ಸಾಮಾನ್ಯವಾಗಿ ಪೌರಾಣಿಕ ವ್ಯಕ್ತಿಗಳಿಗೆ ಅನೇಕ ಹೆಸರುಗಳಿರುತ್ತವೆ ಹಾಗೂ ಆ ಹೆಸರುಗಳ ಹಿಂದೆ ವಿವಿಧ ಕಾರಣಗಳಿರುತ್ತವೆ.ಹಾಗೆಯೇ ಶ್ರೀ ರಾಮನಿಗೂ ಅನೇಕ ಹೆಸರುಗಳಿವೆ ಹಾಗೂ ಆ ಹೆಸರುಗಳ ಹಿಂದೆ ವಿವಿಧ ಕಾರಣಗಳಿವೆ.ಉದಾಹರಣೆಗೆ ರಾ ಮನಿಗೆ ರಾಘವ,ರಘುನಂದನ,ರಘುಕುಲೋತ್ತಮ,ಮೊದಲಾದ ಹೆಸರುಗಳು ಬಂದುದು ಅವನು ರಘುವಂಶದವನಾದುದರಿಂದ.ಹಾಗೆಯೇ ಅವನು ದಶರಥನ ಮಗನಾದುದರಿಂದ ಅವನಿಗೆ ದಾಶರಥಿ ಎಂಬ ಹೆಸರು ಬಂದಿತು.ಕೌಸಲ್ಯೆಯ ಮಗನಾದುದರಿಂದ ಅವನಿಗೆ ಕೌಸಲ್ಯಾನಂದನ ಎಂದೂ ಸೀತೆಯ ಪತಿಯಾದುದರಿಂದ ಸೀತಾಪತಿಯೆಂದೂ,ಹೀಗೆ ವಿವಿಧ ಹೆಸರುಗಳಿವೆ.ಈ ಹೆಸರುಗಳಲ್ಲಿ ಕಾಕುತ್ಸ್ಥ ಎಂಬ ಹೆಸರೂ ಒಂದು.ಈ ಕಾಕುತ್ಸ್ಥ ಎಂಬ ಹೆಸರಿನ ಹಿನ್ನೆಲೆಯನ್ನು ಹುಡುಕಿಕೊಂಡು ಹೊರಟರೆ ಪುರಾಣಗಳಲ್ಲಿ ನಮಗೆ ಸ್ವಾರಸ್ಯಕರವಾದ ಕಥೆ ಸಿಗುತ್ತದೆ.
ಶ್ರೀರಾಮನು ಸೂರ್ಯಪುತ್ರನಾದ ವೈವಸ್ವತ ಮನುವಿನ ಮಗನಾದ ಇಕ್ಷ್ವಾಕುವಿನ ವಂಶದಲ್ಲಿ ಜನಿಸಿದನು.ಈ ಇಕ್ಷ್ವಾಕುವಿನ ಒಬ್ಬ ಪುತ್ರನಾದ ವಿಕುಕ್ಷಿ ಅಥವಾ ಶಶಾದನಿಗೆ ಪುರಂಜಯನೆಂಬ ಪುತ್ರನಿದ್ದನು.ಪುರಂಜಯನು ಮಹಾವೀರನಾದ ರಾಜನಾಗಿದ್ದನು.ಇವನ ಕಾಲದಲ್ಲಿ ಒಮ್ಮೆ ದೇವತೆಗಳಿಗೂ ರಾಕ್ಷಸರಿಗೂ ಭಯಂಕರವಾದ ಯುದ್ಧವಾಯಿತು.ದೇವತೆಗಳು ಸೋಲುತ್ತಾ ಬಂದಾಗ,ಅವರು ಈ ಪುರಂಜಯನ ಬಳಿಗೆ ಬಂದು ತಮಗೆ ಸಹಾಯ ಮಾಡಬೇಕೆಂದು ಕೇಳಿಕೊಂಡರು.ಪುರಂಜಯನು ಒಪ್ಪಿದನು.ಆದರೆ ಅವನು,ತನಗೆ ಇಂದ್ರನೇ ವಾಹನವಾಗಬೇಕೆಂದು ಹೇಳಿದನು.ಇಂದ್ರನು ಮೊದಲು ಇದಕ್ಕೆ ಒಪ್ಪಲಿಲ್ಲ.ಆಗ ಸಾಕ್ಷಾತ್ ವಿಷ್ಣುವೇ ಇಂದ್ರನಿಗೆ ವಾಹನವಾಗಲು ಹೇಳಿದನು.ಸರಿಯೆಂದು ಒಪ್ಪಿ ಇಂದ್ರನು ಒಂದು ದೊಡ್ಡ ಎತ್ತಿನ ರೂಪ ತಾಳಿದನು!ಆಗ ಪುರಂಜಯನು ಸೂಕ್ತ ಧನುರ್ಬಾಣಗಳನ್ನು ತೆಗೆದುಕೊಂಡು ಆ ಎತ್ತಿನ ಹಿಳಲಿನ ಮೇಲೆ ಕುಳಿತು ಯುದ್ಧಕ್ಕೆ ಹೊರಟನು.ವಿಷ್ಣುವಿನ ತೇಜಸ್ಸಿನಿಂದ ಆವೇಷ್ಟಿತನಾಗಿ ಅವನು ರಾಕ್ಷಸರನ್ನು ಜಯಿಸಿದನು.ಹೀಗೆ,ಅವನು ಇಂದ್ರನನ್ನೇ ವಾಹನವಾಗಿ ಮಾಡಿಕೊಂಡಿದ್ದರಿಂದ ಅವನಿಗೆ ಇಂದ್ರವಾಹ ಎಂದು ಹೆಸರಾಯಿತು.ಎತ್ತಿನ ಹಿಳಲಿಗೆ ಸಂಸ್ಕೃತದಲ್ಲಿ ಕಕುತ್ ಎನ್ನುತ್ತಾರೆ.ಆ ಹಿಳಲು ಅಥವಾ ಕಕುತ್ ನ ಮೇಲೆ ಕುಳಿತಿದ್ದರಿಂದ ಅವನಿಗೆ ಕಕುತ್ಸ್ಥ ಎಂದೂ ಹೆಸರಾಯಿತು.ಮುಂದೆ ಇವನ ವಂಶದಲ್ಲಿ ಹುಟ್ಟಿದ್ದರಿಂದ ಶ್ರೀರಾಮನಿಗೆ ಕಾಕುತ್ಸ್ಥ ಎಂದು ಹೆಸರಾಯಿತು.
ಇಲ್ಲಿ ಹೇಳಲಾದ ಪುರಂಜಯನ ತಂದೆಯಾದ ವಿಕುಕ್ಷಿಗೆ ಶಶಾದ ಎಂಬ ಹೆಸರು ಬಂದುದರ ಹಿಂದೆಯೂ ಒಂದು ಸ್ವಾರಸ್ಯಕರವಾದ ಕಥೆಯಿದೆ.ಒಮ್ಮೆ ಪಿತೃಗಳಿಗೆ ಶ್ರಾದ್ಧ ಮಾಡಲು ವಿಕುಕ್ಷಿಯು,ತನ್ನ ತಂದೆಯ, ಅಂದರೆ ಇಕ್ಷ್ವಾಕುವಿನ ಆಜ್ಞೆಯಂತೆ ಮಾಂಸವನ್ನು ತರಲು ಕಾಡಿಗೆ ಹೋದ.ಅಲ್ಲಿ ಹಲವಾರು ಪ್ರಾಣಿಗಳನ್ನು ಬೇಟೆಯಾಡಿ ಕೊಂದು ಅವನು,ಹಸಿವು ಮತ್ತು ಬಳಲಿಕೆಗಳಿಗೊಳಗಾಗಿ,ಒಂದು ಮೊಲದ ಮಾಂಸವನ್ನು ತಿಂದುಬಿಟ್ಟ!ಅನಂತರ,ಅವನು ಹಿಂದಿರುಗಲು, ಇಕ್ಷ್ವಾಕುವು ಅವನು ತಂದ ಮಾಂಸವು ಯೋಗ್ಯವೋ ಅಲ್ಲವೋ ಎಂದು ವಸಿಷ್ಠರನ್ನು ಕೇಳಲು ಅವರು ಯೋಗ್ಯವಾಗಿಲ್ಲವೆಂದರು.ಶ್ರಾದ್ಧಕ್ಕಾಗಿ ತರಬೇಕಿದ್ದ ಮಾಂಸವನ್ನು ವಿಕುಕ್ಷಿಯು ತಾನೇ ತಿಂದನೆಂದು ಅರಿತ ಇಕ್ಷ್ವಾಕುವು ಅವನನ್ನು ರಾಜ್ಯದಿಂದಲೇ ಬಹಿಷ್ಕರಿಸಿಬಿಟ್ಟನು!ಮುಂದೆ ಇಕ್ಷ್ವಾಕುವು ವೈರಾಗ್ಯ ತಾಳಿದ ಬಳಿಕ,ವಿಕುಕ್ಷಿಯು ಹಿಂದಿರುಗಿ ರಾಜ್ಯವಾಳಿದನು.ಶಶ ಅಥವಾ ಮೊಲವನ್ನು ತಿಂದುದರ ಕಾರಣ,ಅವನಿಗೆ ಶಶಾದ ಎಂದು ಹೆಸರಾಯಿತು.ಈ ಕಥೆಗಳು ವಿಷ್ಣುಪುರಾಣ ಹಾಗೂ ಭಾಗವತಪುರಾಣಗಳಲ್ಲಿ ಬರುತ್ತವೆ.
ಹೀಗೆ ಪೌರಾಣಿಕ ವ್ಯಕ್ತಿಗಳ ಹೆಸರುಗಳ ಹಿಂದೆ ಸ್ವಾರಸ್ಯಕರವಾದ ಕಥೆಗಳಿರುತ್ತವೆ.