ಚಂದ್ರನಿಗೆ ದಕ್ಷಪ್ರಜಾಪತಿಯು ತನ್ನ ಐವತ್ತು ಹೆಣ್ಣುಮಕ್ಕಳ ಪೈಕಿ,ಇಪ್ಪತ್ತೇಳು ಹೆಣ್ಣುಮಕ್ಕಳನ್ನು ಮದುವೆಮಾಡಿ ಕೊಟ್ಟಿದ್ದನು.ಈ ಇಪ್ಪತ್ತೇಳು ಕನ್ಯೆಯರೇ ಇಪ್ಪತ್ತೇಳು ನಕ್ಷತ್ರಾಭಿಮಾನಿ ದೇವತೆಗಳು.ಆದರೆ ಚಂದ್ರನಿಗೆ ಅವರೆಲ್ಲರಲ್ಲಿ ರೋಹಿಣಿಯನ್ನು ಕಂಡರೆ ಹೆಚ್ಚು ಪ್ರೀತಿ.ರೋಹಿಣಿಯೂ ತನ್ನ ಕಲಾಚಾತುರ್ಯಗಳಿಂದ ಅವನನ್ನು ಒಲಿಸಿಕೊಂಡಿದ್ದಳು.ಹಾಗಾಗಿ ಚಂದ್ರನು ಅವಳ ಮನೆಯಲ್ಲೇ ಇರುತ್ತಾ ಇತರರ ಬಳಿಗೆ ಹೋಗುವುದನ್ನು ಬಿಟ್ಟುಬಿಟ್ಟ.ಆಗ ಇತರ ಪತ್ನಿಯರು ತಮ್ಮ ತಂದೆ ದಕ್ಷನ ಬಳಿಗೆ ಹೋಗಿ ಎರಡು ಬಾರಿ ದೂರಿತ್ತರು.ದಕ್ಷನು ಅಳಿಯ ಚಂದ್ರನನ್ನು ಕರೆದು ಎಲ್ಲ ಪತ್ನಿಯರನ್ನೂ ಸಮಾನವಾಗಿ ಪ್ರೀತಿಸಬೇಕೆಂದು ಎರಡು ಬಾರಿ ಆದೇಶಿಸಿದನು.ಆದರೆ ಚಂದ್ರನು ಪುನಃ ತನ್ನ ಹಿಂದಿನ ನಡತೆಯನ್ನೇ ಮುಂದುವರಿಸಿದನು.ದಕ್ಷಪುತ್ರಿಯರು ಪುನಃ ತಮ್ಮತಂದೆಯ ಬಳಿ ದೂರಿಡಲು,ಕುಪಿತನಾದ ದಕ್ಷನು ಚಂದ್ರನಿಗೆ ಯಕ್ಷ್ಮಕ್ಷಯರೋಗ ಬರಲೆಂದು ಶಾಪವಿತ್ತನು!ಇದರಿಂದ ಚಂದ್ರನು ಕ್ಷೀಣಿಸುತ್ತಾ ಓಷಧಿ,ಲತೆಗಳಿಗೆ ಅವನ ಬೆಳಕಿಲ್ಲದಂತಾಗಿ ಅವು ಸೊರಗಿ,ಅವುಗಳಿಲ್ಲದೇ ಪ್ರಾಣಿಗಳೂ ಮನುಷ್ಯರೂ ಸೊರಗಿ,ದೇವತೆಗಳಿಗೂ ಸಮಸ್ಯೆ ತಟ್ಟಿತು!ಯಜ್ಞಯಾಗಗಳಿಲ್ಲದೇ ಅವರಿಗೆ ಹವಿಸ್ಸಿಲ್ಲದಂತಾಯಿತು!ದೇವತೆಗಳು ವಿಚಾರಿಸುತ್ತಾ ಮೂಲ ಸಮಸ್ಯೆಯನ್ನು ಕಂಡುಕೊಂಡು ದಕ್ಷನ ಬಳಿಗೆ ಹೋಗಿ ಶಾಪವನ್ನು ಹಿಂಪಡೆಯಬೇಕೆಂದು ಬೇಡಿದರು.ದಕ್ಷನು ಚಂದ್ರನು ತನ್ನ ಎಲ್ಲ ಪತ್ನಿಯರನ್ನೂ ಸಮಾನವಾಗಿ ಪ್ರೀತಿಸಿದರೆ ಶಾಪವನ್ನು ಮಾರ್ಪಡಿಸುವೆನೆಂದು ಹೇಳಿ, ಅವನು ಶಿವನನ್ನು ಧ್ಯಾನಿಸಿ ಸರಸ್ವತೀನದಿಯಲ್ಲಿ ಸ್ನಾನ ಮಾಡಲು ತನ್ನ ರೋಗದಿಂದ ಮುಕ್ತನಾಗಿ ಹಿಂದಿನ ಪ್ರಭೆಯನ್ನು ಪಡೆಯುವನೆಂದು ಹೇಳಿದನು.ಆದರೆ ಕೃಷ್ಣಪಕ್ಷದ ಹದಿನೈದು ದಿನಗಳು ಕ್ಷೀಣಿಸಿದರೆ ಶುಕ್ಲಪಕ್ಷದ ಹದಿನೈದು ದಿನಗಳು ವರ್ಧಿಸುವನೆಂದು ಹೇಳಿದನು.ಅಂತೆಯೇ ಚಂದ್ರನು ಒಪ್ಪಿ ಶಿವಧ್ಯಾನ ಮಾಡಿ ಸರಸ್ವತೀನದಿಯಲ್ಲಿ ಸ್ನಾನ ಮಾಡಿ ರೋಗಮುಕ್ತನಾಗಿ ತನ್ನ ಹಿಂದಿನ ಪ್ರಭೆಯನ್ನು ಪಡೆದನು.ದಕ್ಷನು ಚಂದ್ರನಿಗೆ ಸ್ತ್ರೀಯರನ್ನೆಂದಿಗೂ ಅವಮಾನಿಸಬಾರದೆಂದು ಬುದ್ಧಿ ಹೇಳಿ ಕಳಿಸಿದನು.ಚಂದ್ರನು ಪ್ರಭೆಯನ್ನು ಮರಳಿ ಪಡೆದ ಸ್ಥಳ,ಪ್ರಭಾಸ ಕ್ಷೇತ್ರವೆಂದು ಪ್ರಸಿದ್ಧವಾಯಿತು.ಆದರೆ ದಕ್ಷನು ಮಾಡಿದ ಶಾಪದ ಮಾರ್ಪಾಟಿನಿಂದ ಈಗಲೂ ಕ್ಷೀಣಿಸುತ್ತಲೂ ವರ್ಧಿಸುತ್ತಲೂ ಇರುವನು.ಈ ಕಥೆ ಮಹಾಭಾರತದ ಶಲ್ಯಪರ್ವದಲ್ಲಿ ಬಲರಾಮನು ತಾನು ಮಾಡಿದ ತೀರ್ಥಯಾತ್ರೆಯ ವಿಷಯ ಹೇಳುವಾಗ ಬಂದಿದೆ.ಆದರೆ ಬ್ರಹ್ಮವೈವರ್ತ ಪುರಾಣದಲ್ಲಿ ಕಥೆ ಸ್ವಲ್ಪ ಬದಲಾಗಿದೆ.ಶಾಪಗ್ರಸ್ತನಾದ ಚಂದ್ರನು ಶಿವನನ್ನು ಮೊರೆಹೋಗಲು,ದಯಾಮಯನಾದ ಶಿವನು ಚಂದ್ರನನ್ನು ತನ್ನ ತಲೆಯ ಮೇಲೆ ಧರಿಸಿ ಚಂದ್ರಶೇಖರನೆಂದು ಪ್ರಸಿದ್ಧನಾದನು.ಇದರಿಂದ ಚಂದ್ರನು ನಿಶ್ಚಿಂತನಾದನು.ಆದರೆ,ಚಂದ್ರನ ಪತ್ನಿಯರು ಪತಿಯಿಲ್ಲದಂತಾಗಿ ಪುನಃ ದಕ್ಷನ ಬಳಿ ಹೋಗಿ ತಮಗೆ ಪತಿಭಿಕ್ಷೆ ಬೇಕೆಂದು ಬೇಡಿದರು.ದಕ್ಷನು ಶಿವನ ಬಳಿ ಬಂದು ಚಂದ್ರನನ್ನು ಬಿಡುಗಡೆ ಮಾಡಬೇಕೆಂದೂ ಇಲ್ಲವಾದರೆ ಶಾಪ ಕೊಡುವೆನೆಂದನು.ಶರಣಾಗತನನ್ನು ಬಿಡುವುದಿಲ್ಲವೆಂದು ಶಿವನು ಪಟ್ಟು ಹಿಡಿದನು.ದಕ್ಷನು ಕೋಪದಿಂದ ಶಾಪ ಕೊಡಲು ಉದ್ಯುಕ್ತನಾಗಲು,ಶಿವನು ಶ್ರೀಕೃಷ್ಣನನ್ನು ಸ್ಮರಿಸಿದನು(ಬ್ರಹ್ಮವೈವರ್ತಪುರಾಣದ ಪ್ರಕಾರ ಎಲ್ಲರಿಗಿಂತಲೂ ಮೇಲಿರುವವನು ಗೋಲೋಕದಲ್ಲಿರುವ ಶ್ರೀಕೃಷ್ಣ).ಶ್ರೀಕೃಷ್ಣನು ಪ್ರತ್ಯಕ್ಷನಾಗಿ ಶಿವನಿಗೆ ಕೋಪಿಷ್ಠನಾದ ದಕ್ಷನಿಗೆ ಚಂದ್ರನನ್ನು ಕೊಟ್ಟುಬಿಡಲು ಹೇಳಿದನು.ಆದರೆ ಶಿವನು ಒಪ್ಪಲಿಲ್ಲ.ಕೊನೆಗೆ ಕೃಷ್ಣನು ಚಂದ್ರನನ್ನು ಹೋಳು ಮಾಡಿ ರೋಗಮುಕ್ತನಾದ ಭಾಗವನ್ನು ಶಿವನ ಬಳಿಯೇ ಬಿಟ್ಟು ರೋಗಿಯಾದ ಭಾಗವನ್ನು ದಕ್ಷನಿಗೆ ಕೊಟ್ಟ!ರೋಗಿಯನ್ನು ಹೇಗೆ ಸರಿಪಡಿಸುವುದೆಂದು ದಕ್ಷನೂ ಕೃಷ್ಣನನ್ನು ಬೇಡಲು ಕೃಷ್ಣನು,ಚಂದ್ರನು ಶುಕ್ಲಪಕ್ಷದಲ್ಲಿ ಬೆಳೆದು ಕೃಷ್ಣಪಕ್ಷದಲ್ಲಿ ಕ್ಷೀಣಿಸುವನೆಂದು ಪರಿಹಾರ ಹೇಳಿದನು.
ಚಂದ್ರನು ರಾಜಸೂಯ ಯಾಗ ಮಾಡಿ ಬ್ರಾಹ್ಮಣರಿಗೆ ರಾಜನಾಗಲು,ಅಹಂಕಾರಯುಕ್ತನಾಗಿ ಅನೇಕ ಸ್ತ್ರೀಯರನ್ನು ಕಾಮಿಸಿದನು.ತನ್ನ ಗುರುವಾದ ಬೃಹಸ್ಪತಿಯ ಪತ್ನಿ ತಾರೆಯನ್ನೂ ಕಾಮಿಸಿ,ಅವಳೂ ಅವನನ್ನು ಮೋಹಿಸಲು ಅವಳನ್ನು ಅಪಹರಿಸಿಕೊಂಡು ತನ್ನ ಮಂಡಲಕ್ಕೆ ಕರೆದೊಯ್ದನು.ಇದನ್ನು ತಿಳಿದ ಬೃಹಸ್ಪತಿ ಅವನಿಗೆ ಶಾಪ ಕೊಡಲು ಪ್ರಯತ್ನಿಸಲು ಅದು ಅವನ ಮೇಲೆ ಪ್ರಭಾವ ಬೀರಲೇ ಇಲ್ಲ!ಪತ್ನಿಯನ್ನು ಹಿಂದಿರುಗಿಸಲು ಬೃಹಸ್ಪತಿಯು ಕೇಳಿಕೊಳ್ಳಲು ಚಂದ್ರನು ಕೊಡಲೂ ಇಲ್ಲ.ಆಗ ಬೃಹಸ್ಪತಿಯು ದೇವತೆಗಳಿಗೆ ಹೇಳಿ ಚಂದ್ರನ ಮೇಲೆ ಯುದ್ಧಕ್ಕೆ ಕಳಿಸಿದನು.ಚಂದ್ರನು ಶುಕ್ರಾಚಾರ್ಯನ ಮೊರೆಹೋಗಲು,ಶುಕ್ರನು ರಾಕ್ಷಸರೊಂದಿಗೆ ಅವನ ಕಡೆ ನಿಂತನು.ಹೀಗೆ ದೇವಾಸುರ ಸಂಗ್ರಾಮವೇ ನಡೆದು,ಅದು ತಾರಕಾಮಯ ಯುದ್ಧವೆಂದು ಕರೆಯಲ್ಪಟ್ಟಿತು.ಅದು ತಾರಕಕ್ಕೇರಲು,ಬ್ರಹ್ಮನು ಯುದ್ಧವನ್ನು ನಿಲ್ಲಿಸಿ ಚಂದ್ರನಿಗೆ ತಾರೆಯನ್ನು ಬೃಹಸ್ಪತಿಗೆ ಒಪ್ಪಿಸಲು ಬುದ್ಧಿ ಹೇಳಿದನು.ಚಂದ್ರನು ಒಪ್ಪಿ ತಾರೆಯನ್ನು ಬೃಹಸ್ಪತಿಗೆ ಒಪ್ಪಿಸಿದನು.ಆಗ ಅವಳು ಗರ್ಭಿಣಿಯಾಗಿರಲು ಬೃಹಸ್ಪತಿಯು ಅದು ಚಂದ್ರನ ಗರ್ಭವೆಂದು ತಿಳಿದು,ಕೂಡಲೇ ಅದನ್ನು ತ್ಯಜಿಸಬೇಕೆಂದೂ ಹೇಳಿದನು.ತಾನು ಅವಳಿಗೇನೂ ಶಾಪ ಕೊಡುವುದಿಲ್ಲವೆಂದೂ ತಾನಿನ್ನೂ ಅವಳಲ್ಲಿ ಸಂತಾನ ಪಡೆಯಬೇಕೆಂದೂ ಹೇಳಿ ಆಶ್ವಾಸನೆ ಕೊಟ್ಟನು.ಆಗ ತಾರೆ ತನ್ನ ಗರ್ಭವನ್ನು ತ್ಯಜಿಸಲು ಕಾಂತಿಯುಕ್ತವಾದ ಗಂಡು ಮಗು ಜನಿಸಿತು!ಅದರ ಕಾಂತಿ ನೋಡಿ ಬೃಹಸ್ಪತಿಯೂ ಚಂದ್ರನು ಅದು ತನ್ನ ಮಗು ಎಂದು ಜಗಳವಾಡಿದರು!ಎಲ್ಲ ದೇವತೆಗಳೂ ಋಷಿಗಳೂ ಕೇಳಿದರೂ ತಾರೆಯು ಲಜ್ಜೆಯಿಂದ ಹೇಳಲಿಲ್ಲ.ಕೊನೆಗೆ ಮಗುವೇ ಕುಪಿತಗೊಂಡು ಕೇಳಿತು!ಆಗ ಬ್ರಹ್ಮನು ಮೆಲ್ಲನೆ ಕೇಳಲು ಚಂದ್ರನದು ಎಂದು ಹೇಳಿದಳು.ಕೂಡಲೇ ಚಂದ್ರನು ಮಗುವನ್ನು ಎತ್ತಿಕೊಂಡು ಹೋಗಿ,ಬುದ್ಧಿಯಿಂದ ಗಂಭೀರವಾಗಿದ್ದ ಮಗುವಿಗೆ ಬುಧ ಎಂದು ಹೆಸರಿಟ್ಟನು.ಮುಂದೆ ಬುಧನು ವೈವಸ್ವತ ಮನುವಿನ ಪುತ್ರಿ ಇಳೆಯನ್ನು ವರಿಸಿ ಪುರೂರವನಿಗೆ ಜನ್ಮ ಕೊಟ್ಟನು.ಹೀಗೆ ಚಂದ್ರವಂಶ ಆರಂಭವಾಯಿತು.ಪುರೂರವನಿಂದ ಆಯು,ಆಯುವಿನಿಂದ ನಹುಷ-ಯಯಾತಿ-ಪೂರು,ಅವನಿಂದ ಪೌರವ ವಂಶ,ಅದರಲ್ಲಿ ದುಷ್ಯಂತ-ಭರತ,ಮುಂದೆ ಸಂವರಣ,ಅವನಿಂದ ಕುರು,ಅವನಿಂದ ಕುರುವಂಶ ಅಥವಾ ಕೌರವ ವಂಶ,ಅದರಲ್ಲಿ ಮುಂದೆ ಶಂತನು-ಭೀಷ್ಮ,ವಿಚಿತ್ರವೀರ್ಯ-ಧೃತರಾಷ್ಟ್ರ ಮತ್ತು ಪಾಂಡು,ಅನಂತರ ಕೌರವರೂ ಪಾಂಡವರೂ ಚಂದ್ರ ವಂಶದಲ್ಲಿ ಜನಿಸಿದರು.ಯಯಾತಿಯ ಒಬ್ಬ ಮಗನಾದ(ಯಯಾತಿಗೆ ಐದು ಮಕ್ಕಳು) ಯದುವಿನಿಂದ ಯಾದವ ವಂಶ ಆರಂಭವಾಗಿ ಅದರಲ್ಲಿ ಭಗವಂತನಾದ ಶ್ರೀಕೃಷ್ಣನು ಅವತರಿಸಿದನು.ಹೀಗೆ ಶ್ರೀರಾಮನು ಸೂರ್ಯವಂಶದಲ್ಲಿ ಜನಿಸಿದರೆ ಶ್ರೀಕೃಷ್ಣನು ಚಂದ್ರವಂಶದಲ್ಲಿ ಜನಿಸಿದನು.ಭಾಗವತ,ವಿಷ್ಣುಪುರಾಣಾದಿಗಳಲ್ಲಿ ಈ ಕಥೆ ಬರುತ್ತದೆ.
ಹೀಗೆ,ಚಂದ್ರನ ಕುರಿತಾದ ಪೌರಾಣಿಕ ಕಥೆಗಳು ಸ್ವಾರಸ್ಯವಾಗಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ