ಕಂಸನ ತಂದೆ ಉಗ್ರಸೇನನು ಒಳ್ಳೆಯವನಾದರೂ ಕಂಸನು ಏಕೆ ದುಷ್ಟನಾದ?
ನಾವು ನಿತ್ಯ ಜೀವನದಲ್ಲಿ ತಂದೆಯು ಒಳ್ಳೆಯವನಾಗಿ ಮಗನು ಕೆಟ್ಟವನಾಗಿರುವುದೋ ಅಥವಾ ಮಗನೇ ಒಳ್ಳೆಯವನಾಗಿ ತಂದೆಯು ಕೆಟ್ಟವನಾಗಿರುವುದನ್ನೋ ನೋಡುತ್ತೇವೆ.ಇದು ಸಾಮಾನ್ಯವಾಗಿ ಕಂಡುಬರುತ್ತದೆ.ತಂದೆಯು ಒಳ್ಳೆಯವನಾಗಿದ್ದರೂ ತನ್ನ ಕೆಲಸಕಾರ್ಯಗಳ ಒತ್ತಡದಲ್ಲಿ ಮಗನಿಗೆ ಪ್ರೀತಿ ತೋರಿಸದೇ ಅವನ ತಪ್ಪುಗಳನ್ನು ತಿದ್ದದೇ ಒಳ್ಳೆಯ ಶಿಕ್ಷಣ ಕೊಡದೇ ಹೋದಾಗ ಮಗನು ದುಷ್ಟರ ಸಹವಾಸಕ್ಕೆ ಬಿದ್ದು ಕೆಟ್ಟವನಾಗಬಹುದು.ಅಥವಾ ತಂದೆಯು ದುಷ್ಟನಾಗಿದ್ದರೂ ಮಗನು ಸಜ್ಜನರ ಸಹವಾಸದಿಂದ ಒಳ್ಳೆಯವನಾಗಬಹುದು.ಇಂಥ ಉದಾಹರಣೆಗಳು ಪುರಾಣಗಳಲ್ಲಿ ಬಹಳ ಸಿಗುತ್ತವೆ.ಆದರೆ ಅಲ್ಲಿ ನಮಗೆ ಇದಕ್ಕೆ ಸ್ವಾರಸ್ಯಕರ ಕಾರಣಗಳು ಸಿಗುತ್ತವೆ.ಅಂಥ ಒಂದು ಉದಾಹರಣೆ ಉಗ್ರಸೇನ ಮತ್ತು ಆವನ ಮಗ ಕಂಸ.ಎಲ್ಲರಿಗೂ ಗೊತ್ತಿರುವಂತೆ ಯಾದವರ ರಾಜನಾದ ಉಗ್ರಸೇನನು ಒಬ್ಬ ಸಜ್ಜನ.ಆದರೆ ಅವನ ಮಗ ಕಂಸನು ಮಹಾದುಷ್ಟ! ತನ್ನ ತಂದೆ, ತಾಯಿಯರನ್ನೇ ಸೆರೆಮನೆಗೆ ತಳ್ಳಿ ಮಥುರಾ ರಾಜ್ಯವನ್ನಾಳುತ್ತಿದ್ದನಲ್ಲದೇ ಪ್ರಜೆಗಳನ್ನೂ ಹಿಂಸಿಸುತ್ತಿದ್ದ.ಅವನ ತಂದೆ ಉಗ್ರಸೇನನ ಸಹೋದರ ದೇವಕನ ಮಗಳಾದ ದೇವಕಿಯನ್ನು ವಸುದೇವನು ಮದುವೆಯಾದಾಗ, ಅವರ ರಥವನ್ನು ಕಂಸನೇ ನಡೆಸುತ್ತಿದ್ದ.ಆಗ ಅಶರೀರವಾಣಿಯಾಗಿ ಈ ದೇವಕಿಗೆ ಹುಟ್ಟುವ ಎಂಟನೆಯ ಮಗನೇ ಅವನ ಮೃತ್ಯುವಾಗುತ್ತಾನೆ ಎಂದಾಗ, ಕಂಸನು ದೇವಕಿಯನ್ನೇ ಕೊಲ್ಲಲು ಹೊರಟ! ಆಗ ವಸುದೇವನು ಅವನನ್ನು ಪರಿಪರಿಯಾಗಿ ಬೇಡಿಕೊಂಡು ಹುಟ್ಟುವ ಮಕ್ಕಳನ್ನೆಲ್ಲಾ ಅವನಿಗೇ ಕೊಡುತ್ತೇನೆಂದು ವಾಗ್ದಾನ ಮಾಡಿದಾಗ ಅವನು ಸುಮ್ಮನಾದ.ಅನಂತರ ಅವನು ವಸುದೇವನ ಮಕ್ಕಳನ್ನೆಲ್ಲಾ ಕೊಂದುದಲ್ಲದೇ ಅವನನ್ನೂ ದೇವಕಿಯನ್ನೂ ಸೆರೆಯಲ್ಲಿಟ್ಟ.ವಸುದೇವನ ಮಗ ಬೇರೆಲ್ಲೋ ಇದ್ದಾನೆಂದು ತಿಳಿದಾಗ ಅವನನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸಿದ.ಕೊನೆಗೆ ತನ್ನ ಸೋದರಳಿಯ ಕೃಷ್ಣನಿಂದಲೇ ಹತನಾದ.ಕಂಸನು ಏಕೆ ಇಷ್ಟೊಂದು ದುಷ್ಟನಾದ?
ಇದಕ್ಕೆ ಮಹಾಭಾರತದ ಖಿಲಭಾಗವಾದ ಹರಿವಂಶದಲ್ಲಿ ಸ್ವಾರಸ್ಯಕರವಾದ ಒಂದು ಕಾರಣವಿದೆ.ಅದನ್ನು ನಾರದರೇ ಕಂಸನಿಗೆ ಹೇಳುತ್ತಾರೆ.ಅದರಂತೆ, ವಾಸ್ತವವಾಗಿ ಉಗ್ರಸೇನನು ಕಂಸನ ತಂದೆಯಾಗಿರಲಿಲ್ಲ.ದ್ರುಮಿಲನೆಂಬ ರಾಕ್ಷಸ ಕಂಸನ ನಿಜವಾದ ತಂದೆಯಾಗಿದ್ದ.ಒಮ್ಮೆ ಉಗ್ರಸೇನನ ಪತ್ನಿ ರಜಸ್ವಲೆಯಾಗಿದ್ದಾಗ, ಅವಳು ಇತರ ಸಖಿಯರೊಂದಿಗೆ ಸುಯಾಮುನವೆಂಬ ಪರ್ವತವನ್ನು ನೋಡಲು ಹೋದಳು.ಆ ಪರ್ವತದ ಪ್ರಕೃತಿ ಸೌಂದರ್ಯ ಅವಳನ್ನು ಮನಸೆಳೆಯಿತು! ಸುಂದರ ವೃಕ್ಷಗಳು, ತಂಪಾದ ಗಾಳಿ, ನವಿಲುಗಳ ಕೇಕಾಧ್ವನಿ, ಇತರ ಪಕ್ಷಿಗಳ ಕಲರವ, ಕಿನ್ನರರ ಗಾಯನ, ಇವುಗಳಿಂದ ಕೂಡಿದ್ದ ಆ ಪರ್ವತದ ಶಿಖರಗಳಲ್ಲೂ ಗುಹೆಗಳಲ್ಲೂ ನದೀತೀರಗಳಲ್ಲೂ ಅವಳು ವಿಹರಿಸಿದಳು! ಆಹ್ಲಾದಕರವಾದ ಆ ವಾತಾವರಣ ಕಾಮೋದ್ದೀಪನಗೊಳಿಸುತ್ತಿತ್ತು! ಅಂತೆಯೇ ಅವಳಿಗೂ ಪುರುಷಸಮಾಗಮದ ಇಚ್ಛೆಯಾಯಿತು! ಅದೇ ಸಮಯದಲ್ಲಿ ದ್ರುಮಿಲನೆಂಬ ದಾನವನು ವಿಧಿಪ್ರೇರಿತವಾಗಿ ಅಲ್ಲಿಗೆ ಬಂದನು.ಅವನು ಸೌಭವೆಂಬ ವಿಮಾನಕ್ಕೆ ಅಧಿಪತಿಯಾಗಿದ್ದನು.ಆ ಸುಯಾಮುನ ಪರ್ವತವನ್ನು ನೋಡುವ ಇಚ್ಛೆಯಿಂದ ಅವನು ವಿಮಾನವನ್ನು ಅಲ್ಲಿಯೇ ನಿಲ್ಲಿಸಿ ತನ್ನ ಸಾರಥಿಯೊಂದಿಗೆ ಆ ಪರ್ವತದಲ್ಲಿ ಸಂಚರಿಸತೊಡಗಿದನು.ಸುಂದರವಾದ ಆ ಪರ್ವತವನ್ನೂ ಅದರ ಉಪವನವನ್ನೂ ನೋಡಿ ಅವನೂ ಆನಂದಗೊಂಡನು! ಆಗ ಅವನು, ಮೇಘಗಳ ಮಧ್ಯೆ ಮಿಂಚಿನ ಬಳ್ಳಿಯಂತೆ ಸಖಿಯರ ಮಧ್ಯೆ ವಿಹರಿಸುತ್ತಿದ್ದ ಉಗ್ರಸೇನನ ಪತ್ನಿಯನ್ನು ನೋಡಿ ಕಾಮವಶನಾದನು! ಆದರೆ ಎಷ್ಟು ಯೋಚಿಸಿದರೂ ಅವಳು ಯಾರೆಂದು ಅವನಿಗೆ ತಿಳಿಯಲಿಲ್ಲ.ಅದನ್ನೇ ತನ್ನ ಸಾರಥಿಗೆ ಹೇಳಿ, ಅವಳು ಯಾರೆಂದು ತಿಳಿದು ಬರುವವರೆಗೂ ಅಲ್ಲಿಯೇ ಕಾಯಲು ಹೇಳಿ ಒಬ್ಬನೇ ಹೋದನು.ಆದರೆ ಅವಳ ಸಮೀಪ ಹೋಗುವ ಮೊದಲು ತನ್ನ ಶಕ್ತಿಯಿಂದ ಧ್ಯಾನಿಸಿ ಅವಳು ಉಗ್ರಸೇನನ ಪತ್ನಿಯೆಂದು ತಿಳಿದುಕೊಂಡನು! ಕೂಡಲೇ ಅವನು ಉಗ್ರಸೇನನ ರೂಪವನ್ನು ಧರಿಸಿ ನಗುನಗುತ್ತಾ ಅವಳ ಬಳಿಗೆ ಹೋದನು! ಸುರತಸುಖವನ್ನಾಶಿಸಿದ ಅವಳಿಗೆ ಪತಿಯನ್ನೇ ಕಂಡು ಬಹಳ ಆಶ್ಚರ್ಯ,ಸಂತೋಷಗಳುಂಟಾದವು! ಉಗ್ರಸೇನನ ರೂಪದಲ್ಲಿದ್ದ ದ್ರುಮಿಲ ದಾನವನು ಅವಳನ್ನು ಆಲಿಂಗಿಸಿ ರಮಿಸಿದನು! ಅವಳೂ ಅವನು ತನ್ನ ಪತಿಯೆಂದೇ ಭಾವಿಸಿ ಪ್ರೀತ್ಯಾದರಗಳಿಂದ ಜೊತೆಗೂಡಿದಳು! ಆದರೆ ಅವನು ಬಹಳ ಭಾರವಾಗಿದ್ದುದರಿಂದ ಅವಳಿಗೆ ಅನುಮಾನವುಂಟಾಗಿ,ಬಹಳ ಭಯಗೊಂಡು, " ಎಲೈ ದುರಾತ್ಮನೇ! ನೀನು ನಿಶ್ಚಯವಾಗಿ ನನ್ನ ಪತಿಯಲ್ಲ! ಯಾರು ನೀನು? ಯಾರ ಮಗನು? ಏಕೆ ಹೀಗೆ ನನ್ನನ್ನು ಕಳಂಕಿತಳನ್ನಾಗಿಸಿದೆ? ಈಗ ನನ್ನ ಬಂಧುಗಳು, ನನ್ನ ಪತಿಯ ಬಂಧುಗಳು ನನ್ನನ್ನು ಪರಿತ್ಯಜಿಸುತ್ತಾರೆ! ಅನಂತರ ನಾನು ಜುಗುಪ್ಸಿತಳಾಗಿ ಜೀವನ ಕಳೆಯಬೇಕಾಗುತ್ತದೆ! ನಿನಗೆ ಧಿಕ್ಕಾರ!"ಎಂದು ಹೇಳಿದಳು.
ಅದಕ್ಕೆ ದ್ರುಮಿಲನು, " ಮೂಢ ಹೆಣ್ಣೇ! ನಾನು ಸೌಭವೆಂಬ ವಿಮಾನಕ್ಕೆ ಅಧಿಪತಿಯಾದ ದ್ರುಮಿಲನೆಂಬ ದಾನವನು! ನೀನು ಮಹಾವಿದ್ಯಾವತಿಯೆಂದು ತಿಳಿದುಕೊಂಡಿರುವೆ! ನಾನು ಓಜಸ್ಸಿನಿಂದಲೂ ತೇಜಸ್ಸಿನಿಂಲೂ ಕೂಡಿದ್ದೇನೆ! ಆದರೆ ನೀನು ಮೃತ್ಯುವಿಗೆ ವಶನಾಗಿರುವ ಒಬ್ಬ ತುಚ್ಛ ಮನುಷ್ಯನನ್ನು ಪತಿಯಾಗಿ ಪಡೆದು ನನ್ನನ್ನೇಕೆ ದೂಷಿಸುವೆ? ದೇವತೆಗಳೊಂದಿಗೋ ದಾನವರೊಂದಿಗೋ ಹೀಗೆ ಸಮಾಗಮವಾದರೆ ಸ್ತ್ರೀಯರಿಗೇನೂ ಕಳಂಕವಾಗುವುದಿಲ್ಲ! ಇಂಥ ವ್ಯಭಿಚಾರದಿಂದಲೂ ಅವರಿಗೆ ಪರಾಕ್ರಮಿಗಳಾದ ಮಕ್ಕಳೇ ಹುಟ್ಟುವರೆಂದು ಕೇಳಿದ್ದೇವೆ! ಮಾನವ ಸ್ತ್ರೀಯರಿಗೆ ಬುದ್ಧಿ ಸ್ಥಿರವಾಗಿರುವುದಿಲ್ಲ! ಆದರೆ ನೀನು ನಿನ್ನನ್ನು ಮಾತ್ರ ದೊಡ್ಡ ಪತಿವ್ರತೆ ಎಂದು ಭಾವಿಸಿಕೊಂಡು ಕೂಗಾಡತ್ತಿರುವೆ! ನೀನೀಗ ' ಕಸ್ಯ ತ್ವಂ ( ಯಾರವನು ನೀನು)' ಎಂದು ನನ್ನನ್ನು ಪ್ರಶ್ನಿಸಿದೆ! ಆದ್ದರಿಂದ ನಿನಗೆ ಕಂಸನೆಂಬ ಶತ್ರುಧ್ವಂಸಕನಾದ ಪುತ್ರನು ಜನಿಸುತ್ತಾನೆ!" ಎಂದು ಹೇಳಿದನು.
ಇದರಿಂದ ಬಹಳ ದುಃಖಿತಳೂ ಕುಪಿತಳೂ ಆಗಿ ಅವಳು ಹೇಳಿದಳು," ಎಲೈ ದುರಾಚಾರಿ ದಾನವನೇ! ನೀನು ಎಲ್ಲಾ ಸ್ತ್ರೀಯರನ್ನೂ ನಿಂದಿಸುತ್ತಿರುವೆ! ಆದರೆ ನೀಚರಾದ ಸ್ತ್ರೀಯರಿರುವಂತೆಯೇ ಅರುಂಧತಿಯಂಥ ಸಚ್ಚಾರಿತ್ರ್ಯವುಳ್ಳ ಸ್ತ್ರೀಯರೂ ಇರುತ್ತಾರೆಂದು ತಿಳಿದುಕೋ! ಈ ನಿನ್ನ ಮಗನು ನಿನ್ನಂತೆಯೇ ದುರಾಚಾರಿಯಾಗುತ್ತಾನೆ! ಅವನೆಂದಿಗೂ ನನ್ನ ಆದರಕ್ಕೆ ಪಾತ್ರನಾಗುವುದಿಲ್ಲ! ನನ್ನ ಪತಿಯ ಕುಲದಲ್ಲಿ ಭಗವಂತನೇ ಜನಿಸಿ ನಿನಗೂ ನಿನ್ನ ಮಗನಿಗೂ ಮೃತ್ಯುವಾಗುತ್ತಾನೆ!"
ಇದನ್ನು ಕೇಳಿ ದ್ರುಮಿಲನು ಮರುಮಾತನಾಡದೇ ವಿಮಾನ ಹತ್ತಿ ಆಕಾಶ ಮಾರ್ಗದಲ್ಲಿ ಹೊರಟುಹೋದನು! ಉಗ್ರಸೇನನ ಪತ್ನಿಯೂ ದುಃಖಿತಳಾಗಿ ನಗರಕ್ಕೆ ಹಿಂದಿರುಗಿದಳು.
ಹೀಗೆ ದ್ರುಮಿಲ ದಾನವನಿಂದ ಹುಟ್ಟಿದ ಕಂಸನು ದುಷ್ಟನಾದನು.ಅಲ್ಲದೇ ಅವನು ಹಿಂದಿನ ಜನ್ಮದಲ್ಲಿ ಕಾಲನೇಮಿಯೆಂಬ ರಾಕ್ಷಸನಾಗಿದ್ದು ಮಹಾವಿಷ್ಣುವಿನಿಂದ ವಧಿಸಲ್ಪಟ್ಟಿದ್ದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ