ಸಂಸ್ಕೃತ ಸಾಹಿತ್ಯ ಒಂದು ಅಮೋಘ ಸಮುದ್ರ! ಅಲ್ಲಿ ಇಲ್ಲದುದು ಇಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ! ಸಂಸ್ಕೃತ ಸಾಹಿತ್ಯದಲ್ಲಿ ಕಥೆ, ಕಾವ್ಯ,ವೇದ, ಪುರಾಣಗಳಷ್ಟೇ ಅಲ್ಲದೇ ಆಯುರ್ವೇದ, ಖಗೋಳಶಾಸ್ತ್ರ, ಮೊದಲಾದ ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದ ಅನೇಕ ಗ್ರಂಥಗಳಿವೆ! ಇವಲ್ಲದೇ ಸಂಗೀತಾದಿ ಕಲೆಗಳಿಗೆ ಸಂಬಂಧಿಸಿದ ಗ್ರಂಥಗಳೂ ಇವೆ! ಕಲೆಗಳು ಎಂದಾಗ ನೆನಪಿಗೆ ಬರುವ ಒಂದು ಕಲೆ ಎಂದರೆ ಪ್ರಹೇಲಿಕಾ.ವಾತ್ಸ್ಯಾಯನ ಮಹರ್ಷಿಯ ಕಾಮಸೂತ್ರದಲ್ಲಿ ಹೇಳಲಾಗಿರುವ ಅರವತ್ತು ನಾಲ್ಕು ಕಲೆಗಳಲ್ಲಿ ಪ್ರಹೇಲಿಕಾ ಕೂಡ ಒಂದು.ಪ್ರಹೇಲಿಕಾ ಎಂದರೆ ಒಗಟು.ಒಗಟು ಕಟ್ಟಿ ಒಬ್ಬರನ್ನೊಬ್ಬರು ಕೇಳುವುದು, ಉತ್ತರಿಸುವುದು, ಬಹಳ ಸ್ವಾರಸ್ಯಕರವಾದ ಹಳೆಯ ಆಟ.ಹಳ್ಳಿಗಳಲ್ಲಿ ಇದು ಇಂದಿಗೂ ಜನಪ್ರಿಯ.ಇದೊಂದು ಸಾಹಿತ್ಯಿಕ, ಮನೋಪ್ರಚೋದಕ, ಹಾಗೂ ಮನರಂಜನಾತ್ಮಕ ಕ್ರೀಡೆ.ದಾಸರ ಪದಗಳು, ಸರ್ವಜ್ಞ ಮತ್ತು ಅಲ್ಲಮಪ್ರಭುಗಳ ವಚನಗಳಲ್ಲಿ ಅನೇಕ ಒಗಟಿನ,ಬೆಡಗಿನ ಪದಗಳನ್ನು ಕಾಣಬಹುದು.ಚಿತ್ರಗೀತೆಗಳಲ್ಲೂ ಅನೇಕ ಒಗಟುಗಳನ್ನು ಅಳವಡಿಸಲಾಗಿದೆ.ಬೇತಾಳನ ಕಥೆಗಳು ಒಗಟಿನ ಕಥೆಗಳೇ ಆಗಿವೆ.ಎಲ್ಲ ಭಾಷೆಗಳಲ್ಲೂ ಒಗಟುಗಳಿವೆ.ಸಂಸ್ಕೃತದ ಮತ್ತು ಸಂಸ್ಕೃತದ ಆಡುಭಾಷೆಯಾದ ಪ್ರಾಕೃತದಲ್ಲಿನ ಪ್ರಹೇಲಿಕಾಗಳಿಂದ ಇವಕ್ಕೆ ಸಾಕಷ್ಟು ಸ್ಫೂರ್ತಿ ಸಿಕ್ಕಿದೆ.ಹಿಂದಿಯ ಪಹೇಲಿ ಎಂಬ ಪದ ಈ ಪ್ರಹೇಲಿಕಾದಿಂದಲೇ ಬಂದಿರಬಹುದು.ಸಂಸ್ಕೃತದಲ್ಲಿ ಹಲವಾರು ಪ್ರಹೇಲಿಕಾ ಶ್ಲೋಕಗಳಿವೆ.ನಾಗರಾಜನೆಂಬ ಕವಿ ಸಂಸ್ಕೃತದಲ್ಲಿ ನೂರು ಪ್ರಹೇಲಿಕಾ ಶ್ಲೋಕಗಳ ಭಾವಶತಕವೆಂಬ ಕಾವ್ಯವನ್ನು ರಚಿಸಿದ್ದಾನೆ. ಈಗ ಸಂಸ್ಕೃತದ ಕೆಲವು ಪ್ರಹೇಲಿಕಾಗಳನ್ನು ನೋಡೋಣ.
೧.ಅಪದೋ ದೂರಗಾಮೀ ಚ ಸಾಕ್ಷರೋ ನ ಚ ಪಂಡಿತ: ।
ಅಮುಖ: ಸ್ಫುಟವಕ್ತಾ ಚ ಯೋ ಜಾನಾತಿ ಸ ಪಂಡಿತ:।।
'ಕಾಲಿಲ್ಲದಿದ್ದರೂ ದೂರ ಹೋಗುತ್ತದೆ.ಅಕ್ಷರಗಳುಳ್ಳದ್ದಾದರೂ ಪಂಡಿತನಲ್ಲ.ಮುಖವಿಲ್ಲದಿದ್ದರೂ ಸ್ಪಷ್ಟವಾಗಿ ಮಾತನಾಡುತ್ತದೆ.ಇದನ್ನು ತಿಳಿದವನು ಪಂಡಿತನು!'
ಉತ್ತರ: ಲೇಖಪತ್ರಂ ; ಬರೆದಿರುವ ಕಾಗದ; ಪತ್ರ
೨.ವನೇ ಜಾತಾ ವನೇ ತ್ಯಕ್ತಾ ವನೇ ತಿಷ್ಠತಿ ನಿತ್ಯಶ:।
ಪಣ್ಯಸ್ತ್ರೀ ನ ತು ಸಾ ವೇಶ್ಯಾ ಯೋ ಜಾನಾತಿ ಸ ಪಂಡಿತ:।।
'ವನದಲ್ಲಿ ಹುಟ್ಟಿ, ವನದಲ್ಲಿ ತ್ಯಜಿಸಲ್ಪಡುವ, ವನದಲ್ಲೇ ಸದಾ ನಿಲ್ಲುವ ಇದು, ಹಣ ಕೊಟ್ಟು ಅನುಭವಸುವ ಸ್ತ್ರೀ, ಆದರೆ ವೇಶ್ಯೆಯಲ್ಲ. ಇದನ್ನು ಬಲ್ಲವನು ಪಂಡಿತನು.'
ಉತ್ತರ: ನೌಕಾ, ಅಂದರೆ ದೋಣಿ; ಸಂಸ್ಕೃತದಲ್ಲಿ ನೌಕಾ ಸ್ತ್ರೀಲಿಂಗ ಶಬ್ದ.ದುಡ್ಡು ಕೊಟ್ಟು ದೋಣಿ ಪ್ರಯಾಣ ಮಾಡಬೇಕಾದುದರಿಂದ 'ಪಣ್ಯಸ್ತ್ರೀ ನ ತು ವೇಶ್ಯಾ ' ಎಂದು ಹೇಳಿದ್ದಾರೆ.'ವನೇ ಜಾತಾ' ಎಂದರೆ ಕಾಡಿನಲ್ಲಿ ಹುಟ್ಟಿದ್ದು -ಅಂದರೆ ಮೊದಲು ಮರದ ರೂಪದಲ್ಲಿ; ಆ ಮರವನ್ನೇ ಕಡಿದು ದೋಣಿ ಮಾಡಿದ್ದಾರೆ.ವನ ಎಂಬ ಸಂಸ್ಕೃತ ಪದಕ್ಕೆ ನೀರು ಎಂಬ ಅರ್ಥವೂ ಇದೆ.ಹಾಗಾಗಿ, 'ವನೇ ತ್ಯಕ್ತಾ' ಎಂದರೆ ನೀರಿನಲ್ಲಿ ಬಿಟ್ಟಿದ್ದು ಎಂದು ಅರ್ಥ.'ವನೇ ತಿಷ್ಠತಿ ನಿತ್ಯಶ:' ಅಂದರೆ, ಸದಾ ನೀರಿನಲ್ಲೇ ಇರುತ್ತದೆ ಎಂದು ಅರ್ಥ.
೩.ಗೋಪಾಲೋ ನೈವ ಗೋಪಾಲಸ್ತ್ರಿಶೂಲೀ ನೈವ ಶಂಕರ:।
ಚಕ್ರಪಾಣಿ: ಸ ನೋ ವಿಷ್ಣುರ್ಯೋ ಜಾನಾತಿ ಸ ಪಂಡಿತ: ।।
'ಗೋವುಗಳ ಪಾಲಕ, ಆದರೆ ಕೃಷ್ಣನಲ್ಲ (ಗೋಪಾಲ, ಆದರೆ ಗೋಪಾಲನಲ್ಲ); ತ್ರಿಶೂಲವುಳ್ಳವನು, ಆದರೆ ಶಿವನಲ್ಲ; ಚಕ್ರ ಧರಿಸಿರುವವನು, ಆದರೆ ವಿಷ್ಣುವಲ್ಲ; ಇದನ್ನು ತಿಳಿದವನು ಪಂಡಿತನು!'
ಉತ್ತರ: ಮಹೋಕ್ಷ; ಅಂದರೆ ಮಹಾನ್ ಎತ್ತು; ದೊಡ್ಡ, ಬಲಿಷ್ಠ ಎತ್ತು; ಗೋವುಗಳ ಪತಿಯಾದುದರಿಂದ ಗೋಪಾಲ, ಆದರೆ ಗೋಪಾಲನಾದ ಕೃಷ್ಣನಲ್ಲ. ಕಾದಿರುವ ತ್ರಿಶೂಲದಿಂದ ಮುದ್ರೆಯೊತ್ತಿ ತ್ರಿಶೂಲದ ಚಿಹ್ನೆ ಮೂಡಿಸುವುದರಿಂದ ತ್ರಿಶೂಲವುಳ್ಳವನು.ಆದರೆ ತ್ರಿಶೂಲವುಳ್ಳ ಶಿವನಲ್ಲ.ಕಾದಿರುವ ಚಕ್ರದಿಂದ ಮುಂಗಾಲುಗಳ ಮೇಲೆ ಬರೆಯೆಳೆದು ಚಕ್ರದ ಚಿಹ್ನೆ ಮೂಡಿಸುವುದರಿಂದ ಚಕ್ರಪಾಣಿ.ಆದರೆ ಚಕ್ರವುಳ್ಳ ವಿಷ್ಣುವಲ್ಲ.
ಬಹುಶಃ ಹಿಂದೆ ಈ ರೀತಿ ಚಿಹ್ನೆಗಳನ್ನು ಮಾಡುತ್ತಿದ್ದಿರಬಹುದು, ಹಾಗೂ ಕೆಲವೆಡೆ ಈಗಲೂ ಹೀಗೆ ಮಾಡಬಹುದು.
೪.ಉಚ್ಛಿಷ್ಟಂ ಶಿವನಿರ್ಮಾಲ್ಯಂ ವಮನಂ ಶವಕರ್ಪಟಮ್ ।
ಕಾಕವಿಷ್ಠಾಸಮುತ್ಪನ್ನ: ಪಂಚೈತೇsತಿಪವಿತ್ರಕಾ:।।
'ಉಚ್ಛಿಷ್ಟ (ಎಂಜಲು), ಶಿವನಿರ್ಮಾಲ್ಯ (ಶಿವನ ತಲೆಯಿಂದ ಉದುರಿದುದು; ಧರಿಸಿ ಬಿಟ್ಟಿದುದು), ವಾಂತಿ, ಶವದ ಮೇಲಿನ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದುದು, ಈ ಐದೂ ಅತಿ ಪವಿತ್ರವಾದ ವಸ್ತುಗಳು!'
ಉತ್ತರ:೧. ಹಾಲು (ಕರುವು ಮೊದಲು ಹಸುವಿನ ಹಾಲನ್ನು ಕುಡಿದು, ಉಳಿದ ಹಾಲನ್ನು ನಾವು ತೆಗೆದುಕೊಳ್ಳುವುದರಿಂದ ಎಂಜಲು), ೨.ಗಂಗೆ (ಶಿವನ ತಲೆಯ ಮೇಲಿನಿಂದ ಬೀಳುವುದರಿಂದ ಶಿವನಿರ್ಮಾಲ್ಯ), ೩.ಮಧು ಅಥವಾ ಜೇನುತುಪ್ಪ (ಜೇನ್ನೊಣಗಳು ವಿವಿಧ ಪುಷ್ಪಗಳಿಂದ ರಸವನ್ನು ಹೀರಿ ತಮ್ಮ ವಿಶೇಷ ಜಠರದಲ್ಲಿ ಮಧುವನ್ನಾಗಿ ಪರಿವರ್ತಿಸಿ ವಾಂತಿ ಮಾಡುವುದರಿಂದ ವಾಂತಿ), ೪.ಪಟ್ಟಾಂಬರ ಅಥವಾ ರೇಷ್ಮೆ ವಸ್ತ್ರ (ರೇಷ್ಮೆ ಹುಳು ಗೂಡು ಕಟ್ಟಿದ ಬಳಿಕ, ಆ ಗೂಡುಗಳನ್ನು ಬಿಸಿ ನೀರಿನಲ್ಲಿ ನೆನೆಸಿ ರೇಷ್ಮೆ ದಾರ ತೆಗೆಯುವುದರಿಂದ ಹೆಣದ ಮೇಲಿನ ಬಟ್ಟೆ), ೫.ಪಿಪ್ಪಲ ವೃಕ್ಷ ಅಥವಾ ಅರಳೀಮರ (ಕಾಗೆಯು ಅರಳೀ ಹಣ್ಣನ್ನು ತಿಂದಾಗ ಅದರ ಬೀಜ ಅರಗದೇ , ಕಾಗೆಯ ಮಲದಲ್ಲಿ ವಿಸರ್ಜನೆಗೊಂಡು ಅವುಗಳಿಂದ ಅರಳೀಮರ ಹುಟ್ಟುತ್ತದೆ; ಹಾಗಾಗಿ, ಕಾಗೆಯ ಮಲದಿಂದ ಹುಟ್ಟಿದುದು).
ಹೀಗೆ ಈ ಐದು ವಸ್ತುಗಳು ಪೂಜೆಯಲ್ಲಿ ಬಳಕೆಗೊಂಡು ಅತಿ ಪವಿತ್ರವೆನಿಸಿವೆ!
೫.ತರುಣ್ಯಾಲಿಂಗಿತ: ಕಂಠೇ ನಿತಂಬಸ್ಥಲಮಾಶ್ರಿತ:।
ಗುರೂಣಾಂ ಸನ್ನಿಧಾನೇsಪಿ ಕ: ಕೂಜತಿ ಮುಹುರ್ಮುಹು:।।
'ಕಂಠವು ಹೆಣ್ಣಿನಿಂದ ಆಲಿಂಗಿಸಲ್ಪಟ್ಟು, ಅವಳ ಸೊಂಟದ ಪ್ರದೇಶದಲ್ಲಿ ಕುಳಿತು, ಹಿರಿಯರ ಸನ್ನಿಧಾನದಲ್ಲೂ ಮತ್ತೆ ಮತ್ತೆ ಕೂಗುವರಾರು '
ಉತ್ತರ: ಕಲಶ, ಅಥವಾ ಕೊಡ, ಅಂದರೆ ಬಿಂದಿಗೆ; ಹೆಂಗಸರು ನೀರು ತುಂಬಿರುವ ಬಿಂದಿಗೆಯನ್ನು ತಮ್ಮ ಸೊಂಟದಲ್ಲಿಟ್ಟು ತರುವುದರಿಂದ 'ನಿತಂಬಸ್ಥಲಮಾಶ್ರಿತ:' ಎಂದು ಹೇಳಲಾಗಿದೆ.ಅಂತೆಯೇ ಬಿಂದಿಗೆಯ ಕಂಠವನ್ನು ಅವರು ತೋಳಿನಿಂದ ಆಲಿಂಗಿಸಿಕೊಳ್ಳುವುದರಿಂದ 'ತರುಣ್ಯಾಲಿಂಗಿತ: ಕಂಠೇ' ಎಂದು ಹೇಳಲಾಗಿದೆ.ದೊಡ್ಡವರು, ಚಿಕ್ಕವರೆನ್ನದೇ ಎಲ್ಲರ ಮುಂದೆಯೂ ನೀರು ತುಳುಕುತ್ತಾ ಶಬ್ದ ಮಾಡುವುದರಿಂದ, 'ಗುರೂಣಾಂ ಸನ್ನಿಧಾನೇsಪಿ ಕೂಜತಿ ಮುಹುರ್ಮುಹು:' ಎಂದು ಹೇಳಲಾಗಿದೆ.ಹೀಗೆಲ್ಲಾ ಮಾಡುವುದು ಯಾರು ಎಂದು ಪ್ರಶ್ನೆ.ಅದು ಬಿಂದಿಗೆ! ಮೇಲ್ನೋಟಕ್ಕೆ ಗಂಡು, ಹೆಣ್ಣುಗಳ ಸಮಾಗಮವನ್ನು ಸೂಚಿಸುವ ಈ ಒಗಟು, ಬಿಡಿಸಿದಾಗ ಬಿಂದಿಗೆ ಎಂದು ತಿಳಿದುಬರುವುದಾಗಿದ್ದು, ಬಹಳ ಸ್ವಾರಸ್ಯಕರವಾಗಿದೆ.
ಡಾ.ಬಿ.ಆರ್.ಸುಹಾಸ್