ಸೋಮವಾರ, ಮೇ 20, 2024

ಸಂಸ್ಕೃತ ಸುಭಾಷಿತಗಳು -6

ಸಂಸ್ಕೃತ ಸುಭಾಷಿತ

ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದಃ ಪಿಕಕಾಕಯೋಃ|
ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ||

ಕಾಗೆಯೂ ಕಪ್ಪು.ಕೋಗಿಲೆಯೂ ಕಪ್ಪು.ಕೋಗಿಲೆ,ಕಾಗೆಗಳ ನಡುವೆ ಏನು ವ್ಯತ್ಯಾಸ?ವಸಂತ ಕಾಲ ಬಂದಾಗ,ಕಾಗೆ ಕಾಗೆಯೇ,ಕೋಗಿಲೆ ಕೋಗಿಲೆಯೇ!

ಕಾಗೆ,ಕೋಗಿಲೆಗಳೆರಡು ನೋಡಲು ಕಪ್ಪಾಗಿ ಒಂದೇ ರೀತಿಯಿರುತ್ತವೆ.ಅವುಗಳ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಹೇಗೆ?ವಸಂತಕಾಲ ಬಂದಾಗ,ಕೋಗಿಲೆಯು ಸುಮಧುರವಾಗಿ ಹಾಡುತ್ತದೆ.ಆದರೆ ಕಾಗೆಗೆ ಹಾಗೆ ಹಾಡಲಾಗುವುದಿಲ್ಲ.ಹಾಗಾಗಿ,ಎಷ್ಟೇ ಸಾಮ್ಯವಿದ್ದರೂ ಕೋಗಿಲೆ ಕೋಗಿಲೆಯೇ,ಕಾಗೆ ಕಾಗೆಯೇ!ಕಾಗೆ ನೋಡಲು ಕೋಗಿಲೆಯಂತಿದ್ದ ಮಾತ್ರಕ್ಕೆ ಕೋಗಿಲೆಯಾಗಲು ಸಾಧ್ಯವಿಲ್ಲ.ಹೀಗೆಯೇ ಅನೇಕರು ಕವಿಗಳಂತೆ,ಸಾಹಿತಿಗಳಂತೆ,ದೊಡ್ಡ ವ್ಯಕ್ತಿಗಳಂತೆ ತೋರಿಸಿಕೊಳ್ಳುತ್ತಾ ಮೆರೆಯುವುದುಂಟು.ಕೆಲವರು ಇತರ ಲೇಖಕರ ಕೈಲಿ ಬರೆಯಿಸಿಕೊಂಡು ತಮ್ಮ ಹೆಸರು ಹಾಕಿಕೊಳ್ಳುವುದುಂಟು.ಕೆಲವರು ಹಣ ಕೊಟ್ಟು ಪ್ರಶಸ್ತಿಗಳನ್ನು ಪಡೆಯುವುದುಂಟು.ಕೆಲವರು ಯಾವುದೋ ಪ್ರಭಾವದಿಂದ ಏನೂ ಗೊತ್ತಿಲ್ಲದಿದ್ದರೂ ಕೆಲಸ ಗಿಟ್ಟಿಸಿ ಬಿಟ್ಟಿ ಸಂಬಳ ಪಡೆಯುವುದುಂಟು.ಆದರೆ ಯಾವುದಾದರೂ ಸಂದರ್ಭದಲ್ಲಿ ಇವರ ಪ್ರತಿಭೆಯ ಪರೀಕ್ಷೆ ಬಂದಾಗ ಇವರು ಸೋಲುತ್ತಾರೆ.ಆಗ ಇವರ ನಿಜವಾದ ಬಣ್ಣ ಬಯಲಾಗುತ್ತದೆ.ಆದರೆ ನಿಜವಾಗಿ ಪ್ರತಿಭೆಯುಳ್ಳವನು ಅಂಥ ಸಂದರ್ಭದಲ್ಲಿ ಯಶಸ್ವಿಯಾಗುತ್ತಾನೆ.ಹೀಗೆ ಸಮಯ ಬಂದಾಗ ನಿಜವಾದ ಪ್ರತಿಭೆಯುಳ್ಳವನು ಯಾರು,ಅನುಕರಿಸುವವನು ಯಾರು ಎಂಬುದು ಗೊತ್ತಾಗುತ್ತದೆ.ಹೀಗೆ ಬೇರೊಂದು ವಿಷಯವನ್ನು ಬೇರಾವುದೋ ದೃಷ್ಟಾಂತದಿಂದ ಸೂಚ್ಯವಾಗಿ ಹೇಳುವ ಇಂಥ ಸುಭಾಷಿತಗಳಿಗೆ ಅನ್ಯೋಕ್ತಿಗಳೆನ್ನುತ್ತಾರೆ.

ಸಂಸ್ಕೃತ ಸುಭಾಷಿತಗಳು -5

ಸಂಸ್ಕೃತ ಸುಭಾಷಿತ

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್|
ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ||

ಕಾವ್ಯ,ಶಾಸ್ತ್ರಗಳ ಓದು,ಹಾಗೂ ವಿನೋದಗಳಿಂದ ಬುದ್ಧಿವಂತರು ಕಾಲ ಕಳೆಯುತ್ತಾರೆ.ಆದರೆ ಮೂರ್ಖರು,ದುರ್ವ್ಯಸನ,ನಿದ್ರೆ,ಅಥವಾ ಕಲಹಗಳಿಂದ ಕಾಲ ಕಳೆಯುತ್ತಾರೆ.
                                                       ಹಿತೋಪದೇಶ

ಅನೇಕ ಬಾರಿ,ಕೆಲವರು,ಈ ಪುಸ್ತಕ ಓದುವುದರಿಂದ,ಕವಿತ್ವವನ್ನು ಆಸ್ವಾದಿಸುವುದರಿಂದ,ಸಂಗೀತ ನೃತ್ಯಾದಿಗಳನ್ನು ಆಸ್ವಾದಿಸುವುದರಿಂದ,ಒಳ್ಳೆಯ ಹಾಸ್ಯಕಲಾಪಗಳಿಂದ,ಸಾಹಿತ್ಯಿಕ,ಸಾಂಸ್ಕೃತಿಕ ಕ್ರೀಡೆಗಳಿಂದ ವಿನೋದವಾಗಿ ಕಾಲ ಕಳೆಯುವುದರಿಂದ ಏನು ಪ್ರಯೋಜನ ಎಂದು ಕೇಳುತ್ತಾರೆ.ಏಕೆಂದರೆ ಇವುಗಳಿಂದ ಹಣ ಬರುವುದಿಲ್ಲ,ಹೊಟ್ಟೆ ಹೊರೆಯುವುದಿಲ್ಲ ಎಂದು ಅವರ ವಿಚಾರವಾಗಿರುತ್ತದೆ.ಅದಕ್ಕೆ ಕವಿ ಇಲ್ಲಿ ಸರಳವಾಗಿ ಉತ್ತರಿಸಿದ್ದಾನೆ.ಇವೆಲ್ಲಾ ಬುದ್ಧಿವಂತರು ವಿರಾಮದ ಕಾಲವನ್ನು ಕಳೆಯುವ ರೀತಿಯೆಂದು.ಮನುಷ್ಯನಾದ ಮೇಲೆ ವಿರಾಮದ ವೇಳೆ ಸಾಮಾನ್ಯವಾಗಿ ಇದ್ದೇ ಇರುತ್ತದೆ.ಪ್ರಾಣಿಗಳ ಹಾಗೆ ಆಹಾರಕ್ಕಾಗಿ ದಿನವೆಲ್ಲಾ ಅಲೆಯಬೇಕಿರುವುದಿಲ್ಲ.ಅಂತೆಯೇ ಒಂದಿಷ್ಟು ಬುದ್ಧಿಯೂ ಇರುತ್ತದೆ.ಇನ್ನು ಹೆಚ್ಚು ಹಣವಿದ್ದರಂತೂ ಇನ್ನೂ ಅನುಕೂಲ.ಹಾಗಾಗಿ,ಈ ಹಣ,ಬುದ್ಧಿ,ಸಮಯಗಳನ್ನು ಸದುಪಯೋಗಗೊಳಿಸಬೇಕೆಂದರೆ ಒಳ್ಳೆಯ ಸಂಸ್ಕಾರ ಕೊಡುವ,ಮನಸ್ಸಿಗೆ ಉಲ್ಲಾಸ ಕೊಡುವ ಮನರಂಜನೆ ಪಡೆಯಬೇಕು.ಅದೇ ಮನುಷ್ಯನಿಗೆ ದಕ್ಕಿರುವ ಸೌಭಾಗ್ಯ.ಬೇರಾವ ಪ್ರಾಣಿಗೂ ಈ ಭಾಗ್ಯವಿಲ್ಲ.ಆದರೆ ಇದನ್ನು ತಿಳಿಯದ ಮೂರ್ಖರು ತಮ್ಮ ಹಣ,ಸಮಯಗಳನ್ನು ದುಶ್ಚಟಗಳಲ್ಲಿ,ಜಗಳವಾಡುವುದರಲ್ಲಿ,ಇಲ್ಲವೇ ಸುಮ್ಮನೆ ನಿದ್ರೆಯಲ್ಲಿ ಕಳೆದುಬಿಡುತ್ತಾರೆ.ಹಾಗಾಗಿ ಎಲ್ಲರೂ ಚಿಕ್ಕ ವಯಸ್ಸಿನಿಂದ ತಮ್ಮ ಕೆಲಸದ ದೃಷ್ಟಿಯಿಂದ ವಿದ್ಯಾಭ್ಯಾಸ ಮಾಡುವುದರ ಜೊತೆಗೆ,ಬಿಡುವಿನ ವೇಳೆಯಲ್ಲಿ ಒಳ್ಳೆಯ ಪುಸ್ತಕಗಳನ್ನು ಓದುವುದು,ಸಂಗೀತ,ನರ್ತನಾದಿಗಳನ್ನು ಕಲಿಯುವುದು,ಮೊದಲಾದ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.ಇದರಿಂದ ಸಾಂಸ್ಕೃತಿಕ ಶ್ರೀಮಂತಿಕೆ ಬೆಳೆಯುತ್ತದೆ,ಹಾಗೂ ಸಮಯದ ಸದುಪಯೋಗವಾಗಿ ಮನಸ್ಸು ಪ್ರಶಾಂತವಾಗಿ ಉಲ್ಲಸಿತವಾಗಿರುತ್ತದೆ.

ಸಂಸ್ಕೃತ ಸುಭಾಷಿತಗಳು -4

ಸಂಸ್ಕೃತ ಸುಭಾಷಿತ

ಸಾಹಿತ್ಯಸಂಗೀತಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛವಿಷಾಣಹೀನಃ|
ತೃಣಂ ನ ಖಾದನ್ನಪಿ ಜೀವಮಾನಸ್ತದ್ಭಾಗದೇಯಂ 
ಪರಮಂ ಪಶೂನಾಮ್||

ಸಾಹಿತ್ಯ,ಸಂಗೀತ,ಕಲೆಗಳಿಂದ ವಿಹೀನನಾದವನು ಬಾಲ,ಕೊಂಬುಗಳಿಲ್ಲದ ಸಾಕ್ಷಾತ್ ಪಶು!ಹುಲ್ಲನ್ನು ತಿನ್ನದೆಯೂ ಅವನು ಬದುಕುವುದು ಪಶುಗಳಿಗೆ ಪರಮಭಾಗ್ಯ!

ಮನುಷ್ಯನೆಂದ ಮೇಲೆ ಸ್ವಲ್ಪವಾದರೂ ಸಾಹಿತ್ಯ,ಸಂಗೀತ ಮೊದಲಾದ ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಬೇಕು.ವ್ಯಕ್ತಿಯು ಸ್ವಯಂ ಸಾಹಿತಿಯೋ ಕಲಾವಿದನೋ ಆಗದಿದ್ದರೂ ಅವುಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಬೇಕು.ಅದು ಅವನಲ್ಲಿ ಒಳ್ಳೆಯ ಸಂಸ್ಕಾರವನ್ನು ತರುತ್ತದೆ.ಮನಸ್ಸು ಮೃದುವಾಗಿ ಹತೋಟಿಗೆ ಬರುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ಜೀವನವನ್ನು ಒಳ್ಳೆಯ ರೀತಿಯಲ್ಲಿ ಸಂತೋಷದಿಂದ ಅನುಭವಿಸಲು ಸಾಧ್ಯವಾಗುತ್ತದೆ.ಇಲ್ಲವಾದರೆ ಜೀವನ ನೀರಸವಾಗುತ್ತದೆ ಅಥವಾ ದುಶ್ಚಟಗಳು ಆವರಿಸಿಕೊಳ್ಳುತ್ತವೆ.ಹಾಗಾಗಿ ಇವೆಲ್ಲ ಇಲ್ಲದವನು ಬಾಲ,ಕೊಂಬುಗಳಿಲ್ಲದ ಸಾಕ್ಷಾತ್ ಪಶುವೆಂದು ಇಲ್ಲಿ ಮಾರ್ಮಿಕವಾಗಿ ಹೇಳಲಾಗಿದೆ.ಅಂಥವನು ಹುಲ್ಲು ತಿನ್ನದಿರುವುದು ಪಶುಗಳಿಗೆ ಪರಮಭಾಗ್ಯ!

ಸಂಸ್ಕೃತ ಸುಭಾಷಿತಗಳು -3

ಸಂಸ್ಕೃತ ಸುಭಾಷಿತ

ಪ್ರಾತರ್ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀಪ್ರಸಂಗತಃ|
ರಾತ್ರೌ ಚೋರಪ್ರಸಂಗೇನ ಕಾಲೋ ಗಚ್ಛತಿ ಧೀಮತಾಮ್||

ಬುದ್ಧಿವಂತರು ಬೆಳಿಗ್ಗೆ ದ್ಯೂತಪ್ರಸಂಗದಿಂದಲೂ ಮಧ್ಯಾಹ್ನ ಸ್ತ್ರೀಪ್ರಸಂಗದಿಂದಲೂ ರಾತ್ರಿ ಚೋರಪ್ರಸಂಗದಿಂದಲೂ ಕಾಲ ಕಳೆಯುತ್ತಾರೆ.

ಇದೊಂದು ಚಮತ್ಕಾರಯುಕ್ತವಾದ ಶ್ಲೋಕ.ಇಲ್ಲಿ ದ್ಯೂತಪ್ರಸಂಗವೆಂದರೆ ಮಹಾಭಾರತ.ಏಕೆಂದರೆ ಮಹಾಭಾರತ ನಡೆಯಲು ಮುಖ್ಯ ಕಾರಣವೇ ಪಾಂಡವ,ಕೌರವರು ಆಡಿದ ದ್ಯೂತಕ್ರೀಡೆ.ಸ್ತ್ರೀಪ್ರಸಂಗವೆಂದರೆ ರಾಮಾಯಣ.ಏಕೆಂದರೆ ರಾಮಾಯಣ ನಡೆಯಲು ಮುಖ್ಯ ಕಾರಣವೇ ರಾವಣನು ಸೀತೆಯನ್ನು ಅಪಹರಿಸಿದುದು.ಚೋರಪ್ರಸಂಗವೆಂದರೆ ಭಾಗವತ.ಭಾಗವತವು ಮುಖ್ಯವಾಗಿ ಕೃಷ್ಣಕಥೆ.ಕೃಷ್ಣನು ಬಾಲ್ಯದಲ್ಲಿ ಬೆಣ್ಣೆ ಕದಿಯುತ್ತಿದ್ದುದರಿಂದ ಇದನ್ನು ಚೋರಪ್ರಸಂಗವೆಂದಿದ್ದಾರೆ.ಹೀಗೆ ಬುದ್ಧಿವಂತರು,ಭಾರತೀಯ ಸಂಸ್ಕೃತಿಯ ಮೂರು ಮುಖ್ಯ ಗ್ರಂಥಗಳಾದ ರಾಮಾಯಣ,ಮಹಾಭಾರತ,ಹಾಗೂ ಭಾಗವತಗಳನ್ನು ಓದುತ್ತಾ ಕಾಲಕಳೆಯುತ್ತಾರೆಂದು ತಾತ್ಪರ್ಯ.

ಸಂಸ್ಕೃತ ಸುಭಾಷಿತಗಳು -2

ಸಂಸ್ಕೃತ ಸುಭಾಷಿತ

ದಾನಂ ಭೋಗೋ ನಾಶಸ್ತಿಸ್ರೋ
    ಗತಯೋ ಭವಂತಿ ವಿತ್ತಸ್ಯ|
ಯೋ ನ ದದಾತಿ ನ ಭುಂಕ್ತೇ
     ತಸ್ಯ ತೃತೀಯಾ ಗತಿರ್ಭವತಿ||

ಹಣಕ್ಕೆ ದಾನ,ಭೋಗ, ಮತ್ತು ನಾಶವೆಂಬ ಮೂರು ಗತಿಗಳಾಗುತ್ತವೆ.ಯಾರು ಹಣವನ್ನು ಇತರರಿಗೆ ಕೊಡುವುದಿಲ್ಲವೋ,ಹಾಗೂ ತಾನೂ ಭೋಗಿಸುವುದಿಲ್ಲವೋ,ಅವನ ಹಣಕ್ಕೆ ಮೂರನೆಯ ಗತಿಯಾಗುತ್ತದೆ.

ಹಣವನ್ನು ಸಂಪಾದಿಸಲು ಎಲ್ಲರೂ ಕಷ್ಟಪಡುತ್ತಾರೆ.ಎಲ್ಲರೂ ಹಣವನ್ನು ಬಹಳ ಇಷ್ಟಪಡುತ್ತಾರೆ.ಹಣಕ್ಕೆ ಎಲ್ಲರೂ ಬಹಳ ಮಹತ್ವ ಕೊಡುತ್ತಾರೆ.ಆದರೆ ಹಣಕ್ಕೆ ಇಷ್ಟು ಮಹತ್ವ,ಪ್ರೀತಿಗಳು ಬಂದಿರುವುದು ಅದಕ್ಕೆ ಅನೇಕ ವಸ್ತುಗಳು ಬರುತ್ತವೆ ಎಂಬ ಕಾರಣದಿಂದ.ಹಣಕ್ಕೆ ಏನೂ ಸಿಗುವುದಿಲ್ಲವೆಂದಾದರೆ ಅದು ಬರಿಯ ಕಾಗದ ಅಥವಾ ನಾಣ್ಯಗಳಾಗುತ್ತವೆಯಷ್ಟೆ!ಐನೂರು,ಸಾವಿರ ರೂಪಾಯಿಗಳ ನೋಟುಗಳ ಅಮಾನ್ಯೀಕರಣವಾದಾಗ ಆಗಿದ್ದು ಅದೇ ಅಲ್ಲವೇ?ಆದರೆ ಎಷ್ಟೋ ಜನರು ಇದನ್ನು ಅರಿಯದೇ ಹಣವನ್ನು ಸುಮ್ಮನೆ ಕೂಡಿಡುತ್ತಾರೆ.ಅದನ್ನು ಬಳಸುವುದೇ ಇಲ್ಲ.ಅದರಿಂದ ಅವರಿಗೆ ಅದರ ಉಪಯೋಗವಾಗುವುದಿಲ್ಲ.ಹಾಗಾಗಿ,ಇಲ್ಲಿ ಸುಭಾಷಿತಕಾರ ಹೇಳುವುದು,ಹಣವನ್ನು ದಾನ ಮಾಡಬೇಕು,ಇಲ್ಲವೇ ಸ್ವಯಂ ಭೋಗಿಸಬೇಕು.ಇಲ್ಲವಾದರೆ ಅದಕ್ಕೆ ಮೂರನೆಯ ಗತಿ,ಅರ್ಥಾತ್ ನಾಶವುಂಟಾಗುತ್ತದೆ ಎಂದು.ಅಮಾನ್ಯೀಕರಣವಾದಾಗ ಎಷ್ಟೋ ಜನರ ಹಣಕ್ಕೆ ಇದೇ ಆಗಿದ್ದು!ಅಮಾನ್ಯೀಕರಣವಾಗದಿದ್ದರೂ ಅಂಥ ಜನರು ಹಣವನ್ನು ಬಳಸದಿರುವುದರಿಂದ,ಅವರ ಪಾಲಿಗೆ ಅದು ನಷ್ಟವಾದಂತೆಯೇ!ಕನ್ನಡದಲ್ಲಿ,'ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ' ಎಂಬ ಒಂದು ಗಾದೆಯಂತೆ,ಆ ಹಣ ಅವರಿಗೆ ದಕ್ಕದೇ ಇತರರಿಗೆ ಸೇರುತ್ತದೆ.ಹಾಗೆಂದು ಹಣವನ್ನು ಕೂಡಿಡಲೇಬಾರದೆಂದಲ್ಲ.ಅಥವಾ ದುಂದುವೆಚ್ಚ ಮಾಡಬೇಕೆಂದಲ್ಲ.ಆದರೆ ಅಗತ್ಯಕ್ಕೆ ಬೇಕಾದಷ್ಟು ಕೂಡಿಡಬೇಕೇ ಹೊರತು,ಕೂಡಿಡಲೆಂದೇ ಹಣವನ್ನು ತುಂಬಿಡಬಾರದು.ಕಪ್ಪು ಹಣವನ್ನು ಬೆಳೆಸಬಾರದು.ದಾನ,ವ್ಯಯ,ಕೂಡಿಡುವಿಕೆಗಳಲ್ಲಿ ಸಮತೋಲನವಿರಬೇಕು.

ಸಂಸ್ಕೃತ ಸುಭಾಷಿತಗಳು -1

ಸಂಸ್ಕೃತ ಸುಭಾಷಿತ

ಅನ್ನದಾನಂ ಪರಂದಾನಂ ವಿದ್ಯಾದಾನಮತಃ ಪರಮ್|
ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವೇಚ್ಚ ವಿದ್ಯಯಾ||

ಅನ್ನದಾನವು ದೊಡ್ಡ ದಾನ.ಆದರೆ ವಿದ್ಯಾದಾನವು ಅದಕ್ಕಿಂತ ದೊಡ್ಡ ದಾನ.ಅನ್ನದಿಂದ ಕ್ಷಣಿಕ ತೃಪ್ತಿ ಸಿಗುತ್ತದೆ.ಆದರೆ ವಿದ್ಯೆಯಿಂದ ಜೀವನಪರ್ಯಂತ ತೃಪ್ತಿ ಸಿಗುತ್ತದೆ.

ಅನ್ನದಾನವು ದೊಡ್ಡ ದಾನವೆಂದು ಎಲ್ಲರೂ ಒಪ್ಪುತ್ತಾರೆ.ಅದನ್ನು ಅನೇಕ ಶಾಸ್ತ್ರಗಳು ಪ್ರಶಂಸಿಸಿವೆ ಕೂಡ.ಹಸಿದವನಿಗೆ ಅನ್ನ ಕೊಟ್ಟು ಅವನನ್ನು ತೃಪ್ತಿ ಪಡಿಸುವುದು ಎಲ್ಲಕ್ಕಿಂತ ದೊಡ್ಡದೆಂಬುದು ನಿಜ.ಹಸಿವಿನ ಬಾಧೆ,ಸಂಕಟಗಳನ್ನು ಬಲ್ಲವನೇ ಬಲ್ಲ.ಹಸಿವಿದ್ದಾಗ ಬೇರೇನೂ ಬೇಕಾಗುವುದಿಲ್ಲ.ಹಸಿವು ಶಮನವಾದರೆ ಸಾಕೆನಿಸುತ್ತದೆ.ಅಂಥವನಿಗೆ ಅನ್ನ ಕೊಟ್ಟರೆ,ಹಸಿವು ನೀಗಿಸಿಕೊಂಡ ಅವನಿಗೆ ಅತ್ಯಂತ ಸಮಾಧಾನವಾಗುತ್ತದೆ.ಹಾಗಾಗಿಯೇ ಅನ್ನದಾತಾ ಸುಖೀಭವ ಎನ್ನುತ್ತಾರೆ.ಅದು ಸರಿ.ಆದರೆ ಎಲ್ಲಿಯವರೆಗೂ ಇನ್ನೊಬ್ಬರನ್ನು ಹಸಿವಿಗಾಗಿ ಬೇಡುತ್ತಲೇ ಇರುವುದು?ಎಲ್ಲಿಯವರೆಗೂ ಇನ್ನೊಬ್ಬರಿಂದಲೇ ಅನ್ನ ಪಡೆದು ತಿನ್ನುವುದು?ಆ ಇನ್ನೊಬ್ಬನಾದರೂ ಅದಕ್ಕಾಗಿ ದುಡಿಯಲೇಬೇಕಲ್ಲವೇ?ಹಾಗಾಗಿ ಅನ್ನವನ್ನು ಗಳಿಸುವ ಮಾರ್ಗವನ್ನು ತಿಳಿದರೆ ಅದು ಇನ್ನೂ ದೊಡ್ಡದಾದೀತು.ಅದೇ ವಿದ್ಯೆ.ವಿದ್ಯೆಯೆನ್ನುವುದು ಲೌಕಿಕವೂ ಆಗಿರಬಹುದು ಅಥವಾ ಪಾರಮಾರ್ಥಿಕವೂ ಆಗಿರಬಹುದು.ಒಂದು ನಮಗೆ ದುಡಿದು ತಿನ್ನುವ ಮಾರ್ಗವನ್ನು ಕಲಿಸಿದರೆ ಇನ್ನೊಂದು ಮಾನಸಿಕ,ಆಧ್ಯಾತ್ಮಿಕ ಆನಂದ ಕೊಡುತ್ತದೆ.ಒಟ್ಟಿನಲ್ಲಿ ಎರಡೂ ನಮಗೆ ಜೀವನಾದ್ಯಂತ ಆನಂದ ಕೊಡುತ್ತವೆ.ಇಂಥ ವಿದ್ಯೆಯನ್ನು ದಾನ ಮಾಡಿದರೆ ಅದು ಅನ್ನದಾನಕ್ಕಿಂತ ದೊಡ್ಡದು ಎನ್ನುತ್ತದೆ ಈ ಸುಭಾಷಿತ.ಏಕೆಂದರೆ ವಿದ್ಯಯು ನಮ್ಮ ಕಾಲ ಮೇಲೆ ನಾವು ನಿಲ್ಲುವಂತೆ,ಇತರರ ಅವಲಂಬನೆಯಿಲ್ಲದೇ ಬದುಕುವಂತೆ ಮಾಡಿ,ನಾವು ಆತ್ಮನಿರ್ಭರರಾಗುವಂತೆ,ಅಂದರೆ ಸ್ವಾವಲಂಬಿಗಳಾಗುವಂತೆ ಮಾಡುತ್ತದೆ.ಹೀಗೆ,ಅನ್ನವು ಕ್ಷಣಿಕ ತೃಪ್ತಿ ಕೊಟ್ಟರೆ,ವಿದ್ಯೆಯು ಜೀವನಪರ್ಯಂತ ತೃಪ್ತಿ ಕೊಡುತ್ತದೆ.

ಗಾಳಿಬೋರೆಯಲ್ಲಿ ಒಂದು ದಿನ

 ಗಾಳಿಬೋರೆಯಲ್ಲಿ ಒಂದು ದಿನ




      ದಿನನಿತ್ಯದ ಜಂಜಾಟ,ಗಲಾಟೆಗಳಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಆನಂದವಾಗಿ ನಲಿದಾಡುತ್ತಾ ಮೈಮರೆಯಲು ಒಂದು ರಮ್ಯಮನೋಹರ ತಾಣವೆಂದರೆ ಗಾಳಿಬೋರೆ ಪ್ರಕೃತಿ ಶಿಬಿರ.ಬೆಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ಗಳಷ್ಟು ದೂರವಿರುವ ಈ ಸ್ಥಳ, ಕರ್ನಾಟಕ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ರವರ ವಸತಿಶಿಬಿರವಾಗಿದೆ.ಬೆಂಗಳೂರಿನಿಂಧ ಕನಕಪುರ ರಸ್ತೆಗೆ ಹೋಗಿ ಅಲ್ಲಿ ಸಂಗಮದ ಕಡೆ  ಹೋದರೆ ಅಲ್ಲಿ ಕಾವೇರಿ ವನ್ಯಧಾಮಕ್ಕೆ ಸ್ವಾಗತ ಎಂಬ ಫಲಕ ಕಾಣುತ್ತದೆ. ಅಲ್ಲಿಂದ ಮುಂದೆ ಹೋದರೆ ಬಲಕ್ಕೆ ಗಾಳಿಬೋರೆಯ ಕಡೆಗೆ ದಿಕ್ಕು ತೋರಿಸುವ ಒಂದು ಫಲಕ ಕಾಣುತ್ತದೆ.ಇಲ್ಲಿಂದ ಒಂಬತ್ತು ಕಿ.ಮೀ. ಮಣ್ಣಿನ ರಸ್ತೆಯಲ್ಲಿ ಸಾಗಲು ಗಾಳಿಬೋರೆ ಪ್ರಕೃತಿ ಶಿಬಿರ ಸಿಗುತ್ತದೆ.ನಾವು ಮೊದಲೇ ಅಂತರ್ಜಾಲದಲ್ಲಿ ಜಂಗಲ್ ಲಾಡ್ಜಸ್ ರವರ ತಾಣದಲ್ಲಿ (www.junglelodges.com) ನಮ್ಮ ವಸತಿಯನ್ನು ಕಾಯ್ದಿರಿಸಿಕೊಂಡು ಹಣ ಪಾವತಿಸಿ ನಿಗದಿತ ದಿನದಂದು ಹೊರಡಬೇಕು.ಅಂದು ಶಿಬಿರದ ಸಿಬ್ಬಂದಿಯವರೇ ಕರೆ ಮಾಡಿ ನೆನಪಿಸಿ ದಾರಿಯನ್ನೂ ಹೇಳುತ್ತಾರೆ.ಬೆಳಿಗ್ಗೆ ಸುಮಾರು ಹತ್ತೂವರೆ ಗಂಟೆಯ ಹೊತ್ತಿಗೆ ನಾವು ವಸತಿಯನ್ನು ಪ್ರವೇಶಿಸಿ ಕಛೇರಿಯಲ್ಲಿ ವರದಿ ಮಾಡಿಕೊಳ್ಳಬೇಕು.ನಾವು ಇಳಿದುಕೊಳ್ಳಲು ಇಲ್ಲಿ ಸೊಗಸಾದ, ಎಲ್ಲ ಸೌಲಭ್ಯಗಳಿರುವ ಟೆಂಟ್ ಗಳೆಂಬ ಕೋಣೆಗಳಿವೆ.ಇವುಗಳ ಗೋಡೆಗಳು ಬಟ್ಟೆಯಿಂದ ಮಾಡಲಾಗಿದ್ದು ಈ ಟೆಂಟ್ ನಲ್ಲಿರುವುದೇ ಒಂದು ಆನಂದ! ಇಲ್ಲಿನ ‌‌‌‌‌‌‌‌‌‌‌‌‌‌‌‌‌‌ಸಿಬ್ಬಂದಿಯವರು ಬಹಳ ಸ್ನೇಹಪರರು.

       ದೊಡ್ಡ ಮೈದಾನದಂಥ ಪ್ರದೇಶ, ಮತ್ತು ಎದುರಿಗೆ ಝುಳು ಝುಳು ಹರಿಯುವ ಕಾವೇರಿ ನದಿಯ ಅತ್ಯಂತ ರಮ್ಯವಾದ ನೋಟ ನಮ್ಮಲ್ಲಿ ಪುಳಕವುಂಟುಮಾಡುತ್ತದೆ! ಹಸಿರಿನಿಂದ ಕೂಡಿದ ಬೆಟ್ಟಗುಡ್ಡಗಳ ಮನೋಹರ ದೃಶ್ಯಾವಳಿಯೊಂದಿಗೆ ಕಾವೇರಿ ನದಿಯ ಸೌಂದರ್ಯವನ್ನು ನೋಡುತ್ತಾ ಕೂರಲೆಂದೇ ಒಂದು ದುಂಡಾದ ಕಟ್ಟೆಯ ಆವರಣವಿದೆ.ಮೈದಾನದ ಪ್ರದೇಶದಲ್ಲಿ ಕಟ್ಟಿಗೆಯ ಜೋಕಾಲಿ, ಟೈರ್, ಟೆನ್ನಿಸ್ ಆಡಲು ಹಾಗೂ ಹತ್ತಲು ಪರದೆಗಳು, ಮೊದಲಾಗಿ ಆಟಗಳನ್ನಾಡಲು ಹಲವಾರು ಸಾಧನಗಳಿವೆ.ಅಂತೆಯೇ ಪ್ರತಿ ಟೆಂಟ್ ನ ಮುಂದೆಯೂ ಮಲಗಿ ವಿಶ್ರಾಂತಿ ಪಡೆಯಲು ಹ್ಯಾಮಾಕ್ ಅಥವಾ ತೂಗುಮಂಚಗಳಿವೆ.

      ಗಾಳಿಬೋರೆ ಪ್ರದೇಶ ಕಾವೇರಿ ವನ್ಯಧಾಮಕ್ಕೆ ಸೇರಿದೆ.ವಸತಿಶಿಬಿರದ ಹಿಂದೆ ಇರುವ ಒಂದು ದೊಡ್ಡ ಬಂಡೆ ಗಾಳಿಗೆ ಮೈಯೊಡ್ಡಿ ನಿಂತಿರುವುದರಿಂದ ಈ ಸ್ಥಳಕ್ಕೆ ಗಾಳಿಬೋರೆ ಎನ್ನುತ್ತಾರೆ.ಆಸಕ್ತರು ಸಮಯ ಸಿಕ್ಕರೆ ಇದನ್ನು ಹತ್ತಬಹುದು. ವಸತಿ ತಲುಪಿದ ಬಳಿಕ, ತಂಪಾದ ಪಾನೀಯ ಇಲ್ಲವೇ ಚಹಾ ಸೇವನೆಯೊಂದಿಗೆ ಸ್ವಲ್ಪ ವಿಶ್ರಾಂತಿಯ ಬಳಿಕ, ಪರಿಸರವಾದಿಗಳು ಒಂದು ನಿಗದಿತ ದಾರಿಯಲ್ಲಿ ಕಾವೇರಿ ನದೀತೀರದವರೆಗೆ ಚಾರಣ ಮಾಡಿಸುತ್ತಾರೆ.ದಾರಿಯಲ್ಲಿ ಅವರು ಹಲವಾರು ವಿಶಿಷ್ಟ ಗಿಡಮರಗಳನ್ನೂ ಪ್ರಾಣಿಪಕ್ಷಿಗಳನ್ನೂ ತೋರಿಸುತ್ತಾರೆ.ಇಲ್ಲಿ ನೋಡಲೇಬೇಕಾದ ಒಂದು ಪ್ರಾಣಿಯೆಂದರೆ ಗ್ರಿಜಲ್ಡ್ ಜಯಂಟ್ ಸ್ಕ್ವಿರಲ್ ಅಥವಾ ಕಂದು ಬಣ್ಣದ ದೈತ್ಯ ಅಳಿಲು.ನನ್ನ ಅದೃಷ್ಟಕ್ಕೆ ನಾನು ಹೋದಾಗ ನನಗೆ ನೋಡಲು ಸಿಕ್ಕಿತು! ಕರ್ನಾಟಕದಲ್ಲಿ  ಕಾವೇರಿ ವನ್ಯಧಾಮ ಬಿಟ್ಟರೆ ಇದು ಇನ್ನೆಲ್ಲೂ ಕಂಡುಬರುವುದಿಲ್ಲ. ಇದರಂತೆ ಕಾವೇರಿ ವನ್ಯಧಾಮಕ್ಕೆ ‌‌‌‌‌‌‌‌‌‌‌‌‌‌‌‌‌‌‌ಸೇರಿದ ಭೀಮೇಶ್ವರಿಯೆಂಬ ಇನ್ನೊಂದು ಸ್ಥಳದಲ್ಲಿ ಇದನ್ನು ಕಾಣಬಹುದು.ಚಾರಣದ ದಾರಿ ಮತ್ತು ಕಾವೇರೀನದೀತೀರ ಪ್ರಕೃತಿ ಸೌಂದರ್ಯದಿಂದ ತುಂಬಿದ್ದು ಛಾಯಾಚಿತ್ರಗಳನ್ನು ತೆಗೆಯಲು ಒಳ್ಳೆಯ ಅವಕಾಶವಿದೆ.ಚಾರಣದ ಬಳಿಕ, ಗೋಲ್ ಘರ್ ಎಂಬ ದುಂಡಾದ ಕೊಟ್ಟಿಗೆಯಂಥ ಸ್ಥಳದಲ್ಲಿ ಸೊಗಸಾದ ಭೋಜನವಿರುತ್ತದೆ.ಇಲ್ಲಿನ ಭೋಜನ,ಬಹಳ ರುಚಿಯಾಗಿಯೂ ಶುಚಿಯಾಗಿಯೂ ಇದ್ದು,ಪ್ರಕೃತಿಯ ಮಧ್ಯೆ ಊಟ ಮಾಡುವುದೇ ಒಂದು ಚೆಂದ! 

     ಊಟದ ಬಳಿಕ ಕೋಣೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು ಇಲ್ಲವೇ ಆಟವಾಡುತ್ತಾ, ಪಕ್ಷಿ ವೀಕ್ಷಣೆ,ಚಿಟ್ಟೆಗಳ ವೀಕ್ಷಣೆ, ಛಾಯಾಗ್ರಹಣಗಳಲ್ಲಿ ಕಾಲಕಳೆಯಬಹುದು.ನದೀತೀರದ ಬಳಿ ಪದೇ ಪದೇ      ಬಾಲ ಬಡಿಯುತ್ತಾ ಓಡಾಡುತ್ತಿದ್ದ ವ್ಯಾಗ್ಟೇಲ್  ಪಕ್ಷಿಯನ್ನು ಛಾಯಾಗ್ರಹಣ ಮಾಡುವ ಅದೃಷ್ಟ ನನಗೆ ಸಿಕ್ಕಿತು! 

        ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ನದಿಯಲ್ಲಿ ಕೊರಕಲ್ ಅಥವಾ ತೆಪ್ಪದ ಮೇಲೆ ವಿಹಾರ ಮಾಡಿಸುತ್ತಾರೆ.ನದಿಯ ಮೇಲೆ ವಿಹಾರ ಮಾಡುತ್ತಾ ಪ್ರಕೃತಿ ಸೌಂದರ್ಯ ‌ಸವಿಯುವ ಸೊಗಸೇ ಸೊಗಸು! ತೆಪ್ಪದ ಸವಾರಿ ಮಾಡುವಾಗ ಪಕ್ಷಿವೀಕ್ಷಣೆಗೆ ಹೆಚ್ಚು ಅವಕಾಶವಿದೆ.ಡಾರ್ಟರ್ ಅಥವಾ ಹಾವಕ್ಕಿ,ಕಾರ್ಮೋರೆಂಟ್ ಅಥವಾ ನೀರುಕಾಗೆ, ಹಲವು ಬಗೆಯ ಹದ್ದುಗಳು,ಮೊದಲಾದ ಪಕ್ಷಿಗಳನ್ನು ನೋಡಬಹುದು.ಕೆಲವೊಮ್ಮೆ ಆಚೆಯ ದಡದಲ್ಲಿ ಆನೆಗಳೂ ಕಾಣುತ್ತವೆ.ಅಂತೆಯೇ ನದಿಯಲ್ಲಿ ಮತ್ತು ಬಂಡೆಗಳ ಮೇಲೆ ಮೊಸಳೆಗಳನ್ನೂ ಕಾಣಬಹುದು!

      ತೆಪ್ಪದ ಸವಾರಿ ಮುಗಿಸಿ ಬಂದಾಗ ನಮಗೆ ಲಘು ಉಪಾಹಾರ ಮತ್ತು ಬಿಸಿಯಾದ ಚಹಾ ಕಾದಿರುತ್ತದೆ! ಅನಂತರ, ರಾತ್ರಿ ಒಂದು ವನ್ಯಜೀವಿ ಚಲನಚಿತ್ರದ ವೀಕ್ಷಣೆ, ಕ್ಯಾಂಪ್ ಫೈರ್ ಮುಂದೆ ಬೆಂಕಿ ಕಾಯಿಸಿಕೊಳ್ಳುತ್ತಾ ಸಿಬ್ಬಂದಿಯವರೊಂದಿಗೆ ಹಾಗೂ ಇತರ ಪ್ರವಾಸಿಗರೊಂದಿಗೆ ಹರಟುವುದು ಮುದ ನೀಡುತ್ತದೆ! ತೂಗುಮಂಚದ ಮೇಲೆ ಮಲಗಿ ಆಗಸದಲ್ಲಿ ಹರಡಿರುವ ನಕ್ಷತ್ರಗಳ ಸೌಂದರ್ಯವನ್ನು ಸವಿಯುವುದು ಇಲ್ಲೊಂದು ವಿಶೇಷ! ಪುನಃ ಗೋಲ್ ಘರ್ ನಲ್ಲಿ ಪುಷ್ಕಳ ಭೋಜನದೊಂದಿಗೆ ರಾತ್ರಿಯ ಕಾರ್ಯಕ್ರಮಗಳು ಮುಗಿದು ಟೆಂಟ್ ಕೋಣೆಯಲ್ಲಿ ಸುಖನಿದ್ರೆಗೆ ತೆರಳಬಹುದು.ಮರುದಿನ ಬೆಳಿಗ್ಗೆ ಉಪಾಹಾರದ ಬಳಿಕ, ಪ್ರಕೃತಿ ಸೌಂದರ್ಯ, ಪಕ್ಷಿ ವೀಕ್ಷಣೆ, ಆಟಪಾಟಗಳಲ್ಲಿ ಸ್ವಲ್ಪ ಹೊತ್ತು ತೊಡಗಿ ಸುಮಾರು ಹತ್ತೂವರೆ ಗಂಟೆಯ ಹೊತ್ತಿಗೆ ಹೊರಡಬೇಕಾಗುತ್ತದೆ.

      ಹೀಗೆ ಗಾಳಿಬೋರೆ ಪ್ರಕೃತಿ ಶಿಬಿರದಲ್ಲಿ ಒಂದು ದಿನ ಆನಂದವಾಗಿ ಕಳೆಯಬಹುದು.ಈ ಪ್ರವಾಸದ ವೆಚ್ಚ ಮೊದಲಾದ ವಿವರಣೆಗಳಿಗಾಗಿ ಜಂಗಲ್ ಲಾಡ್ಜಸ್ ರವರ ಅಂತರ್ಜಾಲದ  ವೆಬ್ ಸೈಟ್ www.junglelodges.com ಅನ್ನು ಸಂಪರ್ಕಿಸಬಹುದು.