ಗುರುವಾರ, ಫೆಬ್ರವರಿ 13, 2025

ಸಂಸ್ಕೃತ ಸುಭಾಷಿತಗಳು -೧೦

ಸಂಸ್ಕೃತ ಸುಭಾಷಿತ 

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವ: /
ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ //

ಪ್ರಿಯವಾಗಿ ಮಾತನಾಡುವುದರಿಂದ ಎಲ್ಲಾ ಜೀವಿಗಳಿಗೂ ಸಂತೋಷವಾಗುತ್ತದೆ! ಆದ್ದರಿಂದ ಅದನ್ನೇ ಮಾತಾಡಬೇಕು.ಮಾತಿನಲ್ಲೇನು ಬಡತನ? 

                               ಚಾಣಕ್ಯ ನೀತಿ 

 ಪ್ರಿಯವಾಗಿ, ಇನ್ನಬ್ಬರ ಮನಸ್ಸಿಗೆ ನೋವಾಗದಂತೆ, ಅವರಿಗೆ ಸಂತೋಷವಾಗುವಂತೆ ಮಾತನಾಡುವುದು ಒಂದು ಉತ್ತಮ ಸಂಸ್ಕಾರ.ಇದು ಏನು ದೊಡ್ಡ ವಿಷಯ ಎಂದು ಯಾರಾದರೂ ಕೇಳಬಹುದು.ಆದರೆ ಇದು ಹೇಳಿದಷ್ಟು ಸರಳವಲ್ಲ.ಎಷ್ಟೋ ಜನ ಒಳ್ಳೆಯ ವಿದ್ಯಾವಂತರೂ ಕಲಾವಿದರೂ ಧನವಂತರೂ ಆಗಿರುತ್ತಾರೆ.ಆದರೆ ಅವರಿಗೆ ಇನ್ನೊಬ್ಬರೊಂದಿಗೆ ಪ್ರಿಯವಾಗಿ ಮಾತನಾಡಲು ಬರುವುದಿಲ್ಲ.ಅವರ ನಾಲಿಗೆ ಬಹಳ ಹರಿತವಾಗಿರುತ್ತದೆ.ಅವರಿಗೆ ಇತರರನ್ನು ವ್ಯಂಗ್ಯವಾಗಿ ಟೀಕಿಸಿ ಮುಖ ಸಪ್ಪಗೆ ಮಾಡಿದರೆ ಅದೇನೋ ವಿಕೃತವಾದ ಆನಂದ! ಯಾವಾಗ ಬಯ್ಯಲಿ ಎಂದು ಅವರು ಕಾತರಿಸುತ್ತಿರುತ್ತಾರೆ. ಇಂಥವರಿಗೆ ಎಷ್ಟು ವಿದ್ಯೆಯಿರಲಿ ಏನೇ ಇರಲಿ ಇವರನ್ನು ಯಾರೂ ಇಷ್ಟಪಡುವುದಿಲ್ಲ.ಆದಷ್ಟೂ ಇಂಥವರಿಂದ ದೂರವಿರಲು ಪ್ರಯತ್ನಿಸುತ್ತಾರೆ.ಇಂಥವರಿಗೆ ಹಿಡಿಶಾಪವನ್ನೂ ಹಾಕುತ್ತಾರೆ.ಪರಿಣಾಮವಾಗಿ ಇವರಿಗೆ ಸಮಾಜದಲ್ಲಿ ಯಾವುದೇ ಒಳ್ಳೆಯ ಸ್ಥಾನಮಾನ, ಜನಪ್ರೀತಿಗಳು ಸಿಗದೇ ಇವರು ಕೊರಗುತ್ತಾರೆ.ಅದರಿಂದ ಇವರ ವರ್ತನೆ ಇನ್ನಷ್ಟು ಕಟುವಾಗುತ್ತದೆ.ಒಂದು ಮಾತಾಡಿದರೂ ಇವರಿಗೆ ಸಹ್ಯವಾಗದೇ ತಪ್ಪು ತಿಳಿದು ಇನ್ನಷ್ಟು ಬಯ್ಯುತ್ತಾರೆ! ಜನರು ಇನ್ನಷ್ಟು ದೂರವಾಗುತ್ತಾರೆ.‌ಇವರಿಗೆ ತಮ್ಮ ತಪ್ಪಿನ ಅರಿವೇ ಆಗುವುದಿಲ್ಲ! ಒಮ್ಮೆಯಾದರೂ ಪ್ರಿಯವಾಗಿ ಮಾತನಾಡಲು ಇವರು ಪ್ರಯತ್ನಿಸುವುದಿಲ್ಲ.ಇನ್ನೊಂದು ಸಮಸ್ಯೆಯೆಂದರೆ ಹಾಗೆ ಪ್ರಿಯವಾಗಿ ಮಾತನಾಡುವುದೇ ತಪ್ಪು ಎಂದು ಇವರು ಭಾವಿಸಿರುತ್ತಾರೆ.ಸತ್ಯವನ್ನೇ ಹೇಳಬೇಕು, ಅದನ್ನೂ ಪರುಷವಾಗಿ ಹೇಳಬೇಕು, ಪ್ರಿಯವಾಗಿ ಮಾತನಾಡುವುದು ಒಂದು ದೌರ್ಬಲ್ಯ ಎಂದು ಇವರು ತಪ್ಪಾಗಿ ಭಾವಿಸಿರುತ್ತಾರೆ.ಈ ವಿಷಯದಲ್ಲಿ ಇನ್ನೊಂದು ಜನಪ್ರಿಯ ಸುಭಾಷಿತವಿದೆ.

   ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ 
           ನ ಬ್ರೂಯಾತ್ ಸತ್ಯಮಪ್ರಿಯಮ್ /
    ಪ್ರಿಯಂ ಚ ನಾನೃತಂ ಬ್ರೂಯಾತ್ 
          ಏಷ ಧರ್ಮ: ಸನಾತನ: //

   ' ಸತ್ಯವನ್ನು ಹೇಳಬೇಕು.ಪ್ರಿಯವನ್ನು ಹೇಳಬೇಕು.ಆದರೆ ಅಪ್ರಿಯವಾದ ಸತ್ಯವನ್ನು ಹೇಳಬಾರದು.ಪ್ರಿಯವಾಗಿದೆಯೆಂದು ಸುಳ್ಳನ್ನೂ ಹೇಳಬಾರದು.ಇದೇ ಸನಾತನ ಧರ್ಮ.'

     ಅಂದರೆ ತೂಕ ಮಾಡಿ ಮಾತಾಡಬೇಕು.ಖಂಡಿತವಾದಿಯಾಗಬೇಕೆಂದು ಅಗತ್ಯವಿಲ್ಲದೆಡೆ ಅಗತ್ಯವಿಲ್ಲದವರಿಗೆ ಅಪ್ರಿಯವಾದ ಸತ್ಯಗಳನ್ನು ಹೇಳಹೋಗಬಾರದು.ಕೇಳಲು ಪ್ರಿಯವಾಗಿದೆಯೆಂದು ಸುಳನ್ನೂ ಹೇಳಬಾರದು.ಒಬ್ಬ ವೈದ್ಯನು ಒಬ್ಬ ರೋಗಿಗೆ ಹೋಗದಿರುವ ಕಾಯಿಲೆಯ ಬಗ್ಗೆ ಹೇಳದಿರಲಾಗುವುದೇ? ಆದರೆ ಒಂದೇ ಬಾರಿಗೆ ಮರ್ಮಭೇದಕವಾಗಿ ಅದು ಹೋಗುವುದೇ ಇಲ್ಲ ಎಂದು ಹೇಳುವ ಬದಲಿಗೆ ಸ್ವಲ್ಪ ಸ್ವಲ್ಪವೇ ಹೇಳಿ ಹೇಗೆ ಅದನ್ನು ನಿಯಂತ್ರಣದಲ್ಲಿಡಬಹುದು ಹಾಗೂ ಇತರ ರೋಗಗಳಿಗಿಂತ ಇದು ಸ್ವಲ್ಪ ವಾಸಿಯೆಂದು ಹೇಳುತ್ತಾ ಅವನಲ್ಲಿ ಆತ್ಮಸ್ಥೈರ್ಯವನ್ನು ತುಂಬಿದರೆ ಅವನು ಅದರಿಂದಲೇ ಸೂಧಾರಿಸುತ್ತಾನೆ.ಆದರೆ ಇದು ಹೋಗಿಯೇಬಿಡುತ್ತದೆ ಎಂದು ಪೂರ್ತಿ ಸುಳ್ಳು ಹೇಳಿ ಅವನನ್ನು ಮೆಚ್ಚಿಸಿದರೆ ಅವನು ಅದಕ್ಕೆ ನಿಯಂತ್ರಣೋಪಿಯಗಳನ್ನು ಮಾಡದೇ ನಾಳೆ ಆ ರೋಗ ಇನ್ನಷ್ಟು ಉಲ್ಬಣಗೊಳ್ಳಬಹುದು. 
       ಪ್ರಿಯವಾಗಿದೆಯೆಂದು ಅಶ್ರೇಯಸ್ಸನ್ನು ಬೋಧಿಸಬಾರದು.ಉದಾಹರಣೆಗೆ ಮದ್ಯವು ಚೆನ್ನಾಗಿದೆಯೆಂದು ಅದನ್ನು ಚೆನ್ನಾಗಿ ಕುಡಿ ಎಂದು ಬೋಧಿಸಿದರೆ ತಪ್ಪಾಗುತ್ತದೆ.ಈ ವಿಷಯವಾಗಿ ಮಾರೀಚನು ರಾಮಾಯಣದಲ್ಲಿ ರಾವಣನಿಗೆ ಬಹಳ ಸೊಗಸಾಗಿ ಹೇಳುತ್ತಾನೆ -

     ಸುಲಭಾ: ಪುರುಷಾ ರಾಜನ್ ಸತತಂ ಪ್ರಿಯವಿದೀನ: /
     ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭ: //

    ' ಎಲೈ ರಾಜಾ! ಸತತವಾಗಿ ಪ್ರಿಯವಾಗಿ ಮಾತನಾಡುವಶರು ಬಹಳ ಜನ ಸುಲಭವಾಗಿ ಸಿಗುತ್ತಾರೆ. ಆದರೆ ಅಪ್ರಿಯವಾದ ಸತ್ಯವನ್ನು ಹೇಳುವವರೂ ಕೇಳುವವರೂ ಬಹಳ ಕಡಿಮೆ.'

     ಒಳ್ಳೆಯದು ಒಮ್ಮೊಮ್ಮೆ ಕೇಳಲು ಚೆನ್ನಾಗಿರುವುದಿಲ್ಲ.ಆದರೆ ದೀರ್ಘಾವಧಿಯಲ್ಲಿ ಅದು ಒಳ್ಳೆಯದನ್ನು ಮಾಡುತ್ತದೆ.ತಂದೆತಾಯಿಯರು ಈಗ ಚೆನ್ನಾಗಿ ಓದು ಎಂದು ಹೇಳಿದರೆ ಮಕ್ಕಳಿಗೆ ಇಷ್ಟವಾಗುವುದಿಲ್ಲ.ಆದರೆ ಅದು ಮುಂದೆ ಸಹಾಯ ಮಾಡುತ್ತದೆ.ಆದರೆ ಇಲ್ಲಿಯೂ ಸಕ್ಕರೆ ಲೇಪಿತ ಔಷಧಿಯಂತೆಯೋ ಪಂಚತಂತ್ರ,ಪುರಾಣಾದಿ ಕಥೆಗಳಂತೆಯೋ ಪ್ರಿಯವಾಗಿಯೇ ಸ್ನೇಹಿತನಂತೆ ಒಳ್ಳೆಯದನ್ನು ಹೇಳಬಹುದು.ಇದೊಂದು ಕಲೆ. 
    ಒಟ್ಟಿನಲ್ಲಿ ಯಾವಾಗಲೂ ಪ್ರಿಯವಾಗಿ, ಸೌಮ್ಯವಾಗಿ, ವಿನೀತನಾಗಿ ಮಾತನಾಡಿದಷ್ಟೂ ಅದು ಎಲ್ಲರಿಗೂ ಮುಟ್ಟುತ್ತದೆ.ಇಲ್ಲವಾದರೆ ಎಲ್ಲರೂ ದೂರವಾಗುತ್ತಾರೆ.ಮಾತಿನ ಉದ್ದೇಶವೂ ನೆರವೇರುವುದಿಲ್ಲ.ಆದ್ದರಿಂದಲೇ ಕವಿಯು ಮಾತಿನಲ್ಲೇಕೆ ಬಡತನ ಎಂದು ಕೇಳುತ್ತಾನೆ.ಅಲ್ಲವೇ? ಕೆಲವರು ಹಣದಲ್ಲಿ ಬಡವರಿರಬಹುದು.ಆದರೆ ಮಾತಿನಲ್ಲಿ ಯಾರೂ ಬಡವರಲ್ಲ.ಮಾತು ಮನುಷ್ಯನಿಗೆ ಬಂದಿರುವ ಒಂದು ಅದ್ಭುತ ವರ.ಅದನ್ನು ಚೆನ್ನಾಗಿ ಬಳಸಿಕೊಂಡರೆ ಎಲ್ಲರ ಪ್ರೀತಿ ಗಳಿಸಿ ಔನ್ನತ್ಯ ಸಾಧಿಸಬಹುದು.