ಶನಿವಾರ, ಆಗಸ್ಟ್ 6, 2022

ಅಮರ ಚಿತ್ರ ಕಥಾ ಮಾಲಿಕೆಯಲ್ಲಿ ಮಹಾಭಾರತ-೧


ಮಹಾಭಾರತ -೧
ವೇದವ್ಯಾಸ

     ಸಚಿತ್ರ ಕಥಾ ನಿರೂಪಣೆಗೆ ಹೆಸರಾದ ಅಮರ ಚಿತ್ರ ಕಥಾ ಮಾಲಿಕೆಯ ಕಾಮಿಕ್ ಪುಸ್ತಕಗಳು,ಪೌರಾಣಿಕ,ಐತಿಹಾಸಿಕ ಮತ್ತು ಜಾನಪದ ಸೇರಿದಂತೆ ಪ್ರಾಚೀನ ಭಾರತದ ಅನೇಕ ಕಥೆಗಳನ್ನು ಕೊಟ್ಟಿದೆ.ಅಂತೆಯೇ,ಅದು ಭಾರತದ ಅಮರ ಕಾವ್ಯ ಮಹಾಭಾರತವನ್ನು ನಲವತ್ತೆರಡು ಸೊಗಸಾದ ಸಂಪುಟಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಹೊರತಂದಿತ್ತು.ಈಗಲೂ ಇವು ಆಂಗ್ಲ ಭಾಷೆಯಲ್ಲಿ ಮೂರು ಸಂಯುಕ್ತ ಬೈಂಡ್ ಸಂಪುಟಗಳ ರೀತಿಯಲ್ಲಿ ಬಾಕ್ಸ್ ನಲ್ಲಿ ದೊರೆಯುತ್ತವೆ.ಈ ಸಂಪುಟಗಳು ಅದ್ಭುತ ವರ್ಣಚಿತ್ರಗಳನ್ನೂ ಸೊಗಸಾದ ನಿರೂಪಣೆಯನ್ನೂ ಹೊಂದಿವೆ.ವಿಷಯವೂ ವಸ್ತುನಿಷ್ಠವಾಗಿದೆ.ಇವನ್ನು ರಚಿಸಲು ಬಳಸಲಾದ ಆಧಾರ ಗ್ರಂಥಗಳು ಹೀಗಿವೆ
೧.ಪಂಡಿತ ರಾಮನಾರಾಯಣದತ್ತ ಶಾಸ್ತ್ರಿ ಪಾಂಡಯವರ ಸಂಸ್ಕೃತ ಮೂಲ ಹಾಗೂ ಹಿಂದೀ ಅನುವಾದ, ಗೀತಾ ಪ್ರೆಸ್, ಗೋರಖಪುರ.
೨.ಕೊಟ್ಟಾಯಂನ ಪ್ರಕಾಶನದ ಕುಂಜಿಕುಟ್ಟನ್ ತಂಪೂರನ್ ರ ಮಲಯಾಳಂ ಪದ್ಯ.
೩.ದೆಹಲಿಯ ಮುನ್ಷಿರಾಮ್ ಮನೋಹರಲಾಲ್ ಪ್ರಕಾಶನದ ಪ್ರತಾಪಚಂದ್ರ ರಾಯರ ಆಂಗ್ಲ ಭಾಷಾಂತರದ ಕೃತಿ.
೪.ಪುಣೆಯ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಕ್ರಿಟಿಕಲ್ ಎಡಿಷನ್ ಕೃತಿ.
        ಈಗ ನಾವು ಮೊದಲು ಪ್ರಕಟವಾದ ಬಿಡಿ ಸಂಪುಟಗಳ ಸುಂದರ ಮುಖಪುಟ ಚಿತ್ರಗಳನ್ನು ನೋಡುತ್ತಾ ಅವುಗಳ ಸಂಕ್ಷಿಪ್ತ ಸಾರಾಂಶವನ್ನು ನೋಡೋಣ.ಇದು ನಮಗೆ ಮಹಾಭಾರತದ ಪಯಣ ಮಾಡಿಸುತ್ತದೆ.
       ವೇದವ್ಯಾಸ ಎಂದು ಹೆಸರಾದ ಮೊದಲ ಸಂಪುಟದ ಮುಖಪುಟ, ವೇದವ್ಯಾಸರು ಗಣೇಶನಿಗೆ ಮಹಾಭಾರತವನ್ನು ಹೇಳುತ್ತಿರುವ ಹಾಗೂ ಅವನು ಅದನ್ನು ಬರೆದುಕೊಳ್ಳುತ್ತಿರುವ ಚಿತ್ರವನ್ನು ಹೊಂದಿದೆ.ಈ ಸಂಪುಟವು ಈ ಕಥೆಯನ್ನು ಹೇಳಿ,ಅನಂತರ ವ್ಯಾಸರು ಮಹಾಭಾರತವನ್ನು ತಮ್ಮ ಶಿಷ್ಯರಿಗೂ ಪುತ್ರ ಶುಕನಿಗೂ ಉಪದೇಶ ಮಾಡಿದ ವಿಷಯವನ್ನು ಹೇಳುತ್ತದೆ.ಅನಂತರ ಅವರೆಲ್ಲರೂ ಜನಮೇಜಯ ರಾಜನು ಮಾಡುತ್ತಿದ್ದ ಸರ್ಪಯಾಗಕ್ಕೆ ಹೋಗುತ್ತಾರೆ.ಪಾಂಡವರ ಮರಿಮಗನಾದ ಜನಮೇಜಯನು(ಜನಮೇಜಯನು,ಅರ್ಜುನನ ಮಗ ಅಭಿಮನ್ಯುವಿನ ಮಗನಾದ ನಿರೀಕ್ಷಿತವೇ ಮಗನಾಗಿದ್ದನು) ಯಜ್ಞ ವಿರಾಮದ ಸಮಯದಲ್ಲಿ ಮಹಾಭಾರತ ಕಥೆಯನ್ನು ಹೇಳಬೇಕೆಂದು ವ್ಯಾಸರನ್ನು ಕೇಳಿಕೊಳ್ಳಲು, ಅವರು ತಮ್ಮ ಶಿಷ್ಯನಾದ ವೈಶಂಪಾಯನನಿಗೆ ಅದನ್ನು ಹೇಳಲು ಹೇಳುತ್ತಾರೆ.ಹೀಗೆ ಮಹಾಭಾರತದ ಕಥೆ ಆರಂಭವಾಗುತ್ತದೆ.ವೈಶಂಪಾಯನರು ಮೊದಲಿಗೆ ಭೂದೇವಿಯೂ ದೇವತೆಗಳೂ ಬ್ರಹ್ಮದೇವನ ಬಳಿ ಹೋಗಿ ಭೂಮಿಯನ್ನು ದುಷ್ಟ ರಾಜರಿಂದ ರಕ್ಷಿಸಬೇಕೆಂದು ಬೇಡಿಕೊಂಡ ವಿಚಾರವನ್ನು ಹೇಳಿದರು.ಆಗ ಬ್ರಹ್ಮನು ದೇವತೆಗಳಿಗೆ ತಮ್ಮ ಅಂಶಗಳಿಂದ ಭೂಮಿಯಲ್ಲಿ ಹುಟ್ಟಿ ದುಷ್ಟರ ಸಂಹಾರಕ್ಕೆ ಸಹಾಯ ಮಾಡಬೇಕೆಂದು ಹೇಳಿದನು.ಅದಕ್ಕೆ ದೇವತೆಗಳು ಒಪ್ಪಿ,ಅನಂತರ ವೈಕುಂಠಕ್ಕೆ ಹೋಗಿ ವಿಷ್ಣುವನ್ನು ಅವತಾರವೆತ್ತಲು ಕೇಳಿಕೊಂಡರು.ಭಗವಾನ್ ವಿಷ್ಣುವು ಅದಕ್ಕೊಪ್ಪಿದನು.ಅನಂತರ,ಕಣ್ವ ಮಹರ್ಷಿಗಳ ಸಾಕುಮಗಳಾದ ಶಕುಂತಲೆಯ ಹಾಗೂ ದುಶ್ಯಂತ ರಾಜನ ಕಥೆ ಬರುತ್ತದೆ.ದುಶ್ಯಂತನು ಯಯಾತಿಯ ಮಗನಾದ ಪೂರುವಿನ ವಂಶವಾದ ಪೌರವ ವಂಶದ ರಾಜನಾಗಿದ್ದ.ಪೂರು,ಮನುವಿನ ವಂಶದವನಾಗಿದ್ದ(ವೈವಸ್ವತ ಮನುವಿನ ಮಗಳಾದ ಇಳೆಗೆ ಪುರೂರವನೆಂಬ ಮಗನಿದ್ದು,ಪುರೂರವನಿಗೆ ಆಯುವೆಂಬ ಮಗನಿದ್ದು,ಆಯುವಿಗೆ ನಹುಷನೆಂಬ ಮಗನಿದ್ದು,ನಹುಷನಿಗೆ ಯಯಾತಿಯು ಮಗನಾಗಿದ್ದನು.ವೈವಸ್ವತ ಮನು,ವಿವಸ್ವಾನ್ ಅಥವಾ ಸೂರ್ಯದೇವನ ಮಗನೂ, ಸೂರ್ಯನು ಕಶ್ಯಪ,ಅದಿತಿಯರ ಮಗನೂ,ಕಶ್ಯಪ ಮರೀಚಿಯ ಮಗನೂ, ಮರೀಚಿಯು ಬ್ರಹ್ಮನ ಮಗನೂ ಆಗಿದ್ದು ಪೌರವ ವಂಶವು ಬ್ರಹ್ಮನವರೆಗೂ ಹೋಗುತ್ತದೆ).ದುಶ್ಯಂತ ಶಕುಂತಲೆಯರಿಗೆ ಭರತನೆಂಬ ಮಗನಾಗಿ,ಅವನಿಂದ ಈ ವಂಶಕ್ಕೆ ಭರತವಂಶವೆಂಬ ಹೆಸರಾಯಿತು.ಈ ಭರತವಂಶದಲ್ಲಿ ಅನಂತರ, ಕುರು ಎಂಬ ರಾಜನು ಸಂವರಣ ಮತ್ತು ತಪತಿಯರಿಗೆ ಮಗನಾಗಿ ಜನಿಸಿದ.ಅವನಿಂದ ಕುರುವಂಶ,ಕೌರವವಂಶ ಎಂಬ ಹೆಸರುಗಳು ಬಂದವು.ಅನಂತರ,ಈ ವಂಶದಲ್ಲಿ ಪ್ರತೀಪನೆಂಬ ರಾಜನ ಮಗನಾಗಿ ಶಂತನು ಜನಿಸಿದ.ಶಂತನು ಮತ್ತು ಸತ್ಯವತಿಯರ ವಿವಾಹ ಕಥೆ ಇಲ್ಲಿ ಬರುತ್ತದೆ.ಉಪರಿಚರ ವಸು ಎಂಬ ರಾಜನ ಮಗಳಾಗಿ,ಸತ್ಯವತಿಯು ಬೆಸ್ತರ ರಾಜನ ಸಾಕುಮಗಳಾಗಿದ್ದಳು.ಶಂತನುವು ಅವಳನ್ನು ಇಷ್ಟಪಡಲು,ದಾಶರಾಜನು ಅವನಿಗೆ ಅವಳಲ್ಲಿ ಹುಟ್ಟುವ ಮಗನೇ ರಾಜನಾಗಬೇಕೆಂದು ನಿಬಂಧನೆ ಹಾಕಿದನು.ಆದರೆ ಶಂತನುವಿಗೆ ಈಗಾಗಲೇ ಗಂಗೆಯಿಂದ ದೇವವ್ರತನೆಂಬ ಮಗನಿದ್ದುದರಿಂದ ಇದಕ್ಕೆ ಒಪ್ಪಲಾಗಲಿಲ್ಲ.ಆಗ ಇದನ್ನು ತಿಳಿದ ದೇವವ್ರತನು,ತಾನು ರಾಜನೂ ಆಗದೇ ಮದುವೆಯೂ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಭೀಷ್ಮನೆಂದು ಪ್ರಸಿದ್ಧನಾದ.ಹೀಗೆ ಶಂತನು ಸತ್ಯವತಿಯನ್ನು ಮದುವೆಯಾಗಿ ಭೀಷ್ಮನಿಗೆ ಇಚ್ಛಾಮರಣಿಯಾಗುವಂತೆ ವರವಿತ್ತ.ಇದಕ್ಕೆ ಮೊದಲು,ಸತ್ಯವತಿಗೆ ಪರಾಶರರೆಂಬ ಋಷಿಗಳಿಂದ ವ್ಯಾಸರು ಹೇಗೆ ಜನಿಸಿದರೆಂಬ ಕಥೆಯೂ ಇಲ್ಲಿ ನಿರೂಪಿತವಾಗಿದೆ.
#ಅಮರಚಿತ್ರಕಥಾಮಾಲಿಕೆಯಲ್ಲಿಮಹಾಭಾರತ
#ಅಮರಚಿತ್ರಕಥೆ
#ಮಹಾಭಾರತ

ಪೌರಾಣಿಕ ನಾಮಕಥಾಸ್ವಾರಸ್ಯಗಳು


     ನಾವು ಪೌರಾಣಿಕ ಸಾಹಿತ್ಯವನ್ನು ಓದುತ್ತಾ ಹೋದಂತೆ ಅನೇಕ ಸ್ವಾರಸ್ಯಗಳನ್ನು ಕಾಣುತ್ತೇವೆ.ಅಂಥ ಸ್ವಾರಸ್ಯಗಳಲ್ಲಿ ಪೌರಾಣಿಕನಾಮಗಳ ಹಿಂದಿನ ಕಥೆಗಳ ಸ್ವಾರಸ್ಯವೂ ಒಂದು.ಅನೇಕ ಪೌರಾಣಿಕ ಹೆಸರುಗಳ ಹಿಂದೆ ಸ್ವಾರಸ್ಯಕರ ಕಥೆಗಳ ಕಾರಣವಿರುತ್ತದೆ.ಅಂಥ ಕೆಲವನ್ನು ಈಗ ನೋಡೋಣ.
     ಶ್ರೀ ರಾಮನಿಗೆ ಕಾಕುತ್ಸ್ಥ ಎಂದು ಕರೆಯುತ್ತಾರೆ.ಅವನಿಗೆ ಈ ಹೆಸರು ಬಂದುದರ ಹಿಂದೆ ಅವನ ಪೂರ್ವಜನೊಬ್ಬನ ಕಥೆಯಿದೆ.ಶ್ರೀರಾಮನು ಇಕ್ಷ್ವಾಕು ವಂಶಕ್ಕೆ ಸೇರಿದವನು.ಇದರ ಮೂಲಪುರುಷನಾದ ಇಕ್ಷ್ವಾಕುವಿಗೆ ವಿಕುಕ್ಷಿ ಅಥವಾ ಶಶಾದ ಎಂಬ ಮಗನಿದ್ದನು.ಈ ವಿಕುಕ್ಷಿಯು ಒಮ್ಮೆ ಶ್ರಾದ್ಧಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಿ ತರಲು ಹೋಗಿದ್ದಾಗ ಹಸಿವು ತಾಳಲಾರದೇ ಒಂದು ಮೊಲವನ್ನು ತಿಂದುದರಿಂದ ಶಶಾದ ಎಂಬ ಹೆಸರು ಪಡೆದಿದ್ದನು(ಶಶ ಎಂದರೆ ಮೊಲ). ಹೀಗೆ ಇವನ ಹೆಸರಿಗೂ ಒಂದು ಕಥೆ! ಇವನಿಗೆ ಪುರಂಜಯನೆಂಬ ಒಬ್ಬ ಮಗನಿದ್ದು, ಅವನು ಮಹಾವೀರನಾಗಿದ್ದನು.ಒಮ್ಮೆ,ದೇವಾಸುರಯುದ್ಧವಾದಾಗ, ದೇವತೆಗಳು ಇವನ ನೆರವನ್ನು ಯಾಚಿಸಲು, ಇವನು ಇಂದ್ರನೇ ತನಗೆ ವಾಹನವಾದರೆ ನೆರವು ನೀಡುವೆನೆಂದು ಷರತ್ತು ಹಾಕಿದನು.ಆಗ ಇಂದ್ರನು ಒಂದು ಎತ್ತಿನ ರೂಪ ಧರಿಸಿ ಅವನಿಗೆ ವಾಹನವಾಗಲು, ಅವನು ಆ ಎತ್ತಿನ ಹಿಳಲಿನ ಮೇಲೆ ಕುಳಿತು ಯುದ್ಧ ಮಾಡಿ ದೇವತೆಗಳಿಗೆ ವಿಜಯ ತಂದುಕೊಟ್ಟನು.ಎತ್ತಿನ ಹಿಳಲಿಗೆ ಕಕುತ್ ಎನ್ನುವುದರಿಂದ ಹಾಗೂ ಅವನು ಅದರ ಮೇಲೆ ಕುಳಿತು ಯುದ್ಧ ಮಾಡಿದುದರಿಂದ ಅವನಿಗೆ ಕಕುತ್ಸ್ಥ ಎಂದು ಹೆಸರಾಯಿತು.ಅವನ ವಂಶದಲ್ಲಿ ಹುಟ್ಟಿದ್ದರಿಂದ ರಾಮನಿಗೆ ಕಾಕುತ್ಸ್ಥ ಎಂಬ ಹೆಸರು ಬಂದಿತು.ಪುರಂಜಯ ಅಥವಾ ಕಕುತ್ಸ್ಥನ ಕಥೆ ಭಾಗವತ ಮತ್ತು ವಿಷ್ಣುಪುರಾಣಗಳಲ್ಲಿದೆ.
       ಸೀತೆಗೆ ಇರುವ ಹಲವಾರು ಹೆಸರುಗಳ ಹಿಂದೆ ಸ್ವಾರಸ್ಯಕರ ಕಥೆಗಳಿವೆ.ಮೊದಲಿಗೆ ಸೀತಾ ಎಂದರೆ ನೇಗಿಲಿನಿಂದ ಉಳುವಾಗ ಭೂಮಿಯಲ್ಲಿ ಮೂಡುವ ಗೆರೆ.ಆ ಗೆರೆಯಲ್ಲಿ ಅವಳು ದೊರೆತುದರಿಂದ ಅವಳಿಗೆ ಸೀತಾ ಎಂದೇ ಹೆಸರಾಯಿತು! ಹಿಂದಿನ ಜನ್ಮದಲ್ಲಿ ವೇದವತಿಯೆಎಂಬ ಕನ್ಯೆಯಾಗಿದ್ದು ನಾರಾಯಣನನ್ನೇ ಪತಿಯನ್ನಾಗಿ ಪಡೆಯಲು ತಪಸ್ಸು ಮಾಡುತ್ತಿದ್ದಾಗ ರಾವಣನು ಅವಳನ್ನು ತನ್ನನ್ನೇ ವರಿಸುವಂತೆ ಕೆಣಕಲು, ಅವಳು ಅವನ ಸಾವಿಗೆ ತಾನೇ ಕಾರಣಳಾಗುವೆನೆಂದು ಶಪಿಸಿ ಅಗ್ನಿಪ್ರವೇಶ ಮಾಡಿದಳು.ಅನಂತರ ಅವಳು ಪುನಃ ಅಯೋನಿಜೆಯಾಗಿ ಒಂದು ಕಮಲಪುಷ್ಪದಲ್ಲಿ ಜನಿಸಿ,ರಾವಣನಿಗೇ ಸಿಕ್ಕಿದಳು!ಆಗ ಜ್ಯೋತಿಷಿಗಳು ಆ ಮಗುವಿನಿಂದ ಅವನು ಪ್ರಾಣಕ್ಕೇ ಆಪತ್ತು ಎಂದು ಹೇಳಿದಾಗ ಅವನು ಅದನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಸಮುದ್ರಕ್ಕೆ ಹಾಕಿಬಿಟ್ಟನು! ಅದು ಹೇಗೋ ಆ ಪೆಟ್ಟಿಗೆ ಮಿಥಿಲಾನಗರಿಯ ನೆಲದಲ್ಲಿ ಸೇರಿಹೋಗಲು,ಜನಕನು ಯಜ್ಞಕ್ಕಾಗಿ ನೆಲವನ್ನು ನೇಗಿಲಿನಿಂದ ಉಳುವಾಗ ಮೂಡಿದ ಗೆರೆಯಲ್ಲಿ ಕಾಣಿಸಿಕೊಂಡಿತು! ಹಾಗಾಗಿ ಆ ಮಗುವಿಗೆ ಸೀತಾ ಎಂದು ಹೆಸರಾಯಿತು.ಇದು ರಾಮಾಯಣದ ಉತ್ತರಕಾಂಡದಲ್ಲಿ ವರ್ಣಿತವಾಗಿದೆ.ಇನ್ನು ಅವಳಿಗೆ ಜನಕನ ಮಗಳಾಗಿ ಜಾನಕಿ,ವಿದೇಹದೇಶದ ಮಿಥಿಲಾನಗರಿಯ ರಾಜಕುಮಾರಿಯಾಗಿ ವೈದೇಹಿ ಮತ್ತು ಮೈಥಿಲಿ ಎಂಬ ಹೆಸರುಗಳಿವೆಯಷ್ಟೇ? ಇವುಗಳ ಹಿಂದೆಯೂ ಸ್ವಾರಸ್ಯಕರವಾದ ಕಥೆಯಿದೆ.ವಿಷ್ಣು ಮತ್ತು ಭಾಗವತ ಪುರಾಣಗಳಲ್ಲಿ ಕಾಣುವಂತೆ,ನಿಮಿ ಎಂಬ ರಾಜನು ಸತ್ರಯಾಗಕ್ಕಾಗಿ ವಸಿಷ್ಠರನ್ನು ಪೌರೋಹಿತ್ಯಕ್ಕಾಗಿ ಕೇಳಲು, ಅವರು ಇಂದ್ರನ ಪೌರೋಹಿತ್ಯವಿದ್ದುದರಿಂದ ಕಾಯಲು ಹೇಳಿದರು.ಆದರೆ ನಿಮಿಯು ಇತರರ ನೆರವಿನಿಂದ ಯಜ್ಞ ಮಾಡಲು, ವಸಿಷ್ಠರು ಕೋಪದಿಂದ ಅವನ ದೇಹ ಬಿದ್ದುಹೋಗಲೆಂದು ಶಪಿಸಿದರು! ಇದರಿಂದ ಕುಪಿತನಾದ ನಿಮಿಯೂ ಅವರಿಗೆ ಹಾಗೆಯೇ ಶಪಿಸಿದನು! ಇಬ್ಬರೂ ಸಾಯಲು, ವಸಿಷ್ಠರು ಬ್ರಹ್ಮನ ಬಳಿ ಹೋಗಿ ಸ್ಥೂಲ ದೇಹಕ್ಕಾಗಿ ಬೇಡಿ, ಅವನ ಆದೇಶದಂತೆ ಪುನಃ ಮಿತ್ರಾವರುಣರೆಂಬ ದೇವತೆಗಳ ವೀರ್ಯದಿಂದ ಜನಿಸಿದರು.ನಿಮಿಯ ದೇಹವನ್ನು ಋಷಿಗಳು ಪರಿಮಳದ್ರವ್ಯಗಳಿಂದ ರಕ್ಷಿಸಿ, ದೇವತೆಗಳನ್ನು ಅವನನ್ನು ಪುನಃ ಬದುಕಿಸುವಂತೆ ಯಾಚಿಸಲು,ನಿಮಿಯು ಒಪ್ಪದೇ ತಾನು ಸಕಲ ಪ್ರಾಣಿಗಳ ಕಣ್ರೆಪ್ಪೆಗಳಲ್ಲಿ ನೆಲೆಸಬೇಕೆಂದು ಕೇಳಿಕೊಂಡನು.ಅವರು ಹಾಗೆಯೇ ಮಾಡಲು, ಎಲ್ಲಾ ಪ್ರಾಣಿಗಳಲ್ಲೂ ನಿಮೇಷ,ಉನ್ಮೇಷಗಳು (ಕಣ್ಣು ಮಿಟುಕಿಸುವುದು) ಉಂಟಾದವು. ಈಗ ಋಷಿಗಳು ನಿಮಿಯ ದೇಹವನ್ನು ಕಡೆಯಲು, ಒಬ್ಬ ಪುರುಷನು ಉದಯಿಸಿದನು! ಹೀಗೆ ಅಸಾಧಾರಣವಾಗಿ ಜನಿಸಿದುದರಿಂದ ಅವನಿಗೆ ಜನಕನೆಂದೂ ದೇಹವಿಲ್ಲದ ತಂದೆಗೆ ಜನಿಸಿದುದರಿಂದ ವಿದೇಹನೆಂದೂ,ಮಥನದಿಂದ ಜನಿಸಿದುದರಿಂದ ಮಿಥಿ ಅಥವಾ ಮೈಥಿಲನೆಂದೂ ಪ್ರಸಿದ್ಧನಾದನು! ಮುಂದೆ ಅವನ ವಂಶದವರೆಲ್ಲರಿಗೂ ಈ ಹೆಸರುಗಳು ಉಳಿದುಕೊಂಡವು.ಅವರಲ್ಲಿ ಸೀರ ಅಥವಾ ನೇಗಿಲನ್ನು ಧ್ವಜವಾಗುಳ್ಳ ಸೀರಧ್ವಜ ಜನಕನ ಮಗಳೇ ಸೀತೆ!ಈ ಜನಕರಿಗಿದ್ದ ವಿದೇಹ ಮತ್ತು ಮಿಥಿ ಅಥವಾ ಮೈಥಿಲ ಎಂಬ ಹೆಸರುಗಳಿಂದ ಅವರ ದೇಶ ಮತ್ತು ನಗರಿಗಳಿಗೆ ವಿದೇಹ ಮತ್ತು ಮಿಥಿಲಾ ಎಂಬ ಹೆಸರುಗಳು ಬಂದವು.ಅಂಥ ಒಬ್ಬ ಜನಕನ ಮಗಳಾಗಿ ಸೀತೆಗೆ ಜಾನಕಿ, ವೈದೇಹಿ ಮತ್ತು ಮೈಥಿಲಿ ಎಂಬ ಹೆಸರುಗಳು ಬಂದವು.
        ಇಲ್ಲಿಯೇ ನಾವು ಅಗಸ್ತ್ಯ ಮಹರ್ಷಿಗಳಿಗೆ ಕುಂಭಸಂಭವ ಎಂಬ ಹೆಸರು ಏಕೆ ಬಂತೆಂದು ಸಂಕ್ಷೇಪವಾಗಿ ನೋಡಬಹುದು.ಒಮ್ಮೆ ಮಿತ್ರಾವರುಣರಿಬ್ಬರೂ ಅಪ್ಸರೆ ಊರ್ವಶಿಯನ್ನು ಮೋಹಿಸಿ,ವೀರ್ಯಪತನ ಮಾಡಿಕೊಂಡು ಒಂದು ಕುಟುಂಬದಲ್ಲಿಟ್ಟು ಸಂರಕ್ಷಿಸಿದರು.ಆಗ ಆ ವೀರ್ಯಗಳಿಂದ ಆ ಕುಂಭದಲ್ಲಿ ವಸಿಷ್ಠರೂ ಅಗಸ್ತ್ಯರೂ ಜನಿಸಿದರು.ಅವರಲ್ಲಿ ಅಗಸ್ತ್ಯರಿಗೆ ಮಾತ್ರ ಕುಂಭಸಂಭವ ಎಂಬ ಹೆಸರು ಉಳಿದುಕೊಂಡಿತು!
       ಇನ್ನು ರಾವಣನ ಮೂಲ ಹೆಸರು, ಅವನಿಗೆ ಹತ್ತು ತಲೆಗಳಿದ್ದುದರಿಂದ,ದಶಾನನ,ದಶಗ್ರೀವ ಎಂದೆಲ್ಲಾ ಇತ್ತು.ಅವನು ಕುಬೇರನಿಂದ ವಶಪಡಿಸಿಕೊಂಡ ವಾಹನ ಪುಷ್ಪಕ ವಿಮಾನ ಕೈಲಾಸ ಪರ್ವತದ ಮೇಲೆ ಹಾರದಿರಲು, ಅವನು ಕೈಲಾಸ ಪರ್ವತವನ್ನೇ ಎತ್ತಿ ಎಸೆದು ಮುಂದೆ ಹೋಗಲೆಂದು ಅದನ್ನು ಎತ್ತತೊಡಗಿದ!ಕೈಲಾಸ ಪರ್ವತವು ಅಲ್ಲಾಡಿದಾಗ ಪಾರ್ವತಿಯೂ ಶಿವಗಣಗಳೂ ಹೆದರಲು, ಶಿವನು ತನ್ನ ಹೆಬ್ಬೆರಳನ್ನು ಒತ್ತಿ ಅದು ರಾವಣನ ಮೇಲೆ ಬೀಳುವಂತೆ ಮಾಡಿದನು.ಆಗ ರಾವಣನ ಇಪ್ಪತ್ತು ತೋಳುಗಳು ಪರ್ವತದ ಅಡಿಯಲ್ಲಿ ಸಿಕ್ಕಿಕೊಂಡು ಅವನು ಭಯಂಕರವಾಗಿ ಅರಚಿದನು! ಅನಂತರ ಅವನು ಸಾಮಗಾನಗಳಿಂದ ಶಿವನನ್ನು ಸ್ತುತಿಸಲು, ಶಿವನು ಪ್ರಸನ್ನನಾಗಿ ಅವನನ್ನು ಪರ್ವತದಿಂದ ಬಿಡಿಸಿ, ಅವನಿಗೆ ಚಂದ್ರಹಾಸವೆಂಬ ಖಡ್ಗವನ್ನು ಕೊಡುತ್ತಾ, ಅವನು ಅರಚಿದ ಶಬ್ದ,ಸಕಲ ಪ್ರಾಣಿಗಳೂ ರಾವಿತವಾಗುವಂತೆ, ಅಂದರೆ ಹೆದರಿ ಕೂಗುವಂತೆ ಮಾಡಿದುದರಿಂದ ಇನ್ನು ಮುಂದೆ ರಾವಣನೆಂದು ಪ್ರಸಿದ್ಧನಾಗುವನೆಂದನು.ಈ ಕಥೆ ರಾಮಾಯಣದ ಉತ್ತರಾಖಾಂಡದಲ್ಲಿದೆ.ಇಲ್ಲಿಯೇ ಹೇಳಿರುವಂತೆ, ರಾವಣನ ಪುತ್ರ ಮೇಘನಾದನು ಹುಟ್ಟಿದಾಗ ಮೇಘದಂತೆ ಗರ್ಜಸಿದುದರಿಂದ ಅವನಿಗೆ ಆ ಹೆಸರು ಬಂದಿತು.ರಾವಣನು ಇಂದ್ರನ ಮೇಲೆ ದಾಳಿ ಮಾಡಿದಾಗ ಇಂದ್ರಾದಿ ದೇವತೆಗಳಿಂದ ಸುತ್ತುವರೆಯಲ್ಪಟ್ಟು ಸೋಲುವುದರಲ್ಲಿದ್ದನು.ಆಗ ಮೇಘನಾದನು ಇಂದ್ರನೊಡನೆ ಹೋರಾಡಿ ಅವನನ್ನು ಸೆರೆಹಿಡಿದು ತಂದೆಯನ್ನು ಬಿಡಿಸಿಕೊಂಡು ಹೋದನು.ಅನಂತರ ಬ್ರಹ್ಮನ ಅಪ್ಪಣೆಯಂತೆ ಇಂದ್ರನನ್ನು ಮುಕ್ತಗೊಳಿಸಿದನು.ಹೀಗೆ ಇಂದ್ರನನ್ನು ಗೆದ್ದುದರದಿಂದ ಮೇಘನಾದನಿಗೆ ಇಂದ್ರಜಿತ್ ಎಂದು ಹೆಸರಾಯಿತು.
        ರಾವಣನ ತಂದೆ ವಿಶ್ರಶಸನೆಂಬ ಋಷಿ.ಅವನ ಹೆಸರಿನ ಹಿಂದೆಯೂ ಸ್ವಾರಸ್ಯಕರ ಕಥೆಯಿದೆ.ಬ್ರಹ್ಮನ ಮಗನಾದ ಪುಲಸ್ತ್ಯ ಋಷಿಯು ತೃಣಬಿಂದು ಎಂಬ ರಾಜರ್ಷಿಯ ಆಶ್ರಮದಲ್ಲಿ ತಪಸ್ಸು ಮಾಡುತ್ತಿದ್ದಾಗ ಆ ಸುಂದರ ವನಪ್ರದೇಶದಲ್ಲಿ ಅನೇಕ ಅಪ್ಸರೆಯರೂ ನಾಗಕನ್ಯೆಯರೂ ರಾಜರ್ಷಿಯರ ಕನ್ಯೆಯರೂ ಕ್ರೀಡಿಸಲು ಬರುತ್ತಿದ್ದು ತಮ್ಮ ಗಾಯನ,ನರ್ತನಗಳಿಂದ ಋಷಿಯ ತಪಸ್ಸಿಗೆ ವಿಘ್ನವುಂಟುಮಾಡುತ್ತಿದ್ದರು.ಆಗ ಪುಲಸ್ತ್ಯನು ಯಾರಾದರೂ ಕನ್ಯೆ ತನ್ನ ದೃಷ್ಟಿಗೆ ಗೋಚರಿಸಿದರೆ ಗರ್ಭವತಿಯಾಗಲೆಂದು ಶಪಿಸಿದನು.ಅಂದಿನಿಂದ ಅವರೆಲ್ಲರೂ ಅಲ್ಲಿಗೆ ಬರುವುದನ್ನು ನಿಲ್ಲಿಸಿದರು.ಆದರೆ ಈ ವಿಷಯದ ಅರಿವಿಲ್ಲದೆಯೇ ಒಂದು ದಿನ ತೃಣಬಿಂದುವಿನ ಮಗಳೇ ತನ್ನ ಸಖಿಯನ್ನು ಹುಡುಕುತ್ತಾ ಅಲ್ಲಿಗೆ ಬಂದು ಪುಲಸ್ತ್ಯನು ವೇದಪಠಣ ಮಾಡುತ್ತಿದ್ದುದನ್ನು ನೋಡಿ ಗರ್ಭವತಿಯಾದಳು! ಅನಂತರ ತೃಣಬಿಂದುವು ಅವಳನ್ನು ಪುಲಸ್ತ್ಯನಿಗೇ ಮದುವೆ ಮಾಡಿಕೊಟ್ಟನು.ವೇದಶ್ರವಣ ಮಾಡಿದಾಗ ಅವಳು ಗರ್ಭ ಧರಿಸಿದ್ದರಿಂದ ಅವಳಿಗೆ ಹುಟ್ಟಿದ ಮಗನಿಗೆ ಪುಲಸ್ತ್ಯನು ವಿಶ್ರವಸನೆಂದು ಹೆಸರಿಟ್ಟನು.
        ಹೀಗೆಯೇ ಹನುಮಂತನ ಹೆಸರಿಗೂ ಒಂದು ಕಥೆಯಿದ್ದು ಅದೂ ರಾಮಾಯಣದ ಉತ್ತರಕಾಂಡದಲ್ಲಿದೆ.ವಾಯುವಿನ ಅಂಶದಿಂದ ಕೇಸರಿ ಎಂಬ ವಾನರ ಪತ್ನಿ ಅಂಜನೆಗೆ ಹುಟ್ಟಿದ ಆಂಜನೇಯ,ಮಗುವಾಗಿರುವಾಗ, ಉದಯಿಸುತ್ತಿರುವ ಸೂರ್ಯನನ್ನು ನೋಡಿ ಹೆಣ್ಣೆಂದು ಭ್ರಮಿಸಿ ಅದನ್ನು ಹಿಡಿಯಲು ಆಕಾಶಕ್ಕೆ ಹಾರಿದ! ಅಂದೇ ಸೂರ್ಯಗ್ರಹಣವಿದ್ದು, ಸೂರ್ಯನನ್ನು ಹಿಡಿಯಲು ರಾಹುವೂ ಬರುತ್ತಿದ್ದ.ಆಂಜನೇಯನು ಅವನನ್ನು ನೋಡಿ ಅವನನ್ನೂ ಹಿಡಿಯಲು ಹೊರಟ! ಭಯಭೀತನಾದ ರಾಹುವು ಇಂದ್ರನ ಬಳಿ ಹೋಗಿ ದೂರಲು, ಇಂದ್ರನು ಐರಾವತವನ್ನೇರಿ ಬಂದು ಆಂಜನೇಯನನ್ನು ತನ್ನ ವಜ್ರಾಯುಧದಿಂದ ಪ್ರಹರಿಸಿದ! ಅದರಿಂದ ಆಂಜನೇಯನು ಕೆಳಗೆ ಬಿದ್ದು ತನ್ನ ಎಡದವಡೆಯನ್ನು ಮುರಿದುಕೊಂಡು ನಿಶ್ಚೇಷ್ಟಿತನಾದ! ಇದರಿಂದ ಕೋಪಗೊಂಡ ವಾಯುವು ಗಾಳಿಯನ್ನು ಹಿಂದೆಗೆದುಕೊಂಡು ಎಲ್ಲ ಪ್ರಾಣಿಗಳಿಗೂ ತೊಂದರೆಯುಂಟುಮಾಡಲು,ಬ್ರಹ್ಮನೂ ಸೇರಿದಂತೆ ಸಕಲ ದೇವತೆಗಳೂ ಬಂದು ಆಂಜನೇಯನನ್ನು ಬದುಕಿಸಿ ಅವನಿಗೆ ಹಲವಾರು ವರಗಳನ್ನು ಕೊಟ್ಟರು.ಆಗ ಇಂದ್ರನು, ಅವನಿಗೆ 'ಹನು' ಅಥವಾ ದವಡೆಗೆ ಏಟು ಬಿದ್ದ ಕಾರಣ, ಅವನು ಹನುಮಂತನೆಂದು ಪ್ರಸಿದ್ಧನಾಗುವನೆಂದು ಹೇಳಿದನು.ಹೀಗೆ ಆಂಜನೇಯನಿಗೆ ಹನುಮಂತನೆಂದು ಹೆಸರಾಯಿತು.
      ಹೀಗೆಯೇ ಮಹಾಭಾರತದಲ್ಲಿಯೂ ನಾವು ಹೆಸರುಗಳಿಗೆ ಕಾರಣವಾದ ಕಥೆಗಳನ್ನು ನೋಡಬಹುದು.ಭೀಷ್ಮನ ಕಥೆ ಜನಪ್ರಿಯವಾಗಿದೆ.ತನ್ನ ತಂದೆ ಶಾಂತನುವಿನ ಮದುವೆಗಾಗಿ,ಸತ್ಯವತಿಯ ತಂದೆ ದಾಶರಾಜನು ತನ್ನ ಮಗಳ ಮಕ್ಕಳೇ ರಾಜರಾಗಬೇಕೆಂದು ಹಾಕಿದ ಕರಾರಿಗೆ ದೇವವ್ರತನು, ತಾನು ರಾಜನಾಗದೇ, ಜೀವನಪರ್ಯಂತ ಮದುವೆಯಾಗದೇ ಬ್ರಹ್ಮಚಾರಿಯಾಗಿಯೇ ಉಳಿಯುವೆನೆಂದು ಮಾಡಿದ ಭೀಷಣ ಅಥವಾ ಭೀಷ್ಮಪ್ರತಿಜ್ಞೆಯ ಕಾರಣ,ದೇವತೆಗಳಿಂದಲೇ ಭೀಷ್ಮನೆಂದು ಕರೆಸಿಕೊಂಡು ಅದೇ ಹೆಸರಿನಿಂದ ಪ್ರಸಿದ್ಧನಾದನು.ಇವನ ತಂದೆ ಶಾಂತನುವಿನ ಹೆಸರಿಗೂ ಒಂದು ಕಥೆಯ ಕಾರಣವಿದೆ.ಶಾಂತನುವಿನ ತಂದೆ ಪ್ರತೀಪನು ಒಮ್ಮೆ ಗಂಗಾನದಿಯ ದಡದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದಾಗ,ಗಂಗೆಯು ಬಂದು ಅವನ ಬಲತೊಡೆಯ ಮೇಲೆ ಕುಳಿತು ತನ್ನನ್ನು ಮದುವೆಯಾಗುವಂತೆ ಕೇಳಿದಳು.ಆದರೆ ಪ್ರತೀಪನು,ಎಡತೊಡೆಯ ಮೇಲೆ ಹೆಂಡತಿಯೂ ಬಲತೊಡೆಯ ಮೇಲೆ ಮಗಳು, ತಂಗಿ,ಸೊಸೆ,ಮತ್ತಿತರ ಹೆಣ್ಣು ಮಕ್ಕಳೂ ಕುಳಿತುಕೊಳ್ಳಬೇಕೆಂದು ಶಾಸ್ತ್ರವಿರುವುದರಿಂದ, ತನ್ನ ಬಲತೊಡೆಯ ಮೇಲೆ ಕುಳಿತ ಅವಳು ತನಗೆ ಸೊಸೆಯಾಗ ಬೇಕೆಂದು ಹೇಳಿದನು.ಗಂಗೆಯು ಒಪ್ಪಿದಳು.ಆದರೆ ಆ ವೇಳೆಗೆ ವೃದ್ಧನಾಗಿದ್ದ ಪ್ರತೀಪನಿಗೆ ಮಕ್ಕಳೇ ಇರದಿರಲು, ಅವನು ಅನಿವಾರ್ಯವಾಗಿ ತನಗೆ ಮಗನಾಗಲೆಂದು ತನ್ನ ಹೆಂಡತಿಯೊಂದಿಗೆ ತಪಸ್ಸು ಮಾಡಿದನು.ಆಗ ಹುಟ್ಟಿದವನೇ ಶಾಂತನು.ವಂಶವು ಶಾಂತವಾಗುವುದರಲ್ಲಿದ್ದಾಗ ಹುಟ್ಟಿದ್ದರಿಂದ ಅವನಿಗೆ ಶಾಂತನು ಎಂದು ಹೆಸರಾಯಿತು!
      ಕುರುರಾಜಕುಮಾರರ ಕುಲಗುರುಗಳಾಗಿ ಕೃಪಾಚಾರ್ಯರು ಪ್ರಸಿದ್ಧ.ಅವರ ತಂಗಿ ಕೃಪಿ, ಇನ್ನೊಬ್ಬ ಮಹಾನ್ ಗುರು ದ್ರೋಣಾಚಾರ್ಯರನ್ನು ಮದುವೆಯಾದಳು.ಇವರಿಬ್ಬರ ತಂದೆ,ಗೌತಮಪುತ್ರರಾದ ಶರದ್ವಂತರು.ಹುಟ್ಟುವಾಗಲೇ ಧನುರ್ಬಾಣಗಳನ್ನು ಹಿಡಿದು ಹುಟ್ಟಿದ್ದರಿಂದ ಶರದ್ವಂತರೆಂದು ಹೆಸರಾದ ಅವರು,ವೇದಾಧ್ಯಯನ ಕ್ಕಿಂತ ಧನುರ್ವಿದ್ಯೆಯಲ್ಲೇ ಹೆಚ್ಚು ಆಸಕ್ತರಾಗಿದ್ದು,ವಿಶೇಷ ಶಸ್ತ್ರಗಳಿಗಾಗಿ ಒಮ್ಮೆ ತಪಸ್ಸು ಮಾಡುತ್ತಿದ್ದಾಗ, ಇಂದ್ರನು ಅವರ ತಪಸ್ಸನ್ನು ಕೆಡಿಸಲು ಜಾನಪದಿ ಎಂಬ ಅಪ್ಸರೆಯನ್ನು ಕಳಿಸಿದ.ಅವಳ ಅಂದಕ್ಕೆ ಮೋಹಗೊಂಡ ಶರದ್ವಂತರು ವೀರ್ಯಪತನ ಮಾಡಿ ಧನುರ್ಬಾಣಗಳನ್ನು ಜಾರಿಸಿ ಓಡಿಹೋದರು! ಧನುರ್ಬಾಣಗಳ ಮೇಲೆ ಬಿದ್ದ ಅವರ ವೀರ್ಯ ಕೂಡಲೇ ಎರಡು ಭಾಗವಾಗಿ, ಕೂಡಲೇ ಒಂದು ಗಂಡು, ಒಂದು ಹೆಣ್ಣು ಮಗು ಹುಟ್ಟಿದವು! ಕಾಡಿನಲ್ಲಿ ಅಳುತ್ತಿದ್ದ ಅವನ್ನು ನೋಡಿದ ಶಾಂತನು ಕರುಣೆಯಿಂದ ಎತ್ತಿಕೊಂಡು ಹೋಗಿ ಸಾಕತೊಡಗಿದನು.ಹೀಗೆ ತನ್ನ ಕೃಪೆಯಿಂದ ಪೋಷಿಸಲ್ಪಟ್ಟ ಆ ಮಕ್ಕಳಿಗೆ ಕೃಪ,ಕೃಪಿ ಎಂದು ಹೆಸರಿಟ್ಟನು!ಅನಂತರ,ಈ ವಿಷಯ ತಿಳಿದ ಶರದ್ವಂತರು ಬಂದು ತಮ್ಮ ಮಕ್ಕಳನ್ನು ಪಡೆದುಕೊಂಡರು.ಇದೇ ರೀತಿ,ದ್ರೋಣರ ಹೆಸರಿಗೂ ಕಥೆಯಿದೆ.ಭರದ್ವಾಜ ಮಹರ್ಷಿಗಳು ಒಮ್ಮೆ ಘೃತಾಚಿ ಎಂಬ ಅಪ್ಸರೆಯನ್ನು ನೋಡಿ ಮೋಹಗೊಂಡು ವೀರ್ಯಪತನ ಮಾಡಲು, ಅದನ್ನು ಅವರು ಒಂದು ದ್ರೋಣ ಅಥವಾ ಮರದ ಪಾತ್ರೆಯಲ್ಲಿಟ್ಟು ಸಂಸ್ಕರಿಸಿದರು.ಅದರಿಂದ ಹುಟ್ಟಿದವರೇ ದ್ರೋಣರು.ದ್ರೋಣದಲ್ಲಿ ಹುಟ್ಟಿದ್ದರಿಂದ ಅವರಿಗೆ ದ್ರೋಣ ಎಂದು ಹೆಸರಾಯಿತು.ಇಂಥ ಕಥೆಗಳು ಕೇವಲ ವಿಚಿತ್ರ ಕಥೆಗಳೋ ಅಥವಾ, ಇಂದು ಸಂಯೋಗವಿಲ್ಲದೇ ಒಂದೇ ಪ್ರಾಣಿಗೆ ಮರಿ ಹುಟ್ಟಿಸಬಹುದಾದ ಕ್ಲೋನಿಂಗ್ ನಂಥ ತಂತ್ರವಿರುವಂತೆ ಅಂದೂ ಇತ್ತೋ ಎಂಬ ಜಿಜ್ಞಾಸೆ ಮೂಡಿಸುತ್ತದೆ! ಈ ದ್ರೋಣಾಚಾರ್ಯರಿಗೆ ಹುಟ್ಟಿದ ಪುತ್ರನು,ಹುಟ್ಟುತ್ತಲೇ ಉಚ್ಚೈಶ್ರವಸ್ಸು ಎಂಬ ದೇವಲೋಕದ ಅಶ್ವದಂತೆ ಕೆನೆದದ್ದರಿಂದ ಅವನಿಗೆ ಅಶ್ವತ್ಥಾಮನೆಂಬ ಹೆಸರಾಗುವುದೆಂದು ಒಂದು ಅಶರೀರವಾಣಿಯಾಗುತ್ತದೆ.ಹೀಗೆ ಅಶ್ವತ್ಥಾಮನ ಹೆಸರಿಗೂ ಒಂದು ಕಾರಣವಿದೆ.
      ಅರ್ಜುನನ ಮಗನಾದ ಅಭಿಮನ್ಯುವಿನ ಪುತ್ರ ಪರೀಕ್ಷಿತ.ಇವನ ಹೆಸರಿನ ಕಥೆ ಸ್ವಾರಸ್ಯವಾಗಿದೆ.ಕೌರವರೆಲ್ಲರೂ ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಬಳಿಕ, ತನ್ನ ತಂದೆಯಾದ ದ್ರೋಣಾಚಾರ್ಯರ ಸಾವಿನ ಸೇಡಿಗಾಗಿ ಅಶ್ವತ್ಥಾಮನು,ಮಲಗಿದ್ದ ಪಾಂಡವಪುತ್ರರೈವರನ್ನೂ ಕೊಲ್ಲುತ್ತಾನೆ.ಅವನನ್ನು ಶಿಕ್ಷಿಸಲು ಭೀಮಾರ್ಜುನರು ಬರಲು, ಅವನು ಅರ್ಜುನನ ಮೇಲೆ ಬ್ರಹ್ಮಶಿರಸ್ ಅಥವಾ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ!ಆಗ ಅರ್ಜುನನೂ ಅದನ್ನು ಪ್ರಯೋಗಿಸುತ್ತಾನೆ.ಆಗ ವೇದವ್ಯಾಸರು ಬಂದು ಇಬ್ಬರಿಗೂ ಅದನ್ನು ಉಪಸಂಹರಿಸಲು ಹೇಳುತ್ತಾರೆ.ಅರ್ಜುನನೇನೋ ಅದನ್ನು ಉಪಸಂಹರಿಸುತ್ತಾನೆ.ಆದರೆ ಉಪಸಂಹರಿಸಲು ಬಾರದ ಅಶ್ವತ್ಥಾಮನು ಅದು ಪಾಂಡವರ ವಂಶದ ಕುಡಿಯನ್ನು ನಾಶಮಾಡಲಿ ಎಂದು ಘೋಷಿಸುತ್ತಾನೆ.ಇದರಿಂದ ಅವನ ಬ್ರಹ್ಮಾಸ್ತ್ರವು ಆಗ ಗರ್ಭಿಣಿಯಾಗಿದ್ದ ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭದ ಮೇಲೆ ಪರಿಣಾಮ ಬೀರುತ್ತದೆ! ಅವಳಿಗೆ ಸತ್ತ ಮಗು ಹುಟ್ಟುತ್ತದೆ! ಆಗ ಶ್ರೀ ಕೃಷ್ಣನು ತಾನು ಬ್ರಹ್ಮಚರ್ಯ ಪಾಲನೆ ಮಾಡಿದ್ದರೆ ಆ ಮಗು ಬದುಕಲೆಂದು ಘೋಷಿಸಿ ಅದನ್ನು ತನ್ನ ಪಾದದಿಂದ ಸ್ಪರ್ಶಿಸಲು ಮಗುವು ಬದುಕುತ್ತದೆ! ಹೀಗೆ,ಕುಲವೆಲ್ಲಾ ಪರಿಕ್ಷೀಣವಾದ ಬಳಿಕ ಹುಟ್ಟಿದ್ದರಿಂದ ಆ ಮಗುವಿಗೆ ಪರೀಕ್ಷಿತನೆಂದು ಹೆಸರಾಗುತ್ತದೆ.ಭಾಗವತದ ಪ್ರಕಾರ ಶ್ರೀಕೃಷ್ಣನು ಸೂಕ್ಷ್ಮ ರೂಪದಿಂದ ಉತ್ತರೆಯ ಗರ್ಭವನ್ನು ಪ್ರವೇಶಿಸಿ ಮಗುವನ್ನು ಬ್ರಹ್ಮಾಸ್ತ್ರದಿಂದ ರಕ್ಷಿಸುತ್ತಾನೆ.ಅನಂತರ ಹುಟ್ಟಿದ ಮಗು ಆ ಭಗವಂತನನ್ನೇ ಎಲ್ಲ ಜನರಲ್ಲೂ ಹುಡುಕುತ್ತಾ ಪರೀಕ್ಷಿಸುತ್ತಿರುತ್ತದೆ.ಹಾಗಾಗಿ ಅವನಿಗೆ ಪರೀಕ್ಷಿತ ಎಂದು ಹೆಸರಾಗುತ್ತದೆ.
     ಮಹಾಭಾರತದಲ್ಲಿ ಅನೇಕ ಋಷಿಮುನಿಗಳ ಕಥೆಗಳೂ ಇವೆ.ಅವುಗಳಲ್ಲಿ ಚ್ಯವನರ ಕಥೆಯೂ ಒಂದು.ಭೃಗುಮಹರ್ಷಿಗಳ ಪುತ್ರರಾದ ಚ್ಯವನರು ವಿಚಿತ್ರ ರೀತಿಯಲ್ಲಿ ಹುಟ್ಟಿ ತಮ್ಮ ಹೆಸರಿಗೆ ಕಾರಣರಾಗುತ್ತಾರೆ.ಒಮ್ಮೆ ಭೃಗು ಮಹರ್ಷಿಗಳು ಇಲ್ಲದಿದ್ದಾಗ,ಪುಲೋಮನೆಂಬ ರಾಕ್ಷಸನು ಅವರ ಆಶ್ರಮಕ್ಕೆ ಬಂದು, ಗರ್ಭಿಣಿಯಾಗಿದ್ದ ಅವರ ಪತ್ನಿ ಪುಲೋಮೆಯನ್ನು ಕಾಡು ಹಂದಿಯ ರೂಪ ಧರಿಸಿ ಅಪಹರಿಸುತ್ತಾನೆ! ಹಿಂದೆ ಈ ಪುಲೋಮ ರಾಕ್ಷಸನು ಪುಲೋಮೆಯ ತಂದೆಯನ್ನು ಅವಳನ್ನು ತನಗೆ ಮದುವೆ ಮಾಡಿಕೊಡಲು ಕೇಳಿದ್ದಾಗ, ಅವನು ತಮಾಷೆಗಾಗಿ ಆಗಲೆಂದು ಹೇಳಿರುತ್ತಾನೆ.ಆದರೆ ಅವಳನ್ನು ಭೃಗು ಮಹರ್ಷಿಗಳಿಗೆ ಕೊಟ್ಟು ಮದುವೆ ಮಾಡಿರಲು ಸಿಟ್ಟಾಗಿ,ಅವರಿಲ್ಲದ ಸಮಯ ನೋಡಿ ಅವಳನ್ನು ಹೀಗೆ ಅಪಹರಿಸುತ್ತಾನೆ! ಆಗ ಪುಲೋಮೆಯು ಭಯದಿಂದ ಅಳುತ್ತಿರಲು,ಅವಳ ಗರ್ಭದಲ್ಲಿದ್ದ ಮಗುವಿಗೆ ಕೋಪ ಬಂದು ಅದು ಕೂಡಲೇ ಗರ್ಭದಿಂದ ಹೊರಬಂದು ರಾಕ್ಷಸನನ್ನು ದುರುಗುಟ್ಟಿ ನೋಡುತ್ತದೆ! ಕೂಡಲೇ ರಾಕ್ಷಸನು ಸುಟ್ಟು ಭಸ್ಮವಾಗುತ್ತಾನೆ! ಹೀಗೆ ಗರ್ಭದಿಂದ ಚ್ಯುತನಾದ್ದರಿಂದ ಮಗುವಿಗೆ ಚ್ಯವನ ಎಂದು ಹೆಸರಾಗುತ್ತದೆ! ಔರ್ವನೆಂಬ ಮಹರ್ಷಿಯ ಕಥೆಯೂ ಹೀಗೆಯೇ.ಭೃಗುವಂಶದ ಬ್ರಾಹ್ಮಣರಿಗೆ ಹಿಂದೆ ಕ್ಷತ್ರಿಯರು ದಾನದಕ್ಷಿಣೆಗಳನ್ನು ಕೊಟ್ಟು ಬಡವರಾದ ಕಾರಣ, ಮುಂದೆ ಬಂದ ಕ್ಷತ್ರಿಯರು ಅವರನ್ನು ಹಿಡಿದು ಹಿಡಿದು ಕೊಲ್ಲತೊಡಗುತ್ತಾರೆ! ಆಗ ಸಾಧ್ವಿಯೊಬ್ಬಳು ಹೇಗಾದರೂ ತನ್ನ ವಂಶದ ಕುಡಿಯನ್ನು ಉಳಿಸಲು,ಯೋಗಶಕ್ತಿಯಿಂದ ತನ್ನ ಗರ್ಭವನ್ನು ತನ್ನ ತೊಡೆಗೆ ವರ್ಗಾಯಿಸುತ್ತಾಳೆ! ಆದರೆ ಅವಳ ಸಖಿಯ ವಂಚನೆಯಿಂದ ಅವಳೂ ಸಿಕ್ಕಿಬೀಳಲು,ಅವಳ ತೊಡೆಯಿಂದ ಮಗುವು ಹೊರಬಂದು ತನ್ನ ದೃಷ್ಟಿಯಿಂದಲೇ ಆ ಕ್ಷತ್ರಿಯರನ್ನು ಸುಟ್ಟುಹಾಕುತ್ತದೆ! ಊರು ಅಥವಾ ತೊಡೆಯಿಂದ ಹುಟ್ಟಿದುದರಿಂದ ಆ ಮಗುವಿಗೆ ಔರ್ವನೆಂದು ಹೆಸರಾಗುತ್ತದೆ.ಹೀಗೆಯೇ ಅಷ್ಟಾವಕ್ರನ ಹೆಸರಿಗೂ ಒಂದು ಕಥೆಯಿದೆ.ಕಹೋಡನೆಂಬ ಋಷಿಯು ಒಮ್ಮೆ ವೇದಮಂತ್ರಗಳನ್ನು ತಪ್ಪಾಗಿ ಪಠಿಸಲು,ಅವನ ಪತ್ನಿಯ ಗರ್ಭದಲ್ಲಿದ್ದ ಮಗುವು ಅದನ್ನು ತಿದ್ದಿದ್ದಕ್ಕಾಗಿ, ಮಗುವಿಗೆ ಎಂಟು ಕಡೆ ಅಂಗವೈಕಲ್ಯವುಂಟಾಗಲೆಂದು ಶಪಿಸಿಬಿಡುತ್ತಾನೆ! ಹಾಗೆಯೇ ಹುಟ್ಟುವ ಮಗುವಿನ ಹೆಸರು ಅಷ್ಟಾವಕ್ರನೆಂದಾಗುತ್ತದೆ! ಮುಂದೆ, ತನ್ನ ತಂದೆಯನ್ನು ವಾದದಲ್ಲಿ ಸೋಲಿಸಿದ್ದ ವಂದಿಯನ್ನು ಅವನು ಸೋಲಿಸಲು,
 ತಂದೆಯು ಹೇಳಿದ ಸರಸ್ವತೀ ನದಿಯಲ್ಲಿ ಮುಳುಗಿ ಶಾಪವನ್ನು ನೀಗಿಕೊಳ್ಳುತ್ತಾನೆ.
       ಭಾಗವತ ಮೊದಲಾದ ಪುರಾಣಗಳನ್ನೋದುತ್ತಿದ್ದಂತೆ, ನಮಗೆ ಅಪ್ಸರಪ್ರಮುಖಳಾದ ಊರ್ವಶಿಯ ಕಥೆ ಸಿಗುತ್ತದೆ.ವಿಷ್ಣುವು ಒಮ್ಮೆ ನರ, ನಾರಾಯಣ ಎಂಬ ಋಷಿಗಳ ಅವತಾರ ತಾಳಿದ್ದನು.ಅವರಿಬ್ಬರೂ ಲೋಕ ಕಲ್ಯಾಣಕ್ಕಾಗಿ ತಪಸ್ಸು ಮಾಡುತ್ತಿದ್ದಾಗ, ಇಂದ್ರನು ಅದು ತನ್ನ ಸ್ಥಾನಕ್ಕಾಗಿ ಎಂದು ಹೆದರಿ,ಅವರ ತಪೋಭಂಗ ಮಾಡಲು ಮನ್ಮಥನನ್ನು ಹದಿನಾರು ಸಾವಿರ ಅಪ್ಸರೆಯರೊಂದಿಗೆ ಕಳಿಸಿದನು.ಆದರೆ ಅವರು ಎಷ್ಟು ಪ್ರಯತ್ನಿಸಿದರೂ ನರ, ನಾರಾಯಣರು ವಿಚಲಿತರಾಗಲಿಲ್ಲ! ಆಗ ನಾರಾಯಣನು ತನ್ನ ತೊಡೆ ತಟ್ಟಿ, ಅವರೆಲ್ಲರನ್ನೂ ಮೀರಿಸುವ ಸುಂದರ ಅಪ್ಸರೆಯನ್ನು ಸೃಷ್ಟಿಸಿ ಅವರಿಗೆ ಅರ್ಪಿಸಿದನು.ಆಗ ಅವರೆಲ್ಲರೂ ನಾಚಿ ಸೋಲೊಪ್ಪಿಕೊಂಡರು.ನಾರಾಯಣನ ಊರು ಅಥವಾ ತೊಡೆಯಿಂದ ಹುಟ್ಟಿದ ಆ ಅಪ್ಸರೆಯೇ ಊರ್ವಶಿ ಎಂದು ಪ್ರಖ್ಯಾತಳಾದಳು!
        ಇಕ್ಷ್ವಾಕು ವಂಶದ ಯುವನಾಶ್ವ ಎಂಬ ರಾಜನು ಮಕ್ಕಳಾಗದಿರಲು,ಪುತ್ರ ಸಂತಾನಕ್ಕಾಗಿ ಒಂದು ಯಜ್ಞ ಮಾಡಿಸಿದ.ಆಗ ಋತ್ವಿಜರು ಅವನ ರಾಣಿಯು ಕುಡಿದು ಗರ್ಭವತಿಯಾಗಲೆಂದು ಒಂದು ಪಾತ್ರೆಯಲ್ಲಿ ಜಲವನ್ನು ಮಂತ್ರಿಸಿಟ್ಟಿದ್ದರು.ಯಾಗಶಾಲೆಯಲ್ಲೇ ಮಲಗಿದ್ದ ರಾಜ, ರಾತ್ರಿ ಬಾಯಾರಿಕೆಗೆಂದುಆ ನೀರನ್ನೇ ಕುಡಿದು ತಾನೇ ಗರ್ಭಧರಿಸಿಬಿಟ್ಟ! ಅನಂತರ,ಅವಧಿ ಮುಗಿಯಲು, ಬೆಳೆದ ಮಗು ಅವನ ಹೊಟ್ಟೆ ಸೀಳಿಕೊಂಡು ಹೊರಗೆ ಬಂದಿತು! ಆಗ ಅದಕ್ಕೆ ಹಾಲು ಕುಡಿಸಲು ಯಾರೂ ಇಲ್ಲದೇ ಅದು ಅಳುತ್ತಿರಲು, ಸಾಕ್ಷಾತ್ ಇಂದ್ರನೇ ಬಂದು,'ಮಾಂ ಧಾಸ್ಯತಿ'(ನನ್ನನ್ನು ಕುಡಿಯುತ್ತಾನೆ) ಎಂದು ಅಮೃತಮಯವಾದ ತನ್ನ ಬೆರಳನ್ನು ಮಗುವಿನ ಬಾಯಲ್ಲಿಟ್ಟ! ಅವನು ಮಾಂ ಧಾಸ್ಯತಿ ಎಂದಿದ್ದರಿಂದ, ಮಗುವಿಗೆ ಮಾಂಧಾತನೆಂದು ಹೆಸರಾಯಿತು.ಮಾಂಧಾತನು ಮುಂದೆ ಖ್ಯಾತ ರಾಜನಾದನು.
      ಶ್ರೀಕೃಷ್ಣನಿಗೆ ಮುರಾರಿ ಎಂದೂ ಶಿವನಿಗೆ ತ್ರಿಪುರಾರಿ ಎಂದೂ ಹೆಸರುಗಳಿವೆ.ಅರಿ ಎಂದರೆ ಶತ್ರು.ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಲು ಹೋದಾಗ, ಮೊದಲಿಗೆ ಅವನ ಪುರರಕ್ಷಕನಾದ ಮುರ ಎಂಬ ಪಂಚಮುಖಗಳ ರಾಕ್ಷಸನೊಡನೆ ಹೋರಾಡಿ ಅವನನ್ನು ಕೊಲ್ಲಬೇಕಾಯಿತು.ಹಾಗಾಗಿ ಶ್ರೀಕೃಷ್ಣನಿಗೆ ಮುರಾರಿ ಎಂಬ ಹೆಸರು ಪ್ರಾಪ್ತವಾಯಿತು.ಶಿವನು ತ್ರಿಪುರಾಸುರರನ್ನು ಕೊಂದು ತ್ರಿಪುರಾರಿ ಎಂಬ ಹೆಸರು ಪಡೆದನು.ಇದು ಮಹಾಭಾರತ ಮತ್ತು ಮತ್ಸ್ಯಪುರಾಣಗಳಲ್ಲಿ ವಿವರವಾಗಿ ನಿರೂಪಿತವಾಗಿದೆ.ತಾರಕಾಸುರನ ಮಕ್ಕಳಾದ ತಾರಕಾಕ್ಷ, ಕಮಲಾಕ್ಷ, ಮತ್ತು ವಿದ್ಯುನ್ಮಾಲಿಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಮಯನಿಂದ ಭೂಮಿ, ಸ್ವರ್ಗ, ಮತ್ತು ಅಂತರಿಕ್ಷಗಳಲ್ಲಿ ಮೂರು ಅಭೇದ್ಯವಾದ ತಿರುಗುವ ನಗರಗಳನ್ನು ನಿರ್ಮಿಸಿಕೊಂಡು ಅವು ಮೂರೂ ಒಂದೇ ರೇಖೆಯಲ್ಲಿ ಬಂದಾಗ,ಪ್ರತಾಪಶಾಲಿಯಾದ ಮಹಾದೇವನು ಒಂದೇ ಬಾಣದಿಂದ ಅವನ್ನೂ ತಮ್ಮನ್ನೂ ನಾಶಮಾಡಬಹುದೆಂದು ವರ ಪಡೆದರು.ಆ ಮೂರು ನಗರಗಳೇ ತ್ರಿಪುರಗಳು.ಅವುಗಳಿಂದ ಇವರ ಹೆಸರೂ ತ್ರಿಪುರಾಸುರರೆಂದಾಯಿತು.ದೇವತೆಗಳನ್ನು ಅವರು ಹಿಂಸಿಸುತ್ತಿರಲು, ಶಿವನು ಅವರ ತ್ರಿಪುರಗಳು ಒಂದೇ ರೇಖೆಯಲ್ಲಿ ಬಂದ ಸಮಯ ನೋಡಿ,ಬ್ರಹ್ಮನ ಸಾರಥ್ಯದಲ್ಲಿ ದೇವತೆಗಳು ನಿರ್ಮಿಸಿದ ರಥವನ್ನೇರಿ,ವಿಷ್ಣುವನ್ನೇ ಬಾಣವನ್ನಾಗಿ ಮಾಡಿಕೊಂಡು ಅವರನ್ನೂ ಅವರ ತ್ರಿಪುರಗಳನ್ನೂ ನಾಶಮಾಡಿ ತ್ರಿಪುರಾರಿಯೆನಿಸಿದನು.ಇನ್ನು ದೇವಾಸುರರು ಅಮೃತಪ್ರಾಪ್ತಿಗಾಗಿ ಸಮುದ್ರಮಥನ ಮಾಡಿದಾಗ,ಹಾಲಾಹಲ ವಿಷ ಬರಲು, ಶಿವನು ಅದನ್ನು ಕುಡಿದು,ಪಾರ್ವತಿಯ ತಡೆಯಿಂದ ಅದು ಕಂಠದಲ್ಲೇ ನಿಲ್ಲಲು, ಅವನಿಗೆ ನೀಲಕಂಠ ಮತ್ತು ವಿಷಕಂಠ ಎಂಬ ಹೆಸರುಗಳು ಬಂದುದು ಭಾಗವತಾದಿ ಪುರಾಣಗಳಲ್ಲಿ ಪ್ರಸಿದ್ಧವಿದ್ದು ಎಲ್ಲರಿಗೂ ಗೊತ್ತೇ ಇದೆ! ಅಂತೆಯೇ, ಶಿವನಿಗೆ ಶ್ರೀಕಂಠ ಎಂಬ ಹೆಸರು ಬಂದುದಕ್ಕೆ ಮಹಾಭಾರತದ ಶಾಂತಿಪರ್ವದಲ್ಲೊಂದು ಕಥೆಯಿದೆ.ಶಿವನ ಪತ್ನಿ ಸತಿ,ದಕ್ಷಯಜ್ಞದಲ್ಲಿ ದಗ್ಧಳಾಗಿಹೋಗಲು, ಶಿವನು ಕೋಪದಲ್ಲಿ ತನ್ನ ತ್ರಿಶೂಲವನ್ನೆಸೆದನು! ಅದು ತಪಸ್ಸು ಮಾಡುತ್ತಿದ್ದ ನರ,ನಾರಾಯಣರ ಬಳಿ ಹೋಗಿ ನಾರಾಯಣನ ಎದೆಯನ್ನು ಹೊಕ್ಕಿತು! ಆಗ ಕೋಪಗೊಂಡ ನಾರಾಯಣನಿಗೂ ಶಿವನಿಗೂ ಯುದ್ಧವಾಗಿ,ನಾರಾಯಣನು ಶಿವನ ಕತ್ತನ್ನು ಹಿಡಿದನು!ಅನಂತರ, ಇಬ್ಬರೂ ಶಾಂತರಾದರು.ಶಿವನ ತ್ರಿಶೂಲದ ಗುರುತು, ನಾರಾಯಣನ ಎದೆಯಲ್ಲಿ ಶ್ರೀವತ್ಸ ಚಿಹ್ನೆಯೆನಿಸಿದರೆ, ನಾರಾಯಣನು ಶಿವನ ಕುತ್ತಿಗೆ ಹಿಡಿದ ಕಾರಣ, ಶಿವನಿಗೆ ಶ್ರೀಕಂಠ ಎಂಬ ಹೆಸರು ಬಂದಿತು!
      ಪಾರ್ವತಿಯ ಹೆಸರುಗಳ ಹಿಂದೆಯೂ ಕಥೆಗಳಿವೆ.ಪರ್ವತರಾಜನ ಮಗಳಾಗಿ ಪಾರ್ವತಿ,ಗಿರಿರಾಜನ ಮಗಳಾಗಿ ಗಿರಿಜೆ, ಎಂದು ಹೆಸರಾದ ಅವಳು, ಶಿವನನ್ನು ಒಲಿಸಿಕೊಳ್ಳಲು ಉಗ್ರ ತಪಸ್ಸು ಮಾಡಲು ಹೊರಟಾಗ,ಅವಳ ತಾಯಿ ಮೇನೆಯು,'ಉ(ಮಗಳೇ),ಮಾ(ಬೇಡ)' ಎಂದಳು! ಹಾಗಾಗಿ ಪಾರ್ವತಿಗೆ ಉಮಾ ಎಂದು ಹೆಸರಾಯಿತು! ಅಂತೆಯೇ ಅವಳು ತಪಸ್ಸು ಮಾಡುವಾಗ ಎಲೆಗಳನ್ನೂ ತಿನ್ನದೇ ತಪಸ್ಸು ಮಾಡಿದ್ದರಿಂದ, ಅಪರ್ಣಾ (ಪರ್ಣ ಅಥವಾ ಎಲೆಯಿಲ್ಲದ) ಎಂದು ಹೆಸರಾದಳು!
       ತನ್ನ ಪೂರ್ವಜರಾದ ಸಗರಪುತ್ರರು ತಂದೆಯ ಅಶ್ವಮೇಧ ಯಾಗದ ಕುದುರೆಯನ್ನು ಹುಡುಕಲು ಹೋಗಿ ಕಪಿಲಮಹರ್ಷಿಗಳ ಕ್ರೋಧಾಗ್ನಿಗೆ ತುತ್ತಾಗಿ ಭಸ್ಮವಾಗಿರಲು,ಅವರ ಭಸ್ಮದ ಮೇಲೆ ಗಂಗೆಯನ್ನು ಹರಿಸಿ ಅವರಿಗೆ ಮುಕ್ತಿ ಕೊಡಿಸಲು ಭಗೀರಥನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಸ್ಶರ್ಗದಲ್ಲಿದ್ದ ಗಂಗೆಯನ್ನು ಭೂಮಿಗೆ ತರಿಸಿದ ಕಥೆ ಬಹಳ ಪ್ರಸಿದ್ಧ.ಗಂಗೆಯು ಅವನ ಹಿಂದೆ ಹೋದಂತೆ ಅವನ ಮಗಳೆನಿಸಿ ಭಾಗೀರಥಿಯೆಂಬ ಹೆಸರು ಪಡೆದಳು! ದಾರಿಯಲ್ಲಿ ಅವಳು ಜಹ್ನು ಮಹರ್ಷಿಗಳ ಆಶ್ರಮವನ್ನು ಕೊಚ್ಚಿಕೊಂಡು ಹೋಗಲು, ಕೋಪಗೊಂಡ ಅವರು ಗಂಗೆಯನ್ನು ಕುಡಿದು, ಭಗೀರಥನು ಪ್ರಾರ್ಥಿಸಲು, ತಮ್ಮ ಕಿವಿಯಿಂದ ಬಿಟ್ಟರು! ಹೀಗೆ ಗಂಗೆಯು ಜಹ್ನು ಮಹರ್ಷಿಗಳ ಮಗಳೆನಿಸಿ ಜಾಹ್ನವೀ ಎಂದೂ ಹೆಸರಾದಳು.ಅಂತೆಯೇ, ಸ್ವರ್ಗ,ಮರ್ತ್ಯ,ಪಾತಾಳ,ಈ ಮೂರೂ ಲೋಕಗಳಲ್ಲಿ ಹರಿದು ತ್ರಿಪಥಗಾಮಿನೀ ಎನಿಸಿದಳು.ಈ ಗಂಗಾವತರಣದ ಕಥೆಯಲ್ಲಿ ಬರುವ ಸಗರ ಮಹಾರಾಜನದೂ ಒಂದು ಕಥೆಯಿದೆ.ಇಕ್ಷ್ವಾಕು ವಂಶದ ಸಗರನ ತಂದೆಯಾದ ಬಾಹುಕನ ರಾಜ್ಯವನ್ನು ಶತ್ರುಗಳು ಮುತ್ತಲು, ಅವನು ತನ್ನ ಪತ್ನಿಯೊಂದಿಗೆ ಕಾಡಿಗೆ ಹೋದನು.ಅಲ್ಲೇ ವೃದ್ಧನಾಗಿ ಸತ್ತನು.ಆಗ ಅವನ ಪಟ್ಟಮಹಿಷಿಯು ಸಹಗಮನ ಮಾಡಲು ಹೊರಟಾಗ, ಅವಳು ಗರ್ಭಿಣಿಯಾಗಿದ್ದಳೆಂದು ತಮ್ಮ ದಿವ್ಯ ದೃಷ್ಟಿಯಿಂದ ತಿಳಿದ ಕುಲಗುರುಗಳಾದ ಔರ್ವಮಹರ್ಷಿಗಳು ತಡೆದರು.ಆಗ ಅಸೂಯೆಗೊಂಡ ಅವಳ ಸವತಿಯರು ಅನ್ನದಲ್ಲಿ ವಿಷ ಬೆರೆಸಿ ಅವಳಿಗೆ ತಿನ್ನಲು ಕೊಟ್ಟರು! ಆದರೆ ಅದನ್ನು ತಿಂದರೂ ಅವಳಿಗೆ ಏನೂ ಆಗದೇ,ಅವಳ ಮಗುವೂ ವಿಷದೊಂದಿಗೇ ಹುಟ್ಟಿತು! ಹೀಗೆ ಗರ ಅಥವಾ ವಿಷದೊಂದಿಗೆ ಹುಟ್ಟಿದ್ದರಿಂದ ಅವನಿಗೆ ಸಗರ ಎಂದು ಹೆಸರಾಯಿತು! ಸಗರನು ಅಶ್ವಮೇಧ ಯಾಗ ಮಾಡಲು ಹೊರಟಾಗಲೇ ಇಂದ್ರನು ಯಜ್ಞಾಶ್ವವನ್ನು ಕದ್ದು ಅದನ್ನು ಕಪಿಲ ಮಹರ್ಷಿಗಳ ಆಶ್ರಮದ ಮುಂದೆ ಕಟ್ಟಲು, ಅವನ ಅರವತ್ತು ಸಾವಿರ ಪುತ್ರರು ಅವರ ಮೇಲೆ ದಾಳಿ ಮಾಡಲು ಹೋಗಿ ಅವರ ದೃಷ್ಟಿಯಿಂದ ಸುಟ್ಟು ಭಸ್ಮವಾದದ್ದು.ಆದರೆ ಅದಕ್ಕೆ ಮೊದಲು ಅವರು ಕುದುರೆಯನ್ನು ಹುಡುಕಲು ಭೂಮಿಯನ್ನು ಬಹಳಷ್ಟು ಅಗೆದು ಹಳ್ಳಗಳನ್ನು ತೋಡಿದ್ದರಿಂದ, ಅವು ಭಗೀರಥನು ತಂದ ಗಂಗೆಯ ನೀರಿನಿಂದ ತುಂಬಿ,ಸಗರನ ಹೆಸರಿನಿಂದ ಸಾಗರಗಳೆನಿಸಿದವು! ಹೀಗೆ ಸಮುದ್ರಕ್ಕೆ ಸಾಗರ ಎಂದು ಹೆಸರು ಬರಲು ಕಥನಕಾರಣವಿದೆ.ಹೀಗೆಯೇ ಭೂಮಿಗೆ ಪೃಥ್ವಿ ಎಂದು ಹೆಸರು ಬರಲು ಒಂದು ಕಥೆಯಿದೆ.ಭೂಮಿಯ ಮೊದಲ ರಾಜನೆನಿಸಿದ ಪೃಥುವು ಆಳುತ್ತಿದ್ದಾಗ,ಭಯಂಕರ ಕ್ಷಾಮ ಬಂದಿತು! ಆಗ ಪೃಥುವು ಭೂಮಿಯನ್ನು ದಂಡಿಸಲು ಮುಂದಾಗಲು, ಭೂಮಿಯು ಗೋರೂಪ ಧರಿಸಿ ಓಡಿದಳು! ಪೃಥುವು ಆಗ ಅವಳನ್ನು ಕೊಲ್ಲಲೆಂದು ಹೊರಟಾಗ, ಅವಳು, ತನಗೆ ಸೂಕ್ತ ಕರುವೊಂದನ್ನು ಕಲ್ಪಿಸಿ, ಅವನಿಗೆ ಬೇಕಾದುದನ್ನೆಲ್ಲ ಕರೆದುಕೊಳ್ಳಲು ಹೇಳಿದಳು.ಅದರಂತೆ ಪೃಥುವು ಸ್ವಾಯಂಭುವ ಮನುವನ್ನೇ ಕರುವನ್ನಾಗಿ ಮಾಡಿಕೊಂಡು ತನ್ನ ಕೈಗಳನ್ನೇ ಪಾತ್ರೆಯನ್ನಾಗಿಸಿಕೊಂಡು ಸಕಲ ಧಾನ್ಯಗಳನ್ನು ಕರೆದುಕೊಂಡನು.ಹಾಗೆಯೇ ಋಷಿಗಳು ಬೃಹಸ್ಪತಿಯನ್ನೇ ಕರುವಾಗಿಸಿಕೊಂಡು ಇಂದ್ರಿಯಗಳೆಂಬ ಪಾತ್ರೆಯಲ್ಲಿ ವೇದಗಳನ್ನು ಕರೆದುಕೊಂಡರು.ದೇವತೆಗಳು ಇಂದ್ರನನ್ನೇ ಕರುವಾಗಿಸಿಕೊಂಡು ಚಿನ್ನದ ಪಾತ್ರೆಯಲ್ಲಿ ಸೋಮರಸ, ಓಜಸ್ಸು,ಬಲ,ಕ್ಷೀರಗಳನ್ನು ಕರೆದುಕೊಂಡರು.ದೈತರು ಪ್ರಹ್ಲಾದನನ್ನೇ ಕರುವಾಗಿಸಿಕೊಂಡು,ಕಬ್ಬಿಣದ ಪಾತ್ರೆಯಲ್ಲಿ ಸುರೆ,ಆಸವ, ಮೊದಲಾದ ಮದ್ಯಗಳನ್ನು ಕರೆದುಕೊಂಡರು.ಹೀಗೆ ಎಲ್ಲರೂ ತಮತಮಗೆ ಬೇಕಾದುದನ್ನೆಲ್ಲಾ ಭೂಮಿಯಿಂದ ಕರೆದುಕೊಳ್ಳಲು,ಪೃಥುವು ಶಾಂತನಾಗಿ ಭೂಮಿಯನ್ನು ಮಗಳಿನಂತೆ ಪಾಲಿಸಿದನು.ಮೊದಲ ಬಾರಿಗೆ ಭೂಮಿಯನ್ನು ನಗರ,ಗ್ರಾಮ, ಮೊದಲಾಗಿ ವಿಭಾಗಿಸಿ ನೆಲವನ್ನು ಸಮತಟ್ಟಾಗಿಸಿ ಚೆನ್ನಾಗಿ ಆಳಿ ಸುಭಿಕ್ಷಗೊಳಿಸಿದನು.ಅವನ ಮಗಳಿನಂತಾದ ಭೂಮಿಗೆ ಪೃಥ್ವಿ ಎಂಬ ಹೆಸರು ಬಂದಿತು.
       ಗಣೇಶನ ಹೆಸರುಗಳ ಹಿಂದೆ ಅನೇಕ ಕಥೆಗಳಿವೆ.ಗಣೇಶನಿಗೆ ಆನೆಯ ಮುಖವಿರುವುದರಿಂದ ಅವನನ್ನು ಗಜಮುಖ,ಗಜಾನನ ಎಂದೆಲ್ಲಾ ಕರೆಯುತ್ತಾರೆ.ಶಿವಪುರಾಣದ ಜನಪ್ರಿಯ ಕಥೆಯ ಪ್ರಕಾರ, ಪಾರ್ವತಿಯು ತನ್ನ ಮೈಮಣ್ಣಿನಿಂದ ಒಬ್ಬ ಬಾಲಕನನ್ನು ಸೃಜಿಸಿ ಜೀವ ನೀಡಿ ತಾನು ಸ್ನಾನ ಮಾಡಲು ಹೋದಾಗ ಕಾವಲಿಗೆ ನಿಲ್ಲಿಸಿರಲು, ಹಾಗೂ ಅವನು ಶಿವನನ್ನೂ ಒಳಗೆ ಬಿಡದಿರಲು, ಶಿವನು ಕೋಪಗೊಂಡು ಅವನ ತಲೆಯನ್ನು ತರಿದುಬಿಟ್ಟನು! ಅನಂತರ, ಪಾರ್ವತಿಯ ಸಮಾಧಾನಕ್ಕೆ ಒಂದು ಆನೆಯ ಮುಖವನ್ನು ಜೋಡಿಸಿ ಜೀವ ನೀಡಲು,ಅವನು ಗಜಮುಖನಾದನು.ಶಿವನು ಆಗ ಅವನನ್ನು ತನ್ನ ಗಣಗಳಿಗೆಲ್ಲಾ ಒಡೆಯನನ್ನಾಗಿಸಲು, ಅವನು ಗಣೇಶ, ಗಣಪತಿಯೆಂದೆನಿಸಿದನು.ತಂದೆ ಅಥವಾ ನಾಯಕನಿಲ್ಲದೇ ತಾಯಿಯಿಂದ ಮಾತ್ರ ಹುಟ್ಟಿದುದರಿಂದ ವಿನಾಯಕನೆನಿಸಿದನು.ಬ್ರಹ್ಮವೈವರ್ತಪುರಾಣದ ಪ್ರಕಾರ, ಶ್ರೀ ಕೃಷ್ಣನೇ ಗಣೇಶನಾಗಿ ಅವತರಿಸಿದ. ಶಾಪಗ್ರಸ್ತ ಶನಿಯು ಅವನ ಮುಖ ನೋಡಲು, ಅವನ ಮುಖ ಛಿದ್ರಗೊಂಡಿತು! ಆಗ ಆನೆಯ ಮುಖವನ್ನು ಜೋಡಿಸಲು, ಅವನು ಗಜಮುಖನಾದನು.ಪದ್ಮಪುರಾಣದ ಕಥೆಯ ಪ್ರಕಾರ, ಪಾರ್ವತಿಯು ತನ್ನ ಮೈಗಂಧದಿಂದ ವಿನೋದಕ್ಕಾಗಿ ಆನೆಮೊಗದ ಬೊಂಬೆ ಮಾಡಿ ಗಂಗೆಗೆ ಹಾಕಿದಳು.ಆಗ ಆ ಬೊಂಬೆಗೆ ಜೀವ ಬರಲು, ಅವಳೂ ಗಂಗೆಯೂ ಆ ಮಗುವಿಗೆ ತಾಯಿಯೆಂದು ಹೇಳಿಕೊಂಡರು! ಹೀಗೆ ಎರಡು ತಾಯಂದಿರನ್ನು ಹೊಂದಿದ ಆ ಮಗುವೇ ಗಣೇಶ.ಇದರಿಂದ ಅವನಿಗೆ ದ್ವೈಮಾತುರ ಎಂದು ಹೆಸರಾಯಿತು.ಲಿಂಗಪುರಾಣದ ಪ್ರಕಾರ, ರಾಕ್ಷಸರು ತಪಸ್ಸು ಮಾಡಿ ವರಗಳನ್ನು ಪಡೆದು ಬಲಿಷ್ಠರಾಗುವುದನ್ನು ತಡೆಯಬೇಕೆಂದು ದೇವತೆಗಳು ಶಿವನನ್ನು ಪ್ರಾರ್ಥಿಸಲು, ಶಿವನು ಗಣೇಶನ ರೂಪಧರಿಸಿ ಪಾರ್ವತಿಯ ಶರೀರವನ್ನು ಪ್ರವೇಶಿಸಿದನು.ಆಗ ಪಾರ್ವತಿಯು ಗಣೇಶನಿಗೆ ಜನ್ಮವಿತ್ತಳು.ಶಿವನು ಅವನಿಗೆ ದುಷ್ಟರ ದಾರಿಯಲ್ಲಿ ವಿಘ್ನಗಳನ್ನೊಡ್ಡುವಂತೆಯೂ ಅವನನ್ನು ಪೂಜಿಸಿದವರಿಗೆ ವಿಘ್ನಗಳನ್ನು ನಿವಾರಿಸುವಂತೆಯೂ ವರವಿತ್ತನು.ಇದರಿಂದ ಗಣೇಶನಿಗೆ ವಿಘ್ನೇಶ್ವರನೆಂದು ಹೆಸರಾಯಿತು.ಗಣೇಶನ ಆನೆಮುಖಕ್ಕೆ ಒಂದೇ ದಂತವಿರುವುದರಿಂದ ಅವನನ್ನು ಏಕದಂತ ಎಂದು ಕರೆಯುತ್ತಾರೆ.ಇದಕ್ಕೂ ಹಲವಾರು ಕಥೆಗಳಿವೆ.ಜನಪ್ರಿಯ ಕಥೆಗಳ ಪ್ರಕಾರ,ಗಣೇಶನು ತನ್ನ ಡೊಳ್ಳುಹೊಟ್ಟೆಯನ್ನು ನೋಡಿ ನಕ್ಕ ಚಂದ್ರನನ್ನು ಶಿಕ್ಷಿಸಲು ತನ್ನ ಒಂದು ದಂತವನ್ನು ಮುರಿದು ಅವನತ್ತ ಎಸೆದನೆಂದೂ, ವೇದವ್ಯಾಸರು ಹೇಳುತ್ತಿದ್ದ ಮಹಾಭಾರತವನ್ನು ಬರೆಯುತ್ತಿದ್ದಾಗ ಅವನ ಲೇಖನಿ ಬರೆಯದಿರಲು, ಅವನು ತನ್ನ ಒಂದು ದಂತವನ್ನೇ ಕಿತ್ತು ಅದರಿಂದ ಬರೆದನೆಂದೂ ಹೇಳುತ್ತಾರೆ.ಬ್ರಹ್ಮವೈವರ್ತಪುರಾಣದ ಪ್ರಕಾರ, ಒಮ್ಮೆ,ಶಿವಪಾರ್ವತಿಯರು ಏಕಾಂತದಲ್ಲಿದ್ದಾಗ ಪರಶುರಾಮನು ಶಿವದರ್ಶನಕ್ಕೆ ಬರಲು ಗಣೇಶನು ಅವನನ್ನು ತಡೆದನು.ಆಗ ಪರಶುರಾಮನಿಗೂ ಗಣೇಶನಿಗೂ ಯುದ್ಧ ನಡೆಯಲು, ಪರಶುರಾಮನು ಅವನ ಮೇಲೆ ತನ್ನ ಕೊಡಲಿಯಿಂದ ಪ್ರಹಾರ ಮಾಡಿದನು! ಅದು ತನ್ನ ತಂದೆ ಶಿವನು ಕೊಟ್ಟ ಆಯುಧವೆಂದು ಗೌರವಿಸುತ್ತಾ ಗಣೇಶನು ಅದನ್ನು ಎದುರಿಸದಿರಲು,ಅದರಿಂದ ಅವನ ಒಂದು ದಂತ ಮುರಿದು, ಅವನು ಏಕದಂತನೆನಿಸಿದನು.ಹೀಗೆ ಗಣೇಶನ ಹೆಸರುಗಳ ಹಿಂದೆ ಅನೇಕ ಕಥೆಗಳಿವೆ.
    ಇನ್ನು ಕೊನೆಯದಾಗಿ ಷಣ್ಮುಖ ಅಥವಾ ಕಾರ್ತಿಕೇಯನ ಹೆಸರುಗಳ ಹಿಂದಿನ ಕಥೆಗಳನ್ನು ನೋಡಿ ಈ ಲೇಖನವನ್ನು ಮುಗಿಸೋಣ.ಶಿವನ ಪುತ್ರನಿಂದ ಮಾತ್ರ ತನಗೆ ಸಾವು ಬರಬಹುದೆಂದು ವರಪಡೆದು ತಾರಕಾಸುರನು ದೇವತೆಗಳನ್ನು ಹಿಂಸಿಸುತ್ತಿರಲು, ಅವರು ಶಿವನಿಗೆ ಪುತ್ರನಾಗಲೆಂದು ಅವನನ್ನು ಪಾರ್ವತಿಯೊಂದಿಗೆ ಮದುವೆ ಮಾಡಿಸಿದರು.ಶಿವನ ತಪೋಭಂಗ ಮಾಡಲು ದೇವತೆಗಳು ಮನ್ಮಥನನ್ನು ಕಳಿಸುವುದು, ಶಿವನು ಅವನನ್ನು ತನ್ನ ಮೂರನೆಯ ಕಣ್ಣಿನಿಂದ ಭಸ್ಮ ಮಾಡಿ, ಅನಂತರ ಪಾರ್ವತಿಯ ತಪಸ್ಸಿಗೊಲಿದು ಅವಳನ್ನು ಮದುವೆಯಾಗುವುದು,ಈ ಕಥೆ ಗೊತ್ತಿರುವುದೇ ಆಗಿದೆ.ಅನಂತರ, ಶಿವಪಾರ್ವತಿಯರು ಬಹುಕಾಲ ಕ್ರೀಡಿಸುತ್ತಿರಲು,ಪುತ್ರೋತ್ಪತ್ತಿಯ ವಿಷಯವನ್ನು ಜ್ಞಾಪಿಸಲು ದೇವತೆಗಳು ಅಗ್ನಿಯನ್ನು ಕಳಿಸಿದರು.ಅಗ್ನಿಯು ಪಾರಿವಾಳದ ರೂಪದಲ್ಲಿ ಬರಲು, ಶಿವನು ಜಾರಿದ ತನ್ನ ವೀರ್ಯವನ್ನು ಅವನಿಗೆ ಕೊಟ್ಟನು.ಆದರೆ ಅದು ಅಗ್ನಿಯನ್ನೇ ಸುಡಲು,ಅಗ್ನಿಯು ಅದನ್ನು ತೆಗೆದುಕೊಂಡು ಹೋಗಿ ಗಂಗೆಗೆ ಹಾಕಿದನು! ಅದು ಗಂಗೆಯನ್ನೂ ಸುಡಲು, ಗಂಗೆಯು ಸನಿಹದ ಶರವಣವೆಂಬ ಜೊಂಡು ಹುಲ್ಲಿನ ಮೇಲೆ ಹಾಕಿದಳು.ಆಗ ಆ ವೀರ್ಯದಿಂದ ಒಂದು ಗಂಡುಮಗು ಹುಟ್ಟಿತು! ಆ ಮಗುವನ್ನು ನೋಡಿ ಕೃತ್ತಿಕಾ ನಕ್ಷತ್ರದ ಆರು ಅಭಿಮಾನಿ ದೇವತೆಗಳು ಅದಕ್ಕೆ ಹಾಲು ಕುಡಿಸಲು ಬಂದರು.ಆರೂ ದೇವಿಯರ ಸ್ತನಗಳಿಂದ ಹಾಲು ಕುಡಿಯಲು ಆ ಮಗು ಆರು ಮುಖಗಳನ್ನು ತಾಳಿತು! ಆಗ ಅಗ್ನಿ, ಗಂಗೆ, ಕೃತ್ತಿಕಾ ದೇವತೆಗಳೆಲ್ಲರೂ ಆ ಮಗು ತಮಗೆ ಸೇರಬೇಕೆಂದು ಜಗಳವಾಡತೊಡಗಿದರು! ಆಗ ಶಿವನು ಪಾರ್ವತಿಯೊಂದಿಗೆ ಬಂದು,ಆ ಮಗುವು ಲೋಕಮಾತೆಯಾದ ಅವಳಿಗೆ ಸೇರಬೇಕೆಂದು ಅವಳಿಗೆ ಮಗುವನ್ನು ಕೊಡಿಸಿದನು.ಶಿವನ ವೀರ್ಯವು ಜಾರಿ ಅಥವಾ ಸ್ಕನ್ನವಾಗಿ ಹುಟ್ಟಿದ್ದರಿಂದ ಆ ಮಗುವಿಗೆ ಸ್ಕಂದನೆಂದೂ,ಕೃತ್ತಿಕಾ ದೇವತೆಗಳನ್ನು ಮಾತೃಸ್ವರೂಪವಾಗಿ ಭಾವಿಸಿ ಅವರ ಎದೆಹಾಲು ಕುಡಿದಿದ್ಧರಿಂದ ಕಾರ್ತಿಕೇಯನೆಂದೂ, ಅದಕ್ಕಾಗಿ ಆರು ಮುಖಗಳನ್ನು ತಾಳಿದ್ದರಿಂದ ಷಣ್ಮುಖನೆಂದೂ,ಶರವಣವೆಂಬ ಜೊಂಡು ಹುಲ್ಲಿನ ಮೇಲೆ ಹುಟ್ಟಿದ್ದರಿಂದ ಶರವಣಭವನೆಂದೂ ಹೆಸರುಗಳಾದವು! ಅಂತೆಯೇ ಅವನು ಸದಾ ಕುಮಾರನಾಗಿರುವುದರಿಂದ ಕುಮಾರನೆಂದೂ ಹೆಸರಾದನು! ಹಾಗೆ ಕುಮಾರನಾಗಿರುವಾಗಲೇ ಅವನು ಶಿವನಿಂದ ದೇವತೆಗಳ ಸೇನಾಧಿಪತಿ ಪಟ್ಟ ಪಡೆದು ತಾರಕಾಸುರನನ್ನು ಸಂಹರಿಸಿದನು.ಇದನ್ನು ನಾವು ಶಿವಪುರಾಣದಲ್ಲಿ ಕಾಣಬಹುದು.
      ಹೀಗೆ, ನಾವು ಪೌರಾಣಿಕ ಸಾಹಿತ್ಯವನ್ನು ಓದುತ್ತಿದ್ದಂತೆ ಅನೇಕ ಹೆಸರುಗಳ ಹಿಂದೆ ಸ್ವಾರಸ್ಯಕರ ಕಥೆಗಳಿರುವುದನ್ನು ನೋಡಬಹುದು.
                                                 ಡಾ.ಬಿ.ಆರ್.ಸುಹಾಸ್

     
       
        

ಶನಿವಾರ, ಫೆಬ್ರವರಿ 13, 2021

ಕಥಾಸಂಗೀತ-ಕಲ್ಲು ಕರಗಿಸಿದ ಹನುಮಂತ

 ಸಕಲವಿದ್ಯಾಪಾರಂಗತನಾದ ರಾಮಭಕ್ತ ಹನುಮಂತನು ಸಂಗೀತದಲ್ಲೂ ಪರಿಣತನೆಂದು ಹೇಳಲಾಗಿದೆ.ಸಂಗೀತಕ್ಕೆ ಸಂಬಂಧಿಸಿದಂತೆ ಹನುಮಂತನು ಒಂದೆರಡು ದಂತಕಥೆಗಳಿವೆ.ಒಂದು ಕಥೆ ಹೀಗಿದೆ.

      ಒಮ್ಮೆ, ತನ್ನ ಆಶ್ರಮದಲ್ಲಿದ್ದ ಹನುಮಂತನಿಗೆ ಹತ್ತಿರದಲ್ಲೇ ವೀಣಾವಾದನವಾದ ಸದ್ದು ಕೇಳಿಸಿತು.ಆ ನಾದಮಾಧುರ್ಯಕ್ಕೆ ಮನಸೋತ ಅವನು, ಸಂಗೀತದಲ್ಲಿ ಆಸಕ್ತಿ ತಾಳಿ,ಸಂಗೀತದ ಎಲ್ಲಾ ಪ್ರಕಾರಗಳನ್ನೂ ಕಲಿಯಬೇಕೆಂದು ಮನಸ್ಸು ಮಾಡಿದ.ಹಾಗಾಗಿ,ಆ ವೀಣಾವಾದನ ಬರುತ್ತಿದ್ದ ದಿಕ್ಕಿಗೆ ಓಡಿದ! ಅಲ್ಲಿ ನೋಡಿದರೆ,ದೇವರ್ಷಿ ನಾರದರು ಭಕ್ತಿಯಲ್ಲಿ ಮೈಮರೆತು ವೀಣಾವಾದನ ಮಾಡುತ್ತಿದ್ದರು!ಕೂಡಲೇ ಹನುಮಂತನು ಅವರ ಪಾದಗಳನ್ನು ಹಿಡಿದು,"ನನಗೆ ದಯವಿಟ್ಟು ಸಂಗೀತ ಕಲಿಸಿ! ನೀವು ಒಪ್ಪುವವರೆಗೂ ನಿಮ್ಮ ಪಾದ ಬಿಡುವುದಿಲ್ಲ!" ಎಂದು ಬೇಡಿಕೊಂಡನು.ನಾರದರು ಕೂಡಲೇ ಒಪ್ಪಿಕೊಂಡರು.

      ನಾರದರಿಂದ ಸಂಗೀತಪಾಠ ಹೇಳಿಸಿಕೊಳ್ಳತೊಡಗಿದ ಹನುಮಂತ, ಕೆಲವೇ ದಿನಗಳಲ್ಲಿ ಸಂಗೀತದ ಸಕಲಾಂಶಗಳಲ್ಲೂ ಪರಿಣತನಾದ.ಎಲ್ಲಾ ರಾಗಗಳನ್ನೂ ಸಿದ್ಧಿಸಿಕೊಂಡ.ಎಲ್ಲಾ ವಾದ್ಯಗಳನ್ನೂ ನುಡಿಸಬಲ್ಲವನಾದ.ಹೀಗೆ ಚೆನ್ನಾಗಿ ಸಂಗೀತ ಕಲಿತ ಹನುಮಂತನನ್ನು ನಾರದರು ಪರೀಕ್ಷಿಸಬಯಸಿದರು.ಅದಕ್ಕಾಗಿ ಅವನಿಗೆ ಕಷ್ಟಕರವಾದ ಒಂದು ರಾಗವನ್ನು ಹಾಡಲು ಹೇಳಿದರು.ಹನುಮಂತನು ಪದ್ಮಾಸನದಲ್ಲಿ ಕುಳಿತು ಸುಶ್ರಾವ್ಯವಾಗಿ ಹಾಡತೊಡಗಿದ.ಅವನ ಹಾಡು ಅದೆಷ್ಟು ಸೊಗಸಾಗಿ ದಿವ್ಯವಾಗಿತ್ತೆಂದರೆ, ಅದನ್ನು ಕೇಳುತ್ತಾ ನಾರದರು ಮೈಮರೆತು ನಿಶ್ಚಲರಾಗಿಬಿಟ್ಟರು!ಅವರ ದಿವ್ಯದೇಹದ ಒಂದೊಂದು ಅಂಗವೂ ರೋಮಾಂಚನಗೊಂಡಿತು! ಅಲ್ಲಿ ಕಂಗಳು ಆನಂದದಿಂದ ಮುಚ್ಚಿಕೊಂಡವು! ಸಂತೋಷದಿಂದ ಅವರು ತಲೆದೂಗತೊಡಗಿದರು.ಕ್ರಮೇಣ, ವೀಣೆಯನ್ನು ಹಿಡಿದಿದ್ದ ಅವರ ಕೈಬಿಗಿ ಸಡಿಲಗೊಂಡು,ವೀಣೆಯು ಅವರ ಕೈಯಿಂದ ಜಾರಿಹೋಯಿತು! ಆದರೆ ಅವರಿಗೆ ಅದು ತಿಳಿಯಲೇ ಇಲ್ಲ!

       ಹನುಮಂತನ ಗಾಯನ ಎಷ್ಟು ಶಕ್ತಿಯುತವಾಗಿತ್ತೆಂದರೆ,ಸುತ್ತಲಿನ ಪ್ರಕೃತಿಯೇ ಆನಂದದಿಂದ ಕರಗಿತು!ಅಲ್ಲಿದ್ದ ಪ್ರತಿಯೊಂದು ಕಲ್ಲೂ ಕರಗಿ ನೀರಾಗತೊಡಗಿತು!ಮರಗಳೆಲ್ಲವೂ ಪುಷ್ಪವೃಷ್ಟಿ ಮಾಡಿದವು!ಪ್ರಾಣಿಪಕ್ಷಿಗಳು ಸುತ್ತಲೂ ಕುಳಿತು ಕಣ್ಣುಮುಚ್ಚಿ ಆನಂದದಿಂದ ಆಲಿಸತೊಡಗಿದವು! ಹನುಮಂತನು ಇದಾವುದೂ ತಿಳಿಯದೇ ತನ್ನ ಪಾಡಿಗೆ ತಾನು ಹಾಡುತ್ತಿದ್ದನು!

        ಹೀಗೆ ಸ್ವಲ್ಪ ಹೊತ್ತು ಹಾಡಿ, ಅಂತೂ ತನ್ನ ಹಾಡನ್ನು ಮುಗಿಸಿದನು ಹನುಮಂತ.ಆಗ ಸುತ್ತಲಿನ ಪ್ರಕೃತಿ ಪುನಃ ಸಹಜ ಸ್ಥಿತಿಗೆ ಬಂದಿತು.ಪ್ರಾಣಿಪಕ್ಷಿಗಳೆಲ್ಲವೂ ತಮ್ಮ ಪಾಡಿಗೆ ತಾವು ಹೊರಟುಹೋದವು.ಕರಗಿದ್ದ ಕಲ್ಲುಗಳೆಲ್ಲವೂ ಪುನಃ ಗಟ್ಟಿಯಾದವು.ಆಗ ನಾರದರು ಕಣ್ತೆರೆದು ಮಂದಹಾಸ ಬೀರುತ್ತಾ ತಮ್ಮ ವೀಣೆಯನ್ನು ತೆಗೆದುಕೊಳ್ಳಲು ಕೈಚಾಚಿದರು.ಆದರೆ ಅವರ ವೀಣೆ,ಪಕ್ಕದ ಬಂಡೆಯಲ್ಲಿ ಸಿಕ್ಕಿಕೊಂಡುಬಿಟ್ಟಿತ್ತು! ಹನುಮಂತನು ಹಾಡಿದಾಗ, ನಾರದರ ಕೈಯಿಂದ ವೀಣೆಯು ಆ ಬಂಡೆಯ ಮೇಲೆ ಬಿದ್ದು,ಆ ಬಂಡೆಯು ಕರಗಿ ಪುನಃ ಗಟ್ಟಿಯಾದಾಗ,ವೀಣೆಯು ಅದರಲ್ಲಿ ಸಿಕ್ಕಿಕೊಂಡುಬಿಟ್ಟಿತ್ತು! ನಾರದರು ಎಷ್ಟು ಪ್ರಯತ್ನಿಸಿದರೂ ಆ ವೀಣೆಯನ್ನು ಬಿಡಿಸಿಕೊಳ್ಳಲಾಗಲಿಲ್ಲ! ಅವರು ಬೆವರುತ್ತಾ,ತಾವೇ ಹಾಡಿದರು.ಆದರೆ ಹನುಮಂತನಂತೆ ಕಲ್ಲನ್ನು ಕರಗಿಸುವಂತೆ ಹಾಡಲಾಗಲಿಲ್ಲ. ಕೊನೆಗೆ ಅವರು ಹನುಮಂತನನ್ನು ಪುನಃ ಹಾಡಲು ಕೇಳಿಕೊಂಡರು.ಆದರೆ ಹನುಮಂತನು ತುಂಟನಗೆ ಬೀರುತ್ತಾ ಹಿಂದೇಟು ಹಾಕಿದನು! ನಾರದರು ಅವನ ಹಿಂದೆ ಹೋಗಲು, ಅವನು ವೇಗವಾಗಿ ನಡೆಯತೊಡಗಿದನು! ನಾರದರೂ ಬೇಗಬೇಗನೆ ಅವನ ಹಿಂದೆ ನಡೆಯುತ್ತಾ ಹೋದರು! ಹನುಮಂತನು ಈಗ ವೇಗವಾಗಿ ಓಡತೊಡಗಿದನು! ನಾರದರೂ ಅವನ ಹಿಂದೆ ಓಡಿದರು! ಹನುಮಂತನು ಸುತ್ತಲಿನ ಬೆಟ್ಟ, ಗುಡ್ಡ,ಕಾಡುಗಳಲ್ಲೆಲ್ಲಾ ಓಡಿದನು! ನಾರದರೂ ಅವನ ಹಿಂದೆ ಓಡಿದರು! ಹೀಗೆ ಬಹಳ ಹೊತ್ತು ಕಾಡಿಸಿ ಹನುಮಂತನು ಕೊನೆಗೆ ತನ್ನ ಮೊದಲಿನ ಸ್ಥಳದಲ್ಲಿ ಕುಳಿತನು.ನಾರದರು ಬಸವಳಿಯುತ್ತಾ ಬಂದು,"ಯಾಕಪ್ಪಾ ಹೀಗೆ ಮಾಡಿದೆ?" ಎಂದು ಕೇಳಿದರು.ಅದಕ್ಕೆ ಹನುಮಂತನು ವಿನಯದಿಂದ ಕೈಮುಗಿಯುತ್ತಾ,"ಗುರುಗಳೇ! ನೀವು ನನ್ನ ಪ್ರಭುವಿನ ಮಹಾಭಕ್ತರು! ಜೊತೆಗೆ ನನ್ನ ಗುರುಗಳು! ಆದ್ದರಿಂದ, ನಿಮ್ಮ ಪಾದಧೂಳಿ ಈ ಸ್ಥಳದಲ್ಲೆಲ್ಲಾ ಬಿದ್ದು, ಈ ಸ್ಥಳವೆಲ್ಲಾ ಪಾವನವಾಗಲಿ ಎಂದು ಹೀಗೆ ಮಾಡಿದೆ! ದಯವಿಟ್ಟು ನನ್ನನ್ನು ಕ್ಷಮಿಸಿ!" ಎಂದು ಹೇಳಿ ಹಾಡತೊಡಗಿದನು.ಆಗ ಕಲ್ಲುಗಳು ಪುನಃ ಕರಗಿ ನೀರಾಗಲು, ನಾರದರ ವೀಣೆಯು ಬಿಡುಗಡೆಯಾಗಿ ಅವರು ಅದನ್ನು ಎತ್ತಿಕೊಂಡರು.ಅನಂತರ ಅವರು,"ನಿನ್ನ ಸಂಗೀತ ನಿನ್ನ ಒಡೆಯನನ್ನು ಸದಾ ಮೆಚ್ಚಿಸಲಿ!" ಎಂದು ಹನುಮಂತನನ್ನು ಆಶೀರ್ವದಿಸಿ ಹೊರಟರು.ಹನುಮಂತನ ದೈವಭಕ್ತಿ, ಗುರುಭಕ್ತಿ,ಗಾಯನಪ್ರತಿಭೆಗಳು ಅವರನ್ನು ಮೂಕವಿಸ್ಮಿತವಾಗಿಸಿದ್ದವು!

ಶುಕ್ರವಾರ, ಫೆಬ್ರವರಿ 12, 2021

ಜೈನ ಕಥೆಗಳು-ದುರಾಸೆಯ ಫಲ

 ಒಂದು ಹಳ್ಳಿಯಲ್ಲಿ ಇಬ್ಬರು ವರ್ತಕ ಸಹೋದರರಿದ್ದರು.ಅವರು ಬಹಳ ಬಡತನದಲ್ಲಿದ್ದರು.ತಮ್ಮ ಅದೃಷ್ಟ ಪರೀಕ್ಷೆ ಮಾಡಲೆಂದು ಅವರಿಬ್ಬರೂ ವ್ಯಾಪಾರಕ್ಕೆ ಸೌರಾಷ್ಟ್ರಕ್ಕೆ ಹೋದರು.ಅಲ್ಲಿ ಅವರು ಸಾಕಷ್ಟು ಹಣ ಸಂಪಾದಿಸಿದರು.ಆ ಹಣವನ್ನು ಅವರು ಒಂದು ಚೀಲದಲ್ಲಿ ಹಾಕಿಕೊಂಡು, ಮನೆಗೆ ಹೋಗುವಾಗ ಸರದಿಯಂತೆ ಅದನ್ನು ಎತ್ತಿಕೊಂಡು ಹೋದರು.ಒಬ್ಬನು ಅದನ್ನು ಹಿಡಿದುಕೊಂಡಿದ್ದಾಗ, ಇನ್ನೊಬ್ಬನು ಅವನನ್ನು ಕೊಂದು ಅಷ್ಟೂ ಹಣವನ್ನು ತಾನೊಬ್ಬನೇ ಪಡೆದುಕೊಳ್ಳಬೇಕೆಂದು ಯೋಚಿಸುತ್ತಿದ್ದನು! ಆದರೆ ಇಬ್ಬರಿಗೂ ಕೊಲೆ ಮಾಡುವಷ್ಟು ಧೈರ್ಯ ಇರಲಿಲ್ಲ.ಅಂತೂ ಹೀಗೆ ಇಬ್ಬರೂ ತಮ್ಮ ಹಳ್ಳಿಯನ್ನು ತಲುಪಿದರು.ಹಳ್ಳಿಯ ಹೊರಗಿನ ಒಂದು ನದಿಯ ದಂಡೆಯಲ್ಲಿ ಇಬ್ಬರೂ ಕುಳಿತಿದ್ದಾಗ,ಕಿರಿಯನು ತನ್ನ ದುರಾಲೋಚನೆಗೆ ಪಶ್ಚಾತ್ತಾಪಪಡುತ್ತಾ ಅತ್ತುಬಿಟ್ಟೆನು! ಆಗ ಹಿರಿಯನು ಅವನೇಕೆ ಹಾಗೆ ಅಳುತ್ತಿದ್ದನೆಂದು ಕೇಳಲು, ಅವನು ತಾನು ಹಿರಿಯನನ್ನು ಕೊಲ್ಲುವ ಆಲೋಚನೆ ಮಾಡಿದ್ದೆನೆಂದು ಹೇಳಿದನು.ಆಗ ಹಿರಿಯನು ತಾನೂ ಅಂಥ ಆಲೋಚನೆ ಮಾಡಿದ್ದೆನೆಂದು ಹೇಳಿಕೊಂಡು ಪಶ್ಚಾತ್ತಾಪಪಟ್ಟನು.ಹಣದ ಚೀಲವೇ ತಮ್ಮ ಈ ದುಷ್ಟ ಆಲೋಚನೆಗೆ ಕಾರಣವೆಂದು ಅವರಿಬ್ಬರೂ ಕಂಡುಕೊಂಡು ಅದನ್ನು ಆ ನದಿಯಲ್ಲಿ ಎಸೆದುಬಿಟ್ಟರು! ಅನಂತರ ಅವರು ತಮ್ಮ ಮನೆಗೆ ಹೋದರು.ಆಗ ಆ ವೇದಿಕೆಯಲ್ಲಿದ್ದ ಒಂದು ದೊಡ್ಡ ಮೀನು ಆ ಹಣದ ಚೀಲವನ್ನು ನುಂಗಿತು! ಅನಂತರ, ಒಬ್ಬ ಬೆಸ್ತನು ಆ ಮೀನನ್ನು ಹಿಡಿದು, ಅದನ್ನು ಮಾರಲು ಮಾರುಕಟ್ಟೆಗೆ ತಂದನು.ಆಗ ಆ ಇಬ್ಬರು ವರ್ತಕಸಹೋದರರ ತಾಯಿಗೆ ತನ್ನ ಮಕ್ಕಳು ಮನೆಗೆ ಬಂದುದರಿಂದ ಒಳ್ಳೆಯ ಅಡುಗೆ ಮಾಡಿ ಸಂಭ್ರಮದಿಂದ ಭೋಜನ ಮಾಡಬೇಕೆಂದು ಆಸೆಯಾಯಿತು! ಹಾಗಾಗಿ ಅವಳು ತನ್ನ ಮಗಳನ್ನು ಮೀನು ತರಲು ಮಾರುಕಟ್ಟೆಗೆ ಕಳಿಸಿದಳು.ಅವಳು ಅದೇ ದೊಡ್ಡ ಮೀನನ್ನೇ ತಂದಳು! ಆಗ ಅದನ್ನು ಕೊಯ್ದ ಅಡುಗೆಯವಳಿಗೆ ಆ ಹಣದ  ಚೀಲ ಸಿಗಲು, ಅದನ್ನವಳು ಬಚ್ಚಿಡಲು ಯತ್ನಿಸಿದಳು.ಇದನ್ನು ಗಮನಿಸಿದ ಆ ವೃದ್ಧ ತಾಯಿಯು ಅಡುಗೆಯವಳನ್ನು ಅದೇನೆಂದು ಪ್ರಶ್ನಿಸಿದಳು.ಮಾತಿಗೆ ಮಾತು ಬೆಳೆದು ಇಬ್ಬರೂ ಹೊಡೆದಾಟಕ್ಕೆ ಮೊದಲು ಮಾಡಿದರು! ಆಗ ಅಡುಗೆಯವಳು ಮುದಿ ತಾಯಿಯ ಮರ್ಮಸ್ಥಾನಗಳಿಗೆ ಜೋರಾಗಿ ಹೊಡೆಯಲು, ಅವಳು ಕೂಡಲೇ ಸತ್ತುಬಿದ್ದಳು! ಆಗ ಅಲ್ಲಿಗೆ ಬಂದ ಇಬ್ಬರು ವರ್ತಕಸಹೋದರರು ನೋಡಲು ತಮ್ಮ ತಾಯಿಯು ಸತ್ತುಬಿದ್ದಿದ್ದಳು! ಅವಳ ಸನಿಹದಲ್ಲಿ ಹಣದ ಚೀಲ ಬಿದ್ದಿತ್ತು! ತಮ್ಮ ದುರಾಸೆಯೇ ಇದಕ್ಕೆಲ್ಲಾ ಕಾರಣವೆಂದು ಅವರಿಗೆ ಅರಿವಾಯಿತು.

                        ದಶವೈಕಾಲಿಕಸೂತ್ರನಿರ್ಯುಕ್ತಿಯ ಕಥೆ

ಜೈನ ಕಥೆಗಳು-ಯಾರ ಬಟ್ಟೆ ಯಾರದು?

 ಇಬ್ಬರು ವ್ಯಕ್ತಿಗಳಿದ್ದರು.ಒಬ್ಬನು ಹತ್ತಿಯ ಬಟ್ಟೆಗಳನ್ನು ಉಟ್ಟಿದ್ದರೆ,ಇನ್ನೊಬ್ಬನು ಉಣ್ಣೆಯ ಬಟ್ಟೆಗಳನ್ನುಟ್ಟಿದ್ದನು.ಒಮ್ಮೆ ಅವರಿಬ್ಬರೂ ಒಟ್ಟಿಗೆ ಬಂದು ನದಿಯಲ್ಲಿ ಸ್ನಾನ ಮಾಡಲು ಹೋದರು.ಅವರು ತಮ್ಮ ಬಟ್ಟೆಗಳನ್ನು ನದಿಯ ದಂಡೆಯ ಮೇಲೆ ಬಿಚ್ಚಿಟ್ಟು ನದಿಗೆ ಧುಮುಕಿದರು.ಸ್ನಾನದ ಬಳಿಕ, ಉಣ್ಣೆಯ ಬಟ್ಟೆಗಳನ್ನುಟ್ಟಿದ್ದವನು ತನ್ನ ಬಟ್ಟೆಗಳನ್ನುಟ್ಟಿದ್ದಲ್ಲದೇ ತನ್ನ ಸ್ನೇಹಿತನ ಹತ್ತಿ ಬಟ್ಟೆಗಳನ್ನೂ ತೆಗೆದುಕೊಂಡು ಹೊರಟುಬಿಟ್ಟ!ಪಾಪ, ಇನ್ನೊಬ್ಬ ವ್ಯಕ್ತಿಯು ತನ್ನ ಬಟ್ಟೆಗಳನ್ನು ಎಷ್ಟು ಕೇಳಿದರೂ ಅವನು ಕೊಡಲಿಲ್ಲ!ಕೊನೆಗೆ ಇಬ್ಬರೂ ನ್ಯಾಯಾಲಯಕ್ಕೆ ಹೋದರು.ನ್ಯಾಯಾಧೀಶನು ಇಬ್ಬರ ತಲೆಗೂದಲುಗಳನ್ನೂ ಬೇರೆ ಬೇರೆ ಬಾಚಣಿಗೆಗಳಿಂದ ಬಾಚಲು ಆದೇಶಿಸಿದ.ಹಾಗೆ ಮಾಡಿದ ಬಳಿಕ, ಅವನು ಆ ಬಾಚಣಿಗೆಗಳನ್ನು ಗಮನಿಸಿದ.ಉಣ್ಣೆ ಬಟ್ಟೆಗಳನ್ನುಟ್ಟಿದ್ದವನ ಬಾಚಣಿಗೆ ಯಲ್ಲಿ ಉಣ್ಣೆಯ ಎಳೆಗಳಿದ್ದವು.ಇದರಿಂದ, ಅವನು ಹತ್ತಿ ಬಟ್ಟೆಗಳ ಮಾಲೀಕನಲ್ಲ ಎಂದು ತೀರ್ಮಾನಿಸಿ,ಹತ್ತಿಬಟ್ಟೆಗಳ ನಿಜವಾದ ಮಾಲೀಕನಿಗೆ ಆ ಬಟ್ಟೆಗಳನ್ನು ಕೊಡಿಸಿದ.

                ನಂದೀಸೂತ್ರ-ಮಲಯಗಿರಿ ವೃತ್ತಿಯ ಕಥೆ

ಮಂಗಳವಾರ, ಫೆಬ್ರವರಿ 9, 2021

ಕಥಾಸರಿತ್ಸಾಗರದ ಕಥೆಗಳು-ಮನಸ್ಸಿನಂತೆ ಫಲ

 

ಗಂಗಾತೀರದಲ್ಲಿ ಒಬ್ಬ ಬ್ರಾಹ್ಮಣನೂ ಒಬ್ಬ ಚಂಡಾಲನೂ ವಾಸಿಸುತ್ತಿದ್ದರು.ಅವರಿಬ್ಬರೂ ಉಪವಾಸವ್ರತ ಮಾಡುತ್ತಿದ್ದರು.ಆ ಸಮಯದಲ್ಲಿ ಅವರು, ಬೆಸ್ತರು ನದಿಯಲ್ಲಿ ಮೀನು ಹಿಡಿಯುವುದನ್ನು ಕಂಡರು.ಆಗ ಉಪವಾಸದಿಂದ ಬಳಲಿದ್ದ ಮೂಢ ಬ್ರಾಹ್ಮಣನು,"ಆಹಾ!ಈ ಬೆಸ್ತರು ಎಷ್ಟು ಧನ್ಯರು! ಪ್ರತಿದಿನವೂ ಅವರು ತಮಗಿಷ್ಟವಾದಷ್ಟು ಮೀನುಗಳ ಮಾಂಸವನ್ನು ತಿನ್ನುತ್ತಾರೆ!" ಎಂದು ಯೋಚಿಸಿದನು.ಆದರೆ ಚಂಡಾಲನು,"ಅಯ್ಯೋ! ಪ್ರಾಣಿಹಿಂಸೆ ಮಾಡುವ ಇವರಿಗೆ ಧಿಕ್ಕಾರ! ಇಂಥವರನ್ನು ನಾನೇಕೆ ನೋಡಲಿ?" ಎಂದು ತನ್ನ ಕಣ್ಣುಗಳನ್ನು ಮುಚ್ಚಿಕೊಂಡನು.

       ಕಾಲಕ್ರಮದಲ್ಲಿ ಆ ಬ್ರಾಹ್ಮಣನೂ ಚಂಡಾಲನೂ ಉಪವಾಸದಿಂದ ಸತ್ತುಹೋದರು.ಆಗ ಬ್ರಾಹ್ಮಣನ ಹೆಣವನ್ನು ನಾಯಿಗಳು ತಿಂದರೆ,ಚಂಡಾಲನ ಹೆಣ ಗಂಗಾನದಿಯಲ್ಲಿ ಕರಗಿಹೋಯಿತು.ಅನಂತರ ಅವರಿಬ್ಬರೂ ತೀರ್ಥಕ್ಷೇತ್ರದ ಮಹಿಮೆಯಿಂದ ಜಾತಿಸ್ಮರರಾಗಿ(ಪೂರ್ವಜನ್ಮದ ನೆನಪಿರುವವರು) ಹುಟ್ಟಿದರು.ಬ್ರಾಹ್ಮಣನು ಅಲ್ಲೇ ಒಬ್ಬ ಬೆಸ್ತನಾಗಿ ಹುಟ್ಟಿದರೆ, ಚಂಡಾಲನು ಅಲ್ಲಿನ ರಾಜನ ಮನೆಯಲ್ಲಿ ಹುಟ್ಟಿದನು!ಈಗ ಬೆಸ್ತನಾಗಿದ್ದ ಬ್ರಾಹ್ಮಣನು ಪೂರ್ವಜನ್ಮದ ಸ್ಮರಣೆಯಿದ್ದುದರಿಂದ ಹಿಂದಿನದನ್ನು ನೆನೆದು ದು:ಖಿಸಿದನು.ಅದೇ ರಾಜನಾಗಿದ್ದ ಚಂಡಾಲನು ಆ ನೆನಪಿನಿಂದ ಒಳ್ಳೆಯ ಫಲ ಸಿಕ್ಕಿತೆಂದು ಸಂತೋಷಿಸಿದನು.ಹೀಗೆ ಅವರಿಬ್ಬರೂ ತಮ್ಮ ತಮ್ಮ ಮನಸ್ಸಿನ ಯೋಚನೆಗೆ ತಕ್ಕ ಫಲಗಳನ್ನು ಪಡೆದರು.


                                       

ಶನಿವಾರ, ಫೆಬ್ರವರಿ 6, 2021

ಜೈನ ಕಥೆಗಳು-ವರ್ತಕಪುತ್ರರ ಕಥೆ

 ಒಬ್ಬ ವರ್ತಕನಿಗೆ ಮೂವರು ಪುತ್ರರಿದ್ದರು.ಒಮ್ಮೆ ಅವನು ಅವರು ಬುದ್ಧಿ,ಕಾರ್ಯಸಾಮರ್ಥ್ಯ,ಪೌರುಷಗಳನ್ನು ಪರೀಕ್ಷಿಸಲು ಒಬ್ಬೊಬ್ಬರಿಗೂ ಸಾವಿರ ಕಾರ್ಷಾಪಣ(ಹಣದ ಒಂದು ಅಳತೆ) ಗಳಷ್ಟು ಹಣವನ್ನು ಕೊಟ್ಟು,"ನೀವು ಮೂವರೂ ಈ ಹಣದಿಂದ ವ್ಯಾಪಾರ ಮಾಡಿಕೊಂಡು ಬೇಗನೆ ಹಿಂದಿರುಗಿ ಬನ್ನಿ!" ಎಂದು ಆದೇಶವಿತ್ತನು.ಆ ಹಣವನ್ನು ತೆಗೆದುಕೊಂಡು ಮೂವರೂ ಬೇರೆ ಬೇರೆ ನಗರಗಳಿಗೆ ವ್ಯಾಪಾರ ಮಾಡಲೆಂದು ಹೋದರು.

     ಮೊದಲನೆಯ ಪುತ್ರನು ಯೋಚಿಸಿದನು,"ನಮ್ಮನ್ನು ಪರೀಕ್ಷಿಸಲೆಂದು ನಮ್ಮ ತಂದೆ ನಮಗೆ ಹಣ ಕೊಟ್ಟಿದ್ದಾರೆ.ಆದ್ದರಿಂದ ಹೆಚ್ಚು ಹಣವನ್ನು ಸಂಪಾದಿಸಿ ಅವರನ್ನು ಪ್ರಸನ್ನಗೊಳಿಸಬೇಕು.ಯಾವ ವ್ಯಕ್ತಿ ಪುರುಷಾರ್ಥವಿಹೀನನಾಗುವನೋ,ಅವನ ಸ್ಥಿತಿ ನೀರಿನಲ್ಲಿ ಬೆಳೆಯುವ ಹುಲ್ಲಿನಂತೆ ನಿಷ್ಪ್ರಯೋಜಕವಾಗಿರುತ್ತದೆ! ಇಂಥ ಸ್ಥಿತಿಯಲ್ಲಿ ಮನುಷ್ಯನು ಪುರುಷಾರ್ಥಗಳನ್ನು ಸಾಧಿಸಿಕೊಳ್ಳಬೇಕು.ಹಾಗಾಗಿ ನಾವೂ ಈಗ ಪುರುಷಾರ್ಥಗಳನ್ನು ಸಾಧಿಸಿಕೊಳ್ಳಬೇಕು!"

        ಹೀಗೆ ಯೋಚಿಸಿ ಅವನು ಕೇವಲ ಭೋಜನ,ವಸ್ತ್ರಗಳಿಗೆ ಮಾತ್ರ ಹಣವನ್ನು ವಿನಿಯೋಗಿಸುತ್ತಾ,ಜೂಜು, ಮದ್ಯಪಾನ, ಮೊದಲಾದ ದುರ್ವ್ಯಸನಗಳನ್ನು ಬಿಟ್ಟು ಬಹಳ ಪರಿಶ್ರಮದಿಂದ ಹಣ ಸಂಪಾದಿಸತೊಡಗಿದನು.ಇದರಿಂದ ಅವನಿಗೆ ಬಹಳ ಲಾಭವಾಯಿತು.

       ಎರಡನೆಯ ಪುತ್ರನು ಯೋಚಿಸಿದನು,"ನಮ್ಮ ಬಳಿ ಪ್ರಾಪ್ತ ಧನವಿದೆ! ಆದರೆ ಅದನ್ನು ಉಪಯೋಗಿಸುತ್ತಿದ್ದರೆ, ಅದು ಬೇಗನೆ ಮುಗಿದುಹೋಗುತ್ತದೆ.ಆದ್ದರಿಂದ ಮೂಲಧನವನ್ನು ಹಾಗೆಯೇ ರಕ್ಷಿಸಿಟ್ಟುಕೊಳ್ಳುವುದು ಒಳ್ಳೆಯದು!"

       ಹಾಗಾಗಿ ಅವನು, ತಾನು ಸಂಪಾದಿಸಿದ ಹಣವನ್ನಷ್ಟೇ ಭೋಜನ,ವಸ್ತ್ರಾದಿಗಳಿಗೆ ವ್ಯಯಿಸತೊಡಗಿದನು.ಆದರೆ ಮೂಲಧನವನ್ನು ಮುಟ್ಟಲಿಲ್ಲ.

     ಮೂರನೆಯವನು ಯೋಚಿಸಿದ,"ನಮ್ಮಲ್ಲಿ ಏಳು ಪೀಳಿಗೆಗಳಿಂದ ಹಣ ಚೆನ್ನಾಗಿ ಬರುತ್ತಲೇ ಇದೆ! ಆದರೆ ವೃದ್ಧಾಪ್ಯದ ಕಾರಣದಿಂದ,ಧನವು ನಾಶವಾಗಬಹುದೆಂಬ ಭಯದಿಂದ ನಮ್ಮ ತಂದೆಯವರು ನಮ್ಮನ್ನು ಪರದೇಶಕ್ಕೆ ಕಳಿಸಿದ್ದಾರೆ! ಆದ್ದರಿಂದ,ಧನಸಂಪಾದನೆಯ ಜಂಜಾಟದಲ್ಲಿ ಮುಳುಗುವುದು ರಿಂದ ಏನು ಪ್ರಯೋಜನ?"

       ಹೀಗೆ ಯೋಚಿಸಿ ಅವನು ಯಾವುದೇ ವ್ಯಾಪಾರದಲ್ಲಿ ತೊಡಗದೇ ಕೇವಲ ಜೂಜು,ಮದ್ಯಮಾಂಸಗಳ ಸೇವನೆ, ಮೊದಲಾದವುಗಳಲ್ಲಿ ತೊಡಗುತ್ತಾ ಐಶಾರಾಮಿ ಜೀವನ ನಡೆಸುತ್ತಾ ತನ್ನ ಸಮಯವನ್ನೆಲ್ಲಾ ಕಳೆದ! ಇದರಿಂದ ಅವನ ಹಣವೆಲ್ಲಾ ಮುಗಿದುಹೋಯಿತು!

      ಸ್ವಲ್ಪ ಸಮಯದ ಬಳಿಕ ಮೂವರು ಪುತ್ರರೂ ತಮ್ಮ ನಗರಕ್ಕೆ ಹಿಂದಿರುಗಿದರು.ಯಾರು ತನ್ನ ಎಲ್ಲಾ ಹಣವನ್ನೂ ವ್ಯಯಿಸಬಿಟ್ಟನೋ, ಅವನು ಎಲ್ಲರ ದಾಸನಾಗಿ ಸೇವಕನಂತೆ ಇರಬೇಕಾಯಿತು! ಏನೂ ಲಾಭ ಮಾಡಿದ್ದು ಎರಡನೆಯವನು, ಭೋಜನ,ವಸ್ತ್ರಗಳಲ್ಲಿ ಸಂತುಷ್ಟನಾಗಿರುತ್ತಾ ಮನೆಗೆಲಸಗಳಲ್ಲಿ ತೊಡಗಿರಬೇಕಾಯಿತು.ಅವನು ದಾನಾದಿ ಪುಣ್ಯಕಾರ್ಯಗಳಲ್ಲಿ ತೊಡಗಲಾಗಲಿಲ್ಲ ಹಾಗೂ ಹಣದ ಉಪಭೋಗವನ್ನೂ ಮಾಡಲಾಗಲಿಲ್ಲ! ಹೆಚ್ಚು ಲಾಭ ಮಾಡಿದ್ದ ಮೊದಲನೆಯವನು ಮನೆಯ ಸಂಪೂರ್ಣ ಆಡಳಿತವನ್ನು ವಹಿಸಿಕೊಂಡನು ಅವನು ಸಮಸ್ತ ಧನದ ಒಡೆಯನಾಗಿ ಯಥೋಚಿತವಾಗಿ ದಾನಾದಿ ಪುಣ್ಯಕಾರ್ಯಗಳಲ್ಲಿ ತೊಡಗಿರುತ್ತಾ ನಗರದ ಪ್ರತಿಷ್ಠಿತ ನಾಗರಿಕನಾದನು.

          ನೇಮಿಚಂದ್ರನ ಉತ್ತರಾಧ್ಯಯನಸೂತ್ರಟೀಕೆಯ ಕಥೆ