ಶನಿವಾರ, ಫೆಬ್ರವರಿ 6, 2021

ಜೈನ ಕಥೆಗಳು-ವರ್ತಕಪುತ್ರರ ಕಥೆ

 ಒಬ್ಬ ವರ್ತಕನಿಗೆ ಮೂವರು ಪುತ್ರರಿದ್ದರು.ಒಮ್ಮೆ ಅವನು ಅವರು ಬುದ್ಧಿ,ಕಾರ್ಯಸಾಮರ್ಥ್ಯ,ಪೌರುಷಗಳನ್ನು ಪರೀಕ್ಷಿಸಲು ಒಬ್ಬೊಬ್ಬರಿಗೂ ಸಾವಿರ ಕಾರ್ಷಾಪಣ(ಹಣದ ಒಂದು ಅಳತೆ) ಗಳಷ್ಟು ಹಣವನ್ನು ಕೊಟ್ಟು,"ನೀವು ಮೂವರೂ ಈ ಹಣದಿಂದ ವ್ಯಾಪಾರ ಮಾಡಿಕೊಂಡು ಬೇಗನೆ ಹಿಂದಿರುಗಿ ಬನ್ನಿ!" ಎಂದು ಆದೇಶವಿತ್ತನು.ಆ ಹಣವನ್ನು ತೆಗೆದುಕೊಂಡು ಮೂವರೂ ಬೇರೆ ಬೇರೆ ನಗರಗಳಿಗೆ ವ್ಯಾಪಾರ ಮಾಡಲೆಂದು ಹೋದರು.

     ಮೊದಲನೆಯ ಪುತ್ರನು ಯೋಚಿಸಿದನು,"ನಮ್ಮನ್ನು ಪರೀಕ್ಷಿಸಲೆಂದು ನಮ್ಮ ತಂದೆ ನಮಗೆ ಹಣ ಕೊಟ್ಟಿದ್ದಾರೆ.ಆದ್ದರಿಂದ ಹೆಚ್ಚು ಹಣವನ್ನು ಸಂಪಾದಿಸಿ ಅವರನ್ನು ಪ್ರಸನ್ನಗೊಳಿಸಬೇಕು.ಯಾವ ವ್ಯಕ್ತಿ ಪುರುಷಾರ್ಥವಿಹೀನನಾಗುವನೋ,ಅವನ ಸ್ಥಿತಿ ನೀರಿನಲ್ಲಿ ಬೆಳೆಯುವ ಹುಲ್ಲಿನಂತೆ ನಿಷ್ಪ್ರಯೋಜಕವಾಗಿರುತ್ತದೆ! ಇಂಥ ಸ್ಥಿತಿಯಲ್ಲಿ ಮನುಷ್ಯನು ಪುರುಷಾರ್ಥಗಳನ್ನು ಸಾಧಿಸಿಕೊಳ್ಳಬೇಕು.ಹಾಗಾಗಿ ನಾವೂ ಈಗ ಪುರುಷಾರ್ಥಗಳನ್ನು ಸಾಧಿಸಿಕೊಳ್ಳಬೇಕು!"

        ಹೀಗೆ ಯೋಚಿಸಿ ಅವನು ಕೇವಲ ಭೋಜನ,ವಸ್ತ್ರಗಳಿಗೆ ಮಾತ್ರ ಹಣವನ್ನು ವಿನಿಯೋಗಿಸುತ್ತಾ,ಜೂಜು, ಮದ್ಯಪಾನ, ಮೊದಲಾದ ದುರ್ವ್ಯಸನಗಳನ್ನು ಬಿಟ್ಟು ಬಹಳ ಪರಿಶ್ರಮದಿಂದ ಹಣ ಸಂಪಾದಿಸತೊಡಗಿದನು.ಇದರಿಂದ ಅವನಿಗೆ ಬಹಳ ಲಾಭವಾಯಿತು.

       ಎರಡನೆಯ ಪುತ್ರನು ಯೋಚಿಸಿದನು,"ನಮ್ಮ ಬಳಿ ಪ್ರಾಪ್ತ ಧನವಿದೆ! ಆದರೆ ಅದನ್ನು ಉಪಯೋಗಿಸುತ್ತಿದ್ದರೆ, ಅದು ಬೇಗನೆ ಮುಗಿದುಹೋಗುತ್ತದೆ.ಆದ್ದರಿಂದ ಮೂಲಧನವನ್ನು ಹಾಗೆಯೇ ರಕ್ಷಿಸಿಟ್ಟುಕೊಳ್ಳುವುದು ಒಳ್ಳೆಯದು!"

       ಹಾಗಾಗಿ ಅವನು, ತಾನು ಸಂಪಾದಿಸಿದ ಹಣವನ್ನಷ್ಟೇ ಭೋಜನ,ವಸ್ತ್ರಾದಿಗಳಿಗೆ ವ್ಯಯಿಸತೊಡಗಿದನು.ಆದರೆ ಮೂಲಧನವನ್ನು ಮುಟ್ಟಲಿಲ್ಲ.

     ಮೂರನೆಯವನು ಯೋಚಿಸಿದ,"ನಮ್ಮಲ್ಲಿ ಏಳು ಪೀಳಿಗೆಗಳಿಂದ ಹಣ ಚೆನ್ನಾಗಿ ಬರುತ್ತಲೇ ಇದೆ! ಆದರೆ ವೃದ್ಧಾಪ್ಯದ ಕಾರಣದಿಂದ,ಧನವು ನಾಶವಾಗಬಹುದೆಂಬ ಭಯದಿಂದ ನಮ್ಮ ತಂದೆಯವರು ನಮ್ಮನ್ನು ಪರದೇಶಕ್ಕೆ ಕಳಿಸಿದ್ದಾರೆ! ಆದ್ದರಿಂದ,ಧನಸಂಪಾದನೆಯ ಜಂಜಾಟದಲ್ಲಿ ಮುಳುಗುವುದು ರಿಂದ ಏನು ಪ್ರಯೋಜನ?"

       ಹೀಗೆ ಯೋಚಿಸಿ ಅವನು ಯಾವುದೇ ವ್ಯಾಪಾರದಲ್ಲಿ ತೊಡಗದೇ ಕೇವಲ ಜೂಜು,ಮದ್ಯಮಾಂಸಗಳ ಸೇವನೆ, ಮೊದಲಾದವುಗಳಲ್ಲಿ ತೊಡಗುತ್ತಾ ಐಶಾರಾಮಿ ಜೀವನ ನಡೆಸುತ್ತಾ ತನ್ನ ಸಮಯವನ್ನೆಲ್ಲಾ ಕಳೆದ! ಇದರಿಂದ ಅವನ ಹಣವೆಲ್ಲಾ ಮುಗಿದುಹೋಯಿತು!

      ಸ್ವಲ್ಪ ಸಮಯದ ಬಳಿಕ ಮೂವರು ಪುತ್ರರೂ ತಮ್ಮ ನಗರಕ್ಕೆ ಹಿಂದಿರುಗಿದರು.ಯಾರು ತನ್ನ ಎಲ್ಲಾ ಹಣವನ್ನೂ ವ್ಯಯಿಸಬಿಟ್ಟನೋ, ಅವನು ಎಲ್ಲರ ದಾಸನಾಗಿ ಸೇವಕನಂತೆ ಇರಬೇಕಾಯಿತು! ಏನೂ ಲಾಭ ಮಾಡಿದ್ದು ಎರಡನೆಯವನು, ಭೋಜನ,ವಸ್ತ್ರಗಳಲ್ಲಿ ಸಂತುಷ್ಟನಾಗಿರುತ್ತಾ ಮನೆಗೆಲಸಗಳಲ್ಲಿ ತೊಡಗಿರಬೇಕಾಯಿತು.ಅವನು ದಾನಾದಿ ಪುಣ್ಯಕಾರ್ಯಗಳಲ್ಲಿ ತೊಡಗಲಾಗಲಿಲ್ಲ ಹಾಗೂ ಹಣದ ಉಪಭೋಗವನ್ನೂ ಮಾಡಲಾಗಲಿಲ್ಲ! ಹೆಚ್ಚು ಲಾಭ ಮಾಡಿದ್ದ ಮೊದಲನೆಯವನು ಮನೆಯ ಸಂಪೂರ್ಣ ಆಡಳಿತವನ್ನು ವಹಿಸಿಕೊಂಡನು ಅವನು ಸಮಸ್ತ ಧನದ ಒಡೆಯನಾಗಿ ಯಥೋಚಿತವಾಗಿ ದಾನಾದಿ ಪುಣ್ಯಕಾರ್ಯಗಳಲ್ಲಿ ತೊಡಗಿರುತ್ತಾ ನಗರದ ಪ್ರತಿಷ್ಠಿತ ನಾಗರಿಕನಾದನು.

          ನೇಮಿಚಂದ್ರನ ಉತ್ತರಾಧ್ಯಯನಸೂತ್ರಟೀಕೆಯ ಕಥೆ


ಶುಕ್ರವಾರ, ಫೆಬ್ರವರಿ 5, 2021

ಜೈನ ಕಥೆಗಳು-ಮಂತ್ರಿಪುತ್ರರ ಕೆಲಸ

     ವಕುಲಪುರವೆಂಬ ನಗರದಲ್ಲಿ ಭದ್ರಶಾಲ ಮತ್ತು ಚಂದ್ರಶಾಲ ಎಂಬ ಇಬ್ಬರು ಮಂತ್ರಿಪುತ್ರರಿದ್ದರು.ಭದ್ರಶಾಲನು ಯಾವುದೇ ಸಂದರ್ಭವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದ.ಚಂದ್ರಶಾಲನು ಸಂದರ್ಭಕ್ಕೆ ತಕ್ಕಂತೆ ಮಾತನಾಡಲು ತಿಳಿದಿದ್ದ.ಒಮ್ಮೆ ಅವರಿಗೆ ನಿರ್ಧನತೆಯುಂಟಾಗಲು, ಅವರಿಬ್ಬರೂ ಅಮರಪುರವೆಂಬ ನಗರಕ್ಕೆ ಹೋಗಿ ಅಲ್ಲಿನ ರಾಜನಾದ ದೇವಾನಂದನ ಆಸ್ಥಾನದಲ್ಲಿ ಕೆಲಸ ಮಾಡತೊಡಗಿದರು.ಆದರೆ ಆ ರಾಜನು ಎಷ್ಟು ಜಿಪುಣನಾಗಿದ್ದನೆಂದರೆ ಅವರಿಗೆ ಎಂದೂ ಏನನ್ನೂ ಕೊಡುತ್ತಿರಲಿಲ್ಲ! ಎಂದಾದರೂ ಅವರು ಏನಾದರೂ ಉತ್ತಮವಾದ ಕೆಲಸ ಮಾಡಿದರೆ ರಾಜನು ಕೇವಲ ತನ್ನ ಶುಭ್ರವಾದ ದಂತಪಂಕ್ತಿಗಳನ್ನು ತೋರಿಸಿ ತನ್ನ ಸಂತೋಷ ವ್ಯಕ್ತಪಡಿಸುತ್ತಿದ್ದ! ಮಂತ್ರಿಪುತ್ರರಿಗೆ ರಾಜನ ಈ ಕಾರ್ಯ ಇಷ್ಟವಾಗುತ್ತಿರಲಿಲ್ಲ.ಆದರೆ ಪಾಪ, ಅವರು ತಾನೇ ಏನು ಮಾಡಲಾಗುತ್ತಿತ್ತು?

        ಹೀಗಿರಲು, ಒಂದು ದಿನ, ರಾಜನು ಅಶ್ವಕ್ರೀಡೆಗೆ ಹೋದನು.ಆಗ ದಾರಿಯಲ್ಲಿ ಅವನ ಕುದುರೆಯು ಅವನನ್ನು ಬೀಳಿಸಿಬಿಟ್ಟಿತು! ಇದರಿಂದ ಅವನ ಬಾಯಲ್ಲಿನ ಮುಂದಿನ ನಾಲ್ಕು ಹಲ್ಲುಗಳು ಮುರಿದುಹೋದವು! ಅನಂತರ ಅವನು ಅರಮನೆಗೆ ಹಿಂದಿರುಗಲು,ಮಂತ್ರಿಪುತ್ರರು ಕೆಲಸ ಬಿಟ್ಟು ಹೋಗಲು ಅನುಮತಿ ಕೇಳಿದರು.ಅದಕ್ಕೆ ಕಾರಣವನ್ನು ರಾಜನು ಕೇಳಲು, ಅವರು ಹೇಳಿದರು,"ಮಹಾರಾಜ! ನಿಮ್ಮ ಉಜ್ವಲ ನಗುವಿನಿಂದ ವ್ಯಕ್ತವಾಗುತ್ತಿದ್ದ ಮುಂದಿನ ನಾಲ್ಕು ಹಲ್ಲುಗಳನ್ನು ನೋಡುವುದಷ್ಟೇ ನಮ್ಮ ಆಸೆಯಾಗಿತ್ತು!ದೌರ್ಭಾಗ್ಯದಿಂದ ನಮ್ಮ ಈ ಆಸೆಯೂ ಸಮಾಪ್ತವಾಗಿಹೋಯಿತು! ಇನ್ನು ನಾವಿಲ್ಲಿದ್ದು ಏನು ಮಾಡುವುದು?"

       ಇದನ್ನು ಕೇಳಿ ರಾಜನು ನಾಚಿ ಅಂದಿನಿಂದ ಅವರ ಕೆಲಸವನ್ನು ಸ್ಥಿರಗೊಳಿಸಿದ.

                   ರಾಜಶೇಖರ ಸೂರಿಯ ಕಥಾಕೋಶದ ಕಥೆ

ಗುರುವಾರ, ಫೆಬ್ರವರಿ 4, 2021

ಅಪರೂಪದ ಪೌರಾಣಿಕ ಕಥೆಗಳು-ಮಂಕಣಕನ ಕಥೆ

ಮಹಾಭಾರತದಲ್ಲೂ ವಾಮನಪುರಾಣದಲ್ಲೂ ತೀರ್ಥಕ್ಷೇತ್ರಗಳ ವರ್ಣನೆಯಲ್ಲಿ ಬರುವ ಒಂದು ಸ್ವಾರಸ್ಯಕರ ಕಥೆ,ಮಂಕಣಕನ ಕಥೆ.ಒಂದು ಸಣ್ಣ ಸಿದ್ಧಿ ಬಂದ ಕೂಡಲೇ ಮನುಷ್ಯ ತಾನು ತುಂಬಾ ದೊಡ್ಡದನ್ನು ಸಾಧಿಸಿಬಿಟ್ಟೆನೆಂದು ಬಹಳ ಹೆಮ್ಮೆ ಪಡುತ್ತಾನೆ.ಆದರೆ ತನಗಿಂತ ಹೆಚ್ಚಿನ ಸಿದ್ಧಿಯನ್ನು ಪಡೆದವರನ್ನು ಕಂಡಾಗ ಶಾಂತನಾಗುತ್ತಾನೆ.ಇದನ್ನು ಈ ಕಥೆ ತೋರಿಸುತ್ತದೆ.

       ಕುರುಕ್ಷೇತ್ರದಲ್ಲಿ ಸಪ್ತಸಾರಸ್ವತ ತೀರ್ಥವೆಂಬ ಕ್ಷೇತ್ರದಲ್ಲಿ ಮಂಕಣಕನೆಂಬ ಮಹರ್ಷಿ ತಪಸ್ಸು ಮಾಡಿ ಲೋಕವಿಖ್ಯಾತನಾದನು.ಒಮ್ಮೆ ಅವನು ದರ್ಭೆಯನ್ನು ತರುವಾಗ,ಆ ಚೂಪಾದ ದರ್ಭೆಯು ಚುಚ್ಚಿ ಅವನ ಕೈಗೆ ಗಾಯವಾಯಿತು.ಆದರೆ ಆಶ್ಚರ್ಯವೆಂಬಂತೆ ಆ ಗಾಯದಿಂದ ರಕ್ತ ಬರುವ ಬದಲು ಶಾಕರಸ ಒಸರಿತು!ಇದರಿಂದ ಆಶ್ಚರ್ಯಚಕಿತನಾದ ಮಂಕಣಕ ಮುನಿ,ತನಗೆ ಮಹಾಸಿದ್ಧಿಯಾಗಿದೆಯೆಂದು ಅತ್ಯಾನಂದಿತನಾಗಿ ಕುಣಿದಾಡತೊಡಗಿದನು!ಅವನ ತಪಸ್ಸಿನ ಪ್ರಭಾವದಿಂದ,ಸುತ್ತಮುತ್ತಲಿನ ಸ್ಥಾವರಜಂಗಮಗಳೆಲ್ಲವೂ ಕುಣಿಯತೊಡಗಿದವು!ಇದನ್ನು ನೋಡಿದ ದೇವತೆಗಳಿಗೆ ಇಡೀ ಪ್ರಪಂಚವೇ ಕುಣಿಯುತ್ತಿದೆಯೆಂಬ ಭ್ರಾಂತಿಯುಂಟಾಯಿತು!ಕೂಡಲೇ ಅವರು ಬ್ರಹ್ಮನನ್ನು ಮುಂದಿಟ್ಟುಕೊಂಡು ಶಿವನ ಬಳಿ ಹೋಗಿ ಮಂಕಣಕನ ನರ್ತನವನ್ನು ಕೂಡಲೇ ನಿಲ್ಲಿಸಬೇಕೆಂದೂ ಮುಂದೆ ಅವನು ನರ್ತಿಸದಂತೆ ಮಾಡಬೇಕೆಂದೂ ಕೇಳಿಕೊಂಡರು.ಶಿವನು ಒಪ್ಪಿ ಒಬ್ಬ ಬ್ರಾಹ್ಮಣನ ರೂಪದಲ್ಲಿ ಮಂಕಣಕನ ಬಳಿ ಹೋದನು.ಮಂಕಣಕನನ್ನು,"ಅಯ್ಯಾ ತಪಸ್ವಿ!ಏಕೆ ಹೀಗೆ ನರ್ತಿಸುತ್ತಿರುವೆ?ಇಷ್ಟೊಂದು ಆನಂದಕ್ಕೇನು ಕಾರಣ?"ಎಂದು ಕೇಳಿದನು.ಅದಕ್ಕೆ ಮಂಕಣಕನು,"ನನ್ನ ಗಾಯವನ್ನು ನೋಡು!ಅದರಿಂದ ರಕ್ತ ಬರುವ ಬದಲು ಶಾಕರಸ ಬರುತ್ತಿದೆ!ಇದೇ ನನ್ನ ಆನಂದಕ್ಕೆ ಕಾರಣ!"ಎಂದನು.ಆಗ ಪರಶಿವನು,"ಇದರಿಂದ ನನಗೇನೂ ಆಶ್ಚರ್ಯವಾಗುತ್ತಿಲ್ಲ!ನೀನು ನನ್ನ ಹಸ್ತವನ್ನೊಮ್ಮೆ ನೋಡು!"ಎಂದು ತನ್ನ ಬಲಗೈ ಬೆರಳಿನಿಂದ ಎಡಗೈ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒತ್ತಿ ಗಾಯ ಮಾಡಿಕೊಂಡನು!ಆಗ ಅವನ ಕೈಯಲ್ಲೂ ಗಾಯವಾಗಿ ಅದರಿಂದ ರಕ್ತ ಬರುವ ಬದಲು ಮಂಜುಗಡ್ಡೆಯಂತೆ ಬೆಳ್ಳಗಿದ್ದ ಭಸ್ಮ ಬಂದಿತು!ಇದನ್ನು ನೋಡಿ ಮಂಕಣಕನ ಅಹಂಕಾರವೆಲ್ಲಾ ಒಮ್ಮೆಲೇ ಇಳಿದುಹೋಗಿ,ಬಂದಿರುವವನು ಪರಶಿವನೇ ಎಂದು ಅವನು ಅರಿತನು.ಕೂಡಲೇ ಅವನ ಕಾಲಿಗೆ ಬಿದ್ದು,"ಸೃಷ್ಟಿ,ಸ್ಥಿತಿ,ಲಯಗಳನ್ನು ಮಾಡುವವನು ನೀನೇ!ದೇವತೆಗಳೇ ನಿನ್ನನ್ನು ಅರಿಯಲಾರರೆಂದಮೇಲೆ ನನ್ನಂಥವನು ಹೇಗೆ ಅರಿತಾನು?ನನ್ನ ತಪಸ್ಸನ್ನು ಹೆಚ್ಚಿಸು ಪ್ರಭು!"ಎಂದು ಬೇಡಿಕೊಂಡನು.ಆಗ ಶಿವನು,"ನಿನ್ನ ತಪಸ್ಸು ಸಾವಿರಪಾಲಾಗಲಿ!ನಾನು ಈ ಸಪ್ತಸಾರಸ್ವತ ಕ್ಷೇತ್ರದಲ್ಲೇ ನೆಲೆಸುತ್ತೇನೆ.ಇಲ್ಲಿ ಸ್ನಾನ ಮಾಡಿ ನನ್ನನ್ನು ಪೂಜಿಸುವವರು ಇಹ,ಪರಗಳಲ್ಲಿ ಸಕಲವನ್ನೂ ಪಡೆದು ಸಾರಸ್ವತಲೋಕಕ್ಕೆ ಹೋಗುತ್ತಾರೆ!"ಎಂದು ಹರಸಿ ಅಂತರ್ಧಾನನಾದನು.

ಮಂಗಳವಾರ, ಫೆಬ್ರವರಿ 2, 2021

ಅಪರೂಪದ ಪೌರಾಣಿಕ ಕಥೆಗಳು-ಹಯಗ್ರೀವ ಅವತಾರದ ಕಥೆ


 ಮಹಾವಿಷ್ಣುವಿನ ಅವತಾರಗಳ ಕಥೆಗಳು ಸುಪ್ರಸಿದ್ಧ.ಆದರೆ ಅವನ ಕೆಲವು ಅವತಾರಗಳ ಕಥೆಗಳು ಅಷ್ಟಾಗಿ ಪರಿಚಿತವಲ್ಲ.ಅಂಥ ಒಂದು ಅವತಾರ ಹಯಗ್ರೀವ.ವಿಷ್ಣುವಿನ ಈ ಹಯಗ್ರೀವಾವತಾರದ ಕಥೆ ದೇವೀಭಾಗವತದಲ್ಲಿದೆ.ಅದರಂತೆ, ಒಮ್ಮೆ ದೇವದೇವನಾದ ಮಹಾವಿಷ್ಣುವು ದೈತ್ಯರೊಂದಿಗೆ ಸಾವಿರಾರು ವರ್ಷಗಳ ಕಾಲ ಹೋರಾಡಿ ದಣಿದು ವೈಕುಂಠದಲ್ಲಿ ವಿಶ್ರಮಿಸಿದನು.ಹಾಗೆ ವಿಶ್ರಮಿಸುತ್ತಾ ಗಾಢ ನಿದ್ರೆಗೆ ಜಾರಿದನು.ಆಗ ಅವನು ತನ್ನ ತಲೆಗೆ ತನ್ನ ಧನುಸ್ಸನ್ನು ಆಧಾರವಾಗಿರಿಸಿ ಮಲಗಿದ್ದನು.ಈ ಸಮಯದಲ್ಲಿ ದೇವತೆಗಳೆಲ್ಲರೂ ಬ್ರಹ್ಮೇಂದ್ರಶಂಕರಸಮೇತರಾಗಿ ಒಂದು ಯಜ್ಞವನ್ನು ಆಚರಿಸಬೇಕೆಂದು ಶ್ರೀ ಹರಿಯ ಸಲಹೆ ಪಡೆಯಲು ವೈಕುಂಠಕ್ಕೆ ಬಂದರು.ಆದರೆ ವಿಷ್ಣುವು ನಿದ್ರಿಸುತ್ತಿದ್ದುದರಿಂದ ಅವರಿಗೆ ಅವನ ದರ್ಶನವಾಗಲಿಲ್ಲ.ಇದರಿಂದ ದೇವತೆಗಳು ಕಳವಳಗೊಂಡರು.ಆಗ ದೇವೇಂದ್ರನು,"ಮಹಾವಿಷ್ಣುವು ನಿದ್ರಾವಶನಾಗಿದ್ದಾನೆ.ಆದರೆ ಯಜ್ಞದ ವಿಷಯದಲ್ಲಿ ಅವನ ಸಲಹೆ ಪಡೆಯಲು ಅವನ ನಿದ್ರಾಭಂಗ ಮಾಡಲೇಬೇಕಾಗಿದೆ!" ಎಂದನು.ಶಿವನು ಹೇಳಿದನು,"ಯಾರ ನಿದ್ರೆಯನ್ನೂ ಭಂಗಗೊಳಿಸಬಾರದು.ವಿಷ್ಣುವು ಯೋಗನಿದ್ರೆಯಲ್ಲಿ ಧ್ಯಾನಸಮಾಧಿಯಲ್ಲಿದ್ದಾನೆ.ಹಾಗಾಗಿ ಅವನ ನಿದ್ರಾಭಂಗ ಮಾಡುವುದು ಅನುಚಿತವಾಗಿದೆ.ಆದರೆ ಯಜ್ಞದ ಸಲಹೆಗಾಗಿ ಅವನನ್ನು ಎಚ್ಚರಿಸಲೇಬೇಕಾಗಿದೆ.ಆದ್ದರಿಂದ ಈ ವಿಷಯದಲ್ಲಿ ಯೋಚಿಸಿ ಮುನ್ನಡೆಯಬೇಕಾಗಿದೆ" ಎಂದನು.ಆಗ ಬ್ರಹ್ಮನು ಸ್ವಲ್ಪ ಯೋಚಿಸಿ ಒಂದು ಉಪಾಯ ಮಾಡಿ ಹೇಳಿದನು,"ಶ್ರೀಹರಿಯು ತನ್ನ ತಲೆಯನ್ನು ತನ್ನ ಧನುಸ್ಸಿನ ಮೇಲಿರಿಸಿ ಮಲಗಿದ್ದಾನೆ. ನಾನೊಂದು ವಮ್ರಿಕ್ರಿಮಿಯನ್ನು ನಿರ್ಮಿಸುತ್ತೇನೆ.ಅದು ಅವನ ಧನುಸ್ಸಿನ ಹೆದೆಯನ್ನು ಕತ್ತರಿಸುತ್ತದೆ.ಆಗ ಉಂಟಾಗುವ ಆಘಾತದಿಂದ ಅವನ ಎಚ್ಚೆತ್ತುಕೊಳ್ಳುತ್ತಾನೆ!"

       ಅದರಂತೆ ಬ್ರಹ್ಮನು ಒಂದು ವಮ್ರಿಕ್ರಿಮಿಯನ್ನು ನಿರ್ಮಿಸಿ ಬಿಟ್ಟನು.ಅದು ವಿಷ್ಣುವಿನ ಬಿಲ್ಲಿನ ಹೆದೆಯನ್ನು ಕತ್ತರಿಸಿತು.ಆದರೆ ಆಗ ಬಿಲ್ಲಿನ ತುದಿ ಹಾರಿ ವಿಷ್ಣುವಿನ ಶಿರವನ್ನೇ ಕತ್ತರಿಸಿಬಿಟ್ಟಿತು! ಆ ಶಿರ ಸಮುದ್ರದಲ್ಲಿ ಬಿದ್ದಿತು!ದೇಹವು ಮಾತ್ರ ಅಲ್ಲೇ ಇತ್ತು.ಕೂಡಲೇ ಮಹಾಶಬ್ದವಾಗಿ ಎಲ್ಲೆಲ್ಲೂ ಅಂಧಕಾರ ಕವಿಯಿತು! ದೇವತೆಗಳು ಗಾಬರಿಯಾದರು!ಈಗೇನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ!ಆಗ ಬ್ರಹ್ಮನು ‌ಹೇಳಿದನು,"ಇದು ಕಾಲಪ್ರೇರಿತವಾಗಿ ಆಯಿತು! ಹಿಂದೆ ಕಾಲನ ಪ್ರೇರಣೆಯಿಂದಲೇ ಶಿವನು ನನ್ನ ತಲೆಯೊಂದನ್ನು ಕತ್ತರಿಸಿದ! ಈಗ ಅದೇ ಕಾಲನ ಪ್ರೇರಣೆಯಿಂದ ವಿಷ್ಣುವಿನ ಶಿರವು ಕತ್ತರಿಸಲ್ಪಟ್ಟಿದೆ! ಕಾಲನ ಪ್ರೇರಣೆಯಿಂದಲೇ ಇಂದ್ರನು ಸಹಸ್ರಾಕ್ಷನಾದ ಹಾಗೂ ಒಮ್ಮೆ ಬ್ರಹ್ಮಹತ್ಯಾದೋಷಕ್ಕೊಳಗಾಗಿ ಕಮಲದ ನಾಳದಲ್ಲಿ ಅವನು ಅಡಗಿಕೊಳ್ಳುವಂತಾಯಿತು! ಆದ್ದರಿಂದ ನೀವು ಶೋಕಿಸದೇ ಸನಾತನಮಯಿಯೂ ತ್ರಿಮೂರ್ತಿಗಳಿಗೆ ಶಕ್ತಿದಾಯಿನಿಯೂ ಆದ ಆ ಆದಿಶಕ್ತಿ ಮಹಾಮಾಯೆಯನ್ನು ಪ್ರಾರ್ಥಿಸಿ! ಎಲ್ಲೆಲ್ಲೂ ಇರುವ ಅವಳೇ ಈ ಜಗತ್ತನ್ನು ಧರಿಸಿದ್ದಾಳೆ! ಅವಳೇ ನಿಮ್ಮ ಕಾರ್ಯವನ್ನು ಪೂರೈಸುವಳು!"

       ಅಂತೆಯೇ ದೇವತೆಗಳು ಆದಿಶಕ್ತಿಯನ್ನು ವೇದಗಳ ಮೂಲಕ ಪ್ರಾರ್ಥಿಸಿದರು,"ಅಮ್ಮಾ! ನೀನು ಮಹಾಮಾಯೆ! ಇಡೀ ಜಗತ್ತು ನಿನ್ನ ಶಾಸನವನ್ನು ಪಾಲಿಸುವುದು!ನೀನೇ ಈ ಜಗತ್ತನ್ನು ಸೃಷ್ಟಿಸಿರುವೆ! ನೀನು ಓಂಕಾರಸ್ವರೂಪಿಣಿ! ತ್ರಿಮೂರ್ತಿಗಳ ಸೃಷ್ಟಿ ಸ್ಥಿತಿ ಲಯ ಕಾರ್ಯಗಳು ನಿನ್ನ ಶಕ್ತಿಯಿಂದಲೇ ನಡೆಯುವವು! ನಿನ್ನ ವಿಭೂತಿತತ್ವಗಳನ್ನೂ ಗುಣಮಹಿಮೆಗಳನ್ನೂ ಅರಿಯಲು ದೇವತೆಗಳಿಗೂ ಶೃತಿಗಳಿಗೂ ಸಾಧ್ಯವಿಲ್ಲ!ಈಗ ಮಹಾವಿಷ್ಣುವು ಮಸ್ತಕಹೀನನಾಗಿರುವುದನ್ನು ನೀನರಿಯೆಯಾ?ಲಕ್ಷ್ಮೀದೇವಿಯು ಪತಿಹೀನಳಾಗಬೇಕೆ? ಅವಳ ಯಾವ ತಪ್ಪಿಗೆ ಈ ಶಿಕ್ಷೆ? ಅವಳದೇನಾದರೂ ತಪ್ಪಿದ್ದರೂ ಕ್ಷಮಿಸಿ ಶ್ರೀ ಹರಿಗೆ ಶಿರ ಪ್ರದಾನ ಮಾಡಿ ಅವನನ್ನು ಪುನಃ ಜಗತ್ತಿನ ಸ್ಥಿತಿ ಕಾರ್ಯದಲ್ಲಿ ನಿಯೋಜಿಸು ತಾಯಿ!"

      ದೇವತೆಗಳ ಸ್ತುತಿಗೆ ಮೆಚ್ಚಿ ಜಗನ್ಮಾತೆಯು ಆಕಾಶವಾಣಿಯ ಮೂಲಕ ಉತ್ತರಿಸಿದಳು,"ದೇವತೆಗಳೇ! ಚಿಂತಿಸಬೇಡಿ! ನಿಮ್ಮ ವೇದಸ್ತುತಿಯಿಂದ ನಾನು ಪ್ರಸನ್ನಳಾದೆನು! ನಿಮ್ಮ ಸ್ಥಾನಗಳಿಗೆ ನಿಶ್ಚಿಂತೆಯಿಂದ ಹೋಗಿ!ಯಾವ ಕಾರ್ಯವೂ ಕಾರಣವಿಲ್ಲದೇ ನಡೆಯುವುದಿಲ್ಲ!ಈಗ ವಿಷ್ಣುವು ಮಸ್ತಕಹೀನನಾಗಿರುವುದಕ್ಕೆ ಕಾರಣವಿದೆ! ಹಿಂದೊಮ್ಮೆ ಶ್ರೀಮನ್ನಾರಾಯಣನು ಲಕ್ಷ್ಮೀಸಮೇತನಾಗಿ ಆದಿಶೇಷನ ಮೇಲೆ ಪವಡಿಸಿದ್ದಾಗ,ಅವನು ಅದೇಕೋ ಲಕ್ಷ್ಮಿಯ ಮುಖವನ್ನು ನೋಡಿ ಗಹಗಹಿಸಿ ನಗತೊಡಗಿದನು.ಆಗ ಲಕ್ಷ್ಮಿಯು ತನ್ನ ಮುಖವು ಕುರೂಪವಾಗಿದೆಯೆಂದು ಅವನು ನಗುತ್ತಿರುವನೆಂದು ಭಾವಿಸಿ ಕುಪಿತಳಾಗಿ ಅವನ ಶಿರಚ್ಛೇದನವಾಗಲೆಂದು ಶಪಿಸಿದಳು! ಆದ್ದರಿಂದಲೇ ಇಂದು ಹೀಗಾಯಿತು! ಆದರೆ ಇದರಿಂದ ಒಳ್ಳೆಯದೇ ಆಗುವುದು! ಅದು ಹೇಗೆಂದರೆ,ಹಯಗ್ರೀವನೆಂಬ ಒಬ್ಬ ದಾನವನಿದ್ದಾನೆ.ಅವನು ಒಮ್ಮೆ ಸರಸ್ವತೀ ನದೀತೀರದಲ್ಲಿ ಕುಳಿತು ನನ್ನ ಏಕಾಕ್ಷರಬೀಜಮಂತ್ರವನ್ನು ಜಪಿಸುತ್ತಾ ದೀರ್ಘಕಾಲ ಉಪಾಸನೆ ಮಾಡಿದನು.ಅದಕ್ಕೆ ಮೆಚ್ಚಿ ಅವನಿಗೆ ವರವನ್ನು ಕೊಡಲು ನಾನು ಮುಂದಾದೆನು.ಆಗ ಅವನು ತನ್ನ ಹೆಸರಿನವನಿಂದಲೇ ಮರಣ ಹೊಂದಬೇಕೆಂಬ ವಿಶಿಷ್ಟ ವರ ಪಡೆದನು.ಮಹಾಪರಾಕ್ರಮಿಯೂ ಲೋಕಕಂಟಕನೂ ಆದ ಅವನನ್ನು ಸಂಹರಿಸಲು ಈಗ ಸಕಾಲವಾಗಿದೆ.ನೀವು ಒಂದು ಕುದುರೆಯ ಶಿರವನ್ನು ಕತ್ತರಿಸಿ ವಿಷ್ಣುವಿನ ದೇಹಕ್ಕೆ ಜೋಡಿಸಿ.ಆಗ ವಿಷ್ಣುವು ಹಯಗ್ರೀವನಾಗಿ ದೈತ್ಯ ಹಯಗ್ರೀವ ನನ್ನು ಸಂಹರಿಸುವನು!ಇದರಿಂದ ಲೋಕಕಲ್ಯಾಣವಾಗುವುದು!"

           ಇದನ್ನು ಕೇಳಿ ದೇವತೆಗಳು ಸಂತೋಷಭರಿತರಾದರು! ವಿಷ್ಣುವಿನ ದೇಹಕ್ಕೆ ಹಯಶಿರವನ್ನು ಜೋಡಿಸಲು ಬ್ರಹ್ಮನನ್ನು ಪ್ರಾರ್ಥಿಸಿದರು.ಅಂತೆಯೇ ಬ್ರಹ್ಮನು ಒಂದು ಕುದುರೆಯ ಶಿರವನ್ನು ಖಡ್ಗದಿಂದ ಕತ್ತರಿಸಿ ವಿಷ್ಣುವಿನ ದೇಹಕ್ಕೆ ಜೋಡಿಸಿದನು! ಹೀಗೆ ದೇವಿಯ ಕೃಪೆಯಿಂದ ಹಯಗ್ರೀವಾವತಾರವಾಯಿತು! ದೇವತೆಗಳು ಜಯಘೋಷ ಮಾಡುತ್ತಿದ್ದಂತೆ ಭಗವಾನ್ ಹಯಗ್ರೀವನು ದೈತ್ಯ ಹಯಗ್ರೀವನ ಬಳಿಗೆ ತೆರಳಿ ಅವನೊಂದಿಗೆ ಘೋರ ಯುದ್ಧದಲ್ಲಿ ತೊಡಗಿದನು.ದೀರ್ಘ ಯುದ್ಧದ ಬಳಿಕ ತನ್ನ ಸುದರ್ಶನ ಚಕ್ರದಿಂದ ಆ ದೈತ್ಯನ ಶಿರವನ್ನು ಕತ್ತರಿಸಿ ಅವನನ್ನು ಸಂಹರಿಸಿದನು! ಹರ್ಷಭರಿತರಾದ ದೇವತೆಗಳು ಹರ್ಷೋದ್ಗಾರ ಮಾಡಿದರು!ಅನಂತರ ವಿಷ್ಣುವಿನ ಸಲಹೆ ಪಡೆದು ಯಜ್ಞಾಚರಣೆ ಮಾಡಿದರು.

            ಭಾಗವತದಲ್ಲಿ ಹಯಗ್ರೀವಾವತಾರದ ಪ್ರಸ್ತಾಪವಷ್ಟೇ ಬಂದಿದೆ.ಅಲ್ಲಿ ಎರಡನೆಯ ಸ್ಕಂಧದಲ್ಲಿ ಬ್ರಹ್ಮನು ನಾರದರಿಗೆ ನಾರಾಯಣನ ಇಪ್ಪತ್ತು ನಾಲ್ಕು ಅವತಾರಗಳ ಸಂಕ್ಷಿಪ್ತ ಕಥನ ಮಾಡುತ್ತಾ ಹಯಗ್ರೀವಾವತಾರದ ಬಗ್ಗೆ ಹೀಗೆ ಹೇಳುತ್ತಾನೆ,"ಆ ಯಜ್ಞಪುರುಷನಾದ ಮಹಾವಿಷ್ಣುವು ನಾನು ಮಾಡಿದ ಯಜ್ಞದಲ್ಲಿ ಚಿನ್ನದ ಕಾಂತಿಯಿಂದ ಹೊಳೆಯುವ ಹಯಶಿರದ ಹಯಗ್ರೀವ ರೂಪದಲ್ಲಿ ಅವತರಿಸಿದನು!ಭಗವಂತನ ಆ ರೂಪವು ವೇದಮಯವಾದುದು.ಅವನ ನಿ:ಶ್ವಾಸವಾಯುವಿನ ರೂಪದಲ್ಲಿ ಸಮಸ್ತ ವೇದವೂ ಪ್ರಕಟವಾಯಿತು!"

           ಹೀಗೆ ಹಯಗ್ರೀವ ಅವತಾರ ಜ್ಞಾನದ ಸಂಕೇತ.ಮಧ್ವಪರಂಪರೆಯಲ್ಲಿ ಬಂದು ವಾದಿರಾಜಸ್ವಾಮಿಗಳು ಹಯಗ್ರೀವಸ್ವಾಮಿಯ ಉಪಾಸಕರಾಗಿದ್ದರು.ಅವರು ಅರ್ಪಿಸುತ್ತಿದ್ದ ಬೆಲ್ಲದ ಹುಗ್ಗಿಯನ್ನು ಹಯಗ್ರೀವ ಸ್ವಾಮಿಯೇ ಕುದುರೆಯ ರೂಪದಲ್ಲಿ ಬಂದು ಸೇವಿಸುತ್ತಿದ್ದನೆಂದು ಕಥೆಗಳಿವೆ.

ಶನಿವಾರ, ಫೆಬ್ರವರಿ 15, 2020

ಪುರಾಣ ಕುತೂಹಲ-ಶ್ರೀಕೃಷ್ಣನು ಏಕೆ ರಾಸಲೀಲೆಯಾಡಿದನು?


ದುಷ್ಟಶಿಕ್ಷಣ,ಶಿಷ್ಟರಕ್ಷಣ ಮಾಡಲು ಅವತಾರವೆತ್ತಿದ ಶ್ರೀಕೃಷ್ಣನ ಕಥೆಯಲ್ಲಿ ರಾಸಲೀಲೆ ಒಂದು ಮುಖ್ಯ ಪ್ರಸಂಗ.ಒಂದು ಬೆಳದಿಂಗಳ ರಾತ್ರಿಯಂದು ಕೃಷ್ಣನ ಕೊಳಲಿನ ನಾದಕ್ಕೆ ಮನಸೋತ ಗೋಪಿಕಾಸ್ತ್ರೀಯರು ಓಡೋಡಿ ಬಂದು,ಅವನು ಹಿಂದಿರುಗಲು ಹೇಳಿದರೂ ಕೇಳದೇ ಅವನೊಂದಿಗೆ ಹಾಡು,ನರ್ತನಗಳಲ್ಲಿ ತೊಡಗಿ,ಆಲಿಂಗನ,ಚುಂಬನ,ಜಲಕ್ರೀಡೆಗಳಿಂದ ಸಂತೃಪ್ತರಾದರೆಂಬ ವಿಸ್ತೃತ ಕಥಾನಕ,ಭಾಗವತದ ಐದು ಅಧ್ಯಾಯಗಳಲ್ಲಿ ನಿರೂಪಿಸಲ್ಪಟ್ಟಿದೆ.ಇವನ್ನು ರಾಸಪಂಚಾಧ್ಯಾಯಗಳೆಂದೇ ಕರೆಯುತ್ತಾರೆ.ಇಂದಿನವರೆಗೂ ಶ್ರೀಕೃಷ್ಣನು ಹೀಗೇಕೆ ಮಾಡಿದನೆಮದು ಚರ್ಚಿಸುತ್ತಲೇ ಬಂದಿದ್ದಾರೆ.ಭಾಗವತದಲ್ಲೇ ಕಥೆಯನ್ನು ಕೇಳುತ್ತಿದ್ದ ಪರೀಕ್ಷಿತ ಮಹಾರಾಜನು,ಶುಕಮುನಿಗಳನ್ನು ,ದುಷ್ಟರನ್ನು ಸಂಹರಿಸಿ ಭೂಭಾರ ಇಳಿಸಲು ಅವತರಿಸಿದ ಶ್ರೀಕೃಷ್ಣನು ಹೀಗೇಕೆ ಮಾಡಿದನೆಂದು ಕೇಳುತ್ತಾನೆ.ಅದಕ್ಕೆ ಶುಕಮುನಿಗಳು,ಭಗವಂತನ ಕಾರ್ಯಗಳನ್ನು ಲೌಕಿಕ ಮಟ್ಟದಲ್ಲಿ ಅಳೆಯಬಾರದೆಂದು ಹೇಳುತ್ತಾ,ಅವನು ಮಾಡುವ ಯಾವ ಕಾರ್ಯವೂ ಅವನಿಗೆ ಲೇಪಿತವಾಗುವುದಿಲ್ಲ,ಲೋಕದ ನಿಯಮಾವಳಿಗಳನ್ನು ಮೀರಿದ ದೇವತೆಗಳೇ ಇರುವಾಗ,ಭಗವಂತನಿಗೆ ಆ ನಿಯಮಗಳು ಅನ್ವಯಿಸುವುದಿಲ್ಲವೆನ್ನುತ್ತಾರೆ.ಭಕ್ಭತರು ಮತ್ಕ್ತತೆ ಮತ್ರಿತೆ ಈ ಲೀಲೆಗಳನ್ಗೆನು ನೆನೆಯುತ್ತಾ ಪುನೀತರಾಗಲೆಂದು ಅವನು ಇಂಥ ಲೀಲೆಗಳನ್ನು ಮಾಡುತ್ತಾನೆ.ಆದರೆ ಅವನ್ನು ಅನುಕರಿಸಲು ಹೋಗಬಾರದು.ಉದಾಹರಣೆಗೆ ಶಿವನು ವಿಷ ಕುಡಿದನೆಂದು ಸಾಮಾನ್ಯ ಜನರೂ ವಿಷ ಕುಡಿಯಬಾರದು.ಹಾಗಾಗಿಯೇ,ನ ದೇವಚರಿತಂ ಚರೇತ್,ಅಂದರೆ ದೇವರ ನಡತೆಯನ್ನು ಅನುಕರಿಸಬಾರದು ಎಂದಿದ್ದಾರೆ.ಅವರ ಉಪದೇಶಗಳನ್ನು ಕೇಳಿ ಅವುಗಳಂತೆ ನಡೆಯಬೇಕಷ್ಟೆ.ಭಗವಂತನು ಯಾವುದೋ ಲೋಕೋಪಕಾರಿಯಾದ ಉದ್ದೇಶಕ್ಕೇ ಹಾಗೆ ಮಾಡಿರುತ್ತಾನೆ.ಅದು ನಿಧಾನವಾಗಿ ನಮಗೆ ಅರ್ಥವಾಗುತ್ತದೆ.ಒಂದು ಮುಖ್ಯ ಕಾರಣವೆಂದರೆ,ಭಗವಂತನು ಭಕ್ತರಿಗೆ ಅವರಿಗಿಷ್ಟವಾದ    ಭಾವದಲ್ಲೇ ಒಲಿಯುತ್ತಾನೆ.ಭಗವದ್ಗೀತೆಯಲ್ಲಿ ಕೃಷ್ಣನು,'ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್',ಅಂದರೆ,'ಯಾರು ಹೇಗೆ ನನ್ನನ್ನು ಆರಾಧಿಸುವರೋ,ನಾನು ಅದೇ ರೀತಿ ಅವರನ್ನು ಸೇವಿಸುತ್ತೇನೆ' ಎಂದು ಅರ್ಥ.ಹೀಗೆ,ಕಂಸ,ಹಿರಣ್ಯಕಶಿಪುಗಳು ವೈರಭಾವದಲ್ಲಿ,ಹನುಮಂತನು ದಾಸ್ಯಭಾವದಲ್ಲಿ,ವಸುದೇವ,ದೇವಕಿ,ನಂದ,ಯಶೋದೆಯರು,ವಾತ್ಸಲ್ಯಭಾವದಲ್ಲಿ,ಅರ್ಜುನನು ಸಖ್ಯಭಾವದಲ್ಲಿ,ರುಕ್ಮಿಣಿ ಮೊದಲಾದವರು ಪತಿಭಾವದಲ್ಲಿ,ಹಾಗೆಯೇ ಗೋಪಿಯರು ಕಾಮಭಾವದಲ್ಲಿ ಭಗವಂತನನ್ನು ಸದಾ ಸ್ಮರಿಸುತ್ತಾ ಅವನಲ್ಲೇ ತನ್ಮಯರಾಗಿ ಮೋಕ್ಷ ಪಡೆದರು.ಕಾಮವೂ ಸರಿಯಾಗಿ,ಭಗವಂತನ ಸೇವೆಗೆ ಬಳಸಿದರೆ ಉನ್ನತಮಟ್ಟ ತಲುಪುತ್ತದೆ.ಅಲ್ಲದೇ,ಗೋಪಿಯರಿಗೆ,ಕೃಷ್ಣನು ಸಾಕ್ಷಾತ್ ಭಗವಂತ ಎಂದು ತಿಳಿದಿತ್ತು.ಅವರೇ ಹೇಳುತ್ತಾರೆ,'ನ ಖಲು ಗೋಪಿಕಾನಂದನೋ ಭವಾನ್ ಅಖಿಲದೇಹಿನಾಮಂತರಾತ್ಮದೃಕ್',ಅಂದರೆ,'ನೀನು ಖಂಡಿತವಾಗಿಯೂ ಗೋಪಿಯ ಮಗನಲ್ಲ,ಸಕಲ ಜೀವಿಗಳ ಅಂತರಾತ್ಮದ್ರಷ್ಟಾ'ಎಂದು.ಗೋಪಿಯರಿಗೆ ಶೃಂಗಾರಭಾವ ಇಷ್ಟವಾದ್ದರಿಂದ ಭಗವಂತ ಅವರಿಗೆ ಆ ರೀತಿ ಒಲಿದ.ಭವಗಳಲ್ಲಿ ಅತ್ಯುನ್ನತವಾದುದು ಶೃಂಗಾರವೇ ಹೌದು.ಸ್ತ್ರೀ,ಪುರುಷರ ಪ್ರೇಮಮಿಲನಕ್ಕಿಂತ ದೊಡ್ಡ ತನ್ಮಯತೆ ಬೇರಾವುದೂ ಇಲ್ಲ.ಹಾಗಾಗಿ ಈ ರೀತಿ ಭಗವಂತನನ್ನು ಪ್ರೀತಿಸಲು ಬಹಳ ಪುಣ್ಯ ಬೇಕು.ಅದು ಮುಗ್ಧ,ಸರಳ ಸ್ವಭಾವದ ಗೋಪಿಯರಿಗೆ ದೊರೆಯಿತು.ಅಲ್ಲದೇ ಲೌಕಿಕವಾಗಿ ತೆಗೆದುಕೊಂಡರೂ,ರಾಸಲೀಲೆ ಒಂದು ಕಲಾತ್ಮಕವಾದ ಶೃಂಗಾರ ನರ್ತನ.ಕೃಷ್ಣನು ಅದನ್ನು ಮಾಡಿದಾಗ ಇನ್ನೂ ಏಳು ವರ್ಷದ ಬಾಲಕ.ಇನ್ನೂ ಕಾಮವು ಚಿಗುರಿರದ ವಯಸ್ಸು ಗೋಪಿಯರು ಅವನಿಗಿಂತ ಸ್ವಲ್ಪ ದೊಡ್ಡವರೂ ಕೆಲವರು ಬೇಗನೆ ವಿವಾಹಿತರೂ ಆಗಿದ್ದರೂ ಅವರೂ ಚಿಕ್ಕವರೇ!ವೃಂದಾವನ,ದ್ವಾರಕೆಗಳ ಪ್ರಾಂತ್ಯಗಳಲ್ಲಿ ಈಗಲೂ ಅನೇಕ ಸ್ತ್ರೀಯರ ಮಧ್ಯೆ ಒಬ್ಬ ಪುರುಷನು ಕುಣಿಯುವ ಗರ್ಭಾ,ಕೋಲಾಟ ಮೊದಲಾದ ಹಳ್ಳಿಯ ನೃತ್ಯಗಳನ್ನನ ಕಾಣಬಹುದು.ಆಗಲೂ ಇಂಥ ನರ್ತನಗಳಿದ್ದು,ಕೃಷ್ಣನು ಅಂಥ ನರ್ತನವನ್ನು ಮಾಡಿರಬಹುದು.ಭಾಗವತವು,'ಆತ್ಮನ್ಯವರುದ್ಧ ಸೌರತಃ',ಅಂದರೆ,ತನ್ನಲ್ಲಿ ಕಾಮವನ್ನು ನಿಗ್ರಹಿಸಿಕೊಂಡಿದ್ದ ಎಂದು ಕೃಷ್ಣನ ಬಗ್ಗೆ ಹೇಳುತ್ತದೆ.ಹಾಗಾಗಿ ಕೃಷ್ಣನು ಒಬ್ಬ ಕಲಾವಿದನಂತೆ ಶೃಂಗಾರನರ್ತನ,ಕ್ರೀಡೆಗಳನ್ನು ಗೋಪಿಯರೊಂದಿಗೆ ಮಾಡಿದನೇ ಹೊರತು,ಕಾಮಕ್ಕೆ ವಶನಾಗಲಿಲ್ಲ ಎಂದು ಅರ್ಥ.ಇನ್ನೊಂದು ವಿಷಯವೆಂದರೆ ಗೋಪಿಯರೆಲ್ಲರೂ ಒಂದು ವರ್ಷದ ಹಿಂದೆ ಕಾತ್ಯಾಯಿನೀವ್ರತ ಮಾಡುತ್ತಾ ಕೃಷ್ಣನೇ ತಮಗೆ ಪತಿಯಾಗಲೆಂದು ಬೇಡಿಕೊಳ್ಳುತ್ತಿದ್ದರು.ಆಗೊಮ್ಮೆ ಅವರು ಪೂರ್ಣ ನಗ್ನರಾಗಿ ಯಮುನಾನದಿಯಲ್ಲಿ ಸ್ನಾನ ಮಾಡಲು,ಆ ತಪ್ಪಿಗಾಗಿ ಕೃಷ್ಣನು ಅವರ ವಸ್ತ್ರಗಳನ್ನು ಕದ್ದು ನಗ್ನರಾಗಿ ನಮಸ್ಕರಿಸುವಂತೆ ಮಾಡಿ ಅವನ್ನು ಹಿಂದಿರುಗಿಸಿದ್ದ.ಲೌಕಿಕವಾಗಿ ಇವು ಬಹಳ ಚಿಕ್ಕ ಮಕ್ಕಳ ಆಟ.ಆಧ್ಯಾತ್ಮಿಕವಾಗಿ,ಕೃಷ್ಣನು ಅವರಲ್ಲಿದ್ದ ನಾನು ಎಂಬ ಭಾವವನ್ನು ನಗ್ನತೆಯ ಮೂಲಕ ಸಂಪೂರ್ಣವಾಗಿ ತೊಡೆದುಹಾಕಿಸಿ,ಪೂರ್ಣ ಸಮರ್ಪಣಾಭಾವವನ್ನು ತಂದು,ಆ ಮೂಲಕ,ಪತಿಭಾವವನ್ನು ಕರುಣಿಸಿದ್ದ.ಆದರೆ ಕಾಮಕ್ಕೆ ಒಳಗಾಗದೇ,ವಸ್ತ್ರಗಳನ್ನು ಸುಮ್ಮನೆ ಹಿಂದಿರುಗಿಸಿದ್ದ.ಅಲ್ಲದೇ,ನದಿಗಳಲ್ಲಿ ಪೂರ್ಣ ನಗ್ನರಾಗಿ ಇಳಿದರೆ ವರುಣನಿಗೆ ಅಪಚಾರವಾಗುತ್ತದೆ ಎಂಬ ಪಾಠವನ್ನೂ ಕಲಿಸಿದ್ದ.ಸಾರ್ವಜನಿಕ ನದಿ,ಕೊಳಗಳಲ್ಲಿ ಪೂರ್ಣ ನಗ್ನರಾಗಿ ಸ್ನಾನ ಮಾಡಬಾರದೆಂದು ತೋರಿಸಿದ್ದ.ಆ ಸಂದರ್ಭದಲ್ಲಿ,ಅವರ ಭಾವವನ್ನು ಗ್ರಹಿಸಿದ ಕೃಷ್ಣನು,ಮುಂದಿನ ಶರತ್ಕಾಲದಲ್ಲಿ ಅವರ ಆಸೆಯನ್ನು ಪೂರೈಸುವೆನೆಂದೂ ಅದಕ್ಕಾಗಿ ಪ್ರತೀಕ್ಷಿಸಬೇಕೆಂದೂ ಹೇಳಿದ.ತನ್ನಲ್ಲಿ ಕಾಮವನ್ನು ತಾಳಿದರೆ ಅದು ಕಾಮವಲ್ಲ ಎಂದು ಹೇಳಿದ.ಏಕೆಂದರೆ ಒಣಗಿದ,ಹುರಿದ,ಧಾನ್ಯಗಳು ಮಳಕೆಯೊಡೆಯುವುದಿಲ್ಲ.ಅಂತೆಯೇ ಕೃಷ್ಣನ ಪ್ರೀತಿಯಲ್ಲಿ ಕರ್ಮಗಳೆಲ್ಲವೂ ಕಳೆದುಹೋಗುತ್ತವೆ.ಹಾಗಾಗಿ ಅವನ ಮೇಲಿನ ಕಾಮ,ಲೌಕಿಕ ಕಾಮದಂತೆ ಕರ್ಮವನ್ನು ಅಂಟಿಸುವುದಿಲ್ಲ.ಹೀಗೆ,ತಾನು ಮಾತು ಕೊಟ್ಟಿದ್ದಂತೆ ಕೃಷ್ಣನು ಆ ಶರತ್ಕಾಲದ ರಾತ್ರಿ,ಗೋಪಿಯರೊಂದಿಗೆ ರಾಸಲೀಲೆಯಾಡಿದ.ಕೆಲವು ಗೋಪಿಯರನ್ನು ಪತಿಯಂದಿರು ಹೋಗಲು ಬಿಡದಿರಲು,ಅವರು ಕೃಷ್ಣನ ಧ್ಯಾನದಲ್ಲೇ ಮೈಮರೆತು ಆನಂದವನ್ನನುಭವಿಸಿದರೆಂದು ಭಾಗವತ ಹೇಳುತ್ತದೆ.ಇನ್ನು ಇತರರು ಕೃಷ್ಣನೊಂದಿಗೆ ನರ್ತಿಸುತ್ತಿದ್ದರೂ,ಅವನ ಮಾಯೆಯಿಂದ ಅವರ ಪತಿಯರಿಗೆ ಅವರು ತಮ್ಮೊಂದಿಗೇ ಇದ್ದಂತೆ ಭಾಸವಾಯಿತು ಎಂದೂ ಹೇಳುತ್ತದೆ ಭಾಗವತ.ಅಂದರೆ,ಗೋಪಿಯರು ಆತ್ಮಭಾವದಲ್ಲಿ ಕೃಷ್ಣನೊಂದಿಗೆ ನರ್ತಿಸಿದರು.ಅವರ ದೇಹಗಳು ಮನೆಯಲ್ಲೇ ಇದ್ದವು.ಇನ್ನೊಂದು ಸ್ವಾರಸ್ಯವೆಂದರೆ,ಕೃಷ್ಣನು,ಎಷ್ಟು ಗೋಪಿಕೆಯರಿದ್ದರೋ ಅಷ್ಟಾಗಿ ವಿಸ್ತರಿಸಿಕೊಂಡು ನರ್ತಿಸಿದನು.ಹಾಗಾಗಿ,ಪ್ರತಿಯೊಬ್ಬ ಗೋಪಿಕಾಸ್ತ್ರೀಗೂ ತನ್ನೊಂದಿಗೆ ಕೃಷ್ಣನು ನರ್ತಿಸುತ್ತಿದ್ದನೆಂಬ ಭಾವವುಂಟಾಯಿತು.ಹಾಗಾಗಿ,ಇದು,ಜೀವಾತ್ಮರು ಪರಮಾತ್ಮನೊಂದಿಗೆ ನರ್ತಿಸಿದ ದೈವೀನೃತ್ಯವಾಗಿತ್ತು.
            ಕೃಷ್ಣನು ಗೋಪಿಯರೊಂದಿಗೆ ರಾಸಲೀಲೆಯಾಡಿದುದಕ್ಕೆ,ಒಂದು ಸ್ವಾರಸ್ಯವಾದ ಕಥೆಯಿದೆ.ಇದು,ಕೃಷ್ಣೋಪನಿಷತ್ತೆಂಬ ಚಿಕ್ಕ ಉಪನಿಷತ್ತಿನಲ್ಲಿ ಬರುತ್ತದೆ.ಅದರಂತೆ,,ಶ್ರೀರಾಮನು ದಂಡಕಾರಣ್ಯಕ್ಕೆ ಬಂದಾಗ,ಅಲ್ಲಿದ್ದ ಋಷಿಮುನಿಗಳಿಗೆ ಅವನ ಮನೋಹರವಾದ ರೂಪವನ್ನು ನೋಡಿ ಅವನನ್ನು ಆಲಂಗಿಸಿಕೊಳ್ಳಬೇಕೆಂದು ಆಸೆಯಾಯಿತು.ಆಗ ಶ್ರೀರಾಮನು,"ಈಗ ಬೇಡ.ನನ್ನ ಮುಂದಿನ ಅವತಾರವಾದ ಕೃಷ್ಣಾವತಾರದಲ್ಲಿ ನೀವು ಗೋಪಿಕಾಸ್ತ್ರೀಯರಾಗಿ ಹುಟ್ಟುವಿರಿ.ಆಗ ನಿಮ್ಮ ಆಸೆಯನ್ನು ಪೂರೈಸುವೆ.ಶೃಂಗಾರಭಾವಕ್ಕೆ ಸ್ತ್ರೀಪುರುಷ ಪ್ರೇಮವೇ ಹೆಚ್ಚು ನಿಕಟ",ಎಂದು ವರವಿತ್ತನು.ಆ ಹಿಂದಿನ ಋಷಿಮುನಿಗಳೇ ಗೋಪಿಕಾಸ್ತ್ರೀಯರಾಗಿ ಹುಟ್ಟಿ,ತಮ್ಮ ಅಪರಿಮಿತವಾದ ತಪಸ್ಸಿನ ಫಲದಿಂದ ಸಾಕ್ಷಾತ್ ಪರಬ್ರಹ್ಮನಾದ ಶ್ರೀಕೃಷ್ಣನೊಂದಿಗೆ ರಾಸಲೀಲೆಯಾಡಿದರು.

ಸೋಮವಾರ, ಫೆಬ್ರವರಿ 10, 2020

ಪುರಾಣ ಕುತೂಹಲ-ಗರುಡನು ಹೇಗೆ ವಿಷ್ಣುವಿನ ವಾಹನನಾದನು?

ಗರಡನು ವೇಗವಾಗಿ ಹಾರುವ ಬಲಶಾಲಿ ಪಕ್ಷಿ.ಪಕ್ಷಿಗಳ ರಾಜನೆಂದೂ ಖ್ಯಾತವಾಗಿದೆ.ಭಗವಂತನು ಭಕ್ತರು ಕರೆದಾಗ ಬೇಗನೆ ಬರುತ್ತಾನೆ ಎಂದು ವಿಷ್ಣುವಿನ ವಾಹನನಾದ ಗರುಡನ ಸಂಕೇತವಾಗಿದೆ.ಗರುಡನು ಹೇಗೆ ವಿಷ್ಣುವಿನ ವಾಹನನಾದ ಎನ್ನುವುದಕ್ಕೆ ಸ್ವಾರಸ್ಯವಾದ ಒಂದು ಕಥೆಯೂ ಇದೆ.ಇದು,ಮಹಾಭಾರತದ ಆದಿಪರ್ವದಲ್ಲಿ ಬರುವ ಗರುಡನ ಕಥೆಯ ಅಂಗವಾಗಿಯೇ ಬರುತ್ತದೆ.
        ಗರುಡನು ಕಶ್ಯಪ ಮಹರ್ಷಿ ಮತ್ತು ವಿನತೆಯರ ಮಗ.ಕಶ್ಯಪರ ಇನ್ನೊಬ್ಬ ಪತ್ನಿಯಾದ ಕದ್ರುವಿನಿಂದ ವಿನತೆಗೆ ಪಂದ್ಯವೊಂದರಲ್ಲಿ ಸೋಲಾಗಿ ದಾಸ್ಯವುಂಟಾಗಿರಲು,ಗರುಡನು ತನ್ನ ತಾಯಿಯ ದಾಸ್ಯವನ್ನು ಬಿಡಿಸಲು ಕದ್ರುವಿನ ಮಕ್ಕಳಾದ ಸರ್ಪಗಳ ಅಪೇಕ್ಷೆಯಂತೆ,ಅಮೃತವನ್ನು ತರಲು ಸ್ವರ್ಗಲೋಕಕ್ಕೆ ಹೋದನು.ಅಲ್ಲಿ ಸಾಹಸದಿಂದ ಅಮೃತದ ಕೊಡವನ್ನು ತೆಗೆದುಕೊಂಡು ಹಾರುತ್ತಾ ಹಿಂದಿರುಗುತ್ತಿದ್ದಾಗ,ಮಹಾವಿಷ್ಣುವು ಅವನನ್ನು ಕಂಡನು.ಕೈಯಲ್ಲಿ ಅಮೃತವಿದ್ದರೂ ಅದನ್ನು ಒಂದಿಷ್ಟೂ ಸೇವಿಸದ ನಿಸ್ವಾರ್ಥಿಯಾದ ಅವನನ್ನು ನೋಡಿ ಮೆಚ್ಚಿದ ವಿಷ್ಣುವು ಅವನನ್ನು ಕರೆದು ವಿಚಾರಿಸಿ ಅವನಿಗೆ ಒಂದು ವರವನ್ನು ಕೊಡುವೆನೆಂದನು.ಅದಕ್ಕೆ ಗರುಡನು ತನ್ನ ಹುಡುಗತನದಲ್ಲಿ ತಾನು ವಿಷ್ಣುವಿಗಿಂತಲೂ ಎತ್ತರವಿರಬೇಕೆಂದು ಕೇಳಿಕೊಂಡನು.ಆಗ ವಿಷ್ಣುವು ಅವನಿಗೆ ತನ್ನ ಧ್ವಜಸ್ತಂಭದ ಮೇಲೆ ಕೂರಲು ಹೇಳಿದನು.ಅದರಂತೆ ಗರುಡನು ಕೂರಲು,ವಿಷ್ಣುವು,"ನೋಡು!ಈಗ ನನಗಿಂತಲೂ ನೀನೇ ಎತ್ತರವಿದ್ದೀಯೆ!"ಎಂದನು.ಗರುಡನು ಈ ಚಮತ್ಕಾರವನ್ನು ಮರುಮಾತಿಲ್ಲದೆ ಒಪ್ಪಿಕೊಂಡನು.ಅಂದಿನಿಂದ ಗರುಡನು ವಿಷ್ಣುವಿನ ಧ್ವಜವನ್ನು ಅಲಂಕರಿಸಿದನು.ಅನಂತರ,ಗರುಡನು ಪುನಃ ತನ್ನ ಹುಡುಗತನದಲ್ಲಿ ವಿಷ್ಣುವಿಗೆ,"ದೇವ!ನಾನೂ ನಿನಗೊಂದು ವರವನ್ನು ಕೊಡುವೆ!"ಎಂದನು.ಆಗ ವಿಷ್ಣುವು,"ಹಾಗಿದ್ದರೆ ನೀನು ನನ್ನ ವಾಹನನಾಗು!"ಎಂದನು.ಗರುಡನು ಒಪ್ಪಿ,ತನ್ನ ತಾಯಿಯನ್ನು ದಾಸ್ಯದಿಂದ ಬಿಡಿಸಿ ಬರುವೆನೆಂದು ಹೊರಟನು.ಅಂದಿನಿಂದ ಗರುಡನು ವಿಷ್ಣುವಿನ ವಾಹನನಾದನು.

ಮಂಗಳವಾರ, ಜನವರಿ 28, 2020

ಪುರಾಣ ಕುತೂಹಲ-ಶ್ರೀ ಕೃಷ್ಣನು ಎಕೆ ಕಪ್ಪಗಿದ್ದ ಮತ್ತು ಬಲರಾಮ ಏಕೆ ಬೆಳ್ಳಗಿದ್ದ?

ಕೃಷ್ಣ ಎಂಬ ಪದದ ಅರ್ಥವೇ ಕಪ್ಪು ಎಂದು.ಕೃಷ್ಣ ಎಂದರೆ ಆಕರ್ಷಣೆ ಎಂದೂ ಆಗುತ್ತದೆ.ಕಪ್ಪು ಬಣ್ಣ,ಆಳ ಹಾಗೂ ನಿಗೂಢತೆಯನ್ನು ಸೂಚಿಸುತ್ತದೆ.ಭಗವಂತ ಬಹಳ ಆಳ ಹಾಗೂ ನಿಗೂಢವಾಗಿರುವುದರಿಂದ ಕೃಷ್ಣ ಕಪ್ಪು ಬಣ್ಣದಲ್ಲಿಅವತರಿಸಿದ ಎನ್ನಬಹುದು.ಕೃಷ್ಣನ ಮೂಲವಾದ ವಿಷ್ಣುವನ್ನೂ ಕಪ್ಪಾಗಿಯೇ ತೋರಿಸಲಾಗುತ್ತದೆ.ಬಲರಾಮನು ವಿಷ್ಣುವು ಮಲಗಿರುವ ಆದಿಶೇಷ ಸರ್ಪದ ಅವತಾರ.ಆದಿಶೇಷ ಬಿಳಿಯ ಸರ್ಪ.ಅಲ್ಲದೇ ಬಿಳಿ ಶುಭ್ರತೆಯ ಸಂಕೇತ.ಹಾಗಾಗಿ,ವಿಷ್ಣುವಿನ ಅಂಶಾವತಾರವಾದ ಬಲರಾಮನು ಬಿಳಿಯಾಗಿದ್ದ ಎನ್ನಬಹುದು.
ವಿಷ್ಣುಪುರಾಣದಲ್ಲಿ,ಕೃಷ್ಣ,ಬಲರಾಮರು ಕಪ್ಪು,ಬಿಳುಪಾಗಿದ್ದುದಕ್ಕೆ ಕಾರಣವಾಗಿ ಒಂದು ಸ್ವಾರಸ್ಯವಾದ ಕಥೆಯಿದೆ.ಅದೆಂದರೆ,ದೇವತೆಗಳೆಲ್ಲರೂ ಭೂದೇವಿಯ ಸಹಿತವಾಗಿ ಮಹಾವಿಷ್ಣುವಿನ ಬಳಿ ಹೋಗಿ,ಭೂಮಿಯಲ್ಲಿ ಅನೇಕ ದುಷ್ಟರು ಜನಿಸಿ ಭೂಭಾರ ಹೆಚ್ಚಿರುವುದರಿಂದ ಅವನು ಅವತರಿಸಿ ಅವರನ್ನು ಸಂಹರಿಸಬೇಕೆಂದು ಪ್ರಾರ್ಥಿಸಿದರು.ಆಗ ಮಹಾವಿಷ್ಣುವು,ತನ್ನ ತಲೆಯಿಂದ ಒಂದು ಕಪ್ಪಾದ ಮತ್ತು ಒಂದು ಬಿಳಿಯಾದ ಕೂದಲುಗಳನ್ನು ಭೂಮಿಯ ಮೇಲೆ ಹಾಕಿದನು.ಕಪ್ಪು ಕೂದಲು,ಕೃಷ್ಣನಾಯಿತು,ಹಾಗೂ ಬಿಳಿಯ ಕೂದಲು ಬಲರಾಮನಾಯಿತು!ಹಾಗಾಗಿ ಕೃಷ್ಣ,ಬಲರಾಮರ ಬಣ್ಣ,ಕಪ್ಪು,ಬಿಳುಪಾಯಿತು.ದುಷ್ಟರ ಸಂಹಾರ ಮಾಡಿ ಭೂಭಾರ ಇಳಿಸಲು ಭಗವಂತನ ಎರಡು ಕೂದಲುಗಳೇ ಸಾಕೆಂದೂ ಈ ಕಥೆ ತೋರಿಸುತ್ತದೆ.