ಮಂಗಳವಾರ, ಮೇ 28, 2024

ಮುತ್ತತ್ತಿ ಕ್ಷೇತ್ರದ ಸ್ಥಳಪುರಾಣ

ಮುತ್ತತ್ತಿ ಕ್ಷೇತ್ರದ ಸ್ಥಳಪುರಾಣ

     ರಾಮಾಯಣವನ್ನು ನೆನಪಿಸುವ,ರಾಮ,ಸೀತೆಯರ  ಲೀಲಾವೈಭವವನ್ನು ಸಾರುವ ಹಲವಾರು ಕ್ಷೇತ್ರಗಳಲ್ಲಿ ಮುತ್ತತ್ತಿಯೂ ಒಂದು.ಹನುಮಂತನು ಆರಾಧ್ಯದೈವವಾಗಿರುವ ಈ ಕ್ಷೇತ್ರ,ಬೆಂಗಳೂರಿನಿಂದ ಸುಮಾರು ೧೩೦ ಕಿ.ಮೀ.ದೂರದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿದೆ.ಬೆಂಗಳೂರಿನಿಂದ ಕನಕಪುರಕ್ಕೆ ಹೋಗಿ ಅಲ್ಲಿಂದ ಸಾತನೂರಿನ ಮಾರ್ಗವಾಗಿ ಹೋದರೆ ಹಲಗೂರು ಎಂಬ ಹಳ್ಳಿ ಸಿಗುತ್ತದೆ,ಹಾಗೂ ಇಲ್ಲಿಂದ ಸುಮಾರು ೨೫ ಕಿ.ಮೀ.ದೂರದಲ್ಲಿ ಮುತ್ತತ್ತಿ ಕ್ಷೇತ್ರವಿದೆ.ಬೆಂಗಳೂರಿನಿಂದ ಚೆನ್ನಪಟ್ಟಣಕ್ಕೆ ಹೋಗಿ ಅಲ್ಲಿಂದ ಹಲಗೂರಿಗೆ ಹೋಗಿಯೂ ಈ ಕ್ಷೇತ್ರ ತಲುಪಬಹುದು.ಕಾವೇರಿ ವನ್ಯಧಾಮ ಎಂಬ ಹಸಿರಾದ,ದಟ್ಟವಾದ,ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರಕೃತಿ ರಮ್ಯ ಕಾಡಿನ ಮಧ್ಯೆ ಈ ಪುಟ್ಟ ಹಳ್ಳಿಯಿದೆ.ಇಲ್ಲಿ ಜುಳಜುಳನೆ ಹರಿಯುವ ಕಾವೇರಿ ನದಿ ನಯನಮನೋಹರವಾಗಿದೆ.
         ಇಲ್ಲಿ ಆಂಜನೇಯಸ್ವಾಮಿಯ ಪುಟ್ಟ ಗುಡಿಯಿದ್ದು,ಅಲ್ಲಿ ಒಂದು ಕಡೆಗೆ ಮುಖ ತಿರುಗಿಸಿರುವ ಕಪ್ಪು ಶಿಲೆಯ ಆಂಜನೇಯನ ಸುಂದರ ವಿಗ್ರಹವಿದೆ.ಇಲ್ಲಿ ಆಂಜನೇಯನಿಗೆ ಮುತ್ತೆತ್ತರಾಯ,ಅಥವಾ ಮುತ್ತತ್ತಿರಾಯ ಎಂದು ಹೆಸರು.ಈ ಹೆಸರು ಬರಲು ಕಾರಣವಾದ ಕಥೆಯೇ ಇಲ್ಲಿನ ಸ್ಥಳಪುರಾಣ.ಅದೇ ಈ ಸ್ಥಳಕ್ಕೆ ಮುತ್ತತ್ತಿ ಎಂಬ ಹೆಸರು ಬರಲೂ ಕಾರಣ.ಅದು ಹೀಗಿದೆ-
        ಶ್ರೀರಾಮ,ಲಕ್ಷ್ಮಣರು ಲಂಕೆಗೆ ಹೋಗಿ ರಾವಣನನ್ನು ಕೊಂದು ಸೀತೆಯನ್ನು ಬಿಡಿಸಿಕೊಂಡು ಅವಳೊಡನೆ ಅಯೋಧ್ಯೆಗೆ ಹಿಂದಿರುಗುತ್ತಿದ್ದಾಗ,ಈ ಮಾರ್ಗವಾಗಿ ಹೋದರಂತೆ.ಆಗ ಅವರಿಗೆ ಈ ಸುಂದರ ಸ್ಥಳದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಬೇಕೆನಿಸಿ ಇಲ್ಲಿ ಸ್ವಲ್ಪ ಕಾಲ ನಿಂತರು.ಇಡೀ ಕಪಿಸೇನೆಯೂ ವಿಶ್ರಮಿಸಿಕೊಳ್ಳತೊಡಗಿತು.ಸೀತೆಗಂತೂ ಈ ಸ್ಥಳ ಬಹಳ ಇಷ್ಟವಾಗಿ ಇಲ್ಲಿನ ರಮ್ಯ ಪ್ರಕೃತಿಯನ್ನು ನೋಡಿ ಮೈಮರೆತಳು.ಒಬ್ಬಳೇ ಕಾವೇರಿ ನದಿಯ ದಂಡೆಯ ಮೇಲೆ ಕುಳಿತು ನದಿಯ ಸೊಬಗನ್ನು ಆಸ್ವಾದಿಸುತ್ತಾ ತಂಪಾದ ಆಹ್ಲಾದಕರ ಹೊಳೆಯಲ್ಲಿ ಇಳಿದು ಸ್ನಾನ ಮಾಡಿದಳು.ಆಗ ಅವಳು ಧರಿಸಿದ್ದ ಮುತ್ತಿನ ಮೂಗುತಿಯು ಜಾರಿ ನೀರಿನಲ್ಲಿ ಬಿದ್ದುಹೋಯಿತು!ಆದರೆ ಇದು ಅವಳಿಗೆ ತಿಳಿಯಲೇ ಇಲ್ಲ!ಸ್ವಲ್ಪ ಹೊತ್ತಿನ ನಂತರ ಅವಳಿಗೆ ಮುತ್ತಿನ ಮೂಗುತಿಯು ಬಿದ್ದು ಹೋಗಿರುವುದರ ಅರಿವಾಗಿ ಬಹಳ ದುಃಖಗೊಂಡು ಅಳತೊಡಗಿದಳು.ಇದು ಹನುಮಂತನಿಗೆ ಕೇಳಿಸಿ,ಯಾರು ಹೀಗೆ ಅಳುತ್ತಿರಬಹುದೆಂದು ಅಳುವಿನ ಶಬ್ದದ ದಿಕ್ಕಿನ ಕಡೆ ಬಂದು ನೋಡಿ ಸೀತೆಯಿಂದ ಅಳುವಿನ ಕಾರಣವನ್ನು ತಿಳಿದುಕೊಂಡನು.ಅನಂತರ,"ಇಷ್ಟೇಯೇ?ಇದೀಗ ತರುತ್ತೇನೆ!"ಎಂದು ನದಿಯಲ್ಲಿ ತನ್ನ ಬಾಲವನ್ನು ಇಳಿಬಿಟ್ಟನು.ಆ ಬಾಲವನ್ನು ನೀಳವಾಗಿ ಬೆಳೆಸಿ ನದಿಯನ್ನೆಲ್ಲಾ ಶೋಧಿಸಿ,ಮುಳುಗಿದ್ದ ಆ ಮುತ್ತಿನ ಮೂಗುತಿಯನ್ನು ಮೇಲೆತ್ತಿ ಸೀತೆಗೆ ಕೊಟ್ಟನು.ಆಗ ಸೀತೆಯು ಬಹಳ ಸಂತೋಷಗೊಂಡು ಹನುಮಂತನನ್ನು ಮುತ್ತೆತ್ತರಾಯ ಎಂದು ಹರಸಿದಳು.ಅಂದಿನಿಂದ ಹನುಮಂತನಿಗೆ ಮುತ್ತೆತ್ತರಾಯ ಎಂದು ಹೆಸರಾಯಿತು.ಈ ಮುತ್ತೆತ್ತರಾಯನು ಇಲ್ಲಿ ನೆಲೆಸಿದ ಕಾರಣ,ಈ ಕ್ಷೇತ್ರಕ್ಕೆ ಮುತ್ತತ್ತಿ ಎಂದು ಹೆಸರಾಯಿತು.
    ಕನ್ನಡದ ಕಣ್ಮಣಿ,ವರನಟ,ಡಾ.ರಾಜಕುಮಾರರು,ಅವರು ತಂದೆ,ತಾಯಿಯರು ಈ ಮುತ್ತೆತ್ತರಾಯನ ಬಳಿ ಮಕ್ಕಳಾಗಲೆಂದು ಹರಸಿಕೊಂಡುದರಿಂದ ಜನಿಸಿದ ಕಾರಣ,ಅವರಿಗೆ ಮುತ್ತುರಾಜನೆಂದು ಹೆಸರಿಡಲಾಯಿತು!ಅವರೇ ಸುಶ್ರಾವ್ಯವಾಗಿ ಹಾಡಿರುವ,ಚಿ.ಉದಯಶಂಕರರು ರಚಿಸಿರುವ ಒಂದು ಸುಂದರವಾದ ಗೀತೆ,ಈ ಕ್ಷೇತ್ರದ ಸ್ಥಳಪುರಾಣವನ್ನು ಹೇಳುತ್ತದೆ-
     ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು
ಎತ್ತಿ ತಂದೆ ಎಲ್ಲಿಂದ ರಾಯ
ಮುತ್ತೆತ್ತಿರಾಯ                              ||ಪ||
ಅಮ್ಮ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ 
ನಗೆಯ ತಂದೆಯಾ ಮಹನೀಯ......
ಮಾರುತಿರಾಯ                              ||ಅ.ಪ.||
          ಸೀತಮ್ಮ ಸ್ನಾನ ಮಾಡಿ ಮೂಗುತಿಯ     ಹುಡುಕಾಡಿ
         ನಿನ್ನ ಕೂಗಿದಳೇನೋ ಹನುಮಂತರಾಯ
         ನೀರಲ್ಲಿ ಬಾಲ ಬಿಟ್ಟು ನದಿಯನ್ನೇ ಶೋಧಿಸಿದ
         ಎಂಥ ಶ್ರದ್ಧೆಯೋ ಮಹನೀಯ....ಹನುಮಂತರಾಯ
||೧||
        ಅಮ್ಮ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ 
        ಮುತ್ತೆತ್ತರಾಯನೆಂದು ಹರಸಿದಳೇನು
        ನಿನ್ನಂಥ ದಾಸನನು ಪಡೆದ ಆ ರಾಮನು
        ಎಂಥ ಭಾಗ್ಯವಂತನಯ್ಯಾ......ಮಾರುತಿರಾಯ
||೨||
        ನಿನ್ನಂತೆ ಭಕ್ತಿಯಿಲ್ಲ ನಿನ್ನಂತೆ ಶಕ್ತಿಯಿಲ್ಲ
        ಏನೂ ಇಲ್ಲದ ಜೀವ ನನ್ನದು ಸ್ವಾಮಿ
        ನಿನ್ನೇ ನಾ ನಂಬಿ ಬಂದೆ ನೀನೇ ನನ್ನ ತಾಯಿತಂದೆ
        ಕಾಪಾಡುವ ಹೊಣೆಯು ನಿನ್ನದು ತಂದೆ ನಿನ್ನದು
||೩||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ