ಶನಿವಾರ, ಮಾರ್ಚ್ 1, 2025

ಚಳಿಗಾಲದ ಚರ್ಮ ಸಮಸ್ಯೆಗಳು

ನಿಮಗೆ ಕಜ್ಜಿಯಾಗಿದೆ ಎಂದು ಚರ್ಮವೈದ್ಯರು ಹೇಳಿದ ಕೂಡಲೇ ಅನೇಕ ರೋಗಿಗಳು ಹೌಹಾರುತ್ತಾರೆ! ಅಯ್ಯೋ! ಅಂಥ ಭಯಂಕರ ರೋಗ ನನಗಾಗಿಲ್ಲ ಡಾಕ್ಟ್ರೇ! ಏನೋ ಸುಮ್ಮನೆ ಕೆರೆತ ಅಷ್ಟೇ! ಸರಿಯಾಗಿ ನೋಡಿ ಡಾಕ್ಟ್ರೇ! ಎಂದು ಅಲವತ್ತುಕೊಳ್ಳುತ್ತಾರೆ! ಇದಕ್ಕೆ ಕಾರಣವೆಂದರೆ ಕಜ್ಜಿಯನ್ನು ನಾಯಿಯೊಂದಿಗೆ ತಳುಕು ಹಾಕಿಕೊಂಡಿರುವುದು! ನಿಜ! ನಾಯಿಗೆ ಕಜ್ಜಿ ಬಂದರೆ ಅದರ ಮೈಯ ರೋಮಗಳೆಲ್ಲಾ  ಉದುರಿ ಗಟ್ಟಿಯಾದ ಮಚ್ಚೆಗಳಾಗಿ ವಿಕಾರವಾಗಿ ಕಾಣುವುದು! ಆದರೆ ಮನುಷ್ಯರಿಗೆ ಕಜ್ಜಿ ಬಂದರೆ ಹಾಗೆ ಕಾಣುವುದಿಲ್ಲ.ನಮ್ಮಲ್ಲಿ , ವಿಶಿಷ್ಟವಾಗಿ ಬೆರಳುಸಂದುಗಳು,ಮಣಕೈಯ ಒಳಭಾಗ, ತೋಳು, ಕಂಕುಳು, ಸ್ತನಗಳ ಕೆಳಗೆ, ನಾಭಿಯ ಸುತ್ತ,ತೊಡೆಸಂದು, ಗುಪ್ತಾಂಗಗಳು, ಹಾಗೂ ಪೃಷ್ಠದ ಮೇಲೆ  ಗುಳ್ಳೆಗಳು,ನೀರ್ಗುಳ್ಳೆಗಳು,ಕೆರೆದ ಗುರುತುಗಳು, ಮತ್ತು ಕೆಲವೊಮ್ಮೆ ಗಂಟಿನಂಥ ದಪ್ಪ ಗುಳ್ಳೆಗಳು ಆಗುತ್ತವೆ! ಈ ಪ್ರದೇಶಗಳನ್ನು ಒಂದು ಕಾಲ್ಪನಿಕ ಚಕ್ರಾಕಾರವಾಗಿ ಸೇರಿಸಬಹುದು.ಅದನ್ನು ಹೆಬ್ರಾನ ಚಕ್ರ ( Circle of Hebra) ಎನ್ನುತ್ತಾರೆ.ಮೈಯೆಲ್ಲಾ ತುರಿಸುತ್ತಿದ್ದು ಇದು ರಾತ್ರಿಯ ವೇಳೆ ಹೆಚ್ಚುತ್ತದೆ.ಕಜ್ಜಿಯ ಅತ್ಯಂತ ವಿಶಿಷ್ಟ ಗುರುತೆಂದರೆ ಬರ್ರೋ ಅಥವಾ ಬಿಲ.ಇದು ಒಂದು ಅಲೆಯಾಕಾರದ ದಾರದಂಥ ಬಿಳಿ ಗುರುತಾಗಿದ್ದು,ಅದರ ತೆರೆದ ತುದಿಯಲ್ಲಿ ಒಂದು ಗುಳ್ಳೆಯಿರುತ್ತದೆ.ಇದು ಶಿಶ್ನ ಇಲ್ಲವೇ ಬೆರಳುಸಂದುಗಳಲ್ಲಿ ಕಂಡುಬರುತ್ತದೆ.ಆದರೆ ಇದು ಸುಲಭವಾಗಿ ಕಾಣಸಿಗುವುದಿಲ್ಲ.
      ಕಜ್ಜಿ ಅಥವಾ ಸ್ಕೇಬೀಸ್ ಕಾಯಿಲೆ ಬರುವುದು ನುಸಿ ಅಥವಾ ಮೈಟ್ ಎಂಬ ಕೀಟದಿಂದ.ವೈಜ್ಞಾನಿಕವಾಗಿ ಇದನ್ನು ಸಾರ್ಕೋಪ್ಟೆಸ್ ಸ್ಕೇಬೀ ( Sarcoptes scabie) ಎನ್ನುತ್ತಾರೆ.ಇದೊಂದು ರಕ್ತ ಹೀರುವ ಪರಾವಲಂಬಿ ಕೀಟವಾಗಿದ್ದು ಚರ್ಮವನ್ನು ಬಿಲ ಕೊರೆದು ಪ್ರವೇಶಿಸಿ ಅದರ ಮೇಲ್ಮೈಯಲ್ಲಿ ನೆಲೆಸುತ್ತದೆ.ಹೆಣ್ಣು ನುಸಿ ತನ್ನ ಜೀವನ ಚಕ್ರದಲ್ಲಿ ನಲವತ್ತರಿಂದ ಐವತ್ತು ಮೊಟ್ಟೆಗಳನ್ನಿರಿಸಿ ಅವುಗಳಿಂದ ಬರುವ ಮರಿಗಳು ಮೈಯೆಲ್ಲಾ ಹರಡುತ್ತವೆ.
        ಕಜ್ಜಿಯು  ಒಬ್ಬರಿಂದೊಬ್ಬರಿಗೆ ಸುಲಭವಾಗಿ ಅಂಟುತ್ತದೆ.ಸ್ನಾನ ಮೊದಲಾಗಿ ಶುದ್ಧತೆಯಿಲ್ಲದಿರುವುದು, ಅತಿಯಾದ ಜನಸಂದಣಿಯಲ್ಲಿ ಓಡಾಡುವುದು, ಗಾಳಿಬೆಳಕುಗಳಿಲ್ಲದ ಹೆಚ್ಚು ಜನರಿರುವ ಮನೆಗಳಲ್ಲಿ ವಾಸಿಸುವುದು, ಕಜ್ಜಿ ಹರಡಲು ಪ್ರೋತ್ಸಾಹಿಸುತ್ತದೆ.ಮಕ್ಕಳಲ್ಲಿ ಇದು ಹೆಚ್ಚು. ರೋಗನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಕಜ್ಜಿ ತೀವ್ರವಾಗಿ ಆಗುತ್ತದೆ.
   ಕಜ್ಜಿಯಲ್ಲಿ ಮುಖ್ಯವಾಗಿ ತುರಿಕೆಯಿರುವುದರಿಂದ ಕೆರೆದು ಗಾಯಗಳಾಗಿ ಅವುಗಳಿಗೆ ಬ್ಯಾಕ್ಟೀರಿಯಾ ಅಂಟಿ ಎರಡನೆಯ ಸೋಂಕಾಗಬಹುದು.ಆಗ ಕೀವ್ಗುಳ್ಳೆಗಳು, ಕುರದಂಥ ಊತಗಳು ಉಂಟಾಗಿ ನೋವು ತರುತ್ತವೆ.
     ಕಜ್ಜಿಯ ಚಿಕಿತ್ಸೆ ಬಹಳ ಸುಲಭ.ಪರ್ಮೆಥ್ರಿನ್ ಎಂಬ ಮುಲಾಮು ಇದಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.ಕಜ್ಜಿ ಕೀಟವನ್ನು ಕೊಲ್ಲುವ ಇದು ನಮಗೇನೂ ತೊಂದರೆ ಮಾಡುವುದಿಲ್ಲ.ಇದನ್ನು ವೈದ್ಯರ ನಿರ್ದೇಶಾನುಸಾರ ರಾತ್ರಿ ಗಲ್ಲದಿಂದ ಕೆಳಗೆ ಮೈಪೂರಾ ಸವರಿ ಹನ್ನೆರಡು ಗಂಟೆಗಳ ಬಳಿಕ, ಅಂದರೆ ಬೆಳಗ್ಗೆ ಅದೇ ಸಮಯಕ್ಕೆ ಸ್ನಾನ ಮಾಡಿ ತೊಳೆಯಬೇಕು.ಮುಲಾಮು ಕೀಟದ ಮೊಟ್ಟೆಗಳ ಮೇಲೆ ಪ್ರಭಾವ ಬೀರದುದರಿಂದ ಹಾಗೂ ಒಂದು ವಾರದಲ್ಲಿ ಮರಿಗಳು ಬರುವುದರಿಂದ ಒಂದು ವಾರದ ನಂತರ ಇದನ್ನು ಪುನಃ ಬಳಸಬೇಕಾಗುತ್ತದೆ.ಹೀಗೆ ಈ ಮುಲಾಮನ್ನು ಎರಡು ಬಾರಿ ಬಳಸಿದರೆ ಕಜ್ಜಿ ಗುಣವಾಗುತ್ತದೆ.ಆದರೆ ನವೆ ಮತ್ತು ಗುಳ್ಳೆಗಳು ದೇಹದ ಪ್ರತಿಕ್ರಿಯೆಯಾದ್ದರಿಂದ ಇವುಗಳಿಗೆ ಬೇರೆ ಮುಲಾಮು ಮತ್ತು ಔಷಧಿಗಳು ಬೇಕಾಗುತ್ತವೆ.
     ಮೇಲೆ ವಿವರಿಸಿದ ಕಜ್ಜಿಯು ಸಾಮಾನ್ಯ ಬಗೆಯದ್ದಾಗಿದ್ದು, ಈ ರೀತಿ ಉಂಟಾದಾಗ ಮೈಮೇಲೆ ಹತ್ತರಿಂದ ಹದಿನೈದು ನುಸಿಗಳಿರುತ್ತವೆ.ಆದರೆ ದೇಹದ ರೋಗನಿರೋಧಕ ಶಕ್ತಿ ಬಹಳ ಕಡಿಮೆಯಿದ್ದರೆ, ಗಟ್ಟಿಯಾದ ಪದರಗಳಿರುವ ಮಚ್ಚೆಗಳಾಗುವ ತೀವ್ರ ಬಗೆಯ ಕಜ್ಜಿಯಾಗುತ್ತದೆ.ಇದನ್ನು ನಾರ್ವೇಜಿಯನ್ ಕಜ್ಜಿ ( Norwegian Scabies) ಅಥವಾ ಕ್ರಸ್ಟೆಡ್ ಸ್ಕೇಬೀಸ್ ( Crusted Scabies)ಎನ್ನುತ್ತಾರೆ.ಈ ಬಗೆಯ ಕಜ್ಜಿಯಲ್ಲಿ ಮೈಮೇಲೆ ಸಾವಿರಾರು ನುಸಿಗಳಿರುತ್ತವೆ.ಇದಕ್ಕೆ ತೀವ್ರ ಚಿಕಿತ್ಸೆ ಬೇಕಾಗುತ್ತದೆ.ಮುಲಾಮಿನ ಜೊತೆಗೆ ಮಾತ್ರೆಗಳೂ ಬೇಕಾಗುತ್ತವೆ.
     ಕಜ್ಜಿಯು ಪ್ರಾಣಿಗಳಿಂದಲೂ ನಮಗೆ ಅಂಟಬಹುದು.ಮುಖ್ಯವಾಗಿ ಕಜ್ಜಿ ನಾಯಿಗಳಿಂದ ಅಂಟುತ್ತದೆ.ಆದ್ದರಿಂದ ನಾಯಿಯೊಂದಿಗೆ ಒಡನಾಡುವವರು ಎಚ್ಚರವಾಗಿರಬೇಕು ಹಾಗೂ ಅದಕ್ಕೆ ಕಜ್ಜಿ ಬಂದಿದೆ ಎಂದು ಸಂಶಯವಾದರೆ ಪಶುವೈದ್ಯರಿಗೆ ತೋರಿಸಬೇಕು.
     ಕಜ್ಜಿಯು ಒಬ್ಬರಿಂದೊಬ್ಬರಿಗೆ ಅಂಟುವುದರಿಂದ, ಕೆಲವೊಮ್ಮೆ ಒಬ್ಬರಿಗೆ ಚಿಕಿತ್ಸೆ ಮಾಡಿದರೂ ಅವರಿಂದ ಅವರ ಸಮೀಪವರ್ತಿಗಳಿಗೆ ಅಂಟಿ ರೋಗಲಕ್ಷಣಗಳು ಕಾಣಿಸಿಕೊಳ್ಳದೇ ಅವರಿಂದ ಪುನಃ ಇವರಿಗೇ ಅಂಟಬಹುದು.ಹೀಗಾದಾಗ ಅದಕ್ಕೆ ಪಿಂಗ್ ಪಾಂಗ್ ಪರಿಣಾಮ ( Ping pong effect) ಎನ್ನುತ್ತಾರೆ.ಇದನ್ನು ತಪ್ಪಿಸಲು, ರೋಗಿಯ ಸಮೀಪವರ್ತಿಗಳಿಗೂ ಚಿಕಿತ್ಸೆ ಮಾಡಬೇಕಾಗುತ್ತದೆ.ಸಾಮಾನ್ಯವಾಗಿ ಹಾಸ್ಟೆಲ್,ಶಾಲೆ, ಜೈಲುಗಳಲ್ಲಿ ಹಾಗೂ  ಮನೆಗಳಲ್ಲಿ ಸಮೀಪವರ್ತಿಗಳಿಗೆ ಹೀಗೆ ಮಾಡಬೇಕಾಗುತ್ತದೆ.
       ಕೆಲವೊಮ್ಮೆ ಶುಭ್ರವಾಗಿರುವವರಲ್ಲಿ ಕಜ್ಜಿಯಾದಾಗ ಅದರ ಲಕ್ಷಣಗಳು ಬಹಳ ಕಡಿಮೆಯಿರುತ್ತವೆ.ಇದನ್ನು ಅಡಗಿದ ಕಜ್ಜಿ ( Hidden Scabies) ಎನ್ನುತ್ತಾರೆ.ಅಂತೆಯೇ ಸ್ಟಿರಾಯ್ಡ್ ಮುಲಾಮು ಬಳಸಿ, ಇಲ್ಲವೇ ತಪ್ಪಾದ ಸ್ವಯಂ ಚಿಕಿತ್ಸೆ  ಮಾಡಿಕೊಂಡರೆ ರೋಗ ಲಕ್ಷಣಗಳು ಸ್ಪಷ್ಟವಾಗಿರದೇ ಬೇರೆಯೇ ರೀತಿ ಇರುತ್ತವೆ.ಇದನ್ನು ಛದ್ಮ ಕಜ್ಜಿ  ( Scabies incognito) ಎನ್ನುತ್ತಾರೆ.ಹಾಗಾಗಿ ಮೈಯೆಲ್ಲಾ ಕೆರೆತವಾದರೆ, ಅದರಲ್ಲೂ ರಾತ್ರಿಯಲ್ಲಿ ಹೆಚ್ಚಾಗಿದ್ದರೆ, ಚರ್ಮವೈದ್ಯರಿಗೆ ತೋರಿಸಬೇಕು.ಕಜ್ಜಿಯು ಅಂಟುರೋಗವಾಗಿರುವುದರಿಂದ ಶುಭ್ರವಾಗಿರುವವರಲ್ಲೂ ಬರಬಹುದು.
       ಹೀಗೆ, ಕಜ್ಜಿ ಒಂದು ಸಾಮಾನ್ಯವಾದ ಸೌಮ್ಯ ಚರ್ಮರೋಗ.ಇದಕ್ಕೆ ಹೆದರದೇ ಬೇಗನೆ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು.ಇಲ್ಲವಾದರೆ ಇದು ಇತರರಿಗೂ ಹರಡಿ, ಕೆರೆತದಿಂದ ಇತರ ಸಮಸ್ಯೆಗಳೂ ಉಂಟಾಗುತ್ತವೆ.
                                
ಕಜ್ಜಿ

ಗುರುವಾರ, ಫೆಬ್ರವರಿ 13, 2025

ಸಂಸ್ಕೃತ ಸುಭಾಷಿತಗಳು -೧೦

ಸಂಸ್ಕೃತ ಸುಭಾಷಿತ 

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವ: /
ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ //

ಪ್ರಿಯವಾಗಿ ಮಾತನಾಡುವುದರಿಂದ ಎಲ್ಲಾ ಜೀವಿಗಳಿಗೂ ಸಂತೋಷವಾಗುತ್ತದೆ! ಆದ್ದರಿಂದ ಅದನ್ನೇ ಮಾತಾಡಬೇಕು.ಮಾತಿನಲ್ಲೇನು ಬಡತನ? 

                               ಚಾಣಕ್ಯ ನೀತಿ 

 ಪ್ರಿಯವಾಗಿ, ಇನ್ನಬ್ಬರ ಮನಸ್ಸಿಗೆ ನೋವಾಗದಂತೆ, ಅವರಿಗೆ ಸಂತೋಷವಾಗುವಂತೆ ಮಾತನಾಡುವುದು ಒಂದು ಉತ್ತಮ ಸಂಸ್ಕಾರ.ಇದು ಏನು ದೊಡ್ಡ ವಿಷಯ ಎಂದು ಯಾರಾದರೂ ಕೇಳಬಹುದು.ಆದರೆ ಇದು ಹೇಳಿದಷ್ಟು ಸರಳವಲ್ಲ.ಎಷ್ಟೋ ಜನ ಒಳ್ಳೆಯ ವಿದ್ಯಾವಂತರೂ ಕಲಾವಿದರೂ ಧನವಂತರೂ ಆಗಿರುತ್ತಾರೆ.ಆದರೆ ಅವರಿಗೆ ಇನ್ನೊಬ್ಬರೊಂದಿಗೆ ಪ್ರಿಯವಾಗಿ ಮಾತನಾಡಲು ಬರುವುದಿಲ್ಲ.ಅವರ ನಾಲಿಗೆ ಬಹಳ ಹರಿತವಾಗಿರುತ್ತದೆ.ಅವರಿಗೆ ಇತರರನ್ನು ವ್ಯಂಗ್ಯವಾಗಿ ಟೀಕಿಸಿ ಮುಖ ಸಪ್ಪಗೆ ಮಾಡಿದರೆ ಅದೇನೋ ವಿಕೃತವಾದ ಆನಂದ! ಯಾವಾಗ ಬಯ್ಯಲಿ ಎಂದು ಅವರು ಕಾತರಿಸುತ್ತಿರುತ್ತಾರೆ. ಇಂಥವರಿಗೆ ಎಷ್ಟು ವಿದ್ಯೆಯಿರಲಿ ಏನೇ ಇರಲಿ ಇವರನ್ನು ಯಾರೂ ಇಷ್ಟಪಡುವುದಿಲ್ಲ.ಆದಷ್ಟೂ ಇಂಥವರಿಂದ ದೂರವಿರಲು ಪ್ರಯತ್ನಿಸುತ್ತಾರೆ.ಇಂಥವರಿಗೆ ಹಿಡಿಶಾಪವನ್ನೂ ಹಾಕುತ್ತಾರೆ.ಪರಿಣಾಮವಾಗಿ ಇವರಿಗೆ ಸಮಾಜದಲ್ಲಿ ಯಾವುದೇ ಒಳ್ಳೆಯ ಸ್ಥಾನಮಾನ, ಜನಪ್ರೀತಿಗಳು ಸಿಗದೇ ಇವರು ಕೊರಗುತ್ತಾರೆ.ಅದರಿಂದ ಇವರ ವರ್ತನೆ ಇನ್ನಷ್ಟು ಕಟುವಾಗುತ್ತದೆ.ಒಂದು ಮಾತಾಡಿದರೂ ಇವರಿಗೆ ಸಹ್ಯವಾಗದೇ ತಪ್ಪು ತಿಳಿದು ಇನ್ನಷ್ಟು ಬಯ್ಯುತ್ತಾರೆ! ಜನರು ಇನ್ನಷ್ಟು ದೂರವಾಗುತ್ತಾರೆ.‌ಇವರಿಗೆ ತಮ್ಮ ತಪ್ಪಿನ ಅರಿವೇ ಆಗುವುದಿಲ್ಲ! ಒಮ್ಮೆಯಾದರೂ ಪ್ರಿಯವಾಗಿ ಮಾತನಾಡಲು ಇವರು ಪ್ರಯತ್ನಿಸುವುದಿಲ್ಲ.ಇನ್ನೊಂದು ಸಮಸ್ಯೆಯೆಂದರೆ ಹಾಗೆ ಪ್ರಿಯವಾಗಿ ಮಾತನಾಡುವುದೇ ತಪ್ಪು ಎಂದು ಇವರು ಭಾವಿಸಿರುತ್ತಾರೆ.ಸತ್ಯವನ್ನೇ ಹೇಳಬೇಕು, ಅದನ್ನೂ ಪರುಷವಾಗಿ ಹೇಳಬೇಕು, ಪ್ರಿಯವಾಗಿ ಮಾತನಾಡುವುದು ಒಂದು ದೌರ್ಬಲ್ಯ ಎಂದು ಇವರು ತಪ್ಪಾಗಿ ಭಾವಿಸಿರುತ್ತಾರೆ.ಈ ವಿಷಯದಲ್ಲಿ ಇನ್ನೊಂದು ಜನಪ್ರಿಯ ಸುಭಾಷಿತವಿದೆ.

   ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ 
           ನ ಬ್ರೂಯಾತ್ ಸತ್ಯಮಪ್ರಿಯಮ್ /
    ಪ್ರಿಯಂ ಚ ನಾನೃತಂ ಬ್ರೂಯಾತ್ 
          ಏಷ ಧರ್ಮ: ಸನಾತನ: //

   ' ಸತ್ಯವನ್ನು ಹೇಳಬೇಕು.ಪ್ರಿಯವನ್ನು ಹೇಳಬೇಕು.ಆದರೆ ಅಪ್ರಿಯವಾದ ಸತ್ಯವನ್ನು ಹೇಳಬಾರದು.ಪ್ರಿಯವಾಗಿದೆಯೆಂದು ಸುಳ್ಳನ್ನೂ ಹೇಳಬಾರದು.ಇದೇ ಸನಾತನ ಧರ್ಮ.'

     ಅಂದರೆ ತೂಕ ಮಾಡಿ ಮಾತಾಡಬೇಕು.ಖಂಡಿತವಾದಿಯಾಗಬೇಕೆಂದು ಅಗತ್ಯವಿಲ್ಲದೆಡೆ ಅಗತ್ಯವಿಲ್ಲದವರಿಗೆ ಅಪ್ರಿಯವಾದ ಸತ್ಯಗಳನ್ನು ಹೇಳಹೋಗಬಾರದು.ಕೇಳಲು ಪ್ರಿಯವಾಗಿದೆಯೆಂದು ಸುಳನ್ನೂ ಹೇಳಬಾರದು.ಒಬ್ಬ ವೈದ್ಯನು ಒಬ್ಬ ರೋಗಿಗೆ ಹೋಗದಿರುವ ಕಾಯಿಲೆಯ ಬಗ್ಗೆ ಹೇಳದಿರಲಾಗುವುದೇ? ಆದರೆ ಒಂದೇ ಬಾರಿಗೆ ಮರ್ಮಭೇದಕವಾಗಿ ಅದು ಹೋಗುವುದೇ ಇಲ್ಲ ಎಂದು ಹೇಳುವ ಬದಲಿಗೆ ಸ್ವಲ್ಪ ಸ್ವಲ್ಪವೇ ಹೇಳಿ ಹೇಗೆ ಅದನ್ನು ನಿಯಂತ್ರಣದಲ್ಲಿಡಬಹುದು ಹಾಗೂ ಇತರ ರೋಗಗಳಿಗಿಂತ ಇದು ಸ್ವಲ್ಪ ವಾಸಿಯೆಂದು ಹೇಳುತ್ತಾ ಅವನಲ್ಲಿ ಆತ್ಮಸ್ಥೈರ್ಯವನ್ನು ತುಂಬಿದರೆ ಅವನು ಅದರಿಂದಲೇ ಸೂಧಾರಿಸುತ್ತಾನೆ.ಆದರೆ ಇದು ಹೋಗಿಯೇಬಿಡುತ್ತದೆ ಎಂದು ಪೂರ್ತಿ ಸುಳ್ಳು ಹೇಳಿ ಅವನನ್ನು ಮೆಚ್ಚಿಸಿದರೆ ಅವನು ಅದಕ್ಕೆ ನಿಯಂತ್ರಣೋಪಿಯಗಳನ್ನು ಮಾಡದೇ ನಾಳೆ ಆ ರೋಗ ಇನ್ನಷ್ಟು ಉಲ್ಬಣಗೊಳ್ಳಬಹುದು. 
       ಪ್ರಿಯವಾಗಿದೆಯೆಂದು ಅಶ್ರೇಯಸ್ಸನ್ನು ಬೋಧಿಸಬಾರದು.ಉದಾಹರಣೆಗೆ ಮದ್ಯವು ಚೆನ್ನಾಗಿದೆಯೆಂದು ಅದನ್ನು ಚೆನ್ನಾಗಿ ಕುಡಿ ಎಂದು ಬೋಧಿಸಿದರೆ ತಪ್ಪಾಗುತ್ತದೆ.ಈ ವಿಷಯವಾಗಿ ಮಾರೀಚನು ರಾಮಾಯಣದಲ್ಲಿ ರಾವಣನಿಗೆ ಬಹಳ ಸೊಗಸಾಗಿ ಹೇಳುತ್ತಾನೆ -

     ಸುಲಭಾ: ಪುರುಷಾ ರಾಜನ್ ಸತತಂ ಪ್ರಿಯವಿದೀನ: /
     ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭ: //

    ' ಎಲೈ ರಾಜಾ! ಸತತವಾಗಿ ಪ್ರಿಯವಾಗಿ ಮಾತನಾಡುವಶರು ಬಹಳ ಜನ ಸುಲಭವಾಗಿ ಸಿಗುತ್ತಾರೆ. ಆದರೆ ಅಪ್ರಿಯವಾದ ಸತ್ಯವನ್ನು ಹೇಳುವವರೂ ಕೇಳುವವರೂ ಬಹಳ ಕಡಿಮೆ.'

     ಒಳ್ಳೆಯದು ಒಮ್ಮೊಮ್ಮೆ ಕೇಳಲು ಚೆನ್ನಾಗಿರುವುದಿಲ್ಲ.ಆದರೆ ದೀರ್ಘಾವಧಿಯಲ್ಲಿ ಅದು ಒಳ್ಳೆಯದನ್ನು ಮಾಡುತ್ತದೆ.ತಂದೆತಾಯಿಯರು ಈಗ ಚೆನ್ನಾಗಿ ಓದು ಎಂದು ಹೇಳಿದರೆ ಮಕ್ಕಳಿಗೆ ಇಷ್ಟವಾಗುವುದಿಲ್ಲ.ಆದರೆ ಅದು ಮುಂದೆ ಸಹಾಯ ಮಾಡುತ್ತದೆ.ಆದರೆ ಇಲ್ಲಿಯೂ ಸಕ್ಕರೆ ಲೇಪಿತ ಔಷಧಿಯಂತೆಯೋ ಪಂಚತಂತ್ರ,ಪುರಾಣಾದಿ ಕಥೆಗಳಂತೆಯೋ ಪ್ರಿಯವಾಗಿಯೇ ಸ್ನೇಹಿತನಂತೆ ಒಳ್ಳೆಯದನ್ನು ಹೇಳಬಹುದು.ಇದೊಂದು ಕಲೆ. 
    ಒಟ್ಟಿನಲ್ಲಿ ಯಾವಾಗಲೂ ಪ್ರಿಯವಾಗಿ, ಸೌಮ್ಯವಾಗಿ, ವಿನೀತನಾಗಿ ಮಾತನಾಡಿದಷ್ಟೂ ಅದು ಎಲ್ಲರಿಗೂ ಮುಟ್ಟುತ್ತದೆ.ಇಲ್ಲವಾದರೆ ಎಲ್ಲರೂ ದೂರವಾಗುತ್ತಾರೆ.ಮಾತಿನ ಉದ್ದೇಶವೂ ನೆರವೇರುವುದಿಲ್ಲ.ಆದ್ದರಿಂದಲೇ ಕವಿಯು ಮಾತಿನಲ್ಲೇಕೆ ಬಡತನ ಎಂದು ಕೇಳುತ್ತಾನೆ.ಅಲ್ಲವೇ? ಕೆಲವರು ಹಣದಲ್ಲಿ ಬಡವರಿರಬಹುದು.ಆದರೆ ಮಾತಿನಲ್ಲಿ ಯಾರೂ ಬಡವರಲ್ಲ.ಮಾತು ಮನುಷ್ಯನಿಗೆ ಬಂದಿರುವ ಒಂದು ಅದ್ಭುತ ವರ.ಅದನ್ನು ಚೆನ್ನಾಗಿ ಬಳಸಿಕೊಂಡರೆ ಎಲ್ಲರ ಪ್ರೀತಿ ಗಳಿಸಿ ಔನ್ನತ್ಯ ಸಾಧಿಸಬಹುದು.