ಶನಿವಾರ, ಆಗಸ್ಟ್ 17, 2024

ಪೌರಾಣಿಕ ಸ್ವಾರಸ್ಯಗಳು -ರಾವಣನಿಗೆ ಆ ಹೆಸರು ಹೇಗೆ ಬಂದಿತು?

        ರಾವಣನಿಗೆ ಮೂಲತಃ ಆ ಹೆಸರು ಇರಲಿಲ್ಲ.ಹುಟ್ಟಿದಾಗಲೇ ಹತ್ತು ತಲೆಗಳಿದ್ದ ಕಾರಣ, ಅವನ ತಂದೆ, ತಾಯಿಯರಾದ ವಿಶ್ರವಸ್ ಋಷಿ ಹಾಗೂ ಕೈಕಸಿ ಅವನಿಗೆ ದಶಗ್ರೀವ ಎಂದು ಹೆಸರಿಟ್ಟರು.ಹಾಗೆಯೇ, ಅದೇ ಅರ್ಥದ ದಶಾನನ, ದಶಕಂಠ ಎಂಬ ಹೆಸರುಗಳಿಂದಲೂ ಅವನು ಪ್ರಖ್ಯಾತನಾದನು.ದಶಗ್ರೀವನು ದೊಡ್ಡವನಾದ ಬಳಿಕ ತನ್ನ ಅಣ್ಣ ಕುಬೇರನನ್ನು ಜಯಿಸಿ, ಅವನ ಪುಷ್ಪಕ ವಿಮಾನವನ್ನು ಅಪಹರಿಸಿ ಅದರಲ್ಲಿ ಕುಳಿತು ಸಂಚರಿಸುತ್ತಿದ್ದನು.ಎಲ್ಲೆಲ್ಲೂ ಸಂಚರಿಸುತ್ತಿದ್ದ ಆ ವಿಮಾನ ಕೈಲಾಸ ಪರ್ವತದ ಬಳಿ ಬಂದಾಗ ಅದನ್ನು ದಾಟಿ ಮುಂದೆ ಹೋಗಲಾರದಾಯಿತು! ಇದೇಕೆಂದು ದಶಗ್ರೀವನಿಗೂ ಆವನ ಮಂತ್ರಿಗಳಿಗೂ ಅರ್ಥವಾಗಲಿಲ್ಲ! ಆಗ ಶಿವನ ಅನುಚರನಾದ ನಂದೀಶ್ವರನು ಬಂದು," ಎಲೈ ದಶಗ್ರೀವ! ಇಲ್ಲಿಂದ ಹಿಂದಿರುಗು! ಈ ಪರ್ವತದ ಮೇಲೆ ಶಿವನು ಪಾರ್ವತಿಯೊಡನೆ ಕ್ರೀಡಿಸುತ್ತಿದ್ದಾನೆ! ದೇವಗಂಧರ್ವನಿಗಯಕ್ಷರಾಕ್ಷಸರಾದಿಯಾಗಿ ಯಾವ ಪ್ರಾಣಿಯೂ ಈಗ ಅಲ್ಲಿಗೆ ಹೋಗುವಂತಿಲ್ಲ!" 
     ಇದನ್ನು ಕೇಳಿ ಕ್ರುದ್ಧನಾದ ದಶಗ್ರೀವನು ವಿಮಾನದಿಂದ ಕೆಳಗಿಳಿದು," ನನ್ನ ಮಾರ್ಗವನ್ನು ತಡೆಯುವ ಆ ಶಿವನಾರು?" ಎನ್ನುತ್ತಾ ಪರ್ವತದ ಬುಡದ ಬಳಿಗೆ ಹೋದನು.ಅಲ್ಲಿ ನಂದೀಶ್ವರನನ್ನು ನೋಡಿ, ಅವನ ಮುಖ ವಾನರ ಮುಖದಂತಿದ್ದುದನ್ನು ನೋಡಿ ಗಹಗಹಿಸಿ ನಕ್ಕನು! ಇದರಿಂದ ನಂದಿಯು ಕುಪಿತನಾಗಿ, " ವಾನರ ಮುಖದಂತಿರುವ ನನ್ನನ್ನು ನೋಡಿ ನಗುವೆಯಾ? ನಿನ್ನ ಕುಲವು ನನ್ನಂಥ ವಾನರರಿಂದಲೇ ನಾಶವಾಗುತ್ತದೆ!" ಎಂದು ಶಾಪ ಕೊಡುತ್ತಾ," ನಿನ್ನನ್ನೀಗಲೇ ನಾನು ಸಂಹರಿಸಬಲ್ಲೆ! ಆದರೆ ನಿನ್ನ ಕುತ್ಸಿತ ಕರ್ಮಗಳಿಂದ ನೀನೀಗಾಗಲೇ ಸತ್ತಿರುವೆ! ಸತ್ತಿರುವವನನ್ನು ನಾನೇಕೆ ಕೊಲ್ಲಲಿ?" ಎಂದನು!
     ನಂದಿಯ ಮಾತನ್ನು ಲೆಕ್ಕಿಸದೇ ದಶಗ್ರೀವನು," ಎಲೈ ಪಶುಪತಿಯೇ! ಯಾವ ಕಾರಣದಿಂದ ನನ್ನ ಪುಷ್ಪಕ ವಿಮಾನಕ್ಕೆ ಅಡ್ಡಿಯಾಯಿತೋ, ಆ ನಿನ್ನ ಪರ್ವತವನ್ನೇ ಕಿತ್ತೆಸೆದು ಮುಂದೆ ಹೋಗುತ್ತೇನೆ! ಯಾವ ಪ್ರಭಾವದಿಂದ ಆ ಶಿವನು ರಾಜನಂತೆ ಈ ಪರ್ವತದಲ್ಲಿ ಕ್ರೀಡಿಸುತ್ತಿದ್ದಾನೆ? ಭಯವು ಹತ್ತಿರ ಬಂದಿದ್ದರೂ ಅವನಿಗೆ ತಿಳಿದಿಲ್ಲ!" ಎಂದು ಗುಡುಗುತ್ತಾ ಆ ಪರ್ವತವನ್ನು ತನ್ನ ಇಪ್ಪತ್ತು ಕೈಗಳಿಂದ ಎತ್ತಿಯೇಬಿಟ್ಟನು! ಆಗ ಪರ್ವತದ ಮೇಲೆ ಅಲ್ಲೋಲಕಲ್ಲೋಲವಾಯಿತು! ಶಿವಗಣಗಳು ನಡುಗಿಹೋದರು! ಪಾರ್ವತಿಯೂ ಭಯಭೀತಳಾಗಿ ಶಿವನನ್ನು ಗಟ್ಟಿಯಾಗಿ ತಬ್ಬಿಕೊಂಡಳು! ಆಗ ಶಿವನು ತನ್ನ ಕಾಲಿನ ಹೆಬ್ಬೆರಳಿನಿಂದ ಲೀಲೆಯೆಂಬಂತೆ ಆ ಪರ್ವತವನ್ನು ಅದುಮಿದನು! ಆಗ ಆ ಪರ್ವತವು ದಶಗ್ರೀವನ ತೋಳುಗಳ ಮೇಲೆ ಬಿದ್ದು ಅವು ಜಜ್ಜಿಹೋದವು! ಆಗ ನೋವಿನಿಂದಲೂ ಕೋದಿಂದಲೂ ದಶಗ್ರೀವನು ಗಟ್ಟಿಯಾಗಿ ಆರಚಿದನು! ಆಗ ಕೂಗಿಗೆ ಮೂರು ಲೋಕಗಳೂ ನಡುಗಿದವು! ಸಮುದ್ರಗಳು ಅಲ್ಲೋಲಕಲ್ಲೋಲಗೊಂಡವು! ಪರ್ವತಗಳು ನಡುಗಿದವು! ಸಿಧ್ಧಯಕ್ಷವಿದ್ಯಾಧರರು," ಇದೇನಿದು?" ಎಂದು ಮಾತನಾಡಿಕೊಂಡರು! ದಶಗ್ರೀವನ ಮಂತ್ರಿಗಳು ಇದು ಪ್ರಳಯಕಾಲದ ಸಿಡಿಲಿನ ಆರ್ಭಟವೆಂದು ಭಾವಿಸಿದರು! ಕೂಡಲೇ ಅವರಿಗೆ ಇದೇನೆಂದು ತಿಳಿಯಲೇ ಇಲ್ಲ!
      ಅನಂತರ ವಿಷಯವನ್ನು ತಿಳಿದ ಮಂತ್ರಿಗಳು ದಶಾನನಿಗೆ ಶಿವನನ್ನೇ ಸ್ತುತಿಸಲು ಹೇಳಿದರು.ಅವನನ್ನು ಬಿಟ್ಟರೆ ಈಗ ಬೇರಾರೂ ಗತಿಯಿಲ್ಲವೆಂದೂ ಹೇಳಿದರು.ಅಂತೆಯೇ ದಶಾನನನು ಶಿವನನ್ನು ರೋದನ ಮಾಡುತ್ತಲೇ ಸಾಮಗಳಿಂದಲೂ ಸ್ತುತಿಗಳಿಂದಲೂ ಪ್ರಸನ್ನಗೊಳಿಸಿದನು.ಶಿವನು ಪ್ರಸನ್ನನಾಗಿ ಪರ್ವತವನ್ನು ಸಡಿಲಗೊಳಿಸಿ ಅವನ ತೋಳುಗಳನ್ನು ಬಿಡಿಸಿ ಅವನಿಗೆ ಕಾಣಿಸಿಕೊಂಡು ಹೇಳಿದನು," ಎಲೈ ದಶಾನನ! ನಿನ್ನ ಪರಾಕ್ರಮವನ್ನು ಮೆಚ್ಚಿದೆನು! ಯಾವ ನಿನ್ನ ಕೂಗಿನಿಂದ ಮೂರು ಲೋಕಗಳೂ ಭೀತಿಗೊಂಡು ರಾವಿತವಾಗುವಂತೆ (ಕೂಗಿಕೊಳ್ಳುವಂತೆ) ಮಾಡಿದೆಯೋ, ಆ ಕಾರಣದಿಂದ ನೀನು ಇನ್ನು ಮುಂದೆ ರಾವಣ ಎಂದು ಪ್ರಸಿದ್ಧನಾಗುವೆ!

ಯಸ್ಮಾಲ್ಲೋಕತ್ರಯಂ ಚೈತದ್ರಾವಿತಂ ಭಯಮಾಗತಮ್ /
ತಸ್ಮಾತ್ತ್ವಂ ರಾವಣೋ ನಾಮ ನಾಮ್ನಾ ರಾಜನ್ಭವಿಷ್ಯಸಿ //

ನೀನಿನ್ನು ಹೋಗಬಹುದು!"
       ಆಗ ರಾವಣನು ತಾನು ದೆವಗಂಧರ್ವರಾಕ್ಷಸಗುಹ್ಯಕನಾಗರಿಂದಲೂ ಇತರ ಮಹಾಸತ್ತ್ವಶಾಲಿ ಪ್ರಾಣಿಗಳಿಂದಲೂ ವಧಿಸಲ್ಪಡಬಾರದೆಂಬ ವರವನ್ನು ಯಾಚಿಸಿದನು.ಮಾನವರು ಅಲ್ಪಬಲವುಳ್ಳವರಾದ್ದರಿಂದ ಅವರನ್ನು ತಾನು ಲೆಕ್ಕಿಸುವುದಿಲ್ಲವೆಂದನು.ಅವನು ಈಗಾಗಲೇ ಬ್ರಹ್ಮನಿಂದ ಈ ವರವನ್ನು ಪಡೆದಿದ್ದರೂ ಪುನಃ ಯಾಚಿಸಿದನು.ಅಲ್ಲದೇ ಬ್ರಹ್ಮನು ತನಗೆ ದೀರ್ಘಾಯುಷ್ಯ ನೀಡಿದ್ದಾಗಿ ಅದರಲ್ಲಿ ಉಳಿದ ಆಯುಷ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಪೂರ್ಣವಾಗಿ ಅನುಭವಿಸುವಂತೆ ವರ ಬೇಡಿದನು.ಅಲ್ಲದೇ ಒಂದು ಶಸ್ತ್ರವನ್ನೂ ಬೇಡಿದನು.ಶಿವನು ಆ ವರಗಳನ್ನಿತ್ತು ಚಂದ್ರಹಾಸವೆಂಬ ಉಜ್ವಲವಾದ ಶ್ರೇಷ್ಠ ಖಡ್ಗವನ್ನು ನೀಡಿ, ಅದನ್ನು ಎಂದಿಗೂ ಅವಮಾನ ಮಾಡಬಾರದೆಂದೂ ಹಾಗೆ ಮಾಡಿದರೆ ಅದು ಪುನಃ ತನ್ನ ಬಳಿಗೇ ಹಿಂದಿರುಗುವುದೆಂದೂ ಹೇಳಿದನು.
       ಹೀಗೆ ದಶಾನನನು ಶಿವನಿಂದ ರಾವಣ ಎಂದು ನಾಮಕರಣಗೊಂಡು ವರಗಳನ್ನು ಪಡೆದು ಪುಷ್ಪಕ ವಿಮಾನ ಹತ್ತಿ ದಿಗ್ವಿಜಯಕ್ಕೆ ಹೊರಟನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ