ಬೆಟ್ಟವನ್ನು ಹೊತ್ತು ನಡೆಯಬಲ್ಲೆನೆಂದ ಜಟ್ಟಿ
ಆಂಧ್ರಪ್ರದೇಶದ ಜಾನಪದ ಕಥೆ
ಒಂದಾನೊಂದು ಕಾಲದಲ್ಲಿ ಮಲಬಾರು ಪ್ರದೇಶವನ್ನು ನಂದನೆಂಬ ರಾಜನು ಆಳುತ್ತಿದ್ದನು.ಒಂದು ದಿನ,ಒಬ್ಬ ಜಟ್ಟಿಯು ಅವನ ಬಳಿ ಬಂದು ಹೇಳಿದ,"ಮಹಾರಾಜ!ನನಗೆ ಮಲ್ಲಯುದ್ಧವೇ ಮೊದಲಾದ ಹಲವಾರು ವಿದ್ಯೆಗಳು ಗೊತ್ತು!ಕ್ರೂರ ಮೃಗಗಳೊಂದಿಗೆ ನಾನು ಕಾದಾಡಬಲ್ಲೆ!ಒಂದು ಬೆಟ್ಟವನ್ನೇ ಹೊತ್ತು ನಡೆಯಬಲ್ಲೆ!ಆದರೆ ನನ್ನ ವಿದ್ಯೆ,ಶಕ್ತಿಗಳನ್ನು ನಿಮ್ಮಂಥ ರಾಜರನ್ನು ಹೊರತುಪಡಿಸಿದರೆ ಬೇರಾರೂ ಪ್ರೋತ್ಸಾಹಿಸರು!ಆದ್ದರಿಂದ ನಿಮ್ಮ ಬಳಿಗೆ ಬಂದಿದ್ದೇನೆ!ನನಗೆ ಸೂಕ್ತವಾದ ಸಂಬಳ ಕೊಟ್ಟು ಕೆಲಸಕ್ಕಿಟ್ಟುಕೊಳ್ಳಿ ಎಂದು ಕೋರುತ್ತಿದ್ದೇನೆ!"
ಅವನ ಮಾತನ್ನು ಕೇಳಿ ರಾಜನು ಇಂಥ ಒಬ್ಬ ಬಲಶಾಲಿ ಉಪಯುಕ್ತನಾದಾನೆಂದು ಭಾವಿಸಿ ಅವನಿಗೆ ತಿಂಗಳಿಗೆ ನೂರು ಪಗೋಡಗಳ(ಪಗೋಡ ಎಂಬುದು ಹಣದ ಒಂದು ಹಳೆಯ ಅಳತೆ) ಸಂಬಳ ಕೊಡಲು ಒಪ್ಪಿ ಅವನನ್ನು ಕೆಲಸಕ್ಕಿಟ್ಟುಕೊಂಡ.
ಆ ನಗರದ ಬಳಿ ಒಂದು ದೊಡ್ಡ ಬೆಟ್ಟವಿತ್ತು.ಆ ಬೆಟ್ಟದಲ್ಲಿ ಅನೇಕ ಕ್ರೂರ ಪ್ರಾಣಿಗಳು ವಾಸವಾಗಿದ್ದು ಊರಿನ ಜನರಿಗೆ ಬಹಳ ತೊಂದರೆ ಕೊಡುತ್ತಿದ್ದವು.ರಾಜನು ಈ ಸಮಸ್ಯೆಯನ್ನು ತಾನು ಕೆಲಸಕ್ಕೆ ತೆಗೆದುಕೊಂಡ ಹೊಸ ಜಟ್ಟಿಯಿಂದ ಪರಿಹರಿಸಬಹುದೆಂದು ಭಾವಿಸಿ ಅವನನ್ನು ಕರೆದು ಹೇಳಿದನು,"ಅಯ್ಯೋ ಜಟ್ಟಿಯೇ! ನೀನು ಬೆಟ್ಟವನ್ನೇ ಹೊತ್ತು ನಡೆಯಬಲ್ಲೆನೆಂದು ಹೇಳಿದೆಯಷ್ಟೇ?ಈಗ ನೋಡು!ನಮ್ಮ ನಗರದ ಹೊರವಲಯದಲ್ಲಿ ಒಂದು ದೊಡ್ಡ ಬೆಟ್ಟವಿದ್ದು ,ಅದರಲ್ಲಿನ ಕ್ರೂರ ಮೃಗಗಳು ಆಗಾಗ ಊರೊಳಗೆ ನುಗ್ಗಿ ಜನರಿಗೆ ಬಹಳ ತೊಂದರೆ ಕೊಡುತ್ತಿವೆ!ಹಾಗಾಗಿ ನೀನು ಆ ಬೆಟ್ಟವನ್ನು ನಿನ್ನ ಹೆಗಲಿನ ಮೇಲೆ ಹೊತ್ತೊಯ್ದು ಬೇರೆಲ್ಲಾದರೂ ಇರಿಸಿ ಬಾ!"
ಜಟ್ಟಿಯು ಆಗಲೆಂದು ಒಪ್ಪಿದ.ಮರುದಿನ,ರಾಜನು ಅವನನ್ನು ತನ್ನ ಮಂತ್ರಿಗಳು,ಪುರೋಹಿತರು,ಮತ್ತು ಒಂದು ಸೈನ್ಯದೊಂದಿಗೆ ಆ ಬೆಟ್ಟದಬಳಿಗೆ ಕರೆದೊಯ್ದ.ಆಗ ಜಟ್ಟಿಯು ತನ್ನ ಸೊಂಟಕ್ಕೆ ಪಟ್ಟಿಯನ್ನೂ ತಲೆಗೆ ರುಮಾಲನ್ನೂ ಕಟ್ಟಿ ನಿಂತ.ಆದರೆ ಮುಂದುವರೆಯಲಿಲ್ಲ.ಅವನೇಕೆ ಬೆಟ್ಟವನ್ನೆತ್ತದೇ ಸುಮ್ಮನೆ ನಿಂತಿದ್ದಾನೆಂದು ರಾಜನು ಕೇಳಿದ.ಅದಕ್ಕೆ ಆ ಜಟ್ಟಿಯು ವಿನಯಪೂರ್ವಕವಾಗಿ,"ಮಹಾರಾಜ!ನಾನು ಕೆಲಸಕ್ಕೆ ಸೇರಿದಾಗ ಬೆಟ್ಟವನ್ನು ನನ್ನ ತಲೆಯ ಮೇಲೆ ಹೊತ್ತು ನಡೆಯಬಲ್ಲೆನೆಂದು ಹೇಳಿದ್ದೆ.ಆದರೆ ಅದನ್ನು ಎತ್ತಬಲ್ಲೆನೆಂದು ಹೇಳಿರಲಿಲ್ಲವಷ್ಟೇ?ಆದ್ದರಿಂದ ನಿಮ್ಮ ಸೈನಿಕರಿಗೆ ಆ ಬೆಟ್ಟವನ್ನು ಎತ್ತಿ ನನ್ನ ತಲೆಯ ಮೇಲೆ ಇರಿಸಲು ಹೇಳಿ!ಅನಂತರ ನಾನದನ್ನು ಹೊತ್ತೊಯ್ಯುತ್ತೇನೆ!" ಎಂದನು!
ರಾಜನಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ!