ್ಟಿದ್ದಾನೆ! ದುರ್ಬಲನಾದ ನನ್ನ ಮಗನು ಅದನ್ನು ಎಳೆಯಲಾರದೇ ಕೆಳಗೆ ಬಿದ್ದು ಸಾಯುವ ಸ್ಥಿತಿಯಲ್ಲಿದ್ದಾನೆ! ಆದರೆ ಆ ರೈತನು ಅವನನ್ನು ಬಿಡದೇ ಮತ್ತೆ ಮತ್ತೆ ಹೊಡೆದು ಎಬ್ಬಿಸಲು ಯತ್ನಿಸುತ್ತಿದ್ದಾನೆ! ಅವನನ್ನು ನೋಡುತ್ತಾ ನನ್ನ ಮನಸ್ಸು ಕೃಪಾವಿಷ್ಟವಾಗಿ ಉದ್ವಿಗ್ನವಾಗುತ್ತಿದೆ! ಆದರೆ ನೇಗಿಲಿಗೆ ಕಟ್ಟಲ್ಪಟ್ಟಿರುವ ನನ್ನ ಇನ್ನೊಬ್ಬ ಮಗನು ಹಾಗಿಲ್ಲ! ಅವನು ಬಲದಿಂದ ಕೂಡಿದ್ದು ನೇಗಿಲನ್ನು ಎಳೆಯಲು ಸಮರ್ಥನಾಗಿದ್ದಾನೆ! ಆದರೆ ಇವನ ದುರವಸ್ಥೆ ನೋಡು! ಇವನು ಅಲ್ಪಬಲನಾಗಿದ್ದಾನೆ! ಕೃಶ ನಾಗಿದ್ದಾನೆ! ನರನಾಡಿಗಳು ಕಾಣುವಂತಾಗಿದ್ದಾನೆ! ಬಹಳ ಕಷ್ಟದಿಂದ ಭಾರವನ್ನು ಎತ್ತುತ್ತಾನೆ! ಇವನನ್ನು ಕಂಡು ಶೋಕಿಸುತ್ತಿದ್ದೇನೆ ಇಂದ್ರ! ಪದೇ ಪದೇ ಇವನಿಗೆ ಏಟುಗಳೂ ಬೀಳುತ್ತಿವೆ! ಆ ಭಾರವನ್ನು ಇವನಿಗೆ ಎತ್ತಲಾಗದು ಇಂದ್ರ! ನೋಡು!" ಎಂದು ಹೇಳಿತು.
       ಅದಕ್ಕೆ ಇಂದ್ರನು,"ಎಲೈ ಕಾಮಧೇನುವೇ! ಇದೇ ರೀತಿ ನಿನ್ನ ಸಾವಿರಾರು ಮಕ್ಕಳನ್ನು ದಿನವೂ ನೇಗಿಲಿಗೆ ಕಟ್ಟಿ ಹೊಡೆಯುತ್ತಿರುತ್ತಾರೆ! ಆದರೆ ಈ ಒಬ್ಬ ಮಗನ ವಿಷಯದಲ್ಲೇಕೆ ಇಷ್ಟೊಂದು ಶೋಕಿಸುತ್ತಿರುವೆ?" ಎಂದನು.
       ಆಗ ಕಾಮಧೇನುವು ಹೇಳಿತು,"ಶಕ್ರ! ನನಗಿರುವ ಸಾವಿರಾರು ಪುತ್ರರ ಮೇಲೆಯೂ ನನಗೆ ಸಮಾನವಾದ ವಾತ್ಸಲ್ಯವಿದೆ! ಆದರೆ ದೈನ್ಯದಿಂದಿರುವ ಮಗನ ಮೇಲೆ ನನಗೆ ಹೆಚ್ಚಿನ ದಯೆಯುಂಟಾಗುತ್ತದೆ!"
       ಕಾಮಧೇನುವು ಹೇಳಿದ ಮಾತು ಇಂದ್ರನಿಗೆ ಸರಿಯೆನಿಸಿತು.ಪುತ್ರನು ತಾಯಿಗೆ ತನ್ನ ಪ್ರಾಣಕ್ಕಿಂತ ಹೆಚ್ಚೆಂದು ಅವನಿಗೆ ಅರಿವಾಯಿತು. ಕೂಡಲೇ ಆ ರೈತನು ಉಳುತ್ತಿದ್ದ ಪ್ರದೇಶದ ಮೇಲೆ ಧಾರಾಕಾರವಾಗಿ ಮಳೆಗರೆದನು! ಮಳೆಯಿಂದಾಗಿ ಉಳಲಾಗದೇ ಕಾಮಧೇನುವಿನ ಪುತ್ರನಾದ ಆ ಎತ್ತಿಗೂ ವಿಶ್ರಾಂತಿ ಸಿಕ್ಕಿತು.
      ಈ ಕಥೆಯನ್ನು ಧೃತರಾಷ್ಟ್ರನಿಗೆ ವೇದವ್ಯಾಸರು ಹೇಳಿ, ತನ್ನ ಮಕ್ಕಳ ಮೇಲೆ ವಾತ್ಸಲ್ಯವಿರುವುದು ತಪ್ಪಲ್ಲವಾದರೂ ದುರ್ಬಲರಾದ ಮಕ್ಕಳ ಮೇಲೆ ಹೆಚ್ಚು ದಯೆಯಿರಬೇಕೆಂದು ಹೇಳಿದರು.ಅವನೂ ಪಾಂಡುವೂ ವಿದುರನೂ ತಮ್ಮ ಮಕ್ಕಳೇ ಆದರೂ, ಅವನಿಗೆ ನೂರು ಮಕ್ಕಳಿದ್ದು ಪಾಂಡುವಿಗೆ ಕೇವಲ ಐವರು ಮಕ್ಕಳಿದ್ದು ಆ ಐವರೂ ಕಾಡುಪಾಲಾಗಿ ಬಹಳ ಕಷ್ಟದಲ್ಲಿರುವುದರಿಂದ ಅವರ ಬಗ್ಗೆ ತಮಗೆ ಹೆಚ್ಚಿನ ಚಿಂತೆಯಾಗಿದೆಯೆಂದು ಹೇಳುತ್ತಾ ಅವರೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಬೇಕೆಂದು ಬೋಧಿಸಿದರು.
     ತಾಯಂದಿರು ಕೆಲವೊಮ್ಮೆ ತಮ್ಮ ಮಕ್ಕಳಲ್ಲಿ ಕೆಲವೊಬ್ಬರಿಗೆ ಹೆಚ್ಚಿನ ಗಮನ,ಆರೈಕೆ ನೀಡುವಂತೆ ಕಾಣಬಹುದು.ಆದರೆ ಅವರಿಗೆ ತಮ್ಮ ಮಕ್ಕಳಲ್ಲಿ ಯಾವುದೇ ಭೇದಭಾವ ಇರದೇ ಆ ಮಕ್ಕಳು ಯಾವುದೋ ಕಷ್ಟದಲ್ಲಿರುವುದರಿಂದ ವಿಶೇಷ ಅಕ್ಕರೆ ತೋರಿರಬಹುದು.ಈ ವಿಚಾರವನ್ನು ಈ ಸ್ವಾರಸ್ಯಕರವಾದ ಕಥೆ ತೋರಿಸುತ್ತದೆ.

ತಾಯಂದಿರ ದಿನಾಚರಣೆಯ ಶುಭಾಶಯಗಳು!

ಚಿತ್ರ: ಗೂಗಲ್ ಕ್ರಿಯೇಟಿವ್ ಕಾಮನ್ಸ್

ಚಂದ್ರನ ಸ್ವಾರಸ್ಯಕರ ಪೌರಾಣಿಕ ಕಥೆಗಳು

ಚಂದ್ಚನ ಕೆಲವು ಸ್ವಾರಸ್ಯಕರ ಪೌರಾಣಿಕ ಕಥೆಗಳನ್ನು ನೋಡೋಣ.ಚಂದ್ರನು ಬ್ರಹ್ಮನ ಅಂಶದಿಂದ ಅತ್ರಿ,ಅನಸೂಯೆಯರಿಗೆ ಹುಟ್ಟಿದ ಮಗ.ಇನ್ನೊಂದು ಕಲ್ಪದಲ್ಲಿ(ಕಲ್ಪವೆಂದರೆ ಬ್ರಹ್ಮನ ಒಂದು ದಿನ.ಪ್ರತಿ ಕಲ್ಪದಲ್ಲೂ ಹೊಸ ಸೃಷ್ಟಿಯಾಗುತ್ತದೆ,ಹಾಗೂ ಕಲ್ಪದ ಕೊನೆಯಲ್ಲಿ ಪ್ರಳಯವಾಗುತ್ತದೆ). ಸಮುದ್ರಮಥನ ಮಾಡಿದಾಗ ಹುಟ್ಟಿದವನು.ದೇವತ್ವವನ್ನೂ ಗ್ರಹತ್ವವನ್ನೂ ಪಡೆದುಕೊಂಡ ಚಂದ್ರನು ಆಕಾಶದಲ್ಲಿದ್ದು ರಾತ್ರಿಯಲ್ಲಿ ಲೋಕವನ್ನೆಲ್ಲಾ ಬೆಳಗುತ್ತಾ ಲತೌಷಧಿಗಳನ್ನು ವರ್ಧಿಸುವನು.ಅವನು ರಾಜಸೂಯ ಯಾಗ ಮಾಡಿ ಬ್ರಾಹ್ಮಣರಿಗೆ ರಾಜನೂ ಮನಸ್ಸಿಗೆ ಒಡೆಯನೂ ಆದನು.ಅವನಿಗೆ ಗ್ರಹಣ ಏಕಾಗುವುದೆಂದು ಎಲ್ಲರಿಗೂ ತಿಳಿದದ್ದೇ ಇದೆ.ಸಮುದ್ರಮಥನದಲ್ಲಿ ಅಮೃತವು ಬಂದಾಗ ಮಹಾವಿಷ್ಣುವು ಮೋಹಿನಿಯ ರೂಪ ತಾಳಿ ದೈತ್ಯರನ್ನು ಮೋಹಿತರನ್ನಾಗಿಸಿ,ಅವರನ್ನೂ ದೇವತೆಗಳನ್ನೂ ಬೇರೆಬೇರೆಯಾಗಿ ಕೂರಿಸಿ,ದೇವತೆಗಳಿಗೆ ಮಾತ್ರ ಅಮೃತವನ್ನು ಹಂಚುತ್ತಾ ದೈತ್ಯರನ್ನು ವಿಮೋಹಗೊಳಿಸಿದನು.ಆಗ ರಾಹುವೆಂಬ ದೈತ್ಯನು ದೇವತೆಯ ವೇಷದಲ್ಲಿ ದೇವತೆಗಳೊಡನೆ ಕುಳಿತು ಅಮೃತಪಾನ ಮಾಡಿಬಿಡಲು,ಸೂರ್ಯಚಂದ್ರರು ಇದನ್ನು ವಿಷ್ಣುವಿಗೆ ಸಂಕೇತಿಸಿ ತೋರಿಸಿದರು.ಕುಪಿತನಾದ ವಿಷ್ಣುವು ತನ್ನ ಚಕ್ರದಿಂದ ರಾಹುವಿನ ಶಿರಸ್ಸನ್ನು ಕತ್ತರಿಸಿದನು.ಆದರೆ ಅಮೃತ ಕುಡಿದಿದ್ದ ರಾಹುವು ಸಾಯದೇ ರಾಹು,ಕೇತುಗಳೆಂಬ ಎರಡು ಗ್ರಹಗಳಾಗಿ,ಸೂರ್ಯ,ಚಂದ್ರರ ಮೇಲಿನ ದ್ವೇಷದಿಂದ ಆಗಾಗ ಅವರನ್ನು ನುಂಗುವನು.ಆಗ ವಿಷ್ಣುವು ತನ್ನ ಸುದರ್ಶನ ಚಕ್ರವನ್ನು ಕಳಿಸಲು ಅವನು ಅವರನ್ನು ಬಿಡುವನು.ಇದೇ ಗ್ರಹಣ ಮತ್ತು ಮೋಕ್ಷ.ಇದು ಮಹಾಭಾರತದ ಆದಿಪರ್ವದಲ್ಲಿ ಬರುವ ಕಥೆ.ನುಂಗುವನು ಎಂದರೆ ಆವರಿಸುವನು ಎಂದೂ ಅರ್ಥ ಬರುತ್ತದೆ.ಭಾಗವತದಲ್ಲಿ ರಾಹುವು ಬಂದಾಗ ವಿಷ್ಣುವು ಕಳಿಸುವ ಚಕ್ರಕ್ಕೆ ಹೆದರಿ ಸ್ವಲ್ಪ ಹೊತ್ತು ಮಾತ್ರ ಸೂರ್ಯ,ಚಂದ್ರರನ್ನು ಮರೆ ಮಾಡಿ ಹೋಗುವನೆಂದಿದೆ.ಅಲ್ಲದೇ ರಾಹು,ಕೇತುಗಳು ಛಾಯಾಗ್ರಹಗಳೆಂದು ಹೇಳಲಾಗಿದೆ.ಹಾಗಾಗಿ,ವಿಜ್ಞಾನವು ಹೇಳುವ ನೆರಳಿನ ವಿಷಯವೇ ಇಲ್ಲಿ ಸ್ವಾರಸ್ಯವಾದ ಕಥಾರೂಪದಲ್ಲಿ ಬಂದಿದೆ.
         ಚಂದ್ರನಿಗೆ ದಕ್ಷಪ್ರಜಾಪತಿಯು ತನ್ನ ಐವತ್ತು ಹೆಣ್ಣುಮಕ್ಕಳ ಪೈಕಿ,ಇಪ್ಪತ್ತೇಳು ಹೆಣ್ಣುಮಕ್ಕಳನ್ನು ಮದುವೆಮಾಡಿ ಕೊಟ್ಟಿದ್ದನು.ಈ ಇಪ್ಪತ್ತೇಳು ಕನ್ಯೆಯರೇ ಇಪ್ಪತ್ತೇಳು ನಕ್ಷತ್ರಾಭಿಮಾನಿ ದೇವತೆಗಳು.ಆದರೆ ಚಂದ್ರನಿಗೆ ಅವರೆಲ್ಲರಲ್ಲಿ ರೋಹಿಣಿಯನ್ನು ಕಂಡರೆ ಹೆಚ್ಚು ಪ್ರೀತಿ.ರೋಹಿಣಿಯೂ ತನ್ನ ಕಲಾಚಾತುರ್ಯಗಳಿಂದ ಅವನನ್ನು ಒಲಿಸಿಕೊಂಡಿದ್ದಳು.ಹಾಗಾಗಿ ಚಂದ್ರನು ಅವಳ ಮನೆಯಲ್ಲೇ ಇರುತ್ತಾ ಇತರರ ಬಳಿಗೆ ಹೋಗುವುದನ್ನು ಬಿಟ್ಟುಬಿಟ್ಟ.ಆಗ ಇತರ ಪತ್ನಿಯರು ತಮ್ಮ ತಂದೆ ದಕ್ಷನ ಬಳಿಗೆ ಹೋಗಿ ಎರಡು ಬಾರಿ ದೂರಿತ್ತರು.ದಕ್ಷನು ಅಳಿಯ ಚಂದ್ರನನ್ನು ಕರೆದು ಎಲ್ಲ ಪತ್ನಿಯರನ್ನೂ ಸಮಾನವಾಗಿ ಪ್ರೀತಿಸಬೇಕೆಂದು ಎರಡು ಬಾರಿ ಆದೇಶಿಸಿದನು.ಆದರೆ ಚಂದ್ರನು ಪುನಃ ತನ್ನ ಹಿಂದಿನ ನಡತೆಯನ್ನೇ ಮುಂದುವರಿಸಿದನು.ದಕ್ಷಪುತ್ರಿಯರು ಪುನಃ ತಮ್ಮತಂದೆಯ ಬಳಿ ದೂರಿಡಲು,ಕುಪಿತನಾದ ದಕ್ಷನು ಚಂದ್ರನಿಗೆ ಯಕ್ಷ್ಮಕ್ಷಯರೋಗ ಬರಲೆಂದು ಶಾಪವಿತ್ತನು!ಇದರಿಂದ ಚಂದ್ರನು ಕ್ಷೀಣಿಸುತ್ತಾ ಓಷಧಿ,ಲತೆಗಳಿಗೆ ಅವನ ಬೆಳಕಿಲ್ಲದಂತಾಗಿ ಅವು ಸೊರಗಿ,ಅವುಗಳಿಲ್ಲದೇ ಪ್ರಾಣಿಗಳೂ ಮನುಷ್ಯರೂ ಸೊರಗಿ,ದೇವತೆಗಳಿಗೂ ಸಮಸ್ಯೆ ತಟ್ಟಿತು!ಯಜ್ಞಯಾಗಗಳಿಲ್ಲದೇ ಅವರಿಗೆ ಹವಿಸ್ಸಿಲ್ಲದಂತಾಯಿತು!ದೇವತೆಗಳು ವಿಚಾರಿಸುತ್ತಾ ಮೂಲ ಸಮಸ್ಯೆಯನ್ನು ಕಂಡುಕೊಂಡು ದಕ್ಷನ ಬಳಿಗೆ ಹೋಗಿ ಶಾಪವನ್ನು ಹಿಂಪಡೆಯಬೇಕೆಂದು ಬೇಡಿದರು.ದಕ್ಷನು ಚಂದ್ರನು ತನ್ನ ಎಲ್ಲ ಪತ್ನಿಯರನ್ನೂ ಸಮಾನವಾಗಿ ಪ್ರೀತಿಸಿದರೆ ಶಾಪವನ್ನು ಮಾರ್ಪಡಿಸುವೆನೆಂದು ಹೇಳಿ, ಅವನು ಶಿವನನ್ನು ಧ್ಯಾನಿಸಿ ಸರಸ್ವತೀನದಿಯಲ್ಲಿ ಸ್ನಾನ ಮಾಡಲು ತನ್ನ ರೋಗದಿಂದ ಮುಕ್ತನಾಗಿ ಹಿಂದಿನ ಪ್ರಭೆಯನ್ನು ಪಡೆಯುವನೆಂದು ಹೇಳಿದನು.ಆದರೆ ಕೃಷ್ಣಪಕ್ಷದ ಹದಿನೈದು ದಿನಗಳು ಕ್ಷೀಣಿಸಿದರೆ ಶುಕ್ಲಪಕ್ಷದ ಹದಿನೈದು ದಿನಗಳು ವರ್ಧಿಸುವನೆಂದು ಹೇಳಿದನು.ಅಂತೆಯೇ ಚಂದ್ರನು ಒಪ್ಪಿ ಶಿವಧ್ಯಾನ ಮಾಡಿ ಸರಸ್ವತೀನದಿಯಲ್ಲಿ ಸ್ನಾನ ಮಾಡಿ ರೋಗಮುಕ್ತನಾಗಿ ತನ್ನ ಹಿಂದಿನ ಪ್ರಭೆಯನ್ನು ಪಡೆದನು.ದಕ್ಷನು ಚಂದ್ರನಿಗೆ ಸ್ತ್ರೀಯರನ್ನೆಂದಿಗೂ ಅವಮಾನಿಸಬಾರದೆಂದು ಬುದ್ಧಿ ಹೇಳಿ ಕಳಿಸಿದನು.ಚಂದ್ರನು ಪ್ರಭೆಯನ್ನು ಮರಳಿ ಪಡೆದ ಸ್ಥಳ,ಪ್ರಭಾಸ ಕ್ಷೇತ್ರವೆಂದು ಪ್ರಸಿದ್ಧವಾಯಿತು.ಆದರೆ ದಕ್ಷನು ಮಾಡಿದ ಶಾಪದ ಮಾರ್ಪಾಟಿನಿಂದ ಈಗಲೂ ಕ್ಷೀಣಿಸುತ್ತಲೂ ವರ್ಧಿಸುತ್ತಲೂ ಇರುವನು.ಈ ಕಥೆ ಮಹಾಭಾರತದ ಶಲ್ಯಪರ್ವದಲ್ಲಿ ಬಲರಾಮನು ತಾನು ಮಾಡಿದ ತೀರ್ಥಯಾತ್ರೆಯ ವಿಷಯ ಹೇಳುವಾಗ ಬಂದಿದೆ.ಆದರೆ ಬ್ರಹ್ಮವೈವರ್ತ ಪುರಾಣದಲ್ಲಿ ಕಥೆ ಸ್ವಲ್ಪ ಬದಲಾಗಿದೆ.ಶಾಪಗ್ರಸ್ತನಾದ ಚಂದ್ರನು ಶಿವನನ್ನು ಮೊರೆಹೋಗಲು,ದಯಾಮಯನಾದ ಶಿವನು ಚಂದ್ರನನ್ನು ತನ್ನ ತಲೆಯ ಮೇಲೆ ಧರಿಸಿ ಚಂದ್ರಶೇಖರನೆಂದು ಪ್ರಸಿದ್ಧನಾದನು.ಇದರಿಂದ ಚಂದ್ರನು ನಿಶ್ಚಿಂತನಾದನು.ಆದರೆ,ಚಂದ್ರನ ಪತ್ನಿಯರು ಪತಿಯಿಲ್ಲದಂತಾಗಿ ಪುನಃ ದಕ್ಷನ ಬಳಿ ಹೋಗಿ ತಮಗೆ ಪತಿಭಿಕ್ಷೆ ಬೇಕೆಂದು ಬೇಡಿದರು.ದಕ್ಷನು ಶಿವನ ಬಳಿ ಬಂದು ಚಂದ್ರನನ್ನು ಬಿಡುಗಡೆ ಮಾಡಬೇಕೆಂದೂ ಇಲ್ಲವಾದರೆ ಶಾಪ ಕೊಡುವೆನೆಂದನು.ಶರಣಾಗತನನ್ನು ಬಿಡುವುದಿಲ್ಲವೆಂದು ಶಿವನು ಪಟ್ಟು ಹಿಡಿದನು.ದಕ್ಷನು ಕೋಪದಿಂದ ಶಾಪ ಕೊಡಲು ಉದ್ಯುಕ್ತನಾಗಲು,ಶಿವನು ಶ್ರೀಕೃಷ್ಣನನ್ನು ಸ್ಮರಿಸಿದನು(ಬ್ರಹ್ಮವೈವರ್ತಪುರಾಣದ ಪ್ರಕಾರ ಎಲ್ಲರಿಗಿಂತಲೂ ಮೇಲಿರುವವನು ಗೋಲೋಕದಲ್ಲಿರುವ ಶ್ರೀಕೃಷ್ಣ).ಶ್ರೀಕೃಷ್ಣನು ಪ್ರತ್ಯಕ್ಷನಾಗಿ ಶಿವನಿಗೆ ಕೋಪಿಷ್ಠನಾದ ದಕ್ಷನಿಗೆ ಚಂದ್ರನನ್ನು ಕೊಟ್ಟುಬಿಡಲು ಹೇಳಿದನು.ಆದರೆ ಶಿವನು ಒಪ್ಪಲಿಲ್ಲ.ಕೊನೆಗೆ ಕೃಷ್ಣನು ಚಂದ್ರನನ್ನು ಹೋಳು ಮಾಡಿ ರೋಗಮುಕ್ತನಾದ ಭಾಗವನ್ನು ಶಿವನ ಬಳಿಯೇ ಬಿಟ್ಟು ರೋಗಿಯಾದ ಭಾಗವನ್ನು ದಕ್ಷನಿಗೆ ಕೊಟ್ಟ!ರೋಗಿಯನ್ನು ಹೇಗೆ ಸರಿಪಡಿಸುವುದೆಂದು ದಕ್ಷನೂ ಕೃಷ್ಣನನ್ನು ಬೇಡಲು ಕೃಷ್ಣನು,ಚಂದ್ರನು ಶುಕ್ಲಪಕ್ಷದಲ್ಲಿ ಬೆಳೆದು ಕೃಷ್ಣಪಕ್ಷದಲ್ಲಿ ಕ್ಷೀಣಿಸುವನೆಂದು ಪರಿಹಾರ ಹೇಳಿದನು.
           ಚಂದ್ರನು ರಾಜಸೂಯ ಯಾಗ ಮಾಡಿ ಬ್ರಾಹ್ಮಣರಿಗೆ ರಾಜನಾಗಲು,ಅಹಂಕಾರಯುಕ್ತನಾಗಿ ಅನೇಕ ಸ್ತ್ರೀಯರನ್ನು ಕಾಮಿಸಿದನು.ತನ್ನ ಗುರುವಾದ ಬೃಹಸ್ಪತಿಯ ಪತ್ನಿ ತಾರೆಯನ್ನೂ ಕಾಮಿಸಿ,ಅವಳೂ ಅವನನ್ನು ಮೋಹಿಸಲು ಅವಳನ್ನು ಅಪಹರಿಸಿಕೊಂಡು ತನ್ನ ಮಂಡಲಕ್ಕೆ ಕರೆದೊಯ್ದನು.ಇದನ್ನು ತಿಳಿದ ಬೃಹಸ್ಪತಿ ಅವನಿಗೆ ಶಾಪ ಕೊಡಲು ಪ್ರಯತ್ನಿಸಲು ಅದು ಅವನ ಮೇಲೆ ಪ್ರಭಾವ ಬೀರಲೇ ಇಲ್ಲ!ಪತ್ನಿಯನ್ನು ಹಿಂದಿರುಗಿಸಲು ಬೃಹಸ್ಪತಿಯು ಕೇಳಿಕೊಳ್ಳಲು ಚಂದ್ರನು ಕೊಡಲೂ ಇಲ್ಲ.ಆಗ ಬೃಹಸ್ಪತಿಯು ದೇವತೆಗಳಿಗೆ ಹೇಳಿ ಚಂದ್ರನ ಮೇಲೆ ಯುದ್ಧಕ್ಕೆ ಕಳಿಸಿದನು.ಚಂದ್ರನು ಶುಕ್ರಾಚಾರ್ಯನ ಮೊರೆಹೋಗಲು,ಶುಕ್ರನು ರಾಕ್ಷಸರೊಂದಿಗೆ ಅವನ ಕಡೆ ನಿಂತನು.ಹೀಗೆ ದೇವಾಸುರ ಸಂಗ್ರಾಮವೇ ನಡೆದು,ಅದು ತಾರಕಾಮಯ ಯುದ್ಧವೆಂದು ಕರೆಯಲ್ಪಟ್ಟಿತು.ಅದು ತಾರಕಕ್ಕೇರಲು,ಬ್ರಹ್ಮನು ಯುದ್ಧವನ್ನು ನಿಲ್ಲಿಸಿ ಚಂದ್ರನಿಗೆ ತಾರೆಯನ್ನು ಬೃಹಸ್ಪತಿಗೆ ಒಪ್ಪಿಸಲು ಬುದ್ಧಿ ಹೇಳಿದನು.ಚಂದ್ರನು ಒಪ್ಪಿ ತಾರೆಯನ್ನು ಬೃಹಸ್ಪತಿಗೆ ಒಪ್ಪಿಸಿದನು.ಆಗ ಅವಳು ಗರ್ಭಿಣಿಯಾಗಿರಲು ಬೃಹಸ್ಪತಿಯು ಅದು ಚಂದ್ರನ ಗರ್ಭವೆಂದು ತಿಳಿದು,ಕೂಡಲೇ ಅದನ್ನು ತ್ಯಜಿಸಬೇಕೆಂದೂ ಹೇಳಿದನು.ತಾನು ಅವಳಿಗೇನೂ ಶಾಪ ಕೊಡುವುದಿಲ್ಲವೆಂದೂ ತಾನಿನ್ನೂ ಅವಳಲ್ಲಿ ಸಂತಾನ ಪಡೆಯಬೇಕೆಂದೂ ಹೇಳಿ ಆಶ್ವಾಸನೆ ಕೊಟ್ಟನು.ಆಗ ತಾರೆ ತನ್ನ ಗರ್ಭವನ್ನು ತ್ಯಜಿಸಲು ಕಾಂತಿಯುಕ್ತವಾದ ಗಂಡು ಮಗು ಜನಿಸಿತು!ಅದರ ಕಾಂತಿ ನೋಡಿ ಬೃಹಸ್ಪತಿಯೂ ಚಂದ್ರನು ಅದು ತನ್ನ ಮಗು ಎಂದು ಜಗಳವಾಡಿದರು!ಎಲ್ಲ ದೇವತೆಗಳೂ ಋಷಿಗಳೂ ಕೇಳಿದರೂ ತಾರೆಯು ಲಜ್ಜೆಯಿಂದ ಹೇಳಲಿಲ್ಲ.ಕೊನೆಗೆ ಮಗುವೇ ಕುಪಿತಗೊಂಡು ಕೇಳಿತು!ಆಗ ಬ್ರಹ್ಮನು ಮೆಲ್ಲನೆ ಕೇಳಲು ಚಂದ್ರನದು ಎಂದು ಹೇಳಿದಳು.ಕೂಡಲೇ ಚಂದ್ರನು ಮಗುವನ್ನು ಎತ್ತಿಕೊಂಡು ಹೋಗಿ,ಬುದ್ಧಿಯಿಂದ ಗಂಭೀರವಾಗಿದ್ದ ಮಗುವಿಗೆ ಬುಧ ಎಂದು ಹೆಸರಿಟ್ಟನು.ಮುಂದೆ ಬುಧನು ವೈವಸ್ವತ ಮನುವಿನ ಪುತ್ರಿ ಇಳೆಯನ್ನು ವರಿಸಿ ಪುರೂರವನಿಗೆ ಜನ್ಮ ಕೊಟ್ಟನು.ಹೀಗೆ ಚಂದ್ರವಂಶ ಆರಂಭವಾಯಿತು.ಪುರೂರವನಿಂದ ಆಯು,ಆಯುವಿನಿಂದ ನಹುಷ-ಯಯಾತಿ-ಪೂರು,ಅವನಿಂದ ಪೌರವ ವಂಶ,ಅದರಲ್ಲಿ ದುಷ್ಯಂತ-ಭರತ,ಮುಂದೆ ಸಂವರಣ,ಅವನಿಂದ ಕುರು,ಅವನಿಂದ ಕುರುವಂಶ ಅಥವಾ ಕೌರವ ವಂಶ,ಅದರಲ್ಲಿ ಮುಂದೆ ಶಂತನು-ಭೀಷ್ಮ,ವಿಚಿತ್ರವೀರ್ಯ-ಧೃತರಾಷ್ಟ್ರ ಮತ್ತು ಪಾಂಡು,ಅನಂತರ ಕೌರವರೂ ಪಾಂಡವರೂ ಚಂದ್ರ ವಂಶದಲ್ಲಿ ಜನಿಸಿದರು.ಯಯಾತಿಯ ಒಬ್ಬ ಮಗನಾದ(ಯಯಾತಿಗೆ ಐದು ಮಕ್ಕಳು) ಯದುವಿನಿಂದ ಯಾದವ ವಂಶ ಆರಂಭವಾಗಿ ಅದರಲ್ಲಿ ಭಗವಂತನಾದ ಶ್ರೀಕೃಷ್ಣನು ಅವತರಿಸಿದನು.ಹೀಗೆ ಶ್ರೀರಾಮನು ಸೂರ್ಯವಂಶದಲ್ಲಿ ಜನಿಸಿದರೆ ಶ್ರೀಕೃಷ್ಣನು ಚಂದ್ರವಂಶದಲ್ಲಿ ಜನಿಸಿದನು.ಭಾಗವತ,ವಿಷ್ಣುಪುರಾಣಾದಿಗಳಲ್ಲಿ ಈ ಕಥೆ ಬರುತ್ತದೆ.
            ಹೀಗೆ,ಚಂದ್ರನ ಕುರಿತಾದ ಪೌರಾಣಿಕ ಕಥೆಗಳು ಸ್ವಾರಸ್ಯವಾಗಿವೆ.

ಬೆಟ್ಟವನ್ನು ಹೊತ್ತು ನಡೆಯಬಲ್ಲೆನೆಂದ ಜಟ್ಟಿ -ಆಂಧ್ರಪ್ರದೇಶದ ಜಾನಪದ ಕಥೆ

ಬೆಟ್ಟವನ್ನು ಹೊತ್ತು ನಡೆಯಬಲ್ಲೆನೆಂದ ಜಟ್ಟಿ

ಆಂಧ್ರಪ್ರದೇಶದ ಜಾನಪದ ಕಥೆ

ಒಂದಾನೊಂದು ಕಾಲದಲ್ಲಿ ಮಲಬಾರು ಪ್ರದೇಶವನ್ನು ನಂದನೆಂಬ ರಾಜನು ಆಳುತ್ತಿದ್ದನು.ಒಂದು ದಿನ,ಒಬ್ಬ ಜಟ್ಟಿಯು ಅವನ ಬಳಿ ಬಂದು ಹೇಳಿದ,"ಮಹಾರಾಜ!ನನಗೆ ಮಲ್ಲಯುದ್ಧವೇ ಮೊದಲಾದ ಹಲವಾರು ವಿದ್ಯೆಗಳು ಗೊತ್ತು!ಕ್ರೂರ ಮೃಗಗಳೊಂದಿಗೆ ನಾನು ಕಾದಾಡಬಲ್ಲೆ!ಒಂದು ಬೆಟ್ಟವನ್ನೇ ಹೊತ್ತು ನಡೆಯಬಲ್ಲೆ!ಆದರೆ ನನ್ನ ವಿದ್ಯೆ,ಶಕ್ತಿಗಳನ್ನು ನಿಮ್ಮಂಥ ರಾಜರನ್ನು ಹೊರತುಪಡಿಸಿದರೆ ಬೇರಾರೂ ಪ್ರೋತ್ಸಾಹಿಸರು!ಆದ್ದರಿಂದ ನಿಮ್ಮ ಬಳಿಗೆ ಬಂದಿದ್ದೇನೆ!ನನಗೆ ಸೂಕ್ತವಾದ ಸಂಬಳ ಕೊಟ್ಟು ಕೆಲಸಕ್ಕಿಟ್ಟುಕೊಳ್ಳಿ ಎಂದು ಕೋರುತ್ತಿದ್ದೇನೆ!"
       ಅವನ ಮಾತನ್ನು ಕೇಳಿ ರಾಜನು ಇಂಥ ಒಬ್ಬ ಬಲಶಾಲಿ ಉಪಯುಕ್ತನಾದಾನೆಂದು ಭಾವಿಸಿ ಅವನಿಗೆ ತಿಂಗಳಿಗೆ ನೂರು ಪಗೋಡಗಳ(ಪಗೋಡ ಎಂಬುದು ಹಣದ ಒಂದು ಹಳೆಯ ಅಳತೆ) ಸಂಬಳ ಕೊಡಲು ಒಪ್ಪಿ ಅವನನ್ನು ಕೆಲಸಕ್ಕಿಟ್ಟುಕೊಂಡ.
       ಆ ನಗರದ ಬಳಿ ಒಂದು ದೊಡ್ಡ ಬೆಟ್ಟವಿತ್ತು.ಆ ಬೆಟ್ಟದಲ್ಲಿ ಅನೇಕ ಕ್ರೂರ ಪ್ರಾಣಿಗಳು ವಾಸವಾಗಿದ್ದು ಊರಿನ ಜನರಿಗೆ ಬಹಳ ತೊಂದರೆ ಕೊಡುತ್ತಿದ್ದವು.ರಾಜನು ಈ ಸಮಸ್ಯೆಯನ್ನು ತಾನು ಕೆಲಸಕ್ಕೆ ತೆಗೆದುಕೊಂಡ ಹೊಸ ಜಟ್ಟಿಯಿಂದ ಪರಿಹರಿಸಬಹುದೆಂದು ಭಾವಿಸಿ ಅವನನ್ನು ಕರೆದು ಹೇಳಿದನು,"ಅಯ್ಯೋ ಜಟ್ಟಿಯೇ! ನೀನು ಬೆಟ್ಟವನ್ನೇ ಹೊತ್ತು ನಡೆಯಬಲ್ಲೆನೆಂದು ಹೇಳಿದೆಯಷ್ಟೇ?ಈಗ ನೋಡು!ನಮ್ಮ ನಗರದ ಹೊರವಲಯದಲ್ಲಿ ಒಂದು ದೊಡ್ಡ ಬೆಟ್ಟವಿದ್ದು ,ಅದರಲ್ಲಿನ ಕ್ರೂರ ಮೃಗಗಳು ಆಗಾಗ ಊರೊಳಗೆ ನುಗ್ಗಿ ಜನರಿಗೆ ಬಹಳ ತೊಂದರೆ ಕೊಡುತ್ತಿವೆ!ಹಾಗಾಗಿ ನೀನು ಆ ಬೆಟ್ಟವನ್ನು ನಿನ್ನ ಹೆಗಲಿನ ಮೇಲೆ ಹೊತ್ತೊಯ್ದು ಬೇರೆಲ್ಲಾದರೂ ಇರಿಸಿ ಬಾ!"
       ಜಟ್ಟಿಯು ಆಗಲೆಂದು ಒಪ್ಪಿದ.ಮರುದಿನ,ರಾಜನು ಅವನನ್ನು ತನ್ನ ಮಂತ್ರಿಗಳು,ಪುರೋಹಿತರು,ಮತ್ತು ಒಂದು ಸೈನ್ಯದೊಂದಿಗೆ ಆ ಬೆಟ್ಟದಬಳಿಗೆ ಕರೆದೊಯ್ದ.ಆಗ ಜಟ್ಟಿಯು ತನ್ನ ಸೊಂಟಕ್ಕೆ ಪಟ್ಟಿಯನ್ನೂ ತಲೆಗೆ ರುಮಾಲನ್ನೂ ಕಟ್ಟಿ ನಿಂತ.ಆದರೆ ಮುಂದುವರೆಯಲಿಲ್ಲ.ಅವನೇಕೆ ಬೆಟ್ಟವನ್ನೆತ್ತದೇ ಸುಮ್ಮನೆ ನಿಂತಿದ್ದಾನೆಂದು ರಾಜನು ಕೇಳಿದ.ಅದಕ್ಕೆ ಆ ಜಟ್ಟಿಯು ವಿನಯಪೂರ್ವಕವಾಗಿ,"ಮಹಾರಾಜ!ನಾನು ಕೆಲಸಕ್ಕೆ ಸೇರಿದಾಗ ಬೆಟ್ಟವನ್ನು ನನ್ನ ತಲೆಯ ಮೇಲೆ ಹೊತ್ತು ನಡೆಯಬಲ್ಲೆನೆಂದು ಹೇಳಿದ್ದೆ.ಆದರೆ ಅದನ್ನು ಎತ್ತಬಲ್ಲೆನೆಂದು ಹೇಳಿರಲಿಲ್ಲವಷ್ಟೇ?ಆದ್ದರಿಂದ ನಿಮ್ಮ ಸೈನಿಕರಿಗೆ ಆ ಬೆಟ್ಟವನ್ನು ಎತ್ತಿ ನನ್ನ ತಲೆಯ ಮೇಲೆ ಇರಿಸಲು ಹೇಳಿ!ಅನಂತರ ನಾನದನ್ನು ಹೊತ್ತೊಯ್ಯುತ್ತೇನೆ!" ಎಂದನು!
       ರಾಜನಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ!

ಮಂಗಳವಾರ, ಮೇ 28, 2024

ಮುತ್ತತ್ತಿ ಕ್ಷೇತ್ರದ ಸ್ಥಳಪುರಾಣ

ಮುತ್ತತ್ತಿ ಕ್ಷೇತ್ರದ ಸ್ಥಳಪುರಾಣ

     ರಾಮಾಯಣವನ್ನು ನೆನಪಿಸುವ,ರಾಮ,ಸೀತೆಯರ  ಲೀಲಾವೈಭವವನ್ನು ಸಾರುವ ಹಲವಾರು ಕ್ಷೇತ್ರಗಳಲ್ಲಿ ಮುತ್ತತ್ತಿಯೂ ಒಂದು.ಹನುಮಂತನು ಆರಾಧ್ಯದೈವವಾಗಿರುವ ಈ ಕ್ಷೇತ್ರ,ಬೆಂಗಳೂರಿನಿಂದ ಸುಮಾರು ೧೩೦ ಕಿ.ಮೀ.ದೂರದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿದೆ.ಬೆಂಗಳೂರಿನಿಂದ ಕನಕಪುರಕ್ಕೆ ಹೋಗಿ ಅಲ್ಲಿಂದ ಸಾತನೂರಿನ ಮಾರ್ಗವಾಗಿ ಹೋದರೆ ಹಲಗೂರು ಎಂಬ ಹಳ್ಳಿ ಸಿಗುತ್ತದೆ,ಹಾಗೂ ಇಲ್ಲಿಂದ ಸುಮಾರು ೨೫ ಕಿ.ಮೀ.ದೂರದಲ್ಲಿ ಮುತ್ತತ್ತಿ ಕ್ಷೇತ್ರವಿದೆ.ಬೆಂಗಳೂರಿನಿಂದ ಚೆನ್ನಪಟ್ಟಣಕ್ಕೆ ಹೋಗಿ ಅಲ್ಲಿಂದ ಹಲಗೂರಿಗೆ ಹೋಗಿಯೂ ಈ ಕ್ಷೇತ್ರ ತಲುಪಬಹುದು.ಕಾವೇರಿ ವನ್ಯಧಾಮ ಎಂಬ ಹಸಿರಾದ,ದಟ್ಟವಾದ,ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರಕೃತಿ ರಮ್ಯ ಕಾಡಿನ ಮಧ್ಯೆ ಈ ಪುಟ್ಟ ಹಳ್ಳಿಯಿದೆ.ಇಲ್ಲಿ ಜುಳಜುಳನೆ ಹರಿಯುವ ಕಾವೇರಿ ನದಿ ನಯನಮನೋಹರವಾಗಿದೆ.
         ಇಲ್ಲಿ ಆಂಜನೇಯಸ್ವಾಮಿಯ ಪುಟ್ಟ ಗುಡಿಯಿದ್ದು,ಅಲ್ಲಿ ಒಂದು ಕಡೆಗೆ ಮುಖ ತಿರುಗಿಸಿರುವ ಕಪ್ಪು ಶಿಲೆಯ ಆಂಜನೇಯನ ಸುಂದರ ವಿಗ್ರಹವಿದೆ.ಇಲ್ಲಿ ಆಂಜನೇಯನಿಗೆ ಮುತ್ತೆತ್ತರಾಯ,ಅಥವಾ ಮುತ್ತತ್ತಿರಾಯ ಎಂದು ಹೆಸರು.ಈ ಹೆಸರು ಬರಲು ಕಾರಣವಾದ ಕಥೆಯೇ ಇಲ್ಲಿನ ಸ್ಥಳಪುರಾಣ.ಅದೇ ಈ ಸ್ಥಳಕ್ಕೆ ಮುತ್ತತ್ತಿ ಎಂಬ ಹೆಸರು ಬರಲೂ ಕಾರಣ.ಅದು ಹೀಗಿದೆ-
        ಶ್ರೀರಾಮ,ಲಕ್ಷ್ಮಣರು ಲಂಕೆಗೆ ಹೋಗಿ ರಾವಣನನ್ನು ಕೊಂದು ಸೀತೆಯನ್ನು ಬಿಡಿಸಿಕೊಂಡು ಅವಳೊಡನೆ ಅಯೋಧ್ಯೆಗೆ ಹಿಂದಿರುಗುತ್ತಿದ್ದಾಗ,ಈ ಮಾರ್ಗವಾಗಿ ಹೋದರಂತೆ.ಆಗ ಅವರಿಗೆ ಈ ಸುಂದರ ಸ್ಥಳದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಬೇಕೆನಿಸಿ ಇಲ್ಲಿ ಸ್ವಲ್ಪ ಕಾಲ ನಿಂತರು.ಇಡೀ ಕಪಿಸೇನೆಯೂ ವಿಶ್ರಮಿಸಿಕೊಳ್ಳತೊಡಗಿತು.ಸೀತೆಗಂತೂ ಈ ಸ್ಥಳ ಬಹಳ ಇಷ್ಟವಾಗಿ ಇಲ್ಲಿನ ರಮ್ಯ ಪ್ರಕೃತಿಯನ್ನು ನೋಡಿ ಮೈಮರೆತಳು.ಒಬ್ಬಳೇ ಕಾವೇರಿ ನದಿಯ ದಂಡೆಯ ಮೇಲೆ ಕುಳಿತು ನದಿಯ ಸೊಬಗನ್ನು ಆಸ್ವಾದಿಸುತ್ತಾ ತಂಪಾದ ಆಹ್ಲಾದಕರ ಹೊಳೆಯಲ್ಲಿ ಇಳಿದು ಸ್ನಾನ ಮಾಡಿದಳು.ಆಗ ಅವಳು ಧರಿಸಿದ್ದ ಮುತ್ತಿನ ಮೂಗುತಿಯು ಜಾರಿ ನೀರಿನಲ್ಲಿ ಬಿದ್ದುಹೋಯಿತು!ಆದರೆ ಇದು ಅವಳಿಗೆ ತಿಳಿಯಲೇ ಇಲ್ಲ!ಸ್ವಲ್ಪ ಹೊತ್ತಿನ ನಂತರ ಅವಳಿಗೆ ಮುತ್ತಿನ ಮೂಗುತಿಯು ಬಿದ್ದು ಹೋಗಿರುವುದರ ಅರಿವಾಗಿ ಬಹಳ ದುಃಖಗೊಂಡು ಅಳತೊಡಗಿದಳು.ಇದು ಹನುಮಂತನಿಗೆ ಕೇಳಿಸಿ,ಯಾರು ಹೀಗೆ ಅಳುತ್ತಿರಬಹುದೆಂದು ಅಳುವಿನ ಶಬ್ದದ ದಿಕ್ಕಿನ ಕಡೆ ಬಂದು ನೋಡಿ ಸೀತೆಯಿಂದ ಅಳುವಿನ ಕಾರಣವನ್ನು ತಿಳಿದುಕೊಂಡನು.ಅನಂತರ,"ಇಷ್ಟೇಯೇ?ಇದೀಗ ತರುತ್ತೇನೆ!"ಎಂದು ನದಿಯಲ್ಲಿ ತನ್ನ ಬಾಲವನ್ನು ಇಳಿಬಿಟ್ಟನು.ಆ ಬಾಲವನ್ನು ನೀಳವಾಗಿ ಬೆಳೆಸಿ ನದಿಯನ್ನೆಲ್ಲಾ ಶೋಧಿಸಿ,ಮುಳುಗಿದ್ದ ಆ ಮುತ್ತಿನ ಮೂಗುತಿಯನ್ನು ಮೇಲೆತ್ತಿ ಸೀತೆಗೆ ಕೊಟ್ಟನು.ಆಗ ಸೀತೆಯು ಬಹಳ ಸಂತೋಷಗೊಂಡು ಹನುಮಂತನನ್ನು ಮುತ್ತೆತ್ತರಾಯ ಎಂದು ಹರಸಿದಳು.ಅಂದಿನಿಂದ ಹನುಮಂತನಿಗೆ ಮುತ್ತೆತ್ತರಾಯ ಎಂದು ಹೆಸರಾಯಿತು.ಈ ಮುತ್ತೆತ್ತರಾಯನು ಇಲ್ಲಿ ನೆಲೆಸಿದ ಕಾರಣ,ಈ ಕ್ಷೇತ್ರಕ್ಕೆ ಮುತ್ತತ್ತಿ ಎಂದು ಹೆಸರಾಯಿತು.
    ಕನ್ನಡದ ಕಣ್ಮಣಿ,ವರನಟ,ಡಾ.ರಾಜಕುಮಾರರು,ಅವರು ತಂದೆ,ತಾಯಿಯರು ಈ ಮುತ್ತೆತ್ತರಾಯನ ಬಳಿ ಮಕ್ಕಳಾಗಲೆಂದು ಹರಸಿಕೊಂಡುದರಿಂದ ಜನಿಸಿದ ಕಾರಣ,ಅವರಿಗೆ ಮುತ್ತುರಾಜನೆಂದು ಹೆಸರಿಡಲಾಯಿತು!ಅವರೇ ಸುಶ್ರಾವ್ಯವಾಗಿ ಹಾಡಿರುವ,ಚಿ.ಉದಯಶಂಕರರು ರಚಿಸಿರುವ ಒಂದು ಸುಂದರವಾದ ಗೀತೆ,ಈ ಕ್ಷೇತ್ರದ ಸ್ಥಳಪುರಾಣವನ್ನು ಹೇಳುತ್ತದೆ-
     ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು
ಎತ್ತಿ ತಂದೆ ಎಲ್ಲಿಂದ ರಾಯ
ಮುತ್ತೆತ್ತಿರಾಯ                              ||ಪ||
ಅಮ್ಮ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ 
ನಗೆಯ ತಂದೆಯಾ ಮಹನೀಯ......
ಮಾರುತಿರಾಯ                              ||ಅ.ಪ.||
          ಸೀತಮ್ಮ ಸ್ನಾನ ಮಾಡಿ ಮೂಗುತಿಯ     ಹುಡುಕಾಡಿ
         ನಿನ್ನ ಕೂಗಿದಳೇನೋ ಹನುಮಂತರಾಯ
         ನೀರಲ್ಲಿ ಬಾಲ ಬಿಟ್ಟು ನದಿಯನ್ನೇ ಶೋಧಿಸಿದ
         ಎಂಥ ಶ್ರದ್ಧೆಯೋ ಮಹನೀಯ....ಹನುಮಂತರಾಯ
||೧||
        ಅಮ್ಮ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ 
        ಮುತ್ತೆತ್ತರಾಯನೆಂದು ಹರಸಿದಳೇನು
        ನಿನ್ನಂಥ ದಾಸನನು ಪಡೆದ ಆ ರಾಮನು
        ಎಂಥ ಭಾಗ್ಯವಂತನಯ್ಯಾ......ಮಾರುತಿರಾಯ
||೨||
        ನಿನ್ನಂತೆ ಭಕ್ತಿಯಿಲ್ಲ ನಿನ್ನಂತೆ ಶಕ್ತಿಯಿಲ್ಲ
        ಏನೂ ಇಲ್ಲದ ಜೀವ ನನ್ನದು ಸ್ವಾಮಿ
        ನಿನ್ನೇ ನಾ ನಂಬಿ ಬಂದೆ ನೀನೇ ನನ್ನ ತಾಯಿತಂದೆ
        ಕಾಪಾಡುವ ಹೊಣೆಯು ನಿನ್ನದು ತಂದೆ ನಿನ್ನದು
||೩||