ಶುಕ್ರವಾರ, ಸೆಪ್ಟೆಂಬರ್ 6, 2024

ಸಂಸ್ಕೃತ ಸ್ವಾರಸ್ಯಗಳು

ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಮ್ /
ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಹೇ //

    ಈ ಶ್ಲೋಕವನ್ನು ನಾವು ಹಲವಾರು ಬಾರಿ ಕೇಳಿರುತ್ತೇವೆ.ಇದೊಂದು ಗಣೇಶಸ್ತುತಿಯೆಂದು ಎಲ್ಲರಿಗೂ ಗೊತ್ತಿದೆ.ಆದರೆ ಇದರ ಅರ್ಥವೇನೆಂದು ಹೆಚ್ಚು ಜನ ಯೋಚಿಸುವುದಿಲ್ಲ.ಈದರ ನೇರವಾದ ಅರ್ಥ ಹೀಗೆ -
    ' ಗಜಮುಖನಲ್ಲದ, ಸೂರ್ಯನನ್ನು ಕಂಡ ಪದ್ಮದಂಥ ಮುಖವುಳ್ಳ, ಭಕ್ತರಿಗೆ ಅನೇಕ ದಂತಗಳನ್ನುಳ್ಳವನಾದ, ಏಕದಂತನಾದ ಗಜಮುಖನನ್ನು ನಾವು ಹಗಲು, ರಾತ್ರಿಗಳು ಉಪಾಸಿಸುತ್ತೇವೆ!'
       ಇದೇನು ವಿಚಿತ್ರ ಎನಿಸುತ್ತಿದೆಯೇ? ಒಂದು ಕಡೆ ಗಜಾನನನಲ್ಲ ಎಂದಿದ್ದರೆ( ಅಗಜಾನನ) ಇನ್ನೊಂದು ಕಡೆ, ಗಜಾನನ ಎಂದಿದೆ ! ಪದ್ಮಾರ್ಕಂ ಎಂದರೆ, ಅರ್ಕ ಅಥವಾ ಸೂರ್ಯನನ್ನು ಕಂಡ ಪದ್ಮ ಅಥವಾ ಕಮಲ. ಇದನ್ನೇಕೆ ಗಣೇಶನ ಮುಖಕ್ಕೆ ಹೇಳಿದರು? ಭಕ್ತರಿಗೆ ಅನೇಕದಂತ ಎಂದು ಹೇಳಿ ಅನಂತರ ಏಕದಂತ ಎಂದರು! ಇದೇಕೆ? ಶ್ಲೋಕ ಸರಳವಾಗಿದ್ದರೂ ವಿಚಿತ್ರವಾಗಿದೆಯಲ್ಲವೇ? 
       ಇದೊಂದು ಒಗಟಿನಂಥ ಶ್ಲೋಕ! ಶ್ಲೇಷಾರ್ಥವುಳ್ಳ ಶ್ಲೋಕ.ಅಂದರೆ ಪದಚ್ಛೇದವನ್ನು ಬೇರೆ ರೀತಿಯಲ್ಲಿ ಮಾಡಿದರೆ ಬೇರೆಯೇ ಅರ್ಥ ಬರುತ್ತದೆ.ಅದನ್ನೀಗ ನೋಡೋಣ.
    ಅಗ ಎಂದರೆ ಬೆಟ್ಟ. ' ನ ಗಚ್ಛತಿ ಇತಿ ಅಗ: ' ಅಂದರೆ, ಯಾವುದು ಗಮಿಸುವುದಿಲ್ಲವೋ ಅಥವಾ ಚಲಿಸುವುದಿಲ್ಲವೋ ಅದು ಅಗ ಅಥವಾ ಬೆಟ್ಟ. ಅಗಜಾ ಎಂದರೆ ಅಗದ ಮಗಳು, ಅಂದರೆ ಹಿಮವಂತನೆಂಬ ಪರ್ವತರಾಜನ ಮಗಳು, ಪಾರ್ವತಿ! ಆನನ ಎಂದರೆ ಮುಖ. 'ಪದ್ಮಾರ್ಕಂ' ಎಂದರೆ ಸೂರ್ಯನನ್ನು ಕಂಡ ಕಮಲ. ಅಂದರೆ ಮಗನಾದ ಗಜಾನನನನ್ನು ಕಂಡಾಗ, ಹಿಮವಂತನ ಮಗಳಾದ ಪಾರ್ವತಿಯ ಮುಖ ಸೂರ್ಯನನ್ನು ಕಂಡ ಕಮಲದಂತೆ ಅರಳಿತು ಎಂದು ಅರ್ಥ! ಈಗ 'ಅನೇಕದಂತಂ' ಎನ್ನುವುದನ್ನು ಅನೇಕದಂ ತಂ ಎಂದು ಬಿಡಿಸಿದರೆ ಭಕ್ತರಿಗೆ ಅನೇಕ ವರಗಳನ್ನು ಕೊಡುವವನಾದ ಅವನನ್ನು ಎಂದಾಗುತ್ತದೆ! ಈಗ ಪೂರ್ತಿ ಅರ್ಥ ನೋಡೋಣ -
    ' ಯಾವ ಪುತ್ರನಾದ ಗಜಾನನನನ್ನು ನೋಡಿದಾಗ ಹಿಮವಂತನೆಂಬ ಪರ್ವತರಾಜನ ಮಗಳಾದ ಪಾರ್ವತಿಯ ಮುಖವು ಸೂರ್ಯನನ್ನು ಕಂಡ ಕಮಲದಂತೆ ಅರಳಿತೋ, ಯಾರು ಭಕ್ತರಿಗೆ ಅನೇಕ ವರಗಳನ್ನು ಕೊಡುವನೋ, ಆ ಏಕದಂತನನ್ನು ಅಹರ್ನಿಶಿ ನಾವು ಉಪಾಸಿಸುತ್ತೇವೆ!'
         ಸಂಸ್ಕೃತ ಒಂದು ಅದ್ಭುತ ಭಾಷೆ! ಇಂಥ ಸಾವಿರಾರು ಚಮತ್ಕಾರಗಳನ್ನು ಸಂಸ್ಕೃತದಲ್ಲಿ ಮಾಡಬಹುದು! ಇಂಥ ಸಾವಿರಾರು ಶ್ಲೇಷಾರ್ಥವುಳ್ಳ ಶ್ಲೋಕಗಳು, ಪ್ರಹೇಲಿಕೆಗಳೆಂಬ ಒಗಟು ಶ್ಲೋಕಗಳು,ಒಗಟಿನಂಥ ಕೂಟ ಶ್ಲೋಕಗಳು ಹಲವಾರಿವೆ! ಈಗಲೂ ಪಂಡಿತರು ಇಂಥ ಶ್ಲೋಕಗಳನ್ನು ರಚಿಸುತ್ತಿದ್ದಾರೆ!
        ಗಣೇಶ ಚತುರ್ಥಿಯ ಶುಭಾಶಯಗಳು!