ಶುಕ್ರವಾರ, ಮೇ 31, 2024

ಮಾತೆಯ ವಾತ್ಸಲ್ಯ - ಮಹಾಭಾರತದ ಒಂದು ಉಪಕಥೆ

ಮಾತೆಯ ವಾತ್ಸಲ್ಯ


ಮಹಾಭಾರತದಲ್ಲಿ ಒಂದು ಉಪಕಥೆ ಬರುತ್ತದೆ. ವೇದವ್ಯಾಸರು ಧೃತರಾಷ್ಟ್ರನಿಗೆ ಹೇಳುವ ಕಥೆ.
      ಒಮ್ಮೆ ಸ್ವರ್ಗದಲ್ಲಿ ಕಾಮಧೇನುವು ಅಳುತ್ತಿತ್ತು.ಈ ವಿಷಯವು ತಿಳಿಯಲು, ಇಂದ್ರನು ಕಾಮಧೇನುವನ್ನು ಸಭೆಗೆ ಕರೆಸಿ ಅನುಕಂಪದಿಂದ ಕೇಳಿದನು,"ಭದ್ರೆ! ಏಕೆ ಹೀಗೆ ಅಳುತ್ತಿರುವೆ? ದೇವತೆಗಳೆಲ್ಲರೂ ಸೌಖ್ಯದಿಂದಿದ್ದಾರಷ್ಟೇ? ಮಾನವರಿಗೂ ಗೋವುಗಳಿಗೂ ಏನಾದರೂ ಆಪತ್ತು ಉಂಟಾಗಿರುವುದೇ? ಎಲ್ಲವನ್ನೂ ವಿಶದವಾಗಿ ಹೇಳು!ಅಳಬೇಡ!"
     ಅದಕ್ಕೆ ಕಾಮಧೇನುವು ಇಂದ್ರನಿಗೆ ಭೂಮಿಯ ಕಡೆ ತೋರಿಸುತ್ತಾ,"ಅಲ್ಲಿ ನೋಡು ದೇವೇಂದ್ರ! ಕ್ರೂರಿಯಾದ ಆ ರೈತನು ದುರ್ಬಲನಾದ ನನ್ನ ಮಗನನ್ನು (ಎತ್ತನ್ನು) ಹೇಗೆ ಚಾವಟಿಯಿಂದ ಹೊಡೆಯುತ್ತಿರುವನು! ನನ್ನ ಮಗನ ಹೆಗಲ ಮೇಲೆ ಭಾರವಾದ ನೇಗಿಲನ್ನಿಟ್ಟಿದ್ದಾನೆ! ದುರ್ಬಲನಾದ ನನ್ನ ಮಗನು ಅದನ್ನು ಎಳೆಯಲಾರದೇ ಕೆಳಗೆ ಬಿದ್ದು ಸಾಯುವ ಸ್ಥಿತಿಯಲ್ಲಿದ್ದಾನೆ! ಆದರೆ ಆ ರೈತನು ಅವನನ್ನು ಬಿಡದೇ ಮತ್ತೆ ಮತ್ತೆ ಹೊಡೆದು ಎಬ್ಬಿಸಲು ಯತ್ನಿಸುತ್ತಿದ್ದಾನೆ! ಅವನನ್ನು ನೋಡುತ್ತಾ ನನ್ನ ಮನಸ್ಸು ಕೃಪಾವಿಷ್ಟವಾಗಿ ಉದ್ವಿಗ್ನವಾಗುತ್ತಿದೆ! ಆದರೆ ನೇಗಿಲಿಗೆ ಕಟ್ಟಲ್ಪಟ್ಟಿರುವ ನನ್ನ ಇನ್ನೊಬ್ಬ ಮಗನು ಹಾಗಿಲ್ಲ! ಅವನು ಬಲದಿಂದ ಕೂಡಿದ್ದು ನೇಗಿಲನ್ನು ಎಳೆಯಲು ಸಮರ್ಥನಾಗಿದ್ದಾನೆ! ಆದರೆ ಇವನ ದುರವಸ್ಥೆ ನೋಡು! ಇವನು ಅಲ್ಪಬಲನಾಗಿದ್ದಾನೆ! ಕೃಶ ನಾಗಿದ್ದಾನೆ! ನರನಾಡಿಗಳು ಕಾಣುವಂತಾಗಿದ್ದಾನೆ! ಬಹಳ ಕಷ್ಟದಿಂದ ಭಾರವನ್ನು ಎತ್ತುತ್ತಾನೆ! ಇವನನ್ನು ಕಂಡು ಶೋಕಿಸುತ್ತಿದ್ದೇನೆ ಇಂದ್ರ! ಪದೇ ಪದೇ ಇವನಿಗೆ ಏಟುಗಳೂ ಬೀಳುತ್ತಿವೆ! ಆ ಭಾರವನ್ನು ಇವನಿಗೆ ಎತ್ತಲಾಗದು ಇಂದ್ರ! ನೋಡು!" ಎಂದು ಹೇಳಿತು.
       ಅದಕ್ಕೆ ಇಂದ್ರನು,"ಎಲೈ ಕಾಮಧೇನುವೇ! ಇದೇ ರೀತಿ ನಿನ್ನ ಸಾವಿರಾರು ಮಕ್ಕಳನ್ನು ದಿನವೂ ನೇಗಿಲಿಗೆ ಕಟ್ಟಿ ಹೊಡೆಯುತ್ತಿರುತ್ತಾರೆ! ಆದರೆ ಈ ಒಬ್ಬ ಮಗನ ವಿಷಯದಲ್ಲೇಕೆ ಇಷ್ಟೊಂದು ಶೋಕಿಸುತ್ತಿರುವೆ?" ಎಂದನು.
       ಆಗ ಕಾಮಧೇನುವು ಹೇಳಿತು,"ಶಕ್ರ! ನನಗಿರುವ ಸಾವಿರಾರು ಪುತ್ರರ ಮೇಲೆಯೂ ನನಗೆ ಸಮಾನವಾದ ವಾತ್ಸಲ್ಯವಿದೆ! ಆದರೆ ದೈನ್ಯದಿಂದಿರುವ ಮಗನ ಮೇಲೆ ನನಗೆ ಹೆಚ್ಚಿನ ದಯೆಯುಂಟಾಗುತ್ತದೆ!"
       ಕಾಮಧೇನುವು ಹೇಳಿದ ಮಾತು ಇಂದ್ರನಿಗೆ ಸರಿಯೆನಿಸಿತು.ಪುತ್ರನು ತಾಯಿಗೆ ತನ್ನ ಪ್ರಾಣಕ್ಕಿಂತ ಹೆಚ್ಚೆಂದು ಅವನಿಗೆ ಅರಿವಾಯಿತು. ಕೂಡಲೇ ಆ ರೈತನು ಉಳುತ್ತಿದ್ದ ಪ್ರದೇಶದ ಮೇಲೆ ಧಾರಾಕಾರವಾಗಿ ಮಳೆಗರೆದನು! ಮಳೆಯಿಂದಾಗಿ ಉಳಲಾಗದೇ ಕಾಮಧೇನುವಿನ ಪುತ್ರನಾದ ಆ ಎತ್ತಿಗೂ ವಿಶ್ರಾಂತಿ ಸಿಕ್ಕಿತು.
      ಈ ಕಥೆಯನ್ನು ಧೃತರಾಷ್ಟ್ರನಿಗೆ ವೇದವ್ಯಾಸರು ಹೇಳಿ, ತನ್ನ ಮಕ್ಕಳ ಮೇಲೆ ವಾತ್ಸಲ್ಯವಿರುವುದು ತಪ್ಪಲ್ಲವಾದರೂ ದುರ್ಬಲರಾದ ಮಕ್ಕಳ ಮೇಲೆ ಹೆಚ್ಚು ದಯೆಯಿರಬೇಕೆಂದು ಹೇಳಿದರು.ಅವನೂ ಪಾಂಡುವೂ ವಿದುರನೂ ತಮ್ಮ ಮಕ್ಕಳೇ ಆದರೂ, ಅವನಿಗೆ ನೂರು ಮಕ್ಕಳಿದ್ದು ಪಾಂಡುವಿಗೆ ಕೇವಲ ಐವರು ಮಕ್ಕಳಿದ್ದು ಆ ಐವರೂ ಕಾಡುಪಾಲಾಗಿ ಬಹಳ ಕಷ್ಟದಲ್ಲಿರುವುದರಿಂದ ಅವರ ಬಗ್ಗೆ ತಮಗೆ ಹೆಚ್ಚಿನ ಚಿಂತೆಯಾಗಿದೆಯೆಂದು ಹೇಳುತ್ತಾ ಅವರೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಬೇಕೆಂದು ಬೋಧಿಸಿದರು.
     ತಾಯಂದಿರು ಕೆಲವೊಮ್ಮೆ ತಮ್ಮ ಮಕ್ಕಳಲ್ಲಿ ಕೆಲವೊಬ್ಬರಿಗೆ ಹೆಚ್ಚಿನ ಗಮನ,ಆರೈಕೆ ನೀಡುವಂತೆ ಕಾಣಬಹುದು.ಆದರೆ ಅವರಿಗೆ ತಮ್ಮ ಮಕ್ಕಳಲ್ಲಿ ಯಾವುದೇ ಭೇದಭಾವ ಇರದೇ ಆ ಮಕ್ಕಳು ಯಾವುದೋ ಕಷ್ಟದಲ್ಲಿರುವುದರಿಂದ ವಿಶೇಷ ಅಕ್ಕರೆ ತೋರಿರಬಹುದು.ಈ ವಿಚಾರವನ್ನು ಈ ಸ್ವಾರಸ್ಯಕರವಾದ ಕಥೆ ತೋರಿಸುತ್ತದೆ.

ತಾಯಂದಿರ ದಿನಾಚರಣೆಯ ಶುಭಾಶಯಗಳು!

ಚಿತ್ರ: ಗೂಗಲ್ ಕ್ರಿಯೇಟಿವ್ ಕಾಮನ್ಸ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ