ಭಾನುವಾರ, ನವೆಂಬರ್ 19, 2023

ಪರೋಪಕಾರದ ಸ್ಮರಣೆ



ನಾವು ಮಹಾಭಾರತವನ್ನು ಆಳವಾಗಿ ಓದುತ್ತಿದ್ದಂತೆ, ನಮಗೆ ಹಲವಾರು ನೀತಿಭೋಧಕ ಹಾಗೂ ರಂಜನೀಯ ಉಪಕಥೆಗಳು ಸಿಗುತ್ತವೆ. ಅಂಥ ಒಂದು ಕಥೆಯನ್ನು ಈಗ ನೋಡೋಣ.ಇದನ್ನು ಮಾರ್ಕಂಡೇಯ ಮಹರ್ಷಿಗಳು ಪಾಂಡವರಿಗೆ ಹೇಳುತ್ತಾರೆ.ನಾವು ಕೀರ್ತಿಯನ್ನು ಗಳಿಸಬೇಕೆಂದರೆ ಸಾಧ್ಯವಾದಷ್ಟು ಲೋಕೋಪಯೋಗಿ ಪರೋಪಕಾರಿ ಕಾರ್ಯಗಳನ್ನು ಮಾಡಬೇಕೆಂದು ಇದು ಸೂಚಿಸುತ್ತದೆ.
      ಹಿಂದೆ, ಇಂದ್ರದ್ಯುಮ್ನನೆಂಬ ಒಬ್ಬ ಮಹಾನ್ ರಾಜನಿದ್ದನು.ಅವನು ತನ್ನ ಆಯುಷ್ಯ ಮುಗಿದ ಬಳಿಕ, ತಾನು ಮಾಡಿದ್ದ ಪುಣ್ಯಕಾರ್ಯಗಳ ಫಲಗಳನ್ನು ಅನುಭವಿಸಲು ಸ್ವರ್ಗಕ್ಕೆ ಹೋದ.ಅಲ್ಲಿ ಅವನು ಸಾಕಷ್ಟು ಕಾಲ ಸುಖವನ್ನು ಅನುಭವಿಸಿದ ಬಳಿಕ, ಅವನ ಪುಣ್ಯ ಕ್ಷಯವಾಗಲು, ಅವನು ಪುನಃ ಭೂಮಿಗೆ ಬಿದ್ದ! ಆಗ ದೇವತೆಗಳು ಅವನಿಗೊಂದು ನಿಬಂಧನೆ ಹಾಕಿದರು, "ಭೂಮಿಯ ಮೇಲೆ ಯಾರಿಗಾದರೂ ನಿನ್ನ ಸ್ಮರಣೆಯಿದ್ದರೆ ನೀನು ಸ್ವರ್ಗಕ್ಕೆ ಹಿಂದಿರುಗಬಹುದು!"
     ಆಗ ರಾಜನು, ಮಾರ್ಕಂಡೇಯ ಮಹರ್ಷಿಗಳು ಚಿರಂಜೀವಿಗಳಾದುದರಿಂದ ಅವರು ಅತಿ ದೀರ್ಘ ಕಾಲ ಬದುಕಿದ್ದಿರಬಹುದೆಂದು ಭಾವಿಸಿ ಅವರ ಬಳಿಗೆ ಹೋದನು.ಹಾಗೆ ಹೋಗಿ ಅವರನ್ನು, "ನಾನಾರೆಂದು ಬಲ್ಲಿರಾ? ಅಥವಾ ಇಂದ್ರದ್ಯುಮ್ನನೆಂಬ ನನ್ನ ಹೆಸರನ್ನು ಕೇಳಿರುವಿರಾ?" ಎಂದು ಕೇಳಿದನು.ಆದರೆ ಮಾರ್ಕಂಡೇಯರು, " ನಾನು ಒಂದು ಕಡೆ ಹೆಚ್ಚು ಕಾಲ ನಿಲ್ಲದ ಕಾರಣ, ನಿನ್ನ ಬಗ್ಗೆ ತಿಳಿದಿಲ್ಲ!" ಎಂದರು. ಅದಕ್ಕೆ ರಾಜನು, "ನಿಮಗಿಂತ ಹಿರಿಯರನ್ನಾರಾದರೂ ಬಲ್ಲಿರಾ?" ಎಂದು ಕೇಳಿದನು. ಆಗ ಮಹರ್ಷಿಗಳು, " ನನಗೆ ಹಿಮಾಲಯದಲ್ಲಿರುವ ಪ್ರಾವಾರಕರ್ಣನೆಂಬ ಗೂಬೆ ಗೊತ್ತು! ಅದು ನನಗಿಂತ ಹಿರಿಯ ಜೀವಿ!" ಎಂದರು.ಆಗ ರಾಜನು ತನ್ನ ಶಕ್ತಿಯಿಂದ ಕುದುರೆಯಾಗಿ ಮಾರ್ಪಟ್ಟು ಮಹರ್ಷಿಗಳನ್ನು ತನ್ನ ಬೆನ್ನ ಮೇಲೆ ಹತ್ತಿಸಿಕೊಂಡು ಹಿಮಾಲಯದ ಆ ಗೂಬೆಯ ಬಳಿಗೆ ಹೋದನು.ಅವನು ಗೂಬೆಯನ್ನು ಅದೇ ಪ್ರಶ್ನೆ ಕೇಳಲು, ಅದೂ ತನಗೆ ರಾಜನು ತಿಳಿಯದೆಂದು ಹೇಳಿ, ತನಗಿಂತ ಹಿರಿಯನಾದ ನಾಡೀಜಂಘನೆಂಬ ಒಂದು ಕೊಕ್ಕರೆಯನ್ಪು ಕೇಳಬಹುದೆಂದಿತು.
     ಎಲ್ಲರೂ ಕೆರೆಯ ಬಳಿಯಿದ್ದ ಆ ನಾಡೀಜಂಘನೆಂಬ ಕೊಕ್ಕರೆಯ ಬಳಿಗೆ ಹೋದರು.ರಾಜನು ಕೊಕ್ಕರೆಯನ್ಪು ಅದೇ ಪ್ರಶ್ನೆ ಕೇಳಲು, ಅದೂ ರಾಜನು ತನಗೆ ಗೊತ್ತಿಲ್ಲವೆಂದು ಹೇಳುತ್ತಾ, ಅದೇ ಕೆರೆಯ ಆಳದಲ್ಲರುವ ಆಕುಪಾರನೆಂಬ ತನಗಿಂತ ಹಿರಿಯನಾದ ಆಮೆಯನ್ನು ಕೇಳಬಹುದೆಂದಿತು. ರಾಜನು ಒಪ್ಪಲು, ಕೊಕ್ಕರೆಯು ಆಮೆಯನ್ನು ಕೂಗಿ ಕರೆಯಿತು. ಅದು ಹೊರಬರಲು, ಎಲ್ಲರೂ ರಾಜನ ಬಗ್ಗೆ ಕೇಳಿದರು.ರಾಜಾ ಇಂದ್ರದ್ಯುಮ್ನನ ಹೆಸರು ಕೇಳಿದ ಕೂಡಲೇ ಆಮೆಯ ಕಣ್ಣುಗಳಲ್ಲಿ ನೀರೂರಿತು! ಅದು ಮೂರ್ಛೆ ಬೀಳುವಂತಾಯಿತು! ಅನಂತರ ಅದು ಚೇತರಿಸಿಕೊಂಡು ಹೇಳಿತು , "ಆ ಮಹಾನ್ ರಾಜನ ಬಗ್ಗೆ ಯಾರಿಗೆ ಗೊತ್ತಿಲ್ಲ? ಅವನು ಅದೆಷ್ಟು ಯಜ್ಞ ಯಾಗಗಳನ್ನು ಮಾಡಿ ಅದೆಷ್ಟು ಜನರಿಗೆ ದಾನ ಮಾಡಿಲ್ಲ? ಈ ಕೆರೆ ಉಂಟಾಗಿದ್ದಾದರೂ ಹೇಗೆ ಗೊತ್ತೇ? ಅವನು ಬ್ರಾಹ್ಣಣರಿಗೆ ದಾನ ಮಾಡಿದ ಸಾವಿರಾರು ಗೋವುಗಳ ಗೊರಸುಗಳ ಹಳ್ಳಗಳಿಂದ ಆದುದು ಈ ಕೆರೆ! ಹಾಗಾಗಿಯೇ ಈ ಸರೋವರಕ್ಕೆ ಇಂದ್ರದ್ಯುಮ್ನ ಸರೋವರವೆಂದೇ ಹೆಸರಾಗಿದೆ! ಇದು ನಮ್ಮಂಥ ಎಷ್ಟೋ ಜಲರಗಳಿಗೆ ಮನೆಯಾಗಿದೆ!"
     ಆಮೆಯು ಹೀಗೆ ಹೇಳಿದ ಕೂಡಲೇ, ಆಕಾಶದಲ್ಲಿ ಒಂದು ದಿವ್ಸ ವಿಮಾನ ಕಾಣಿಸಿಕೊಂಡಿತು! ಅದು ಭೂಮಿಗೆ ಇಳಿದು ಬರಲು, ಒಂದು ಅಶರೀರವಾಣಿಯಾಯಿತು," ಎಲೈ ರಾಜನೇ! ಈ ವಿಮಾನವನ್ನು ಹತ್ತು! ಒಬ್ಬ ಮನುಷ್ಯನ ಒಳ್ಳೆಯ ಕಾರ್ಯಗಳನ್ನು ಎಲ್ಲಿಯವರೆಗೆ ಜನರು ನೆನೆಸಿಕೊಳ್ಳುವರೋ, ಅಲ್ಲಿಯವರೆಗೆ ಅವನು ಸ್ವರ್ಗದಲ್ಲಿರುತ್ತಾನೆ! ಅಂತೆಯೇ, ಎಲ್ಲಿಯವರೆಗೆ ಒಬ್ಬ ಮನುಷ್ಯನ ದುಷ್ಕೃತ್ಯಗಳನ್ನು ಜನರು ನೆನೆಸಿಕೊಳ್ಳುವರೋ ಅಲ್ಲಿಯವರೆಗೆ ಅವನು ನರಕದಲ್ಲಿರುತ್ತಾನೆ!"  
      ರಾಜನು ಅದರಂತೆ ವಿಮಾನ ಹತ್ತಿ ಪುನಃ ಸ್ವರ್ಗಕ್ಕೆ ಹೋದನು.
    ಈ ಕಥೆಯ ತಾತ್ಪರ್ಯವಿಷ್ಟೇ! ನಾವು ಸದಾ ಕಾಲ ಜನರು ನಮ್ಮನ್ನು ನೆನೆಸಿಕೊಳ್ಳುವಂಥ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರಬೇಕು.
                             
      
     


ಸೋಮವಾರ, ಸೆಪ್ಟೆಂಬರ್ 18, 2023

ಗಣೇಶನನ್ನು ಕುರಿತ ರಸಪ್ರಶ್ನೆ

ಗಣೇಶಚತುರ್ಥಿಯ ಪ್ರಯುಕ್ತ ಒಂದು ಸಣ್ಣ ರಸಪ್ರಶ್ನೆ

೧.ಯಾವ ಪುರಾಣದ ಪ್ರಕಾರ ಗಣೇಶನು ಶ್ರೀ ಕೃಷ್ಣನ ಅವತಾರ?
೨.ಪತಿಯ, ಅಂದರೆ ನಾಯಕನಿಲ್ಲದೇ ಕೇವಲ ನಾಯಕಿಯಿಂದ (ಪಾರ್ವತಿಯಿಂದ) ಹುಟ್ಟಿದ ಕಾರಣ, ಗಣೇಶನಿಗೆ ಬಂದ ಹೆಸರೇನು?
೩.ಪದ್ಮಪುರಾಣದ ಪ್ರಕಾರ, ಪಾರ್ವತಿಯು ಒಂದು ಬೊಂಬೆಯನ್ನು ಮಾಡಿ ಗಂಗೆಯಲ್ಲಿ ಬಿಡಲು, ಅದಕ್ಕೆ ಜೀವ ಬಂದು, ಗಣೇಶನಾಯಿತು.ಹಾಗಾಗಿ, ಪಾರ್ವತಿ ಮತ್ತು ಗಂಗೆ, ಇಬ್ಬರು ತಾಯಂದಿರನ್ನು ಪಡೆದ ಗಣೇಶನಿಗೆ ಬಂದ ಹೆಸರೇನು?
೪.ಸಂಪೂರ್ಣವಾಗಿ ಗಣೇಶನಿಗೆಂದೇ ಇರುವ ಎರಡು ಪುರಾಣಗಳು ಯಾವುವು?
೫.ಯಾವ ರಾಕ್ಷಸನನ್ನು ನುಂಗಿದ ಕಾರಣ ಗಣೇಶನಿಗೆ ತಾಪವುಂಟಾಗಿ ಗರಿಕೆ ಹುಲ್ಲನ್ನು ಹಾಕಿ ತಾಪವನ್ನು ಆರಿಸಲಾಯಿತು?
೬.ಯಾವ ಗಂಧರ್ವನು ಶಾಪದಿಂದ ಇಲಿಯಾಗಿ ಗಣೇಶನ ವಾಹನವಾದನು?
೭.ಗಣೇಶನು ಯಾವ ಋಷಿಗೆ ಯಾವ ಗ್ರಂಥವನ್ನು ಕೇಳುತ್ತಾ ಬರೆದುಕೊಟ್ಟನು?
೮.ಗಣೇಶನ ಇಬ್ಬರು ಪತ್ನಿಯರು ಯಾರೆಂದು ಹೇಳಲಾಗಿದೆ?
೯.ಗಣೇಶನ ಇಬ್ಬರು ಮಕ್ಕಳು ಯಾರೆಂದು ಹೇಳಲಾಗಿದೆ?
೧೦.ಯಾವ ಸಾಹಿತ್ಯದಲ್ಲಿ ಬ್ರಹ್ಮಣಸ್ಪತಿ ಎಂದು ಗಣಪತಿಯ ಉಲ್ಲೇಖ ಇದೆ?
೧೧.ಗಣಪತಿಯ ಹೆಸರಿನಲ್ಲಿರುವ ಉಪನಿಷತ್ತು ಯಾವುದು?
೧೨.ಗಣಪತಿಯ ಸ್ತ್ರೀ ರೂಪಗಳು ಯಾವುವು?
೧೩.ಯಾವ ರಾಕ್ಷಸನಿಂದ ಗಣೇಶನು ವಟುರೂಪದಲ್ಲಿ ಬಂದು ಆತ್ಮಲಿಂಗವನ್ನು ತೆಗೆದುಕೊಂಡು ಗೋಕರ್ಣ ಕ್ಷೇತ್ರದಲ್ಲಿ ಸ್ಥಾಪಿಸಿದನು?
೧೪.ಗಣಪತಿಯ ಭಕ್ತರ ಯಾವ ಪಂಗಡ ಹಿಂದೆ ಇತ್ತು?
೧೫.ತಾಂತ್ರಿಕ ಪಂಗಡದವರು ಪೂಜಿಸುವ ಗಣೇಶನ ಕೆಲವು ರೂಪಗಳು ಯಾವುವು

ಗಣೇಶಚತುರ್ಥಿಯ ರಸಪ್ರಶ್ನೆ ಉತ್ತರಗಳು

೧.ಬ್ರಹ್ಮವೈವರ್ತಪುರಾಣ-ಇದರ ಕಥೆಯಂತೆ ಶಿವ,ಪಾರ್ವತಿಯರು ಶ್ರೀ ಕೃಷ್ಣನ ಕುರಿತ ವ್ರತವನ್ನು ಆಚರಿಸಿದುದರಿಂದ ಶ್ರೀ ಕೃಷ್ಣನೇ ಗಣೇಶನಾಗಿ ಅವತರಿಸಿದನು.
೨.ವಿನಾಯಕ
೩.ದ್ವೈಮಾತುರ
೪.ಗಣೇಶಪುರಾಣ ಮತ್ತು ಮುದ್ಗಲಪುರಾಣ
೫.ಅನಲಾಸುರ
೬.ಕ್ರೌಂಚ- ಇವನು ವಾಮದೇವ ಋಷಿಯ ಪಾದವನ್ನು ತುಳಿದ ಕಾರಣ, ಅವನಿಂದ ಶಾಪಗ್ರಸ್ತನಾಗಿ ಇಲಿಯಾಗಿ ಅನಂತರ ಗಣೇಶನ ವಾಹನವಾದನು.
೭.ವೇದವ್ಯಾಸರು, ಮಹಾಭಾರತ
೮.ಸೀದ್ಧಿ, ಬುದ್ಧಿ (ರಿದ್ಧಿ)
೯.ಕ್ಷೇಮ, ಲಾಭ
೧೦.ಋಗ್ವೇದ
೧೧.ಗಣಪತಿ ಅಥರ್ವಶೀರ್ಷ ಉಪನಿಷತ್ತು
೧೨.ವಿನಾಯಕಿ, ವ್ಯಾಘ್ರಪಾದ ಗಣೇಶಾನಿ
೧೩.ರಾವಣ
೧೪.ಗಾಣಾಪತ್ಯ
೧೫.ಶಕ್ತಿಗಣಪತಿ, ಹೇರಂಬಗಣಪತಿ,ಉಚ್ಛಿಷ್ಟ ಗಣಪತಿ, ಲಕ್ಷ್ಮೀ ಗಣಪತಿ, ಮಹಾಗಣಪತಿ, ಇತ್ಯಾದಿ

ಶುಕ್ರವಾರ, ಸೆಪ್ಟೆಂಬರ್ 1, 2023

ಸಂಸ್ಕೃತ ಅಂತರಾಲಾಪಗಳು


ಸಂಸ್ಕೃತ ಅಂತರಾಲಾಪಗಳು

ಹಿಂದಿನ ಒಂದು ಸಂಚಿಕೆಯಲ್ಲಿ ನಾವು ಸಂಸ್ಕೃತದಲ್ಲಿನ ಪ್ರಹೇಲಿಕೆಗಳ ಬಗ್ಗೆ ಪರಿಚಯಿಸಿಕೊಂಡೆವು.ಇವು ಒಗಟುಗಳಾಗಿದ್ದು ಇಂಥವು ಎಲ್ಲಾ ಭಾಷೆಗಳಲ್ಲೂ ಸಿಗುತ್ತವೆ.ಆದರೆ ಸಂಸ್ಕೃತದಲ್ಲಿ ಇನ್ನೂ ಹಲವಾರು ಬಗೆಯ ಸಾಹಿತ್ಯ ಕ್ರೀಡೆಗಳಿವೆ.ಇವು, ನಾವು ಆಂಗ್ಲ ಭಾಷೆಯಲ್ಲಿ ಪಜಲ್ಸ್(Puzzles) ಎನ್ನುವೆವಲ್ಲವೇ? ಅಂಥವು! ಪ್ರಹೇಲಿಕೆಗಳೂ ಸೇರಿದಂತೆ ಇಂಥವನ್ನು ಚಿತ್ರಸೂಕ್ತಿಗಳೆಂದು ಕರೆಯುತ್ತಾರೆ.ಈ ಸಂಚಿಕೆಯಲ್ಲಿ ಅಂಥ ಒಂದು ಚಿತ್ರಸೂಕ್ತಿಯನ್ನು ಪರಿಚಯಿಸಿಕೊಳ್ಳೋಣ.ಅದು ಅಂತರಾಲಾಪ.
     ಅಂತರಾಲಾಪಗಳಲ್ಲಿ , ಶ್ಲೋಕಗಳಲ್ಲಿ ವಿವಿಧ ಪ್ರಶ್ನೆಗಳಿರುತ್ತವೆ ಹಾಗೂ ಆ ಶ್ಲೋಕಗಳಲ್ಲೇ ಉತ್ತರಗಳಿರುತ್ತವೆ.ಮೊದಲ ಮೂರು ಪಾದಗಳಲ್ಲಿ ಪ್ರಶ್ನೆಗಳಿದ್ದರೆ ಕಡೆಯ ಪಾದದಲ್ಲಿ ಉತ್ತರಗಳಿರುತ್ತವೆ.ಕೊನೆಯ ಪಾದವನ್ನು ಮಾತ್ರ ಹೇಳಿದರೆ ಅದು ವ್ಯಾಕರಣಬದ್ಧವಾಗಿದ್ದರೂ ಅಸಂಬದ್ಧ ಅರ್ಥ ಹೊಂದಿರುತ್ತದೆ.ಕ್ರೀಡೆಗಾಗಿ ಈ ಒಂದು ಪಾದವನ್ನು ಮಾತ್ರ ಕೊಟ್ಟರೆ ಅದೊಂದು ಸಮಸ್ಯೆಯಾಗುತ್ತದೆ.ಆಗ ಇತರ ಮೂರು ಪಾದಗಳನ್ನು ಆ ನಾಲ್ಕನೆಯ ಪಾದಕ್ಕೆ ಸರಿಹೊಂದುವ ಪ್ರಶ್ನೆಗಳಂತೆ ರಚಿಸಿ ಸಮಸ್ಯಾಪೂರ್ಣ ಮಾಡಬೇಕು.
     ಈಗ ಕೆಲವು ಅಂತರಾಲಾಪಗಳನ್ನು ನೋಡೋಣ.
೧.ಕಸ್ತೂರೀ ಜಾಯತೇ ಕಸ್ಮಾತ್ಕೋ ಹಂತಿ ಕರಿಣಾಂ ಕುಲಮ್/
    ಕಿಂ ಕುರ್ಯಾತ್ಕಾತರೋ ಯುದ್ಧೇ ಮೃಗಾತ್ಸಿಂಹ:         ಪಲಾಯನಮ್//
ಅನುವಾದ :  ಕಸ್ತೂರಿಯು ಯಾವುದರಿಂದ ಹುಟ್ಟುತ್ತದೆ? ಆನೆಗಳ ಕುಲವನ್ನು ಯಾರು ಸಂಹರಿಸುತ್ತಾರೆ? ಯುದ್ಧದಲ್ಲಿ ಭಯಗೊಂಡಿರುವವನು ಏನು ಮಾಡುತ್ತಾನೆ? ಮೃಗದಿಂದ, ಸಿಂಹ, ಪಲಾಯನ.
ವಿವರಣೆ: ಇಲ್ಲಿ 'ಮೃಗಾತ್ಸಿಂಹ: ಪಲಾಯನಮ್' ಎಂದಷ್ಟೇ ಹೇಳಿದರೆ 'ಮೃಗದಿಂದ ಸಿಂಹಪಲಾಯನ ' ಎಂಬ ಸಮಸ್ಯೆ ಕೊಟ್ಟಂತಾಗುತ್ತದೆ.ಆಗ ಇತರ ಮೂರು ಪಾದಗಳನ್ನು ರಚಿಸಿ ಇದರೊಂದಿಗೆ ಹೊಂದುವಂತೆ ಮಾಡಬೇಕು.ಅಂದರೆ, ಆ ಮೂರು ಪಾದಗಳಲ್ಲಿ ಪ್ರಶ್ನೆಗಳು ಬರುವಂತೆ ಮಾಡಿ ಈ ಪದಗುಚ್ಛದ ಪದಗಳು ಆ ಒಂದೊಂದು ಪ್ರಶ್ನೆಗೂ ಉತ್ತರವಾಗಬೇಕು.ಇಲ್ಲಿನ ಶ್ಲೋಕದಲ್ಲಿ, ಕಸ್ತೂರೀ ಜಾಯತೇ ಕಸ್ಮಾತ್( ಕಸ್ತೂರಿ ಯಾವುದರಿಂದ ಹುಟ್ಟುತ್ತದೆ) ಎಂಬ ಪ್ರಶ್ನೆಗೆ ಮೃಗಾತ್ (ಜಿಂಕೆಯಿಂದ) ಎಂಬ ಉತ್ತರ ಬರುತ್ತದೆ.ಕೋ ಹಂತಿ ಕರಿಣಾಂ ಕುಲಮ್ (ಆನೆಗಳ ಕುಲವನ್ನು ಯಾರು ಕೊಲ್ಲುತ್ತಾನೆ/ಕೊಲ್ಲುತ್ತದೆ) ಎಂಬ ಪ್ರಶ್ನೆಗೆ ಸಿಂಹ:(ಸಿಂಹ) ಎಂಬ ಉತ್ತರ, ಮತ್ತು ಕಿಂ ಕುರ್ಯಾತ್ಕಾತರೋ ಯುದ್ಧೇ (ಯುದ್ಧದಲ್ಲಿ ಭಯಗೊಂಡಿರುವವನು ಏನು ಮಾಡುತ್ತಾನೆ) ಎಂಬ ಪ್ರಶ್ನೆಗೆ ಪಲಾಯನಂ (ಪಲಾಯನ) ಎಂಬ ಉತ್ತರ ಬರುತ್ತವೆ.ಹೀಗೆ ಅಂತರಾಲಾಪ ಸಮಸ್ಯೆಗಳಲ್ಲಿ ಶ್ಲೋಕದಲ್ಲೇ ಪ್ರಶ್ನೆ ಮತ್ತು ಉತ್ತರ ಎರಡೂ ಇರುತ್ತವೆ.
೨.ಕ: ಖೇ ಚರತಿ ಕಾ ರಮ್ಯಾ ಕಾ ಜಪ್ಯಾ ಕಿಂ ವಿಭೂಷಣಮ್/
   ಕೋ ವಂದ್ಯ: ಕೀದೃಶೀ ಲಂಕಾ ವೀರಮರ್ಕಟಕಂಪಿತಾ//
   ಅನುವಾದ: ಆಕಾಶದಲ್ಲಿ ಯಾವುದು ಚಲಿಸುತ್ತದೆ? ಯಾರು.   ರಮ್ಯಳಾಗಿದ್ದಾಳೆ? ಯಾವುದು ಜಪಿಸತಕ್ಕದ್ದು? ಯಾವುದು ಭೂಷಣವಾಗಿರುತ್ತದೆ? ಯಾರು ವಂದ್ಯರು? ಲಂಕೆಯು ಹೇಗಿದೆ? ವೀರಮರ್ಕಟಕಂಪಿತಾ!
ವಿವರಣೆ: ಈ ಶ್ಲೋಕದ ಎಲ್ಲಾ ಪ್ರಶ್ನೆಗಳಿಗೂ 'ವೀರಮರ್ಕಟಕಂಪಿತಾ' ಎಂಬ ಪದದಲ್ಲಿ ಉತ್ತರಗಳಿವೆ.ಪದವನ್ನು ವಿಭಜಿಸುವುದರಿಂದ ಉತ್ತರಗಳು ದೊರೆಯುತ್ತವೆ.'ಕ: ಖೇ ಚರತಿ '- ಆಕಾಶದಲ್ಲಿ ಯಾವುದು ಚಲಿಸುತ್ತದೆ ಎಂಬ ಪ್ರಶ್ನೆಗೆ ಉತ್ತರ, ವಿ:, ಅಂದರೆ ಪಕ್ಷಿ.
'ಕಾ ರಮ್ಯಾ '-ಯಾರು ರಮ್ಯಳಾಗಿದ್ದಾಳೆ ಎಂಬ ಪ್ರಶ್ನೆಗೆ ಉತ್ತರ ರಮಾ, ಅಂದರೆ ಲಕ್ಷ್ಮಿ.
'ಕಾ ಜಪ್ಯಾ '- ಯಾವುದು ಜಪಿಸತಕ್ಕದ್ದು ಎಂಬ ಪ್ರಶ್ನೆಗೆ ಉತ್ತರ,ಋಕ್, ಅಂದರೆ ವೇದದ ಮಂತ್ರ.
'ಕಿಂ ವಿಭೂಷಣಮ್ '- ಯಾವುದು ಭೂಷಣ ಅಥವಾ ಅಲಂಕಾರ ಎಂಬ ಪ್ರಶ್ನೆಗೆ ಉತ್ತರ, ಕಟಕಂ, ಅಂದರೆ ಬಳೆ.
'ಕೋ ವಂದ್ಯ:'- ಯಾರು ವಂದ್ಯರು ಎಂಬ ಪ್ರಶ್ನೆಗೆ ಉತ್ತರ, ಪಿತಾ, ಅಂದರೆ ತಂದೆ.
'ಕೀದೃಶೀ ಲಂಕಾ '-ಲಂಕೆಯು ಹೇಗಿದೆ ಎಂಬ ಪ್ರಶ್ನೆಗೆ ಉತ್ತರ, ಇಡಿಯ ಪದವೇ ಆಗುತ್ತದೆ -'ವೀರಮರ್ಕಟಕಂಪಿತಾ', ಅಂದರೆ, ವೀರವಾನರನಾದ ಹನುಮಂತನಿಂದ ಕಂಪನಕ್ಕೊಳಗಾಗಿದೆ ಎಂದು ಅರ್ಥ.
೩.ಸೀಮಂತಿನೀಷು ಕಾ ಶಾಂತಾ ರಾಜಾ ಕೋsಭೂದ್ಗುಣೋತ್ತಮ:/
ವಿದ್ವದ್ಭಿ: ಕಾ ಸದಾ ವಂದ್ಯಾ ಅತ್ರೈವೋಕ್ತಂ ನ ಬುಧ್ಯತೇ//
ಅನುವಾದ: ಹೆಂಗಸರಲ್ಲಿ ಶಾಂತಳಾಗಿರುವವಳು ಯಾರು? ರಾಜರಲ್ಲಿ ಗುಣೋತ್ತಮನಾಗಿರುವವನು ಯಾರು? ವಿದ್ವಜ್ಜನರಿಂದ ಸದಾ ವಂದ್ಯವಾದುದು ಯಾವುದು? ಉತ್ತರಗಳು ಇಲ್ಲೇ ಹೇಳಲ್ಪಟ್ಟಿವೆ! ಆದರೆ ತಿಳಿಯುವುದಿಲ್ಲ!
ವಿವರಣೆ: ಈ ಶ್ಲೋಕದಲ್ಲಿ, ಪ್ರತಿ ಚರಣದ ಮೊದಲ ಮತ್ತು ಕೊನೆಯ ಅಕ್ಷರಗಳನ್ನು ಸೇರಿಸಿದರೆ, ಮೂರೂ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತವೆ.
    'ಸೀಮಂತಿನೀಷು ಕಾ ಶಾಂತಾ '-ಈ ಚರಣದಲ್ಲಿ ಸೀ ಮತ್ತು ತಾ ಸೇರಿಸಿದರೆ, ಸೀತಾ ಎಂಬ ಉತ್ತರ ಸಿಗುತ್ತದೆ.
    'ರಾಜಾ ಕೋsಭೂದ್ಗುಣೋತ್ತಮ:' - ಈ ಚರಣದಲ್ಲಿ ರಾ ಮತ್ತು ಮ: ಸೇರಿಸಿದರೆ ರಾಮ: , ಅಂದರೆ ರಾಮ ಎಂಬ ಉತ್ತರ ಸಿಗುತ್ತದೆ.
    'ವಿದ್ವದ್ಭಿ: ಕಾ ಸದಾ ವಂದ್ಯಾ ' ಎಂಬ ಚರಣದಲ್ಲಿ ವಿ ಮತ್ತು ದ್ಯಾ ಸೇರಿಸಿದರೆ ವಿದ್ಯಾ, ಅಂದರೆ ವಿದ್ಯೆ ಎಂಬ ಉತ್ತರ ಸಿಗುತ್ತದೆ.
೪.ಯುಧಿಷ್ಠಿರ: ಕಸ್ಯ ಪುತ್ರೋ ಗಂಗಾ ವಹತಿ ಕೀದೃಶೀ/
    ಹಂಸಸ್ಯ ಶೋಭಾ ಕಾ ವಾಸ್ತಿ ಧರ್ಮಸ್ಯ ತ್ವರಿತಾ ಗತಿ://
   ಅನುವಾದ: ಯುಧಿಷ್ಠಿರನು ಯಾರ ಪುತ್ರ? ಗಂಗೆಯು ಹೇಗೆ ಹರಿಯುತ್ತದೆ? ಹಂಸದ ಶೋಭೆಯು ಯಾವುದಾಗಿರುತ್ತದೆ? ಧರ್ಮನ ವೇಗಗತಿ!
   ವಿವರಣೆ: ಇಲ್ಲಿ, ಮೂರು ಪ್ರಶ್ನೆಗಳಿಗೆ ಕೊನೆಯ ಚರಣದ ಮೂರು ಪದಗಳು ಉತ್ತರಗಳಾಗಿವೆ.ಯುಧಿಷ್ಠಿರನು ಯಾರ ಪುತ್ರ ಎಂಬ ಪ್ರಶ್ನೆಗೆ ಧರ್ಮನ, ಅಂದರೆ ಯಮಧರ್ಮನ ಎಂಬುದು ಉತ್ತರ.ಗಂಗೆಯು ಹೇಗೆ ಹರಿಯುತ್ತದೆ ಎಂಬ ಪ್ರಶ್ನೆಗೆ ತ್ವರಿತಾ, ಅಂದರೆ ವೇಗವಾಗಿ ಎಂಬುದು ಉತ್ತರ.ಹಂಸದ ಶೋಭೆಯು ಯಾವುದಾಗಿರುತ್ತದೆ ಎಂಬ ಪ್ರಶ್ನೆಗೆ ಗತಿ, ಅಂದರೆ ನಡಿಗೆ ಎಂಬುದು ಉತ್ತರ.
೫.ಭೋಜನಾಂತೇ ಚ ಕಿಂ ಪೇಯಂ ಜಯಂತ: ಕಸ್ಯ ವೈ ಸುತ: /
    ಕಥಂ ವಿಷ್ಣುಪದಂ ಪ್ರೋಕ್ತಂ ತಕ್ರಂ ಶಕ್ರಸ್ಯ ದುರ್ಲಭಮ್ //
    ಅನುವಾದ: ಭೋಜನದ ಕೊನೆಗೆ ಏನನ್ನು ಕುಡಿಯಬೇಕು? ಜಯಂತನು ಯಾರ ಮಗನು? ವಿಷ್ಣುಪದವು ಹೇಗೆ ಹೇಳಲ್ಪಟ್ಟಿದೆ? ಮಜ್ಜಿಗೆ ಇಂದ್ರನ ದುರ್ಲಭ (ವಸ್ತು).
   ವಿವರಣೆ: ಕೊನೆಯ ಚರಣದ ಪದಗಳು ಪ್ರಶ್ನೆಗಳಿಗೆ ಉತ್ತರಗಳಾಗಿವೆ.
ಭೋಜನದ ಕೊನೆಗೆ ಏನನ್ನು ಕುಡಿಯಬೇಕು?- ತಕ್ರಂ, ಅಂದರೆ ಮಜ್ಜಿಗೆ.
ಜಯಂತನು ಯಾರ ಮಗನು?- ಇಂದ್ರನ ಮಗ.
ವಿಷ್ಣುಪದವು ಹೇಗೆ ಹೇಳಲ್ಪಟ್ಟಿದೆ?- ದುರ್ಲಭ(ಲಭಿಸುವುದು ಕಷ್ಟ).
ತಕ್ರಂ ಶಕ್ರಸ್ಯ ದುರ್ಲಭಮ್ ಎಂಬ ಪದಗುಚ್ಛವನ್ನು ಒಂದು ಸಮಸ್ಯೆಯಾಗಿ ಕೊಡಬಹುದು.
                                   ಡಾ.ಬಿ.ಆರ್.ಸುಹಾಸ್
 

ಬುಧವಾರ, ಆಗಸ್ಟ್ 23, 2023

ಶ್ರೀ ಕೃಷ್ಣನ ಕುರಿತ ಪುಟ್ಟ ರಸಪ್ರಶ್ನೆ

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಒಂದು ಸಣ್ಣ ರಸಪ್ರಶ್ನೆ.ಶ್ರೀಕೃಷ್ಣನನ್ನು ಕೊಲ್ಲಲು ಬಂದ ಅನೇಕ ರಾಕ್ಷಸರು ಅವನಿಂದ ಹಾಗೂ ಬಲರಾಮನಿಂದ ತಾವೇ ಹತರಾದರು.ಆ ರಾಕ್ಷಸರು ವಿವಿಧ ರೂಪಗಳಲ್ಲಿ ಬಂದರು.ಯಾವ ರಾಕ್ಷಸರು ಯಾವ ರೂಪಗಳಲ್ಲಿ ಬಂದರು ಹೇಳಿ ನೋಡೋಣ.
೧.ಪೂತನಿ
ಅ)ನವಿಲು,ಆ)ಸುಂದರಿ,ಇ)ವೃದ್ಧೆ,ಈ)ಹಂಸ
೨.ತೃಣಾವರ್ತ
ಅ)ಸುಂಟರಗಾಳಿ,ಆ)ನಾಯಿ,ಇ)ತಂಗಾಳಿ,ಈ)ತೋಳ
೩.ಶಕಟಾಸುರ
ಅ)ಬಂಡೆ,ಆ)ಗಾಡಿ,ಇ)ಒರಳುಕಲ್ಲು,ಈ)ಮಿಂಚು
೪.ಬಕಾಸುರ
ಅ)ಹದ್ದು,ಆ)ಕೊಕ್ಕರೆ,ಇ)ಗಿಣಿ,ಈ)ಪಾರಿವಾಳ
೫.ಅಘಾಸುರ
ಅ)ಬೃಹತ್ ಸರ್ಪ,ಆ)ಆನೆ,ಇ)ಸಿಂಹ,ಈ)ಹಂದಿ
೬.ವತ್ಸಾಸುರ
ಅ)ಕರು,ಆ)ಎಮ್ಮೆ,ಇ)ಕೋಳಿ,ಈ)ನಾಯಿ
೭.ಕೇಶಿ
ಅ)ಕುದುರೆ,ಆ)ಗೂಳಿ,ಇ)ಹುಲಿ,ಈ)ಹಾವು
೮.ಅರಿಷ್ಟಾಸುರ
ಅ)ಗೂಳಿ,ಆ)ಕುದುರೆ,ಇ)ತೋಳ,ಈ)ಆನೆ
೯.ಪ್ರಲಂಬಾಸುರ
ಅ)ಬ್ರಾಹ್ಮಣ ಬಾಲಕ,ಆ)ಗೊಲ್ಲ ಬಾಲಕ,ಇ)ರಾಜಕುಮಾರ,ಈ)ವೃದ್ಧ
೧೦.ಧೇನುಕಾಸುರ
ಅ)ಕತ್ತೆ,ಆ)ಕೋತಿ,ಇ)ಹಂದಿ,ಈ)ಕೋಣ
        ಉತ್ತರಗಳು
೧.ಆ)ಸುಂದರಿ
೨.ಅ)ಸುಂಟರಗಾಳಿ
೩.ಆ)ಗಾಡಿ
೪.ಆ)ಕೊಕ್ಕರೆ
೫.ಅ)ಬೃಹತ್ ಸರ್ಪ
೬.ಅ)ಕರು
೭.ಅ)ಕುದುರೆ
೮.ಅ)ಗೂಳಿ
೯.ಆ)ಗೊಲ್ಲ ಬಾಲಕ
೧೦.ಅ)ಕತ್ತೆ

ಶನಿವಾರ, ಆಗಸ್ಟ್ 12, 2023

ಪುಸ್ತಕ ಪರಿಚಯ -ಗಂಧರ್ವ ಗಾನ

ಡಾ.ರಾಜಕುಮಾರ್ ಅಭಿಮಾನಿಗಳಿಗೆ ಮತ್ತೊಂದು ರಸದೌತಣ!
ಡಾ.ರಾಜ್ ಚಿತ್ರಗೀತೆಗಳ ವಿಶ್ವಕೋಶ!

ಬೀ.ಸಿ.ಜಗನ್ನಾಥ್ ಜೋಯಿಸ್ ಅವರು ಸಂಕಲಿಸಿ, ಟಿಪ್ಪಣಿಗಳನ್ನು ಬರೆದು ಸಿದ್ಧಪಡಿಸಿರುವ ಒಂದು ಅದ್ಭುತ ಪುಸ್ತಕ,'ಗಂಧರ್ವ ಗಾನ -ಡಾ.ರಾಜಕುಮಾರ್ ಚಿತ್ರಗಳ ಸಮಗ್ರ ಗೀತಮಾಲಿಕೆ '. ಇದಕ್ಕೆ ಶ್ರೀ ದೊಡ್ಡರಂಗೇಗೌಡರು, ವಿ.ಮನೋಹರ್, ಮತ್ತು ಶ್ಯಾಂ ಕಿಶೋರ್.ಡಿ.ಅವರು ಮುನ್ನುಡಿಗಳನ್ನು ಬರೆದಿದ್ದಾರೆ.ಪ್ರತಿ ಚಲನಚಿತ್ರಕ್ಕೂ ಚಲನಚಿತ್ರದ ಒಂದು ಚಿತ್ರವಿದೆ.ಅನಂತರ, ಆ ಚಿತ್ರದ ಗೀತೆಗಳ ಮಾಹಿತಿ, ಟಿಪ್ಪಣಿಗಳು, ಮತ್ತು ಎಲ್ಲಾ ಹಾಡುಗಳು.ಡಾ.ರಾಜಕುಮಾರ್ ಚಿತ್ರಗೀತೆಗಳ ಒಂದು ವಿಶ್ವಕೋಶ ಇದು.
ಬೆಲೆ;ರೂ.950
ಪುಟಗಳು:864

ಶುಕ್ರವಾರ, ಆಗಸ್ಟ್ 11, 2023

ಪುಸ್ತಕ ಪರಿಚಯ -ದರ್ಪದಲನಮ್


ಸಂಸ್ಕೃತ ಗೊತ್ತಿಲ್ಲದವರಿಗೂ ಕಾಳಿದಾಸನ ಹೆಸರು ಗೊತ್ತಿರುತ್ತದೆ ಎಂದರೆ ಅದರಲ್ಲಿ ಅತಿಶಯವೇನಿಲ್ಲ ಎನಿಸುತ್ತದೆ.ಆದರೆ ಸಂಸ್ಕೃತ ಗೊತ್ತಿರುವವರಿಗೂ ಕ್ಷೇಮೇಂದ್ರನ ಹೆಸರು ಅಷ್ಟಾಗಿ ಪರಿಚಿತವಲ್ಲ ಎಂದರೆ ಅದೊಂದು ಕಟು ಸತ್ಯ ಎಂದು ಬೇಸರವಾಗುತ್ತದೆ.ಏಕೆಂದರೆ ಹನ್ನೊಂದನೆಯ ಶತಮಾನದ ಕಾಶ್ಮೀರದ ಈ ಮಹಾನ್ ಕವಿ ಕ್ಷೇಮೇಂದ್ರನು ಅಪಾರ ಗ್ರಂಥರಾಶಿಯನ್ನೇ ರಚಿಸಿದ್ದಾನೆ! ಅಷ್ಟೇ ಅಲ್ಲದೆ ಅನೇಕ ವಿಷಯಗಳನ್ನು ಕುರಿತು ಬರೆದಿದ್ದಾನೆ.ಒಟ್ಟು ಮೂವತ್ತು ಕೃತಿಗಳನ್ನು ಅವನು ರಚಿಸಿದ್ದಾನೆ.ರಾಮಾಯಣಮಂಜರಿ,ಭಾರತಮಂಜರಿ, ಬೃಹತ್ಕಥಾಮಂಜರಿ, ದಶಾವತಾರಚರಿತಂ, ಬೌದ್ಧ ಅವದಾನಕಲ್ಪಲತಾ, ಮೊದಲಾದ ಕಥಾಕಾವ್ಯಗಳು, ದೇಶೋಪದೇಶ, ಸಮಯಮಾತೃಕಾ, ಕಲಾವಿಲಾಸ, ನರ್ಮಮಾಲಾ, ಸೇವ್ಯಸೇವಕೋಪದೇಶ, ಮೊದಲಾದ ವಿಡಂಬನಕಾವ್ಯಗಳು, ಚಾರುಚರ್ಯಾ, ನೀತಿಕಲ್ಪತರು, ದರ್ಪದಲನ, ಮೊದಲಾದ ನೀತಿಕಾವ್ಯಗಳು, ಕವಿಕಂಠಾಭರಣ, ಔಚಿತ್ಯವಿಚಾರಚರ್ಚಾ , ಮೊದಲಾದ ಅಲಂಕಾರ, ಔಚಿತ್ಯ,ಗಳಂಥ ಕವಿತ್ವಕ್ಕೆ ಸಂಬಂಧಿಸಿದ ಕಾವ್ಯಗಳು, ಹೀಗೆ ಅನೇಕ ಇವೆ ಅವನ ಕೃತಿಗಳು. ಅವನು ಬರೆದ ನೃಪಾವಲೀ, ಚಿತ್ರಭಾರತ, ಮೊದಲಾದ ಅನೇಕ ಕೃತಿಗಳು ಸಿಕ್ಕೂ ಇಲ್ಲ! 
      ದರ್ಪದಲನವೆಂಬ ಈ ಕೃತಿಯಲ್ಲಿ ಕ್ಷೇಮೇಂದ್ರನು ದರ್ಪವನ್ನು ಮುರಿಯುವ ವಿಷಯವನ್ನು ಕುರಿತು ಕಾವ್ಯರಚನೆ ಮಾಡಿದ್ದಾನೆ.ಇದು ಪದ್ಯಾತ್ಮಕವಾದ ಒಂದು ಪುಟ್ಟ ಕೃತಿ.ಏಳು ಅಧ್ಯಾಯಗಳನ್ನು ಹೊಂದಿದ್ದು ವಿವಿಧ ಕಥೆಗಳ ಹಾಗೂ ಸುಭಾಷಿತಗಳ ಮೂಲಕ, ವಿವಿಧ ಕಾರಣಗಳಿಂದ ಉಂಟಾಗುವ ದರ್ಪ ಅಥವಾ ಅಹಂಕಾರವನ್ನು ಮುರಿಯುತ್ತದೆ.ಒಂದೊಂದು ಅಧ್ಯಾಯ ದರ್ಪಕ್ಕೆ ಕಾರಣವಾಗುವ ಒಂದೊಂದು ವಿಷಯವನ್ನು ತೆಗೆದುಕೊಳ್ಳುತ್ತದೆ. ಅವು, ಕುಲ, ಧನ, ವಿದ್ಯೆ, ರೂಪ, ಶೌರ್ಯ, ದಾನ, ಮತ್ತು ತಪಸ್ಸು. ಈ ಎಲ್ಲ ವಿಷಯಗಳಿಂದಲೂ ಮನುಷ್ಯನಿಗೆ ದರ್ಪವುಂಟಾಗಬಹುದು.ಹಾಗಾಗಬಾರದೆಂಬುದೇ ಕವಿಯ ಉದ್ದೇಶ.ಈ ಸೊಗಸಾದ ಗ್ರಂಥವನ್ನು ವಿದ್ವಾಂಸರಾದ ಶ್ರೀಯುತ ಡಾ.ಎಚ್.ವಿ.ನಾಗರಾಜರಾವ್ ಅವರು ಪ್ರಪ್ರಥಮ ಬಾರಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ.ಈ ಸುಂದರ ಗ್ರಂಥವನ್ನು ಎಲ್ಲರೂ ಓದಿ ಅದರ ಸದುಪಯೋಗ ಪಡೆದುಕೊಳ್ಳಬೇಕು.
ಲೇಖಕರು: ಕ್ಷೇಮೇಂದ್ರ, ಡಾ.ಎಚ್.ವಿ.ನಾಗರಾಜರಾವ್ 
ಪ್ರಕಾಶಕರು: ಸಂವಹನ, ಮೈಸೂರು
ಬೆಲೆ:ರೂ.೧೩೦/-
ಮೊದಲ ಮುದ್ರಣ:೨೦೧೪
ಪುಟಗಳು:೧೬೮

ಶುಕ್ರವಾರ, ಜೂನ್ 30, 2023

ಸಂಸ್ಕೃತ ಪ್ರಹೇಲಿಕೆಗಳು (ಒಗಟುಗಳು)

ಸಂಸ್ಕೃತ ಸಾಹಿತ್ಯ ಒಂದು ಅಮೋಘ ಸಮುದ್ರ! ಅಲ್ಲಿ ಇಲ್ಲದುದು ಇಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ! ಸಂಸ್ಕೃತ ಸಾಹಿತ್ಯದಲ್ಲಿ ಕಥೆ, ಕಾವ್ಯ,ವೇದ, ಪುರಾಣಗಳಷ್ಟೇ ಅಲ್ಲದೇ ಆಯುರ್ವೇದ, ಖಗೋಳಶಾಸ್ತ್ರ, ಮೊದಲಾದ ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದ ಅನೇಕ ಗ್ರಂಥಗಳಿವೆ! ಇವಲ್ಲದೇ ಸಂಗೀತಾದಿ ಕಲೆಗಳಿಗೆ ಸಂಬಂಧಿಸಿದ ಗ್ರಂಥಗಳೂ ಇವೆ! ಕಲೆಗಳು ಎಂದಾಗ ನೆನಪಿಗೆ ಬರುವ ಒಂದು ಕಲೆ ಎಂದರೆ ಪ್ರಹೇಲಿಕಾ.ವಾತ್ಸ್ಯಾಯನ ಮಹರ್ಷಿಯ ಕಾಮಸೂತ್ರದಲ್ಲಿ ಹೇಳಲಾಗಿರುವ ಅರವತ್ತು ನಾಲ್ಕು ಕಲೆಗಳಲ್ಲಿ ಪ್ರಹೇಲಿಕಾ ಕೂಡ ಒಂದು.ಪ್ರಹೇಲಿಕಾ ಎಂದರೆ ಒಗಟು.ಒಗಟು ಕಟ್ಟಿ ಒಬ್ಬರನ್ನೊಬ್ಬರು ಕೇಳುವುದು, ಉತ್ತರಿಸುವುದು, ಬಹಳ ಸ್ವಾರಸ್ಯಕರವಾದ ಹಳೆಯ ಆಟ.ಹಳ್ಳಿಗಳಲ್ಲಿ ಇದು ಇಂದಿಗೂ ಜನಪ್ರಿಯ.ಇದೊಂದು ಸಾಹಿತ್ಯಿಕ, ಮನೋಪ್ರಚೋದಕ, ಹಾಗೂ ಮನರಂಜನಾತ್ಮಕ ಕ್ರೀಡೆ.ದಾಸರ ಪದಗಳು, ಸರ್ವಜ್ಞ ಮತ್ತು ಅಲ್ಲಮಪ್ರಭುಗಳ ವಚನಗಳಲ್ಲಿ ಅನೇಕ ಒಗಟಿನ,ಬೆಡಗಿನ ಪದಗಳನ್ನು ಕಾಣಬಹುದು.ಚಿತ್ರಗೀತೆಗಳಲ್ಲೂ ಅನೇಕ ಒಗಟುಗಳನ್ನು ಅಳವಡಿಸಲಾಗಿದೆ.ಬೇತಾಳನ ಕಥೆಗಳು ಒಗಟಿನ ಕಥೆಗಳೇ ಆಗಿವೆ.ಎಲ್ಲ ಭಾಷೆಗಳಲ್ಲೂ ಒಗಟುಗಳಿವೆ.ಸಂಸ್ಕೃತದ ಮತ್ತು ಸಂಸ್ಕೃತದ ಆಡುಭಾಷೆಯಾದ ಪ್ರಾಕೃತದಲ್ಲಿನ ಪ್ರಹೇಲಿಕಾಗಳಿಂದ ಇವಕ್ಕೆ ಸಾಕಷ್ಟು ಸ್ಫೂರ್ತಿ ಸಿಕ್ಕಿದೆ.ಹಿಂದಿಯ ಪಹೇಲಿ ಎಂಬ ಪದ ಈ ಪ್ರಹೇಲಿಕಾದಿಂದಲೇ ಬಂದಿರಬಹುದು.ಸಂಸ್ಕೃತದಲ್ಲಿ ಹಲವಾರು ಪ್ರಹೇಲಿಕಾ ಶ್ಲೋಕಗಳಿವೆ.ನಾಗರಾಜನೆಂಬ ಕವಿ ಸಂಸ್ಕೃತದಲ್ಲಿ ನೂರು ಪ್ರಹೇಲಿಕಾ ಶ್ಲೋಕಗಳ ಭಾವಶತಕವೆಂಬ ಕಾವ್ಯವನ್ನು ರಚಿಸಿದ್ದಾನೆ. ಈಗ ಸಂಸ್ಕೃತದ ಕೆಲವು ಪ್ರಹೇಲಿಕಾಗಳನ್ನು ನೋಡೋಣ.
೧.ಅಪದೋ ದೂರಗಾಮೀ ಚ ಸಾಕ್ಷರೋ ನ ಚ ಪಂಡಿತ: ।
    ಅಮುಖ: ಸ್ಫುಟವಕ್ತಾ ಚ ಯೋ ಜಾನಾತಿ ಸ ಪಂಡಿತ:।।
   'ಕಾಲಿಲ್ಲದಿದ್ದರೂ ದೂರ ಹೋಗುತ್ತದೆ.ಅಕ್ಷರಗಳುಳ್ಳದ್ದಾದರೂ ಪಂಡಿತನಲ್ಲ.ಮುಖವಿಲ್ಲದಿದ್ದರೂ ಸ್ಪಷ್ಟವಾಗಿ ಮಾತನಾಡುತ್ತದೆ.ಇದನ್ನು ತಿಳಿದವನು ಪಂಡಿತನು!'
ಉತ್ತರ: ಲೇಖಪತ್ರಂ ; ಬರೆದಿರುವ ಕಾಗದ; ಪತ್ರ
೨.ವನೇ ಜಾತಾ ವನೇ ತ್ಯಕ್ತಾ ವನೇ ತಿಷ್ಠತಿ ನಿತ್ಯಶ:।
    ಪಣ್ಯಸ್ತ್ರೀ ನ ತು ಸಾ ವೇಶ್ಯಾ ಯೋ ಜಾನಾತಿ ಸ ಪಂಡಿತ:।।
       'ವನದಲ್ಲಿ ಹುಟ್ಟಿ, ವನದಲ್ಲಿ ತ್ಯಜಿಸಲ್ಪಡುವ, ವನದಲ್ಲೇ ಸದಾ ನಿಲ್ಲುವ ಇದು, ಹಣ ಕೊಟ್ಟು ಅನುಭವಸುವ ಸ್ತ್ರೀ, ಆದರೆ ವೇಶ್ಯೆಯಲ್ಲ. ಇದನ್ನು ಬಲ್ಲವನು ಪಂಡಿತನು.'
ಉತ್ತರ: ನೌಕಾ, ಅಂದರೆ ದೋಣಿ; ಸಂಸ್ಕೃತದಲ್ಲಿ ನೌಕಾ ಸ್ತ್ರೀಲಿಂಗ ಶಬ್ದ.ದುಡ್ಡು ಕೊಟ್ಟು ದೋಣಿ ಪ್ರಯಾಣ ಮಾಡಬೇಕಾದುದರಿಂದ 'ಪಣ್ಯಸ್ತ್ರೀ ನ ತು ವೇಶ್ಯಾ ' ಎಂದು ಹೇಳಿದ್ದಾರೆ.'ವನೇ ಜಾತಾ' ಎಂದರೆ ಕಾಡಿನಲ್ಲಿ ಹುಟ್ಟಿದ್ದು -ಅಂದರೆ ಮೊದಲು ಮರದ ರೂಪದಲ್ಲಿ; ಆ ಮರವನ್ನೇ ಕಡಿದು ದೋಣಿ ಮಾಡಿದ್ದಾರೆ.ವನ ಎಂಬ ಸಂಸ್ಕೃತ ಪದಕ್ಕೆ ನೀರು ಎಂಬ ಅರ್ಥವೂ ಇದೆ.ಹಾಗಾಗಿ, 'ವನೇ ತ್ಯಕ್ತಾ' ಎಂದರೆ ನೀರಿನಲ್ಲಿ ಬಿಟ್ಟಿದ್ದು ಎಂದು ಅರ್ಥ.'ವನೇ ತಿಷ್ಠತಿ ನಿತ್ಯಶ:' ಅಂದರೆ, ಸದಾ ನೀರಿನಲ್ಲೇ ಇರುತ್ತದೆ ಎಂದು ಅರ್ಥ.
೩.ಗೋಪಾಲೋ ನೈವ ಗೋಪಾಲಸ್ತ್ರಿಶೂಲೀ ನೈವ ಶಂಕರ:।
ಚಕ್ರಪಾಣಿ: ಸ ನೋ ವಿಷ್ಣುರ್ಯೋ ಜಾನಾತಿ ಸ ಪಂಡಿತ: ।।
    'ಗೋವುಗಳ ಪಾಲಕ, ಆದರೆ ಕೃಷ್ಣನಲ್ಲ (ಗೋಪಾಲ, ಆದರೆ ಗೋಪಾಲನಲ್ಲ); ತ್ರಿಶೂಲವುಳ್ಳವನು, ಆದರೆ ಶಿವನಲ್ಲ; ಚಕ್ರ ಧರಿಸಿರುವವನು, ಆದರೆ ವಿಷ್ಣುವಲ್ಲ; ಇದನ್ನು ತಿಳಿದವನು ಪಂಡಿತನು!'
ಉತ್ತರ: ಮಹೋಕ್ಷ; ಅಂದರೆ ಮಹಾನ್ ಎತ್ತು; ದೊಡ್ಡ, ಬಲಿಷ್ಠ ಎತ್ತು; ಗೋವುಗಳ ಪತಿಯಾದುದರಿಂದ ಗೋಪಾಲ, ಆದರೆ ಗೋಪಾಲನಾದ ಕೃಷ್ಣನಲ್ಲ. ಕಾದಿರುವ ತ್ರಿಶೂಲದಿಂದ ಮುದ್ರೆಯೊತ್ತಿ ತ್ರಿಶೂಲದ ಚಿಹ್ನೆ ಮೂಡಿಸುವುದರಿಂದ ತ್ರಿಶೂಲವುಳ್ಳವನು.ಆದರೆ ತ್ರಿಶೂಲವುಳ್ಳ ಶಿವನಲ್ಲ.ಕಾದಿರುವ ಚಕ್ರದಿಂದ ಮುಂಗಾಲುಗಳ ಮೇಲೆ ಬರೆಯೆಳೆದು ಚಕ್ರದ ಚಿಹ್ನೆ ಮೂಡಿಸುವುದರಿಂದ ಚಕ್ರಪಾಣಿ.ಆದರೆ ಚಕ್ರವುಳ್ಳ ವಿಷ್ಣುವಲ್ಲ.
     ಬಹುಶಃ ಹಿಂದೆ ಈ ರೀತಿ ಚಿಹ್ನೆಗಳನ್ನು ಮಾಡುತ್ತಿದ್ದಿರಬಹುದು, ಹಾಗೂ ಕೆಲವೆಡೆ ಈಗಲೂ ಹೀಗೆ ಮಾಡಬಹುದು.
೪.ಉಚ್ಛಿಷ್ಟಂ ಶಿವನಿರ್ಮಾಲ್ಯಂ ವಮನಂ ಶವಕರ್ಪಟಮ್ ।
ಕಾಕವಿಷ್ಠಾಸಮುತ್ಪನ್ನ: ಪಂಚೈತೇsತಿಪವಿತ್ರಕಾ:।।
      'ಉಚ್ಛಿಷ್ಟ (ಎಂಜಲು), ಶಿವನಿರ್ಮಾಲ್ಯ (ಶಿವನ ತಲೆಯಿಂದ ಉದುರಿದುದು; ಧರಿಸಿ ಬಿಟ್ಟಿದುದು), ವಾಂತಿ, ಶವದ ಮೇಲಿನ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದುದು, ಈ ಐದೂ ಅತಿ ಪವಿತ್ರವಾದ ವಸ್ತುಗಳು!' 
ಉತ್ತರ:೧. ಹಾಲು (ಕರುವು ಮೊದಲು ಹಸುವಿನ ಹಾಲನ್ನು ಕುಡಿದು, ಉಳಿದ ಹಾಲನ್ನು ನಾವು ತೆಗೆದುಕೊಳ್ಳುವುದರಿಂದ ಎಂಜಲು), ೨.ಗಂಗೆ (ಶಿವನ ತಲೆಯ ಮೇಲಿನಿಂದ ಬೀಳುವುದರಿಂದ ಶಿವನಿರ್ಮಾಲ್ಯ), ೩.ಮಧು ಅಥವಾ ಜೇನುತುಪ್ಪ (ಜೇನ್ನೊಣಗಳು ವಿವಿಧ ಪುಷ್ಪಗಳಿಂದ ರಸವನ್ನು ಹೀರಿ ತಮ್ಮ ವಿಶೇಷ ಜಠರದಲ್ಲಿ ಮಧುವನ್ನಾಗಿ ಪರಿವರ್ತಿಸಿ ವಾಂತಿ ಮಾಡುವುದರಿಂದ ವಾಂತಿ), ೪.ಪಟ್ಟಾಂಬರ ಅಥವಾ ರೇಷ್ಮೆ ವಸ್ತ್ರ (ರೇಷ್ಮೆ ಹುಳು ಗೂಡು ಕಟ್ಟಿದ ಬಳಿಕ, ಆ ಗೂಡುಗಳನ್ನು ಬಿಸಿ ನೀರಿನಲ್ಲಿ ನೆನೆಸಿ ರೇಷ್ಮೆ ದಾರ ತೆಗೆಯುವುದರಿಂದ ಹೆಣದ ಮೇಲಿನ ಬಟ್ಟೆ), ೫.ಪಿಪ್ಪಲ ವೃಕ್ಷ ಅಥವಾ ಅರಳೀಮರ (ಕಾಗೆಯು ಅರಳೀ ಹಣ್ಣನ್ನು ತಿಂದಾಗ ಅದರ ಬೀಜ ಅರಗದೇ , ಕಾಗೆಯ ಮಲದಲ್ಲಿ ವಿಸರ್ಜನೆಗೊಂಡು ಅವುಗಳಿಂದ ಅರಳೀಮರ ಹುಟ್ಟುತ್ತದೆ; ಹಾಗಾಗಿ, ಕಾಗೆಯ ಮಲದಿಂದ ಹುಟ್ಟಿದುದು).
      ಹೀಗೆ ಈ ಐದು ವಸ್ತುಗಳು ಪೂಜೆಯಲ್ಲಿ ಬಳಕೆಗೊಂಡು ಅತಿ ಪವಿತ್ರವೆನಿಸಿವೆ!
೫.ತರುಣ್ಯಾಲಿಂಗಿತ: ಕಂಠೇ ನಿತಂಬಸ್ಥಲಮಾಶ್ರಿತ:।
    ಗುರೂಣಾಂ ಸನ್ನಿಧಾನೇsಪಿ ಕ: ಕೂಜತಿ ಮುಹುರ್ಮುಹು:।।
         'ಕಂಠವು ಹೆಣ್ಣಿನಿಂದ ಆಲಿಂಗಿಸಲ್ಪಟ್ಟು, ಅವಳ ಸೊಂಟದ ಪ್ರದೇಶದಲ್ಲಿ ಕುಳಿತು, ಹಿರಿಯರ ‌ಸನ್ನಿಧಾನದಲ್ಲೂ ಮತ್ತೆ ಮತ್ತೆ ಕೂಗುವರಾರು '
ಉತ್ತರ: ಕಲಶ, ಅಥವಾ ಕೊಡ, ಅಂದರೆ ಬಿಂದಿಗೆ; ಹೆಂಗಸರು ನೀರು ತುಂಬಿರುವ ಬಿಂದಿಗೆಯನ್ನು ತಮ್ಮ ಸೊಂಟದಲ್ಲಿಟ್ಟು ತರುವುದರಿಂದ 'ನಿತಂಬಸ್ಥಲಮಾಶ್ರಿತ:' ಎಂದು ಹೇಳಲಾಗಿದೆ.ಅಂತೆಯೇ ಬಿಂದಿಗೆಯ ಕಂಠವನ್ನು ಅವರು ತೋಳಿನಿಂದ ಆಲಿಂಗಿಸಿಕೊಳ್ಳುವುದರಿಂದ 'ತರುಣ್ಯಾಲಿಂಗಿತ: ಕಂಠೇ' ಎಂದು ಹೇಳಲಾಗಿದೆ.ದೊಡ್ಡವರು, ಚಿಕ್ಕವರೆನ್ನದೇ ಎಲ್ಲರ ಮುಂದೆಯೂ ನೀರು ತುಳುಕುತ್ತಾ ಶಬ್ದ ಮಾಡುವುದರಿಂದ, 'ಗುರೂಣಾಂ ಸನ್ನಿಧಾನೇsಪಿ ಕೂಜತಿ ಮುಹುರ್ಮುಹು:' ಎಂದು ಹೇಳಲಾಗಿದೆ.ಹೀಗೆಲ್ಲಾ ಮಾಡುವುದು ಯಾರು ಎಂದು ಪ್ರಶ್ನೆ.ಅದು ಬಿಂದಿಗೆ! ಮೇಲ್ನೋಟಕ್ಕೆ ಗಂಡು, ಹೆಣ್ಣುಗಳ ಸಮಾಗಮವನ್ನು ಸೂಚಿಸುವ ಈ ಒಗಟು, ಬಿಡಿಸಿದಾಗ ಬಿಂದಿಗೆ ಎಂದು ತಿಳಿದುಬರುವುದಾಗಿದ್ದು, ಬಹಳ ಸ್ವಾರಸ್ಯಕರವಾಗಿದೆ.
                           ಡಾ.ಬಿ.ಆರ್.ಸುಹಾಸ್