ಸೋಮವಾರ, ಮೇ 20, 2024

ಸಂಸ್ಕೃತ ಸುಭಾಷಿತಗಳು -8

ಸಂಸ್ಕೃತ ಸುಭಾಷಿತ

ಉದಯೇ ಸವಿತಾ ರಕ್ತ‌: ರಕ್ತಶ್ಚಾಸ್ತಮಯೇ ತಥಾ।
ಸಂಪತ್ತೌ ಚ ವಿಪತ್ತೌ ಚ ಮಹತಾಮೇಕರೂಪತಾ।।

ಉದಯಿಸುವಾಗಲೂ ಅಸ್ತಮಿಸುವಾಗಲೂ ಸೂರ್ಯ ಕೆಂಪಗಿರುತ್ತಾನೆ.ಹಾಗೆಯೇ ಸಂಪತ್ತು ಬಂದಾಗಲೂ ವಿಪತ್ತು ಬಂದಾಗಲೂ ಮಹಾತ್ಮರು ಒಂದೇ ರೀತಿಯಿರುತ್ತಾರೆ.

ಹಿಂದೆಯೇ ಹೇಳಿದಂತೆ ನಮ್ಮ ಪೂರ್ವಜರು ಪ್ರಕೃತಿಯಿಂದ ಬಹಳಷ್ಟು ಪಾಠಗಳನ್ನು ಕಲಿಯುತ್ತಿದ್ದರು.ಈ ಸುಭಾಷಿತ ರಲ್ಲೂ ಅಂಥದ್ದೇ ಒಂದು ಸೊಗಸಾದ ಪಾಠವಿದೆ.ಸೂರ್ಯನು ಉದಯಿಸುವಾಗ ಹಾಗೂ ಅಸ್ತಮಿಸುವಾಗ,ಎರಡೂ ಸಮಯಗಳಲ್ಲಿ ಕೆಂಪಗಿರುತ್ತಾನೆ.ಮಹಾತ್ಮರ ನಡವಳಿಕೆಯನ್ನು ಇದಕ್ಕೆ ಹೋಲಿಸಲಾಗಿದೆ.ಅವರೂ ಸಂಪತ್ತು ಬಂದಾಗ ಹಾಗೂ ವಿಪತ್ತು ಬಂದಾಗ ಒಂದೇ ರೀತಿಯಿರುತ್ತಾರೆ.ಕೆಲವರು ಕೆಳಮಟ್ಟದಲ್ಲಿದ್ದಾಗ ಎಲ್ಲರೊಂದಿಗೆ ಬೆರೆಯುತ್ತಾ ಸರಳ ಸ್ವಭಾವದ ಸ್ನೇಹಜೀವಿಗಳಾಗಿದ್ದು, ಸಂಪತ್ತು ಬಂದ ಕೂಡಲೇ ಮುಖ ತಿರುಗಿಸಿಬಿಡುತ್ತಾರೆ.ಆದರೆ ಮಹಾತ್ಮರು ಹಾಗಲ್ಲ.ಎಷ್ಟು ದೊಡ್ಡ ಮಟ್ಟಕ್ಕೇರಿದರೂ ತಮ್ಮ ಬಂಧು,ಮಿತ್ರರನ್ನೂ ನಂಬಿದವರನ್ನೂ ಮರೆಯುವುದಿಲ್ಲ.ಅಹಂಕಾರ ತೋರುವುದಿಲ್ಲ.ಇದಕ್ಕೆ ನಾವು ಭಾಗವತ,ಮಹಾಭಾರತಗಳಲ್ಲಿ ಉದಾಹರಣೆಗಳನ್ನು ನೋಡಬಹುದು.ಕೃಷ್ಣನು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಸುಧಾಮನಿಗೆ ಎಷ್ಟು ಆತ್ಮೀಯವಾದ ಗೆಳೆಯನಾಗಿದ್ದನೋ,ಅನಂತರ ಅವನು ದ್ವಾರಕಾಧಿಪತಿಯಾಗಿ ಐಶ್ವರ್ಯಸಂಪನ್ನನಾಗಿದ್ದಾಗಲೂ ಅಷ್ಟೇ ಆತ್ಮೀಯ ಗೆಳೆಯನಾಗಿದ್ದ.ಮನೆಗೆ ಬಂದು ಸುಧಾಮನನ್ನು ಅತ್ಯಂತ ಆದರದಿಂದ ಉಪಚರಿಸಿದ.ಸುಧಾಮನು ಬೇಡವೆಂದು ಉಪೇಕ್ಷೆ ಮಾಡಲಿಲ್ಲ.ಆದರೆ ದ್ರುಪದನು ಅದೇ ರೀತಿ ಗುರುಕುಲದಲ್ಲಿ ದ್ರೋಣನ ಗೆಳೆಯನಾಗಿದ್ದು,ತಾನು ರಾಜನಾದಾಗ ದ್ರೋಣನಿಗೆ ಸಹಾಯ ಮಾಡುವೆನೆಂದು ಮಾತು ಕೊಟ್ಟಿದ್ದರೂ ಮುಂದೆ ರಾಜನಾದಾಗ,ಬಹಳ ಬಡವನಾಗಿದ್ದ ದ್ರೋಣನು ಅವನು ಬಳಿ ಬಂದು ತಾನು ಅವನ ಮಿತ್ರನೆಂದು ಅವನ ಮಾತನ್ನು ನೆನಪಿಸಿ ಸಹಾಯ ಯಾಚಿಸಿದಾಗ,ದ್ರುಪದನು,ಸ್ನೇಹವೆಂಬುದು ಕೇವಲ ಸಮಾನ ವ್ಯಕ್ತಿಗಳಲ್ಲಿರುತ್ತದೆಂದು ಅವನನ್ನು ಜರಿದು ಓಡಿಸಿದ.ಹೀಗೆ ಸಂಪತ್ತು ಬಂದಾಗ ಅವನು ಬದಲಾಗಿಬಿಟ್ಟ.ಅಂತೆಯೇ, ವಿಪತ್ತು ಬಂದಾಗಲೂ ತಾಳ್ಮೆ ಕಳೆದುಕೊಳ್ಳದೇ ಅದನ್ನು ಪರಿಹರಿಸುವ ಗುಣವನ್ನು ಶ್ರೀಕೃಷ್ಣನಲ್ಲಿ ಕಾಣಬಹುದು.ಅದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಸ್ಯಮಂತಕ ಮಣಿಯ ಪ್ರಸಂಗ.ಸತ್ರಾಜಿತನ ತಮ್ಮನಾದ ಪ್ರಸೇನನು ಸ್ಯಮಂತಕ ಮಣಿಯನ್ನು ಧರಿಸಿ ಬೇಟೆಗೆ ಹೋದಾಗ ಅಲ್ಲಿ ಒಂದು ಸಿಂಹದಿಂದ ಕೊಲ್ಲಲ್ಪಟ್ಟು ಅವನು ಹಿಂದಿರುಗದಿರಲು,ಸತ್ರಾಜಿತನು ಕೃಷ್ಣನೇ ಮಣಿಯ ಆಸೆಗಾಗಿ ತನ್ನ ತಮ್ಮನನ್ನು ಕೊಂದು ಮಣಿಯನ್ನು ಕದ್ದಿರಬೇಕೆಂದು ಅವನ ಮೇಲೆ ಅಪವಾದ ಹಾಕುತ್ತಾನೆ.ಕೃಷ್ಣನು ಆ ಮಣಿ,ಸಾಮಂತನಾದ ಅವನ ಬಳಿಯ ಬದಲು ರಾಜನಾದ ಉಗ್ರಸೇನನ ಬಳಿಯಿದ್ದರೆ ಒಳ್ಳೆಯದೆಂದು ಹಿಂದೆ ಕೇಳಿರುತ್ತಾನೆ.ಆದರೆ ಮಣಿಯನ್ನು ಕೊಡಲು ಒಪ್ಪಿರದ  ಸತ್ರಾಜಿತನು,ಈಗ ಕೃಷ್ಣನ ಮೇಲೆ ಅಪವಾದ ಹಾಕುತ್ತಾನೆ.ಯಾರೂ ಕೃಷ್ಣನ ಪರವಹಿಸುವುದಿಲ್ಲ.ಯಾದವರನ್ನು ಅಷ್ಟೆಲ್ಲಾ ಕಾಪಾಡಿದ್ದ ಕೃಷ್ಣನಿಗೆ ಇಂದೊಂದು ದೊಡ್ಡ ವಿಪತ್ತೇ ಆಗಿತ್ತು!ಆದರೂ ಅವನು ಅಳದೇ,ತಾಳ್ಮೆಗೆಡದೇ,ಸಮಾಧಾನಚಿತ್ತನಾಗಿ ಕೆಲವು ಪ್ರಮುಖರೊಂದಿಗೆ ಕಾಡಿಗೆ ಹೋಗಿ,ಅಲ್ಲಿ ಪ್ರಸೇನನ ಹೆಣವನ್ನೂ ಸ್ವಲ್ಪ ದೂರದಲ್ಲಿ ಸಿಂಹದ ಹೆಣವನ್ನೂ ಕರಡಿಯ ಹೆಜ್ಜೆಗಳನ್ನೂ ನೋಡಿ, ಅವನ್ನು ಅನುಸರಿಸಿ,ಕರಡಿರಾಜ ಜಾಂಬವಂತನ ಗುಹೆ ತಲುಪುತ್ತಾನೆ.ಸಿಂಹವನ್ನು ಕೊಂದು ಅದರ ಬಳಿಯಿದ್ದ ಮಣಿಯನ್ನು ತೆಗೆದುಕೊಂಡಿದ್ದ ಜಾಂಬವಂತನೊಂದಿಗೆ ಹೋರಾಡಿ ಮಣಿಯನ್ನು ತಂದು ತನ್ನ ಅಪವಾದವನ್ನು ತೊಡೆದುಕೊಳ್ಳುತ್ತಾನೆ.ಹೀಗೆ, ಮಹಾತ್ಮರು ಸಂಪತ್ತು ಬರಲಿ, ವಿಪತ್ತು ಬರಲಿ,ಒಂದೇ ರೀತಿ ಶಾಂತವಾಗಿರುತ್ತಾರೆ.ಎಲ್ಲರೂ ಹಾಗಿರಲು ಪ್ರಯತ್ನಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ