ಸೋಮವಾರ, ಮೇ 20, 2024

ಸಂಸ್ಕೃತ ಸುಭಾಷಿತಗಳು -4

ಸಂಸ್ಕೃತ ಸುಭಾಷಿತ

ಸಾಹಿತ್ಯಸಂಗೀತಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛವಿಷಾಣಹೀನಃ|
ತೃಣಂ ನ ಖಾದನ್ನಪಿ ಜೀವಮಾನಸ್ತದ್ಭಾಗದೇಯಂ 
ಪರಮಂ ಪಶೂನಾಮ್||

ಸಾಹಿತ್ಯ,ಸಂಗೀತ,ಕಲೆಗಳಿಂದ ವಿಹೀನನಾದವನು ಬಾಲ,ಕೊಂಬುಗಳಿಲ್ಲದ ಸಾಕ್ಷಾತ್ ಪಶು!ಹುಲ್ಲನ್ನು ತಿನ್ನದೆಯೂ ಅವನು ಬದುಕುವುದು ಪಶುಗಳಿಗೆ ಪರಮಭಾಗ್ಯ!

ಮನುಷ್ಯನೆಂದ ಮೇಲೆ ಸ್ವಲ್ಪವಾದರೂ ಸಾಹಿತ್ಯ,ಸಂಗೀತ ಮೊದಲಾದ ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಬೇಕು.ವ್ಯಕ್ತಿಯು ಸ್ವಯಂ ಸಾಹಿತಿಯೋ ಕಲಾವಿದನೋ ಆಗದಿದ್ದರೂ ಅವುಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳಬೇಕು.ಅದು ಅವನಲ್ಲಿ ಒಳ್ಳೆಯ ಸಂಸ್ಕಾರವನ್ನು ತರುತ್ತದೆ.ಮನಸ್ಸು ಮೃದುವಾಗಿ ಹತೋಟಿಗೆ ಬರುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ಜೀವನವನ್ನು ಒಳ್ಳೆಯ ರೀತಿಯಲ್ಲಿ ಸಂತೋಷದಿಂದ ಅನುಭವಿಸಲು ಸಾಧ್ಯವಾಗುತ್ತದೆ.ಇಲ್ಲವಾದರೆ ಜೀವನ ನೀರಸವಾಗುತ್ತದೆ ಅಥವಾ ದುಶ್ಚಟಗಳು ಆವರಿಸಿಕೊಳ್ಳುತ್ತವೆ.ಹಾಗಾಗಿ ಇವೆಲ್ಲ ಇಲ್ಲದವನು ಬಾಲ,ಕೊಂಬುಗಳಿಲ್ಲದ ಸಾಕ್ಷಾತ್ ಪಶುವೆಂದು ಇಲ್ಲಿ ಮಾರ್ಮಿಕವಾಗಿ ಹೇಳಲಾಗಿದೆ.ಅಂಥವನು ಹುಲ್ಲು ತಿನ್ನದಿರುವುದು ಪಶುಗಳಿಗೆ ಪರಮಭಾಗ್ಯ!

ಸಂಸ್ಕೃತ ಸುಭಾಷಿತಗಳು -3

ಸಂಸ್ಕೃತ ಸುಭಾಷಿತ

ಪ್ರಾತರ್ದ್ಯೂತಪ್ರಸಂಗೇನ ಮಧ್ಯಾಹ್ನೇ ಸ್ತ್ರೀಪ್ರಸಂಗತಃ|
ರಾತ್ರೌ ಚೋರಪ್ರಸಂಗೇನ ಕಾಲೋ ಗಚ್ಛತಿ ಧೀಮತಾಮ್||

ಬುದ್ಧಿವಂತರು ಬೆಳಿಗ್ಗೆ ದ್ಯೂತಪ್ರಸಂಗದಿಂದಲೂ ಮಧ್ಯಾಹ್ನ ಸ್ತ್ರೀಪ್ರಸಂಗದಿಂದಲೂ ರಾತ್ರಿ ಚೋರಪ್ರಸಂಗದಿಂದಲೂ ಕಾಲ ಕಳೆಯುತ್ತಾರೆ.

ಇದೊಂದು ಚಮತ್ಕಾರಯುಕ್ತವಾದ ಶ್ಲೋಕ.ಇಲ್ಲಿ ದ್ಯೂತಪ್ರಸಂಗವೆಂದರೆ ಮಹಾಭಾರತ.ಏಕೆಂದರೆ ಮಹಾಭಾರತ ನಡೆಯಲು ಮುಖ್ಯ ಕಾರಣವೇ ಪಾಂಡವ,ಕೌರವರು ಆಡಿದ ದ್ಯೂತಕ್ರೀಡೆ.ಸ್ತ್ರೀಪ್ರಸಂಗವೆಂದರೆ ರಾಮಾಯಣ.ಏಕೆಂದರೆ ರಾಮಾಯಣ ನಡೆಯಲು ಮುಖ್ಯ ಕಾರಣವೇ ರಾವಣನು ಸೀತೆಯನ್ನು ಅಪಹರಿಸಿದುದು.ಚೋರಪ್ರಸಂಗವೆಂದರೆ ಭಾಗವತ.ಭಾಗವತವು ಮುಖ್ಯವಾಗಿ ಕೃಷ್ಣಕಥೆ.ಕೃಷ್ಣನು ಬಾಲ್ಯದಲ್ಲಿ ಬೆಣ್ಣೆ ಕದಿಯುತ್ತಿದ್ದುದರಿಂದ ಇದನ್ನು ಚೋರಪ್ರಸಂಗವೆಂದಿದ್ದಾರೆ.ಹೀಗೆ ಬುದ್ಧಿವಂತರು,ಭಾರತೀಯ ಸಂಸ್ಕೃತಿಯ ಮೂರು ಮುಖ್ಯ ಗ್ರಂಥಗಳಾದ ರಾಮಾಯಣ,ಮಹಾಭಾರತ,ಹಾಗೂ ಭಾಗವತಗಳನ್ನು ಓದುತ್ತಾ ಕಾಲಕಳೆಯುತ್ತಾರೆಂದು ತಾತ್ಪರ್ಯ.

ಸಂಸ್ಕೃತ ಸುಭಾಷಿತಗಳು -2

ಸಂಸ್ಕೃತ ಸುಭಾಷಿತ

ದಾನಂ ಭೋಗೋ ನಾಶಸ್ತಿಸ್ರೋ
    ಗತಯೋ ಭವಂತಿ ವಿತ್ತಸ್ಯ|
ಯೋ ನ ದದಾತಿ ನ ಭುಂಕ್ತೇ
     ತಸ್ಯ ತೃತೀಯಾ ಗತಿರ್ಭವತಿ||

ಹಣಕ್ಕೆ ದಾನ,ಭೋಗ, ಮತ್ತು ನಾಶವೆಂಬ ಮೂರು ಗತಿಗಳಾಗುತ್ತವೆ.ಯಾರು ಹಣವನ್ನು ಇತರರಿಗೆ ಕೊಡುವುದಿಲ್ಲವೋ,ಹಾಗೂ ತಾನೂ ಭೋಗಿಸುವುದಿಲ್ಲವೋ,ಅವನ ಹಣಕ್ಕೆ ಮೂರನೆಯ ಗತಿಯಾಗುತ್ತದೆ.

ಹಣವನ್ನು ಸಂಪಾದಿಸಲು ಎಲ್ಲರೂ ಕಷ್ಟಪಡುತ್ತಾರೆ.ಎಲ್ಲರೂ ಹಣವನ್ನು ಬಹಳ ಇಷ್ಟಪಡುತ್ತಾರೆ.ಹಣಕ್ಕೆ ಎಲ್ಲರೂ ಬಹಳ ಮಹತ್ವ ಕೊಡುತ್ತಾರೆ.ಆದರೆ ಹಣಕ್ಕೆ ಇಷ್ಟು ಮಹತ್ವ,ಪ್ರೀತಿಗಳು ಬಂದಿರುವುದು ಅದಕ್ಕೆ ಅನೇಕ ವಸ್ತುಗಳು ಬರುತ್ತವೆ ಎಂಬ ಕಾರಣದಿಂದ.ಹಣಕ್ಕೆ ಏನೂ ಸಿಗುವುದಿಲ್ಲವೆಂದಾದರೆ ಅದು ಬರಿಯ ಕಾಗದ ಅಥವಾ ನಾಣ್ಯಗಳಾಗುತ್ತವೆಯಷ್ಟೆ!ಐನೂರು,ಸಾವಿರ ರೂಪಾಯಿಗಳ ನೋಟುಗಳ ಅಮಾನ್ಯೀಕರಣವಾದಾಗ ಆಗಿದ್ದು ಅದೇ ಅಲ್ಲವೇ?ಆದರೆ ಎಷ್ಟೋ ಜನರು ಇದನ್ನು ಅರಿಯದೇ ಹಣವನ್ನು ಸುಮ್ಮನೆ ಕೂಡಿಡುತ್ತಾರೆ.ಅದನ್ನು ಬಳಸುವುದೇ ಇಲ್ಲ.ಅದರಿಂದ ಅವರಿಗೆ ಅದರ ಉಪಯೋಗವಾಗುವುದಿಲ್ಲ.ಹಾಗಾಗಿ,ಇಲ್ಲಿ ಸುಭಾಷಿತಕಾರ ಹೇಳುವುದು,ಹಣವನ್ನು ದಾನ ಮಾಡಬೇಕು,ಇಲ್ಲವೇ ಸ್ವಯಂ ಭೋಗಿಸಬೇಕು.ಇಲ್ಲವಾದರೆ ಅದಕ್ಕೆ ಮೂರನೆಯ ಗತಿ,ಅರ್ಥಾತ್ ನಾಶವುಂಟಾಗುತ್ತದೆ ಎಂದು.ಅಮಾನ್ಯೀಕರಣವಾದಾಗ ಎಷ್ಟೋ ಜನರ ಹಣಕ್ಕೆ ಇದೇ ಆಗಿದ್ದು!ಅಮಾನ್ಯೀಕರಣವಾಗದಿದ್ದರೂ ಅಂಥ ಜನರು ಹಣವನ್ನು ಬಳಸದಿರುವುದರಿಂದ,ಅವರ ಪಾಲಿಗೆ ಅದು ನಷ್ಟವಾದಂತೆಯೇ!ಕನ್ನಡದಲ್ಲಿ,'ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ' ಎಂಬ ಒಂದು ಗಾದೆಯಂತೆ,ಆ ಹಣ ಅವರಿಗೆ ದಕ್ಕದೇ ಇತರರಿಗೆ ಸೇರುತ್ತದೆ.ಹಾಗೆಂದು ಹಣವನ್ನು ಕೂಡಿಡಲೇಬಾರದೆಂದಲ್ಲ.ಅಥವಾ ದುಂದುವೆಚ್ಚ ಮಾಡಬೇಕೆಂದಲ್ಲ.ಆದರೆ ಅಗತ್ಯಕ್ಕೆ ಬೇಕಾದಷ್ಟು ಕೂಡಿಡಬೇಕೇ ಹೊರತು,ಕೂಡಿಡಲೆಂದೇ ಹಣವನ್ನು ತುಂಬಿಡಬಾರದು.ಕಪ್ಪು ಹಣವನ್ನು ಬೆಳೆಸಬಾರದು.ದಾನ,ವ್ಯಯ,ಕೂಡಿಡುವಿಕೆಗಳಲ್ಲಿ ಸಮತೋಲನವಿರಬೇಕು.

ಸಂಸ್ಕೃತ ಸುಭಾಷಿತಗಳು -1

ಸಂಸ್ಕೃತ ಸುಭಾಷಿತ

ಅನ್ನದಾನಂ ಪರಂದಾನಂ ವಿದ್ಯಾದಾನಮತಃ ಪರಮ್|
ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವೇಚ್ಚ ವಿದ್ಯಯಾ||

ಅನ್ನದಾನವು ದೊಡ್ಡ ದಾನ.ಆದರೆ ವಿದ್ಯಾದಾನವು ಅದಕ್ಕಿಂತ ದೊಡ್ಡ ದಾನ.ಅನ್ನದಿಂದ ಕ್ಷಣಿಕ ತೃಪ್ತಿ ಸಿಗುತ್ತದೆ.ಆದರೆ ವಿದ್ಯೆಯಿಂದ ಜೀವನಪರ್ಯಂತ ತೃಪ್ತಿ ಸಿಗುತ್ತದೆ.

ಅನ್ನದಾನವು ದೊಡ್ಡ ದಾನವೆಂದು ಎಲ್ಲರೂ ಒಪ್ಪುತ್ತಾರೆ.ಅದನ್ನು ಅನೇಕ ಶಾಸ್ತ್ರಗಳು ಪ್ರಶಂಸಿಸಿವೆ ಕೂಡ.ಹಸಿದವನಿಗೆ ಅನ್ನ ಕೊಟ್ಟು ಅವನನ್ನು ತೃಪ್ತಿ ಪಡಿಸುವುದು ಎಲ್ಲಕ್ಕಿಂತ ದೊಡ್ಡದೆಂಬುದು ನಿಜ.ಹಸಿವಿನ ಬಾಧೆ,ಸಂಕಟಗಳನ್ನು ಬಲ್ಲವನೇ ಬಲ್ಲ.ಹಸಿವಿದ್ದಾಗ ಬೇರೇನೂ ಬೇಕಾಗುವುದಿಲ್ಲ.ಹಸಿವು ಶಮನವಾದರೆ ಸಾಕೆನಿಸುತ್ತದೆ.ಅಂಥವನಿಗೆ ಅನ್ನ ಕೊಟ್ಟರೆ,ಹಸಿವು ನೀಗಿಸಿಕೊಂಡ ಅವನಿಗೆ ಅತ್ಯಂತ ಸಮಾಧಾನವಾಗುತ್ತದೆ.ಹಾಗಾಗಿಯೇ ಅನ್ನದಾತಾ ಸುಖೀಭವ ಎನ್ನುತ್ತಾರೆ.ಅದು ಸರಿ.ಆದರೆ ಎಲ್ಲಿಯವರೆಗೂ ಇನ್ನೊಬ್ಬರನ್ನು ಹಸಿವಿಗಾಗಿ ಬೇಡುತ್ತಲೇ ಇರುವುದು?ಎಲ್ಲಿಯವರೆಗೂ ಇನ್ನೊಬ್ಬರಿಂದಲೇ ಅನ್ನ ಪಡೆದು ತಿನ್ನುವುದು?ಆ ಇನ್ನೊಬ್ಬನಾದರೂ ಅದಕ್ಕಾಗಿ ದುಡಿಯಲೇಬೇಕಲ್ಲವೇ?ಹಾಗಾಗಿ ಅನ್ನವನ್ನು ಗಳಿಸುವ ಮಾರ್ಗವನ್ನು ತಿಳಿದರೆ ಅದು ಇನ್ನೂ ದೊಡ್ಡದಾದೀತು.ಅದೇ ವಿದ್ಯೆ.ವಿದ್ಯೆಯೆನ್ನುವುದು ಲೌಕಿಕವೂ ಆಗಿರಬಹುದು ಅಥವಾ ಪಾರಮಾರ್ಥಿಕವೂ ಆಗಿರಬಹುದು.ಒಂದು ನಮಗೆ ದುಡಿದು ತಿನ್ನುವ ಮಾರ್ಗವನ್ನು ಕಲಿಸಿದರೆ ಇನ್ನೊಂದು ಮಾನಸಿಕ,ಆಧ್ಯಾತ್ಮಿಕ ಆನಂದ ಕೊಡುತ್ತದೆ.ಒಟ್ಟಿನಲ್ಲಿ ಎರಡೂ ನಮಗೆ ಜೀವನಾದ್ಯಂತ ಆನಂದ ಕೊಡುತ್ತವೆ.ಇಂಥ ವಿದ್ಯೆಯನ್ನು ದಾನ ಮಾಡಿದರೆ ಅದು ಅನ್ನದಾನಕ್ಕಿಂತ ದೊಡ್ಡದು ಎನ್ನುತ್ತದೆ ಈ ಸುಭಾಷಿತ.ಏಕೆಂದರೆ ವಿದ್ಯಯು ನಮ್ಮ ಕಾಲ ಮೇಲೆ ನಾವು ನಿಲ್ಲುವಂತೆ,ಇತರರ ಅವಲಂಬನೆಯಿಲ್ಲದೇ ಬದುಕುವಂತೆ ಮಾಡಿ,ನಾವು ಆತ್ಮನಿರ್ಭರರಾಗುವಂತೆ,ಅಂದರೆ ಸ್ವಾವಲಂಬಿಗಳಾಗುವಂತೆ ಮಾಡುತ್ತದೆ.ಹೀಗೆ,ಅನ್ನವು ಕ್ಷಣಿಕ ತೃಪ್ತಿ ಕೊಟ್ಟರೆ,ವಿದ್ಯೆಯು ಜೀವನಪರ್ಯಂತ ತೃಪ್ತಿ ಕೊಡುತ್ತದೆ.

ಗಾಳಿಬೋರೆಯಲ್ಲಿ ಒಂದು ದಿನ

 ಗಾಳಿಬೋರೆಯಲ್ಲಿ ಒಂದು ದಿನ




      ದಿನನಿತ್ಯದ ಜಂಜಾಟ,ಗಲಾಟೆಗಳಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಆನಂದವಾಗಿ ನಲಿದಾಡುತ್ತಾ ಮೈಮರೆಯಲು ಒಂದು ರಮ್ಯಮನೋಹರ ತಾಣವೆಂದರೆ ಗಾಳಿಬೋರೆ ಪ್ರಕೃತಿ ಶಿಬಿರ.ಬೆಂಗಳೂರಿನಿಂದ ಸುಮಾರು ನೂರು ಕಿಲೋಮೀಟರ್ ಗಳಷ್ಟು ದೂರವಿರುವ ಈ ಸ್ಥಳ, ಕರ್ನಾಟಕ ಸರ್ಕಾರದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ರವರ ವಸತಿಶಿಬಿರವಾಗಿದೆ.ಬೆಂಗಳೂರಿನಿಂಧ ಕನಕಪುರ ರಸ್ತೆಗೆ ಹೋಗಿ ಅಲ್ಲಿ ಸಂಗಮದ ಕಡೆ  ಹೋದರೆ ಅಲ್ಲಿ ಕಾವೇರಿ ವನ್ಯಧಾಮಕ್ಕೆ ಸ್ವಾಗತ ಎಂಬ ಫಲಕ ಕಾಣುತ್ತದೆ. ಅಲ್ಲಿಂದ ಮುಂದೆ ಹೋದರೆ ಬಲಕ್ಕೆ ಗಾಳಿಬೋರೆಯ ಕಡೆಗೆ ದಿಕ್ಕು ತೋರಿಸುವ ಒಂದು ಫಲಕ ಕಾಣುತ್ತದೆ.ಇಲ್ಲಿಂದ ಒಂಬತ್ತು ಕಿ.ಮೀ. ಮಣ್ಣಿನ ರಸ್ತೆಯಲ್ಲಿ ಸಾಗಲು ಗಾಳಿಬೋರೆ ಪ್ರಕೃತಿ ಶಿಬಿರ ಸಿಗುತ್ತದೆ.ನಾವು ಮೊದಲೇ ಅಂತರ್ಜಾಲದಲ್ಲಿ ಜಂಗಲ್ ಲಾಡ್ಜಸ್ ರವರ ತಾಣದಲ್ಲಿ (www.junglelodges.com) ನಮ್ಮ ವಸತಿಯನ್ನು ಕಾಯ್ದಿರಿಸಿಕೊಂಡು ಹಣ ಪಾವತಿಸಿ ನಿಗದಿತ ದಿನದಂದು ಹೊರಡಬೇಕು.ಅಂದು ಶಿಬಿರದ ಸಿಬ್ಬಂದಿಯವರೇ ಕರೆ ಮಾಡಿ ನೆನಪಿಸಿ ದಾರಿಯನ್ನೂ ಹೇಳುತ್ತಾರೆ.ಬೆಳಿಗ್ಗೆ ಸುಮಾರು ಹತ್ತೂವರೆ ಗಂಟೆಯ ಹೊತ್ತಿಗೆ ನಾವು ವಸತಿಯನ್ನು ಪ್ರವೇಶಿಸಿ ಕಛೇರಿಯಲ್ಲಿ ವರದಿ ಮಾಡಿಕೊಳ್ಳಬೇಕು.ನಾವು ಇಳಿದುಕೊಳ್ಳಲು ಇಲ್ಲಿ ಸೊಗಸಾದ, ಎಲ್ಲ ಸೌಲಭ್ಯಗಳಿರುವ ಟೆಂಟ್ ಗಳೆಂಬ ಕೋಣೆಗಳಿವೆ.ಇವುಗಳ ಗೋಡೆಗಳು ಬಟ್ಟೆಯಿಂದ ಮಾಡಲಾಗಿದ್ದು ಈ ಟೆಂಟ್ ನಲ್ಲಿರುವುದೇ ಒಂದು ಆನಂದ! ಇಲ್ಲಿನ ‌‌‌‌‌‌‌‌‌‌‌‌‌‌‌‌‌‌ಸಿಬ್ಬಂದಿಯವರು ಬಹಳ ಸ್ನೇಹಪರರು.

       ದೊಡ್ಡ ಮೈದಾನದಂಥ ಪ್ರದೇಶ, ಮತ್ತು ಎದುರಿಗೆ ಝುಳು ಝುಳು ಹರಿಯುವ ಕಾವೇರಿ ನದಿಯ ಅತ್ಯಂತ ರಮ್ಯವಾದ ನೋಟ ನಮ್ಮಲ್ಲಿ ಪುಳಕವುಂಟುಮಾಡುತ್ತದೆ! ಹಸಿರಿನಿಂದ ಕೂಡಿದ ಬೆಟ್ಟಗುಡ್ಡಗಳ ಮನೋಹರ ದೃಶ್ಯಾವಳಿಯೊಂದಿಗೆ ಕಾವೇರಿ ನದಿಯ ಸೌಂದರ್ಯವನ್ನು ನೋಡುತ್ತಾ ಕೂರಲೆಂದೇ ಒಂದು ದುಂಡಾದ ಕಟ್ಟೆಯ ಆವರಣವಿದೆ.ಮೈದಾನದ ಪ್ರದೇಶದಲ್ಲಿ ಕಟ್ಟಿಗೆಯ ಜೋಕಾಲಿ, ಟೈರ್, ಟೆನ್ನಿಸ್ ಆಡಲು ಹಾಗೂ ಹತ್ತಲು ಪರದೆಗಳು, ಮೊದಲಾಗಿ ಆಟಗಳನ್ನಾಡಲು ಹಲವಾರು ಸಾಧನಗಳಿವೆ.ಅಂತೆಯೇ ಪ್ರತಿ ಟೆಂಟ್ ನ ಮುಂದೆಯೂ ಮಲಗಿ ವಿಶ್ರಾಂತಿ ಪಡೆಯಲು ಹ್ಯಾಮಾಕ್ ಅಥವಾ ತೂಗುಮಂಚಗಳಿವೆ.

      ಗಾಳಿಬೋರೆ ಪ್ರದೇಶ ಕಾವೇರಿ ವನ್ಯಧಾಮಕ್ಕೆ ಸೇರಿದೆ.ವಸತಿಶಿಬಿರದ ಹಿಂದೆ ಇರುವ ಒಂದು ದೊಡ್ಡ ಬಂಡೆ ಗಾಳಿಗೆ ಮೈಯೊಡ್ಡಿ ನಿಂತಿರುವುದರಿಂದ ಈ ಸ್ಥಳಕ್ಕೆ ಗಾಳಿಬೋರೆ ಎನ್ನುತ್ತಾರೆ.ಆಸಕ್ತರು ಸಮಯ ಸಿಕ್ಕರೆ ಇದನ್ನು ಹತ್ತಬಹುದು. ವಸತಿ ತಲುಪಿದ ಬಳಿಕ, ತಂಪಾದ ಪಾನೀಯ ಇಲ್ಲವೇ ಚಹಾ ಸೇವನೆಯೊಂದಿಗೆ ಸ್ವಲ್ಪ ವಿಶ್ರಾಂತಿಯ ಬಳಿಕ, ಪರಿಸರವಾದಿಗಳು ಒಂದು ನಿಗದಿತ ದಾರಿಯಲ್ಲಿ ಕಾವೇರಿ ನದೀತೀರದವರೆಗೆ ಚಾರಣ ಮಾಡಿಸುತ್ತಾರೆ.ದಾರಿಯಲ್ಲಿ ಅವರು ಹಲವಾರು ವಿಶಿಷ್ಟ ಗಿಡಮರಗಳನ್ನೂ ಪ್ರಾಣಿಪಕ್ಷಿಗಳನ್ನೂ ತೋರಿಸುತ್ತಾರೆ.ಇಲ್ಲಿ ನೋಡಲೇಬೇಕಾದ ಒಂದು ಪ್ರಾಣಿಯೆಂದರೆ ಗ್ರಿಜಲ್ಡ್ ಜಯಂಟ್ ಸ್ಕ್ವಿರಲ್ ಅಥವಾ ಕಂದು ಬಣ್ಣದ ದೈತ್ಯ ಅಳಿಲು.ನನ್ನ ಅದೃಷ್ಟಕ್ಕೆ ನಾನು ಹೋದಾಗ ನನಗೆ ನೋಡಲು ಸಿಕ್ಕಿತು! ಕರ್ನಾಟಕದಲ್ಲಿ  ಕಾವೇರಿ ವನ್ಯಧಾಮ ಬಿಟ್ಟರೆ ಇದು ಇನ್ನೆಲ್ಲೂ ಕಂಡುಬರುವುದಿಲ್ಲ. ಇದರಂತೆ ಕಾವೇರಿ ವನ್ಯಧಾಮಕ್ಕೆ ‌‌‌‌‌‌‌‌‌‌‌‌‌‌‌‌‌‌‌ಸೇರಿದ ಭೀಮೇಶ್ವರಿಯೆಂಬ ಇನ್ನೊಂದು ಸ್ಥಳದಲ್ಲಿ ಇದನ್ನು ಕಾಣಬಹುದು.ಚಾರಣದ ದಾರಿ ಮತ್ತು ಕಾವೇರೀನದೀತೀರ ಪ್ರಕೃತಿ ಸೌಂದರ್ಯದಿಂದ ತುಂಬಿದ್ದು ಛಾಯಾಚಿತ್ರಗಳನ್ನು ತೆಗೆಯಲು ಒಳ್ಳೆಯ ಅವಕಾಶವಿದೆ.ಚಾರಣದ ಬಳಿಕ, ಗೋಲ್ ಘರ್ ಎಂಬ ದುಂಡಾದ ಕೊಟ್ಟಿಗೆಯಂಥ ಸ್ಥಳದಲ್ಲಿ ಸೊಗಸಾದ ಭೋಜನವಿರುತ್ತದೆ.ಇಲ್ಲಿನ ಭೋಜನ,ಬಹಳ ರುಚಿಯಾಗಿಯೂ ಶುಚಿಯಾಗಿಯೂ ಇದ್ದು,ಪ್ರಕೃತಿಯ ಮಧ್ಯೆ ಊಟ ಮಾಡುವುದೇ ಒಂದು ಚೆಂದ! 

     ಊಟದ ಬಳಿಕ ಕೋಣೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು ಇಲ್ಲವೇ ಆಟವಾಡುತ್ತಾ, ಪಕ್ಷಿ ವೀಕ್ಷಣೆ,ಚಿಟ್ಟೆಗಳ ವೀಕ್ಷಣೆ, ಛಾಯಾಗ್ರಹಣಗಳಲ್ಲಿ ಕಾಲಕಳೆಯಬಹುದು.ನದೀತೀರದ ಬಳಿ ಪದೇ ಪದೇ      ಬಾಲ ಬಡಿಯುತ್ತಾ ಓಡಾಡುತ್ತಿದ್ದ ವ್ಯಾಗ್ಟೇಲ್  ಪಕ್ಷಿಯನ್ನು ಛಾಯಾಗ್ರಹಣ ಮಾಡುವ ಅದೃಷ್ಟ ನನಗೆ ಸಿಕ್ಕಿತು! 

        ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ನದಿಯಲ್ಲಿ ಕೊರಕಲ್ ಅಥವಾ ತೆಪ್ಪದ ಮೇಲೆ ವಿಹಾರ ಮಾಡಿಸುತ್ತಾರೆ.ನದಿಯ ಮೇಲೆ ವಿಹಾರ ಮಾಡುತ್ತಾ ಪ್ರಕೃತಿ ಸೌಂದರ್ಯ ‌ಸವಿಯುವ ಸೊಗಸೇ ಸೊಗಸು! ತೆಪ್ಪದ ಸವಾರಿ ಮಾಡುವಾಗ ಪಕ್ಷಿವೀಕ್ಷಣೆಗೆ ಹೆಚ್ಚು ಅವಕಾಶವಿದೆ.ಡಾರ್ಟರ್ ಅಥವಾ ಹಾವಕ್ಕಿ,ಕಾರ್ಮೋರೆಂಟ್ ಅಥವಾ ನೀರುಕಾಗೆ, ಹಲವು ಬಗೆಯ ಹದ್ದುಗಳು,ಮೊದಲಾದ ಪಕ್ಷಿಗಳನ್ನು ನೋಡಬಹುದು.ಕೆಲವೊಮ್ಮೆ ಆಚೆಯ ದಡದಲ್ಲಿ ಆನೆಗಳೂ ಕಾಣುತ್ತವೆ.ಅಂತೆಯೇ ನದಿಯಲ್ಲಿ ಮತ್ತು ಬಂಡೆಗಳ ಮೇಲೆ ಮೊಸಳೆಗಳನ್ನೂ ಕಾಣಬಹುದು!

      ತೆಪ್ಪದ ಸವಾರಿ ಮುಗಿಸಿ ಬಂದಾಗ ನಮಗೆ ಲಘು ಉಪಾಹಾರ ಮತ್ತು ಬಿಸಿಯಾದ ಚಹಾ ಕಾದಿರುತ್ತದೆ! ಅನಂತರ, ರಾತ್ರಿ ಒಂದು ವನ್ಯಜೀವಿ ಚಲನಚಿತ್ರದ ವೀಕ್ಷಣೆ, ಕ್ಯಾಂಪ್ ಫೈರ್ ಮುಂದೆ ಬೆಂಕಿ ಕಾಯಿಸಿಕೊಳ್ಳುತ್ತಾ ಸಿಬ್ಬಂದಿಯವರೊಂದಿಗೆ ಹಾಗೂ ಇತರ ಪ್ರವಾಸಿಗರೊಂದಿಗೆ ಹರಟುವುದು ಮುದ ನೀಡುತ್ತದೆ! ತೂಗುಮಂಚದ ಮೇಲೆ ಮಲಗಿ ಆಗಸದಲ್ಲಿ ಹರಡಿರುವ ನಕ್ಷತ್ರಗಳ ಸೌಂದರ್ಯವನ್ನು ಸವಿಯುವುದು ಇಲ್ಲೊಂದು ವಿಶೇಷ! ಪುನಃ ಗೋಲ್ ಘರ್ ನಲ್ಲಿ ಪುಷ್ಕಳ ಭೋಜನದೊಂದಿಗೆ ರಾತ್ರಿಯ ಕಾರ್ಯಕ್ರಮಗಳು ಮುಗಿದು ಟೆಂಟ್ ಕೋಣೆಯಲ್ಲಿ ಸುಖನಿದ್ರೆಗೆ ತೆರಳಬಹುದು.ಮರುದಿನ ಬೆಳಿಗ್ಗೆ ಉಪಾಹಾರದ ಬಳಿಕ, ಪ್ರಕೃತಿ ಸೌಂದರ್ಯ, ಪಕ್ಷಿ ವೀಕ್ಷಣೆ, ಆಟಪಾಟಗಳಲ್ಲಿ ಸ್ವಲ್ಪ ಹೊತ್ತು ತೊಡಗಿ ಸುಮಾರು ಹತ್ತೂವರೆ ಗಂಟೆಯ ಹೊತ್ತಿಗೆ ಹೊರಡಬೇಕಾಗುತ್ತದೆ.

      ಹೀಗೆ ಗಾಳಿಬೋರೆ ಪ್ರಕೃತಿ ಶಿಬಿರದಲ್ಲಿ ಒಂದು ದಿನ ಆನಂದವಾಗಿ ಕಳೆಯಬಹುದು.ಈ ಪ್ರವಾಸದ ವೆಚ್ಚ ಮೊದಲಾದ ವಿವರಣೆಗಳಿಗಾಗಿ ಜಂಗಲ್ ಲಾಡ್ಜಸ್ ರವರ ಅಂತರ್ಜಾಲದ  ವೆಬ್ ಸೈಟ್ www.junglelodges.com ಅನ್ನು ಸಂಪರ್ಕಿಸಬಹುದು.



ಮಂಗಳವಾರ, ಏಪ್ರಿಲ್ 23, 2024

ನವರಸಗಳಲ್ಲಿ ಡಾ.ರಾಜಕುಮಾರರ ಅಭಿನಯ

ರಾಜಕುಮಾರರ ಹುಟ್ಟುಹಬ್ಬವಾದ ಇಂದು ಅವರ ಕಲೆಯನ್ನು ಸ್ಮರಿಸುವುದೆಂದರೆ ಭಾರತೀಯ ಸಂಸ್ಕೖತಿಯನ್ನೂ ಮಾನವ ಜೀವನದ ಹಲವು ಮುಖಗಳನ್ನೂ ಸ್ಮರಿಸಿದಂತಾಗುತ್ತದೆ.ಅಷ್ಟು ವೈವಿಧ್ಯಮಯವಾದ ಪಾತ್ರಗಳಲ್ಲಿ ಸಮರ್ಪಕವಾಗಿ ಅಭಿನಯಿಸಿದ್ದಾರೆ ಅವರು.ಭಕ್ತ,ಭಗವಂತ,ರಾಜ,ರಾಕ್ಷಸ,ಸಂಗೀತಗಾರ,ಸಿಪಾಯಿ,ಒಳ್ಳೆಯ ಪತಿ,ಅಪ್ಪ,ಮಗ,ತಾತ,ರೈತ,ಸೇವಕ,ಪೋಲೀಸ್,ಕಳ್ಳ,ಕಾರ್ಮಿಕ,ಪ್ರೇಮಿ,ಪ್ರೊಫೆಸರ್,ಬಾಕ್ಸರ್,ವಿಲಾಸಿ ಯುವಕ,ಜೇಮ್ಸ್ಬಾಂಡ್,ಕುರುಡ,ಚಾಲಕ,ಹೀಗೆ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದು,ಅವರ ಪಾತ್ರಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು.ಅವರ ಅಭಿನಯ ರಸಪ್ರಧಾನವಾಗಿದೆ.ಅವರ ಹಲವು ಪಾತ್ರಗಳಲ್ಲಿ ನವರಸಗಳನ್ನೂ ಕಾಣಬಹುದು.ಕೆಲವನ್ನು ಸ್ಮರಿಸುವುದಾದರೆ,ಶೃಂಗಾರಕ್ಕೆ ಬಭ್ರುವಾಹನ ಚಿತ್ರದ ಈ ಸಮಯ ಶೖಂಗಾರಮಯ,ನಿನ್ನ ಕಣ್ಣ ನೋಟದಲ್ಲಿ ಗೀತೆಗಳ ಹಾಗೂ ಕೃಷ್ಣದೇವರಾಯ ಚಿತ್ರದ ಚಿನ್ನಾದೇವಿಯೊಂದಿಗಿನ ಸನ್ನಿವೇಶಗಳ ಅಭಿನಯ,ವೀರರಸಕ್ಕೆ ಬಭ್ರುವಾಹನ ಮತ್ತು ಮಯೂರ ಚಿತ್ರಗಳ ಸನ್ನಿವೇಶಗಳು,ಹಾಸ್ಯಕ್ಕೆ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಿನ ಹಾಗೂ ಬಂಗಾರದ ಪಂಜರ,ಭಾಗ್ಯದ ಲಕ್ಷ್ಮೀ ಬಾರಮ್ಮ ಚಿತ್ರಗಳ ಅಭಿನಯ,ಅದ್ಭುತರಸಕ್ಕೆ ಭಕ್ತಪ್ರಹ್ಲಾದದ ಹಿರಣ್ಯಕಶಿಪು ವರ ಪಡೆಯುವ ಹಾಗೂ ಸಿಂಹಾಸನಸ್ಥನಾಗಿ ನರ್ತನ ನೋಡುವ ಸನ್ನಿವೇಶಗಳು ಮತ್ತು ಭಕ್ತ ಕುಂಬಾರದ ಗೋರ ಕುಂಬಾರನು ಕನಸಿನಲ್ಲಿ ಹಾಗೂ ನೈಜವಾಗಿ ಭಗವಂತನನ್ನು ದರ್ಶಿಸುವಾಗಿನ ಅಭಿನಯ,ಕರುಣರಸಕ್ಕೆ ಕಸ್ತೂರಿ ನಿವಾಸದ ಕೊನೆಯ ದುಃಖದ ಸನ್ನಿವೇಶಗಳು,ಭಕ್ತ ಕುಂಬಾರದಲ್ಲಿ ಭಗವಂತನಿಗಾಗಿ ವಿಲಪಿಸುವ,ಭಕ್ತ ಕನಕದಾಸದ ಬಾಗಿಲನು ತೆರೆದು ಗೀತೆಯ ಹಾಗೂ ಸನಾದಿ ಅಪ್ಪಣ್ಣದ ಕೊನೆಯ ದೃಶ್ಯಗಳು,ರೌದ್ರರಸಕ್ಕೆ ಭಕ್ತಪ್ರಹ್ಲಾದದ ಹಿರಣ್ಯಕಶಿಪು ಹಾಗೂ ಮಹಿಷಾಸುರಮರ್ದಿನಿಯ ಮಹಿಷಾಸುರ ಪಾತ್ರಗಳ ಅಭಿನಯ,ಬೀಭತ್ಸರಸಕ್ಕೆ ಸತಿಶಕ್ತಿಯ ರಕ್ತಾಕ್ಷನ ಪಾತ್ರ ಹಾಗೂ ಭಕ್ತಪ್ರಹ್ಲಾದದ ಹಿರಣ್ಯಕಶಿಪು ಪಾತ್ರದ ನಾರದರೊಂದಿಗಿನ ಹಾಗೂ ಸ್ವಗತ ಮಾತುಗಳ ಮತ್ತಿತರ ದೖಶ್ಯಗಳ ಅಭಿನಯ,ಭಯಾನಕರಸಕ್ಕೆ ಅದೇ ಕಣ್ಣು ಚಿತ್ರದ ಮನೋವಿಕಾರಿ ಅಪ್ಪನ ಪಾತ್ರ,ಮತ್ತು ಶಾಂತರಸಕ್ಕೆ ಶ್ರೀನಿವಾಸಕಲ್ಯಾಣದ ವಿಷ್ಣುವಿನ ಪಾತ್ರ,ಸಾಕ್ಷಾತ್ಕಾರ ಚಿತ್ರದ ನಾಯಕನ ಸೆರೆಮನೆವಾಸದ  ಹಾಗೂ ಕೊನೆಯ ದೃಶ್ಯಗಳು,ಹಾಗೂ ಮಂತ್ರಾಲಯಮಹಾತ್ಮೆ ಚಿತ್ರದ ರಾಘವೇಂದ್ರ ಸ್ವಾಮಿಗಳ ಪಾತ್ರ,ಕಬೀರ,ಹರಿಭಕ್ತ ಮುಂತಾದ ಕೆಲವು ಭಕ್ತಿ ಪಾತ್ರಗಳು ಕೆಲವು ಉದಾಹರಣೆಗಳು.ಅನೇಕ ನಾಯಕಿಯರೊಂದಿಗೆ ಅಭಿನಯಿಸಿರುವ,ಅತ್ಯುತ್ತಮ ಕಥೆಗಳುಳ್ಳ,ಅತ್ಯುತ್ತಮ ಸಾಹಿತ್ಯ ಹಾಗೂ ಸುಂದರ ರಾಗಗಳುಳ್ಳ ಗೀತೆಗಳುಳ್ಳ ಚಿತ್ರಗಳ ಹೆಗ್ಗಳಿಕೆಯೂ ರಾಜಕುಮಾರರಿಗಿದೆ.ತಾವೇ ಒಳ್ಳೆಯ ಗಾಯಕರಾಗಿ ಅನೇಕ ಹಾಡುಗಳನ್ನು ಹಾಡಿಯೂ ಅನೇಕ ಉತ್ತಮ ಗಾಯಕರಿಂದ ಹಾಡಿಸಿಕೊಂಡ ಹೆಗ್ಗಳಿಕೆಯೂ ರಾಜಕುಮಾರರಿಗಿದೆ.ಹೀಗೆ ಡಾ.ರಾಜಕುಮಾರ್ ಒಬ್ಬ ಪರಿಪೂರ್ಣ ಕಲಾವಿದ.

ಶನಿವಾರ, ಏಪ್ರಿಲ್ 13, 2024

ಪೌರಾಣಿಕ ಸ್ವಾರಸ್ಯಗಳು -ತ್ರಿಶಂಕುವಿಗೆ ಆ ಹೆಸರು ಬರಲು ಕಾರಣವೇನು?



      ತ್ರಿಶಂಕು ಸ್ವರ್ಗ, ತ್ರಿಶಂಕು ಸ್ಥಿತಿ, ಮೊದಲಾದ ಪದಗಳನ್ನು ನಾವು ಸಾಮಾನ್ಯವಾಗಿ ಉಪಯೋಗಿಸುತ್ತಿರುತ್ತೇವೆ. ಇಲ್ಲೂ ಇಲ್ಲ, ಅಲ್ಲೂ ಇಲ್ಲ ಎಂಬ ಎರಡು ಸ್ಥಿತಿಗಳ ನಡುವಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಾಗ ಈ ನುಡಿಗಟ್ಟನ್ನು ಬಳಸುತ್ತೇವೆ.ಇದಕ್ಕೆ ಕಾರಣವಾದ ಪೌರಾಣಿಕ ಕಥೆ ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ.ಇಕ್ಷ್ವಾಕು ವಂಶದ ತ್ರಿಶಂಕು ಎಂಬ ರಾಜನಿಗೆ ಸಶರೀರವಾಗಿ ಸ್ವರ್ಗಕ್ಕೆ ಹೋಗುವ ಆಸೆಯಿರುತ್ತದೆ.ಅದಕ್ಕಾಗಿ ಒಂದು ಯಜ್ಞವನ್ನು ಮಾಡಿಸಬೇಕೆಂದು ಅವನು ತನ್ನ ಕುಲಗುರುಗಳಾದ ವಸಿಷ್ಠರನ್ನು ಕೇಳಿಕೊಂಡಾಗ ಅವರು ಅದು ಸಾಧ್ಯವಾಗದು ಎನ್ನುತ್ತಾರೆ.ಆಗ ಅವನು ಅವರ ನೂರು ಮಕ್ಕಳ ಬಳಿ ಹೋಗಿ ಕೇಳಿದಾಗ ಅವರು ಕುಪಿತರಾಗಿ ಅವನಿಗೆ ಚಂಡಾಲನಾಗುವಂತೆ ಶಪಿಸುತ್ತಾರೆ! ಅವನು ಆ ಸ್ಥಿತಿಯಲ್ಲೇ ವಿಶ್ವಾಮಿತ್ರರ ಬಳಿ ಹೋಗಿ ತನ್ನ ಆಸೆ ಹೇಳಿಕೊಂಡಾಗ, ಅವರು ಅವನಿಗೆ ಆಶ್ವಾಸನೆ ನೀಡಿ ಯಜ್ಞವನ್ನು ಆರಂಭಿಸಿದರು.ಆ ಯಜ್ಞಕ್ಕೆ ಆಹ್ವಾನ ನೀಡಲಾದ ವಸಿಷ್ಠಪುತ್ರರು ಬರದೇ ವಿಶ್ವಾಮಿತ್ರರನ್ನೂ ಅವರ ಯಾಗವನ್ನೂ ನಿಂದಿಸಲು, ವಿಶ್ವಾಮಿತ್ರರು ಅವರಿಗೆ ನಾಯಿ ಮಾಂಸ ತಿನ್ನುವ ಹೀನ ಕುಲದಲ್ಲಿ ಹುಟ್ಟುವಂತೆ ಶಪಿಸಿದರು. ಅನಂತರ, ಯಜ್ಞದ ಹವಿರ್ಭಾಗ ತೆಗೆದುಕೊಳ್ಳಲು ವಿಶ್ವಾಮಿತ್ರರು ದೇವತೆಗಳನ್ನು ಆಹ್ವಾನಿಸಲು, ಅವರೂ ಬರಲಿಲ್ಲ. ಆಗ ವಿಶ್ವಾಮಿತ್ರರು ತಮ್ಮ ತಪೋಬಲದಿಂದ ತ್ರಿಶಂಕುವನ್ನು ಸ್ವರ್ಗಕ್ಕೆ ಕಳಿಸಿಯೇಬಿಟ್ಟರು! ಆದರೆ ಇಂದ್ರನು, ಗುರುಶಾಪದಿಂದ ಚಂಡಾಲನಾದವನು ಸ್ವರ್ಗಕ್ಕೆ ಯೋಗ್ಯನಲ್ಲನೆಂದು ಅವನನ್ನು ತಲೆಕೆಳಗಾಗಿ ಭೂಮಿಗೆ ಬೀಳುವಂತೆ ಆದೇಶಿಸಿದನು! ಅವನು ಹಾಗೆ ತಲೆಕೆಳಗಾಗಿ ಬೀಳತೊಡಗಲು, ವಿಶ್ವಾಮಿತ್ರರು ಅವನನ್ನು,"ನಿಲ್ಲು!" ಎಂದು ತಮ್ಮ ತಪೋಬಲದಿಂದ ಅಲ್ಲಿಯೇ ನಿಲ್ಲಿಸಿ, ಅಲ್ಲಿಯೇ ಒಂದು ಸ್ವರ್ಗವನ್ನೂ ನಕ್ಷತ್ರಮಂಡಲವನ್ನೂ ಸಪ್ತರ್ಷಿಗಳನ್ನೂ ಸೃಷ್ಟಿಸಿಬಿಟ್ಟರು! ಇದರಿಂದ ಗಾಬರಿಗೊಂಡ ಇಂದ್ರಾದಿ ದೇವತೆಗಳು ಬಂದು, "ತ್ರಿಶಂಕುವು ಗುರುಶಾಪದಿಂದ ಚಂಡಾಲನಾಗಿರುವ ಕಾರಣ, ಸ್ವರ್ಗಕ್ಕೆ ಯೋಗ್ಯನಲ್ಲ!" ಎಂದು ಹೇಳಿದನು.ಆಗ ವಿಶ್ವಾಮಿತ್ರರು," ಹಾಗಿದ್ದರೆ ಅವನು ಈಗ ಇರುವ ಸ್ಥಿತಿಯಲ್ಲೇ ಸ್ವರ್ಗಸುಖ ಅನುಭವಿಸುವಂತಾಗಬೇಕು!" ಎಂದರು.ಅದಕ್ಕೆ ದೇವತೆಗಳು ಒಪ್ಪಿದರು.ಹೀಗೆ ತ್ರಿಶಂಕು ತಲೆಕೆಳಗಾಗಿಯೇ ಸ್ವರ್ಗಸುಖ ಅನುಭವಿಸತೊಡಗಿದನು.ಈ ಕಾರಣಕ್ಕಾಗಿಯೇ ತ್ರಿಶಂಕು ಸ್ವರ್ಗ ಅಥವಾ ತ್ರಿಶಂಕು ಸ್ಥಿತಿ ಎಂಬ ನುಡಿಗಟ್ಟು ಬಳಕೆಗೆ ಬಂದಿತು.ಈ ಕಥೆ ವಾಲ್ಮೀಕಿ ರಾಮಾಯಣದಲ್ಲಿ ಬರುತ್ತದೆ.ಆದರೆ ಈ ತ್ರಿಶಂಕುವಿಗೆ ಆ ಹೆಸರು ಹೇಗೆ ಬಂದಿತು ಎನ್ನುವುದು ಇನ್ನೊಂದು ಸ್ವಾರಸ್ಯಕರ ಕಥೆ.ಇದು ಮಹಾಭಾರತದ ಖಿಲಭಾಗವಾದ ಹರಿವಂಶದಲ್ಲಿ ಬರುತ್ತದೆ.ಅಂತೆಯೇ ವಿಷ್ಣುಪುರಾಣ ಮೊದಲಾದ ಪುರಾಣಗಳಲ್ಲಿ ಇಷ್ಟು ದೀರ್ಘವಲ್ಲದಿದ್ದರೂ ಸಂಕ್ಷಿಪ್ತವಾಗಿ ಹೇಳಿದೆ.
     ತ್ರಿಶಂಕುವಿನ ಮೂಲ ಹೆಸರು ಸತ್ಯವ್ರತ.ಅವನು ಇಕ್ಷ್ವಾಕು ವಂಶದ ರಾಜನಾದ ತ್ರಯ್ಯಾರುಣನ ಮಗ.ಇವನಿಗೆ ಒಂದು ದುಷ್ಟ ಅಭ್ಯಾಸ ಇತ್ತು.ಅದೆಂದರೆ, ಸ್ವಯಂವರ ನಡೆಯುತ್ತಿದ್ದಾಗ ಹೋಗಿ ಕನ್ಯಾಪಹರಣ ಮಾಡುತ್ತಿದ್ದ! ಪಾಣಿಗ್ರಹಣವಾಗಿದ್ದರೂ ಸಪ್ತಪದಿಯಾದ ನಂತರವಷ್ಟೇ ವಿವಾಹ ಸಂಪೂರ್ಣವಾಗುತ್ತದೆ. ಇವನು ಸಪ್ತಪದಿಯಾಗುವ ಮೊದಲು ವಧುವನ್ನು, ಅಂದರೆ ಕನ್ಯೆಯನ್ನು ಅಪಹರಿಸುತ್ತಿದ್ದ! ಅವನ ಪ್ರಕಾರ ವಧುವು ಇನ್ನೂ ಕನ್ಯೆಯಾಗಿದ್ದರಿಂದ ಅದು ಸರಿ ಎಂಬ ಭಾವನೆ ಇದ್ದಿರಬಹುದು.ಹೀಗೆ ಅವನು ಅನೇಕ ಕನ್ಯೆಯರನ್ನು ಅಪಹರಿಸುತ್ತಿದ್ದ ಅಪರಾಧಕ್ಕೆ ಇಂದ್ರನು ಅವನ ರಾಜ್ಯದಲ್ಲಿ ಹನ್ನೆರಡು ವರ್ಷಗಳ ಕಾಲ ಮಳೆಗರೆಯಲಿಲ್ಲ! ಅವನ ಈ ಅಪರಾಧಗಳಿಂದ ಬೇಸತ್ತ ಅವನ ತಂದೆ ಅವನಿಗೆ," ಕುಲಕಳಂಕನೇ! ನನ್ನ ರಾಜ್ಯದಿಂದ ತೊಲಗಿಹೋಗು! ನಿನ್ನಿಂದ ನಾನು ಪುತ್ರವಂತನೆನಿಸಿಕೊಳ್ಳಲು ಇಚ್ಛಿಸುವುದಿಲ್ಲ!" ಎಂದು ಅವನನ್ನು ರಾಜ್ಯದಿಂದಲೇ ಬಹಿಷ್ಕರಿಸಿದನು! ಆಗ ಚಿಂತಿತನಾದ ಸತ್ಯವ್ರತನು," ನಾನು ಎಲ್ಲಿಗೆ ಹೋಗಲಿ?" ಎಂದು ಕೇಳಿದನು.ಅದಕ್ಕೆ ತಂದೆಯು ಕೋಪದಿಂದ," ಚಂಡಾಲರ ಕೇರಿಯಲ್ಲಿ ವಾಸಮಾಡು ಹೋಗು!" ಎಂದನು.ಅದರಂತೆ ಸತ್ಯವ್ರತನು ದು:ಖಿತನಾಗಿ ಉಪಾಂಶುವ್ರತ (ಮೌನವ್ರತ) ಧರಿಸಿ ಚಂಡಾಲರೊಂದಿಗೆ ವಾಸಿಸತೊಡಗಿ ಅವರಂತೆಯೇ ಆದನು.ಇದನ್ನು ವಸಿಷ್ಠರು ತಡೆಯಲಿಲ್ಲ.ಆದರೆ ಅವರು ಏಕೆ ತಡೆಯಲಿಲ್ಲವೆಂದರೆ ಅವನು ಮೌನವ್ರತದಿಂದ ಹನ್ನೆರಡು ವರ್ಷಗಳು ಕಳೆದರೆ ಅವನ ಪಾಪ ಪರಿಹಾರವಾಗುತ್ತದೆ ಹಾಗೂ ಅವನ ವಂಶ ಉದ್ಧಾರವಾಗುತ್ತದೆ ಎಂದು ಅವರು ಯೋಚಿಸಿದರು.ಆದರೆ ಇದನ್ನರಿಯದ ಸತ್ಯವ್ರತನು ಅವರನ್ನು ವಿನಾಕಾರಣ ದ್ವೇಷಿಸತೊಡಗಿದನು! ಆಗ ತ್ರಯ್ಯಾರುಣನೂ ವಿರಕ್ತನಾಗಿ ತಪಸ್ಸು ಮಾಡಲು ಕಾಡಿಗೆ ಹೋದನು.ಹೀಗಿರಲು ಸತ್ಯವ್ರತನು ಒಮ್ಮೆ ವಿಶ್ವಾಮಿತ್ರರ ಕುಟುಂಬವನ್ನು ಭೇಟಿಯಾದನು.ವಿಶ್ವಾಮಿತ್ರರು ಸಮುದ್ರದ ತೀರದಲ್ಲಿ ತಪಸ್ಸು ಮಾಡಲು ಹೋದಾಗ ತಮ್ಮ ಹೆಂಡತಿ, ಮಕ್ಕಳನ್ನು ಅವನ ರಾಜ್ಯದಲ್ಲೇ ಇರಿಸಿದ್ದರು.ಕಡುಬಡತನದಲ್ಲಿದ್ದ ಅವರ ಹೆಂಡತಿ ತನ್ನ ಒಬ್ಬ ಮಗನನ್ನು ಮಾರಿ ಜೀವನ ಮಾಡಲು ಅವನ ಕುತ್ತಿಗೆಗೆ ಹಗ್ಗ ಕಟ್ಟಿ ಪೇಟೆಗೆ ಕರೆತಂದಿದ್ದಳು.ಆಗ ಇದನ್ನು ಕಂಡ ಸತ್ಯವ್ರತನು ಅವನನ್ನು ಮಾರಾಟದಿಂದ ಬಿಡಿಸಿ ವಿಶ್ವಾಮಿತ್ರರ ಒಲುಮೆ ಗಳಿಸಲು ಅವರ ಪೋಷಣೆಯನ್ನು ತಾನು ವಹಿಸಿಕೊಂಡನು.ಹೀಗೆ ಕುತ್ತಿಗೆಗೆ (ಗಲ) ಹಗ್ಗ ಬಿದ್ದ ಕಾರಣಕ್ಕೆ ಅವನಿಗೆ ಗಾಲವ ಎಂದು ಹೆಸರಾಯಿತು.ಅನಂತರ, ಸತ್ಯವ್ರತನು ದಿನವೂ ಜಿಂಕೆ, ಕಾಡೆಮ್ಮೆ,ಕಾಡು ಹಂದಿ, ಮೊದಲಾದ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ವಿಶ್ವಾಮಿತ್ರರ ಆಶ್ರಮದ ಮುಂದೆ ನೇತುಹಾಕುತ್ತಿದ್ದನು.ಅವನು ಮೌನವ್ರತದಲ್ಲಿದ್ದುದರಿಂದಲೂ ಚಂಡಾಲರೊಂದಿಗಿದ್ದುದರಿಂದಲೂ ವಿಶ್ವಾಮಿತ್ರರ ಹೆಂಡತಿ, ಮಕ್ಕಳಿಗೆ ನೇರವಾಗಿ ಕೊಡದೇ ಹಾಗೂ ಅವರೊಂದಿಗೆ ಮಾತನಾಡದೇ ಹೀಗೆ ಮಾಡುತ್ತಿದ್ದನು.ಅವರು ಆ ಮಾಂಸಗಳನ್ನು ತೆಗೆದುಕೊಂಡು ಸೇವಿಸುತ್ತಿದ್ದರು.ಹೀಗಿರಲು, ಒಮ್ಮೆ ಅವನಿಗೆ ಯಾವ ಪ್ರಾಣಿಯೂ ಕಾಣದಿರಲು, ವಸಿಷ್ಠರ ಕಾಮಧೇನುವನ್ನು ಕಂಡು ಅದನ್ನೇ ಕೊಂದುಬಿಟ್ಟನು! ಅನಂತರ ಅದರ ಮಾಂಸವನ್ನು ಸಂಸ್ಕರಿಸದೆಯೇ ತಾನೂ ತಿಂದು ವಿಶ್ವಾಮಿತ್ರರ ಮಕ್ಕಳಿಗೂ ತಿನ್ನಿಸಿದನು.ಇದನ್ನು ತಿಳಿದ ವಸಿಷ್ಠರು ಅತ್ಯಂತ ಕುಪಿತರಾದರು! ಅವರು ಅವನಿಗೆ," ಇದೊಂದು ತಪ್ಪು ಮಾಡದಿದ್ದರೆ ನಿನ್ನ ಉಪಾಂಶುವ್ರತದಿಂದ ನಿನ್ನ ಪಾಪ ಪರಿಹಾರವಾಗುತ್ತಿತ್ತು! ಆದರೆ ನೀನು ದೊಡ್ಡ ತಪ್ಪನ್ನೇ ಮಾಡಿದೆ! ತಂದೆಗೆ ಸದಾಚಾರದಿಂದ ಸಂತೋಷವುಂಟುಮಾಡದಿರುವುದು, ಗುರುವಿನ ಕಾಮಧೇನುವನ್ನು ಕೊಂದುದು, ಹಾಗೂ ಅದರ ಮಾಂಸವನ್ನು ಮಂತ್ರಗಳಿಂದ ಸಂಸ್ಕರಿಸದೆಯೇ ತಿಂದುದು, ಈ ಮೂರು ಪಾಪಗಳಿಂದ ( ಶಂಕುಗಳಿಂದ) ನೀನು ಇನ್ನು ಮುಂದೆ ತ್ರಿಶಂಕು ಎಂದು ಕುಖ್ಯಾತನಾಗುವೆ!" ಎಂದರು.
   ಹೀಗೆ ಸತ್ಯವ್ರತನಿಗೆ ತ್ರಿಶಂಕು ಎಂಬ ಹೆಸರೇ ಉಳಿದುಕೊಂಡು ಅವನು ಮಾಡಿದ ತಪ್ಪುಗಳನ್ನು ಸದಾ ಹೇಳುವಂತಾಯಿತು! ಹನ್ನೆರಡು ವರ್ಷಗಳ ನಂತರ ವಿಶ್ವಾಮಿತ್ರರು ತಪಸ್ಸಿನಿಂದ ಹಿಂದಿರುಗಿ ತಮ್ಮ ಕುಟುಂಬವನ್ನು ಪೋಷಿಸಿದ ಕಾರಣಕ್ಕೆ ತ್ರಿಶಂಕುವಿನಲ್ಲಿ ಸಂತುಷ್ಟರಾಗಿ ಅವನನ್ನು ಸಿಂಹಾಸನಕ್ಕೇರಿಸಿದರು.ಆ ಹೊತ್ತಿಗೆ ತ್ರಯ್ಯಾರುಣನೂ ತಪಸ್ಸಿಗೆ ಹೊರಟುಹೋಗಿದ್ದನು.ವಿಶ್ವಾಮಿತ್ರರು ತಮ್ಮ ತಪೋಬಲದಿಂದ ಆಗ ಹನ್ನೆರಡು ವರ್ಷಗಳ ಅನಾವೃಷ್ಟಿಯನ್ನೂ ನಿವಾರಿಸಿ ಮಳೆಬರಿಸಿದರು. ತ್ರಿಶಂಕುವಿಗೆ ಏನಾದರೂ ವಾರ ಕೇಳುವಂತೆ ಹೇಳಿದಾಗ ಅವನು ತಾನು ಸಶರೀರನಾಗಿ ಸ್ವರ್ಗಕ್ಕೆ ಹೋಗಬೇಕೆಂದು ಕೇಳಿಕೊಂಡನು.ಆಗ ವಿಶ್ವಾಮಿತ್ರರು ಯಜ್ಞವನ್ನು ಮಾಡಿ ಅವನನ್ನು ಸಶರೀರವಾಗಿ ಸ್ವರ್ಗಕ್ಕೆ ಕಳಿಸಿದರು.
      ಹೀಗೆ ರಾಮಾಯಣ ಮತ್ತು ಹರಿವಂಶಾದಿ ಪುರಾಣಗಳಲ್ಲಿ ತ್ರಿಶಂಕುವಿನ ಕಥೆ ಭಿನ್ನವಾಗಿದೆ.ರಾಮಾಯಣದಲ್ಲಿ ವಸಿಷ್ಠಪುತ್ರರ ಶಾಪದಿಂದ ತ್ರಿಶಂಕು ಚಂಡಾಲನಾದರೆ, ಪುರಾಣಗಳಲ್ಲಿ ಅವನು ತಂದೆಯ ಆಜ್ಞೆಯಂತೆ ಚಂಡಾಲರ ಕೇರಿಯಲ್ಲಿರುತ್ತಾ ಅವರಂತಾದನು ಅಷ್ಟೇ! ರಾಮಾಯಣದಲ್ಲಿ ಅವನು ತಲೆಕೆಳಗಾಗಿ ವಿಶ್ವಾಮಿತ್ರರ ಸೃಷ್ಟಿಯ ಬೇರೊಂದು ಸ್ವರ್ಗದಲ್ಲಿರುವ ಹಾಗೆ ಪುರಾಣಗಳಲ್ಲಿ ಇಲ್ಲದೇ ಸಶರೀರವಾಗಿ ಸ್ವರ್ಗಕ್ಕೆ ಹೋದನೆಂದಷ್ಟೇ ಇದೆ.ಹೀಗೆ ಪೌರಾಣಿಕ ಕಥೆಗಳು ವಿಭಿನ್ನವಾಗಿ ಬರುವುದು ಒಂದು ರೀತಿಯ ಸ್ವಾರಸ್ಯವಾಗಿರುತ್ತದೆ.ಪುರಾಣಗಳಲ್ಲಿಯೇ ಇದಕ್ಕೆ ಕಾರಣ ಹೇಳುವುದು, ಇವು ವಿವಿಧ ಕಲ್ಪಗಳಲ್ಲಿ ನಡೆದುದರಿಂದ ವಿಭಿನ್ನವಾಗಿವೆ ಎಂದು.
    ಅನೇಕರಿಗೆ ಗೊತ್ತಿರದ ಇನ್ನೊಂದು ಸ್ವಾರಸ್ಯವೆಂದರೆ, ಸತ್ಯವನ್ನೇ ಹೇಳುವವನೆಂದು ಖ್ಯಾತನಾದ ಹರಿಶ್ಚಂದ್ರ, ಈ ತ್ರಿಶಂಕುವಿನ ಮಗ!