ರಾಮಾಯಣ, ಮಹಾಭಾರತಗಳು ನಮ್ಮ ದೇಶದ ಅತ್ಯಂತ ಅಮೂಲ್ಯ ಕಾವ್ಯಗಳು.ಅವು ಇತಿಹಾಸಗಳೆಂದೂ ಪ್ರಸಿದ್ಧವಾಗಿವೆ.ಅವು ರಚಿತವಾಗಿ ಸಾವಿರಾರು ವರ್ಷಗಳೇ ಕಳೆದಿದ್ದರೂ ಜನರಲ್ಲಿ ಇನ್ನೂ ಅವುಗಳ ಬಗ್ಗೆ ಆಸಕ್ತಿ ಅಚ್ಚಳಿಯದೇ ಉಳಿದಿದೆ.ಸ್ವಾರಸ್ಯವೆಂದರೆ ಯಾರೇ ಆದರೂ ಇವನ್ನು ಓದದೆಯೂ ಸಂಕ್ಷಿಪ್ತವಾಗಿ ತಿಳಿದಿರುತ್ತಾರೆ.ಆದರೆ ಇವನ್ನು ಆಮೂಲಾಗ್ರವಾಗಿ ಓದಲು ತೊಡಗಿದರೆ, ಅನೇಕ ಸ್ವಾರಸ್ಯಗಳ ದೊಡ್ಡ ಗಣಿಗಳೇ ದೊರೆತಂತಾಗುತ್ತದೆ! ಅಲ್ಲದೇ, ಈ ಮಹಾಕಾವ್ಯಗಳ ಮೂಲಕಥೆಗಳು ಸ್ಥೂಲವಾಗಿ ತಿಳಿದಿದ್ದರೂ ಅವುಗಳನ್ನು ಓದುವಾಗ ನಡುನಡುವೆಯೇ ಅನೇಕ ಒಳಕಥೆಗಳೂ ಉಪಕಥೆಗಳೂ ದೊರೆಯುತ್ತಾ ನಮ್ಮನ್ನು ರಂಜಿಸುತ್ತಾ ಬೆರಗುಗೊಳಿಸುತ್ತವೆ! ಇವುಗಳೊಂದಿಗೆ ಇವುಗಳಿಗೆ ಸಂಬಂಧಿಸಿದ ಇತರ ಸ್ವಾರಸ್ಯಕರ ಕಥೆಗಳು ಇವುಗಳ ಪಾಠಾಂತರಗಳಲ್ಲೂ ಪುರಾಣಗಳಲ್ಲೂ ದೊರೆಯುತ್ತವೆ!
ಈ ಲೇಖನದಲ್ಲಿ, ರಾಮಕಥೆಯಲ್ಲಿ ಬರುವ ಕೆಲವು ಪೌರಾಣಿಕ ಸ್ವಾರಸ್ಯಗಳನ್ನು ನೋಡೋಣ.ಮೊದಲಿಗೆ ಕೆಲವು ಹೆಸರುಗಳ ಹಿಂದಿನ ಕಥೆಗಳನ್ನು ನೋಡೋಣ.ಶ್ರೀರಾಮನಿಗೆ ರಾಘವ, ರಘುಕುಲತಿಲಕ, ರಘುಕುಲೋತ್ತಮ, ಮೊದಲಾದ ಹೆಸರುಗಳಿದ್ದು, ಅವು ಅವನು ರಘು ಮಹಾರಾಜನ ವಂಶದವನೆಂದು ತೋರಿಸುತ್ತವೆ.ಅಂತೆಯೇ, ಅವನು ದಶರಥನ ಮಗನಾದ್ದರಿಂದ ಅವನಿಗೆ ದಾಶರಥಿ ಎಂಬ ಹೆಸರಿದೆ.ಸೀತೆಯ ಪತಿಯಾದ್ದರಿಂದ ಸೀತಾಪತಿಯೆಂಬ ಹೆಸರಿದೆ.ಅಂತೆಯೇ ರಾಮನಿಗೆ ಕಾಕುತ್ಸ್ಥ ಎಂಬ ಹೆಸರಿದೆ.ಇದರ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ.ರಾಮನು ಸೂರ್ಯಪುತ್ರ ವೈವಸ್ವತ ಮನುವಿನ ಮಗ ಇಕ್ಷ್ವಾಕು ವಂಶದವನು.ಇಕ್ಷ್ವಾಕುವಿಗೆ ವಿಕುಕ್ಷಿ ಎಂಬ ಮಗನಿದ್ದು, ಅವನಿಗೆ ಪುರಂಜಯ ಎಂಬ ಮಗನಿದ್ದನು.ಇವನು ಮಹಾವೀರನಾಗಿದ್ದು, ಒಮ್ಮೆ, ದೇವಾಸುರಯುದ್ಧವಾದಾಗ ದೇವತೆಗಳು ಇವನ ಸಹಾಯ ಯಾಚಿಸಿದರು.ಅದಕ್ಕೆ ಪುರಂಜಯನು ಇಂದ್ರನು ತನಗೆ ವಾಹನವಾಗುವುದಾದರೆ ತಾನು ಯುದ್ಧ ಮಾಡುವೆನೆಂದನು.ಇದಕ್ಕೆ ಒಪ್ಪಿದ ಇಂದ್ರನು ಒಂದು ಎತ್ತಿನ ರೂಪ ಧರಿಸಿ ಅವನಿಗೆ ವಾಹನನಾದನು.ಪುರಂಜಯನು ಎತ್ತಿನ ಹಿಳಲಿನ ಮೇಲೆ ಕುಳಿತು ಯುದ್ಧ ಮಾಡಿ ದೇವತೆಗಳಿಗೆ ಗೆಲುವು ತಂದುಕೊಟ್ಟನು.ಎತ್ತಿನ ಹಿಳಲಿಗೆ ಸಂಸ್ಕೃತದಲ್ಲಿ ಕಕುತ್ ಎನ್ನುತ್ತಾರೆ.ಅದರ ಮೇಲೆ ಕುಳಿತಿದ್ದರಿಂದ ಅವನಿಗೆ ಕಕುತ್ಸ್ಥ ಎಂಬ ಹೆಸರು ಬಂದಿತು.ಅವನ ವಂಶದಲ್ಲಿ ಹುಟ್ಟಿದ್ದರಿಂದ ರಾಮನಿಗೆ ಕಾಕುತ್ಸ್ಥ ಎಂಬ ಹೆಸರು ಬಂದಿತು.
ಈಗ ಸೀತೆಯ ಹೆಸರುಗಳ ಸ್ವಾರಸ್ಯಗಳನ್ನು ನೋಡೋಣ.ಜನಕ ಮಹಾರಾಜನು ಒಂದು ಯಜ್ಞ ಮಾಡಲು ನೆಲವನ್ನು ನೇಗಿಲಿನಿಂದ ಉಳುತ್ತಿದ್ದಾಗ ಮೂಡಿದ ಗೆರೆ ಅಥವಾ ಹಳ್ಳದಲ್ಲಿ ಸಿಕ್ಕ ಪೆಟ್ಟಿಗೆಯಲ್ಲಿದ್ದ ಮಗುವೇ ಸೀತೆ.ನೇಗಿಲಿನಿಂದ ಮೂಡುವ ಗೆರೆ ಅಥವಾ ಸಣ್ಣ ಹಳ್ಳಕ್ಕೆ ಸೀತಾ ಎನ್ನುತ್ತಾರೆ.ಅದರಲ್ಲಿ ಸಿಕ್ಕಿದ್ದರಿಂದ ಸೀತೆಗೆ ಆ ಹೆಸರು ಇಡಲಾಯಿತು.ಅಂತೆಯೇ ವಿದೇಹ ದೇಶದ ರಾಜಕುಮಾರಿಯಾಗಿ ವೈದೇಹಿ, ಮಿಥಿಲಾ ನಗರಿಯ ರಾಜಕುಮಾರಿಯಾಗಿ ಮೈಥಿಲಿ, ಹಾಗೂ ಜನಕನ ಮಗಳಾದ್ದರಿಂದ ಜಾನಕಿ ಎಂಬ ಹೆಸರುಗಳೂ ಬಂದವು.
ಹನುಮಂತನ ಹೆಸರಿನ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ.ಹನುಮಂತನು ವಾಯುವಿನ ಅಂಶದಿಂದ ಕೇಸರಿ ಎಂಬ ವಾನರನ ಪತ್ನಿ ಅಂಜನೆಯ ಗರ್ಭದಲ್ಲಿ ಹುಟ್ಟಿ ಆಂಜನೇಯ ಎನಿಸಿದನು.ಹುಟ್ಟಿದ ಕೂಡಲೇ ಆಗಸದಲ್ಲಿ ಉದಯಿಸುತ್ತಿದ್ದ ಕೆಂಪು ಸೂರ್ಯನನ್ನು ನೋಡಿ ಹೆಣ್ಣೆಂದು ಭ್ರಮಿಸಿ ಆಕಾಶಕ್ಕೆ ಜಿಗಿದನು! ಅಂದು ಸೂರ್ಯಗ್ರಹಣವಾಗಿದ್ದರಿಂದ ರಾಹುವೂ ಸೂರ್ಯನನ್ನು ಹಿಡಿಯಲು ಬರಲು, ಆಂಜನೇಯನು ಅವನನ್ನು ಹಿಡಿಯಲು ಹೋದನು! ಆಗ ರಾಹುವು ಇಂದ್ರನ ಬಳಿ ಹೋಗಿ ದೂರಲು, ಇಂದ್ರನು ಬಂದು ಆಂಜನೇಯನ ಮೇಲೆ ವಜ್ರಾಯುಧದಿಂದ ಪ್ರಹರಿಸಿದನು! ಆಂಜನೇಯನು ಕೆಳಗೆ ಬಿದ್ದು ತನ್ನ ಎಡದವಡೆಯನ್ನು ಮುರಿದುಕೊಂಡು ನಿಶ್ಚೇಷ್ಟಿತನಾದನು! ಇದರಿಂದ ವಾಯುವು ಕೋಪಗೊಂಡು ವಿಶ್ವದಿಂದಲೇ ಗಾಳಿಯನ್ನು ಹಿಂತೆಗೆದುಕೊಂಡನು! ಆಗ ಬ್ರಹ್ಮನು ಇಂದ್ರಾದಿ ದೇವತೆಗಳೊಂದಿಗೆ ಬಂದು ಆಂಜನೇಯನನ್ನು ಬದುಕಿಸಿದನು.ಎಲ್ಲಾ ದೇವತೆಗಳೂ ಆಂಜನೇಯನಿಗೆ ಹಲವಾರು ವರಗಳನ್ನು ಕೊಟ್ಟರು.ಆಗ ಇಂದ್ರನು, ಆಂಜನೇಯನ 'ಹನು' ಅಥವಾ ದವಡೆಗೆ ಏಟು ಬಿದ್ದುದರಿಂದ, ಅವನಿಗೆ ಹನುಮಾನ್ ಎಂದು ಹೆಸರಿಟ್ಟನು.ಹೀಗೆ ಆಂಜನೇಯನಿಗೆ ಹನುಮಂತ ಎಂದು ಹೆಸರಾಯಿತು.
ರಾವಣ ಮತ್ತು ಅವನ ಮಗ ಇಂದ್ರಜಿತುವಿನ ಹೆಸರುಗಳ ಹಿಂದೆಯೂ ಸ್ವಾರಸ್ಯಕರ ಕಥೆಗಳಿವೆ.ರಾವಣ, ಹತ್ತು ತಲೆಗಳೊಂದಿಗೆ ಹುಟ್ಟಿದ್ದರಿಂದ ಅವನಿಗೆ ಅವನ ತಂದೆ ತಾಯಿಯರು ದಶಗ್ರೀವ, ಅಥವಾ ದಶಕಂಠ ಎಂದು ಹೆಸರಿಟ್ಟರು.ಒಮ್ಮೆ ರಾವಣನು ಪುಷ್ಪಕ ವಿಮಾನ ಹತ್ತಿ ಸಂಚರಿಸುತ್ತಿದ್ದಾಗ ಕೈಲಾಸ ಪರ್ವತ ಎದುರಾಗಲು, ಪುಷ್ಪಕ ವಿಮಾನ ಅಂದರೆ ಮೇಲೆ ಹಾರಲಿಲ್ಲ.ಆಗ ರಾವಣನು ಆ ಕೈಲಾಸ ಪರ್ವತವನ್ನೇ ಕಿತ್ತೆಸೆದು ಮುಂದೆ ಹೋಗಲು ನಿರ್ಧರಿಸಿ, ಕೈಲಾಸ ಪರ್ವತವನ್ನೇ ಎತ್ತತೊಡಗಿದನು.ಆಗ ಅಂದರೆ ಮೇಲಿದ್ದ ಪಾರ್ವತಿಯೂ ಶಿವಗಣಗಳೂ ಹೆದರಿದರು! ಆಗ ಶಿವನು ತನ್ನ ಪಾದದ ಹೆಬ್ಬೆರಳನ್ನು ಪರ್ವತದ ಮೇಲೆ ಒತ್ತಲು, ಅದು ರಾವಣನ ಇಪ್ಪತ್ತು ಕೈಗಳ ಮೇಲೆ ಬಿದ್ದು ಜಜ್ಜಿಹಾಕಿತು! ಆ ನೋವಿಗೆ ಭಯಂಕರವಾಗಿ ಅರಚಿದ ದಶಗ್ರೀವನು ಅನಂತರ ಸಾಮಗಾನಗಳಿಂದ ಶಿವನನ್ನು ಸ್ತುತಿಸಿದನು.ಪ್ರಸನ್ನನಾದ ಶಿವನು ಪ್ರತ್ಯಕ್ಷನಾಗಿ ಅವನ ಗಾಯಗಳನ್ನು ವಾಸಿಮಾಡಿ ಚಂದ್ರಹಾಸವೆಂಬ ಅಮೋಘ ಖಡ್ಗವನ್ನು ನೀಡುತ್ತಾ ಅವನು ಜೋರಾಗಿ ಅರಚಿದ ಶಬ್ದ ಎಲ್ಲಾ ಪ್ರಾಣಿಗಳೂ ರಾವಿತವಾಗುವಂತೆ ಅಥವಾ ಹೆದರಿ ಕೂಗುವಂತೆ ಮಾಡಿದ್ದರಿಂದ ಅವನಿಗೆ ರಾವಣ ಎಂದು ಹೆಸರಿಸಿದನು.ಅಂದಿನಿಂದ ದಶಕಂಠನು ರಾವಣನೆಂದು ಹೆಸರಾದನು. ರಾವಣನು ಮಗ ಇಂದ್ರಜಿತುವು ಹುಟ್ಟಿದ ಕೂಡಲೇ ಮೇಘದಂತೆ ಗರ್ಜಿಸಿದ್ದರಿಂದ ಅವನಿಗೆ ಮೇಘನಾದ ಎಂದು ಹೆಸರಿಡಲಾಯಿತು.ರಾವಣನು ಇಂದ್ರನೊಂದಿಗೆ ಯುದ್ಧ ಮಾಡಿದಾಗ ದೇವತೆಗಳು ಅವನನ್ನು ಸುತ್ತುವರಿದು ಅವನು ಸೋಲುವುದರಲ್ಲಿದ್ದನು! ಆಗ ಮೇಘನಾದನು ಇಂದ್ರನೊಡನೆ ಹೋರಾಡಿ ಬಂಧಿಸಿ ತಂದೆಯನ್ನು ಬಿಡಿಸಿದನು.ಅನಂತರ, ಬ್ರಹ್ಮನ ಅಪ್ಪಣೆಯಂತೆ ಅವನು ಇಂದ್ರನನ್ನು ಮುಕ್ತಗೊಳಿಸಿದನು.ಹೀಗೆ ಅವನು ಇಂದ್ರನನ್ನು ಜಯಿಸಿದುದರಿಂದ ಅವನಿಗೆ ಇಂದ್ರಜಿತ್ ಎಂದು ಹೆಸರಾಯಿತು!
ಈಗ ರಾಮಾಯಣದ ಕಥೆಯಲ್ಲಿ ನಡೆದ ಘಟನೆಗಳ ಹಿಂದಿನ ಪೌರಾಣಿಕ ಸ್ವಾರಸ್ಯಗಳನ್ನು ನೋಡೋಣ.ರಾಮಪಟ್ಟಾಭಿಷೇಕವಾಗುವಾಗ ಮಂಥರೆ ಎಂಬ ಗೂನು ಬೆನ್ನಿನ ದಾಸಿ ತನ್ನ ಒಡತಿ ಕೈಕೇಯಿಗೆ ದುರ್ಬೋಧೆ ಮಾಡಿ ರಾಮನನ್ನು ಕಾಡಿಗೆ ಕಳಿಸುವಂತೆ ಹಾಗೂ ಅವಳ ಮಗ ಭರತನನ್ನು ಪಟ್ಟಗಟ್ಟಬೇಕೆಂದು ದಶರಥನ ಬಳಿ ಹಳೆಯ ಎರಡು ವರಗಳನ್ನು ಕೇಳುವಂತೆ ಮಾಡಿದಳು.ವಾಲ್ಮೀಕಿ ರಾಮಾಯಣದ ಪ್ರಕಾರ, ಮಂಥರೆ ಇಂಥ ಅಸಮಾಧಾನದ ಸ್ವಭಾವದವಳೇ ಆಗಿರುತ್ತಾಳೆ.ಆದರೆ ಮಹಾಭಾರತದಲ್ಲಿ ಬರುವ ರಾಮೋಪಾಖ್ಯಾನದಲ್ಲಿ ಇದಕ್ಕೆ ಬೇರೆ ಕಾರಣವಿದೆ.ಅದರಂತೆ, ದೇವತೆಗಳು ವಿಷ್ಣುವಿನ ಬಳಿ ಹೋಗಿ ರಾವಣನ ಉಪಟಳದ ಬಗ್ಗೆ ಹೇಳಿ ಅದರಿಂದ ತಮ್ಮನ್ನು ಕಾಪಾಡುವಂತೆ ಬೇಡಿದಾಗ ವಿಷ್ಣುವು ರಾಮಾವತಾರ ಮಾಡಿ ರಾವಣನನ್ನು ವಧಿಸುತ್ತೇನೆಂದು ಹೇಳಿ ಅಭಯ ನೀಡಿದನು.ಆಗ ಬ್ರಹ್ಮನು ದೇವತೆಗಳಿಗೆ ತಮ್ಮ ತಮ್ಮ ಅಂಶಗಳಿಂದ ಕಪಿ, ಕರಡಿಗಳಲ್ಲಿ ಹುಟ್ಟಿ ರಾಮನಿಗೆ ಸಹಾಯಕರಾಗಬೇಕೆಂದು ಆದೇಶಿಸಿದ.ಆಗಲೇ ಅವನು ದುಂದುಭಿ ಎಂಬ ಗಂಧರ್ವ ಕನ್ಯೆಯನ್ನು ಗೂನು ಬೆನ್ನಿನ ದಾಸಿಯಂತೆ ಹುಟ್ಟಿ ರಾಮನ ಪಟ್ಟಾಭಿಷೇಕವನ್ನು ತಡೆಯಬೇಕೆಂದು ಆದೇಶಿಸಿದ.ಹಾಗಾಗಿ ಅವಳು ಮಂಥರೆಯಾಗಿ ಹುಟ್ಟಿ ಹೀಗೆ ಮಾಡಿದಳು.
ರಾವಣನು ಸೀತೆಯನ್ನು ಅಪಹರಿಸಿದರೂ ಏಕೆ ಅವಳನ್ನು ಬಲಾತ್ಕರಿಸಲಿಲ್ಲ ಎಂದು ಅನೇಕ ಜನ ಕೇಳುತ್ತಾರೆ.ಇದನ್ನು ಕಾರಣವಾಗಿ ಕೊಟ್ಟು ರಾವಣನು ಒಳ್ಳೆಯವನೆಂದೂ ಕೆಲವರು ಸಾಧಿಸುತ್ತಾರೆ! ಆದರೆ ಉತ್ತರಕಾಂಡದಲ್ಲಿ ದೀರ್ಘವಾಗಿ ಬರುವ ರಾವಣನ ಕಥೆಯಲ್ಲಿ ರಾವಣನು ಎಂಥ ದುಷ್ಟ ಹಾಗೂ ಸ್ತ್ರೀದೌರ್ಬಲ್ಯವಿದ್ದವನೆಂದು ಹೇಳಲಾಗಿದೆ.ಅವನು ಎಷ್ಟೋ ಸ್ತ್ರೀಯರನ್ನು ಅಪಹರಿಸಿ ಬಲಾತ್ಕರಿಸಿದ್ದ! ಅವನು ಸತ್ತಾಗ ಅವನ ಪತ್ನಿ ಮಂದೋದರಿಯೂ ಈ ವಿಷಯವನ್ನು ಹೇಳಿ ಅಳುತ್ತಾಳೆ. ಒಮ್ಮೆ ರಾವಣನು ದಿಗ್ವಿಜಯಕ್ಕೆ ಹೋಗಿದ್ದಾಗ, ರಂಭೆ ಎಂಬ ಅಪ್ಸರೆ ಚೆನ್ನಾಗಿ ಅಲಂಕರಿಸಿಕೊಂಡು ತನ್ನ ಪ್ರಿಯತಮನಾದ ನಳಕೂಬರನ ಬಳಿ ಹೋಗುತ್ತಿದ್ದಳು.ಆಗ ರಾವಣನು ಅವಳನ್ನು ತಡೆದು ತನ್ನನ್ನು ತೃಪ್ತಿಪಡಿಸಲು ಹೇಳಿದನು.ಅವಳು ತನ್ನ ವಿಷಯ ಹೇಳಿದರೂ ಅವನು ಕೇಳದೇ ಅವಳನ್ನು ಬಲಾತ್ಕರಿಸಿದನು! ಅವಳು ಅಳುತ್ತಾ ಹೋಗಿ ಕುಬೇರನ ಮಗನಾದ ನಳಕೂಬರನ ಬಳಿ ಈ ವಿಷಯವನ್ನು ಹೇಳಿದಾಗ, ನಳಕೂಬರನು ಕೋಪದಿಂದ ರಾವಣನಿಗೆ ಅವನು ತನ್ನನ್ನು ಒಪ್ಪದ ಸ್ತ್ರೀಯನ್ನು ಬಲಾತ್ಕರಿಸಿದರೆ ಕೂಡಲೇ ಸಾಯಲಿ ಎಂದು ಶಪಿಸಿದನು! ಈ ಕಾರಣದಿಂದ ರಾವಣನು ಸೀತೆಯನ್ನು ಬಲಾತ್ಕರಿಸಲಿಲ್ಲ.
ರಾಮನು ವಾಲಿಯನ್ನು ಮರದ ಹಿಂದೆ ನಿಂತು ಏಕೆ ಕೊಂದನು ಎಂದು ಅನೇಕರು ಕೇಳುತ್ತಾರೆ.ಇದನ್ನು ವಾಲ್ಮೀಕಿ ರಾಮಾಯಣದಲ್ಲಿ ಸ್ವಯಂ ವಾಲಿಯೇ ಕೇಳುತ್ತಾನೆ.ರಾಮನೂ ಇದಕ್ಕೆ ಉತ್ತರ ಕೊಟ್ಟಿದ್ದಾನೆ.ವಾಲಿಯು ಒಬ್ಬ ವಾನರನಾದ್ದರಿಂದ ಹಾಗೂ ಪ್ರಾಣಿವರ್ಗಕ್ಕೆ ಸೇರಿದ್ದರಿಂದ ಅವನನ್ನು ಹೇಗೆ ಬೇಕಾದರೂ ಬೇಟೆಯಾಡಬಹುದು ಎನ್ನುತ್ತಾನೆ ರಾಮ.ಎದುರು ನಿಂತು ಹೋರಾಡಿದಾಗ ಯಾರ ಕೈ ಮೇಲಾಗುತ್ತಿತ್ತೆಂದು ಹೇಳಲಾಗುತ್ತಿರಲಿಲ್ಲ. ವಾಲಿಯು ವಿಚಾರಿಸದೇ ಅವನ ತಮ್ಮ ಸುಗ್ರೀವನನ್ನು ರಾಜ್ಯದಿಂದ ಓಡಿಸಿದ್ದು ಹಾಗೂ ಅವನ ಹೆಂಡತಿ ರುಮೆಯನ್ನು ಬಲವಾಗಿ ಉಪಭೋಗಿಸಿದ್ದು ಅವನು ಮಾಡಿದ ಅಕ್ಷಮ್ಯ ಅಪರಾಧಗಳಾಗಿದ್ದು ಅವನನ್ನು ಕೊಲ್ಲಲೇಬೇಕಾಗಿತ್ತು! ಕಿಷ್ಕಿಂಧೆಯು ರಾಮನಿಗೆ ಸಂಬಂಧಿಸದ ಪ್ರದೇಶವೆಂದು ವಾಲಿಯು ಹೇಳಿದ್ದಕ್ಕೆ ರಾಮನು ತಾನು ಇಕ್ಷ್ವಾಕು ಸಾರ್ವಭೌಮನಾದ ಭರತನ ಪ್ರತಿನಿಧಿಯಾಗಿ ಯಾವ ಕ್ಷೇತ್ರದಲ್ಲಾದರೂ ನ್ಯಾಯ ಉಳಿಸಲು ಮಧ್ಯೆ ಪ್ರವೇಶಿಸಬಹುದೆಂದು ವಾದಿಸುತ್ತಾನೆ.ತತ್ತ್ವಸಂಗ್ರಹ ರಾಮಾಯಣ ಎಂಬ ರಾಮಾಯಣದಲ್ಲಿ ಇದಕ್ಕೆ ಇನ್ನೊಂದು ಸ್ವಾರಸ್ಯಕರ ಕಾರಣವಿದೆ.ಅದರಂತೆ, ವಾಲಿಯ ತಂದೆ ಇಂದ್ರನು ಅವನಿಗೆ ಒಂದು ವಿಶೇಷ ಹಾರವನ್ನು ಕೊಟ್ಟಿದ್ದನು.ವಾಲಿಯು ಅದನ್ನು ಧರಿಸಿ ಯುದ್ಧ ಮಾಡಿದಾಗ ಎದುರಾಳಿಯ ಅರ್ಧ ಶಕ್ತಿ ಇವನಿಗೆ ಬಂದುಬಿಡುತ್ತಿತ್ತು! ಆದ್ದರಿಂದಲೇ ರಾಮನು ಎದುರಿಗೆ ನಿಂತು ಹೋರಾಡದೇ ಮರದ ಹಿಂದೆ ನಿಂತು ವಾಲಿಯನ್ನು ಕೊಂದನು.
ಶ್ರೀ ರಾಮನು ರಾವಣನನ್ನು ಕೊಂದ ಬಳಿಕ, ಸೀತೆಯ ಚಾರಿತ್ರ್ಯವನ್ನು ಸಂಶಯಿಸಿ ಅವಳು ಇಚ್ಛೆ ಬಂದಲ್ಲಿಗೆ ಹೋಗಬಹುದೆಂದು ಕಟುವಾಗಿ ಹೇಳುತ್ತಾನೆ.ಆಗ ಸೀತೆಯು ತನ್ನ ಪಾತಿವ್ರತ್ಯವನ್ನು ನಿರೂಪಿಸಲು ಅಗ್ನಿ ಪ್ರವೇಶ ಮಾಡುತ್ತಾಳೆ.ಆಗ ಅಗ್ನಿಯು ಅವಳನ್ನು ಸುಡದೇ ಅವಳು ಪವಿತ್ರಳೆಂದು ಹೇಳುತ್ತಾ ರಾಮನಿಗೆ ಹಿಂದಿರುಗಿಸುತ್ತಾನೆ.ಆಗ ಬ್ರಹ್ಮಾದಿ ದೇವತೆಗಳು ಸ್ವಯಂ ದಶರಥನೊಂದಿಗೆ ಪ್ರತ್ಯಕ್ಷವಾಗಿ ಸೀತೆಯು ಪವಿತ್ರಳೆಕದು ಸಾರುತ್ತಾರೆ! ಆಗ ರಾಮನೂ ತನಗಿದು ಗೊತ್ತಿತ್ತೆಂದೂ ಲೋಕಾಪವಾದ ಬರದಿರಲೆಂದು ಹೀಗೆ ಮಾಡಿದೆನೆಂದೂ ಹೇಳುತ್ತಾನೆ.ಈ ಘಟನೆಗೆ ಸ್ಕಂದ ಪುರಾಣದಲ್ಲಿ ಬೇರೊಂದು ಸ್ವಾರಸ್ಯಕರ ಕಾರಣವಿದೆ.ಅದರಂತೆ, ಕುಶಧ್ವಜನೆಂಬ ರಾಜನಿಗೆ ಲಕ್ಷ್ಮಯ ಅಂಶದಿಂದ ಹುಟ್ಟಿದ ವೇದವತಿಯೆಂಬ ಮಗಳಿದ್ದು, ಅವಳು ವಿಷ್ಣುವನ್ನೇ ಮದುವೆಯಾಗಬೇಕೆಂದು ತಪಸ್ಸು ಮಾಡುತ್ತಿದ್ದಳು.ಆಗ ಒಮ್ಮೆ ರಾವಣನು ಅವಳ ಬಳಿ ಬಂದು ತನ್ನನ್ನು ಮದುವೆಯಾಗಲು ಒತ್ತಾಯಿಸಿದನು.ಅವಳು ಒಪ್ಪದಿರಲು, ಅವನು ಅವಳ ಕೇಶವನ್ನು ಹಿಡಿದೆಳೆದನು! ಆಗ ವೇದವತಿಯು ತಪಸ್ಸಿನ ಬಲದಿಂದ ಕತ್ತಿಯಂತಾಗಿದ್ದ ತನ್ನ ಕೈಯಿಂದ ತನ್ನ ಕೇಶವನ್ನು ಕತ್ತರಿಸಿ ರಾವಣನ ವಧೆಗೆ ತಾನೇ ಬರುತ್ತೇನೆಂದು ಅವನಿಗೆ ಶಾಪ ಕೊಡುತ್ತಾ ಅಗ್ನಿ ಪ್ರವೇಶ ಮಾಡಿದಳು! ಆದರೆ ಅಗ್ನಿ ಅವಳನ್ನು ಸುಡದೇ ರಕ್ಷಿಸಿ, ರಾವಣನು ಸೀತೆಯನ್ನು ಅಪಹರಿಸುತ್ತಿದ್ದಾಗ ಕಾಣಿಸಿಕೊಂಡು, ತನ್ನ ಬಳಿಯಿದ್ದ ವೇದವತಿಯನ್ನು ತೋರಿಸುತ್ತಾ ಅವಳೇ ನಿಜವಾದ ಸೀತೆಯೆಂದೂ ಅವನ ಬಳಿಯಿದ್ದದ್ದು ಮಾಯಾಸೀತೆಯೆಂದೂ ಹೇಳಿದನು.ಇದನ್ನು ನಂಬಿ, ರಾವಣನು ಸೀತೆಯನ್ನು ಅಗ್ನಿಗೆ ಒಪ್ಪಿಸಿ ವೇದವತಿಯನ್ನು ಪಡೆದುಕೊಂಡನು.ಅವಳನ್ನೇ ಲಂಕೆಯಲ್ಲಿಟ್ಟನು.ಅವಳ ಶಾಪದಂತೆ ಅವಳೇ ರಾವಣನ ವಧೆಗೆ ಕಾರಣಳಾದಳು.ಅವಳು ಅಗ್ನಿ ಪ್ರವೇಶ ಮಾಡಿದಾಗ, ಅಗ್ನಿಯು ಇಬ್ಬರು ಸೀತೆಯರೊಂದಿಗೆ ಬಂದು, ನಿಜವಾದ ಸೀತೆಯನ್ನು ರಾಮನಿಗೆ ಒಪ್ಪಿಸುತ್ತಾ ವೇದವತಿಯ ವಿಚಾರ ಹೇಳಿದನು.ಆಗ ಸೀತೆಯು ವೇದವತಿಯ ಕೋರಿಕೆಯನ್ನು ಹೇಳಲು, ರಾಮನು ತಾನು ಏಕಪತ್ನೀವ್ರತಸ್ಥನಾದುದರಿಂದ ಮುಂದಿನ ಇಪ್ಪತ್ತೆಂಟನೆಯ ಕಲಿಯುಗದಲ್ಲಿ ಅವಳನ್ನು ಮದುವೆಯಾಗುವೆನೆಂದು ವಚನವಿತ್ತನು.ಅಂತೆಯೇ ಆಗ ವೇದವತಿಯು ಪದ್ಮಾವತಿಯಾಗಿ ಜನಿಸಲು ವಿಷ್ಣುವು ಶ್ರೀನಿವಾಸನಾಗಿ ಅವಳನ್ನು ವರಿಸಿದನು.ಇದು ಎಲ್ಲರಿಗೂ ಗೊತ್ತಿರುವಂತೆ ತಿರುಪತಿಯ ಸ್ಥಳಪುರಾಣವಾದ ಶ್ರೀನಿವಾಸಕಲ್ಯಾಣದ ಕಥೆ.
ಈಗ ಶ್ರೀ ರಾಮನು ಸೀತಾಪರಿತ್ಯಾಗವನ್ನೇಕೆ ಮಾಡಿದನೆಂದು ನೋಡೋಣ.ಸಾಮಾನ್ಯವಾಗಿ ಅನೇಕರು ಭಾವಿಸಿರುವಂತೆ, ಒಬ್ಬ ಅಗಸನು ತನ್ನ ಹೆಂಡತಿಯ ನಡತೆಯ ಬಗ್ಗೆ ನಿಂದಿಸಿದುದನ್ನು ಕೇಳಿ ರಾಮನು ಹಾಗೆ ಮಾಡಲಿಲ್ಲ.ಮೂಲ ವಾಲ್ಮೀಕಿ ರಾಮಾಯಣದಲ್ಲಿ ಇರುವಂತೆ, ಅಯೋಧ್ಯಾ ನಗರಿಯಲ್ಲಿ ಎಲ್ಲೆಲ್ಲೂ ರಾಮನು ಸೀತೆಯನ್ನು ಹಿಂದಕ್ಕೆ ಕರೆತಂದುದು ಸರಿಯಿರಲಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.ಅವನು ರಾವಣನನ್ನು ಕೊಂದು ತನ್ನ ಪೌರುಷ ತೋರಿಸಿದ್ದೇನೋ ಸರಿ, ಆದರೆ ಪ್ರದೇಶದಲ್ಲಿ ಬಹಳ ಕಾಲ ಇದ್ದ ಸೀತೆಯನ್ನು ಪುನಃ ಕರೆತಂದುದು ಸರಿಯಲ್ಲ ಎಂದು ಬೀದಿ ಬೀದಿಗಳಲ್ಲಿ, ಉದ್ಯಾನವನಗಳಲ್ಲಿ, ಮೊದಲಾದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರೆಂದು ಭದ್ರನೆಂಬ ಗೂಢಚಾರಿ ರಾಮನಿಗೆ ಹೇಳುತ್ತಾನೆ.ಇದನ್ನು ಕೇಳಿ ರಾಮನು, ಹೀಗಾಗಬಹುದೆಂದೇ ತಾನು ಲಂಕೆಯಲ್ಲೇ ಇದನ್ನು ಪರಿಹರಿಸಿದ್ದೆನಾದರೂ ಈ ಅಪವಾದ ಬಂತೆಂದು ಸೋದರರ ಬಳಿ ದುಃಖಿಸುತ್ತಾ ಕೂಡಲೇ ಲಕ್ಷ್ಮಣನಿಗೆ ಸೀತೆಯನ್ನು ವಾಲ್ಮೀಕಿ ಋಷಿಗಳ ಆಶ್ರಮದ ಬಳಿ ಬಿಟ್ಟು ಬರಲು ಆಜ್ಞಾಪಿಸುತ್ತಾನೆ.ಹೀಗೆ ಅವನು ಸೀತಾಪರಿತ್ಯಾಗ ಮಾಡುತ್ತಾನೆ.ಅಲ್ಲದೇ ಗರ್ಭಿಣಿಯಾಗಿದ್ದ ಸೀತೆಯೂ ತಾನು ಋಷ್ಯಾಶ್ರಮದಲ್ಲಿ ಕಾಲ ಕಳೆಯಬೇಕೆಂದು ರಾಮನನ್ನು ಕೇಳಿಕೊಂಡಿರುತ್ತಾಳೆ.ಇದನ್ನು ಯೋಚಿಸಿಯೇ ರಾಮನು ಅವಳನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಬಿಡಲು ಹೇಳುತ್ತಾನೆ.ರಾಮಾಯಣದ ಉತ್ತರಕಾಂಡದಲ್ಲಿ ಇದಕ್ಕೆ ಒಂದು ಪೌರಾಣಿಕ ಕಾರಣವನ್ನು ಕೊಡಲಾಗಿದೆ.ಲಕ್ಷ್ಮಣನು ರಾಮನ ಸೀತಾಪರಿತ್ಯಾಗದಿಂದ ದುಃಖಿತನಾಗಿ ಮಂತ್ರಿಯೂ ಸಾರಥಿಯೂ ಆದ ಸುಮಂತ್ರನ ಬಳಿ ಹೇಳಿಕೊಂಡಾಗ, ಸುಮಂತ್ರನು ಇದಕ್ಕೆ ಕಾರಣವಾಗಿ ಹಿಂದೆ ದುರ್ವಾಸ ಮಹರ್ಷಿಗಳು ದಶರಥನಿಗೆ ಹೇಳಿದ್ದ ಒಂದು ರಹಸ್ಯ ವಿಚಾರವನ್ನು ಹೇಳುತ್ತಾನೆ.ಅದರಂತೆ, ಹಿಂದೆ ದೇವಾಸುರರ ಯುದ್ಧವಾದಾಗ, ಆಸುರರು ಭೃಗು ಮಹರ್ಷಿಗಳ ಪತ್ನಿಯ ಮೊರೆಹೊಕ್ಕರು.ಅವಳು ಅವರಿಗೆ ಆಶ್ರಯ ನೀಡಲು, ಕ್ರುದ್ಧನಾದ ಮಹಾವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಅವಳ ಶಿರವನ್ನು ಕತ್ತರಿಸಿಬಿಟ್ಟನು! ಇದರಿಂದ ದುಃಖ,ಕೋಪಗಳಿಗೊಳಗಾದ ಭೃಗು ಮಹರ್ಷಿಗಳು ವಿಷ್ಣುವಿಗೆ,"ನೀನು ಮನುಷ್ಯಲೋಕದಲ್ಲಿ ಜನ್ಮವೆತ್ತು! ದೀರ್ಘ ಕಾಲ ಪತ್ನೀವಿಯೋಗವನ್ನು ಅನುಭವಿಸು!" ಎಂದು ಶಪಿಸಿದರು! ಅನಂತರ ಅವರು ಪಶ್ಚಾತ್ತಾಪಪಟ್ಟು ವಿಷ್ಣುವನ್ನು ಪ್ರಾರ್ಥೀಸಲು, ವಿಷ್ಣುವು ಲೋಕಕಲ್ಯಾಣಕ್ಕಾಗಿ ಈ ಶಾಪವನ್ನು ಅಂಗೀಕರೀಸುವೆನೆಂದನು.ಈ ಕಾರಣದಿಂದ ವಿಷ್ಣುವು ರಾಮನಾಗಿ ಹುಟ್ಟಿ ಸೀತಾಪರಿತ್ಯಾಗದಿಂದ ಪತ್ನೀವಿಯೋಗವನ್ನು ಅನುಭವಿಸಿದನು.ಈ ಕಥೆ ದೇವೀಭಾಗವತ ಪುರಾಣದಲ್ಲೂ ಇದ್ದು, ವಿಷ್ಣುವು ಮತ್ತೆ ಮತ್ತೆ ಅವತಾರಗಳನ್ನೆತ್ತಲು ಈ ಶಾಪವೇ ಕಾರಣವೆಂದು ಅಲ್ಲಿ ಹೇಳಲಾಗಿದೆ.ಸೀತಾಪರಿತ್ಯಾಗಕ್ಕೆ ಇನ್ನೊಂದು ಸ್ವಾರಸ್ಯಕರ ಕಾರಣಕಥೆಯನ್ನು ಪದ್ಮಪುರಾಣ ಹೇಳುತ್ತದೆ.ಅದರಂತೆ, ಒಮ್ಮೆ ಸೀತೆಯ ಉದ್ಯಾನವನದಲ್ಲಿ ಗಿಳಿದಂಪತಿಯೊಂದು ವಾಲ್ಮೀಕಿ ಮಹರ್ಷಿಗಳ ಆಶ್ರಮದಿಂದ ಬಂದಿದ್ದು ರಾಮಾಯಣದ ಕಥೆಯನ್ನು ಹೇಳುತ್ತಿರುತ್ತವೆ.ಸೀತೆಯು ಅವನ್ನು ಹಿಡಿಸಿ, ಮುಂದಿನ ಕಥೆ ಹೇಳಬೇಕೆಂದು ಕೇಳುತ್ತಾಳೆ.ಆದರೆ ಅವು ತಮಗೆ ಮುಂದಿನ ಭಾಗ ಗೊತ್ತಿಲ್ಲವೆಂದೂ ಹೆಣ್ಣು ಗಿಳಿ ಗರ್ಭಿಣಿಯಾಗಿರುವುದರಿಂದ ಬಿಡಬೇಕೆಂದೂ ಬೇಡಿಕೊಳ್ಳುತ್ತವೆ.ಆಗ ಸೀತೆಯು ಹೆಣ್ಣು ಗಿಳಿಯನ್ನು ರಾಮನು ತನ್ನನ್ನು ಮದುವೆಯಾಗಲು ಬರುವವರೆಗೂ ತನ್ನ ಬಳಿಯೇ ಇರಿಸಿಕೊಳ್ಳುವೆನೆಂದು ಗಂಡು ಗಿಳಿಯನ್ನು ಮಾತ್ರ ಬಿಡುತ್ತಾಳೆ.ಇದರಿಂದ ದುಃಖಗೊಂಡ ಹೆಣ್ಣು ಗಿಳಿ ಸೀತೆಗೆ,"ನನಗೆ ಗರ್ಭಿಣಿಯಾಗಿರುವಾಗ ಪತಿವಿಯೋಗವುಂಟುಮಾಡಿದ ಕಾರಣ, ನೀನೂ ಗರ್ಭಿಣಿಯಾಗಿದ್ದಾಗ ಪತಿವಿಯೋಗ ಹೊಂದುವೆ!" ಎಂದು ಶಾಪವಿತ್ತು ಸಾಯುತ್ತದೆ! ಇದರಿಂದ ದುಃಖಗೊಂಡ ಗಂಡು ಗಿಳಿ ತಾನೇ ಸೀತೆಗೆ ಪತಿವಿಯೋಗವುಂಟುಮಾಡುವೆನೆಂದು ಶಪಥಗೈದು ಗಂಗೆಯಲ್ಲಿ ಮುಳುಗಿ ಸತ್ತು, ಅನಂತರ ಅಗಸನಾಗಿ ಹುಟ್ಟಿ ರಾಮನ ವಿಷಯದಲ್ಲಿ ದುರ್ಭಾಷೆಯನ್ನಾಡಿ ಸೀತಾಪರಿತ್ಯಾಗಕ್ಕೆ ಕಾರಣವಾಗುತ್ತದೆ.
ಸಂಸ್ಕೃತದಲ್ಲೇ ಇರುವ, ವಾಲ್ಮೀಕಿ ಮಹರ್ಷಿಗಳ ರಚನೆಗಳೆಂದೇ ಪ್ರತೀತಿ ಇರುವ ಅದ್ಭುತ, ಅಧ್ಯಾತ್ಮ, ಮತ್ತು ಆನಂದರಾಮಾಯಣಗಳೆಂಬ ರಾಮಾಯಣಗಳಲ್ಲಿ ವಾಲ್ಮೀಕಿ ರಾಮಾಯಣಕ್ಕಿಂತ ವಿಭಿನ್ನವಾದ ಹಲವಾರು ಕಥೆಗಳಿವೆ.ಅದ್ಭುತ ರಾಮಾಯಣದಲ್ಲಿ ವಿಷ್ಣುವು ರಾಮಾವತಾರ ಎತ್ತಲು ನಾರದ ಮತ್ತು ಪರ್ವತ ಋಷಿಗಳ ಶಾಪವೇ ಕಾರಣವೆಂದು ಹೇಳಲಾಗಿದೆ.ನಾರದ ಮತ್ತು ಪರ್ವತ ಋಷಿಗಳಿಬ್ಬರೂ ಒಮ್ಮೆ ಅಯೋಧ್ಯೆಯ ರಾಜನಾದ ಅಂಬರೀಷನ ಮಗಳು ಶ್ರೀಮತಿಯನ್ನು ನೋಡಿ ಅವಳನ್ನು ಮದುವೆಯಾಗಬೇಕೆಂದು ಆಸೆಪಟ್ಟರು.ಇಬ್ಬರೂ ಅಂಬರೀಷನನ್ನು ಅವಳನ್ನು ತಮಗೇ ಕೊಟ್ಟು ಮದುವೆ ಮಾಡಲು ಕೇಳಿದಾಗ ಅವನು ಇಬ್ಬರಿಗೂ ಹೇಗೆ ಕೊಡುವುದೆಂದು ಗಾಬರಿಯಾಗಿ ಅವಳು ಅವರಿಬ್ಬರಲ್ಲಿ ಯಾರನ್ನು ಆರಿಸಿಕೊಳ್ಳುವಳೋ ಅವರಿಗೆ ಅವಳನ್ನು ಕೊಡುವೆನೆಂದು ಹೇಳಿದನು.ಅವರಿಬ್ಬರೂ ಮರುದಿನ ಬರುವೆನೆಂದು ಹೇಳಿ ಹೊರಟು, ಪ್ರತ್ಯೇಕ ಪ್ರತ್ಯೇಕವಾಗಿ ವಿಷ್ಣುವಿನ ಬಳಿ ಹೋಗಿ ಇನ್ನೊಬ್ಬರ ಮುಖ ಶ್ರೀಮತಿಗೆ ಮಾತ್ರ ಕಪಿಯಂತೆ ಕಾಣಬೇಕೆಂದು ವಾರ ಪಡೆದರು! ಅಂತೆಯೇ ಮರುದಿನ ಅವರು ಅಂಬರೀಷನ ಅರಮನೆಗೆ ಹೋಗಿ ಕುಳಿತುಕೊಳ್ಳಲು, ವಿಷ್ಣುವೂ ಎರಡು ಕೈಗಳ ಸುಂದರ ಮನುಷ್ಯನಂತೆ, ಶ್ರೀಮತಿಗೆ ಮಾತ್ರ ಕಾಣುವಂತೆ ಅವರ ಮಧ್ಯೆ ಕುಳಿತನು.ಋಷಿಗಳಿಬ್ಬರ ಮುಖಗಳು ಕಪಿಗಳಂತೆ ಕಾಣುತ್ತಾ, ಸುಂದರಾಕಾರನಾದ ಇನ್ನೊಬ್ಬ ಪುರುಷನು ಅಲ್ಲಿರಲು, ಶ್ರೀಮತಿಯು ಅವನಿಗೆ ಮಾಲೆ ಹಾಕಿದಳು! ಇದನ್ನು ತಿಳಿದ ನಾರದ, ಪರ್ವತರಿಬ್ಬರೂ ವಿಷ್ಣುವಿನ ಮೇಲೆ ಕುಪಿತರಾಗಿ ಅವನು ಧರಿಸಿದ್ದ ರೂಪದಲ್ಲೇ ಭೂಮಿಯಲ್ಲಿ ಮನುಷ್ಯನಾಗಿ ಅದೇ ಅಂಬರೀಷನ ಕುಲದಲ್ಲೇ ಹುಟ್ಟಬೇಕೆಂದೂ ಶ್ರೀಮತಿಯು ಭೂಮಿಯ ಮಗಳಾಗಿ ಹುಟ್ಟಿ ಅವನನ್ನು ವಿವಾಹವಾಗುವಳೆಂದೂ ರಾಕ್ಷಸನೊಬ್ಬನು ಅವಳನ್ನು ಅಪಹರಿಸಲು, ತಾವಿಬ್ಬರೂ ಹೇಗೆ ಸ್ತ್ರೀ ವಿರಹ ಅನುಭವಿಸಿಧರೋ ಹಾಗೆಯೇ ಅವನೂ ಅವಳ ವಿರಹವನ್ನು ಅನುಭವಿಸಿ ಗೋಳಾಡುವನೆಂದೂ ಶಾಪವಿತ್ತರು! ವಿಷ್ಣುವು ಅದನ್ನು ಸ್ವೀಕರಿಸಿ ರಾಮಾವತಾರವನ್ನೆತ್ತಿದನು.ಇದೇ ರೀತಿಯ ಕಥೆ ಶಿವಪುರಾಣದಲ್ಲೂ ಬರುತ್ತದೆ.
ಇದೇ ರೀತಿ ಅದ್ಭುತ ರಾಮಾಯಣದಲ್ಲೇ ನಾರದರಿಂದ ಬಂದ ಶಾಪದಿಂದ ಲಕ್ಷ್ಮಿಯು ಸೀತೆಯಾಗಿ ಹುಟ್ಟಿದಳೆಂಬ ಕಥೆಯಿದೆ.ಒಮ್ಮೆ ವಿಷ್ಣುವು ವೈಕುಂಠದಲ್ಲಿ ತನ್ನ ಭಕ್ತನಾದ ಕೌಶಿಕನೆಂಬುವನಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದನು.ಆಗ ತುಂಬುರು ಎಂಬ ಗಂಧರ್ವನ ಸಂಗೀತವಿತ್ತು.ಅಲ್ಲಿ ದೇವತೆಗಳ ದೊಡ್ಡ ಗುಂಪು ನೆರೆಯಲು ಲಕ್ಷ್ಮಿಯ ಸೇವಕಿಯರು ಅವರನ್ನು ಓಡಿಸಿ ದೂರ ಕೂರಿಸಿದರು! ಆಗ ತುಂಬುರುವಿಗೆ ಹೆಚ್ಚಿನ ಗೌರವಾದರಗಳು ದೊರೆಯಲು, ಅದನ್ನು ತಾಳಲಾರದೇ ನಾರದರು ಲಕ್ಷ್ಮಿಗೆ ರಾಕ್ಷಸಿಯೊಬ್ಬಳ ಮಗಳಾಗಿ ಜನಿಸುವಂತೆಯೂ ಅವಳ ಸೇವಕಿಯರು ತನ್ನನ್ನು ದೂರ ತಳ್ಳಿದಂತೆ ಅವಳೂ ತೊರೆಯಲ್ಪಡಲೆಂದೂ ಶಪಿಸಿದರು! ಇದರಿಂದ ಲಕ್ಷ್ಮಿಯು ಸೀತೆಯಾಗಿ ಜನಿಸಿದಳು.ಇಲ್ಲಿಯೇ ಅವಳು ರಾವಣನ ಮಗಳಾಗಿ ಹುಟ್ಟಿದಳೆಂಬ ಸ್ವಾರಸ್ಯಕರ ಕಥೆಯಿದೆ.ಅದರಂತೆ, ಒಮ್ಮೆ ದಿಗ್ವಿಜಯ ಮಾಡುತ್ತಾ ರಾವಣನು ದಂಡಕಾರಣ್ಯಕ್ಕೆ ಬರಲು, ಅಲ್ಲಿ ಅಗ್ನಿಯಂತೆ ದೇದೀಪ್ಯಮಾನರಾಗಿದ್ದ ಋಷಿಗಳನ್ನು ಕಂಡು, ಅವರನ್ನು ಕೊಲ್ಲದೇ ಜಯಿಸಬೇಕೆಂದು ಯೋಚಿಸಿದನು.ಅದಕ್ಕಾಗಿ ಅವನು ಬಾಣದ ತುದಿಯಿಂದ ಅವರ ದೇಹಗಳನ್ನು ಚುಚ್ಚಿ ರಕ್ತವನ್ನು ಸುರಿಸಿ ಒಂದು ಮಡಕೆಯಲ್ಲಿ ಸಂಗ್ರಹಿಸಿದನು! ಆ ಮಡಕೆಯಲ್ಲಿ ಹೆಣ್ಣು ಮಗುವೊಂದನ್ನು ಬಯಸಿದ್ದ ನೂರು ಪುತ್ರರ ತಂದೆಯಾದ ಗೃತ್ಸಮದನೆಂಬ ಋಷಿಯು ಲಕ್ಷ್ಮಯೇ ತನಗೆ ಮಗಳಾಗಿ ಹುಟ್ಟಲೆಂದು ಹೆಂಡತಿಯೊಂದಿಗೆ ಪ್ರಾರ್ಥಿಸಿ, ಕುಶಾಗ್ರದಿಂದ ಸ್ವಲ್ಪ ಹಾಲನ್ನು ಮಂತ್ರಿಸಿಟ್ಟು ಸ್ನಾನಕ್ಕೆ ಹೋಗಿದ್ದನು.ರಾವಣನು ಈ ಮಡಕೆಯನ್ನು ತೆಗೆದುಕೊಂಡು ಹೋಗಿ ತನ್ನ ಪತ್ನಿ ಮಂದೋದರಿಗೆ ಕೊಡುತ್ತಾ ಇದು ಭಯಂಕರ ವಿಷವೆಂದೂ ಜೋಪಾನವಾಗಿಡಬೇಕೆಂದೂ ಹೇಳಿದನು. ಒಮ್ಮೆ ರಾವಣನು ಇಲ್ಲದಿದ್ದಾಗ ಅವನ ದುರಾಚಾರಗಳಿಂದ ಬೇಸತ್ತ ಮಂದೋದರಿಯು ಆತ್ಮಹತ್ಯೆ ಮಾಡಿಕೊಳ್ಳಲೆಂದು ಆ ಮಡಿಕೆಯಲ್ಲಿದ್ದ ಹಾಲು ಸಹಿತವಾದ ರಕ್ತವನ್ನು ಕುಡಿದುಬಿಟ್ಟಳು! ಆದರೆ ಅವಳು ಸಾಯದೇ ಗರ್ಭಿಣಿಯಾದಳು! ಇದರಿಂದ ಗಾಬರಿಗೊಂಡ ಅವಳು ಪುಷ್ಪಕ ವಿಮಾನದಲ್ಲಿ ಕುರುಕ್ಷೇತ್ರಕ್ಕೆ ಹೋಗಿ ತನ್ನ ಗರ್ಭವನ್ನು ವಿಸರ್ಜಿಸಿ ಭೂಮಿಯಲ್ಲಿ ಹೂತುಬಿಟ್ಟಳು! ಮುಂದೆ ಜನಕ ಮಹಾರಾಜನು ಯಜ್ಞಕ್ಕಾಗಿ ಅಲ್ಲಿ ನೆಲ ಉಳುತ್ತಿದ್ದಾಗ ಮಗುವಾಗಿದ್ದ ಆ ಗರ್ಭವು ಸಿಕ್ಕಿತು.ಆ ಮಗುವಿಗೆ ಸೀತೆಯೆಂದು ಹೆಸರಿಟ್ಟು ಸಾಕಿ ಬೆಳೆಸಿದನು.ಹೀಗೆ ಲಕ್ಷ್ಮಿಯ ಅವತಾರವಾದ ಸೀತೆಯು ರಾವಣನ ಮಗಳಾದಳು.ಅದ್ಭುತ ರಾಮಾಯಣದ ಪ್ರಕಾರ ರಾವಣನು ಯಾವಾಗ ತನ್ನ ಮಗಳನ್ನೇ ಕಾಮಿಸುವನೋ ಆಗ ತನಗೆ ಸಾವು ಬರಲೆಂದು ಬ್ರಹ್ಮನ ಬಳಿ ವರ ಪಡೆದಿದ್ದನು.ಹಾಗಾಗಿ ಅವನು ಸೀತೆಯನ್ನು ಕಾಮಿಸಿದಾಗ ಸತ್ತನು.
ಆನಂದರಾಮಾಯಣದಲ್ಲಿ ಕೂಡ ಸೀತೆಯು ರಾವಣನ ಮಗಳೆಂಬಂತೆ ಚಿತ್ರಿತವಾಗಿದೆ.ಪದ್ಮಾಕ್ಷನೆಂಬ ರಾಜನಿಗೆ ವಿಷ್ಣುವಿನ ಕೃಪೆಯಿಂದ ಲಕ್ಷ್ಮಿಯು ಪದ್ಮಾ ಎಂಬ ಮಗಳಾಗಿ ಹುಟ್ಟಿದ್ದಳು.ಅವಳ ಸ್ವಯಂವರ ಏರ್ಪಡಿಸಿದಾಗ, ಅವಳಿಗಾಗಿ ದೇವತೆಗಳಿಗೂ ರಾಕ್ಷಸರಿಗೂ ಯುಧ್ಧವಾಗಿ ಆ ಯುದ್ಧದಲ್ಲಿ ಪದ್ಮಾಕ್ಷನೇ ಸತ್ತುಹೋದ! ಆಗ ಪದ್ಮೆಯು ಅಗ್ನಿಪ್ರವೇಶ ಮಾಡಿದಳು! ಆಗ ಅತ್ತ ಸುಳಿದ ರಾವಣ ಅಗ್ನಿಯನ್ನು ನೀರಿನಿಂದ ಆರಿಸಿ ಅವಳನ್ನು ಹಿಡಿಯಲು ಹೋದನು! ಆದರೆ ಅವಳಿದ್ದ ಜಾಗದಲ್ಲಿ ಐದು ರತ್ನಗಳಿದ್ದವು! ಅವುಗಳನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿಕೊಂಡು ರಾವಣನು ಲಂಕೆಗೆ ಹೋಗಿ ಒಂದು ದೇವಾಲಯದಲ್ಲಿರಿಸಿ, ಮನೆಗೆ ಹೋದ ಬಳಿಕ, ಮಂದೋದರಿಗೆ ಅದನ್ನು ತರಲು ಕಳಿಸಿದ.ಅವಳು ಅಲ್ಲಿ ಹೋಗಿ ಆ ಪೆಟ್ಟಿಗೆ ತೆರೆದು ನೋಡಲು, ಅಲ್ಲಿ ರತ್ನಗಳ ಬದಲಿಗೆ ಒಂದು ಹೆಣ್ಣು ಮಗುವಿತ್ತು! ಅದನ್ನು ಅವಳು ಮನೆಗೆ ತಂದು ರಾವಣನಿಗೆ ತೋರಿಸಲು, ಅವನು ಪದ್ಮೆಯ ಕಥೆ ಹೇಳಿದನು.ಆಗ ಮಂದೋದರಿಯು ಆ ಮಗುವಿನಿಂದ ತಮ್ಮ ಕುಲವೇ ನಾಶವಾಗುವುದೆಂದು ಅದನ್ನು ಒಂದು ಕಾಡಿನಲ್ಲಿ ಬಿಟ್ಟು ಬರಲು ಸೇವಕರಿಗೆ ಹೇಳಿದಳು.ರಾವಣನ ಸಭಾಸದರೂ ಹಾಗೆಯೇ ಅಭಿಪ್ರಾಯಪಟ್ಟರು.ಅವರು ಹೊರಡುವಷ್ಟರಲ್ಲಿ ಆ ಮಗುವು ತಾನು ಪುನಃ ಬಂದು ರಾವಣನ ವಧೆಗೆ ಕಾರಣಳಗುತ್ತೇನೆಂದಳು! ಆಗ ರಾವಣನು ಮಗುವನ್ನು ಕೊಲ್ಲಲು ಹೊರಡಲು ಮಂದೋದರಿಯು ತಡೆದು ಸೇವಕರನ್ನು ಕಳಿಸಿದಳು.ಅವರು ಮಿಥಿಲೆಯ ಕಾಡಿಗೆ ಹೋಗಿ ಅಲ್ಲಿ ಆ ಮಗುವನ್ನು ಪೆಟ್ಟಿಗೆಯ ಸಮೇತ ಹೂತುಬಿಟ್ಟರು! ಅದು ಜನಕನಿಗೆ ಸಿಕ್ಕಿ ಮಗುವನ್ನು ಸೀತೆಯೆಂಬ ಹೆಸರಿನಿಂದ ಬೆಳೆಸಿದನು.
ವಾಲ್ಮೀಕಿ ರಾಮಾಯಣದಲ್ಲೂ ಸೀತೆಯು ರಾವಣನ ಮಗಳೆಂಬಂತೆಯೇ ಚಿತ್ರಿತವಾಗಿದೆ.ಆಗಲೇ ಹೇಳಿದ ವೇದವತಿಯ ಕಥೆ ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬಂದಿದೆ.ಆದರೆ ಅಲ್ಲಿ ವೇದವತಿಯು ನಿಜಕ್ಕೂ ಅಗ್ನಿಪ್ರವೇಶ ಮಾಡಿ ಮುಂದಿನ ಜನ್ಮದಲ್ಲಿ ಸೀತೆಯಾಗಿ ಹುಟ್ಟುತ್ತಾಳೆ.ಆಗ ಅವಳು ಒಂದು ಕಮಲಪುಷ್ಪದಲ್ಲಿ ಲಂಕೆಯ ಒಂದು ಸರೋವರದಲ್ಲೇ ಆವಿರ್ಭವಿಸುತ್ತಾಳೆ.ಆಗ ರಾವಣನೇ ಆ ಮಗುವನ್ನು ಮೊದಲು ನೋಡಿ ಎತ್ತಿಕೊಂಡು ಮನೆಗೆ ತರುತ್ತಾನೆ.ಆಗ ಅವನು ಜ್ಯೋತಿಷಿಗಳೊಂದಿಗೆ ಸಮಾಲೋಚಿಸಲು, ಅವರ ಆ ಮಗುವು ಅವನ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.ಆಗ ರಾವಣನು ಕೂಡಲೇ ಆ ಮಗುವನ್ನು ಸಮುದ್ರಕ್ಕೆ ಎಸೆದುಬಿಡುತ್ತಾನೆ.ಅದು ಹೋಗಿ ಮಿಥಿಲೆಯ ಭೂಮಿಯಲ್ಲಿ ಜನಕನಿಗೆ ಸಿಗುತ್ತದೆ.
ಸೀತಾಪರಿತ್ಯಾಗದ ಕಥೆಯೂ ಆನಂದ ರಾಮಾಯಣದಲ್ಲಿ ವಿಭಿನ್ನವಾಗಿದೆ.ಇಲ್ಲಿ ಶ್ರೀರಾಮನು ಮೊದಲೇ ಸೀತಗೂ ಅವಳ ತಂದೆ ಜನಕನಿಗೂ ತಾನು ಅವಳನ್ನು ಪರಿತ್ಯಾಗ ಮಾಡುವೆನೆಂದು ಹೇಳುತ್ತಾನೆ.ಅದಕ್ಕೆ ಅವನು ಕೊಡುವ ಕಾರಣವೆಂದರೆ, ಅವನು ಸೀತೆಯೊಂದಿಗೆ ರತಿಸುಖವಿಲ್ಲದೇ ಇರಲಾರೆನೆಂದೂ ಅವಳು ಗರ್ಭಿಣಿಯಾಗಿರುವುದರಿಂದ ಅವಳ ಸಂಗ ಮಾಡಬಾರದೆಂದೂ ಆ ಕಾರಣಕ್ಕಾಗಿ ಲೋಕಾಪವಾದದ ನೆಪ ಮಾಡಿಕೊಂಡು ಅವಳನ್ನು ಸ್ವಲ್ಪ ಕಾಲ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಕಳಿಸುವೆನೆಂದೂ ಹೇಳುತ್ತಾನೆ.ಆಗ ಜನಕನು ಒಪ್ಪಿ ಸೀತೆಯ ಅನುಕೂಲಕ್ಕಾಗಿ ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಒಂದು ದೊಡ್ಡ ಮನೆಯನ್ನು ನಿರ್ಮಿಸುತ್ತಾನೆ.ಅನಂತರ, ರಾಮನಿಗೆ ಗೂಢಚಾರಿಯ ಮೂಲಕ ಜನರು, ಅದರಲ್ಲೂ ಒಬ್ಬ ಅಗಸ ತಾನು ಸೀತೆಯನ್ನು ಕರೆತಂದುದರ ಬಗ್ಗೆ ತಪ್ಪಾಗಿ ಮಾತನಾಡಿಕೊಳ್ಳುತ್ತಿದ್ದರೆಂದು ಕೇಳುತ್ತಾನೆ.ಅದೇ ಸಮಯದಲ್ಲಿ ಕೈಕೇಯಿ ಸೀತೆಗೆ ರಾವಣನ ಚಿತ್ರವನ್ನು ಗೋಡೆಯ ಮೇಲೆ ರಚಿಸುವಂತೆ ಹೇಳುತ್ತಾಳೆ.ಆದರೆ ಸೀತೆಯು ತಾನು ರಾವಣನನ್ನು ನೋಡಿಯೇ ಇಲ್ಲವೆಂದೂ ಕೇವಲ ಅವನ ಕಾಲಿನ ಹೆಬ್ಬೆರಳನ್ನು ಮಾತ್ರ ನೋಡಿರುವೆನೆಂದೂ ಹೇಳುತ್ತಾಳೆ.ಅದನ್ನೇ ಚಿತ್ರಿಸುವಂತೆ ಕೈಕೇಯಿ ಹೇಳಲು, ಸೀತೆಯು ಅದನ್ನು ಚಿತ್ರಿಸುತ್ತಾಳೆ.ಅವಳು ಹೋದ ಬಳಿಕ, ಕೈಕೇಯಿ ಆದರಿಂದ ರಾವಣನ ಸಂಪೂರ್ಣ ಚಿತ್ರವನ್ನು ರಚಿಸಿ, ರಾಮನು ಅಲ್ಲಿ ಬಂದಾಗ, ಸೀತೆಯೇ ಆ ಚಿತ್ರವನ್ನು ರಚಿಸಿದಳೆಂದೂ ಅವಳ ಮನಸ್ಸಿನಲ್ಲಿ ರಾವಣನೇ ಇರುವನೆಂದೂ ಹೇಳುತ್ತಾಳೆ.ಇದನ್ನೇ ನೆಪ ಮಾಡಿಕೊಂಡು ರಾಮನು ಲಕ್ಷ್ಮಣನಿಗೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಲು ಹೇಳುತ್ತಾನೆ.ಅಂತೆಯೇ ಲಕ್ಷ್ಮಣನು ಅವಳನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಬಿಟ್ಟು ಬರುತ್ತಾನೆ.ಸೀತೆಯು ವಾಲ್ಮೀಕಿ ಮಹರ್ಷಿಗಳ ಆರೈಕೆಯಲ್ಲಿ ಲವ,ಕುಶರೆಂಬ ಮಕ್ಕಳಿಗೆ ಜನ್ಮ ಕೊಟ್ಟು ಅವರೊಂದಿಗೆ ಮುಂದೆ ರಾಮನು ಅಶ್ವಮೇಧ ಯಜ್ಞಕ್ಕೆ ಬಂದಾಗ, ರಾಮನು ಸೀತೆಗೆ ಜನರ ಮುಂದೆ ತನ್ನ ಪಾತಿವ್ರತ್ಯದ ವಿಷಯವಾಗಿ ಪ್ರತಿಜ್ಞೆ ಮಾಡಲು ಹೇಳುತ್ತಾನೆ.ಸೀತೆಯು ತಾನು ರಾಮನನ್ನು ಬಿಟ್ಟು ಬೇರಾರನ್ನೂ ಮನಸ್ಸಿನಲ್ಲಿ ನೆನೆಸದಿದ್ದರೆ ಭೂಮಿಯು ಬಿರಿದು ತನ್ನನ್ನು ಕರೆದೊಯ್ಯಲು ಹೇಳುತ್ತಾಳೆ.ಆಗ ಭೂಮಿಯು ಬಿರಿದು, ಭೂದೇವಿಯು ಒಂದು ಸಿಂಹಾಸನದಲ್ಲಿ ಸೀತೆಯನ್ನು ಕೂರಿಸಿಕೊಂಡು ಹೋಗುತ್ತಾಳೆ.ಆಗ ರಾಮನು ಸೀತೆಯನ್ನು ಹಿಂದಿರುಗಿಸಲು ಪ್ರಾರ್ಥಿಸುತ್ತಾನೆ.ಆದರೆ ಭೂದೇವಿಯು ಒಪ್ಪದಿರಲು ರಾಮನು ಅವಳನ್ನು ಆಗ್ರಹಿಸಿ, ಅವಳನ್ನು ಕೊಲ್ಲಲು ಧನುರ್ಬಾಣಗಳನ್ನು ತರಲು ಲಕ್ಷ್ಮಣನಿಗೆ ಹೇಳುತ್ತಾನೆ.ಆಗ ಭೂದೇವಿಯು ಸೀತೆಯನ್ನು ರಾಮನಿಗೆ ಒಪ್ಪಿಸುತ್ತಾಳೆ.ಹೀಗೆ ಇಲ್ಲಿ ರಾಮನು ಸೀತೆಯನ್ನು ಪುನಃ ಸ್ವೀಕರಿಸಿ ಅನೇಕ ವರ್ಷಗಳ ಕಾಲ ಅವಳೊಂದಿಗೆ ಸುಖವಾಗಿ ಬಾಳುತ್ತಾನೆ.
ಹೀಗೆ ರಾಮಕಥೆಯನ್ನು ಆಳವಾಗಿ ಓದುತ್ತಾ ಇತರ ರಾಮಾಯಣಗಳನ್ನೂ ಪುರಾಣಗಳನ್ನೂ ಓದುತ್ತಾ ಹೋದರೆ ನಮಗೆ ಅನೇಕ ಪೌರಾಣಿಕ ಸ್ವಾರಸ್ಯಗಳು ಸಿಗುತ್ತವೆ.