ಶುಕ್ರವಾರ, ಫೆಬ್ರವರಿ 12, 2021

ಜೈನ ಕಥೆಗಳು-ದುರಾಸೆಯ ಫಲ

 ಒಂದು ಹಳ್ಳಿಯಲ್ಲಿ ಇಬ್ಬರು ವರ್ತಕ ಸಹೋದರರಿದ್ದರು.ಅವರು ಬಹಳ ಬಡತನದಲ್ಲಿದ್ದರು.ತಮ್ಮ ಅದೃಷ್ಟ ಪರೀಕ್ಷೆ ಮಾಡಲೆಂದು ಅವರಿಬ್ಬರೂ ವ್ಯಾಪಾರಕ್ಕೆ ಸೌರಾಷ್ಟ್ರಕ್ಕೆ ಹೋದರು.ಅಲ್ಲಿ ಅವರು ಸಾಕಷ್ಟು ಹಣ ಸಂಪಾದಿಸಿದರು.ಆ ಹಣವನ್ನು ಅವರು ಒಂದು ಚೀಲದಲ್ಲಿ ಹಾಕಿಕೊಂಡು, ಮನೆಗೆ ಹೋಗುವಾಗ ಸರದಿಯಂತೆ ಅದನ್ನು ಎತ್ತಿಕೊಂಡು ಹೋದರು.ಒಬ್ಬನು ಅದನ್ನು ಹಿಡಿದುಕೊಂಡಿದ್ದಾಗ, ಇನ್ನೊಬ್ಬನು ಅವನನ್ನು ಕೊಂದು ಅಷ್ಟೂ ಹಣವನ್ನು ತಾನೊಬ್ಬನೇ ಪಡೆದುಕೊಳ್ಳಬೇಕೆಂದು ಯೋಚಿಸುತ್ತಿದ್ದನು! ಆದರೆ ಇಬ್ಬರಿಗೂ ಕೊಲೆ ಮಾಡುವಷ್ಟು ಧೈರ್ಯ ಇರಲಿಲ್ಲ.ಅಂತೂ ಹೀಗೆ ಇಬ್ಬರೂ ತಮ್ಮ ಹಳ್ಳಿಯನ್ನು ತಲುಪಿದರು.ಹಳ್ಳಿಯ ಹೊರಗಿನ ಒಂದು ನದಿಯ ದಂಡೆಯಲ್ಲಿ ಇಬ್ಬರೂ ಕುಳಿತಿದ್ದಾಗ,ಕಿರಿಯನು ತನ್ನ ದುರಾಲೋಚನೆಗೆ ಪಶ್ಚಾತ್ತಾಪಪಡುತ್ತಾ ಅತ್ತುಬಿಟ್ಟೆನು! ಆಗ ಹಿರಿಯನು ಅವನೇಕೆ ಹಾಗೆ ಅಳುತ್ತಿದ್ದನೆಂದು ಕೇಳಲು, ಅವನು ತಾನು ಹಿರಿಯನನ್ನು ಕೊಲ್ಲುವ ಆಲೋಚನೆ ಮಾಡಿದ್ದೆನೆಂದು ಹೇಳಿದನು.ಆಗ ಹಿರಿಯನು ತಾನೂ ಅಂಥ ಆಲೋಚನೆ ಮಾಡಿದ್ದೆನೆಂದು ಹೇಳಿಕೊಂಡು ಪಶ್ಚಾತ್ತಾಪಪಟ್ಟನು.ಹಣದ ಚೀಲವೇ ತಮ್ಮ ಈ ದುಷ್ಟ ಆಲೋಚನೆಗೆ ಕಾರಣವೆಂದು ಅವರಿಬ್ಬರೂ ಕಂಡುಕೊಂಡು ಅದನ್ನು ಆ ನದಿಯಲ್ಲಿ ಎಸೆದುಬಿಟ್ಟರು! ಅನಂತರ ಅವರು ತಮ್ಮ ಮನೆಗೆ ಹೋದರು.ಆಗ ಆ ವೇದಿಕೆಯಲ್ಲಿದ್ದ ಒಂದು ದೊಡ್ಡ ಮೀನು ಆ ಹಣದ ಚೀಲವನ್ನು ನುಂಗಿತು! ಅನಂತರ, ಒಬ್ಬ ಬೆಸ್ತನು ಆ ಮೀನನ್ನು ಹಿಡಿದು, ಅದನ್ನು ಮಾರಲು ಮಾರುಕಟ್ಟೆಗೆ ತಂದನು.ಆಗ ಆ ಇಬ್ಬರು ವರ್ತಕಸಹೋದರರ ತಾಯಿಗೆ ತನ್ನ ಮಕ್ಕಳು ಮನೆಗೆ ಬಂದುದರಿಂದ ಒಳ್ಳೆಯ ಅಡುಗೆ ಮಾಡಿ ಸಂಭ್ರಮದಿಂದ ಭೋಜನ ಮಾಡಬೇಕೆಂದು ಆಸೆಯಾಯಿತು! ಹಾಗಾಗಿ ಅವಳು ತನ್ನ ಮಗಳನ್ನು ಮೀನು ತರಲು ಮಾರುಕಟ್ಟೆಗೆ ಕಳಿಸಿದಳು.ಅವಳು ಅದೇ ದೊಡ್ಡ ಮೀನನ್ನೇ ತಂದಳು! ಆಗ ಅದನ್ನು ಕೊಯ್ದ ಅಡುಗೆಯವಳಿಗೆ ಆ ಹಣದ  ಚೀಲ ಸಿಗಲು, ಅದನ್ನವಳು ಬಚ್ಚಿಡಲು ಯತ್ನಿಸಿದಳು.ಇದನ್ನು ಗಮನಿಸಿದ ಆ ವೃದ್ಧ ತಾಯಿಯು ಅಡುಗೆಯವಳನ್ನು ಅದೇನೆಂದು ಪ್ರಶ್ನಿಸಿದಳು.ಮಾತಿಗೆ ಮಾತು ಬೆಳೆದು ಇಬ್ಬರೂ ಹೊಡೆದಾಟಕ್ಕೆ ಮೊದಲು ಮಾಡಿದರು! ಆಗ ಅಡುಗೆಯವಳು ಮುದಿ ತಾಯಿಯ ಮರ್ಮಸ್ಥಾನಗಳಿಗೆ ಜೋರಾಗಿ ಹೊಡೆಯಲು, ಅವಳು ಕೂಡಲೇ ಸತ್ತುಬಿದ್ದಳು! ಆಗ ಅಲ್ಲಿಗೆ ಬಂದ ಇಬ್ಬರು ವರ್ತಕಸಹೋದರರು ನೋಡಲು ತಮ್ಮ ತಾಯಿಯು ಸತ್ತುಬಿದ್ದಿದ್ದಳು! ಅವಳ ಸನಿಹದಲ್ಲಿ ಹಣದ ಚೀಲ ಬಿದ್ದಿತ್ತು! ತಮ್ಮ ದುರಾಸೆಯೇ ಇದಕ್ಕೆಲ್ಲಾ ಕಾರಣವೆಂದು ಅವರಿಗೆ ಅರಿವಾಯಿತು.

                        ದಶವೈಕಾಲಿಕಸೂತ್ರನಿರ್ಯುಕ್ತಿಯ ಕಥೆ

ಜೈನ ಕಥೆಗಳು-ಯಾರ ಬಟ್ಟೆ ಯಾರದು?

 ಇಬ್ಬರು ವ್ಯಕ್ತಿಗಳಿದ್ದರು.ಒಬ್ಬನು ಹತ್ತಿಯ ಬಟ್ಟೆಗಳನ್ನು ಉಟ್ಟಿದ್ದರೆ,ಇನ್ನೊಬ್ಬನು ಉಣ್ಣೆಯ ಬಟ್ಟೆಗಳನ್ನುಟ್ಟಿದ್ದನು.ಒಮ್ಮೆ ಅವರಿಬ್ಬರೂ ಒಟ್ಟಿಗೆ ಬಂದು ನದಿಯಲ್ಲಿ ಸ್ನಾನ ಮಾಡಲು ಹೋದರು.ಅವರು ತಮ್ಮ ಬಟ್ಟೆಗಳನ್ನು ನದಿಯ ದಂಡೆಯ ಮೇಲೆ ಬಿಚ್ಚಿಟ್ಟು ನದಿಗೆ ಧುಮುಕಿದರು.ಸ್ನಾನದ ಬಳಿಕ, ಉಣ್ಣೆಯ ಬಟ್ಟೆಗಳನ್ನುಟ್ಟಿದ್ದವನು ತನ್ನ ಬಟ್ಟೆಗಳನ್ನುಟ್ಟಿದ್ದಲ್ಲದೇ ತನ್ನ ಸ್ನೇಹಿತನ ಹತ್ತಿ ಬಟ್ಟೆಗಳನ್ನೂ ತೆಗೆದುಕೊಂಡು ಹೊರಟುಬಿಟ್ಟ!ಪಾಪ, ಇನ್ನೊಬ್ಬ ವ್ಯಕ್ತಿಯು ತನ್ನ ಬಟ್ಟೆಗಳನ್ನು ಎಷ್ಟು ಕೇಳಿದರೂ ಅವನು ಕೊಡಲಿಲ್ಲ!ಕೊನೆಗೆ ಇಬ್ಬರೂ ನ್ಯಾಯಾಲಯಕ್ಕೆ ಹೋದರು.ನ್ಯಾಯಾಧೀಶನು ಇಬ್ಬರ ತಲೆಗೂದಲುಗಳನ್ನೂ ಬೇರೆ ಬೇರೆ ಬಾಚಣಿಗೆಗಳಿಂದ ಬಾಚಲು ಆದೇಶಿಸಿದ.ಹಾಗೆ ಮಾಡಿದ ಬಳಿಕ, ಅವನು ಆ ಬಾಚಣಿಗೆಗಳನ್ನು ಗಮನಿಸಿದ.ಉಣ್ಣೆ ಬಟ್ಟೆಗಳನ್ನುಟ್ಟಿದ್ದವನ ಬಾಚಣಿಗೆ ಯಲ್ಲಿ ಉಣ್ಣೆಯ ಎಳೆಗಳಿದ್ದವು.ಇದರಿಂದ, ಅವನು ಹತ್ತಿ ಬಟ್ಟೆಗಳ ಮಾಲೀಕನಲ್ಲ ಎಂದು ತೀರ್ಮಾನಿಸಿ,ಹತ್ತಿಬಟ್ಟೆಗಳ ನಿಜವಾದ ಮಾಲೀಕನಿಗೆ ಆ ಬಟ್ಟೆಗಳನ್ನು ಕೊಡಿಸಿದ.

                ನಂದೀಸೂತ್ರ-ಮಲಯಗಿರಿ ವೃತ್ತಿಯ ಕಥೆ

ಮಂಗಳವಾರ, ಫೆಬ್ರವರಿ 9, 2021

ಕಥಾಸರಿತ್ಸಾಗರದ ಕಥೆಗಳು-ಮನಸ್ಸಿನಂತೆ ಫಲ

 

ಗಂಗಾತೀರದಲ್ಲಿ ಒಬ್ಬ ಬ್ರಾಹ್ಮಣನೂ ಒಬ್ಬ ಚಂಡಾಲನೂ ವಾಸಿಸುತ್ತಿದ್ದರು.ಅವರಿಬ್ಬರೂ ಉಪವಾಸವ್ರತ ಮಾಡುತ್ತಿದ್ದರು.ಆ ಸಮಯದಲ್ಲಿ ಅವರು, ಬೆಸ್ತರು ನದಿಯಲ್ಲಿ ಮೀನು ಹಿಡಿಯುವುದನ್ನು ಕಂಡರು.ಆಗ ಉಪವಾಸದಿಂದ ಬಳಲಿದ್ದ ಮೂಢ ಬ್ರಾಹ್ಮಣನು,"ಆಹಾ!ಈ ಬೆಸ್ತರು ಎಷ್ಟು ಧನ್ಯರು! ಪ್ರತಿದಿನವೂ ಅವರು ತಮಗಿಷ್ಟವಾದಷ್ಟು ಮೀನುಗಳ ಮಾಂಸವನ್ನು ತಿನ್ನುತ್ತಾರೆ!" ಎಂದು ಯೋಚಿಸಿದನು.ಆದರೆ ಚಂಡಾಲನು,"ಅಯ್ಯೋ! ಪ್ರಾಣಿಹಿಂಸೆ ಮಾಡುವ ಇವರಿಗೆ ಧಿಕ್ಕಾರ! ಇಂಥವರನ್ನು ನಾನೇಕೆ ನೋಡಲಿ?" ಎಂದು ತನ್ನ ಕಣ್ಣುಗಳನ್ನು ಮುಚ್ಚಿಕೊಂಡನು.

       ಕಾಲಕ್ರಮದಲ್ಲಿ ಆ ಬ್ರಾಹ್ಮಣನೂ ಚಂಡಾಲನೂ ಉಪವಾಸದಿಂದ ಸತ್ತುಹೋದರು.ಆಗ ಬ್ರಾಹ್ಮಣನ ಹೆಣವನ್ನು ನಾಯಿಗಳು ತಿಂದರೆ,ಚಂಡಾಲನ ಹೆಣ ಗಂಗಾನದಿಯಲ್ಲಿ ಕರಗಿಹೋಯಿತು.ಅನಂತರ ಅವರಿಬ್ಬರೂ ತೀರ್ಥಕ್ಷೇತ್ರದ ಮಹಿಮೆಯಿಂದ ಜಾತಿಸ್ಮರರಾಗಿ(ಪೂರ್ವಜನ್ಮದ ನೆನಪಿರುವವರು) ಹುಟ್ಟಿದರು.ಬ್ರಾಹ್ಮಣನು ಅಲ್ಲೇ ಒಬ್ಬ ಬೆಸ್ತನಾಗಿ ಹುಟ್ಟಿದರೆ, ಚಂಡಾಲನು ಅಲ್ಲಿನ ರಾಜನ ಮನೆಯಲ್ಲಿ ಹುಟ್ಟಿದನು!ಈಗ ಬೆಸ್ತನಾಗಿದ್ದ ಬ್ರಾಹ್ಮಣನು ಪೂರ್ವಜನ್ಮದ ಸ್ಮರಣೆಯಿದ್ದುದರಿಂದ ಹಿಂದಿನದನ್ನು ನೆನೆದು ದು:ಖಿಸಿದನು.ಅದೇ ರಾಜನಾಗಿದ್ದ ಚಂಡಾಲನು ಆ ನೆನಪಿನಿಂದ ಒಳ್ಳೆಯ ಫಲ ಸಿಕ್ಕಿತೆಂದು ಸಂತೋಷಿಸಿದನು.ಹೀಗೆ ಅವರಿಬ್ಬರೂ ತಮ್ಮ ತಮ್ಮ ಮನಸ್ಸಿನ ಯೋಚನೆಗೆ ತಕ್ಕ ಫಲಗಳನ್ನು ಪಡೆದರು.


                                       

ಶನಿವಾರ, ಫೆಬ್ರವರಿ 6, 2021

ಜೈನ ಕಥೆಗಳು-ವರ್ತಕಪುತ್ರರ ಕಥೆ

 ಒಬ್ಬ ವರ್ತಕನಿಗೆ ಮೂವರು ಪುತ್ರರಿದ್ದರು.ಒಮ್ಮೆ ಅವನು ಅವರು ಬುದ್ಧಿ,ಕಾರ್ಯಸಾಮರ್ಥ್ಯ,ಪೌರುಷಗಳನ್ನು ಪರೀಕ್ಷಿಸಲು ಒಬ್ಬೊಬ್ಬರಿಗೂ ಸಾವಿರ ಕಾರ್ಷಾಪಣ(ಹಣದ ಒಂದು ಅಳತೆ) ಗಳಷ್ಟು ಹಣವನ್ನು ಕೊಟ್ಟು,"ನೀವು ಮೂವರೂ ಈ ಹಣದಿಂದ ವ್ಯಾಪಾರ ಮಾಡಿಕೊಂಡು ಬೇಗನೆ ಹಿಂದಿರುಗಿ ಬನ್ನಿ!" ಎಂದು ಆದೇಶವಿತ್ತನು.ಆ ಹಣವನ್ನು ತೆಗೆದುಕೊಂಡು ಮೂವರೂ ಬೇರೆ ಬೇರೆ ನಗರಗಳಿಗೆ ವ್ಯಾಪಾರ ಮಾಡಲೆಂದು ಹೋದರು.

     ಮೊದಲನೆಯ ಪುತ್ರನು ಯೋಚಿಸಿದನು,"ನಮ್ಮನ್ನು ಪರೀಕ್ಷಿಸಲೆಂದು ನಮ್ಮ ತಂದೆ ನಮಗೆ ಹಣ ಕೊಟ್ಟಿದ್ದಾರೆ.ಆದ್ದರಿಂದ ಹೆಚ್ಚು ಹಣವನ್ನು ಸಂಪಾದಿಸಿ ಅವರನ್ನು ಪ್ರಸನ್ನಗೊಳಿಸಬೇಕು.ಯಾವ ವ್ಯಕ್ತಿ ಪುರುಷಾರ್ಥವಿಹೀನನಾಗುವನೋ,ಅವನ ಸ್ಥಿತಿ ನೀರಿನಲ್ಲಿ ಬೆಳೆಯುವ ಹುಲ್ಲಿನಂತೆ ನಿಷ್ಪ್ರಯೋಜಕವಾಗಿರುತ್ತದೆ! ಇಂಥ ಸ್ಥಿತಿಯಲ್ಲಿ ಮನುಷ್ಯನು ಪುರುಷಾರ್ಥಗಳನ್ನು ಸಾಧಿಸಿಕೊಳ್ಳಬೇಕು.ಹಾಗಾಗಿ ನಾವೂ ಈಗ ಪುರುಷಾರ್ಥಗಳನ್ನು ಸಾಧಿಸಿಕೊಳ್ಳಬೇಕು!"

        ಹೀಗೆ ಯೋಚಿಸಿ ಅವನು ಕೇವಲ ಭೋಜನ,ವಸ್ತ್ರಗಳಿಗೆ ಮಾತ್ರ ಹಣವನ್ನು ವಿನಿಯೋಗಿಸುತ್ತಾ,ಜೂಜು, ಮದ್ಯಪಾನ, ಮೊದಲಾದ ದುರ್ವ್ಯಸನಗಳನ್ನು ಬಿಟ್ಟು ಬಹಳ ಪರಿಶ್ರಮದಿಂದ ಹಣ ಸಂಪಾದಿಸತೊಡಗಿದನು.ಇದರಿಂದ ಅವನಿಗೆ ಬಹಳ ಲಾಭವಾಯಿತು.

       ಎರಡನೆಯ ಪುತ್ರನು ಯೋಚಿಸಿದನು,"ನಮ್ಮ ಬಳಿ ಪ್ರಾಪ್ತ ಧನವಿದೆ! ಆದರೆ ಅದನ್ನು ಉಪಯೋಗಿಸುತ್ತಿದ್ದರೆ, ಅದು ಬೇಗನೆ ಮುಗಿದುಹೋಗುತ್ತದೆ.ಆದ್ದರಿಂದ ಮೂಲಧನವನ್ನು ಹಾಗೆಯೇ ರಕ್ಷಿಸಿಟ್ಟುಕೊಳ್ಳುವುದು ಒಳ್ಳೆಯದು!"

       ಹಾಗಾಗಿ ಅವನು, ತಾನು ಸಂಪಾದಿಸಿದ ಹಣವನ್ನಷ್ಟೇ ಭೋಜನ,ವಸ್ತ್ರಾದಿಗಳಿಗೆ ವ್ಯಯಿಸತೊಡಗಿದನು.ಆದರೆ ಮೂಲಧನವನ್ನು ಮುಟ್ಟಲಿಲ್ಲ.

     ಮೂರನೆಯವನು ಯೋಚಿಸಿದ,"ನಮ್ಮಲ್ಲಿ ಏಳು ಪೀಳಿಗೆಗಳಿಂದ ಹಣ ಚೆನ್ನಾಗಿ ಬರುತ್ತಲೇ ಇದೆ! ಆದರೆ ವೃದ್ಧಾಪ್ಯದ ಕಾರಣದಿಂದ,ಧನವು ನಾಶವಾಗಬಹುದೆಂಬ ಭಯದಿಂದ ನಮ್ಮ ತಂದೆಯವರು ನಮ್ಮನ್ನು ಪರದೇಶಕ್ಕೆ ಕಳಿಸಿದ್ದಾರೆ! ಆದ್ದರಿಂದ,ಧನಸಂಪಾದನೆಯ ಜಂಜಾಟದಲ್ಲಿ ಮುಳುಗುವುದು ರಿಂದ ಏನು ಪ್ರಯೋಜನ?"

       ಹೀಗೆ ಯೋಚಿಸಿ ಅವನು ಯಾವುದೇ ವ್ಯಾಪಾರದಲ್ಲಿ ತೊಡಗದೇ ಕೇವಲ ಜೂಜು,ಮದ್ಯಮಾಂಸಗಳ ಸೇವನೆ, ಮೊದಲಾದವುಗಳಲ್ಲಿ ತೊಡಗುತ್ತಾ ಐಶಾರಾಮಿ ಜೀವನ ನಡೆಸುತ್ತಾ ತನ್ನ ಸಮಯವನ್ನೆಲ್ಲಾ ಕಳೆದ! ಇದರಿಂದ ಅವನ ಹಣವೆಲ್ಲಾ ಮುಗಿದುಹೋಯಿತು!

      ಸ್ವಲ್ಪ ಸಮಯದ ಬಳಿಕ ಮೂವರು ಪುತ್ರರೂ ತಮ್ಮ ನಗರಕ್ಕೆ ಹಿಂದಿರುಗಿದರು.ಯಾರು ತನ್ನ ಎಲ್ಲಾ ಹಣವನ್ನೂ ವ್ಯಯಿಸಬಿಟ್ಟನೋ, ಅವನು ಎಲ್ಲರ ದಾಸನಾಗಿ ಸೇವಕನಂತೆ ಇರಬೇಕಾಯಿತು! ಏನೂ ಲಾಭ ಮಾಡಿದ್ದು ಎರಡನೆಯವನು, ಭೋಜನ,ವಸ್ತ್ರಗಳಲ್ಲಿ ಸಂತುಷ್ಟನಾಗಿರುತ್ತಾ ಮನೆಗೆಲಸಗಳಲ್ಲಿ ತೊಡಗಿರಬೇಕಾಯಿತು.ಅವನು ದಾನಾದಿ ಪುಣ್ಯಕಾರ್ಯಗಳಲ್ಲಿ ತೊಡಗಲಾಗಲಿಲ್ಲ ಹಾಗೂ ಹಣದ ಉಪಭೋಗವನ್ನೂ ಮಾಡಲಾಗಲಿಲ್ಲ! ಹೆಚ್ಚು ಲಾಭ ಮಾಡಿದ್ದ ಮೊದಲನೆಯವನು ಮನೆಯ ಸಂಪೂರ್ಣ ಆಡಳಿತವನ್ನು ವಹಿಸಿಕೊಂಡನು ಅವನು ಸಮಸ್ತ ಧನದ ಒಡೆಯನಾಗಿ ಯಥೋಚಿತವಾಗಿ ದಾನಾದಿ ಪುಣ್ಯಕಾರ್ಯಗಳಲ್ಲಿ ತೊಡಗಿರುತ್ತಾ ನಗರದ ಪ್ರತಿಷ್ಠಿತ ನಾಗರಿಕನಾದನು.

          ನೇಮಿಚಂದ್ರನ ಉತ್ತರಾಧ್ಯಯನಸೂತ್ರಟೀಕೆಯ ಕಥೆ


ಶುಕ್ರವಾರ, ಫೆಬ್ರವರಿ 5, 2021

ಜೈನ ಕಥೆಗಳು-ಮಂತ್ರಿಪುತ್ರರ ಕೆಲಸ

     ವಕುಲಪುರವೆಂಬ ನಗರದಲ್ಲಿ ಭದ್ರಶಾಲ ಮತ್ತು ಚಂದ್ರಶಾಲ ಎಂಬ ಇಬ್ಬರು ಮಂತ್ರಿಪುತ್ರರಿದ್ದರು.ಭದ್ರಶಾಲನು ಯಾವುದೇ ಸಂದರ್ಭವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದ.ಚಂದ್ರಶಾಲನು ಸಂದರ್ಭಕ್ಕೆ ತಕ್ಕಂತೆ ಮಾತನಾಡಲು ತಿಳಿದಿದ್ದ.ಒಮ್ಮೆ ಅವರಿಗೆ ನಿರ್ಧನತೆಯುಂಟಾಗಲು, ಅವರಿಬ್ಬರೂ ಅಮರಪುರವೆಂಬ ನಗರಕ್ಕೆ ಹೋಗಿ ಅಲ್ಲಿನ ರಾಜನಾದ ದೇವಾನಂದನ ಆಸ್ಥಾನದಲ್ಲಿ ಕೆಲಸ ಮಾಡತೊಡಗಿದರು.ಆದರೆ ಆ ರಾಜನು ಎಷ್ಟು ಜಿಪುಣನಾಗಿದ್ದನೆಂದರೆ ಅವರಿಗೆ ಎಂದೂ ಏನನ್ನೂ ಕೊಡುತ್ತಿರಲಿಲ್ಲ! ಎಂದಾದರೂ ಅವರು ಏನಾದರೂ ಉತ್ತಮವಾದ ಕೆಲಸ ಮಾಡಿದರೆ ರಾಜನು ಕೇವಲ ತನ್ನ ಶುಭ್ರವಾದ ದಂತಪಂಕ್ತಿಗಳನ್ನು ತೋರಿಸಿ ತನ್ನ ಸಂತೋಷ ವ್ಯಕ್ತಪಡಿಸುತ್ತಿದ್ದ! ಮಂತ್ರಿಪುತ್ರರಿಗೆ ರಾಜನ ಈ ಕಾರ್ಯ ಇಷ್ಟವಾಗುತ್ತಿರಲಿಲ್ಲ.ಆದರೆ ಪಾಪ, ಅವರು ತಾನೇ ಏನು ಮಾಡಲಾಗುತ್ತಿತ್ತು?

        ಹೀಗಿರಲು, ಒಂದು ದಿನ, ರಾಜನು ಅಶ್ವಕ್ರೀಡೆಗೆ ಹೋದನು.ಆಗ ದಾರಿಯಲ್ಲಿ ಅವನ ಕುದುರೆಯು ಅವನನ್ನು ಬೀಳಿಸಿಬಿಟ್ಟಿತು! ಇದರಿಂದ ಅವನ ಬಾಯಲ್ಲಿನ ಮುಂದಿನ ನಾಲ್ಕು ಹಲ್ಲುಗಳು ಮುರಿದುಹೋದವು! ಅನಂತರ ಅವನು ಅರಮನೆಗೆ ಹಿಂದಿರುಗಲು,ಮಂತ್ರಿಪುತ್ರರು ಕೆಲಸ ಬಿಟ್ಟು ಹೋಗಲು ಅನುಮತಿ ಕೇಳಿದರು.ಅದಕ್ಕೆ ಕಾರಣವನ್ನು ರಾಜನು ಕೇಳಲು, ಅವರು ಹೇಳಿದರು,"ಮಹಾರಾಜ! ನಿಮ್ಮ ಉಜ್ವಲ ನಗುವಿನಿಂದ ವ್ಯಕ್ತವಾಗುತ್ತಿದ್ದ ಮುಂದಿನ ನಾಲ್ಕು ಹಲ್ಲುಗಳನ್ನು ನೋಡುವುದಷ್ಟೇ ನಮ್ಮ ಆಸೆಯಾಗಿತ್ತು!ದೌರ್ಭಾಗ್ಯದಿಂದ ನಮ್ಮ ಈ ಆಸೆಯೂ ಸಮಾಪ್ತವಾಗಿಹೋಯಿತು! ಇನ್ನು ನಾವಿಲ್ಲಿದ್ದು ಏನು ಮಾಡುವುದು?"

       ಇದನ್ನು ಕೇಳಿ ರಾಜನು ನಾಚಿ ಅಂದಿನಿಂದ ಅವರ ಕೆಲಸವನ್ನು ಸ್ಥಿರಗೊಳಿಸಿದ.

                   ರಾಜಶೇಖರ ಸೂರಿಯ ಕಥಾಕೋಶದ ಕಥೆ

ಗುರುವಾರ, ಫೆಬ್ರವರಿ 4, 2021

ಅಪರೂಪದ ಪೌರಾಣಿಕ ಕಥೆಗಳು-ಮಂಕಣಕನ ಕಥೆ

ಮಹಾಭಾರತದಲ್ಲೂ ವಾಮನಪುರಾಣದಲ್ಲೂ ತೀರ್ಥಕ್ಷೇತ್ರಗಳ ವರ್ಣನೆಯಲ್ಲಿ ಬರುವ ಒಂದು ಸ್ವಾರಸ್ಯಕರ ಕಥೆ,ಮಂಕಣಕನ ಕಥೆ.ಒಂದು ಸಣ್ಣ ಸಿದ್ಧಿ ಬಂದ ಕೂಡಲೇ ಮನುಷ್ಯ ತಾನು ತುಂಬಾ ದೊಡ್ಡದನ್ನು ಸಾಧಿಸಿಬಿಟ್ಟೆನೆಂದು ಬಹಳ ಹೆಮ್ಮೆ ಪಡುತ್ತಾನೆ.ಆದರೆ ತನಗಿಂತ ಹೆಚ್ಚಿನ ಸಿದ್ಧಿಯನ್ನು ಪಡೆದವರನ್ನು ಕಂಡಾಗ ಶಾಂತನಾಗುತ್ತಾನೆ.ಇದನ್ನು ಈ ಕಥೆ ತೋರಿಸುತ್ತದೆ.

       ಕುರುಕ್ಷೇತ್ರದಲ್ಲಿ ಸಪ್ತಸಾರಸ್ವತ ತೀರ್ಥವೆಂಬ ಕ್ಷೇತ್ರದಲ್ಲಿ ಮಂಕಣಕನೆಂಬ ಮಹರ್ಷಿ ತಪಸ್ಸು ಮಾಡಿ ಲೋಕವಿಖ್ಯಾತನಾದನು.ಒಮ್ಮೆ ಅವನು ದರ್ಭೆಯನ್ನು ತರುವಾಗ,ಆ ಚೂಪಾದ ದರ್ಭೆಯು ಚುಚ್ಚಿ ಅವನ ಕೈಗೆ ಗಾಯವಾಯಿತು.ಆದರೆ ಆಶ್ಚರ್ಯವೆಂಬಂತೆ ಆ ಗಾಯದಿಂದ ರಕ್ತ ಬರುವ ಬದಲು ಶಾಕರಸ ಒಸರಿತು!ಇದರಿಂದ ಆಶ್ಚರ್ಯಚಕಿತನಾದ ಮಂಕಣಕ ಮುನಿ,ತನಗೆ ಮಹಾಸಿದ್ಧಿಯಾಗಿದೆಯೆಂದು ಅತ್ಯಾನಂದಿತನಾಗಿ ಕುಣಿದಾಡತೊಡಗಿದನು!ಅವನ ತಪಸ್ಸಿನ ಪ್ರಭಾವದಿಂದ,ಸುತ್ತಮುತ್ತಲಿನ ಸ್ಥಾವರಜಂಗಮಗಳೆಲ್ಲವೂ ಕುಣಿಯತೊಡಗಿದವು!ಇದನ್ನು ನೋಡಿದ ದೇವತೆಗಳಿಗೆ ಇಡೀ ಪ್ರಪಂಚವೇ ಕುಣಿಯುತ್ತಿದೆಯೆಂಬ ಭ್ರಾಂತಿಯುಂಟಾಯಿತು!ಕೂಡಲೇ ಅವರು ಬ್ರಹ್ಮನನ್ನು ಮುಂದಿಟ್ಟುಕೊಂಡು ಶಿವನ ಬಳಿ ಹೋಗಿ ಮಂಕಣಕನ ನರ್ತನವನ್ನು ಕೂಡಲೇ ನಿಲ್ಲಿಸಬೇಕೆಂದೂ ಮುಂದೆ ಅವನು ನರ್ತಿಸದಂತೆ ಮಾಡಬೇಕೆಂದೂ ಕೇಳಿಕೊಂಡರು.ಶಿವನು ಒಪ್ಪಿ ಒಬ್ಬ ಬ್ರಾಹ್ಮಣನ ರೂಪದಲ್ಲಿ ಮಂಕಣಕನ ಬಳಿ ಹೋದನು.ಮಂಕಣಕನನ್ನು,"ಅಯ್ಯಾ ತಪಸ್ವಿ!ಏಕೆ ಹೀಗೆ ನರ್ತಿಸುತ್ತಿರುವೆ?ಇಷ್ಟೊಂದು ಆನಂದಕ್ಕೇನು ಕಾರಣ?"ಎಂದು ಕೇಳಿದನು.ಅದಕ್ಕೆ ಮಂಕಣಕನು,"ನನ್ನ ಗಾಯವನ್ನು ನೋಡು!ಅದರಿಂದ ರಕ್ತ ಬರುವ ಬದಲು ಶಾಕರಸ ಬರುತ್ತಿದೆ!ಇದೇ ನನ್ನ ಆನಂದಕ್ಕೆ ಕಾರಣ!"ಎಂದನು.ಆಗ ಪರಶಿವನು,"ಇದರಿಂದ ನನಗೇನೂ ಆಶ್ಚರ್ಯವಾಗುತ್ತಿಲ್ಲ!ನೀನು ನನ್ನ ಹಸ್ತವನ್ನೊಮ್ಮೆ ನೋಡು!"ಎಂದು ತನ್ನ ಬಲಗೈ ಬೆರಳಿನಿಂದ ಎಡಗೈ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒತ್ತಿ ಗಾಯ ಮಾಡಿಕೊಂಡನು!ಆಗ ಅವನ ಕೈಯಲ್ಲೂ ಗಾಯವಾಗಿ ಅದರಿಂದ ರಕ್ತ ಬರುವ ಬದಲು ಮಂಜುಗಡ್ಡೆಯಂತೆ ಬೆಳ್ಳಗಿದ್ದ ಭಸ್ಮ ಬಂದಿತು!ಇದನ್ನು ನೋಡಿ ಮಂಕಣಕನ ಅಹಂಕಾರವೆಲ್ಲಾ ಒಮ್ಮೆಲೇ ಇಳಿದುಹೋಗಿ,ಬಂದಿರುವವನು ಪರಶಿವನೇ ಎಂದು ಅವನು ಅರಿತನು.ಕೂಡಲೇ ಅವನ ಕಾಲಿಗೆ ಬಿದ್ದು,"ಸೃಷ್ಟಿ,ಸ್ಥಿತಿ,ಲಯಗಳನ್ನು ಮಾಡುವವನು ನೀನೇ!ದೇವತೆಗಳೇ ನಿನ್ನನ್ನು ಅರಿಯಲಾರರೆಂದಮೇಲೆ ನನ್ನಂಥವನು ಹೇಗೆ ಅರಿತಾನು?ನನ್ನ ತಪಸ್ಸನ್ನು ಹೆಚ್ಚಿಸು ಪ್ರಭು!"ಎಂದು ಬೇಡಿಕೊಂಡನು.ಆಗ ಶಿವನು,"ನಿನ್ನ ತಪಸ್ಸು ಸಾವಿರಪಾಲಾಗಲಿ!ನಾನು ಈ ಸಪ್ತಸಾರಸ್ವತ ಕ್ಷೇತ್ರದಲ್ಲೇ ನೆಲೆಸುತ್ತೇನೆ.ಇಲ್ಲಿ ಸ್ನಾನ ಮಾಡಿ ನನ್ನನ್ನು ಪೂಜಿಸುವವರು ಇಹ,ಪರಗಳಲ್ಲಿ ಸಕಲವನ್ನೂ ಪಡೆದು ಸಾರಸ್ವತಲೋಕಕ್ಕೆ ಹೋಗುತ್ತಾರೆ!"ಎಂದು ಹರಸಿ ಅಂತರ್ಧಾನನಾದನು.

ಮಂಗಳವಾರ, ಫೆಬ್ರವರಿ 2, 2021

ಅಪರೂಪದ ಪೌರಾಣಿಕ ಕಥೆಗಳು-ಹಯಗ್ರೀವ ಅವತಾರದ ಕಥೆ


 ಮಹಾವಿಷ್ಣುವಿನ ಅವತಾರಗಳ ಕಥೆಗಳು ಸುಪ್ರಸಿದ್ಧ.ಆದರೆ ಅವನ ಕೆಲವು ಅವತಾರಗಳ ಕಥೆಗಳು ಅಷ್ಟಾಗಿ ಪರಿಚಿತವಲ್ಲ.ಅಂಥ ಒಂದು ಅವತಾರ ಹಯಗ್ರೀವ.ವಿಷ್ಣುವಿನ ಈ ಹಯಗ್ರೀವಾವತಾರದ ಕಥೆ ದೇವೀಭಾಗವತದಲ್ಲಿದೆ.ಅದರಂತೆ, ಒಮ್ಮೆ ದೇವದೇವನಾದ ಮಹಾವಿಷ್ಣುವು ದೈತ್ಯರೊಂದಿಗೆ ಸಾವಿರಾರು ವರ್ಷಗಳ ಕಾಲ ಹೋರಾಡಿ ದಣಿದು ವೈಕುಂಠದಲ್ಲಿ ವಿಶ್ರಮಿಸಿದನು.ಹಾಗೆ ವಿಶ್ರಮಿಸುತ್ತಾ ಗಾಢ ನಿದ್ರೆಗೆ ಜಾರಿದನು.ಆಗ ಅವನು ತನ್ನ ತಲೆಗೆ ತನ್ನ ಧನುಸ್ಸನ್ನು ಆಧಾರವಾಗಿರಿಸಿ ಮಲಗಿದ್ದನು.ಈ ಸಮಯದಲ್ಲಿ ದೇವತೆಗಳೆಲ್ಲರೂ ಬ್ರಹ್ಮೇಂದ್ರಶಂಕರಸಮೇತರಾಗಿ ಒಂದು ಯಜ್ಞವನ್ನು ಆಚರಿಸಬೇಕೆಂದು ಶ್ರೀ ಹರಿಯ ಸಲಹೆ ಪಡೆಯಲು ವೈಕುಂಠಕ್ಕೆ ಬಂದರು.ಆದರೆ ವಿಷ್ಣುವು ನಿದ್ರಿಸುತ್ತಿದ್ದುದರಿಂದ ಅವರಿಗೆ ಅವನ ದರ್ಶನವಾಗಲಿಲ್ಲ.ಇದರಿಂದ ದೇವತೆಗಳು ಕಳವಳಗೊಂಡರು.ಆಗ ದೇವೇಂದ್ರನು,"ಮಹಾವಿಷ್ಣುವು ನಿದ್ರಾವಶನಾಗಿದ್ದಾನೆ.ಆದರೆ ಯಜ್ಞದ ವಿಷಯದಲ್ಲಿ ಅವನ ಸಲಹೆ ಪಡೆಯಲು ಅವನ ನಿದ್ರಾಭಂಗ ಮಾಡಲೇಬೇಕಾಗಿದೆ!" ಎಂದನು.ಶಿವನು ಹೇಳಿದನು,"ಯಾರ ನಿದ್ರೆಯನ್ನೂ ಭಂಗಗೊಳಿಸಬಾರದು.ವಿಷ್ಣುವು ಯೋಗನಿದ್ರೆಯಲ್ಲಿ ಧ್ಯಾನಸಮಾಧಿಯಲ್ಲಿದ್ದಾನೆ.ಹಾಗಾಗಿ ಅವನ ನಿದ್ರಾಭಂಗ ಮಾಡುವುದು ಅನುಚಿತವಾಗಿದೆ.ಆದರೆ ಯಜ್ಞದ ಸಲಹೆಗಾಗಿ ಅವನನ್ನು ಎಚ್ಚರಿಸಲೇಬೇಕಾಗಿದೆ.ಆದ್ದರಿಂದ ಈ ವಿಷಯದಲ್ಲಿ ಯೋಚಿಸಿ ಮುನ್ನಡೆಯಬೇಕಾಗಿದೆ" ಎಂದನು.ಆಗ ಬ್ರಹ್ಮನು ಸ್ವಲ್ಪ ಯೋಚಿಸಿ ಒಂದು ಉಪಾಯ ಮಾಡಿ ಹೇಳಿದನು,"ಶ್ರೀಹರಿಯು ತನ್ನ ತಲೆಯನ್ನು ತನ್ನ ಧನುಸ್ಸಿನ ಮೇಲಿರಿಸಿ ಮಲಗಿದ್ದಾನೆ. ನಾನೊಂದು ವಮ್ರಿಕ್ರಿಮಿಯನ್ನು ನಿರ್ಮಿಸುತ್ತೇನೆ.ಅದು ಅವನ ಧನುಸ್ಸಿನ ಹೆದೆಯನ್ನು ಕತ್ತರಿಸುತ್ತದೆ.ಆಗ ಉಂಟಾಗುವ ಆಘಾತದಿಂದ ಅವನ ಎಚ್ಚೆತ್ತುಕೊಳ್ಳುತ್ತಾನೆ!"

       ಅದರಂತೆ ಬ್ರಹ್ಮನು ಒಂದು ವಮ್ರಿಕ್ರಿಮಿಯನ್ನು ನಿರ್ಮಿಸಿ ಬಿಟ್ಟನು.ಅದು ವಿಷ್ಣುವಿನ ಬಿಲ್ಲಿನ ಹೆದೆಯನ್ನು ಕತ್ತರಿಸಿತು.ಆದರೆ ಆಗ ಬಿಲ್ಲಿನ ತುದಿ ಹಾರಿ ವಿಷ್ಣುವಿನ ಶಿರವನ್ನೇ ಕತ್ತರಿಸಿಬಿಟ್ಟಿತು! ಆ ಶಿರ ಸಮುದ್ರದಲ್ಲಿ ಬಿದ್ದಿತು!ದೇಹವು ಮಾತ್ರ ಅಲ್ಲೇ ಇತ್ತು.ಕೂಡಲೇ ಮಹಾಶಬ್ದವಾಗಿ ಎಲ್ಲೆಲ್ಲೂ ಅಂಧಕಾರ ಕವಿಯಿತು! ದೇವತೆಗಳು ಗಾಬರಿಯಾದರು!ಈಗೇನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ!ಆಗ ಬ್ರಹ್ಮನು ‌ಹೇಳಿದನು,"ಇದು ಕಾಲಪ್ರೇರಿತವಾಗಿ ಆಯಿತು! ಹಿಂದೆ ಕಾಲನ ಪ್ರೇರಣೆಯಿಂದಲೇ ಶಿವನು ನನ್ನ ತಲೆಯೊಂದನ್ನು ಕತ್ತರಿಸಿದ! ಈಗ ಅದೇ ಕಾಲನ ಪ್ರೇರಣೆಯಿಂದ ವಿಷ್ಣುವಿನ ಶಿರವು ಕತ್ತರಿಸಲ್ಪಟ್ಟಿದೆ! ಕಾಲನ ಪ್ರೇರಣೆಯಿಂದಲೇ ಇಂದ್ರನು ಸಹಸ್ರಾಕ್ಷನಾದ ಹಾಗೂ ಒಮ್ಮೆ ಬ್ರಹ್ಮಹತ್ಯಾದೋಷಕ್ಕೊಳಗಾಗಿ ಕಮಲದ ನಾಳದಲ್ಲಿ ಅವನು ಅಡಗಿಕೊಳ್ಳುವಂತಾಯಿತು! ಆದ್ದರಿಂದ ನೀವು ಶೋಕಿಸದೇ ಸನಾತನಮಯಿಯೂ ತ್ರಿಮೂರ್ತಿಗಳಿಗೆ ಶಕ್ತಿದಾಯಿನಿಯೂ ಆದ ಆ ಆದಿಶಕ್ತಿ ಮಹಾಮಾಯೆಯನ್ನು ಪ್ರಾರ್ಥಿಸಿ! ಎಲ್ಲೆಲ್ಲೂ ಇರುವ ಅವಳೇ ಈ ಜಗತ್ತನ್ನು ಧರಿಸಿದ್ದಾಳೆ! ಅವಳೇ ನಿಮ್ಮ ಕಾರ್ಯವನ್ನು ಪೂರೈಸುವಳು!"

       ಅಂತೆಯೇ ದೇವತೆಗಳು ಆದಿಶಕ್ತಿಯನ್ನು ವೇದಗಳ ಮೂಲಕ ಪ್ರಾರ್ಥಿಸಿದರು,"ಅಮ್ಮಾ! ನೀನು ಮಹಾಮಾಯೆ! ಇಡೀ ಜಗತ್ತು ನಿನ್ನ ಶಾಸನವನ್ನು ಪಾಲಿಸುವುದು!ನೀನೇ ಈ ಜಗತ್ತನ್ನು ಸೃಷ್ಟಿಸಿರುವೆ! ನೀನು ಓಂಕಾರಸ್ವರೂಪಿಣಿ! ತ್ರಿಮೂರ್ತಿಗಳ ಸೃಷ್ಟಿ ಸ್ಥಿತಿ ಲಯ ಕಾರ್ಯಗಳು ನಿನ್ನ ಶಕ್ತಿಯಿಂದಲೇ ನಡೆಯುವವು! ನಿನ್ನ ವಿಭೂತಿತತ್ವಗಳನ್ನೂ ಗುಣಮಹಿಮೆಗಳನ್ನೂ ಅರಿಯಲು ದೇವತೆಗಳಿಗೂ ಶೃತಿಗಳಿಗೂ ಸಾಧ್ಯವಿಲ್ಲ!ಈಗ ಮಹಾವಿಷ್ಣುವು ಮಸ್ತಕಹೀನನಾಗಿರುವುದನ್ನು ನೀನರಿಯೆಯಾ?ಲಕ್ಷ್ಮೀದೇವಿಯು ಪತಿಹೀನಳಾಗಬೇಕೆ? ಅವಳ ಯಾವ ತಪ್ಪಿಗೆ ಈ ಶಿಕ್ಷೆ? ಅವಳದೇನಾದರೂ ತಪ್ಪಿದ್ದರೂ ಕ್ಷಮಿಸಿ ಶ್ರೀ ಹರಿಗೆ ಶಿರ ಪ್ರದಾನ ಮಾಡಿ ಅವನನ್ನು ಪುನಃ ಜಗತ್ತಿನ ಸ್ಥಿತಿ ಕಾರ್ಯದಲ್ಲಿ ನಿಯೋಜಿಸು ತಾಯಿ!"

      ದೇವತೆಗಳ ಸ್ತುತಿಗೆ ಮೆಚ್ಚಿ ಜಗನ್ಮಾತೆಯು ಆಕಾಶವಾಣಿಯ ಮೂಲಕ ಉತ್ತರಿಸಿದಳು,"ದೇವತೆಗಳೇ! ಚಿಂತಿಸಬೇಡಿ! ನಿಮ್ಮ ವೇದಸ್ತುತಿಯಿಂದ ನಾನು ಪ್ರಸನ್ನಳಾದೆನು! ನಿಮ್ಮ ಸ್ಥಾನಗಳಿಗೆ ನಿಶ್ಚಿಂತೆಯಿಂದ ಹೋಗಿ!ಯಾವ ಕಾರ್ಯವೂ ಕಾರಣವಿಲ್ಲದೇ ನಡೆಯುವುದಿಲ್ಲ!ಈಗ ವಿಷ್ಣುವು ಮಸ್ತಕಹೀನನಾಗಿರುವುದಕ್ಕೆ ಕಾರಣವಿದೆ! ಹಿಂದೊಮ್ಮೆ ಶ್ರೀಮನ್ನಾರಾಯಣನು ಲಕ್ಷ್ಮೀಸಮೇತನಾಗಿ ಆದಿಶೇಷನ ಮೇಲೆ ಪವಡಿಸಿದ್ದಾಗ,ಅವನು ಅದೇಕೋ ಲಕ್ಷ್ಮಿಯ ಮುಖವನ್ನು ನೋಡಿ ಗಹಗಹಿಸಿ ನಗತೊಡಗಿದನು.ಆಗ ಲಕ್ಷ್ಮಿಯು ತನ್ನ ಮುಖವು ಕುರೂಪವಾಗಿದೆಯೆಂದು ಅವನು ನಗುತ್ತಿರುವನೆಂದು ಭಾವಿಸಿ ಕುಪಿತಳಾಗಿ ಅವನ ಶಿರಚ್ಛೇದನವಾಗಲೆಂದು ಶಪಿಸಿದಳು! ಆದ್ದರಿಂದಲೇ ಇಂದು ಹೀಗಾಯಿತು! ಆದರೆ ಇದರಿಂದ ಒಳ್ಳೆಯದೇ ಆಗುವುದು! ಅದು ಹೇಗೆಂದರೆ,ಹಯಗ್ರೀವನೆಂಬ ಒಬ್ಬ ದಾನವನಿದ್ದಾನೆ.ಅವನು ಒಮ್ಮೆ ಸರಸ್ವತೀ ನದೀತೀರದಲ್ಲಿ ಕುಳಿತು ನನ್ನ ಏಕಾಕ್ಷರಬೀಜಮಂತ್ರವನ್ನು ಜಪಿಸುತ್ತಾ ದೀರ್ಘಕಾಲ ಉಪಾಸನೆ ಮಾಡಿದನು.ಅದಕ್ಕೆ ಮೆಚ್ಚಿ ಅವನಿಗೆ ವರವನ್ನು ಕೊಡಲು ನಾನು ಮುಂದಾದೆನು.ಆಗ ಅವನು ತನ್ನ ಹೆಸರಿನವನಿಂದಲೇ ಮರಣ ಹೊಂದಬೇಕೆಂಬ ವಿಶಿಷ್ಟ ವರ ಪಡೆದನು.ಮಹಾಪರಾಕ್ರಮಿಯೂ ಲೋಕಕಂಟಕನೂ ಆದ ಅವನನ್ನು ಸಂಹರಿಸಲು ಈಗ ಸಕಾಲವಾಗಿದೆ.ನೀವು ಒಂದು ಕುದುರೆಯ ಶಿರವನ್ನು ಕತ್ತರಿಸಿ ವಿಷ್ಣುವಿನ ದೇಹಕ್ಕೆ ಜೋಡಿಸಿ.ಆಗ ವಿಷ್ಣುವು ಹಯಗ್ರೀವನಾಗಿ ದೈತ್ಯ ಹಯಗ್ರೀವ ನನ್ನು ಸಂಹರಿಸುವನು!ಇದರಿಂದ ಲೋಕಕಲ್ಯಾಣವಾಗುವುದು!"

           ಇದನ್ನು ಕೇಳಿ ದೇವತೆಗಳು ಸಂತೋಷಭರಿತರಾದರು! ವಿಷ್ಣುವಿನ ದೇಹಕ್ಕೆ ಹಯಶಿರವನ್ನು ಜೋಡಿಸಲು ಬ್ರಹ್ಮನನ್ನು ಪ್ರಾರ್ಥಿಸಿದರು.ಅಂತೆಯೇ ಬ್ರಹ್ಮನು ಒಂದು ಕುದುರೆಯ ಶಿರವನ್ನು ಖಡ್ಗದಿಂದ ಕತ್ತರಿಸಿ ವಿಷ್ಣುವಿನ ದೇಹಕ್ಕೆ ಜೋಡಿಸಿದನು! ಹೀಗೆ ದೇವಿಯ ಕೃಪೆಯಿಂದ ಹಯಗ್ರೀವಾವತಾರವಾಯಿತು! ದೇವತೆಗಳು ಜಯಘೋಷ ಮಾಡುತ್ತಿದ್ದಂತೆ ಭಗವಾನ್ ಹಯಗ್ರೀವನು ದೈತ್ಯ ಹಯಗ್ರೀವನ ಬಳಿಗೆ ತೆರಳಿ ಅವನೊಂದಿಗೆ ಘೋರ ಯುದ್ಧದಲ್ಲಿ ತೊಡಗಿದನು.ದೀರ್ಘ ಯುದ್ಧದ ಬಳಿಕ ತನ್ನ ಸುದರ್ಶನ ಚಕ್ರದಿಂದ ಆ ದೈತ್ಯನ ಶಿರವನ್ನು ಕತ್ತರಿಸಿ ಅವನನ್ನು ಸಂಹರಿಸಿದನು! ಹರ್ಷಭರಿತರಾದ ದೇವತೆಗಳು ಹರ್ಷೋದ್ಗಾರ ಮಾಡಿದರು!ಅನಂತರ ವಿಷ್ಣುವಿನ ಸಲಹೆ ಪಡೆದು ಯಜ್ಞಾಚರಣೆ ಮಾಡಿದರು.

            ಭಾಗವತದಲ್ಲಿ ಹಯಗ್ರೀವಾವತಾರದ ಪ್ರಸ್ತಾಪವಷ್ಟೇ ಬಂದಿದೆ.ಅಲ್ಲಿ ಎರಡನೆಯ ಸ್ಕಂಧದಲ್ಲಿ ಬ್ರಹ್ಮನು ನಾರದರಿಗೆ ನಾರಾಯಣನ ಇಪ್ಪತ್ತು ನಾಲ್ಕು ಅವತಾರಗಳ ಸಂಕ್ಷಿಪ್ತ ಕಥನ ಮಾಡುತ್ತಾ ಹಯಗ್ರೀವಾವತಾರದ ಬಗ್ಗೆ ಹೀಗೆ ಹೇಳುತ್ತಾನೆ,"ಆ ಯಜ್ಞಪುರುಷನಾದ ಮಹಾವಿಷ್ಣುವು ನಾನು ಮಾಡಿದ ಯಜ್ಞದಲ್ಲಿ ಚಿನ್ನದ ಕಾಂತಿಯಿಂದ ಹೊಳೆಯುವ ಹಯಶಿರದ ಹಯಗ್ರೀವ ರೂಪದಲ್ಲಿ ಅವತರಿಸಿದನು!ಭಗವಂತನ ಆ ರೂಪವು ವೇದಮಯವಾದುದು.ಅವನ ನಿ:ಶ್ವಾಸವಾಯುವಿನ ರೂಪದಲ್ಲಿ ಸಮಸ್ತ ವೇದವೂ ಪ್ರಕಟವಾಯಿತು!"

           ಹೀಗೆ ಹಯಗ್ರೀವ ಅವತಾರ ಜ್ಞಾನದ ಸಂಕೇತ.ಮಧ್ವಪರಂಪರೆಯಲ್ಲಿ ಬಂದು ವಾದಿರಾಜಸ್ವಾಮಿಗಳು ಹಯಗ್ರೀವಸ್ವಾಮಿಯ ಉಪಾಸಕರಾಗಿದ್ದರು.ಅವರು ಅರ್ಪಿಸುತ್ತಿದ್ದ ಬೆಲ್ಲದ ಹುಗ್ಗಿಯನ್ನು ಹಯಗ್ರೀವ ಸ್ವಾಮಿಯೇ ಕುದುರೆಯ ರೂಪದಲ್ಲಿ ಬಂದು ಸೇವಿಸುತ್ತಿದ್ದನೆಂದು ಕಥೆಗಳಿವೆ.