ಭಾನುವಾರ, ಡಿಸೆಂಬರ್ 31, 2023

ಪುರಾಣ ಕುತೂಹಲ-ಕಾಳಿಂಗ ಸರ್ಪವು ಏಕೆ ಯಮುನಾ ನದಿಯಲ್ಲಿತ್ತು?

ಶ್ರೀ ಕೃಷ್ಣನು ಯಮುನಾ ನದಿಯಲ್ಲಿದ್ದ ಕಾಳಿಂಗ ಸರ್ಪವನ್ನು ಮರ್ದಿಸಿದ ಕಥೆ ಜನಪ್ರಿಯವಾಗಿದೆ.ಇದು ಭಾಗವತ ಪುರಾಣದಲ್ಲಿ ಬರುತ್ತದೆ.ಕಾಳಿಯ ಅಥವಾ ಕಾಳಿಂಗನೆಂಬ ಸಾವಿರ ಹೆಡೆಗಳ ವಿಷಪೂರಿತ ಸರ್ಪ, ಯಮುನಾ ನದಿಯಲ್ಲಿನ ಒಂದು ಕುಂಡದಲ್ಲಿ ತನ್ನ ಪರಿವಾರದೊಂದಿಗೆ ವಾಸಿಸುತ್ತಾ ಯಮುನಾ ನದಿಯ ನೀರನ್ನೆಲ್ಲಾ ವಿಷಮಯವಾಗಿಸಿರುತ್ತಾನೆ.ಅವನಿರುವ ಕುಂಡದ ಮೇಲೆ ಹಾರಾಡುವ ಪಕ್ಷಿಗಳಿಗೂ ವಿಷದ ಗಾಳಿ ಸೋಕಿ ಸಾಯುತ್ತಿರುತ್ತವೆ.ಒಮ್ಮೆ ಕೆಲವು ಗೊಲ್ಲ ಬಾಲಕರು ಯಮುನೆಯ ಆ ನೀರನ್ನು ಕುಡಿದು ಸತ್ತೇ ಹೋಗುತ್ತಾರೆ!ಆಗ ಶ್ರೀಕೃಷ್ಣನು ಅವರನ್ನು ತನ್ನ ದಯಾಪೂರಿತ ನೋಟದಿಂದಲೇ ಬದುಕಿಸಿ,ಕಾಳಿಂಗನಿಗೆ ಪಾಠ ಕಲಿಸಬೇಕೆಂದು ಸನಿಹದ ಕದಂಬ ವೃಕ್ಷದಿಂದ ನೀರಲ್ಲಿ ಜಿಗಿದು,ಮಡುವನ್ನು ಕಲಕಿ, ಕಾಳಿಂಗನನ್ನು ಕೆರಳಿಸಿ, ಅವನೊಡನೆ ಯುದ್ಧ ಮಾಡಿ ಅವನ ಹೆಡೆಗಳ ಮೇಲೆ ನರ್ತನ ಮಾಡುತ್ತಾನೆ.ಆಗ ಕಾಳಿಂಗನ ಪತ್ನಿಯರು ಬೇಡಿಕೊಳ್ಳಲು, ಕೃಷ್ಣನು ಅವನನ್ನು ಬಿಟ್ಟು, ಅವನಿಗೆ ಪರಿವಾರಸಮೇತವಾಗಿ ಯಮುನೆಯನ್ನು ತೊರೆದು ಸಮುದ್ರದ ರಮಣಕ ದ್ವೀಪಕ್ಕೆ ಹೋಗಬೇಕೆಂದು ಆಜ್ಞೆ ಮಾಡುತ್ತಾನೆ.ತನ್ನ ಹೆಜ್ಜೆ ಗುರುತುಗಳು ಅವನ ಹೆಡೆಗಳ ಮೇಲೆ ಬಿದ್ದಿರುವುದನ್ನು ನೋಡಿದ ಗರುಡನು ಅವರಿಗೇನೂ ತೊಂದರೆ ಮಾಡುವುದಿಲ್ಲ ಎಂದು ಧೈರ್ಯ ಹೇಳಿ ಕಳುಹಿಸುತ್ತಾನೆ.
         ಕಾಳಿಂಗ ಏಕೆ ಯಮುನಾ ನದಿಯಲ್ಲಿದ್ದ ಎಂಬ ವಿಷಯ ಅನೇಕರಿಗೆ ತಿಳಿದಿಲ್ಲ.ಇದಕ್ಕೆ ಕಾರಣವೂ ಭಾಗವತದಲ್ಲೇ ಇದೆ.ಅದೇನೆಂದರೆ,ಗರುಡನಿಗೂ ಸರ್ಪಗಳಿಗೂ ವೈರವಿತ್ತು.ಏಕೆಂದರೆ,ಸರ್ಪಗಳ ತಾಯಿ ಕದ್ರುವು ಸರ್ಪಗಳ ಸಹಾಯದಿಂದ ಗರುಡನ ತಾಯಿ ವಿನತೆಯನ್ನು ಒಂದು ಪಂದ್ಯದಲ್ಲಿ ಸೋಲಿಸಿ ತನ್ನ ದಾಸಿಯನ್ನಾಗಿ ಮಾಡಿಕೊಂಡಿದ್ದಳು.ಗರುಡನು ಅವಳನ್ನು ದಾಸ್ಯದಿಂದ ಬಿಡಿಸಿ, ಸರ್ಪಗಳನ್ನು ದ್ವೇಷಿಸುತ್ತಾ ತನ್ನ ಆಹಾರವನ್ನಾಗಿ ಮಾಡಿಕೊಂಡಿದ್ದನು.ಸರ್ಪಗಳು ಸಮುದ್ರದ ಮಧ್ಯದ ರಮಣಕವೆಂಬ ದ್ವೀಪದಲ್ಲಿ ವಾಸಿಸುತ್ತಿದ್ದವು.ಗರುಡನು  ಆಗಿಂದಾಗ್ಗೆ ಸರ್ಪಗಳ ಮೇಲೆ ದಾಳಿ ಮಾಡುತ್ತಾ ಅವನ್ನು ಕೊಲ್ಲುತ್ತಿರಲು,ಹೆದರಿದ ಸರ್ಪಗಳು, ತಮ್ಮ ರಾಜ ವಾಸುಕಿಯೊಂದಿಗೆ,ಗರುಡನ ಬಳಿ ಒಂದು ಒಪ್ಪಂದ ಮಾಡಿಕೊಂಡಿದ್ದವು.ಅದೇನೆಂದರೆ,ಸರ್ಪಗಳೇ ಪ್ರತಿ ಅಮಾವಾಸ್ಯೆಯ ದಿನದಂದು ತಮ್ಮ ಎಲ್ಲಾ ಕುಟುಂಬಗಳಿಂದ ಒಂದೊಂದು ಸರ್ಪವನ್ನು ಕಳಿಸುವೆವೆಂಬ ಒಪ್ಪಂದ.ಅವು ಅಂತೆಯೇ ಮಾಡುತ್ತಿದ್ದವು.ಆದರೆ ಗರುಡನನ್ನು ಲೆಕ್ಕಿಸದ ಕಾಳಿಂಗನು, ತನ್ನ ಪರಿವಾರದಿಂದ ಯಾರನ್ನೂ ಕಳಿಸುತ್ತಿರಲಿಲ್ಲ.ಅಲ್ಲದೇ,ಇತರ ಪರಿವಾರಗಳ ಕೆಲವು ಸರ್ಪಗಳನ್ನು ತಾನೇ ತಿಂದುಬಿಡುತ್ತಿದ್ದನು! ಇದನ್ನು ತಿಳಿದ ಗರುಡ,ಅವನ ಮೇಲೆ ಯುದ್ದ ಮಾಡಿದ.ಕಾಳಿಂಗನು ತನ್ನ ಸಾವಿರ ಹೆಡೆಗಳಿಂದ ಗರುಡನನ್ನು ಕಚ್ಚಿದರೂ,ಅವನ ರೆಕ್ಕಗಳ ಬಲವಾದ ಏಟುಗಳನ್ನು ತಾಳಲಾರದೇ ಸೋತು ಓಡಿ ಯಮುನಾ ನದಿಯನ್ನು ಸೇರಿಕೊಂಡನು.ಯಮುನಾ ನದಿಯೊಳಗೆ ಗರುಡನು ಬರುವಂತಿರಲಿಲ್ಲ.ಇದಕ್ಕೆ ಇನ್ನೊಂದು ಕಥೆಯಿತ್ತು.
      ಒಮ್ಮೆ ಗರುಡನು ಬಹಳ ಹಸಿವೆಯಿಂದ ಯಮುನಾ ನದಿಗೆ ಬಂದು ಅಲ್ಲಿನ ಮೀನುಗಳನ್ನು ಹಿಡಿದು ತಿನ್ನತೊಡಗಿದನು.ಆಗ ಅಲ್ಲಿ ತಪಸ್ಸು ಮಾಡುತ್ತಿದ್ದ ಸೌಭರಿ ಎಂಬ ಮಹರ್ಷಿಯು ಅವನಿಗೆ ಮೀನುಗಳನ್ನು ತಿನ್ನಬಾರದೆಂದು ಹೇಳಿದನು.ಆದರೆ ಗರುಡನು ಅವನ ಮಾತು ಕೇಳದೇ ಮೀನುಗಳ ರಾಜನನ್ನೇ ಹಿಡಿದು ತಿಂದು ಬಿಟ್ಟನು! ಇದರಿಂದ ಮೀನುಗಳಿಗೆ ಬಹಳ ದುಃಖವಾಯಿತು.ಆಗ ಸೌಭರಿ ಮಹರ್ಷಿಯು ಕುಪಿತಗೊಂಡು ಗರುಡನಿಗೆ ಯಮುನಾ ನದಿಯೊಳಗೆ ಬಂದರೆ ಸಾಯಲೆಂದು ಶಾಪವಿತ್ತನು!ಈ ವಿಷಯ ಕಾಳಿಂಗನಿಗೆ ಮಾತ್ರ ಗೊತ್ತಿತ್ತು.ಹಾಗಾಗಿ ಅವನು ಗರುಡನಿಂದ ತಪ್ಪಿಸಿಕೊಳ್ಳಲು ಯಮುನಾ ನದಿಯೊಳಗೆ ಹೋಗಿ ಸೇರಿಕೊಂಡನು, ಹಾಗೂ ಅದನ್ನು ವಿಷಪೂರಿತವಾಗಿಸಿದನು.ಶ್ರೀಕೃಷ್ಣನು ಅವನ ಹೆಡೆಗಳ ಮೇಲೆ ನರ್ತಿಸಿ ತನ್ನ ಹೆಜ್ಜೆ ಗುರುತುಗಳು ಮೂಡಿದುದರಿಂದ ತನ್ನ ವಾಹನವಾದ ಗರುಡನು ಅವನ್ನು ನೋಡಿ ಅವನನ್ನು ಕೊಲ್ಲುವುದಿಲ್ಲವೆಂದು ಆಶ್ವಾಸನೆ ನೀಡಿ ಸಮುದ್ರದ ರಮಣಕ ದ್ವೀಪಕ್ಕೆ ಕಳಿಸಿದನು.

                               

ಮಂಗಳವಾರ, ಡಿಸೆಂಬರ್ 5, 2023

ಸಂಸ್ಕೃತದಲ್ಲಿ ಕೂಟ ಸಮಸ್ಯೆಗಳು

ಸಂಸ್ಕೃತದಲ್ಲಿ ಕೂಟ ಸಮಸ್ಯೆಗಳು

ಹಿಂದಿನ ಕೆಲವು ಸಂಚಿಕೆಗಳಲ್ಲಿ ಸಂಸ್ಕೃತದ ಚಿತ್ರಸೂಕ್ತಿಗಳ,  ಅಂದರೆ, ಪ್ರಹೇಲಿಕೆಗಳು, ಅಂತರಾಲಾಪಗಳು, ಮೊದಲಾದ ರೀತಿಯ ಒಗಟಿನಂಥ ಶ್ಲೋಕಗಳ ಬಗ್ಗೆ ಪರಿಚಯ  ಮಾಡಿಕೊಂಡೆವು.ಈಗ ಕೂಟಗಳು ಎಂಬ ಬಗೆಯ ಸಮಸ್ಯೆಗಳ ಸ್ವಾರಸ್ಯವನ್ನು ನೋಡೋಣ.ಈ ಕೂಟ ಶ್ಲೋಕಗಳನ್ನು ನೇರವಾಗಿ ಓದಿದಾಗ, ವಿಚಿತ್ರವಾದ, ಅಸಂಬದ್ಧ ಅರ್ಥ ಕಂಡು, ಅವುಗಳಲ್ಲಿನ ಪದಗಳನ್ನು ಬೇರೆ ರೀತಿಯಲ್ಲಿ ವಿಭಜಿಸಿದಾಗ, ಸರಿಯಾದ,ಸಮಂಜಸವಾದ ಅರ್ಥ ಕಾಣುತ್ತದೆ.ಹೀಗೆ ಕೂಟ ಶ್ಲೋಕಗಳು ಒಳಗೆ ಬೇರೊಂದು ಅರ್ಥವಿರುವ ಒಗಟಿನ ಶ್ಲೋಕಗಳು.ಮಹಾಭಾರತದಲ್ಲೂ ಇಂಥ ಅನೇಕ ಕೂಟ ಶ್ಲೋಕಗಳು ಇವೆ.ಈಗ ಇಂಥ ಕೆಲವು ಕೂಟ ಶ್ಲೋಕಗಳನ್ನು ನೋಡೋಣ.
೧.ಕೇಶವಂ ಪತಿತಂ ದೃಷ್ಟ್ವಾ ದ್ರೋಣೋ      ಹರ್ಷಮುಪಾಗತ: /
ರುದಂತಿ ಕೌರವಾ: ಸರ್ವೇ ಹಾ ಕೇಶವ ಕಥಂಗತ: //

ಅನುವಾದ:' ಕೇಶವನು (ಕೃಷ್ಣನು) ಬಿದ್ದುದನ್ನು ನೋಡಿ ದ್ರೋಣನು ಹರ್ಷಗೊಂಡನು! ಕೌರವರೆಲ್ಲರೂ,'ಹಾ ಕೇಶವ! ಹೇಗೆ ಹೋದೆ?' ಎಂದು ಅಳುತ್ತಾರೆ!'

ವಿವರಣೆ:  ಇಲ್ಲಿ ಕೇಶವ ಎಂಬುದು ಕೂಟ ಶಬ್ದ.ಇದನ್ನು ಕೇ-ಶವಂ ಎಂದು ವಿಭಜಿಸಿ ಓದಿಕೊಳ್ಳಬೇಕು.ಸಂಸ್ಕೃತದಲ್ಲಿ 'ಕಂ' ಎಂದರೆ ನೀರು ಎಂಬ ಅರ್ಥವಿದೆ.ಹಾಗಾಗಿ, ಕೇ ಎಂದರೆ, ನೀರಿನಲ್ಲಿ ಎಂದು ಅರ್ಥ.ದ್ರೋಣ ಎಂದರೆ ಕಪ್ಪು ಕಾಗೆ ಎಂಬ ಅರ್ಥವಿದೆ.ಕೌರವ ಎಂದರೆ ನರಿ ಎಂಬ ಅರ್ಥವಿದೆ.ಹೀಗೆ ಶ್ಲೋಕದ ಅರ್ಥ, ನೀರಿನಲ್ಲಿ ಶವವು ಬಿದ್ದಾಗ, ಕಾಗೆಗೆ ಬಹಳ ಸಂತೋಷವಾಯಿತು.ನರಿಗಳು,'ಹಾ ! ನೀರಿನಲ್ಲಿ ಶವವು ಹೇಗೆ ಬಿತ್ತು?' ಎಂದು ಅಳುತ್ತವೆ, ಎಂದಾಗುತ್ತದೆ!

೨.ಪಾನೀಯಂ ಪಾತುಮಿಚ್ಛಾಮಿ ತ್ವತ್ತ: ಕಮಲಲೋಚನೇ /
   ಯದಿ ದಾಸ್ಯಸಿ ನೇಚ್ಛಾಮಿ ನೋ ದಾಸ್ಯಸಿ ಪಿಬಾಮ್ಯಹಮ್ //

ಅನುವಾದ: 'ಎಲೈ ಕಮಲಲೋಚನೆ! ನಿನ್ನಿಂದ ನೀರು ಕುಡಿಯಲು ಇಚ್ಛಿಸುತ್ತೇನೆ! ನೀನು ಕೊಟ್ಟರೆ ಇಚ್ಛಿಸುವುದಿಲ್ಲ! ಕೊಡದಿದ್ದರೆ ಕುಡಿಯುತ್ತೇನೆ!'

ವಿವರಣೆ: ಇಲ್ಲಿ ದಾಸ್ಯಸಿ ಎಂಬುದು ಕೂಟ ಶಬ್ದ.ದಾಸ್ಯಸಿ ಎಂದರೆ ಕೊಟ್ಟರೆ ಎಂದು ಅರ್ಥ.ಆದರೆ ಇದನ್ನು ದಾಸೀ+ಅಸಿ ಎಂದು ವಿಭಜಿಸಿದರೆ, ದಾಸಿಯಾಗಿದ್ದರೆ ಎಂದು ಅರ್ಥವುಂಟಾಗಿ, ಶ್ಲೋಕದ ಅರ್ಥ,'ಎಲೈ ಕಮಲಲೋಚನೆ! ನಿನ್ನಿಂದ ನೀರು ಕುಡಿಯಲು ಇಚ್ಛಿಸುತ್ತೇನೆ! ನೀನು ದಾಸಿಯಾಗಿದ್ದರೆ ಇಚ್ಛಿಸುವುದಿಲ್ಲ! ದಾಸಿಯಾಗಿಲ್ಲದಿದ್ದರೆ ಕುಡಿಯುತ್ತೇನೆ!' ಎಂದಾಗುತ್ತದೆ.

೩.ವಿಷಂ ಭುಂಕ್ಷ್ವ ಮಹಾರಾಜ ಸ್ವಜನೈ: ಪರಿವಾರತ: /
    ವಿನಾ ಕೇನ ವಿನಾ ನಾಭ್ಯಾಂ ಕೃಷ್ಣಾಜಿನಮಕಂಟಕಮ್ //

  ಅನುವಾದ: 'ಮಹಾರಾಜ! ನಿನ್ನ ಸ್ವಜನರೊಂದಿಗೆ ಸೇರಿ ವಿಷವನ್ನು ಸೇವಿಸು! ತಲೆ (ಕಂ ಎಂದರೆ ತಲೆ) ಇಲ್ಲದೇ, ಯಾರಿಬ್ಬರೂ ಇಲ್ಲದೇ, ಕಂಟಕವಿಲ್ಲದೇ ಕೃಷ್ಣಾಜಿನವನ್ನು ಅನುಭವಿಸು!'

ವಿವರಣೆ: ಇಲ್ಲಿ ವಿಷಂ ಎಂದರೆ ವಿಗತ: ಷಕಾರ:, ಅಂದರೆ ಷಕಾರವಿಲ್ಲದೇ ಎಂದು ಅರ್ಥೈಸಿಕೊಳ್ಳಬೇಕು.ಹಾಗೆಯೇ ಕೇನ ವಿನಾ ಎಂದರೆ ಕಕಾರವಿಲ್ಲದೇ ಎಂದು ತೆಗೆದುಕೊಳ್ಳಬೇಕು.ನಾಭ್ಯಾಂ ವಿನಾ ಎಂದರೆ, ಎರಡು ನಕಾರಗಳಿಲ್ಲದೇ ಎಂದು ತೆಗೆದುಕೊಳ್ಳಬೇಕು.ಈಗ, 'ಕೃಷ್ಣಾಜಿನಮ್'' ಶಬ್ದದಲ್ಲಿ ಇದನ್ನು ಅಳವಡಿಸಿದರೆ, ಕಕಾರ, ಷಕಾರ, ಎರಡು ನಕಾರಗಳು (ಣ ಮತ್ತು ನ) ಇಲ್ಲವಾದರೆ, ಋ, ಆಜಿ, ಮತ್ತು ಅಮ್ ಎಂಬ ಪ್ರತ್ಯಗಳುಳಿದು ಅವನ್ನು ಸಂಧಿ ಮಾಡಿದರೆ, ರಾಜ್ಯಮ್ ಎಂದಾಗುತ್ತದೆ.ಆಗ ಶ್ಲೋಕದ ಅರ್ಥ, 'ಕಂಟಕವಿಲ್ಲದ ನಿನ್ನ ಸ್ವಜನರೊಂದಿಗೆ ರಾಜ್ಯವನ್ನು ಸೇವಿಸು ರಾಜಾ!' ಎಂದಾಗುತ್ತದೆ.

೪.ಅರ್ಜುನಸ್ಯ ಇಮೇ ಬಾಣಾ ನೇಮೇ ಬಾಣಾ: ಶಿಖಂಡಿನ: /
    ಸೀದಂತಿ ಮಮ ಗಾತ್ರಾಣಿ ಮಾಘಮಾ ಸೇಗವಾ ಇವ //

   ಅನುವಾದ: ಮಹಾಭಾರತದಲ್ಲಿ ಭೀಷ್ಮನು ಹೇಳುವ ಮಾತು:'ಇವು ಅರ್ಜುನನ ಬಾಣಗಳು! ಶಿಖಂಡಿಯ ಬಾಣಗಳಲ್ಲ! ಏಡಿಯ ಮರಿಗಳಂತೆ ಇವು ನನ್ನ ಅಂಗಾಂಗಗಳನ್ನು ಸೀಳುತ್ತಿವೆ!'

ವಿವರಣೆ: ಮಾಘಮಾ ಎಂದರೆ ಏಡಿ. ಸೇಗವಾ ಎಂದರೆ ಅದರ ಮರಿಗಳು.ಏಡಿಯ ಮರಿಗಳು ಹುಟ್ಟುವಾಗ, ತಾಯಿಯ ಮೈಯನ್ನು ಸೀಳಿಕೊಂಡು ಹೊರಬರುತ್ತವೆ! ಆ ರೀತಿ ಬಾಣಗಳು ನನ್ನ ಅಂಗಗಳನ್ನು ಸೀಳುತ್ತಿವೆಯೆಂದು ಅರ್ಥ.

೫. ಸಮರೇ ಹೇಮರೇಖಾಂಕಂ ಬಾಣಂ ಮುಂಚತಿ ರಾಘವೇ /
     ಸರಾವಣೋsಪಿ ಮುಮುಚೇ ಮಧ್ಯೇ ರೀತಿಧರಂ ಶರಮ್ //

ಅನುವಾದ: 'ಯುದ್ಧದಲ್ಲಿ ರಾಮನು ಚಿನ್ನದ ರೇಖೆಯುಳ್ಳ ಬಾಣವನ್ನು ಬಿಡಲು, ಆ ರಾವಣನೂ ಮಧ್ಯದಲ್ಲಿ ಹಳದಿ ಬಣ್ಣವಿದ್ದ ಶರವನ್ನು (ಬಾಣವನ್ನು) ಬಿಟ್ಟ!'

ವಿವರಣೆ: ರೀತಿ ಎಂದರೆ ಹಳದಿ.ಹಾಗಾಗಿ ಮಧ್ಯೇ ರೀತಿಧರಂ ಶರಮ್ ಎಂದರೆ ಮಧ್ಯದಲ್ಲಿ ಹಳದಿ ಬಣ್ಣವಿರುವ ಬಾಣ ಎಂದಾಯಿತು.ಅದನ್ನೇ ಮಧ್ಯದಲ್ಲಿ ರೀಕಾರವಿರುವ ಶರ ಎಂದು ತೆಗೆದುಕೊಂಡರೆ, ಶರೀರ ಎಂದಾಗುತ್ತದೆ.ಆಗ ರಾವಣನು ಶರೀರವನ್ನು ಬಿಟ್ಟನು, ಅಂದರೆ ಸತ್ತುಹೋದನು ಎಂದಾಗುತ್ತದೆ! 
      ಹೀಗೆ ಸಂಸ್ಕೃತದಲ್ಲಿ ಅನೇಕ ಸ್ವಾರಸ್ಯಕರ ಕೂಟ ಶ್ಲೋಕಗಳಿವೆ.
                                   ಡಾ.ಬಿ.ಆರ್.ಸುಹಾಸ್

ಪುಸ್ತಕ ಪರಿಚಯ -ಪಂಚತಂತ್ರ

ಪಂಚತಂತ್ರದ ಕಥೆಗಳು ಯಾರಿಗೆ ಗೊತ್ತಿಲ್ಲ? ಕಪಿ ಮತ್ತು ಮೊಸಳೆ, ಮೊಲ ಮತ್ತು ಸಿಂಹ,ಧರ್ಮಬುದ್ಧಿ ಮತ್ತು ಪಾಪಬುದ್ಧಿ, ಮೊದಲಾದ ಕಥೆಗಳು ನಮಗೆ ಬಾಲ್ಯದಿಂದಲೂ ಚಿರಪರಿಚಿತ! ಅಷ್ಟೇ ಅಲ್ಲದೇ, ಭಾರತದ ಈ ಅದ್ಭುತ ಕೃತಿ, ಸಂಸ್ಕೃತದಲ್ಲಿ ರಚಿತವಾಗಿದ್ದರೂ ವಿಶ್ವದ ಐವತ್ತಕ್ಕೂ ಹೆಚ್ಚು ಭಾಷೆಗಳಿಗೂ ಅನುವಾದವಾಗಿದ್ದು, ಅತ್ಯಂತ ಪ್ರಸಿದ್ಧವಾಗಿದೆ! ಇಷ್ಟಾದರೂ ಪಂಚತಂತ್ರವನ್ನು ಆಮೂಲಾಗ್ರವಾಗಿ ಓದಿರುವವರು ಬಹಳ ಕಡಿಮೆ ಎಂದರೆ ಉತ್ಪ್ರೇಕ್ಷೆಯಲ್ಲ! ಸಂಸ್ಕೃತ ಉಪನ್ಯಾಸಕರೂ ಮೂಲ ಸಂಸ್ಕೃತ ಗ್ರಂಥವನ್ನು ಸಮಗ್ರವಾಗಿ ಓದಿರುವುದು ವಿರಳವೆಂದೇ ಹೇಳಬಹುದು! ಪಂಚತಂತ್ರದ ಹೆಸರನ್ನು ಎಲ್ಲರೂ ಕೇಳಿದ್ದರೂ ಪಂಚತಂತ್ರ ಎಂದರೆ ಏನು, ಅದರ ಐದು ತಂತ್ರಗಳು ಯಾವುವು ಎಂದು ತಿಳಿದಿರುವವರು ಬಹಳ ಕಡಿಮೆ! ಬಾಲ್ಯದಲ್ಲಿ ಕೇಳಿದ ಅಥವಾ ಓದಿದ ಕೆಲವು ಕಥೆಗಳನ್ನು ಬಿಟ್ಟರೆ, ಈ ಗ್ರಂಥದ ಸ್ವರೂಪ ಏನು, ಇದರಲ್ಲಿ ಎಷ್ಟು ಕಥೆಗಳಿವೆ, ಇದರ ಉದ್ದೇಶವೇನು ಎಂದು ಬಹುತೇಕ ಜನರಿಗೆ ತಿಳಿದಿಲ್ಲ.ಹಾಗಾಗಿ ಇದೊಂದು ಮಕ್ಕಳ ಪುಸ್ತಕವಾಗಿಯಷ್ಟೇ ಸೀಮಿತವಾಗಿದೆ.ಹಾಗಾಗಿ, ದೊಡ್ಡವರಿಗೆ ಪಂಚತಂತ್ರದ ಯಥಾವತ್ತಾದ ಕನ್ನಡಾನುವಾದದ ಅವಶ್ಯಕತೆ ಇದೆ. ಆ ಆವಶ್ಯಕತೆಯನ್ನು ಪ್ರಸ್ತುತ ಪಂಚತಂತ್ರದ ಕನ್ನಡಾನುವಾದ ಗ್ರಂಥ ಪೂರೈಸುತ್ತದೆ.ಇದನ್ನು ಯಶಸ್ವಿಯಾಗಿ ಭರತ್ ಬಿ.ರಾವ್ ಎಂಬುವರು ಮಾಡಿದ್ದಾರೆ.ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಇವರು ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದು ಪಂಚತಂತ್ರವನ್ನು ಆಮೂಲಾಗ್ರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
       ಪಂಚತಂತ್ರದಲ್ಲಿ ಅನೇಕ ಆವೃತ್ತಿಗಳಿದ್ದು, ವಿಷ್ಣುಶರ್ಮನ ಪಂಚತಂತ್ರವು ಅತ್ಯಂತ ಜನಪ್ರಿಯವಾಗಿದೆ.ಪಂಚತಂತ್ರವೆಂದರೆ, ಮಿತ್ರಭೇದ (ಮಿತ್ರರ ನಡುವೆ ಒಡಕುಂಟು ಮಾಡುವುದು), ಮಿತ್ರಸಂಪ್ರಾಪ್ತಿ(ಮಿತ್ರರನ್ನು ಸಂಪಾದಿಸುವುದು), ಕಾಕೋಲೂಕೀಯ (ಕಾಗೆಗಳ ಮತ್ತು ಗೂಬೆಗಳ ವೈರದ ಕಥನ), ಲಬ್ಧಪ್ರಣಾಶ (ಲಭಿಸಿದ್ದನ್ನು ಕಳೆದುಕೊಳ್ಳುವುದು), ಮತ್ತು ಅಪರೀಕ್ಷಿತಕಾರಕ (ಪರೀಕ್ಷಿಸದೇ ದುಡುಕಿ ಕಾರ್ಯಪ್ರವೃತ್ತನಾಗುವುದು) ಎಂಬ ಐದು ತಂತ್ರಗಳು.ಪಂಚತಂತ್ರವೆಂಬುದು ಒಂದು ರಾಜನೀತಿಯ ಗ್ರಂಥವಾಗಿದ್ದು, ರಾಜರು ಹೇಗೆ ರಾಜನೀತಿಯನ್ನು ಸಂದರ್ಭಕ್ಕೆ ತಕ್ಕಂತೆ ಬಳಸಬೇಕೆಂದು ಕಥೆಗಳ ಮೂಲಕ ಹೇಳುತ್ತದೆ.ಆದರೆ ಇದರ ಮೂಲ ಉದ್ದೇಶ ಧರ್ಮ ಅಥವಾ ಒಳ್ಳೆಯತನವನ್ನು ಬೆಳೆಸುವುದೇ ಆಗಿದೆ.ಆದರೆ ಅಷ್ಟಲ್ಲದೇ ದುಷ್ಟರ, ನೀಚರ ಕೃತ್ರಿಮತೆಯಿಂದ ಹೇಗೆ ತಪ್ಪಿಸಿಕೊಳ್ಳಬೇಕು ಮತ್ತು ಜಾಣರಾಗಿರಬೇಕು ಎಂದೂ ಹೇಳುತ್ತದೆ.ಹೀಗೆ ಇದು ಜನಸಾಮಾನ್ಯರೂ ನಿತ್ಯಜೀವನಕ್ಕೆ ಬಳಸಬಹುದಾದ ನೀತಿಗಳನ್ನುಳ್ಳ ಗ್ರಂಥವಾಗಿದೆ.ಇದನ್ನು ಓದಿದವನನ್ನು ಇಂದ್ರನು ಕೂಡ ಸೋಲಿಸಲಾರ ಎಂದು ಇದರಲ್ಲಿ ಹೇಳಲಾಗಿದೆ.ಇದರ ಮುಖ್ಯ ಕಥೆಯೆಂದರೆ ಅಮರಶಕ್ತಿ ಎಂಬ ರಾಜನ ಮೂವರು ಮಕ್ಕಳು ವಿದ್ಯಾಭ್ಯಾಸ ಮಾಡದೇ ದಡ್ಡರಾಗಿ ಬೆಳೆಯಲು, ಹಾಗೂ ರಾಜನು ಚಿಂತಾಕ್ರಾಂತನಾಗಲು, ವಿಷ್ಣುಶರ್ಮನೆಂಬ ವೃದ್ಧ ಪಂಡಿತನು ಅವರನ್ನು ತನಗೊಪ್ಪಿಸಿದರೆ ಆರು ತಿಂಗಳುಗಳಲ್ಲಿ ಪಂಡಿತರನ್ನಾಗಿ ಮಾಡುವುನೆಂದನು.ಅಂತೆಯೇ ರಾಜನು ಅವರಿಗೆ ತನ್ನ ಮಕ್ಕಳನ್ನು ಒಪ್ಪಿಸಲು, ಅವನು ಅವರಿಗೆ ತಾನು ರಚಿಸಿದ ಪಂಚತಂತ್ರದ ಕಥೆಗಳನ್ನು ಹೇಳಿ ಅವರನ್ನು ರಾಜನೀತಿಜ್ಞರನ್ನಾಗಿ ಮಾಡಿದನು.ಪ್ರಸ್ತುತ ಗ್ರಂಥವು ವಿಷ್ಣುಶರ್ಮನ ಆವೃತ್ತಿಯ ಅನುವಾದವಾಗಿದ್ದು, ಪ್ರತಿ ತಂತ್ರದಲ್ಲೂ ಮುಖ್ಯ ಕಥೆ ಹಾಗೂ ಉಪಕಥೆಗಳು ಸೇರಿ ಒಟ್ಟು ಎಪ್ಪತ್ತು ಕಥೆಗಳಿವೆ.ವಿಷ್ಣುಶರ್ಮನ ಆವೃತ್ತಿಯಲ್ಲದೇ, ಪಂಚತಂತ್ರದ ಅನೇಕ ಆವೃತ್ತಿಗಳಿದ್ದು, ಕಾಶ್ಮೀರದ ತಂತ್ರಾಖ್ಯಾಯಿಕಾ ಅತ್ಯಂತ ಪ್ರಚೀನವಾದುದೆಂದು ಹೇಳಲಾಗಿದೆ.ಅದಲ್ಲದೇ ವಸುಭಾಗಭಟ್ಟನ ಆವೃತ್ತಿಯೊಂದಿದ್ದು, ಅದು ಸಂಸ್ಕೃತದಲ್ಲಿ ಲುಪ್ತವಾಗಿದ್ದರೂ ಅದೃಷ್ಟವಶಾತ್ ಹಳಗನ್ನಡದಲ್ಲಿ ದುರ್ಗಸಿಂಹನು ಮಾಡಿರುವ ಅನುವಾದವಿದೆ! ಇದರ ಇನ್ನೊಂದು ರೂಪಾಂತರ ಸಂಸ್ಕೃತ ಹಾಗೂ ತಮಿಳಿನಲ್ಲಿ ಇರುವ ತಂತ್ರೋಪಾಖ್ಯಾನ ಎಂಬ ಗ್ರಂಥವಾಗಿದ್ದು, ಇದರ ಆಧಾರದಿಂದ ಥೈಲ್ಯಾಂಡ್, ಜಾವಾ, ಬಾಲಿಗಳ ಪಂಚತಂತ್ರ ಆವೃತ್ತಿಗಳು ರಚಿತವಾಗಿವೆ.ಪಂಚತಂತ್ರವನ್ನು ಪರ್ಷಿಯನ್ ಭಾಷೆಗೆ ಕವಿಯೊಬ್ಬ ಅನುವಾದ ಮಾಡಲು, ಅದರಿಂದ ಅರೇಬಿಯಾ ಭಾಷೆಗೆ ಕಲಿಲ ವಾ ದಿಮ್ನ ಎಂಬ ಹೆಸರಿಂದ ಅನುವಾದವಾಗಿ ಅದರ ಮೂಲಕ ಅದು ಪಿಳ್ಪಾಯ್ ಕಥೆಗಳು ಅಥವಾ ಬಿಡ್ಪಾಯ್ ಕಥೆಗಳೆಂದು ಐರೋಪ್ಯ ಭಾಷೆಗಳಿಗೆ ಅನುವಾದವಾಯಿತು.ಕಲಿಲ ಮತ್ತು ದಿಮ್ನ ಎಂದರೆ ಪಂಚತಂತ್ರದ ಕಥೆಗಳ ಎರಡು ನರಿಗಳಾದ ಕರಟಕ ಮತ್ತು ದಮನಕ ಎಂಬ ಪಾತ್ರಗಳು.ಬಿಡ್ಪಾಯ್ ಎಂದರೆ ವಿದ್ಯಾಪತಿ ಎಂದು ಹೆಸರಾದ ವಿಷ್ಣುಶರ್ಮನೇ ಆಗಿದ್ದಾನೆ.
    ವಿಷ್ಣುಶರ್ಮನ ಈ ಸಂಸ್ಕೃತ ಆವೃತ್ತಿಯನ್ನು ಭರತ್ ಬಿ ರಾವ್ ಕನ್ನಡಕ್ಕೆ ಬಹಳ ಸೊಗಸಾಗಿ, ಸುಲಲಿತವಾಗಿ ಅನುವಾದಿಸಿದ್ದಾರೆ.ಮೂಲ ಪಂಚತಂತ್ರದಲ್ಲಿ ಅನೇಕ ಸುಭಾಷಿತ ಶ್ಲೋಕಗಳಿದ್ದು ಕಥೆಗಳು ಸರಳವಾದ ಗದ್ಯದಲ್ಲಿದೆ.ಭರತ್ ಅವರು ಎಲ್ಲವನ್ನೂ ಕನ್ನಡ ಗದ್ಯದಲ್ಲಿ ಸುಲಭವಾಗಿ ಓದುವಂತೆ ಅನುವಾದ ಮಾಡಿದ್ದಾರೆ.ಬೇಕಿದ್ದರೆ ಸಂಸ್ಕೃತ ಮೂಲ ಗ್ರಂಥವನ್ನು ಜೊತೆಗಿಟ್ಟುಕೊಂಡು ಈ ಗ್ರಂಥವನ್ನು ಹೋಲಿಸಿಕೊಂಡು ಓದಬಹುದು.ಎರಡು ಮುದ್ರಣಗಳಾಗಿರುವ ಈ ಗ್ರಂಥವನ್ನು ಎಲ್ಲರೂ ಕೊಂಡು ಓದಬೇಕು.
ಲೇಖಕರು ಭರತ್ ಬಿ.ರಾವ್
ಪ್ರಕಾಶಕರು: ಸ್ವಯಂಪ್ರಕಾಶನ 
ಪುಟಗಳು:೩೦೨
ಬೆಲೆ:೨೭೫/-

ಭಾನುವಾರ, ನವೆಂಬರ್ 19, 2023

ಪರೋಪಕಾರದ ಸ್ಮರಣೆ



ನಾವು ಮಹಾಭಾರತವನ್ನು ಆಳವಾಗಿ ಓದುತ್ತಿದ್ದಂತೆ, ನಮಗೆ ಹಲವಾರು ನೀತಿಭೋಧಕ ಹಾಗೂ ರಂಜನೀಯ ಉಪಕಥೆಗಳು ಸಿಗುತ್ತವೆ. ಅಂಥ ಒಂದು ಕಥೆಯನ್ನು ಈಗ ನೋಡೋಣ.ಇದನ್ನು ಮಾರ್ಕಂಡೇಯ ಮಹರ್ಷಿಗಳು ಪಾಂಡವರಿಗೆ ಹೇಳುತ್ತಾರೆ.ನಾವು ಕೀರ್ತಿಯನ್ನು ಗಳಿಸಬೇಕೆಂದರೆ ಸಾಧ್ಯವಾದಷ್ಟು ಲೋಕೋಪಯೋಗಿ ಪರೋಪಕಾರಿ ಕಾರ್ಯಗಳನ್ನು ಮಾಡಬೇಕೆಂದು ಇದು ಸೂಚಿಸುತ್ತದೆ.
      ಹಿಂದೆ, ಇಂದ್ರದ್ಯುಮ್ನನೆಂಬ ಒಬ್ಬ ಮಹಾನ್ ರಾಜನಿದ್ದನು.ಅವನು ತನ್ನ ಆಯುಷ್ಯ ಮುಗಿದ ಬಳಿಕ, ತಾನು ಮಾಡಿದ್ದ ಪುಣ್ಯಕಾರ್ಯಗಳ ಫಲಗಳನ್ನು ಅನುಭವಿಸಲು ಸ್ವರ್ಗಕ್ಕೆ ಹೋದ.ಅಲ್ಲಿ ಅವನು ಸಾಕಷ್ಟು ಕಾಲ ಸುಖವನ್ನು ಅನುಭವಿಸಿದ ಬಳಿಕ, ಅವನ ಪುಣ್ಯ ಕ್ಷಯವಾಗಲು, ಅವನು ಪುನಃ ಭೂಮಿಗೆ ಬಿದ್ದ! ಆಗ ದೇವತೆಗಳು ಅವನಿಗೊಂದು ನಿಬಂಧನೆ ಹಾಕಿದರು, "ಭೂಮಿಯ ಮೇಲೆ ಯಾರಿಗಾದರೂ ನಿನ್ನ ಸ್ಮರಣೆಯಿದ್ದರೆ ನೀನು ಸ್ವರ್ಗಕ್ಕೆ ಹಿಂದಿರುಗಬಹುದು!"
     ಆಗ ರಾಜನು, ಮಾರ್ಕಂಡೇಯ ಮಹರ್ಷಿಗಳು ಚಿರಂಜೀವಿಗಳಾದುದರಿಂದ ಅವರು ಅತಿ ದೀರ್ಘ ಕಾಲ ಬದುಕಿದ್ದಿರಬಹುದೆಂದು ಭಾವಿಸಿ ಅವರ ಬಳಿಗೆ ಹೋದನು.ಹಾಗೆ ಹೋಗಿ ಅವರನ್ನು, "ನಾನಾರೆಂದು ಬಲ್ಲಿರಾ? ಅಥವಾ ಇಂದ್ರದ್ಯುಮ್ನನೆಂಬ ನನ್ನ ಹೆಸರನ್ನು ಕೇಳಿರುವಿರಾ?" ಎಂದು ಕೇಳಿದನು.ಆದರೆ ಮಾರ್ಕಂಡೇಯರು, " ನಾನು ಒಂದು ಕಡೆ ಹೆಚ್ಚು ಕಾಲ ನಿಲ್ಲದ ಕಾರಣ, ನಿನ್ನ ಬಗ್ಗೆ ತಿಳಿದಿಲ್ಲ!" ಎಂದರು. ಅದಕ್ಕೆ ರಾಜನು, "ನಿಮಗಿಂತ ಹಿರಿಯರನ್ನಾರಾದರೂ ಬಲ್ಲಿರಾ?" ಎಂದು ಕೇಳಿದನು. ಆಗ ಮಹರ್ಷಿಗಳು, " ನನಗೆ ಹಿಮಾಲಯದಲ್ಲಿರುವ ಪ್ರಾವಾರಕರ್ಣನೆಂಬ ಗೂಬೆ ಗೊತ್ತು! ಅದು ನನಗಿಂತ ಹಿರಿಯ ಜೀವಿ!" ಎಂದರು.ಆಗ ರಾಜನು ತನ್ನ ಶಕ್ತಿಯಿಂದ ಕುದುರೆಯಾಗಿ ಮಾರ್ಪಟ್ಟು ಮಹರ್ಷಿಗಳನ್ನು ತನ್ನ ಬೆನ್ನ ಮೇಲೆ ಹತ್ತಿಸಿಕೊಂಡು ಹಿಮಾಲಯದ ಆ ಗೂಬೆಯ ಬಳಿಗೆ ಹೋದನು.ಅವನು ಗೂಬೆಯನ್ನು ಅದೇ ಪ್ರಶ್ನೆ ಕೇಳಲು, ಅದೂ ತನಗೆ ರಾಜನು ತಿಳಿಯದೆಂದು ಹೇಳಿ, ತನಗಿಂತ ಹಿರಿಯನಾದ ನಾಡೀಜಂಘನೆಂಬ ಒಂದು ಕೊಕ್ಕರೆಯನ್ಪು ಕೇಳಬಹುದೆಂದಿತು.
     ಎಲ್ಲರೂ ಕೆರೆಯ ಬಳಿಯಿದ್ದ ಆ ನಾಡೀಜಂಘನೆಂಬ ಕೊಕ್ಕರೆಯ ಬಳಿಗೆ ಹೋದರು.ರಾಜನು ಕೊಕ್ಕರೆಯನ್ಪು ಅದೇ ಪ್ರಶ್ನೆ ಕೇಳಲು, ಅದೂ ರಾಜನು ತನಗೆ ಗೊತ್ತಿಲ್ಲವೆಂದು ಹೇಳುತ್ತಾ, ಅದೇ ಕೆರೆಯ ಆಳದಲ್ಲರುವ ಆಕುಪಾರನೆಂಬ ತನಗಿಂತ ಹಿರಿಯನಾದ ಆಮೆಯನ್ನು ಕೇಳಬಹುದೆಂದಿತು. ರಾಜನು ಒಪ್ಪಲು, ಕೊಕ್ಕರೆಯು ಆಮೆಯನ್ನು ಕೂಗಿ ಕರೆಯಿತು. ಅದು ಹೊರಬರಲು, ಎಲ್ಲರೂ ರಾಜನ ಬಗ್ಗೆ ಕೇಳಿದರು.ರಾಜಾ ಇಂದ್ರದ್ಯುಮ್ನನ ಹೆಸರು ಕೇಳಿದ ಕೂಡಲೇ ಆಮೆಯ ಕಣ್ಣುಗಳಲ್ಲಿ ನೀರೂರಿತು! ಅದು ಮೂರ್ಛೆ ಬೀಳುವಂತಾಯಿತು! ಅನಂತರ ಅದು ಚೇತರಿಸಿಕೊಂಡು ಹೇಳಿತು , "ಆ ಮಹಾನ್ ರಾಜನ ಬಗ್ಗೆ ಯಾರಿಗೆ ಗೊತ್ತಿಲ್ಲ? ಅವನು ಅದೆಷ್ಟು ಯಜ್ಞ ಯಾಗಗಳನ್ನು ಮಾಡಿ ಅದೆಷ್ಟು ಜನರಿಗೆ ದಾನ ಮಾಡಿಲ್ಲ? ಈ ಕೆರೆ ಉಂಟಾಗಿದ್ದಾದರೂ ಹೇಗೆ ಗೊತ್ತೇ? ಅವನು ಬ್ರಾಹ್ಣಣರಿಗೆ ದಾನ ಮಾಡಿದ ಸಾವಿರಾರು ಗೋವುಗಳ ಗೊರಸುಗಳ ಹಳ್ಳಗಳಿಂದ ಆದುದು ಈ ಕೆರೆ! ಹಾಗಾಗಿಯೇ ಈ ಸರೋವರಕ್ಕೆ ಇಂದ್ರದ್ಯುಮ್ನ ಸರೋವರವೆಂದೇ ಹೆಸರಾಗಿದೆ! ಇದು ನಮ್ಮಂಥ ಎಷ್ಟೋ ಜಲರಗಳಿಗೆ ಮನೆಯಾಗಿದೆ!"
     ಆಮೆಯು ಹೀಗೆ ಹೇಳಿದ ಕೂಡಲೇ, ಆಕಾಶದಲ್ಲಿ ಒಂದು ದಿವ್ಸ ವಿಮಾನ ಕಾಣಿಸಿಕೊಂಡಿತು! ಅದು ಭೂಮಿಗೆ ಇಳಿದು ಬರಲು, ಒಂದು ಅಶರೀರವಾಣಿಯಾಯಿತು," ಎಲೈ ರಾಜನೇ! ಈ ವಿಮಾನವನ್ನು ಹತ್ತು! ಒಬ್ಬ ಮನುಷ್ಯನ ಒಳ್ಳೆಯ ಕಾರ್ಯಗಳನ್ನು ಎಲ್ಲಿಯವರೆಗೆ ಜನರು ನೆನೆಸಿಕೊಳ್ಳುವರೋ, ಅಲ್ಲಿಯವರೆಗೆ ಅವನು ಸ್ವರ್ಗದಲ್ಲಿರುತ್ತಾನೆ! ಅಂತೆಯೇ, ಎಲ್ಲಿಯವರೆಗೆ ಒಬ್ಬ ಮನುಷ್ಯನ ದುಷ್ಕೃತ್ಯಗಳನ್ನು ಜನರು ನೆನೆಸಿಕೊಳ್ಳುವರೋ ಅಲ್ಲಿಯವರೆಗೆ ಅವನು ನರಕದಲ್ಲಿರುತ್ತಾನೆ!"  
      ರಾಜನು ಅದರಂತೆ ವಿಮಾನ ಹತ್ತಿ ಪುನಃ ಸ್ವರ್ಗಕ್ಕೆ ಹೋದನು.
    ಈ ಕಥೆಯ ತಾತ್ಪರ್ಯವಿಷ್ಟೇ! ನಾವು ಸದಾ ಕಾಲ ಜನರು ನಮ್ಮನ್ನು ನೆನೆಸಿಕೊಳ್ಳುವಂಥ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರಬೇಕು.
                             
      
     


ಸೋಮವಾರ, ಸೆಪ್ಟೆಂಬರ್ 18, 2023

ಗಣೇಶನನ್ನು ಕುರಿತ ರಸಪ್ರಶ್ನೆ

ಗಣೇಶಚತುರ್ಥಿಯ ಪ್ರಯುಕ್ತ ಒಂದು ಸಣ್ಣ ರಸಪ್ರಶ್ನೆ

೧.ಯಾವ ಪುರಾಣದ ಪ್ರಕಾರ ಗಣೇಶನು ಶ್ರೀ ಕೃಷ್ಣನ ಅವತಾರ?
೨.ಪತಿಯ, ಅಂದರೆ ನಾಯಕನಿಲ್ಲದೇ ಕೇವಲ ನಾಯಕಿಯಿಂದ (ಪಾರ್ವತಿಯಿಂದ) ಹುಟ್ಟಿದ ಕಾರಣ, ಗಣೇಶನಿಗೆ ಬಂದ ಹೆಸರೇನು?
೩.ಪದ್ಮಪುರಾಣದ ಪ್ರಕಾರ, ಪಾರ್ವತಿಯು ಒಂದು ಬೊಂಬೆಯನ್ನು ಮಾಡಿ ಗಂಗೆಯಲ್ಲಿ ಬಿಡಲು, ಅದಕ್ಕೆ ಜೀವ ಬಂದು, ಗಣೇಶನಾಯಿತು.ಹಾಗಾಗಿ, ಪಾರ್ವತಿ ಮತ್ತು ಗಂಗೆ, ಇಬ್ಬರು ತಾಯಂದಿರನ್ನು ಪಡೆದ ಗಣೇಶನಿಗೆ ಬಂದ ಹೆಸರೇನು?
೪.ಸಂಪೂರ್ಣವಾಗಿ ಗಣೇಶನಿಗೆಂದೇ ಇರುವ ಎರಡು ಪುರಾಣಗಳು ಯಾವುವು?
೫.ಯಾವ ರಾಕ್ಷಸನನ್ನು ನುಂಗಿದ ಕಾರಣ ಗಣೇಶನಿಗೆ ತಾಪವುಂಟಾಗಿ ಗರಿಕೆ ಹುಲ್ಲನ್ನು ಹಾಕಿ ತಾಪವನ್ನು ಆರಿಸಲಾಯಿತು?
೬.ಯಾವ ಗಂಧರ್ವನು ಶಾಪದಿಂದ ಇಲಿಯಾಗಿ ಗಣೇಶನ ವಾಹನವಾದನು?
೭.ಗಣೇಶನು ಯಾವ ಋಷಿಗೆ ಯಾವ ಗ್ರಂಥವನ್ನು ಕೇಳುತ್ತಾ ಬರೆದುಕೊಟ್ಟನು?
೮.ಗಣೇಶನ ಇಬ್ಬರು ಪತ್ನಿಯರು ಯಾರೆಂದು ಹೇಳಲಾಗಿದೆ?
೯.ಗಣೇಶನ ಇಬ್ಬರು ಮಕ್ಕಳು ಯಾರೆಂದು ಹೇಳಲಾಗಿದೆ?
೧೦.ಯಾವ ಸಾಹಿತ್ಯದಲ್ಲಿ ಬ್ರಹ್ಮಣಸ್ಪತಿ ಎಂದು ಗಣಪತಿಯ ಉಲ್ಲೇಖ ಇದೆ?
೧೧.ಗಣಪತಿಯ ಹೆಸರಿನಲ್ಲಿರುವ ಉಪನಿಷತ್ತು ಯಾವುದು?
೧೨.ಗಣಪತಿಯ ಸ್ತ್ರೀ ರೂಪಗಳು ಯಾವುವು?
೧೩.ಯಾವ ರಾಕ್ಷಸನಿಂದ ಗಣೇಶನು ವಟುರೂಪದಲ್ಲಿ ಬಂದು ಆತ್ಮಲಿಂಗವನ್ನು ತೆಗೆದುಕೊಂಡು ಗೋಕರ್ಣ ಕ್ಷೇತ್ರದಲ್ಲಿ ಸ್ಥಾಪಿಸಿದನು?
೧೪.ಗಣಪತಿಯ ಭಕ್ತರ ಯಾವ ಪಂಗಡ ಹಿಂದೆ ಇತ್ತು?
೧೫.ತಾಂತ್ರಿಕ ಪಂಗಡದವರು ಪೂಜಿಸುವ ಗಣೇಶನ ಕೆಲವು ರೂಪಗಳು ಯಾವುವು

ಗಣೇಶಚತುರ್ಥಿಯ ರಸಪ್ರಶ್ನೆ ಉತ್ತರಗಳು

೧.ಬ್ರಹ್ಮವೈವರ್ತಪುರಾಣ-ಇದರ ಕಥೆಯಂತೆ ಶಿವ,ಪಾರ್ವತಿಯರು ಶ್ರೀ ಕೃಷ್ಣನ ಕುರಿತ ವ್ರತವನ್ನು ಆಚರಿಸಿದುದರಿಂದ ಶ್ರೀ ಕೃಷ್ಣನೇ ಗಣೇಶನಾಗಿ ಅವತರಿಸಿದನು.
೨.ವಿನಾಯಕ
೩.ದ್ವೈಮಾತುರ
೪.ಗಣೇಶಪುರಾಣ ಮತ್ತು ಮುದ್ಗಲಪುರಾಣ
೫.ಅನಲಾಸುರ
೬.ಕ್ರೌಂಚ- ಇವನು ವಾಮದೇವ ಋಷಿಯ ಪಾದವನ್ನು ತುಳಿದ ಕಾರಣ, ಅವನಿಂದ ಶಾಪಗ್ರಸ್ತನಾಗಿ ಇಲಿಯಾಗಿ ಅನಂತರ ಗಣೇಶನ ವಾಹನವಾದನು.
೭.ವೇದವ್ಯಾಸರು, ಮಹಾಭಾರತ
೮.ಸೀದ್ಧಿ, ಬುದ್ಧಿ (ರಿದ್ಧಿ)
೯.ಕ್ಷೇಮ, ಲಾಭ
೧೦.ಋಗ್ವೇದ
೧೧.ಗಣಪತಿ ಅಥರ್ವಶೀರ್ಷ ಉಪನಿಷತ್ತು
೧೨.ವಿನಾಯಕಿ, ವ್ಯಾಘ್ರಪಾದ ಗಣೇಶಾನಿ
೧೩.ರಾವಣ
೧೪.ಗಾಣಾಪತ್ಯ
೧೫.ಶಕ್ತಿಗಣಪತಿ, ಹೇರಂಬಗಣಪತಿ,ಉಚ್ಛಿಷ್ಟ ಗಣಪತಿ, ಲಕ್ಷ್ಮೀ ಗಣಪತಿ, ಮಹಾಗಣಪತಿ, ಇತ್ಯಾದಿ

ಶುಕ್ರವಾರ, ಸೆಪ್ಟೆಂಬರ್ 1, 2023

ಸಂಸ್ಕೃತ ಅಂತರಾಲಾಪಗಳು


ಸಂಸ್ಕೃತ ಅಂತರಾಲಾಪಗಳು

ಹಿಂದಿನ ಒಂದು ಸಂಚಿಕೆಯಲ್ಲಿ ನಾವು ಸಂಸ್ಕೃತದಲ್ಲಿನ ಪ್ರಹೇಲಿಕೆಗಳ ಬಗ್ಗೆ ಪರಿಚಯಿಸಿಕೊಂಡೆವು.ಇವು ಒಗಟುಗಳಾಗಿದ್ದು ಇಂಥವು ಎಲ್ಲಾ ಭಾಷೆಗಳಲ್ಲೂ ಸಿಗುತ್ತವೆ.ಆದರೆ ಸಂಸ್ಕೃತದಲ್ಲಿ ಇನ್ನೂ ಹಲವಾರು ಬಗೆಯ ಸಾಹಿತ್ಯ ಕ್ರೀಡೆಗಳಿವೆ.ಇವು, ನಾವು ಆಂಗ್ಲ ಭಾಷೆಯಲ್ಲಿ ಪಜಲ್ಸ್(Puzzles) ಎನ್ನುವೆವಲ್ಲವೇ? ಅಂಥವು! ಪ್ರಹೇಲಿಕೆಗಳೂ ಸೇರಿದಂತೆ ಇಂಥವನ್ನು ಚಿತ್ರಸೂಕ್ತಿಗಳೆಂದು ಕರೆಯುತ್ತಾರೆ.ಈ ಸಂಚಿಕೆಯಲ್ಲಿ ಅಂಥ ಒಂದು ಚಿತ್ರಸೂಕ್ತಿಯನ್ನು ಪರಿಚಯಿಸಿಕೊಳ್ಳೋಣ.ಅದು ಅಂತರಾಲಾಪ.
     ಅಂತರಾಲಾಪಗಳಲ್ಲಿ , ಶ್ಲೋಕಗಳಲ್ಲಿ ವಿವಿಧ ಪ್ರಶ್ನೆಗಳಿರುತ್ತವೆ ಹಾಗೂ ಆ ಶ್ಲೋಕಗಳಲ್ಲೇ ಉತ್ತರಗಳಿರುತ್ತವೆ.ಮೊದಲ ಮೂರು ಪಾದಗಳಲ್ಲಿ ಪ್ರಶ್ನೆಗಳಿದ್ದರೆ ಕಡೆಯ ಪಾದದಲ್ಲಿ ಉತ್ತರಗಳಿರುತ್ತವೆ.ಕೊನೆಯ ಪಾದವನ್ನು ಮಾತ್ರ ಹೇಳಿದರೆ ಅದು ವ್ಯಾಕರಣಬದ್ಧವಾಗಿದ್ದರೂ ಅಸಂಬದ್ಧ ಅರ್ಥ ಹೊಂದಿರುತ್ತದೆ.ಕ್ರೀಡೆಗಾಗಿ ಈ ಒಂದು ಪಾದವನ್ನು ಮಾತ್ರ ಕೊಟ್ಟರೆ ಅದೊಂದು ಸಮಸ್ಯೆಯಾಗುತ್ತದೆ.ಆಗ ಇತರ ಮೂರು ಪಾದಗಳನ್ನು ಆ ನಾಲ್ಕನೆಯ ಪಾದಕ್ಕೆ ಸರಿಹೊಂದುವ ಪ್ರಶ್ನೆಗಳಂತೆ ರಚಿಸಿ ಸಮಸ್ಯಾಪೂರ್ಣ ಮಾಡಬೇಕು.
     ಈಗ ಕೆಲವು ಅಂತರಾಲಾಪಗಳನ್ನು ನೋಡೋಣ.
೧.ಕಸ್ತೂರೀ ಜಾಯತೇ ಕಸ್ಮಾತ್ಕೋ ಹಂತಿ ಕರಿಣಾಂ ಕುಲಮ್/
    ಕಿಂ ಕುರ್ಯಾತ್ಕಾತರೋ ಯುದ್ಧೇ ಮೃಗಾತ್ಸಿಂಹ:         ಪಲಾಯನಮ್//
ಅನುವಾದ :  ಕಸ್ತೂರಿಯು ಯಾವುದರಿಂದ ಹುಟ್ಟುತ್ತದೆ? ಆನೆಗಳ ಕುಲವನ್ನು ಯಾರು ಸಂಹರಿಸುತ್ತಾರೆ? ಯುದ್ಧದಲ್ಲಿ ಭಯಗೊಂಡಿರುವವನು ಏನು ಮಾಡುತ್ತಾನೆ? ಮೃಗದಿಂದ, ಸಿಂಹ, ಪಲಾಯನ.
ವಿವರಣೆ: ಇಲ್ಲಿ 'ಮೃಗಾತ್ಸಿಂಹ: ಪಲಾಯನಮ್' ಎಂದಷ್ಟೇ ಹೇಳಿದರೆ 'ಮೃಗದಿಂದ ಸಿಂಹಪಲಾಯನ ' ಎಂಬ ಸಮಸ್ಯೆ ಕೊಟ್ಟಂತಾಗುತ್ತದೆ.ಆಗ ಇತರ ಮೂರು ಪಾದಗಳನ್ನು ರಚಿಸಿ ಇದರೊಂದಿಗೆ ಹೊಂದುವಂತೆ ಮಾಡಬೇಕು.ಅಂದರೆ, ಆ ಮೂರು ಪಾದಗಳಲ್ಲಿ ಪ್ರಶ್ನೆಗಳು ಬರುವಂತೆ ಮಾಡಿ ಈ ಪದಗುಚ್ಛದ ಪದಗಳು ಆ ಒಂದೊಂದು ಪ್ರಶ್ನೆಗೂ ಉತ್ತರವಾಗಬೇಕು.ಇಲ್ಲಿನ ಶ್ಲೋಕದಲ್ಲಿ, ಕಸ್ತೂರೀ ಜಾಯತೇ ಕಸ್ಮಾತ್( ಕಸ್ತೂರಿ ಯಾವುದರಿಂದ ಹುಟ್ಟುತ್ತದೆ) ಎಂಬ ಪ್ರಶ್ನೆಗೆ ಮೃಗಾತ್ (ಜಿಂಕೆಯಿಂದ) ಎಂಬ ಉತ್ತರ ಬರುತ್ತದೆ.ಕೋ ಹಂತಿ ಕರಿಣಾಂ ಕುಲಮ್ (ಆನೆಗಳ ಕುಲವನ್ನು ಯಾರು ಕೊಲ್ಲುತ್ತಾನೆ/ಕೊಲ್ಲುತ್ತದೆ) ಎಂಬ ಪ್ರಶ್ನೆಗೆ ಸಿಂಹ:(ಸಿಂಹ) ಎಂಬ ಉತ್ತರ, ಮತ್ತು ಕಿಂ ಕುರ್ಯಾತ್ಕಾತರೋ ಯುದ್ಧೇ (ಯುದ್ಧದಲ್ಲಿ ಭಯಗೊಂಡಿರುವವನು ಏನು ಮಾಡುತ್ತಾನೆ) ಎಂಬ ಪ್ರಶ್ನೆಗೆ ಪಲಾಯನಂ (ಪಲಾಯನ) ಎಂಬ ಉತ್ತರ ಬರುತ್ತವೆ.ಹೀಗೆ ಅಂತರಾಲಾಪ ಸಮಸ್ಯೆಗಳಲ್ಲಿ ಶ್ಲೋಕದಲ್ಲೇ ಪ್ರಶ್ನೆ ಮತ್ತು ಉತ್ತರ ಎರಡೂ ಇರುತ್ತವೆ.
೨.ಕ: ಖೇ ಚರತಿ ಕಾ ರಮ್ಯಾ ಕಾ ಜಪ್ಯಾ ಕಿಂ ವಿಭೂಷಣಮ್/
   ಕೋ ವಂದ್ಯ: ಕೀದೃಶೀ ಲಂಕಾ ವೀರಮರ್ಕಟಕಂಪಿತಾ//
   ಅನುವಾದ: ಆಕಾಶದಲ್ಲಿ ಯಾವುದು ಚಲಿಸುತ್ತದೆ? ಯಾರು.   ರಮ್ಯಳಾಗಿದ್ದಾಳೆ? ಯಾವುದು ಜಪಿಸತಕ್ಕದ್ದು? ಯಾವುದು ಭೂಷಣವಾಗಿರುತ್ತದೆ? ಯಾರು ವಂದ್ಯರು? ಲಂಕೆಯು ಹೇಗಿದೆ? ವೀರಮರ್ಕಟಕಂಪಿತಾ!
ವಿವರಣೆ: ಈ ಶ್ಲೋಕದ ಎಲ್ಲಾ ಪ್ರಶ್ನೆಗಳಿಗೂ 'ವೀರಮರ್ಕಟಕಂಪಿತಾ' ಎಂಬ ಪದದಲ್ಲಿ ಉತ್ತರಗಳಿವೆ.ಪದವನ್ನು ವಿಭಜಿಸುವುದರಿಂದ ಉತ್ತರಗಳು ದೊರೆಯುತ್ತವೆ.'ಕ: ಖೇ ಚರತಿ '- ಆಕಾಶದಲ್ಲಿ ಯಾವುದು ಚಲಿಸುತ್ತದೆ ಎಂಬ ಪ್ರಶ್ನೆಗೆ ಉತ್ತರ, ವಿ:, ಅಂದರೆ ಪಕ್ಷಿ.
'ಕಾ ರಮ್ಯಾ '-ಯಾರು ರಮ್ಯಳಾಗಿದ್ದಾಳೆ ಎಂಬ ಪ್ರಶ್ನೆಗೆ ಉತ್ತರ ರಮಾ, ಅಂದರೆ ಲಕ್ಷ್ಮಿ.
'ಕಾ ಜಪ್ಯಾ '- ಯಾವುದು ಜಪಿಸತಕ್ಕದ್ದು ಎಂಬ ಪ್ರಶ್ನೆಗೆ ಉತ್ತರ,ಋಕ್, ಅಂದರೆ ವೇದದ ಮಂತ್ರ.
'ಕಿಂ ವಿಭೂಷಣಮ್ '- ಯಾವುದು ಭೂಷಣ ಅಥವಾ ಅಲಂಕಾರ ಎಂಬ ಪ್ರಶ್ನೆಗೆ ಉತ್ತರ, ಕಟಕಂ, ಅಂದರೆ ಬಳೆ.
'ಕೋ ವಂದ್ಯ:'- ಯಾರು ವಂದ್ಯರು ಎಂಬ ಪ್ರಶ್ನೆಗೆ ಉತ್ತರ, ಪಿತಾ, ಅಂದರೆ ತಂದೆ.
'ಕೀದೃಶೀ ಲಂಕಾ '-ಲಂಕೆಯು ಹೇಗಿದೆ ಎಂಬ ಪ್ರಶ್ನೆಗೆ ಉತ್ತರ, ಇಡಿಯ ಪದವೇ ಆಗುತ್ತದೆ -'ವೀರಮರ್ಕಟಕಂಪಿತಾ', ಅಂದರೆ, ವೀರವಾನರನಾದ ಹನುಮಂತನಿಂದ ಕಂಪನಕ್ಕೊಳಗಾಗಿದೆ ಎಂದು ಅರ್ಥ.
೩.ಸೀಮಂತಿನೀಷು ಕಾ ಶಾಂತಾ ರಾಜಾ ಕೋsಭೂದ್ಗುಣೋತ್ತಮ:/
ವಿದ್ವದ್ಭಿ: ಕಾ ಸದಾ ವಂದ್ಯಾ ಅತ್ರೈವೋಕ್ತಂ ನ ಬುಧ್ಯತೇ//
ಅನುವಾದ: ಹೆಂಗಸರಲ್ಲಿ ಶಾಂತಳಾಗಿರುವವಳು ಯಾರು? ರಾಜರಲ್ಲಿ ಗುಣೋತ್ತಮನಾಗಿರುವವನು ಯಾರು? ವಿದ್ವಜ್ಜನರಿಂದ ಸದಾ ವಂದ್ಯವಾದುದು ಯಾವುದು? ಉತ್ತರಗಳು ಇಲ್ಲೇ ಹೇಳಲ್ಪಟ್ಟಿವೆ! ಆದರೆ ತಿಳಿಯುವುದಿಲ್ಲ!
ವಿವರಣೆ: ಈ ಶ್ಲೋಕದಲ್ಲಿ, ಪ್ರತಿ ಚರಣದ ಮೊದಲ ಮತ್ತು ಕೊನೆಯ ಅಕ್ಷರಗಳನ್ನು ಸೇರಿಸಿದರೆ, ಮೂರೂ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತವೆ.
    'ಸೀಮಂತಿನೀಷು ಕಾ ಶಾಂತಾ '-ಈ ಚರಣದಲ್ಲಿ ಸೀ ಮತ್ತು ತಾ ಸೇರಿಸಿದರೆ, ಸೀತಾ ಎಂಬ ಉತ್ತರ ಸಿಗುತ್ತದೆ.
    'ರಾಜಾ ಕೋsಭೂದ್ಗುಣೋತ್ತಮ:' - ಈ ಚರಣದಲ್ಲಿ ರಾ ಮತ್ತು ಮ: ಸೇರಿಸಿದರೆ ರಾಮ: , ಅಂದರೆ ರಾಮ ಎಂಬ ಉತ್ತರ ಸಿಗುತ್ತದೆ.
    'ವಿದ್ವದ್ಭಿ: ಕಾ ಸದಾ ವಂದ್ಯಾ ' ಎಂಬ ಚರಣದಲ್ಲಿ ವಿ ಮತ್ತು ದ್ಯಾ ಸೇರಿಸಿದರೆ ವಿದ್ಯಾ, ಅಂದರೆ ವಿದ್ಯೆ ಎಂಬ ಉತ್ತರ ಸಿಗುತ್ತದೆ.
೪.ಯುಧಿಷ್ಠಿರ: ಕಸ್ಯ ಪುತ್ರೋ ಗಂಗಾ ವಹತಿ ಕೀದೃಶೀ/
    ಹಂಸಸ್ಯ ಶೋಭಾ ಕಾ ವಾಸ್ತಿ ಧರ್ಮಸ್ಯ ತ್ವರಿತಾ ಗತಿ://
   ಅನುವಾದ: ಯುಧಿಷ್ಠಿರನು ಯಾರ ಪುತ್ರ? ಗಂಗೆಯು ಹೇಗೆ ಹರಿಯುತ್ತದೆ? ಹಂಸದ ಶೋಭೆಯು ಯಾವುದಾಗಿರುತ್ತದೆ? ಧರ್ಮನ ವೇಗಗತಿ!
   ವಿವರಣೆ: ಇಲ್ಲಿ, ಮೂರು ಪ್ರಶ್ನೆಗಳಿಗೆ ಕೊನೆಯ ಚರಣದ ಮೂರು ಪದಗಳು ಉತ್ತರಗಳಾಗಿವೆ.ಯುಧಿಷ್ಠಿರನು ಯಾರ ಪುತ್ರ ಎಂಬ ಪ್ರಶ್ನೆಗೆ ಧರ್ಮನ, ಅಂದರೆ ಯಮಧರ್ಮನ ಎಂಬುದು ಉತ್ತರ.ಗಂಗೆಯು ಹೇಗೆ ಹರಿಯುತ್ತದೆ ಎಂಬ ಪ್ರಶ್ನೆಗೆ ತ್ವರಿತಾ, ಅಂದರೆ ವೇಗವಾಗಿ ಎಂಬುದು ಉತ್ತರ.ಹಂಸದ ಶೋಭೆಯು ಯಾವುದಾಗಿರುತ್ತದೆ ಎಂಬ ಪ್ರಶ್ನೆಗೆ ಗತಿ, ಅಂದರೆ ನಡಿಗೆ ಎಂಬುದು ಉತ್ತರ.
೫.ಭೋಜನಾಂತೇ ಚ ಕಿಂ ಪೇಯಂ ಜಯಂತ: ಕಸ್ಯ ವೈ ಸುತ: /
    ಕಥಂ ವಿಷ್ಣುಪದಂ ಪ್ರೋಕ್ತಂ ತಕ್ರಂ ಶಕ್ರಸ್ಯ ದುರ್ಲಭಮ್ //
    ಅನುವಾದ: ಭೋಜನದ ಕೊನೆಗೆ ಏನನ್ನು ಕುಡಿಯಬೇಕು? ಜಯಂತನು ಯಾರ ಮಗನು? ವಿಷ್ಣುಪದವು ಹೇಗೆ ಹೇಳಲ್ಪಟ್ಟಿದೆ? ಮಜ್ಜಿಗೆ ಇಂದ್ರನ ದುರ್ಲಭ (ವಸ್ತು).
   ವಿವರಣೆ: ಕೊನೆಯ ಚರಣದ ಪದಗಳು ಪ್ರಶ್ನೆಗಳಿಗೆ ಉತ್ತರಗಳಾಗಿವೆ.
ಭೋಜನದ ಕೊನೆಗೆ ಏನನ್ನು ಕುಡಿಯಬೇಕು?- ತಕ್ರಂ, ಅಂದರೆ ಮಜ್ಜಿಗೆ.
ಜಯಂತನು ಯಾರ ಮಗನು?- ಇಂದ್ರನ ಮಗ.
ವಿಷ್ಣುಪದವು ಹೇಗೆ ಹೇಳಲ್ಪಟ್ಟಿದೆ?- ದುರ್ಲಭ(ಲಭಿಸುವುದು ಕಷ್ಟ).
ತಕ್ರಂ ಶಕ್ರಸ್ಯ ದುರ್ಲಭಮ್ ಎಂಬ ಪದಗುಚ್ಛವನ್ನು ಒಂದು ಸಮಸ್ಯೆಯಾಗಿ ಕೊಡಬಹುದು.
                                   ಡಾ.ಬಿ.ಆರ್.ಸುಹಾಸ್
 

ಬುಧವಾರ, ಆಗಸ್ಟ್ 23, 2023

ಶ್ರೀ ಕೃಷ್ಣನ ಕುರಿತ ಪುಟ್ಟ ರಸಪ್ರಶ್ನೆ

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಒಂದು ಸಣ್ಣ ರಸಪ್ರಶ್ನೆ.ಶ್ರೀಕೃಷ್ಣನನ್ನು ಕೊಲ್ಲಲು ಬಂದ ಅನೇಕ ರಾಕ್ಷಸರು ಅವನಿಂದ ಹಾಗೂ ಬಲರಾಮನಿಂದ ತಾವೇ ಹತರಾದರು.ಆ ರಾಕ್ಷಸರು ವಿವಿಧ ರೂಪಗಳಲ್ಲಿ ಬಂದರು.ಯಾವ ರಾಕ್ಷಸರು ಯಾವ ರೂಪಗಳಲ್ಲಿ ಬಂದರು ಹೇಳಿ ನೋಡೋಣ.
೧.ಪೂತನಿ
ಅ)ನವಿಲು,ಆ)ಸುಂದರಿ,ಇ)ವೃದ್ಧೆ,ಈ)ಹಂಸ
೨.ತೃಣಾವರ್ತ
ಅ)ಸುಂಟರಗಾಳಿ,ಆ)ನಾಯಿ,ಇ)ತಂಗಾಳಿ,ಈ)ತೋಳ
೩.ಶಕಟಾಸುರ
ಅ)ಬಂಡೆ,ಆ)ಗಾಡಿ,ಇ)ಒರಳುಕಲ್ಲು,ಈ)ಮಿಂಚು
೪.ಬಕಾಸುರ
ಅ)ಹದ್ದು,ಆ)ಕೊಕ್ಕರೆ,ಇ)ಗಿಣಿ,ಈ)ಪಾರಿವಾಳ
೫.ಅಘಾಸುರ
ಅ)ಬೃಹತ್ ಸರ್ಪ,ಆ)ಆನೆ,ಇ)ಸಿಂಹ,ಈ)ಹಂದಿ
೬.ವತ್ಸಾಸುರ
ಅ)ಕರು,ಆ)ಎಮ್ಮೆ,ಇ)ಕೋಳಿ,ಈ)ನಾಯಿ
೭.ಕೇಶಿ
ಅ)ಕುದುರೆ,ಆ)ಗೂಳಿ,ಇ)ಹುಲಿ,ಈ)ಹಾವು
೮.ಅರಿಷ್ಟಾಸುರ
ಅ)ಗೂಳಿ,ಆ)ಕುದುರೆ,ಇ)ತೋಳ,ಈ)ಆನೆ
೯.ಪ್ರಲಂಬಾಸುರ
ಅ)ಬ್ರಾಹ್ಮಣ ಬಾಲಕ,ಆ)ಗೊಲ್ಲ ಬಾಲಕ,ಇ)ರಾಜಕುಮಾರ,ಈ)ವೃದ್ಧ
೧೦.ಧೇನುಕಾಸುರ
ಅ)ಕತ್ತೆ,ಆ)ಕೋತಿ,ಇ)ಹಂದಿ,ಈ)ಕೋಣ
        ಉತ್ತರಗಳು
೧.ಆ)ಸುಂದರಿ
೨.ಅ)ಸುಂಟರಗಾಳಿ
೩.ಆ)ಗಾಡಿ
೪.ಆ)ಕೊಕ್ಕರೆ
೫.ಅ)ಬೃಹತ್ ಸರ್ಪ
೬.ಅ)ಕರು
೭.ಅ)ಕುದುರೆ
೮.ಅ)ಗೂಳಿ
೯.ಆ)ಗೊಲ್ಲ ಬಾಲಕ
೧೦.ಅ)ಕತ್ತೆ