ಬುಧವಾರ, ಜನವರಿ 4, 2023

ಮಹಾಭಾರತದ ರಚನೆಯ ಕಥೆ

ಮಹಾಭಾರತವು ನಮ್ಮ ದೇಶದ, ಅಷ್ಟೇ ಏಕೆ, ಇಡೀ ವಿಶ್ವದ ಅತ್ಯಂತ ದೊಡ್ಡ ಕಾವ್ಯ ಗ್ರಂಥ.ಸರಿಸುಮಾರು ಒಂದು ಲಕ್ಷ ಶ್ಲೋಕಗಳನ್ನು ಹೊಂದಿರುವ ಈ ಗ್ರಂಥ ಗಾತ್ರದಲ್ಲೂ ಮಹತ್ವದಲ್ಲೂ ಬಹಳ ದೊಡ್ಡದಾಗಿದೆ.ಹಾಗಾಗಿಯೇ ಈ ಗ್ರಂಥಕ್ಕೆ ಮಹಾಭಾರತವೆಂಬ ಹೆಸರು ಬಂದಿದೆ.'ಮಹತ್ವಾಚ್ಚ ಭಾರವತ್ವಾಚ್ಚ ಮಹಾಭಾರತಮುಚ್ಯತೇ' ಎಂದು ಅಲ್ಲಿಯೇ ಬರುತ್ತದೆ. ಗ್ರೀಕ್ ಮಹಾಕಾವ್ಯಗಳಾದ ಇಲಿಯಡ್ ಮತ್ತು ಒಡಿಸ್ಸಿ ಇವೆರಡನ್ನೂ ಸೇರಿಸಿದರೂ ಮಹಾಭಾರತದ ಅರ್ಧಕ್ಕೂ ಬರುವುದಿಲ್ಲವೆಂದರೆ, ಈ ಗ್ರಂಥದ ಗಾತ್ರವೆಷ್ಟೆಂದು ನಾವು ಊಹಿಸಿಕೊಳ್ಳಬಹುದು! ಮಹಾಭಾರತದಲ್ಲಿ ಮುಖ್ಯವಾಗಿ ಹೇಳಿರುವುದು ಕೌರವ,ಪಾಂಡವರ ಕಥೆಯಾದರೂ ಇದರಲ್ಲಿ ಅನೇಕಾನೇಕ ಉಪಕಥೆಗಳೂ, ಆಧ್ಯಾತ್ಮಿಕ ವಿಚಾರಗಳೂ, ಧಾರ್ಮಿಕ ವಿಚಾರಗಳೂ, ರಾಜನೀತಿ, ಸಾಮಾನ್ಯ ನೀತಿ, ಮೊದಲಾದ ಲೌಕಿಕ ವಿಚಾರಗಳೂ, ವಿಷ್ಣು ಸಹಸ್ರನಾಮ,ಶಿವ ಸಹಸ್ರನಾಮ, ಮೊದಲಾದ ಸ್ತೋತ್ರಗಳೂ ಹೀಗೆ ಹಲವಾರು ವಿಷಯಗಳಿವೆ.ಮಹಾಭಾರತದಲ್ಲೇ ಬರುವ ಒಂದು ಶ್ಲೋಕ ಹೀಗಿದೆ -
ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ /
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ //
" ಎಲೈ ಭರತರ್ಷಭ! ಧರ್ಮ,ಅರ್ಥ,ಕಾಮ, ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ವಿಷಯದಲ್ಲಿ ಇಲ್ಲಿರುವುದೇ ಇನ್ನೆಲ್ಲಿಯೂ ಇರುವುದು! ಇಲ್ಲಿಲ್ಲದಿರುವುದು ಇನ್ನೆಲ್ಲಿಯೂ ಇಲ್ಲ!"
     ಹೀಗೆ ಮಹಾಭಾರತದಲ್ಲಿ ಇಲ್ಲದ ವಿಷಯವೇ ಇಲ್ಲ ಎನ್ನಬಹುದು.ಒಮ್ಮೆ ದೇವತೆಗಳು ಮಹಾಭಾರತವನ್ನೂ ವೇದಗಳನ್ನೂ ತಕ್ಕಡಿಯ ಒಂದೊಂದು ತಟ್ಟೆಯಲ್ಲಿಟ್ಟು ತೂಗಿದಾಗ, ಮಹಾಭಾರತವೇ ಹೆಚ್ಚು ತೂಗಿತಂತೆ! ಹೀಗೆ ಮಹಾಭಾರತವು ವೇದಗಳ ಸಾರವೂ ಆಗಿದೆ.ಹಾಗಾಗಿಯೇ ಮಹಾಭಾರತವನ್ನು ಪಂಚಮ ವೇದ ಎನ್ನುತ್ತಾರೆ.
     ಇಂಥ ಅದ್ಭುತ ಗ್ರಂಥವಾದ ಮಹಾಭಾರತವನ್ನು ರಚಿಸಿದವರು ವೇದವ್ಯಾಸ ಮುನಿಗಳು.ಅವರ ಮೈಬಣ್ಣ ಕಪ್ಪಾದುದರಿಂದ ಕೃಷ್ಣನೆಂದೂ ದ್ವೀಪದಲ್ಲಿ ಹುಟ್ಟಿದುದರಿಂದ ದ್ವೈಪಾಯನನೆಂದೂ ಹೀಗೆ ಕೃಷ್ಣ ದ್ವೈಪಾಯನರೆಂದು ಹೆಸರಾದ ಅವರು, ಒಂದೇ ಆಗಿದ್ದ ವೇದವನ್ನು ಅಧ್ಯಯನದ ಅನುಕೂಲಕ್ಕಾಗಿ ನಾಲ್ಕಾಗಿ ವಿಭಾಗಿಸಿದುದರಿಂದ ವೇದವ್ಯಾಸರೆಂದು ಹೆಸರಾದರು.ಅವರು ಸಂಸ್ಕೃತದಲ್ಲಿ ರಚಿಸಿದ ಮಹಾಭಾರತ, ಔತ್ತರೇಯ, ದಾಕ್ಷಿಣಾತ್ಯ, ಮೊದಲಾದ ಪಾಠಗಳಲ್ಲಿ ದೊರೆಯುತ್ತದೆ.ಈ ಪಾಠಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ.ವ್ಯಾಸರು ಮಹಾಭಾರತವನ್ನು ಹೇಗೆ ರಚಿಸಿದರು ಎಂಬ ಕಥೆ ದಾಕ್ಷಿಣಾತ್ಯ ಪಾಠದಲ್ಲಿ ಕಂಡುಬರುತ್ತದೆ.ಆ ಕಥೆಯನ್ನು ಈಗ ನೋಡೋಣ.
      ಕೌರವ,ಪಾಂಡವರ ಜೀವನ ಹಾಗೂ ಯುದ್ಧಗಳಿಗೆ ಪ್ರತ್ಯಕ್ಷದರ್ಶಿಗಳಾದ ವ್ಯಾಸರು ಅವರ ಇಡೀ ಕಥೆಯನ್ನು ಕಾವ್ಯದ ರೂಪದಲ್ಲಿ ದಾಖಲಿಸಬೇಕೆಂದು ಯೋಚಿಸಿದರು.ಆದರೆ ಅವರಿಗೆ ಅದನ್ನು ಬರೆದುಕೊಳ್ಳಬಲ್ಲ ಯೋಗ್ಯ ಲಿಪಿಕಾರ ಬೇಕೆನಿಸಿತು.ಅಂಥ ಲಿಪಿಕಾರ ಯಾರೆಂದು ಅವರಿಗೆ ಹೊಳೆಯಲಿಲ್ಲ.ಈ ವಿಷಯವಾಗಿಯೇ ಅವರು ಯೋಚಿಸುತ್ತಿದ್ದಾಗ ಸೃಷ್ಟಿಕರ್ತನಾದ ಬ್ರಹ್ಮದೇವನು ಪ್ರತ್ಯಕ್ಷನಾದ! ವ್ಯಾಸರು ಬ್ರಹ್ಮದೇವನನ್ನು ಸತ್ಕರಿಸಿ, ತಾವು ಕಾವ್ಯವೊಂದನ್ನು ರಚಿಸಲು ನಿರ್ಧರಿಸಿರುವುದಾಗಿಯೂ ಅದಕ್ಕೆ ಯೋಗ್ಯ ಲಿಪಿಕಾರ ಯಾರೆಂದು ತಿಳಿಯುತ್ತಿಲ್ಲವೆಂದೂ ಹೇಳಿದರು.ಆಗ ಬ್ರಹ್ಮನು ಅವರ ಕಾವ್ಯವು ಮಹಾಕಾವ್ಯವೇ ಆಗುವುದೆಂದು ಹೇಳಿ,ವಿದ್ಯಾಧಿದೇವತೆಯಾದ ಗಣೇಶನೇ ಅದಕ್ಕೆ ಯೋಗ್ಯ ಲಿಪಿಕಾರನಾಗಬಹುದೆಂದು ಸೂಚಿಸಿ ಹೊರಟುಹೋದನು.ಆಗ ವ್ಯಾಸರು ಗಣೇಶನನ್ನು ಧ್ಯಾನಿಸಲು, ಕೂಡಲೇ ಗಣೇಶನು ಪ್ರತ್ಯಕ್ಷನಾದನು.ವ್ಯಾಸರು,"ದೇವ! ನಾನು ಮಹಾಭಾರತವೆಂಬ ಕಾವ್ಯವನ್ನು ರಚಿಸಲು ನಿರ್ಧರಿಸಿದ್ದೇನೆ! ನಾನು ಅದನ್ನು ಹೇಳುತ್ತಿರುವಂತೆ ನೀನು ಕೃಪೆ ಮಾಡಿ ಬರೆದುಕೊಳ್ಳಬೇಕು", ಎಂದು ಕೇಳಿಕೊಂಡರು.ಅದಕ್ಕೆ ಗಣೇಶನು,"ಆಗಲಿ ಋಷಿವರ್ಯ! ಆದರೆ ನನ್ನದೊಂದು ನಿಬಂಧನೆಯಿದೆ.ನಾನು ಒಮ್ಮೆ ಬರೆಯಲು ಆರಂಭಿಸಿದರೆ ನಿಲ್ಲಿಸುವುದಿಲ್ಲ.ಆದ್ದರಿಂದ ನೀವು ನಿಲ್ಲಿಸದೇ ಹೇಳುತ್ತಿದ್ದರೆ ನಾನು ಬರೆದುಕೊಡುತ್ತೇನೆ!" ಎಂದನು.ಆಗ ವ್ಯಾಸರು,"ನನ್ನದೂ ಒಂದು ನಿಬಂಧನೆಯಿದೆ.ನಾನು ಏನು ಹೇಳಿದರೂ ನೀನು ಅದನ್ನು ಅರ್ಥ ಮಾಡಿಕೊಳ್ಳದೇ ಬರೆಯಬಾರದು", ಎಂದರು.ಅದಕ್ಕೆ ಗಣೇಶನು ಓಂಕಾರದ ಮೂಲಕ ಒಪ್ಪಿಗೆಯಿತ್ತನು.
        ಹೀಗೆ ಒಪ್ಪಂದ ಮಾಡಿಕೊಂಡು ಇಬ್ಬರೂ ಮಹಾಭಾರತದ ರಚನೆಗೆ ತೊಡಗಿದರು.ವ್ಯಾಸರು ಶ್ಲೋಕಗಳನ್ನು ರಚಿಸುತ್ತಿದ್ದಂತೆ ಗಣೇಶನು ಅವುಗಳನ್ನು ಅರ್ಥ ಮಾಡಿಕೊಂಡು ಬರೆಯತೊಡಗಿದನು.ಆದರೆ ಮಧ್ಯೆ ಮಧ್ಯೆ ವ್ಯಾಸರು ಕಷ್ಟಕರವಾದ, ರಹಸ್ಯಾರ್ಥವನ್ನು ಹೊಂದಿದ್ದ ಅನೇಕ ಕೂಟಶ್ಲೋಕಗಳನ್ನು ರಚಿಸತೊಡಗಿದರು.ಅಂಥವನ್ನು ಅರ್ಥ ಮಾಡಿಕೊಳ್ಳಲು ವಿದ್ಯಾಧಿದೇವತೆಯಾದ ಗಣೇಶನೂ ಸ್ವಲ್ಪ ಹೊತ್ತು ಕಾಯಬೇಕಾಯಿತು! ಅಷ್ಟರಲ್ಲಿ ವ್ಯಾಸರು ಮುಂದಿನ ಶ್ಲೋಕಗಳನ್ನು ರಚಿಸಿಕೊಂಡು ಹೋಗಿಬಿಡುತ್ತಿದ್ದರು! ಅಂತೂ ಆ ಕೂಟ ಶ್ಲೋಕಗಳನ್ನೂ ಅರ್ಥ ಮಾಡಿಕೊಂಡು,ಮುಂದಿನ ಶ್ಲೋಕಗಳನ್ನೂ ಸ್ಮರಣೆಯಲ್ಲಿಟ್ಟುಕೊಂಡು ಗಣೇಶನು ವ್ಯಾಸರ ಮಹಾಭಾರತವನ್ನು ಬರೆದುಕೊಟ್ಟನು.ಹೀಗೆ ವ್ಯಾಸರು ಮಹಾಭಾರತವನ್ನು ಮೂರು ವರ್ಷಗಳಲ್ಲಿ ರಚಿಸಿದರು.ಸ್ವಯಂ ವ್ಯಾಸರೇ ತಾವು ರಚಿಸಿರುವ ರಹಸ್ಯಮಯವಾದ ಆ ಕೂಟ ಶ್ಲೋಕಗಳು ಒಟ್ಟು ೮,೮೦೦ ಎಂದು ಹೇಳಿಕೊಂಡಿದ್ದಾರೆ.ಅವುಗಳ ಅರ್ಥ, ತಮಗೆ ಗೊತ್ತು, ತಮ್ಮ ಪುತ್ರರಾದ ಶುಕರಿಗೆ ಗೊತ್ತು, ಹಾಗೂ ಸಂಜಯನಿಗೆ ಗೊತ್ತಿದ್ದರೂ ಗೊತ್ತಿರಬಹುದು,ಗೊತ್ತಿಲ್ಲದೆಯೂ ಇರಬಹುದು ಎಂದು ಹೇಳಿದ್ದಾರೆ.ಉಪಕಥೆಗಳನ್ನು ಬಿಟ್ಟು ಮೂಲಕಥೆಯುಳ್ಳ ಗ್ರಂಥ ಒಟ್ಟು ಇಪ್ಪತ್ತು ನಾಲ್ಕು ಸಾವಿರ ಶ್ಲೋಕಗಳಷ್ಟಾಗುತ್ತದೆ ಎಂದು ಹೇಳಲಾಗಿದ್ದು, ಜ್ಞಾನಿಗಳು ಇದನ್ನೇ ಮಹಾಭಾರತವೆನ್ನುತ್ತಾರೆ ಎಂದು ಹೇಳಲಾಗಿದೆ.ಉಪಕಥೆಗಳೂ ಸೇರಿ ಒಂದು ಲಕ್ಷ ಶ್ಲೋಕಗಳಷ್ಟು ಪ್ರಮಾಣದ ಗ್ರಂಥವಾಗುತ್ತದೆ.ಇದಲ್ಲದೇ ವ್ಯಾಸರು ಅರವತ್ತು ಲಕ್ಷ ಶ್ಲೋಕಗಳ ಇನ್ನೊಂದು ಗ್ರಂಥವನ್ನೂ ರಚಿಸಿದರೆಂದು ಹೇಳಲಾಗಿದೆ! ಇವುಗಳಲ್ಲಿ, ಮೂವತ್ತು ಲಕ್ಷ ಶ್ಲೋಕಗಳು ದೇವಲೋಕದಲ್ಲೂ, ಹದಿನೈದು ಲಕ್ಷ ಶ್ಲೋಕಗಳು ಪಿತೃಲೋಕದಲ್ಲೂ ಹದಿನಾಲ್ಕು ಲಕ್ಷ ಶ್ಲೋಕಗಳು ಗಂಧರ್ವಲೋಕದಲ್ಲೂ ಒಂದು ಲಕ್ಷ ಶ್ಲೋಕಗಳು ಮನುಷ್ಯ ಲೋಕದಲ್ಲೂ ಪ್ರಚಲಿತವಾಗಿವೆ ಎಂದು ಹೇಳಲಾಗಿದೆ.ಮಹಾಭಾರತವನ್ನು ರಚಿಸಿದ ಬಳಿಕ, ವ್ಯಾಸರು ಅದನ್ನು ತಮ್ಮ ಪುತ್ರರಾದ ಶುಕರಿಗೂ ನಾಲ್ವರು ಶಿಷ್ಯರಾದ ವೈಶಂಪಾಯನ,ಪೈಲ, ಜೈಮಿನಿ, ಮತ್ತು ಸುಮಂತು, ಇವರಿಗೂ ಉಪದೇಶಿಸಿದರು.
       ಈ ಸಂದರ್ಭದಲ್ಲಿ, ಪಾಂಡವರಲ್ಲಿ ಮೂರನೆಯವನಾದ ಅರ್ಜುನನ ಮರಿಮಗನೂ ಅಭಿಮನ್ಯುವಿನ ಮೊಮ್ಮಗನೂ ಪರೀಕ್ಷಿತನ ಮಗನೂ ಆದ ಜನಮೇಜಯನು ಸರ್ಪಯಾಗವೆಂಬ ಒಂದು ವಿಶಿಷ್ಟ ಯಜ್ಞವನ್ನು ಆಚರಿಸತೊಡಗಿದನು.ಅದನ್ನು ನೋಡಲು, ವ್ಯಾಸರು ತಮ್ಮ ಶಿಷ್ಯರೊಂದಿಗೆ ಆಗಮಿಸಲು, ಜನಮೇಜಯನು ತನ್ನ ಮುತ್ತಾತಂದಿರಾದ ಕೌರವ, ಪಾಂಡವರ ಕಥೆಯನ್ನು ಹೇಳಬೇಕೆಂದು ಅವರನ್ನು ಕೇಳಿಕೊಂಡನು.ಆಗ ವ್ಯಾಸರು ತಮ್ಮ ಶಿಷ್ಯರಾದ ವೈಶಂಪಾಯನರಿಗೆ ತಾವು ಉಪದೇಶಿಸಿದ ಮಹಾಭಾರತದ ಕಥೆಯನ್ನು ಹೇಳಲು ಹೇಳಿದರು.ಅದರಂತೆ, ವೈಶಂಪಾಯನರು ಜನಮೇಜಯನಿಗೆ ಮಹಾಭಾರತದ ಕಥೆಯನ್ನು ಸಮಗ್ರವಾಗಿ ಹೇಳಿದರು.ಆಗ ಆ ಯಾಗದ ಸಭೆಯಲ್ಲಿದ್ದ ಉಗ್ರಶ್ರವರೆಂಬ ಸೂತಪುರಾಣಿಕರು ಆ ಮಹಾಭಾರತದ ಕಥೆಯನ್ನು ಕೇಳಿ, ಮುಂದೆ, ಶೌನಕರೆಂಬ ಮಹರ್ಷಿಗಳು ಅನೇಕ ಋಷಿಗಳೊಂದಿಗೆ ಸತ್ರಯಾಗ ಮಾಡುತ್ತಿದ್ದಾಗ,ಅವರ ಕೋರಿಕೆಯಂತೆ ಅವರಿಗೆ ಹೇಳಿದರು.ಹೀಗೆ ಮಹಾಭಾರತದ ಕಥೆ ಭೂಲೋಕದಲ್ಲಿ ಪ್ರಚಲಿತವಾಯಿತು.

ಬೃಹತ್ಕಥೆಯ ಉಗಮ

ಸಂಸ್ಕೃತ ಸಾಹಿತ್ಯಲೋಕದ ಒಂದು ಅನರ್ಘ್ಯ ರತ್ನ ಕಥಾಸರಿತ್ಸಾಗರ.ಕಥೆಗಳೆಂಬ ನದಿಗಳು ಸೇರಿ ಆಗಿರುವ ಸಾಗರ ಎಂಬ ಅರ್ಥವುಳ್ಳ ಈ ಗ್ರಂಥ, ವಿಶ್ವದಲ್ಲೇ ಅತ್ಯಂತ ದೊಡ್ಡ ಕಥಾಗ್ರಂಥವಾಗಿದೆ.ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದಲ್ಲಿ ಸೋಮದೇವನೆಂಬ ಪಂಡಿತನಿಂದ ರಚಿತವಾದ ಈ ಅದ್ಭುತ ಗ್ರಂಥದಲ್ಲಿ ಒಟ್ಟು ಇಪ್ಪತ್ತೆರಡು ಸಾವಿರ ಶ್ಲೋಕಗಳಿವೆ.ಇದರಲ್ಲಿ, ರಾಜರಾಣಿಯರ, ರಾಜಕುಮಾರ, ರಾಜಕುಮಾರಿಯರ, ಮಂತ್ರಿಗಳ, ಪ್ರೇಮಗಳ,ಬುದ್ಧಿವಂತರ, ಮೂರ್ಖರ, ಮಂತ್ರವಾದಿಗಳ, ಪಶುಪಕ್ಷಿಗಳ, ಕಳ್ಳಕಾಕರ,ದುಷ್ಟರ, ವೇಶ್ಯೆಯರ, ಧೂರ್ತರ, ಸಾಧ್ವಿ ಸ್ತ್ರೀಯರ, ಹಾಗೂ ಕೆಟ್ಟ ಸ್ತ್ರೀಯರ, ಹೀಗೆ ಎಲ್ಲ ಬಗೆಯ ಕಥೆಗಳೂ ಇವೆ.ಮುಖ್ಯ ಕಥೆ, ಉದಯನ ಮಹಾರಾಜನ ಪುತ್ರ ನರವಾಹನದತ್ತನು ಹೇಗೆ ವಿದ್ಯಾಧರರ ಚಕ್ರವರ್ತಿಯಾದ ಎನ್ನುವುದಾಗಿದ್ದು, ಅವನ ಸುತ್ತ ಬರುವ ಹಲವಾರು ಪಾತ್ರಗಳು ಇತರ ಉಪಕಥೆಗಳನ್ನು ಹೇಳುತ್ತಾ ಹೋಗುತ್ತವೆ.ಈ ಅನುಪಮ ಗ್ರಂಥಕ್ಕೆ ಮೂಲ, ಪೈಶಾಚಿ ಪ್ರಾಕೃತ ಭಾಷೆಯಲ್ಲಿ ರಚಿತವಾದ ಬೃಹತ್ಕಥೆ.ಈ ಬೃಹತ್ಕಥೆಯನ್ನು ಬರೆದವನು ಗುಣಾಢ್ಯನೆಂಬ ಪಂಡಿತ.ಇವನು ಇದನ್ನು ಬರೆದುದರ ಹಿಂದೆ ಬಹಳ ರೋಚಕವಾದ ಒಂದು ಕಥೆಯಿದೆ.ಈ ಕಥೆ, ಕಥಾಸರಿತ್ಸಾಗರದಲ್ಲೇ ಆರಂಭದಲ್ಲಿ ಬರುತ್ತದೆ.ಆ ಕಥೆಯನ್ನು ಈಗ ಸಂಕ್ಷಿಪ್ತವಾಗಿ ನೋಡೋಣ.
     ಒಮ್ಮೆ ಕೈಲಾಸದಲ್ಲಿ ಪಾರ್ವತಿಯು ಶಿವನನ್ನು ಯಾರೂ ಕೇಳಿರದ ಒಂದು ಅಪೂರ್ವ ಕಥೆಯನ್ನು ಹೇಳಬೇಕೆಂದು ಕೇಳಿಕೊಂಡಳು.ಆಗ ಪರಶಿವನು,"ದೇವತೆಗಳು ನಿತ್ಯ ಸುಖಿಗಳು.ಮನುಷ್ಯರು ನಿತ್ಯ ದು:ಖಿಗಳು.ಆದ್ದರಿಂದ ಇವರಿಬ್ಬರನ್ನೂ ಬಿಟ್ಟು, ವಿದ್ಯಾಧರರ ಕಥೆಗಳನ್ನು ಹೇಳುತ್ತೇನೆ ಕೇಳು!" ಎಂದು ನಂದಿಗೆ ಒಳಗೆ ಯಾರನ್ನೂ ಬಿಡಬಾರದೆಂದು ಹೇಳಿ ಕಥೆಯನ್ನು ಹೇಳಲು ಆರಂಭಿಸಿದನು.ಆಷ್ಟರಲ್ಲಿ ಪುಷ್ಪದಂತನೆಂಬ ಗಣನು ಶಿವನ ದರ್ಶನಕ್ಕಾಗಿ ಬಂದನು.ಆದರೆ ನಂದಿಯು ಅವನನ್ನು ಒಳಗೆ ಬಿಡದಿರಲು, ಅವನು ದುಂಬಿಯ ರೂಪ ತಾಳಿ ನಂದಿಗೆ ತಿಳಿಯದಂತೆ ಒಳಹೊಕ್ಕನು! ಅಲ್ಲಿ ಮರೆಯಲ್ಲಿ ನಿಂತು ಶಿವನು ಪಾರ್ವತಿಗೆ ಹೇಳಿದ ಅಪೂರ್ವ ಕಥೆಗಳನ್ನು ಕೇಳಿದನು.ಅನಂತರ ಮನೆಗೆ ಹೋಗಿ,ತಡೆಯಲಾರದೇ ಆ ಕಥೆಗಳನ್ನು ತನ್ನ ಪತ್ನಿ ಜಯೆಗೆ ಹೇಳಿದನು.ಮರುದಿನ, ಪಾರ್ವತಿಯ ದಾಸಿಯೇ ಆಗಿದ್ದ ಜಯೆ, ಅಪೂರ್ವ ಕಥೆಯೆಂದು ಅದನ್ನೇ ಪಾರ್ವತಿಗೆ ಹೇಳಿದಳು! ಪಾರ್ವತಿಗೆ ಕೋಪ ಬಂದು, ಶಿವನನ್ನು,"ಅಪೂರ್ವ ಕಥೆಯೆಂದು ಹೇಳಿದೆನಲ್ಲಾ? ಅದು ನಮ್ಮ ಜಯೆಗೂ ಗೊತ್ತಿದೆ!" ಎಂದು ಗದರಿಕೊಂಡಳು! ಆಗ ಆಶ್ಚರ್ಯಚಕಿತನಾದ ಶಿವನು ದಿವ್ಯ ದೃಷ್ಟಿಯಿಂದ ನಡೆದುದನ್ನು ತಿಳಿದು ಪಾರ್ವತಿಗೆ ಹೇಳಿದನು.ಇದರಿಂದ ಕುಪಿತಳಾದ ಪಾರ್ವತಿಯು ಪುಷ್ಪದಂತನನ್ನು ಕರೆಸಿ,"ಕಥೆಗಳನ್ನು ಕದ್ದು ಕೇಳಿದ ತಪ್ಪಿಗೆ ಮನುಷ್ಯಲೋಕದಲ್ಲಿ ಹುಟ್ಟು, ಹೋಗು!" ಎಂದು ಶಪಿಸಿದಳು! ಆಗ ಮಾಲ್ಯವಂತನೆಂಬ ಇನ್ನೊಬ್ಬ ಗಣ, ಇಷ್ಟು ಸಣ್ಣ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆಯೇ ಎಂದು ಪುಷ್ಪದಂತನನ್ನು ಸಮರ್ಥಿಸಿಕೊಂಡನು.ಅದರಿಂದ ಮತ್ತಷ್ಟು ಕುಪಿತಳಾದ ಪಾರ್ವತಿಯು ಅವನಿಗೂ ಮನುಷ್ಯಲೋಕದಲ್ಲಿ ಹುಟ್ಟುವಂತೆ ಶಪಿಸಿದಳು! ಆಗ ಇಬ್ಬರೂ ಗಣಗಳು ತಪ್ಪಾಯಿತೆಂದು ಪಾರ್ವತಿಯ ಕಾಲಿಗೆ ಬೀಳಲು, ಪಾರ್ವತಿಯು ಕರಗಿ, ಅವರಿಗೆ ಉಶ್ಶಾಪವನ್ನು ನೀಡಿದಳು,"ಪುಷ್ಪದಂತನು ವಿಂಧ್ಯಾಟವಿಗೆ ಬಂದು ಕಾಣಭೂತಿಯೆಂಬ ಶಾಪಗ್ರಸ್ತ ಪಿಶಾಚನನ್ನು ಕಂಡಾಗ ತನ್ನ ಪೂರ್ವಜನ್ಮ ಹಾಗೂ ಈ ಕಥೆಗಳು ನೆನಪಾಗುತ್ತವೆ.ಆಗ ಅವನು ಆ ಪಿಶಾಚನಿಗೆ ಈ ಕಥೆಗಳನ್ನು ಹೇಳಲು ತನ್ನ ಶಾಪವಿಮೋಚನೆಯಾಗುತ್ತದೆ.ಮುಂದೆ, ಮಾಲ್ಯವಂತನು ಅದೇ ಕಾಡಿಗೆ ಬಂದು ಆ ಪಿಶಾಚನನ್ನು ಕಾಣಲು, ಆ ಪಿಶಾಚನು ಈ ಕಥೆಗಳನ್ನು ಅವನಿಗೆ ಹೇಳಲು ಪಿಶಾಚನ ಶಾಪವಿಮೋಚನೆಯಾಗಿ ಅವನು ಯಕ್ಷನಾಗುತ್ತಾನೆ.ಅನಂತರ, ಮಾಲ್ಯವಂತನು ಈ ಕಥೆಗಳನ್ನು ಲೋಕದಲ್ಲಿ ಪ್ರಚಾರ ಮಾಡಲು,ಅವನ ಶಾಪವಿಮೋಚನೆಯಾಗುತ್ತದೆ!"
      ಅಂತೆಯೇ ಪುಷ್ಪದಂತನು ವರರುಚಿಯೆಂಬ ಬ್ರಾಹ್ಮಣನಾಗಿ ಹುಟ್ಟಿ ಬೆಳೆದು ಮಹಾಪಂಡಿತನಾದನು.ಅವನದು ದೊಡ್ಡ ಕಥೆ.ಅದನ್ನು ಇನ್ನೊಂದು ಸಂಚಿಕೆಯಲ್ಲಿ ನೋಡೋಣ.ಸಂಕ್ಷೇಪವಾಗಿ ಅವನು ಯೋಗನಂದನ ಮಂತ್ರಿಯಾಗಿ ಜೀವನದಲ್ಲಿ ಬೇಸರ ಹೊಂದಿ ವಿಂಧ್ಯಾಟವಿಗೆ ಬಂದನು.ಅಲ್ಲಿ ಕಾಣಭೂತಿಯೆಂಬ ಪಿಶಾಚನನ್ನು ಕಾಣಲು, ಅವನಿಗೆ ಪೂರ್ವಜನ್ಮದ ನೆನಪಾಗಿ ಶಿವನು ಹೇಳಿದ ಆ ಅಪೂರ್ವ ಕಥೆಗಳನ್ನು ಹೇಳಿದನು.ಇದರಿಂದ ಅವನ ಶಾಪವಿಮೋಚನೆಯಾಗಿ ಅವನು ಪುನಃ ಪುಷ್ಪದಂತ ಗಣನಾದನು.
      ಮಾಲ್ಯವಂತನು ಗುಣಾಢ್ಯನೆಂಬ ಬ್ರಾಹ್ಮಣನಾಗಿ ಜನಿಸಿ, ಪ್ರತಿಷ್ಠಾನದ ರಾಜ ಸಾತವಾಹನನ ಮಂತ್ರಿಯಾದನು.ಒಮ್ಮೆ, ಸಾತವಾಹನನು ತನ್ನ ರಾಣಿಯರೊಂದಿಗೆ ಜಲಕ್ರೀಡೆಯಾಡುತ್ತಾ ಅವರು ಮೇಲೆ ನೀರೆರೆಚಲು,ಅವರಲ್ಲಿನ ಪ್ರಧಾನ ರಾಣಿ,"ಮೋದಕೈಸ್ತಾಡಯ!" ಎಂದು ಸಂಸ್ಕೃತದಲ್ಲಿ ಹೇಳಿದಳು.ಸ್ಥೂಲವಾಗಿ ನೋಡಿದರೆ ಇದರ ಅರ್ಥ, ಮೋದಕಗಳಿಂದ ಹೊಡೆ ಎಂದಾಗುತ್ತದೆ.ಹಾಗೆಯೇ ತಿಳಿದುಕೊಂಡ ರಾಜ, ಸೇವಕರಿಂದ ಮೋದಕಗಳನ್ನು ತರಿಸಿ ಅವಳಿಗೆ ಹೊಡೆಯಲು ಹೊರಟ! ಆಗ ರಾಣಿಯು ನಗುತ್ತಾ,"ಹೇ ರಾಜಾ! ಮೋದಕಗಳನ್ನೇಕೆ ತರಿಸಿದೆ? ನಾನು ಹೇಳಿದ್ದು, ಮಾ ಉದಕೈ: ತಾಡಯ, ಅಂದರೆ, ನೀರಿನಿಂದ ಹೊಡೆಯಬೇಡ ಎಂದು! ಸಂದರ್ಭ ತಿಳಿಯಬೇಡವೇ?"ಎಂದಳು.ಇದರಿಂದ ಸಾತವಾಹನನಿಗೆ ಅವಮಾನವಾದಂತಾಯಿತು.ತಾನು ಒಳ್ಳೆಯ ಪಂಡಿತನಾಗಬೇಕೆಂದು ಯೋಚಿಸಿ, ಕಷ್ಟಪಟ್ಟು ಕಲಿತರೆ ಎಷ್ಟು ಬೇಗ ಸಂಸ್ಕೃತ ಪಾಂಡಿತ್ಯ ಪ್ರಾಪ್ತವಾಗುವುದೆಂದು ಗುಣಾಢ್ಯನನ್ನೂ ಶರ್ವರ್ಮನೆಂಬ ಪಂಡಿತನನ್ನೂ ಕೇಳಿದ.ಆಗ ಗುಣಾಢ್ಯನು, "ಅದಕ್ಕೆ ವ್ಯಾಕರಣ ಕಲಿಯಬೇಕು. ಅದನ್ನು ಕಲಿಯಲು ಹನ್ನೆರಡು ವರ್ಷಗಳು ಬೇಕು.ಆದರೆ ನಾನು ನಿನಗೆ ಆರು ವರ್ಷಗಳಲ್ಲಿ ಕಲಿಸುತ್ತೇನೆ", ಎಂದನು.ಆಗ ಶರ್ವವರ್ಮನು,"ನಾನು ಆರೇ ತಿಂಗಳುಗಳಲ್ಲಿ ಕಲಿಸುತ್ತೇನೆ ", ಎಂದನು.ಆಗ ಸಿಟ್ಟಿಗೆದ್ದ ಗುಣಾಢ್ಯನು,"ನೀನೇನಾದರೂ ಆರು ತಿಂಗಳುಗಳಲ್ಲಿ ಕಲಿಸಿದರೆ ನಾನು ಸಂಸ್ಕೃತ, ಪ್ರಾಕೃತ, ಮತ್ತು ದೇಶಭಾಶೆಗಳನ್ನು ಬಿಟ್ಟುಬಿಡುತ್ತೇನೆ!" ಎಂದು ಪ್ರತಿಜ್ಞೆ ಮಾಡಿದನು.ಅದಕ್ಕೆ ಶರ್ವವರ್ಮನು,"ನಾನು ಆರು ತಿಂಗಳುಗಳಲ್ಲಿ ಕಲಿಸಲಾಗದಿದ್ದರೆ ನಿನ್ನ ಪಾದುಕೆಗಳನ್ನು ಹನ್ನೆರಡು ವರ್ಷಗಳು ನನ್ನ ತಲೆಯ ಮೇಲೆ ಹೊರುತ್ತೇನೆ!" ಎಂದನು.
     ಶರ್ವವರ್ಮನು ಆ ರಾತ್ರಿಯೇ ಕುಮಾರಸ್ವಾಮಿಯ ಮಂದಿರಕ್ಕೆ ಹೋಗಿ ತಪಸ್ಸು ಮಾಡಿದನು.ಅವನ ತಪಸ್ಸಿಗೆ ಒಲಿದ ಕುಮಾರಸ್ವಾಮಿಯು ಪ್ರತ್ಯಕ್ಷನಾಗಿ ಅವನಿಗೆ ಕಾತಂತ್ರ ಮತ್ತು ಕಾಲಾಪಕ ಎಂಬ ಹೆಸರುಗಳ ಚಿಕ್ಕ ವ್ಯಾಕರಣವನ್ನು ದಯಪಾಲಿಸಿದನು.ಅದರಿಂದ ಶರ್ವವರ್ಮನು ಸಾತವಾಹನನಿಗೆ ಕ್ಷಣಮಾತ್ರದಲ್ಲಿ ಮನಸ್ಸಿನ ಮೂಲಕವೇ ಎಲ್ಲಾ ವಿದ್ಯೆಗಳನ್ನೂ ನೀಡಿದನು! ಸಂತೋಷಗೊಂಡ ರಾಜನು ಅವನನ್ನು ಸನ್ಮಾನಿಸಿ ಮರುಕಚ್ಛ ಎಂಬ ಸ್ಥಳಕ್ಕೆ ರಾಜನನ್ನಾಗಿಯೂ ಮಾಡಿದನು! ಇದರಿಂದ ಮನನೊಂದ ಗುಣಾಢ್ಯನು ತಾನು ಮೊದಲೇ ಹೇಳಿದಂತೆ ಎಲ್ಲಾ ಭಾಷೆಗಳನ್ನೂ ಬಿಟ್ಟು ಮೌನವಾಗಿ ವಿಂಧ್ಯಾಟವಿಗೆ ತನ್ನ ಇಬ್ಬರು ಶಿಷ್ಯರೊಂದಿಗೆ ಹೊರಟುಹೋದನು.ಅಲ್ಲಿ ಅವನು ಪಿಶಾಚಗಳಿಂದ ಪೈಶಾಚೀ ಭಾಷೆಯನ್ನು ಕಲಿತು ಕಾಣಭೂತಿಯೆಂಬ ಪಿಶಾಚನಿಂದ ಶಿವನು ಹೇಳಿದ್ದ ಆ ದಿವ್ಯ ಕಥೆಗಳನ್ನು ಕೇಳಿದನು.ಹಾಗೆಯೇ ಅರಣ್ಯದಲ್ಲಿ ಮಸಿಯಿಲ್ಲದ ಕಾರಣ,ತನ್ನ ರಕ್ತದಲ್ಲೇ ಆ ಎಲ್ಲಾ ಕಥೆಗಳನ್ನೂ ಏಳು ವರ್ಷಗಳಲ್ಲಿ ಬೃಹತ್ಕಥೆಯೆಂಬ ಗ್ರಂಥವಾಗಿ ಬರೆದನು.ಅದು ಏಳು ಲಕ್ಷ ಶ್ಲೋಕಗಳುಳ್ಳ ಏಳು ವಿದ್ಯಾಧರರ ಕಥೆಯಾಗಿತ್ತು. ಅದನ್ನು ನೋಡಿ ಕಾಣಭೂತಿಯು ಶಾಪಮುಕ್ತನಾದನು.ತನ್ನ ಪೂರ್ವಜನ್ಮವನ್ನು ನೆನೆಸಿಕೊಂಡ ಗುಣಾಢ್ಯನು ತನ್ನ ಗ್ರಂಥವನ್ನು ಪ್ರಚಾರ ಮಾಡಿದರೆ ತನ್ನ ಶಾಪಮುಕ್ತಿಯಾಗುವುದೆಂದು ಅರಿತು ಅದನ್ನು ತನ್ನ ಶಿಷ್ಯರ ಮೂಲಕ ಸಾತವಾಹನನಿಗೆ ಕಳಿಸಿದನು.ಪೈಶಾಚೀಭಾಷೆಯ, ರಕ್ತದಲ್ಲಿ ಬರೆದ, ಏಳು ಲಕ್ಷ ಶ್ಲೋಕಗಳ ಆ ದೊಡ್ಡ ಗ್ರಂಥವನ್ನು ನೀರಸವೆಂದು ಉಪೇಕ್ಷಿಸಿ ರಾಜನು ತಿರಸ್ಕರಿಸಿದನು! ಶಿಷ್ಯರು ಪುನಃ ಅದನ್ನು ಗುಣಾಢ್ಯನ ಬಳಿಗೆ ತರಲು,ಬಹಳ ದುಃಖಗೊಂಡ ಗುಣಾಢ್ಯನು ಒಂದು ಅಗ್ನಿಕುಂಡವನ್ನು ನಿರ್ಮಿಸಿ, ತನ್ನ ಗ್ರಂಥದ ಒಂದೊಂದು ಪತ್ರವನ್ನೂ ಓದುತ್ತಾ ಬೆಂಕಿಗೆ ಹಾಕತೊಡಗಿದನು!
       ಈ ಮಧ್ಯೆ, ಸಾತವಾಹನ ರಾಜನು ಯಾವುದೋ ಕಾರಣಕ್ಕೆ ಅಸ್ವಸ್ಥನಾದನು.ಇದಕ್ಕೆ ಕಾರಣ, ಒಣಗಿದ ಮಾಂಸ ತಿಂದದ್ದು ಎಂದು ವೈದ್ಯರು ಹೇಳಿದರು.ಅದೇಕೆ ಒಣಗಿದ ಮಾಂಸದ ಅಡುಗೆ ಮಾಡುತ್ತಿರುವರೆಂದು ಅಡುಗೆಯವರು ನನ್ನು ವಿಚಿರಿಸಿದಾಗ, ಅವರು, ಬೇಡರು ಅಂಥ ಮಾಂಸವನ್ನೇ ಕೊಡುತ್ತಿರುವರೆಂದು ಹೇಳಿದರು.ಬೇಡರನ್ನು ವಿಚಾರಿಸಲು, ಅವರು,"ಇಲ್ಲಿಗೆ ಸ್ವಲ್ಪ ದೂರದಲ್ಲಿ ಒಬ್ಬ ಬ್ರಾಹ್ಮಣನು ಒಂದೊಂದೇ ಪತ್ರ ಓದುತ್ತಾ ಅದನ್ನು ಬೆಂಕಿಗೆ ಹಾಕುತ್ತಿದ್ದಾನೆ.ಅವನ ಕಥೆಯನ್ನು ಕೇಳುತ್ತಾ ಎಲ್ಲಾ ಪ್ರಾಣಿಗಳೂ ಆಹಾರ, ನೀರು ಬಿಟ್ಟು ಅಲ್ಲೇ ನಿಂತು ಕೇಳುತ್ತಿವೆ.ಅದರಿಂದ ಅವುಗಳ ಮಾಂಸ ಒಣಗಿದೆ!" ಎಂದರು.ಇದನ್ನು ಕೇಳಿ ಆಶ್ಚರ್ಯಗೊಂಡ ಸಾತವಾಹನನು ಆ ಬೇಡರೊಂದಿಗೆ ಹೋಗಿ ಗುಣಾಢ್ಯನನ್ನು ಕಂಡ! ಅವನಿಗೆ ನಮಸ್ಕರಿಸಿ ಅವನ ವೃತ್ತಾಂತವನ್ನು ಕೇಳಲು, ಅವನು ತನ್ನ ಶಾಪದ ಕಥೆಯನ್ನು ಹೇಳಿದನು.ಆಗ ತನ್ನ ತಪ್ಪನ್ನರಿತ ಸಾತವಾಹನನು, ಶಿವನು ಹೇಳಿದ ಆ ದಿವ್ಯ ಕಥೆಯನ್ನು ತನಗೆ ಕೊಡಲು ಕೇಳಿದನು.ಆಗ ಗುಣಾಢ್ಯನು,"ಆರು ಲಕ್ಷ ಶ್ಲೋಕಗಳ ಗ್ರಂಥವನ್ನು ನಾನಾಗಲೇ ಸುಟ್ಟುಹಾಕಿಬಿಟ್ಟೆನಪ್ಪ! ಇನ್ನು ಉಳಿದಿರುವುದು ಒಂದು ಲಕ್ಷ ಶ್ಲೋಕಗಳಷ್ಟು ಗ್ರಂಥ ಮಾತ್ರ! ಅದನ್ನೇ ನಿನಗೆ ಕೊಡುತ್ತೇನೆ! ತೆಗೆದುಕೋ!" ಎಂದು ಅವನಿಗೆ ಆ ತನ್ನ ಗ್ರಂಥವನ್ನು ಕೊಟ್ಟು ಯೋಗದಿಂದ ತನ್ನ ಶರೀರವನ್ನು ಬಿಟ್ಟು ಹಿಂದಿನಂತೆ ಗಣನಾದನು.
       ಸಾತವಾಹನನು, ನರವಾಹನದತ್ತನ ಅದ್ಭುತ ಕಥೆಯುಳ್ಳ ಬೃಹತ್ಕಥೆಯೆಂಬ ಆ ಗ್ರಂಥಕ್ಕೆ ಈ ಕಥೆಯ ಪೀಠೀಕೆಯಾಗಿ ಆ ಭಾಷೆಯಲ್ಲೇ ಕಥಾಪೀಠವನ್ನು ಬರೆದನು.ಅಲ್ಲಿಂದ ಮುಂದೆ ಆ ಗ್ರಂಥ ಆ ನಗರದಲ್ಲಿ ಪ್ರಸಿದ್ಧವಾಗಿ ಮೂರು ಲೋಕಗಳಲ್ಲೂ ವಿಖ್ಯಾತವಾಯಿತು.
    ಹೀಗೆ ಶಿವನು ಹೇಳಿದ ಬೃಹತ್ಕಥೆ , ಗುಣಾಢ್ಯನ ಮೂಲಕ ಭೂಮಿಗೆ ಬಂದಿತು.ಆದರೆ ಬೃಹತ್ಕಥೆ ಈಗ ಉಪಲಬ್ಧವಿಲ್ಲ.ಆದರೆ ಅದರ ಸಂಸ್ಕೃತ ಅನುವಾದಗಳಾದ ಸೋಮದೇವನ ಕಥಾಸರಿತ್ಸಾಗರ, ಕ್ಷೇಮೇಂದ್ರನ ಬೃಹತ್ಕಥಾಮಂಜರಿ, ಮತ್ತು ಬುಧಸ್ವಾಮಿಯ ಬೃಹತ್ಕಥಾಶ್ಲೋಕಸಂಗ್ರಹ, ಈ ಮೂರು ಗ್ರಂಥಗಳು ಲಭ್ಯವಿದ್ದು, ಇವುಗಳಿಂದ ನಾವು ಬೃಹತ್ಕಥೆಯ ಸ್ವರೂಪವನ್ನು ಅರಿಯಬಹುದು.

ಬುಧವಾರ, ಡಿಸೆಂಬರ್ 28, 2022

ಬೆಂಗಳೂರಿನಲ್ಲಿ ಸಂಗೀತಕ್ಕೊಂದು ಸಂಗ್ರಹಾಲಯ

ಬೆಂಗಳೂರಿನ ಜೆ.ಪಿ.ನಗರದ ಬ್ರಿಗೇಡ್ ಮಿಲೆನಿಯಂ ರಸ್ತೆಯ ಬಳಿ,ವುಡ್ ರೋಸ್ ಕ್ಲಬ್ ನ ಎದುರು,ಸಂಗೀತಕ್ಕಾಗಿ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯೆನ್ಸ್(ಭಾರತೀಯ ಸಂಗೀತದ ಅನುಭವ) ಎಂಬ ಅದ್ಭುತವಾದ ಒಂದು ಸಂಗ್ರಹಾಲಯ ಆರಂಭವಾಗಿದೆ!ಇಂಡಿಯನ್ ಮ್ಯೂಸಿಕ್ ಎಕ್ಸಪೀರಿಯೆನ್ಸ್ ಟ್ರಸ್ಟ್ ನ ವತಿಯಿಂದ, ಬ್ರಿಗೇಡ್ ಗ್ರೂಪ್ ಅವರ ಸಹಕಾರದೊಂದಿಗೆ,ಸಂಗೀತಜ್ಞರಾದ ಮಾನಸೀಪ್ರಸಾದ್ ಹಾಗೂ ಡಾ.ಪಪ್ಪು ವೇಣುಗೋಪಾಲ ರಾವ್ ಅವರ ನೇತೃತ್ವದಲ್ಲಿ ನಿರ್ಮಾಣವಾಗಿರುವ ಇದು,ಭಾರತದಲ್ಲೇ ಪ್ರಪ್ರಥಮವಾದ ಸಂಗೀತ ಸಂಗ್ರಹಾಲಯವಾಗಿದೆ!50,000 ಚದರ ಅಡಿಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ತಲೆಯೆತ್ತಿರುವ ಈ ಬೃಹತ್ ಸಂಗ್ರಹಾಲಯ,ಒಂಬತ್ತು ವಿಸ್ತಾರ ಪ್ರದರ್ಶನಾಲಯಗಳನ್ನು ಹೊಂದಿದೆ!ಈ ಪ್ರದರ್ಶನಾಲಯಗಳಲ್ಲಿ ಕರ್ನಾಟಕ ಶಾಸ್ತ್ರೀಯ,ಹಿಂದೂಸ್ತಾನಿ ಶಾಸ್ತ್ರೀಯ,ಜಾನಪದ,ಚಲನಚಿತ್ರ,ಸಮಕಾಲೀನ,ಮಿಶ್ರ,ಹೀಗೆ ಭಾರತದ ಎಲ್ಲ ಸಂಗೀತ ಪ್ರಕಾರಗಳ ಚಿತ್ರಸಹಿತವಾದ ಮಾಹಿತಿಯಿದೆ.ಸಂಗೀತದ ಇತಿಹಾಸ,ಅದರ ಪಯಣ,ಅದರ ವಿವಿಧ ಸಂಪ್ರದಾಯಗಳು,ಇವೆಲ್ಲವೂ ಬಹಳ ಅಚ್ಚುಕಟ್ಟಾಗಿ,ಸುಂದರವಾದ ಹಿತವಾದ ಬೆಳಕಿನ,ವೈಭವಯುತ ಪ್ರದರ್ಶನಾಲಯಗಳಲ್ಲಿ ನಿರೂಪಿತವಾಗಿವೆ.ಅಷ್ಟೇ ಅಲ್ಲದೇ,ಪ್ರತಿಯೊಂದು ವಿಭಾಗದಲ್ಲೂ ಸ್ಪರ್ಶದೃಶ್ಯಯಂತ್ರಗಳಿದ್ದು(ಟಚ್ ಸ್ಕ್ರೀನ್),ಶ್ರವಣಸಾಧನಗಳಿಂದ(ಹೆಡ್ ಫೋನ್) ಸಂಗೀತದ ತುಣುಕುಗಳನ್ನು ಆರಿಸಿಕೊಂಡು ಕೇಳಬಹುದಾಗಿದೆ!ನೂರಕ್ಕೂ ಹೆಚ್ಚು ವಿವಿಧ ಸಂಗೀತ ವಾದ್ಯಗಳೂ ಇಲ್ಲಿದ್ದು,ಅವುಗಳ ವಾದನದ ದೃಶ್ಯಗಳನ್ನು ನೋಡಬಹುದಾಗಿದೆ!ಅಂತೆಯೇ,ಗ್ರಾಮಾಫೋನ್ ಮತ್ತು ಅದರ ಹಳೆಯ ಅಡಕ ಮುದ್ರಿಕೆಗಳು,ವಿವಿಧ ರೇಡಿಯೋಗಳು,ಟಿ.ವಿ.ಗಳು,ಇತ್ತೀಚಿನ ಅಡಕ ಮುದ್ರಿಕೆಗಳು,ಕೆಲವು ಪ್ರಸಿದ್ಧ ಸಂಗೀತಗಾರರ ವಸ್ತ್ರ ಮೊದಲಾದ ಅಮೂಲ್ಯ ವಸ್ತುಗಳು,ಮೊದಲಾದವುಗಳ ಅಪೂರ್ವ ಸಂಗ್ರಹವನ್ನು ಇಲ್ಲಿ ಕಾಣಬಹುದು!ಇಲ್ಲಿ ಮೂರು ಪುಟ್ಟ ಚಿತ್ರಮಂದಿರಗಳೂ ಇದ್ದು ಇವುಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದ ಕಿರು ಚಿತ್ರಗಳು ಪ್ರದರ್ಶನಗೊಳ್ಳುತ್ತಿರುತ್ತವೆ!ಸಂಗ್ರಹಾಲಯದ ಹೊರಗೆ,ಅಂದರೆ ದ್ವಾರದ ಆವರಣದಲ್ಲೇ ಒಂದು ವಿಶಿಷ್ಟ ಶಬ್ದೋದ್ಯಾನ(ಸೌಂಡ್ ಗಾರ್ಡನ್)ವಿದ್ದು,ಇಲ್ಲಿ ಕೆಲವು ಸಂಗೀತಯಂತ್ರಗಳಿವೆ.ಇವುಗಳನ್ನು ಪ್ರವಾಸಿಗರೇ ಬಳಸಿ ಸಂಗೀತದ ಅನುಭವ ಪಡೆಯಬಹುದು!ಇಲ್ಲಿಯೇ ಒಂದು ಪುಟ್ಟ ಉಪಾಹಾರ ಮಂದಿರವೂ ಇದೆ.ಇಷ್ಟಲ್ಲದೇ ಇಲ್ಲಿ ಮಾರಾಟ ಮಳಿಗೆ,ಪ್ರವಚನ ಕೊಠಡಿ,ತರಬೇತಿ ಕೋಣೆಗಳೂ ಇವೆ.ಸಂಗೀತ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.ಆಗಾಗ ಇಲ್ಲಿ ಸಂಗೀತ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ.ಹೀಗೆ ಸಂಗೀತಪ್ರಿಯರು ನೋಡಲೇಬೇಕಾದ ಸುಂದರ ತಾಣವಿದು.
              

ಗುರುವಾರ, ಡಿಸೆಂಬರ್ 22, 2022

ಕಿರಿಯರ ಕಥಾಸರಿತ್ಸಾಗರ

ನನ್ನ ಪುಸ್ತಕ, 'ಕಿರಿಯರ ಕಥಾಸರಿತ್ಸಾಗರ' ಸಪ್ನ ಬುಕ್ ಹೌಸ್ ಪ್ರಕಟಿಸಿದ್ದು, ಈಗ ಮೂರು ಮುದ್ರಣಗಳನ್ನು ಕಂಡಿದೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತಿದೆ!ಕಥಾಸರಿತ್ಸಾಗರವು   ಹುಟ್ಟಿದ್ದು ಕಾಶ್ಮೀರದಲ್ಲಿ!ಗುಣಾಢ್ಯನೆಂಬ ಮಹಾಕವಿ ಪೈಶಾಚ ಭಾಷೆಯಲ್ಲಿ ರಚಿಸಿದ ಬೃಹತ್ಕಥೆಯೆಂಬ ಪ್ರಾಚೀನ ಲೋಕಕಥೆಗಳ ಬೃಹತ್ ಸಂಗ್ರಹ(ಇಂದು ಉಪಲಬ್ಧವಿಲ್ಲ)ವನ್ನು ಮೂರು ಕವಿಗಳು ಸಂಸ್ಕೃತಕ್ಕೆ ರೂಪಾಂತರಿಸಿದರು.ಆ ಮೂರು ಗ್ರಂಥಗಳು,ಸೋಮದೇವನ ಕಥಾಸರಿತ್ಸಾಗರ,ಕ್ಷೇಮೇಂದ್ರನ ಬೃಹತ್ಕಥಾಮಂಜರಿ,ಹಾಗೂ ಬುಧಸ್ವಾಮಿಯ ಬೃಹತ್ಕಥಾಶ್ಲೋಕಸಂಗ್ರಹ.ಮೊದಲಿಬ್ಬರು ಕವಿಗಳು ಕಾಶ್ಮೀರದವರಾದರೆ,ಮೂರನೆಯವನು ನೇಪಾಳದವನು.ಹಾಗಾಗಿ,ಕಥಾಸರಿತ್ಸಾಗರವು ಕಾಶ್ಮೀರದ ಅನನ್ಯ ಕೊಡುಗೆ!ಇದೊಂದು ಬೃಹತ್ ಕಥಾಸಂಗ್ರಹವಾಗಿದ್ದು,ಇದರಲ್ಲಿ,ರಾಜರ,ರಾಜಪುತ್ರರ,ಪ್ರೇಮಿಗಳ,ವಂಚಕ ಸ್ತ್ರೀ,ಪುರುಷರ,ಮಾಂತ್ರಿಕರ,ಬೇತಾಳಗಳ,ಪ್ರಾಣಿಪಕ್ಷಿಗಳ,ಬುದ್ಧಿವಂತರ,ಮೂರ್ಖರ,ವೇಶ್ಯೆಯರ,ಕಳ್ಳಕಾಕರ,ಹೀಗೆ ಹಲವಾರು ಬಗೆಗಳ ಕಥೆಗಳಿವೆ.ಪಂಚತಂತ್ರ,ಬೇತಾಳನ ಕಥೆಗಳು,ಅರೇಬಿಯನ್ ನೈಟ್ಸ್ ಮೊದಲಾದ ಅನೇಕ ಕಥಾಸಂಕಲನಗಳಿಗೆ ಇದೇ ಆಕರ.ಮೂಲ ಗ್ರಂಥದಲ್ಲಿ ಇಪ್ಪತ್ತೆರಡು ಸಾವಿರ ಶ್ಲೋಕಗಳಿದ್ದು,ಇದೊಂದು ಬಹುದೊಡ್ಡ ಗ್ರಂಥವಾಗಿದೆ!ರಾಮಾಯಣ,ಮಹಾಭಾರತ,ಭಾಗವತಗಳಂಥ ಧಾರ್ಮಿಕ ಗ್ರಂಥಗಳ ನಂತರ,ಓದಲೇಬೇಕಾದ ಲೌಕಿಕ ವಿಚಾರಗಳ ಮಹತ್ವಪೂರ್ಣ ಗ್ರಂಥವಿದು.ಆಂಗ್ಲ ಭಾಷೆಯಲ್ಲಿ ಸಿ.ಎಚ್.ಟಾನಿಯವರು ಇದನ್ನು ಅನುವಾದಿಸಿ,ಎನ್.ಎಮ್.ಪೆಂಜರ್ ಅವರು ಟಿಪ್ಪಣಿಗಳನ್ನು ಬರೆದು ಪ್ರಕಟವಾಗಿರುವ Ocean of streams of Stories ಎಂಬ ಹತ್ತು ದೊಡ್ಡ ಸಂಪುಟಗಳಿವೆ,ಹಾಗೂ ಅರ್ಷಿಯಾ ಸೆಟ್ಟರ್ ರವರು ಸರಳವಾಗಿ,ಸಂಕ್ಷಿಪ್ತವಾಗಿ ಬರೆದಿರುವ Tales from the Kathasaritsagara ಎಂಬ ಗ್ರಂಥವೂ ಇದೆ. ಕನ್ನಡದಲ್ಲಿ ಎ.ಆರ್.ಕೃಷ್ಣಶಾಸ್ತ್ರಿಗಳು ಸಂಗ್ರಹವಾಗಿ ಬರೆದಿರುವ ಕಥಾಮೃತವೆಂಬ ಗ್ರಂಥವೂ ಕುವೆಂಪು ಭಾಷಾಭಾರತಿ ಪ್ರಾಧಿಕಾರದವರು ಮೂಲದೊಂದಿಗೆ ಕನ್ನಡಾನುವಾದವನ್ನು ಹೊರತಂದಿರುವ ಹತ್ತು ಸಂಪುಟಗಳ ಗ್ರಂಥವೂ ಇವೆ.ಆದರೆ,ಇನ್ನೂ ಸ್ವಲ್ಪ ಸರಳವಾಗಿ,ಕಿರಿಯರಿಗಾಗಿ ಈ ಗ್ರಂಥ ಇರದುದನ್ನು ನೋಡಿ ಈ ಕೆಲಸಕ್ಕೆ ಕೈ ಹಾಕಿದ್ದೇನೆ ಹಾಗೂ ಸಪ್ನ ಬುಕ್ ಹೌಸ್ ನವರು ಪ್ರಕಟಿಸಿದ್ದಾರೆ.ಇಲ್ಲಿ ಕಿರಿಯರೆಂದರ ಕೇವಲ ಮಕ್ಕಳೆಂದಲ್ಲ.ದೊಡ್ಡವರಿಗೂ ಇದೊಂದು ಪ್ರವೇಶಿಕ ಗ್ರಂಥವಾಗಬಲ್ಲದು.ಮೂಲದಲ್ಲಿ ಮುಖ್ಯ ಕಥೆ ಸಾಗುತ್ತಾ ಅದರಲ್ಲಿನ ಹಲವು ಪಾತ್ರಗಳು ಅನೇಕ ಕಥೆಗಳನ್ನು ಹೇಳುತ್ತಾ ಮುಖ್ಯ ಕಥೆಯೇ ಕಳೆದುಹೋದಂತಾಗುತ್ತದೆ.ಇಲ್ಲಿ ಮುಖ್ಯ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿ,ಅನಂತರ ಒಂದಷ್ಟು ಪ್ರಮುಖವಾದ ಚಿಕ್ಕ,ದೊಡ್ಡ ಉಪಕಥೆಗಳನ್ನು ಹೇಳಿದ್ದೇನೆ.ಹಾಗಾಗಿ,ಕಥಾಸರಿತ್ಸಾಗರದ ಒಂದು ಸ್ಥೂಲ ಪರಿಚಯ,ಸರಳವಾಗಿ ಆಗಬಹುದೆಂದು ನಂಬಿದ್ದೇನೆ. ಈ ಗ್ರಂಥವನ್ನು ಓದಿ,ಮಕ್ಕಳಿಂದಲೂ ಓದಿಸಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ ನನ್ನ ಶ್ರಮ ಸಾರ್ಥಕ.

ಭಾನುವಾರ, ಡಿಸೆಂಬರ್ 18, 2022

ಚಾಣಕ್ಯ ನೀತಿ


ಚಾಣಕ್ಯ ನೀತಿ ಒಂದು ಸುಪ್ರಸಿದ್ಧ ಸಂಸ್ಕೃತ ಸುಭಾಷಿತ ಗ್ರಂಥ.ಇದರಲ್ಲಿ ಒಟ್ಟು ಆರು ಪಾಠಗಳಿದ್ದು ಅವುಗಳಲ್ಲಿ ಕೆಲವು ಸುಭಾಷಿತಗಳು ಪುನರಾವರ್ತನೆಯಾದರೂ ಅನೇಕ ಬೇರೆ ಬೇರೆ ಸುಭಾಷಿತಗಳಿವೆ.ಅವುಗಳೆಂದರೆ, ಲಘು ಚಾಣಕ್ಯ, ವೃದ್ಧ ಚಾಣಕ್ಯ, ಚಾಣಕ್ಯ ನೀತಿಶಾಸ್ತ್ರ, ಚಾಣಕ್ಯ ನೀತಿದರ್ಪಣ, ಚಾಣಕ್ಯ ರಾಜನೀತಿಶಾಸ್ತ್ರ, ಮತ್ತು ಚಾಣಕ್ಯ ಸಾರಸಂಗ್ರಹ.ಇವುಗಳಲ್ಲದೇ ಚಾಣಕ್ಯ ನೀತಿಸೂತ್ರಗಳು ಎಂಬ ಗ್ರಂಥವೂ ಇದೆ.ಇವೆಲ್ಲವನ್ನೂ ಒಟ್ಟಾಗಿ ಸಂಕಲಿಸಿ ಮೊದಲಿಗೆ ಪ್ರಕಟಿಸಿದ್ದು ಲುಡ್ವಿಕ್ ಸ್ಟರ್ನ್ ಬ್ಯಾಕ್  ಎಂಬ ಆಂಗ್ಲ ವಿದ್ವಾಂಸರು.ಅನಂತರ, ಸಂಸ್ಕೃತ ವಿದ್ವಾಂಸರಾದ ಶ್ರೀ ಆ.ರಾ.ಪಂಚಮುಖಿ ಅವರು ಇವನ್ನು ಕನ್ನಡಾನುವಾದದೊಂದಿಗೆ ಚಾಣಕ್ಯ ಸಂಪುಟ ಎಂಬ ಬೃಹತ್ ಗ್ರಂಥವಾಗಿ ಪ್ರಕಟಿಸಿದರು.ಈಗ ನಾನು ಚಾಣಕ್ಯ ನೀತಿಯ ಆರು ಗ್ರಂಥಗಳನ್ನು ಎರಡು ಸಂಪುಟಗಳಲ್ಲಿ ಕನ್ನಡಾನುವಾದ, ಮತ್ತು ಸೂಕ್ತ ವಿವರಣೆಗಳೊಂದಿಗೆ ಬರೆದು ಸಪ್ನ ಬುಕ್ ಹೌಸ್ ಮೂಲಕ ಪ್ರಕಟಿಸಿದ್ದೇನೆ.ಮೊದಲನೆಯ ಭಾಗದಲ್ಲಿ, ಲಘು ಚಾಣಕ್ಯ,  ವೃದ್ಧ ಚಾಣಕ್ಯ, ಚಾಣಕ್ಯ ನೀತಿಶಾಸ್ತ್ರ, ಮತ್ತು ಚಾಣಕ್ಯ ಸಾರಸಂಗ್ರಹ ಎಂಬ ನಾಲ್ಕು ಪಾಠಗಳನ್ನು ಪ್ರಕಟಿಸಿದ್ದೇನೆ.ಈಗ ಎರಡನೆಯ ಭಾಗದಲ್ಲಿ, ಚಾಣಕ್ಯ ನೀತಿದರ್ಪಣ ಮತ್ತು ಚಾಣಕ್ಯ ರಾಜನೀತಿಶಾಸ್ತ್ರ ಎಂಬ ಎರಡು ಪಾಠಗಳನ್ನು ಪ್ರಕಟಿಸಿದ್ದೇನೆ.ಸಪ್ನ ಬುಕ್ ಹೌಸ್ ಬಹಳ ಸೊಗಸಾದ ಮುದ್ರಣದೊಂದಿಗೆ ಹೊರತಂದಿದೆ.ಸಪ್ನ ಬುಕ್ ಹೌಸ್ ನ ಎಲ್ಲಾ ಶಾಖೆಗಳಲ್ಲೂ ಸಿಗುತ್ತದೆ.ಆಸಕ್ತರು ಖರೀದಿಸಿ ಓದಿ.

ಬುಧವಾರ, ಸೆಪ್ಟೆಂಬರ್ 28, 2022

ಅಮರ ಚಿತ್ರ ಕಥಾ ಮಾಲಿಕೆಯ ಶುನಶ್ಶೇಪ

ಋಗ್ವೇದದ ಐತರೇಯ ಬ್ರಾಹ್ಮಣದಲ್ಲಿ ಬರುವ ಒಂದು ಪ್ರಸಿದ್ಧವಾದ ಆದರೆ ಹೆಚ್ಚು ಜನರಿಗೆ ತಿಳಿಯದ ಒಂದು ಆಖ್ಯಾನ, ಶುನಶ್ಶೇಪನ ಆಖ್ಯಾನ.ನರಬಲಿಯ ಆಶ್ಚರ್ಯಕರ ಕಥೆಯನ್ನು ಹೊಂದಿರುವ ಇದು, ಅದನ್ನು ತಪ್ಪಿಸಲು ರಚಿತವಾಗಿರುಬಹುದು.ಹರಿಶ್ಚಂದ್ರ ರಾಜನು ವರುಣನ ಉಪಾಸನೆ ಮಾಡಿ, ತನಗೆ ಮಗುವಾದರೆ ಆ ಮಗುವನ್ನೇ ವರುಣನಿಗೆ ಅರ್ಪಿಸುವೆನೆಂದು ಸಂಕಲ್ಪ ಮಾಡುತ್ತಾನೆ.ಅಂತೆಯೇ ಅವನಿಗೆ ರೋಹಿತನೆಂಬ ಮಗನು ಹುಟ್ಟಲು, ವರುಣನು ಮತ್ತೆ ಮತ್ತೆ ಬಂದು ಅವನನ್ನು ಅರ್ಪಿಸಲು ಕೇಳುತ್ತಲೂ ಹರಿಶ್ಚಂದ್ರನು ಏನಾದರೂ ನೆಪ ಮಾಡಿ ಕಾಲ ತಳ್ಳುತ್ತಾನೆ.ಇದರಿಂದ ಅವನಿಗೆ ಜಲೋದರ ರೋಗ ಬರುತ್ತದೆ.ಅಷ್ಟರಲ್ಲಿ ವಿಷಯ ತಿಳಿದ ರೋಹಿತನು ಮನೆ ಬಿಟ್ಟು ಹೋಗಿ, ತನ್ನ ಬದಲಿಗೆ, ಆಂಗಿರಸ ಗೋತ್ರದ ಅಜೀಗರ್ತನೆಂಬ ಬಡ ಬ್ರಾಹ್ಮಣನ ಮೂರು ಗಂಡು ಮಕ್ಕಳ ಪೈಕಿ ಮಧ್ಯದವನಾದ ಶುನಶ್ಶೇಪನನ್ನು ನೂರು ಗೋವುಗಳನ್ನು ಕೊಟ್ಟು ಪಡೆದು ತರುತ್ತಾನೆ.ಅಪ್ಪನಿಗೆ ವಿಷಯ ತಿಳಿಸಿ, ಅವನು ಯಜ್ಞಕ್ಕೆ ಸಿದ್ಧಪಡಿಸಿ, ವಿಶ್ವಾಮಿತ್ರರು ಹಾಗೂ ಇತರ ಋತ್ವಿಜರು ಬಲಿಪಶುವನ್ನು ಕೇಳಲು,ಶುನಶ್ಶೇಪನನ್ನು ಕರೆತರಲಾಗುತ್ತದೆ.ಯಾರೂ ಅವನನ್ನು ಯೂಪಸ್ತಂಭಕ್ಕೆ ಕಟ್ಟಲಾಗಲೀ ತಲೆ ಕತ್ತರಿಸಲಾಗಲೀ ಒಪ್ಪುವುದಿಲ್ಲ.ಆಗ ಅವನ ತಂದೆಯೇ ನೂರು ನೂರು ಗೋವುಗಳನ್ನು ಕೊಡುವುದಾದರೆ ತಾನೇ ಆ ಕೆಲಸ ಮಾಡಲು ಮುಂದಾಗುತ್ತಾನೆ.ಆಗ ಧೈರ್ಯಗೆಡದ ಶುನಶ್ಶೇಪ, ಉಶಸ್ಸನ್ನು ಒಳಗೊಂಡು ಹಲವು ದೇವತೆಗಳನ್ನು ಮಂತ್ರಗಳ ಮೂಲಕ ಸ್ತುತಿಸುತ್ತಾನೆ.ಕೂಡಲೇ ಅವನ ಕಟ್ಟುಗಳು ಬಿಚ್ಚಿಹೋಗಿ ಸ್ವಯಂ ವರುಣನೇ ಪ್ರತ್ಯಕ್ಷನಾಗಿ ತನಗೆ ಯಾವ ಬಲಿಯೂ ಬೇಡವೆನ್ನುತ್ತಾನೆ.ಇದು ವರುಣನ ಪರೀಕ್ಷೆಯಷ್ಟೇ ಎಂದು ಎಲ್ಲರಿಗೂ ತಿಳಿಯುತ್ತದೆ.ಹರಿಶ್ಚಂದ್ರನ ಜಲೋದರ ರೋಗವೂ ವಾಸಿಯಾಗುತ್ತದೆ.ಸಂತೋಷಗೊಂಡ ವಿಶ್ವಾಮಿತ್ರರು ಶುನಶ್ಶೇಪನನ್ನು ತಮ್ಮ ಪುತ್ರನೆಂದು ಅಂಗೀಕರಿಸುತ್ತಾರೆ. ಇಂಥ ಅಪರೂಪದ ವೇದದ ಕಥೆಯನ್ನು ಸುಂದರವಾದ ಚಿತ್ರಗಳ ಸಹಿತವಾಗಿ ಪ್ರಕಟಿಸಿರುವ ಅಮರ ಚಿತ್ರ ಕಥಾ ಮಾಲಿಕೆ ಬಹಳ‌ ಶ್ಲಾಘನೀಯ!

ಶನಿವಾರ, ಆಗಸ್ಟ್ 6, 2022

ಅಮರ ಚಿತ್ರ ಕಥಾ ಮಾಲಿಕೆಯಲ್ಲಿ ಮಹಾಭಾರತ-೧


ಮಹಾಭಾರತ -೧
ವೇದವ್ಯಾಸ

     ಸಚಿತ್ರ ಕಥಾ ನಿರೂಪಣೆಗೆ ಹೆಸರಾದ ಅಮರ ಚಿತ್ರ ಕಥಾ ಮಾಲಿಕೆಯ ಕಾಮಿಕ್ ಪುಸ್ತಕಗಳು,ಪೌರಾಣಿಕ,ಐತಿಹಾಸಿಕ ಮತ್ತು ಜಾನಪದ ಸೇರಿದಂತೆ ಪ್ರಾಚೀನ ಭಾರತದ ಅನೇಕ ಕಥೆಗಳನ್ನು ಕೊಟ್ಟಿದೆ.ಅಂತೆಯೇ,ಅದು ಭಾರತದ ಅಮರ ಕಾವ್ಯ ಮಹಾಭಾರತವನ್ನು ನಲವತ್ತೆರಡು ಸೊಗಸಾದ ಸಂಪುಟಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಹೊರತಂದಿತ್ತು.ಈಗಲೂ ಇವು ಆಂಗ್ಲ ಭಾಷೆಯಲ್ಲಿ ಮೂರು ಸಂಯುಕ್ತ ಬೈಂಡ್ ಸಂಪುಟಗಳ ರೀತಿಯಲ್ಲಿ ಬಾಕ್ಸ್ ನಲ್ಲಿ ದೊರೆಯುತ್ತವೆ.ಈ ಸಂಪುಟಗಳು ಅದ್ಭುತ ವರ್ಣಚಿತ್ರಗಳನ್ನೂ ಸೊಗಸಾದ ನಿರೂಪಣೆಯನ್ನೂ ಹೊಂದಿವೆ.ವಿಷಯವೂ ವಸ್ತುನಿಷ್ಠವಾಗಿದೆ.ಇವನ್ನು ರಚಿಸಲು ಬಳಸಲಾದ ಆಧಾರ ಗ್ರಂಥಗಳು ಹೀಗಿವೆ
೧.ಪಂಡಿತ ರಾಮನಾರಾಯಣದತ್ತ ಶಾಸ್ತ್ರಿ ಪಾಂಡಯವರ ಸಂಸ್ಕೃತ ಮೂಲ ಹಾಗೂ ಹಿಂದೀ ಅನುವಾದ, ಗೀತಾ ಪ್ರೆಸ್, ಗೋರಖಪುರ.
೨.ಕೊಟ್ಟಾಯಂನ ಪ್ರಕಾಶನದ ಕುಂಜಿಕುಟ್ಟನ್ ತಂಪೂರನ್ ರ ಮಲಯಾಳಂ ಪದ್ಯ.
೩.ದೆಹಲಿಯ ಮುನ್ಷಿರಾಮ್ ಮನೋಹರಲಾಲ್ ಪ್ರಕಾಶನದ ಪ್ರತಾಪಚಂದ್ರ ರಾಯರ ಆಂಗ್ಲ ಭಾಷಾಂತರದ ಕೃತಿ.
೪.ಪುಣೆಯ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಕ್ರಿಟಿಕಲ್ ಎಡಿಷನ್ ಕೃತಿ.
        ಈಗ ನಾವು ಮೊದಲು ಪ್ರಕಟವಾದ ಬಿಡಿ ಸಂಪುಟಗಳ ಸುಂದರ ಮುಖಪುಟ ಚಿತ್ರಗಳನ್ನು ನೋಡುತ್ತಾ ಅವುಗಳ ಸಂಕ್ಷಿಪ್ತ ಸಾರಾಂಶವನ್ನು ನೋಡೋಣ.ಇದು ನಮಗೆ ಮಹಾಭಾರತದ ಪಯಣ ಮಾಡಿಸುತ್ತದೆ.
       ವೇದವ್ಯಾಸ ಎಂದು ಹೆಸರಾದ ಮೊದಲ ಸಂಪುಟದ ಮುಖಪುಟ, ವೇದವ್ಯಾಸರು ಗಣೇಶನಿಗೆ ಮಹಾಭಾರತವನ್ನು ಹೇಳುತ್ತಿರುವ ಹಾಗೂ ಅವನು ಅದನ್ನು ಬರೆದುಕೊಳ್ಳುತ್ತಿರುವ ಚಿತ್ರವನ್ನು ಹೊಂದಿದೆ.ಈ ಸಂಪುಟವು ಈ ಕಥೆಯನ್ನು ಹೇಳಿ,ಅನಂತರ ವ್ಯಾಸರು ಮಹಾಭಾರತವನ್ನು ತಮ್ಮ ಶಿಷ್ಯರಿಗೂ ಪುತ್ರ ಶುಕನಿಗೂ ಉಪದೇಶ ಮಾಡಿದ ವಿಷಯವನ್ನು ಹೇಳುತ್ತದೆ.ಅನಂತರ ಅವರೆಲ್ಲರೂ ಜನಮೇಜಯ ರಾಜನು ಮಾಡುತ್ತಿದ್ದ ಸರ್ಪಯಾಗಕ್ಕೆ ಹೋಗುತ್ತಾರೆ.ಪಾಂಡವರ ಮರಿಮಗನಾದ ಜನಮೇಜಯನು(ಜನಮೇಜಯನು,ಅರ್ಜುನನ ಮಗ ಅಭಿಮನ್ಯುವಿನ ಮಗನಾದ ನಿರೀಕ್ಷಿತವೇ ಮಗನಾಗಿದ್ದನು) ಯಜ್ಞ ವಿರಾಮದ ಸಮಯದಲ್ಲಿ ಮಹಾಭಾರತ ಕಥೆಯನ್ನು ಹೇಳಬೇಕೆಂದು ವ್ಯಾಸರನ್ನು ಕೇಳಿಕೊಳ್ಳಲು, ಅವರು ತಮ್ಮ ಶಿಷ್ಯನಾದ ವೈಶಂಪಾಯನನಿಗೆ ಅದನ್ನು ಹೇಳಲು ಹೇಳುತ್ತಾರೆ.ಹೀಗೆ ಮಹಾಭಾರತದ ಕಥೆ ಆರಂಭವಾಗುತ್ತದೆ.ವೈಶಂಪಾಯನರು ಮೊದಲಿಗೆ ಭೂದೇವಿಯೂ ದೇವತೆಗಳೂ ಬ್ರಹ್ಮದೇವನ ಬಳಿ ಹೋಗಿ ಭೂಮಿಯನ್ನು ದುಷ್ಟ ರಾಜರಿಂದ ರಕ್ಷಿಸಬೇಕೆಂದು ಬೇಡಿಕೊಂಡ ವಿಚಾರವನ್ನು ಹೇಳಿದರು.ಆಗ ಬ್ರಹ್ಮನು ದೇವತೆಗಳಿಗೆ ತಮ್ಮ ಅಂಶಗಳಿಂದ ಭೂಮಿಯಲ್ಲಿ ಹುಟ್ಟಿ ದುಷ್ಟರ ಸಂಹಾರಕ್ಕೆ ಸಹಾಯ ಮಾಡಬೇಕೆಂದು ಹೇಳಿದನು.ಅದಕ್ಕೆ ದೇವತೆಗಳು ಒಪ್ಪಿ,ಅನಂತರ ವೈಕುಂಠಕ್ಕೆ ಹೋಗಿ ವಿಷ್ಣುವನ್ನು ಅವತಾರವೆತ್ತಲು ಕೇಳಿಕೊಂಡರು.ಭಗವಾನ್ ವಿಷ್ಣುವು ಅದಕ್ಕೊಪ್ಪಿದನು.ಅನಂತರ,ಕಣ್ವ ಮಹರ್ಷಿಗಳ ಸಾಕುಮಗಳಾದ ಶಕುಂತಲೆಯ ಹಾಗೂ ದುಶ್ಯಂತ ರಾಜನ ಕಥೆ ಬರುತ್ತದೆ.ದುಶ್ಯಂತನು ಯಯಾತಿಯ ಮಗನಾದ ಪೂರುವಿನ ವಂಶವಾದ ಪೌರವ ವಂಶದ ರಾಜನಾಗಿದ್ದ.ಪೂರು,ಮನುವಿನ ವಂಶದವನಾಗಿದ್ದ(ವೈವಸ್ವತ ಮನುವಿನ ಮಗಳಾದ ಇಳೆಗೆ ಪುರೂರವನೆಂಬ ಮಗನಿದ್ದು,ಪುರೂರವನಿಗೆ ಆಯುವೆಂಬ ಮಗನಿದ್ದು,ಆಯುವಿಗೆ ನಹುಷನೆಂಬ ಮಗನಿದ್ದು,ನಹುಷನಿಗೆ ಯಯಾತಿಯು ಮಗನಾಗಿದ್ದನು.ವೈವಸ್ವತ ಮನು,ವಿವಸ್ವಾನ್ ಅಥವಾ ಸೂರ್ಯದೇವನ ಮಗನೂ, ಸೂರ್ಯನು ಕಶ್ಯಪ,ಅದಿತಿಯರ ಮಗನೂ,ಕಶ್ಯಪ ಮರೀಚಿಯ ಮಗನೂ, ಮರೀಚಿಯು ಬ್ರಹ್ಮನ ಮಗನೂ ಆಗಿದ್ದು ಪೌರವ ವಂಶವು ಬ್ರಹ್ಮನವರೆಗೂ ಹೋಗುತ್ತದೆ).ದುಶ್ಯಂತ ಶಕುಂತಲೆಯರಿಗೆ ಭರತನೆಂಬ ಮಗನಾಗಿ,ಅವನಿಂದ ಈ ವಂಶಕ್ಕೆ ಭರತವಂಶವೆಂಬ ಹೆಸರಾಯಿತು.ಈ ಭರತವಂಶದಲ್ಲಿ ಅನಂತರ, ಕುರು ಎಂಬ ರಾಜನು ಸಂವರಣ ಮತ್ತು ತಪತಿಯರಿಗೆ ಮಗನಾಗಿ ಜನಿಸಿದ.ಅವನಿಂದ ಕುರುವಂಶ,ಕೌರವವಂಶ ಎಂಬ ಹೆಸರುಗಳು ಬಂದವು.ಅನಂತರ,ಈ ವಂಶದಲ್ಲಿ ಪ್ರತೀಪನೆಂಬ ರಾಜನ ಮಗನಾಗಿ ಶಂತನು ಜನಿಸಿದ.ಶಂತನು ಮತ್ತು ಸತ್ಯವತಿಯರ ವಿವಾಹ ಕಥೆ ಇಲ್ಲಿ ಬರುತ್ತದೆ.ಉಪರಿಚರ ವಸು ಎಂಬ ರಾಜನ ಮಗಳಾಗಿ,ಸತ್ಯವತಿಯು ಬೆಸ್ತರ ರಾಜನ ಸಾಕುಮಗಳಾಗಿದ್ದಳು.ಶಂತನುವು ಅವಳನ್ನು ಇಷ್ಟಪಡಲು,ದಾಶರಾಜನು ಅವನಿಗೆ ಅವಳಲ್ಲಿ ಹುಟ್ಟುವ ಮಗನೇ ರಾಜನಾಗಬೇಕೆಂದು ನಿಬಂಧನೆ ಹಾಕಿದನು.ಆದರೆ ಶಂತನುವಿಗೆ ಈಗಾಗಲೇ ಗಂಗೆಯಿಂದ ದೇವವ್ರತನೆಂಬ ಮಗನಿದ್ದುದರಿಂದ ಇದಕ್ಕೆ ಒಪ್ಪಲಾಗಲಿಲ್ಲ.ಆಗ ಇದನ್ನು ತಿಳಿದ ದೇವವ್ರತನು,ತಾನು ರಾಜನೂ ಆಗದೇ ಮದುವೆಯೂ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಭೀಷ್ಮನೆಂದು ಪ್ರಸಿದ್ಧನಾದ.ಹೀಗೆ ಶಂತನು ಸತ್ಯವತಿಯನ್ನು ಮದುವೆಯಾಗಿ ಭೀಷ್ಮನಿಗೆ ಇಚ್ಛಾಮರಣಿಯಾಗುವಂತೆ ವರವಿತ್ತ.ಇದಕ್ಕೆ ಮೊದಲು,ಸತ್ಯವತಿಗೆ ಪರಾಶರರೆಂಬ ಋಷಿಗಳಿಂದ ವ್ಯಾಸರು ಹೇಗೆ ಜನಿಸಿದರೆಂಬ ಕಥೆಯೂ ಇಲ್ಲಿ ನಿರೂಪಿತವಾಗಿದೆ.
#ಅಮರಚಿತ್ರಕಥಾಮಾಲಿಕೆಯಲ್ಲಿಮಹಾಭಾರತ
#ಅಮರಚಿತ್ರಕಥೆ
#ಮಹಾಭಾರತ