ವ್ಯಾಡಿ, ಇಂದ್ರದತ್ತ, ಮತ್ತು ವರರುಚಿ ಉಪವರ್ಷನಿಂದ ವಿದ್ಯಾಭ್ಯಾಸ ಮುಗಿಸಲು, ವ್ಯಾಡಿ ಮತ್ತು ಇಂದ್ರದತ್ತರು ಗುರುದಕ್ಷಿಣೆಯ ಬಗ್ಗೆ ಕೇಳಿದರು.ಆಗ ಉಪವರ್ಷನು ಒಂದು ಕೋಟಿ ಹೊನ್ನನ್ನು ಕೊಡಲು ಹೇಳಿದನು.ಆಗ ಅವರು ವರರುಚಿಗೆ,"ಮಿತ್ರ! ನಾವು ನಂದಮಹಾರಾಜನ ಬಳಿಗೆ ಹೋಗಿ ಈ ಹಣವನ್ನು ಯಾಚಿಸೋಣ! ಇನ್ನೆಲ್ಲೂ ನಮಗೆ ಇಷ್ಟು ಹಣ ಸಿಗುವುದಿಲ್ಲ! ನಂದನು ತೊಂಬತ್ತೊಂಬತ್ತು ಕೋಟಿ ಹೊನ್ನಿನ ಒಡೆಯ! ಅಲ್ಲದೇ ಈ ಹಿಂದೆ ನಿನ್ನ ಹೆಂಡತಿಯನ್ನು ಅವನು ತನ್ನ ಧರ್ಮಭಗಿನಿಯೆಂದು ಒಪ್ಪಿಕೊಂಡಿದ್ದಾನೆ.ಹಾಗಾಗಿಯೂ ನಿನ್ನ ಸದ್ಗುಣಗಳ ಕಾರಣದಿಂದಲೂ ಹಣವನ್ನು ಕೊಡಬಹುದು!" ಎಂದರು.ಅದಕ್ಕೆ ವರರುಚಿಯು ಒಪ್ಪಿ ಅವರೊಂದಿಗೆ ಹೊರಟನು.ಆದರೆ ದುರದೃಷ್ಟವಶಾತ್ ಅವರು ಅಲ್ಲಿಗೆ ಹೋಗುತ್ತಿದ್ದಂತೆ ನಂದಮಹಾರಾಜನು ಮರಣಹೊಂದಿದನು! ಇದರಿಂದ ರಾಜ್ಯದಲ್ಲಿ ಕೋಲಾಹಲವಾಯಿತು! ಇವರಿಗೂ ವಿಶಾದವಾಯಿತು.ಆಗ ಯೋಗಸಿದ್ಧಿಯನ್ನು ಪಡೆದಿದ್ದ ಇಂದ್ರದತ್ತನು ಒಂದು ಉಪಾಯ ಮಾಡಿದನು.ಅವನು ಹೇಳಿದನು,"ನಿನು ಪರಕಾಯಪ್ರವೇಶದ ವಿದ್ಯೆಯಿಂದ ರಾಜನ ಶರೀರದೊಳಗೆ ಸೇರಿಕೊಳ್ಳುತ್ತೇನೆ! ವರರುಚಿಯು ಬಂದು ನನ್ನ ಬಳಿ ಹಣ ಯಾಚಿಸಲಿ! ನಾನು ಅವನಿಗೆ ಹಣ ಕೊಡುತ್ತೇನೆ! ಅನಂತರ ನಾನು ನನ್ನ ದೇಹಕ್ಕೆ ಹಿಂದಿರುಗುತ್ತೇನೆ! ಅಲ್ಲಿಯವರೆಗೂ ವ್ಯಾಡಿಯು ನನ್ನ ದೇಹವನ್ನು ಕಾಯಲಿ!"
ಅವರಿಬ್ಬರೂ ಒಪ್ಪಲು, ಇಂದ್ರದತ್ತನು ತನ್ನ ದೇಹವನ್ನು ಬಿಟ್ಟು ನಂದನ ದೇಹವನ್ನು ಸೇರಿಕೊಂಡನು! ರಾಜನು ಇದ್ದಕ್ಕಿದ್ದಂತೆ ಬದುಕಿದುದನ್ನು ನೋಡಿ ಎಲ್ಲರೂ ಆಶ್ಚರ್ಯಗೊಂಡರು! ಸಂತೋಷದಿಂದ ಉತ್ಸವಗಳನ್ನಾಚರಿಸಿದರು! ಆಗ ವರರುಚಿಯು ಬಂದು ರಾಜನನ್ನು ಒಂದು ಕೋಟಿ ಹೊನ್ನನ್ನು ಯಾಚಿಸಿದನು. ರಾಜನು ಮಂತ್ರಿಯಾದ ಶಕಟಾಲನನ್ನು ಅವನಿಗೆ ಆ ಹಣವನ್ನು ಕೋಡಲು ಆಜ್ಞಾಪಿಸಿದನು.ಈ ಧಿಡೀರ್ ಬೆಳವಣಿಗೆಯನ್ನು ನೋಡಿ ಬುದ್ಧಿವಂತನಾದ ಶಕಟಾಲನು ಏನು ನಡೆದಿರಬಹುದೆಂದು ಊಹಿಸಿದನು.ನಿಜವಾದ ನಂದನ ಮಗನು ಇನ್ನೂ ಚಿಕ್ಕ ಮಗುವಾಗಿದ್ದರಿಂದಲೂ ರಾಜ್ಯಕ್ಕೆ ಬಹಳ ಶತ್ರುಗಳಿದ್ದುದರಿಂದಲೂ ಈ ಹುಸಿನಂದನ ಶರೀರವನ್ನೇ ರಕ್ಷಿಸುವೆನೆಂದು ಶಕಟಾಲನು ಯೋಚಿಸಿ, "ಈಗ ಉತ್ಸವಗಳು ನಡೆಯುತ್ತಿವೆ! ಹಾಗಾಗಿ ಈ ಬ್ರಾಹ್ಮಣನು ಸ್ವಲ್ಪ ಕಾಯಲಿ!" ಎಂದು ರಾಜನಿಗೆ ಹೇಳಿದನು.ಅನಂತರ ರಾಜ್ಯದಲ್ಲಿದ್ದ ಶವಗಳನ್ನೆಲ್ಲಾ ಸುಡಿಸಿಬಿಟ್ಟನು! ಆಗ ವ್ಯಾಡಿಯು ಇಂದ್ರದತ್ತನ ಶರೀರವನ್ನು ಒಂದು ದೇವಾಲಯದಲ್ಲಿ ಕಾಯುತ್ತಿದ್ದನು.ಅಲ್ಲಿಗೆ ಬಂದ ಸೈನಿಕರು ವ್ಯಾಡಿಯನ್ನು ಹಿಡಿದು ತಳ್ಳಿ, ಇಂದ್ರದತ್ತನ ಶರೀರವನ್ನೂ ಸುಟ್ಟುಬಿಟ್ಟರು! ಆಗ ವ್ಯಾಡಿಯು ಯೋಗನಂದನ ಬಳಿಗೆ ಓಡಿ ಬಂದು, "ಅಯ್ಯೋ! ಅಯ್ಯೋ! ಒಬ್ಬ ಬ್ರಾಹ್ಮಣನು ಯೋಗಸಮಾಧಿಯಲ್ಲಿದ್ದು ಇನ್ನೂ ಬದುಕಿರುವಾಗಲೇ ಈ ಸೈನಿಕರು ಅವನನ್ನು ಸುಟ್ಟುಬಿಟ್ಟರು! ಎಂಥ ಅನ್ಯಾಯ!" ಎಂದು ಗೋಳಾಡಿದನು! ಆಗ ಶಕಟಾಲನಿಗೆ ರಾಜನ ನಿಜವಾದ ಶರೀರ ಸುಟ್ಟುಹೋಯಿತೆಂದು ಅರಿವಾಗಿ ಅವನು ವರರುಚಿಗೆ ಹಣವನ್ನು ಕೊಟ್ಟನು.
ಇಂದ್ರದತ್ತ ಅಥವಾ ಯೋಗನಂದನು ಈಗ ನಂದನ ಶರೀರದಲ್ಲೇ ಇರಬೇಕಾದುದರಿಂದ ದು:ಖಿತನಾಗಿ ವ್ಯಾಡಿಗೆ ಏಕಾಂತದಲ್ಲಿ,"ನಾನೀಗ ಬ್ರಾಹ್ಮಣನಾಗಿದ್ದರೂ ಅಬ್ರಾಹ್ಮಣನಂತಾಗಿದ್ದೇನೆ! ಈ ಸಂಪತ್ತಿನಿಂದ ನನಗೇನು ಪ್ರಯೋಜನ?" ಎಂದು ಹೇಳಿದನು.ಆಗ ವ್ಯಾಡಿಯು,"ಶಕಟಾಲನು ನಿನ್ನ ವಿಷಯವನ್ನು ತಿಳಿದಿದ್ದಾನೆ.ಆದ್ದರಿಂದ ಅದಕ್ಕೇನು ಮಾಡಬೇಕೆಂದು ಯೋಚಿಸು! ಅವನು ನಿನ್ನನ್ನು ಕೊಂದು ಪೂರ್ವನಂದನ ಮಗನಾದ ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡಬಹುದು! ಆದ್ದರಿಂದ ಬುದ್ಧಿಶಾಲಿಯಾದ ವರರುಚಿಯನ್ನು ನಿನ್ನ ಮಂತ್ರಿಯಾಗಿ ಮಾಡಿಕೋ!" ಎಂದು ಹೇಳಿ ಗುರುದಕ್ಷಿಣೆಯನ್ನು ಕೊಡಲು ಹೋದನು.ಆಗ ಯೋಗನಂದನು ವರರುಚಿಗೆ ಮಂತ್ರಿಪದವಿ ನೀಡಿದನು.ಆಗ ವರರುಚಿಯು,"ನಿನ್ನ ಬ್ರಾಹ್ಮಣ್ಯವು ಕಳೆದುಹೋಗಿದ್ದರೂ ನಿನ್ನ ರಾಜ್ಯವು ಸ್ಥಿರವೆಂದು ನಾನು ನಂಬಲಾರೆ! ಏಕೆಂದರೆ ಶಕಟಾಲನು ಮಂತ್ರಿಯಾಗಿದ್ದಾನೆ! ಆದ್ದರಿಂದ ಉಪಾಯವಾಗಿ ಅವನನ್ನು ನಾಶಪಡಿಸು!" ಎಂದನು.ಅಂತೆಯೇ ಯೋಗನಂದನು ಶಕಟಾಲನನ್ನು , ಬದುಕಿದ್ದ ಒಬ್ಬ ಬ್ರಾಹ್ಮಣನನ್ನು ಸುಡಿಸಿಬಿಟ್ಟನೆಂಬ ದೋಷಾರೋಪಣೆ ಮಾಡಿ, ಅವನ ನೂರು ಮಕ್ಕಳೊಂದಿಗೆ ಪಾಳುಬಾವಿಯಂಥ ಒಂದು ಕತ್ತಲೆಯ ನೆಲಮಾಳಿಗೆಯಲ್ಲಿ ತಳ್ಳಿಸಿಬಿಟ್ಟನು! ಅವರಿಗೆ ದಿನವೂ ಒಂದು ಬೊಗಸೆ ಹಿಟ್ಟು ಮತ್ತು ಒಂದು ಬೋಗುಣಿ ನೀರನ್ನಷ್ಟೇ ಕಳಿಸಲಾಗುತ್ತಿತ್ತು! ಆಗ ಶಕಟಾಲನು ತನ್ನ ಮಕ್ಕಳಿಗೆ,"ಇಷ್ಟು ತಿಂದು ಬದುಕುವುದು ಒಬ್ಬರಿಗೇ ಸಾಧ್ಯವಿಲ್ಲ! ಇನ್ನು ಹಲವರ ಮಾತೇನು? ಆದ್ದರಿಂದ ನಿಮ್ಮಲ್ಲಿ ಯೋಗನಂದನಿಗೆ ಪ್ರತೀಕಾರ ಮಾಡಲು ಶಕ್ತಿಯಿರುವವರೊಬ್ಬರು ಇದನ್ನು ದಿನವೂ ತಿನ್ನುತ್ತಾ ಬದುಕಲಿ!" ಎಂದು ಹೇಳಿದನು. ಆಗ ಅವನ ಮಕ್ಕಳು ಅವನಿಗೇ ಹಾಗೆ ಮಾಡಲು ಹೇಳಿದರು.ಅಂತೆಯೇ ಶಕಟಾಲನೇ ದಿನವೂ ಹಿಟ್ಟು ತಿನ್ನುತ್ತಾ ಬದುಕಿದನು.ತನ್ನ ಮುಂದೆಯೇ ತನ್ನ ಮಕ್ಕಳೆಲ್ಲಾ ಸಾಯುವುದನ್ನು ನೋಡಿ ದು:ಖಿತನಾದನು.
ಇತ್ತ ಯೋಗನಂದನು ಸಾಮ್ರಾಜ್ಯದಲ್ಲಿ ಬೇರೂರಿದನು.ವ್ಯಾಡಿಯು ಗುರುದಕ್ಷಿಣೆ ಕೊಟ್ಟು ಹಿಂದಿರುಗಿ ತಾನು ತಪಸ್ಸಿಗೆ ಹೋಗುವೆನೆಂದು ಹೊರಟುಹೋದನು.ಕ್ರಮೇಣ, ಯೋಗನಂದನು ಕಾಮಾದಿಗಳಿಗೆ ವಶನಾಗಿ ಮದಿಸಿದ ಆನೆಯಂತಾದನು! ಆಗ ವರರುಚಿಯು ತನ್ನ ಸಹಾಯಕ್ಕೆ ಶಕಟಾಲನು ಇದ್ದರೆ ಒಳಿತೆಂದು ಯೋಚಿಸಿ, ಅವನನ್ನು ನೆಲಮಾಳಿಗೆಯಿಂದ ಮೇಲೆತ್ತಿಸಬೇಕೆಂದು ರಾಜನನ್ನು ಕೇಳಿಕೊಂಡನು.ರಾಜನು ಒಪ್ಪಿ ಅವನನ್ನು ಮೇಲೆತ್ತಿಸಿದನು.ವರರುಚಿಯು ಅವನಿಗೆ ಪುನಃ ಮಂತ್ರಿ ಪದವಿಯನ್ನು ಒಪ್ಪಿಕೊಳ್ಳಲು ಕೇಳಿಕೊಂಡನು.ಶಕಟಾಲನು,"ಈ ವರರುಚಿಯಿರುವವರೆಗೂ ನಾನು ಯೋಗನಂದನಿಗೆ ಏನೂ ಮಾಡಲಾರೆ! ಆದ್ದರಿಂದ ಸಮಯ ಕಾದು ಸೇಡು ತೀರಿಸಿಕೊಳ್ಳುತ್ತೇನೆ!" ಎಂದು ಯೋಚಿಸಿ ಪುನಃ ಮಂತ್ರಿ ಪದವಿಯನ್ನು ಒಪ್ಪಿಕೊಂಡನು.
ಒಂದು ದಿನ, ರಾಜನು ನಗರದ ಹೊರಗೆ ಹೋಗಿದ್ದಾಗ, ಗಂಗಾ ನದಿಯಲ್ಲಿ ಐದು ಬೆರಳುಗಳು ಕೂಡಿಕೊಂಡಿದ್ದ ಒಂದು ಕೈಯಿದ್ದುದನ್ನು ನೋಡಿ ಆಶ್ಚರ್ಯಗೊಂಡು ವರರುಚಿಯನ್ನು, "ಇದೇನು?" ಎಂದು ಕೇಳಿದನು.ಆಗ ವರರುಚಿಯು ತನ್ನ ಕೈಯ ಎರಡು ಬೆರಳುಗಳನ್ನು ಅದೇ ದಿಕ್ಕಿಗೆ ತೋರಿಸಿದನು.ಆಗ ಆ ಕೈ ಮಾಯವಾಯಿತು! ಇನ್ನೂ ಆಶ್ಚರ್ಯಗೊಂಡ ರಾಜನು ಪುನಃ ವರರುಚಿಯನ್ನು ಇದೇನೆಂದು ವಿಚಾರಿಸಿದಾಗ, ವರರುಚಿಯು, "ಐದು ಬೆರಳುಗಳನ್ನು ತೋರಿಸಿದ ಹಸ್ತವು ಐದು ಜನರು ಒಟ್ಟಾದರೆ ಈ ಜಗತ್ತಿನಲ್ಲಿ ಮಾಡಲಾಗದುದು ಏನಿದೆ ಎಂದು ಕೇಳಿತು.ಅದಕ್ಕೆ ನಾನು ನನ್ನ ಎರಡು ಬೆರಳುಗಳನ್ನು ತೋರಿಸಿ ಒಂದೇ ಮನಸ್ಸಿನ ಇಬ್ಬರಿಗೂ ಈ ಜಗತ್ತಿನಲ್ಲಿ ಮಾಡಲಾಗದುದು ಏನಿದೆ ಎಂದು ಹೇಳಿದೆ! " ಎಂದನು.ವರರುಚಿಯ ಬುದ್ಧಿವಂತಿಕೆಯಿಂದ ರಾಜನೂ ಶಕಟಾಲನೂ ಸಂತೋಷಗೊಂಡರು!
ಒಂದು ದಿನ, ರಾಜನ ಪತ್ನಿಯು ಅರಮನೆಯ ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ, ಒಬ್ಬ ಅತಿಥಿ ಬ್ರಾಹ್ಮಣನು ದಾರಿಯಲ್ಲಿ ಹೋಗುತ್ತಾ ಮೇಲೆ ನೋಡಿದ.ರಾಣಿಯೂ ಅವನನ್ನು ಸ್ವಲ್ಪ ಹೊತ್ತು ಹಾಗೇ ನೋಡುತ್ತಿದ್ದಳು.ಇದನ್ನು ಕಂಡೆ ಯೋಗನಂದನು ಅಷ್ಟಕ್ಕೇ ಕೋಪಗೊಂಡು ಆ ಬ್ರಾಹ್ಮಣನಿಗೆ ಮರಣದಂಡನೆ ವಿಧಿಸಿಬಿಟ್ಟ! ಸೈನಿಕರು ಅವನನ್ನು ವಧಾಸ್ಥಾನಕ್ಕೆ ಒಯ್ಯುತ್ತಿದ್ದಾಗ ಮಾರುಕಟ್ಟೆಯಲ್ಲಿ ಒಂದು ಸತ್ತ ಮೀನು ನಕ್ಕಿತು! ಆಶ್ಚರ್ಯಗೊಂಡ ಸೈನಿಕರು ರಾಜನ ಬಳಿ ಹೋಗಿ ಈ ವಿಷಯ ಹೇಳಿದರು.ರಾಜನೂ ಆಶ್ಚರ್ಯಗೊಂಡು ಬ್ರಾಹ್ಮಣನ ವಧೆಯನ್ನು ನಿಲ್ಲಿಸಿ ವರರುಚಿಯನ್ನು ಈ ವಿಷಯವಾಗಿ ಕೇಳಿದನು.ವರರುಚಿಯು ಯೋಚಿಸಿ ಹೇಳುವೆನೆಂದನು.ಅನಂತರ ಅವನು ಏಕಾಂತದಲ್ಲಿ ಸರಸ್ವತಿಯನ್ನು ಸ್ಮರಿಸಲು ಅವಳು ಪ್ರತ್ಯಕ್ಷಳಾಗಿ,"ಇಂದು ರಾತ್ರಿ ತಾಳೇಮರದ ಹಿಂದೆ ಅಡಗಿಕೊಂಡು ನಿಂತಿರು.ಆಗ ಸತ್ತ ಮೀನು ನಕ್ಕ ಕಾರಣ ನಿನಗೆ ತಿಳಿಯುತ್ತದೆ!" ಎಂದಳು.ಅಂತೆಯೇ ರಾತ್ರಿ ವರರುಚಿಯು ಮಾಡಲು, ಭಯಂಕರಳಾದ ಒಬ್ಬ ರಾಕ್ಷಸಿ ತನ್ನ ಮಕ್ಕಳೊಂದಿಗೆ ಬಂದಳು! ಆಗ ಮಕ್ಕಳು ಅವಳಿಗೆ ತಿನ್ನಲು ಏನಾದರೂ ಕೊಡುವಂತೆ ಕೇಳಿದರು.ಅದಕ್ಕೆ ಅವಳು,"ಸ್ವಲ್ಪ ಕಾಯಿರಿ! ಇಂದು ಒಬ್ಬ ಬ್ರಾಹ್ಮಣನನ್ನು ಕೊಲ್ಲಬೇಕಾಗಿತ್ತು.ಆದರೆ ಕೊಲ್ಲಲಿಲ್ಲ.ನಾಳೆ ಕೊಲ್ಲುತ್ತಾರೆ! ಆಗ ಅವನ ಮಾಂಸವನ್ನು ತಂದುಕೊಡುತ್ತೇನೆ!" ಎಂದಳು.ಅದಕ್ಕೆ ಮಕ್ಕಳು,"ಇಂದೇಕೆ ಅವನನ್ನು ಕೊಲ್ಲಲಿಲ್ಲ?" ಎಂದು ಕೇಳಿದರು.ಆಗ ಅವಳು ಸತ್ತ ಮೀನು ನಕ್ಕ ವಿಷಯ ಹೇಳಿದಳು.ಅದೇಕೆ ನಕ್ಕಿತೆಂದು ಅವರು ಕೇಳಲು, ಅವಳು,"ರಾಜನು ಎಲ್ಲಾ ರಾಣಿಯರೂ ನೀತಿಗೆಟ್ಟಿದ್ದಾರೆ ಹಾಗೂ ಅಂತ:ಪುರದಲ್ಲೆಲ್ಲಾ ಹೆಣ್ಣು ವೇಷ ಧರಿಸಿದ ಅನೇಕ ಪುರುಷರು ಸೇರಿಕೊಂಡಿದ್ದಾರೆ! ಹೀಗಿರಲು ನಿರಪರಾಧಿಯಾದ ಆ ಬ್ರಾಹ್ಮಣನ ವಧೆಯಾಗುತ್ತಿದೆಯಲ್ಲಾ ಎಂದು ಆ ಸತ್ತ ಮೀನು ನಕ್ಕಿತು! ಕೆಲವೊಮ್ಮೆ ಸಂಚರಿಸುತ್ತಿರುವ ಭೂತಗಳು ಸತ್ತ ಪ್ರಾಣಿಗಳ ದೇಹಗಳೊಳಗೆ ಸೇರಿಕೊಂಡು ಇಂಥ ಚೇಷ್ಟೆ ಮಾಡುತ್ತವೆ!" ಎಂದಳು.
ಇದನ್ನೆಲ್ಲಾ ಕೇಳಿದ ವರರುಚಿಯು ಮರುದಿನ ರಾಜನಿಗೆ ಸತ್ತ ಮೀನು ನಕ್ಕ ಕಾರಣ ಹೇಳಿದನು.ಆಗ ರಾಜನು ಅಂತ: ಪುರದಲ್ಲಿ ಹೆಣ್ಣು ವೇಷ ಧರಿಸಿದ್ದ ಪುರುಷರನ್ನು ಹಿಡಿಸಿದ.ಅನಂತರ, ಅವನು ವರರುಚಿಯನ್ನು ಬಹುಮಾನಿಸಿ ಆ ಬ್ರಾಹ್ಮಣನನ್ನು ಬಿಡುಗಡೆ ಮಾಡಿದ.
ಒಂದು ದಿನ, ಒಬ್ಬ ಚಿತ್ರಕಲಾವಿದನು ಬಂದು, ಯೋಗನಂದನನ್ನೂ ಮಹಾರಾಣಿಯನ್ನೂ ಒಂದು ಚಿತ್ರಪಟದಲ್ಲಿ ಚಿತ್ರಿಸಿದನು.ಆ ಚಿತ್ರವು ಬಹಳ ನೈಜವಾಗಿತ್ತು! ಸಂತೋಷಗೊಂಡ ರಾಜನು ಆ ಚಿತ್ರಕಲಾವಿದನಿಗೆ ಸಾಕಷ್ಟು ಸಂಪತ್ತನ್ನು ಕೊಟ್ಟು ಆ ಚಿತ್ರವನ್ನು ತನ್ನ ನಿವಾಸದಲ್ಲಿ ತೂಗುಹಾಕಿಸಿದನು.ಒಂದು ದಿನ,ವರರುಚಿಯು ಆ ನಿವಾಸದೊಳಗೆ ಪ್ರವೇಶಿಸಿ,ಆ ಚಿತ್ರವನ್ನು ನೋಡಿ, ಮಹಾರಾಣಿಯು ಸರ್ವಲಕ್ಷಣಸಂಪನ್ನೆ ಎಂದು ಭಾವಿಸಿದನು.ಅವಳ ಇತರ ಲಕ್ಷಣಗಳ ಆಧಾರದಿಂದ, ತನ್ನ ಪ್ರತಿಭೆಯಿಂದ, ಅವನು ಅವಳ ಸೊಂಟದ ಮೇಲೆ ಒಂದು ಕಪ್ಪು ಮಚ್ಚೆ ಇರಬೇಕೆಂದು ಊಹಿಸಿ ಆ ಚಿತ್ರದಲ್ಲಿ ಅದನ್ನು ಸೇರಿಸಿದನು.ಅನಂತರ ಬಂದ ಯೋಗನಂದನು ಇದನ್ನು ನೋಡಿ ಅಲ್ಲಿದ್ದ ಹಿರಿಯರನ್ನು ಆ ಮಚ್ಚೆಯನ್ನು ಬರೆದವರಾರೆಂದು ಕೇಳಲು, ಅವರು ವರರುಚಿ ಎಂದರು. ಆಗ ಯೋಗನಂದನು,"ದೇವಿಯ ಗುಪ್ತಸ್ಥಾನದಲ್ಲಿರುವ ಮಚ್ಚೆಯ ವಿಚಾರ ನನ್ನನ್ನು ಬಿಟ್ಟು ಬೇರಾರಿಗೂ ತಿಳಿಯದು! ಆದರೆ ಇವನಿಗೆ ಅದು ತಿಳಿದಿದೆಯೆಂದರೆ ಇವನು ಅಂತ: ಪುರದಲ್ಲಿ ಅಡಗಿಕೊಂಡು ದೇವಿಯನ್ನು ಕಡಿಸಿದ್ದಾನೆ! ಹಾಗಾಗಿಯೇ ಅಂತ:ಪುರದಲ್ಲಿದ್ದ ಇತರ ಪುರುಷರ ಬಗ್ಗೆಯೂ ತಿಳಿದುಕೊಂಡಿದ್ದಾನೆ!" ಎಂದು ಯೋಚಿಸಿ ಕೋಪದಿಂದ ಶಕಟಾಲನನ್ನು ಕರೆದು,"ವರರುಚಿಯು ದೇವಿಯನ್ನೇ ಕೆಡಿಸಿದ್ದಾನೆ! ಆದ್ದರಿಂದ ಅವನನ್ನು ನೀನು ಈಗಲೇ ವಧಿಸಬೇಕು!" ಎಂದು ಆಜ್ಞಾಪಿಸಿದನು!
ಶಕಟಾಲನು ಒಪ್ಪಿಕೊಂಡು ಹೊರಟನು.ಆದರೆ ವರರುಚಿಯು ಬುದ್ಧಿವಂತನೆಂಬ ಕಾರಣಕ್ಕೂ ತನ್ನನ್ನು ಆಪತ್ತಿನಿಂದ ಮೇಲೆತ್ತಿದುದರಿಂದಲೂ ಬ್ರಾಹ್ಮಣನಾಗಿದ್ದುದರಿಂದಲೂ ಅವನನ್ನು ಕೊಲ್ಲದೇ ತನ್ನ ಮನೆಯಲ್ಲೇ ಬಚ್ಚಿಟ್ಟು ಬೇರಾರನ್ನೋ ಕೊಲ್ಲಿಸಿ ರಾಜನ ಬಳಿ ವರರುಚಿಯನ್ನು ವಧಿಸಿದಾಗಿ ಹೇಳಿದನು.ಆಗ ವರರುಚಿಯು,"ನಿಜವಾದ ಮಂತ್ರಿಯೆಂದರೆ ನೀನೇ! ಏಕೆಂದರೆ ನನ್ನನ್ನು ಕೊಲ್ಲದಿರಲು ಯೋಚಿಸಿದೆ! ಆದರೆ ನನ್ನನ್ನು ಯಾರಿಗೂ ಕೊಲ್ಲಲಾಗುವುದಿಲ್ಲ! ಏಕೆಂದರೆ ನನಗೊಬ್ಬ ರಾಕ್ಷಸ ಮಿತ್ರನಿದ್ದಾನೆ! ವಿಶ್ವವನ್ನೇ ನುಂಗಬಲ್ಲ ಅವನು ನಾನು ನೆನೆಸಿದ ಕೂಡಲೇ ಬರುತ್ತಾನೆ!" ಎಂದನು.
ಶಕಟಾಲನು ಆ ರಾಕ್ಷಸನನ್ನು ತೋರಿಸುವಂತೆ ಕೇಳಲು, ವರರುಚಿಯು ಅವನನ್ನು ಸ್ಮರಿಸಿದನು.ಆಗ ರಾಕ್ಷಸನು ಕೂಡಲೇ ಪ್ರತ್ಯಕ್ಷನಾಗಲು ಅವನನ್ನು ನೋಡಿ ಶಕಟಾಲನು ಭಯಭೀತನಾದನು! ಅವನು ಅದೃಶ್ಯನಾದ ಬಳಿಕ,ಶಕಟಾಲನು,"ಈ ರಾಕ್ಷಸ ನಿನಗೆ ಹೇಗೆ ಮಿತ್ರನಾದ?" ಎಂದು ಕೇಳಿದ.ಆಗ ವರರುಚಿಯು ಆ ಕಥೆ ಹೇಳಿದ," ಹಿಂದೊಮ್ಮೆ ನಗರವನ್ನು ಕಾವಲು ಕಾಯಲು ಸಂಚರಿಸುತ್ತಿದ್ದ ನಗರಾಧಿಪರು ದಿನವೂ ರಾತ್ರಿ ಒಬ್ಬೊಬ್ಬರಾಗಿ ಕಾಣೆಯಾಗುತ್ತಿದ್ದರು! ಆಗ ಯೋಗನಂದನು ನನ್ನನ್ನು ನಗರಾಧಿಪನನ್ನಾಗಿ ನೇಮಿಸಿದನು.ಆಗ ನಾನು ರಾತ್ರಿ ಈ ರಾಕ್ಷಸನನ್ನು ಕಂಡೆನು! ರಾಕ್ಷಸನು ನನ್ನನ್ನು,'ಈ ನಗರದಲ್ಲಿ ಅತ್ಯಂತ ಸುಂದರ ಸ್ತ್ರೀ ಯಾರು?' ಎಂದು ಕೇಳಿದನು.ಅದಕ್ಕೆ ನಾನು ಜೋರಾಗಿ ನಗುತ್ತಾ,'ಅಯ್ಯೋ ಮೂರ್ಖ! ಯಾರಿಗೆ ಯಾವ ಸ್ತ್ರೀ ಇಷ್ಟವೋ ಅವಳೇ ಅವನಿಗೆ ಸುಂದರಿ!' ಎಂದೆನು.ಆಗ ರಾಕ್ಷಸನು,'ಆಹಾ! ನೀನೊಬ್ಬನೇ ನನ್ನನ್ನು ಗೆದ್ದದ್ದು! ಈಗ ನೀನು ನನ್ನ ಮಿತ್ರ! ನೀನು ಸ್ಮರಿಸಿಕೊಂಡಾಗ ಬರುತ್ತೇನೆ!' ಎಂದು ಅಂತರ್ಧಾನನಾದ! ಹೀಗೆ ಆ ರಾಕ್ಷಸನು ನನಗೆ ಮಿತ್ರನಾದ!"
ಹೀಗಿರಲು, ಒಮ್ಮೆ,ಯೋಗನಂದನ ಮಗನಾದ ಹಿರಣ್ಯಗುಪ್ತನು ಬೇಟೆಯಾಡಲು ಹೋದನು.ಅವನ ಕುದುರೆ ವೇಗವಾಗಿ ಓಡುತ್ತಾ ಅವನು ದಾರಿತಪ್ಪಿ ಪರಿವಾರದಿಂದ ದೂರಾದನು! ರಾತ್ರಿ ಕಳೆಯಲು ಅವನು ಒಂದು ಮರವನ್ನೇರಿದನು.ಮರುಕ್ಷಣವೇ ಸಿಂಹಕ್ಕೆ ಹೆದರಿದ ಒಂದು ಕರಡಿಯೂ ಆ ಮರವನ್ನೇರಿತು! ಅದನ್ನು ನೋಡಿ ರಾಜಕುಮಾರನು ಹೆದರಲು,ಕರಡಿಯು ಮನುಷ್ಯರಂತೆ ಮಾತನಾಡುತ್ತಾ ,"ಹೆದರಬೇಡ! ನೀನು ನನ್ನ ಮಿತ್ರ!" ಎಂದಿತು.ಆಗ ರಾಜಪುತ್ರನು ಧೈರ್ಯದಿಂದ ನಿದ್ರಿಸಿದನು.ಎಚ್ಚರವಾಗಿದ್ದ ಕರಡಿಗೆ ಕೆಳಗಿದ್ದ ಸಿಂಹವು,"ಹೇ ಕರಡಿಯೇ! ಆಗ ಮನುಷ್ಯನನ್ನು ಕೆಳಗೆ ಬೀಳಿಸು! ಅವನನ್ನು ತಿಂದು ನಾನು ಹೊರಟುಹೋಗುತ್ತೇನೆ!" ಎಂದಿತು.ಅದಕ್ಕೆ ಕರಡಿಯು,"ಛೀ ಪಾಪಿ! ನಾನು ಮಿತ್ರದ್ರೋಹವನ್ನು ಮಾಡುವುದಿಲ್ಲ!"ಎಂದಿತು.ಅನಂತರ, ಸರದಿಯ ಪ್ರಕಾರ,ಕರಡಿಯು ನಿದ್ರಿಸಲು,ರಾಜಕುಮಾರನು ಎಚ್ಚೆತ್ತು ಕಾಯತೊಡಗಿದನು.ಆಗ ಸಿಂಹವು ಅವನಿಗೆ,"ಎಲೈ ಮನುಷ್ಯನೇ! ಆಗ ಕರಡಿಯನ್ನು ಕೆಳಗೆ ತಳ್ಳು!" ಎಂದಿತು.ಅದನ್ನು ಕೇಳಿ ಭಯಗೊಂಡಿದ್ದ ರಾಜಪುತ್ರನು ಸಿಂಹವನ್ನು ಸಂತೋಷಗೊಳಿಸಲು ಕರಡಿಯನ್ನು ತಳ್ಳಿಬಿಟ್ಟನು! ಆದರೆ ಸುದೈವದಿಂದ ಅದು ಕೆಳಗೆ ಬೀಳದೇ ಎಚ್ಚರಗೊಂಡು,"ಎಲವೋ ಮಿತ್ರದ್ರೋಹಿ! ನೀನು ಹುಚ್ಚನಾಗು!" ಎಂದು ಶಾಪಕೊಟ್ಟಿತು!
ಬೆಳಗಾಗಲು ಮನೆಗೆ ಹೋದ ರಾಜಕುಮಾರನು ಹುಚ್ಚನಾದನು! ಅದನ್ನು ನೋಡಿ ಯೋಗನಂದನು ಬಹಳ ದುಃಖಿತನಾದನು.ಅವನು,"ಈ ಸಮಯದಲ್ಲಿ ವರರುಚಿಯು ಇದ್ದಿದ್ದರೆ ಇದಕ್ಕೆ ಕಾರಣ ಹೇಳುತ್ತಿದ್ದ! ಅವನನ್ನು ಕೊಲ್ಲಿಸಿದ ನನ್ನ ಬುದ್ಧಿಗೆ ಧಿಕ್ಕಾರ!"ಎಂದು ಹಲುಬಿದನು.ಆಗ ಅವನ ಈ ಮಾತನ್ನು ಕೇಳಿದ ಶಕಟಾಲನು,"ಪ್ರಭು! ವರರುಚಿಯು ಇನ್ನೂ ಬದುಕಿದ್ದಾನೆ!" ಎಂದನು.ಆಗ ರಾಜನು,"ಹಾಗಾದರೆ ಕೂಡಲೇ ಅವನನ್ನು ಕರೆದುಕೊಂಡು ಬಾ!" ಎಂದನು.ಆಗ ಶಕಟಾಲನು ಒತ್ತಾಯ ಮಾಡಿ ವರರುಚಿಯನ್ನು ಕರೆತಂದನು.ಆಗ ವರರುಚಿಯು ಸರಸ್ವತಿಯ ಅನುಗ್ರಹದಿಂದ,"ಪ್ರಭು! ರಾಜಪುತ್ರನು ಮಿತ್ರದ್ರೋಹವೆಸಗಿದ್ದಾನೆ!" ಎಂದು ಇಡೀ ವೃತ್ತಾಂತವನ್ನು ಹೇಳಿದನು.ಇದರಿಂದ ರಾಜಪುತ್ರನು ಶಾಪವಿಮುಕ್ತನಾಗಿ ವರರುಚಿಯನ್ನು ಪ್ರಶಂಸಿಸಿದನು.ಯೋಗನಂದನು ವರರುಚಿಯನ್ನು,"ಇದು ನಿನಗೆ ಹೇಗೆ ತಿಳಿಯಿತು?" ಎಂದು ಕೇಳಿದನು.ಆಗ ವರರುಚಿಯು,"ರಾಜನ್! ಪ್ರಜ್ಞಾವಂತರ ಬುದ್ಧಿಗಳು,ಲಕ್ಷಣಗಳಿಂದಲೂ ಅನುಮಾನದಿಂದಲೂ ಪ್ರತಿಭೆಯಿಂದಲೂ ಎಲ್ಲವನ್ನೂ ನೋಡಬಲ್ಲವು! ಹಾಗೆಯೇ ನಾನು ಆ ಮಚ್ಚೆಯ ವಿಷಯವನ್ನೂ ಇದೆಲ್ಲವನ್ನೂ ತಿಳಿದುಕೊಂಡೆನು!" ಎಂದನು.ಇದನ್ನು ಕೇಳಿ ರಾಜನಿಗೆ ನಾಚಿಕೆಯೂ ಪಶ್ಚಾತ್ತಾಪವೂ ಆಯಿತು.ಅವನು ವರರುಚಿಗೆ ಸತ್ಕರಿಸಲು ಹೊರಡಲು,ವರರುಚಿಯು ನಿರಾಕರಿಸಿ ತನ್ನ ಮನೆಗೆ ಹೋದನು.ಅಲ್ಲಿ ಉಪವರ್ಷನು,"ರಾಜನು ನಿನ್ನನ್ನು ಕೊಲ್ಲಿಸಿದನೆಂದು ಕೇಳಿ ಉಪಕೋಶೆಯು ಬೆಂಕಿಯಲ್ಲಿ ಹಾರಿ ಪ್ರಾಣಬಿಟ್ಟಳು! ಅದರಿಂದ ಶೋಕಿತಳಾದ ನಿನ್ನ ತಾಯಿ ಎದೆಯೊಡೆದು ಸತ್ತುಹೋದಳು!" ಎಂದನು.ಇದನ್ನು ಕೇಳಿ ವರರುಚಿಯು ಶೋಕಾವೇಶದಿಂದ ಜ್ಞಾನ ತಪ್ಪಿ ಬಿದ್ದನು! ಅನಂತರ ಎಚ್ಚರಗೊಂಡ ಅವನಿಗೆ ವರ್ಷೋಪಾಧ್ಯಾಯನು,"ಇಡೀ ಜಗತ್ತಿನಲ್ಲಿ ಶಾಶ್ವತವಾಗಿರುವುದು ಅಶಾಶ್ವತತ್ವವೊಂದೇ ಎಂದು ನೀನು ತಿಳಿದಿದ್ದರೂ ಹೀಗೇಕೆ ಮೋಹಗೋಳ್ಳುವೆ?"ಎಂದು ಸಮಾಧಾನ ಮಾಡಿದನು.
ಈ ಘಟನಾವಳಿಯಿಂದ ವೈರಾಗ್ಯ ತಾಳಿ ವರರುಚಿಯು ಎಲ್ಲವನ್ನೂ ಬಿಟ್ಟು ತಪೋವನಕ್ಕೆ ಹೋದನು.ಕೆಲದಿನಗಳ ಬಳಿಕ ಅಲ್ಲಿಗೆ ಅಯೋಧ್ಯೆಯಿಂದ ಒಬ್ಬ ಬ್ರಾಹ್ಮಣನು ಬಂದನು.ಆಗ ವರರುಚಿಯು ಯೋಗನಂದನ ರಾಜ್ಯಭಾರದ ಬಗ್ಗೆ ಕೇಳಲು, ಅವನು,"ಶಕಟಾಲನು ಚಾಣಕ್ಯನೆಂಬ ಬ್ರಾಹ್ಮಣನ ಮೂಲಕ ಯೋಗನಂದನನ್ನು ಕೊಲ್ಲಿಸಿ,ಅವನ ಮಗ ಹಿರಣ್ಯಗುಪ್ತನನ್ನೂ ಕೊಂದು,ಪೂರ್ವನಂದನ ಮಗನಾದ ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡಿ,ಚಾಣಕ್ಯನನ್ನು ಅವನಿಗೆ ಮಂತ್ರಿಯಾಗಿ ಮಾಡಿದನು.ಹೀಗೆ ಅವನು ಯೋಗನಂದನ ಮೇಲೆ ಸೇಡು ತೀರಿಸಿಕೊಂಡನು." ಎಂದನು.
ಇದರಿಂದ ಬೇಸರಗೊಂಡ ವರರುಚಿಯು ವಿಂಧ್ಯವಾಸಿನಿಯ ದರ್ಶನಕ್ಕೆ ಹೋದನು.ಆ ದೇವಿಯ ಅನುಗ್ರಹದಿಂದ ಅವನು ಅಲ್ಲಿ ಕಾಣಭೂತಿಯೆಂಬ ಪಿಶಾಚನನ್ನು ಕಂಡನು.ಅವನು ಯಕ್ಷನಾಗಿದ್ದು, ಸ್ಥೂಲಶಿರಸ್ ಎಂಬ ರಾಕ್ಷಸನ ಗೆಳೆತನ ಮಾಡಿದ್ದರಿಂದ ಕುಬೇರನು ಕೋಪಗೊಂಡು ಅವನಿಗೆ ಪಿಶಾಚನಾಗಲು ಶಪಿಸಿದ್ದನು.ಅವನನ್ನು ನೋಡಿದ ಕೂಡಲೇ ವರರುಚಿಗೆ ಪೂರ್ವಜನ್ಮದ ಸ್ಮರಣೆಯೂ ದಿವ್ಯಜ್ಞಾನವೂ ಉಂಟಾಯಿತು! ತಾನು ಪುಷ್ಪದಂತನೆಂಬ ಶಿವಗಣನೆಂದು ನೆನೆದು ಹಿಂದೆ ತಾನು ಶಿವನಿಂದ ಕದ್ದು ಕೇಳಿದ ಬೃಹತ್ಕಥೆಯನ್ನು ಕಾಣಭೂತಿಗೆ ಹೇಳಿದನು.ಇದರಿಂದ ಅವನು ಶಾಪಮುಕ್ತನಾಗಿ ದೇಹವನ್ನು ತ್ಯಜಿಸಲು ಬದರಿಕಾಶ್ರಮಕ್ಕೆ ಹೋದನು.ಅವನು ಹೋಗುತ್ತಿದ್ದಾಗ ಗಂಗಾನದಿಯ ಬಳಿ ಶಾಕಾಹಾರಿಯಾದ ಒಬ್ಬ ಋಷಿಯನ್ನು ಕಂಡನು.ಆಗ ಆ ಋಷಿಯ ಕೈಗೆ ಒಂದು ದರ್ಭೆ ಚುಚ್ಚಿ ರಕ್ತವೊಸರಲು, ವರರುಚಿಯು ಅವನ ಅಹಂಕಾರ ಪರೀಕ್ಷಿಸಲು ತನ್ನ ಪ್ರಭಾವದಿಂದ ಅವನ ರಕ್ತವನ್ನು ಶಾಕರಸವನ್ನಾಗಿ ಬದಲಿಸಿದನು.ಅದನ್ನು ನೋಡಿ ಅವನು,"ನಾನು ಸಿದ್ಧನಾಗಿಬಿಟ್ಟೆ!" ಎಂದು ದರ್ಪ ತಾಳಿದನು.ಆಗ ವರರುಚಿಯು ಸ್ವಲ್ಪ ನಕ್ಕು,"ನಿನ್ನನ್ನು ಪರೀಕ್ಷಿಸಲು ನಿನ್ನ ರಕ್ತವನ್ನು ಶಾಕರಸವನ್ನಾಗಿ ಮಾಡಿದ್ದು ನಾನೇ! ಜ್ಞಾನಕ್ಕೆ ಅಹಂಕಾರ ಅಡ್ಡಿಯಾಗುವುದರಿಂದ ಅಹಂಕಾರ ತಾಳಬೇಡ!"ಎಂದು ಉಪದೇಶಿಸಿ, ಬದರಿಕಾಶ್ರಮದಲ್ಲಿ ದೇವಿಯ ಅನುಗ್ರಹದಿಂದ ಅಗ್ನಿಧಾರಣೆಯಿಂದ ದೇಹತ್ಯಾಗ ಮಾಡಿ ದಿವ್ಯಸ್ಥಿತಿ ಪಡೆದನು.