ಇಲ್ಲಿ ಪುರಾಣ,ಅಧ್ಯಾತ್ಮ,ಪ್ರಾಚೀನ ಭಾರತದ ವಿಚಾರಗಳು,ಇತಿಹಾಸ,ಸಂಸ್ಕೃತಿ,ಪರಂಪರೆ,ಹಾಗೂ ಪ್ರವಾಸ ಲೇಖನಗಳು ಲಭ್ಯ
ಮಂಗಳವಾರ, ಏಪ್ರಿಲ್ 23, 2024
ನವರಸಗಳಲ್ಲಿ ಡಾ.ರಾಜಕುಮಾರರ ಅಭಿನಯ
ರಾಜಕುಮಾರರ ಹುಟ್ಟುಹಬ್ಬವಾದ ಇಂದು ಅವರ ಕಲೆಯನ್ನು ಸ್ಮರಿಸುವುದೆಂದರೆ ಭಾರತೀಯ ಸಂಸ್ಕೖತಿಯನ್ನೂ ಮಾನವ ಜೀವನದ ಹಲವು ಮುಖಗಳನ್ನೂ ಸ್ಮರಿಸಿದಂತಾಗುತ್ತದೆ.ಅಷ್ಟು ವೈವಿಧ್ಯಮಯವಾದ ಪಾತ್ರಗಳಲ್ಲಿ ಸಮರ್ಪಕವಾಗಿ ಅಭಿನಯಿಸಿದ್ದಾರೆ ಅವರು.ಭಕ್ತ,ಭಗವಂತ,ರಾಜ,ರಾಕ್ಷಸ,ಸಂಗೀತಗಾರ,ಸಿಪಾಯಿ,ಒಳ್ಳೆಯ ಪತಿ,ಅಪ್ಪ,ಮಗ,ತಾತ,ರೈತ,ಸೇವಕ,ಪೋಲೀಸ್,ಕಳ್ಳ,ಕಾರ್ಮಿಕ,ಪ್ರೇಮಿ,ಪ್ರೊಫೆಸರ್,ಬಾಕ್ಸರ್,ವಿಲಾಸಿ ಯುವಕ,ಜೇಮ್ಸ್ಬಾಂಡ್,ಕುರುಡ,ಚಾಲಕ,ಹೀಗೆ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದು,ಅವರ ಪಾತ್ರಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು.ಅವರ ಅಭಿನಯ ರಸಪ್ರಧಾನವಾಗಿದೆ.ಅವರ ಹಲವು ಪಾತ್ರಗಳಲ್ಲಿ ನವರಸಗಳನ್ನೂ ಕಾಣಬಹುದು.ಕೆಲವನ್ನು ಸ್ಮರಿಸುವುದಾದರೆ,ಶೃಂಗಾರಕ್ಕೆ ಬಭ್ರುವಾಹನ ಚಿತ್ರದ ಈ ಸಮಯ ಶೖಂಗಾರಮಯ,ನಿನ್ನ ಕಣ್ಣ ನೋಟದಲ್ಲಿ ಗೀತೆಗಳ ಹಾಗೂ ಕೃಷ್ಣದೇವರಾಯ ಚಿತ್ರದ ಚಿನ್ನಾದೇವಿಯೊಂದಿಗಿನ ಸನ್ನಿವೇಶಗಳ ಅಭಿನಯ,ವೀರರಸಕ್ಕೆ ಬಭ್ರುವಾಹನ ಮತ್ತು ಮಯೂರ ಚಿತ್ರಗಳ ಸನ್ನಿವೇಶಗಳು,ಹಾಸ್ಯಕ್ಕೆ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡಿನ ಹಾಗೂ ಬಂಗಾರದ ಪಂಜರ,ಭಾಗ್ಯದ ಲಕ್ಷ್ಮೀ ಬಾರಮ್ಮ ಚಿತ್ರಗಳ ಅಭಿನಯ,ಅದ್ಭುತರಸಕ್ಕೆ ಭಕ್ತಪ್ರಹ್ಲಾದದ ಹಿರಣ್ಯಕಶಿಪು ವರ ಪಡೆಯುವ ಹಾಗೂ ಸಿಂಹಾಸನಸ್ಥನಾಗಿ ನರ್ತನ ನೋಡುವ ಸನ್ನಿವೇಶಗಳು ಮತ್ತು ಭಕ್ತ ಕುಂಬಾರದ ಗೋರ ಕುಂಬಾರನು ಕನಸಿನಲ್ಲಿ ಹಾಗೂ ನೈಜವಾಗಿ ಭಗವಂತನನ್ನು ದರ್ಶಿಸುವಾಗಿನ ಅಭಿನಯ,ಕರುಣರಸಕ್ಕೆ ಕಸ್ತೂರಿ ನಿವಾಸದ ಕೊನೆಯ ದುಃಖದ ಸನ್ನಿವೇಶಗಳು,ಭಕ್ತ ಕುಂಬಾರದಲ್ಲಿ ಭಗವಂತನಿಗಾಗಿ ವಿಲಪಿಸುವ,ಭಕ್ತ ಕನಕದಾಸದ ಬಾಗಿಲನು ತೆರೆದು ಗೀತೆಯ ಹಾಗೂ ಸನಾದಿ ಅಪ್ಪಣ್ಣದ ಕೊನೆಯ ದೃಶ್ಯಗಳು,ರೌದ್ರರಸಕ್ಕೆ ಭಕ್ತಪ್ರಹ್ಲಾದದ ಹಿರಣ್ಯಕಶಿಪು ಹಾಗೂ ಮಹಿಷಾಸುರಮರ್ದಿನಿಯ ಮಹಿಷಾಸುರ ಪಾತ್ರಗಳ ಅಭಿನಯ,ಬೀಭತ್ಸರಸಕ್ಕೆ ಸತಿಶಕ್ತಿಯ ರಕ್ತಾಕ್ಷನ ಪಾತ್ರ ಹಾಗೂ ಭಕ್ತಪ್ರಹ್ಲಾದದ ಹಿರಣ್ಯಕಶಿಪು ಪಾತ್ರದ ನಾರದರೊಂದಿಗಿನ ಹಾಗೂ ಸ್ವಗತ ಮಾತುಗಳ ಮತ್ತಿತರ ದೖಶ್ಯಗಳ ಅಭಿನಯ,ಭಯಾನಕರಸಕ್ಕೆ ಅದೇ ಕಣ್ಣು ಚಿತ್ರದ ಮನೋವಿಕಾರಿ ಅಪ್ಪನ ಪಾತ್ರ,ಮತ್ತು ಶಾಂತರಸಕ್ಕೆ ಶ್ರೀನಿವಾಸಕಲ್ಯಾಣದ ವಿಷ್ಣುವಿನ ಪಾತ್ರ,ಸಾಕ್ಷಾತ್ಕಾರ ಚಿತ್ರದ ನಾಯಕನ ಸೆರೆಮನೆವಾಸದ ಹಾಗೂ ಕೊನೆಯ ದೃಶ್ಯಗಳು,ಹಾಗೂ ಮಂತ್ರಾಲಯಮಹಾತ್ಮೆ ಚಿತ್ರದ ರಾಘವೇಂದ್ರ ಸ್ವಾಮಿಗಳ ಪಾತ್ರ,ಕಬೀರ,ಹರಿಭಕ್ತ ಮುಂತಾದ ಕೆಲವು ಭಕ್ತಿ ಪಾತ್ರಗಳು ಕೆಲವು ಉದಾಹರಣೆಗಳು.ಅನೇಕ ನಾಯಕಿಯರೊಂದಿಗೆ ಅಭಿನಯಿಸಿರುವ,ಅತ್ಯುತ್ತಮ ಕಥೆಗಳುಳ್ಳ,ಅತ್ಯುತ್ತಮ ಸಾಹಿತ್ಯ ಹಾಗೂ ಸುಂದರ ರಾಗಗಳುಳ್ಳ ಗೀತೆಗಳುಳ್ಳ ಚಿತ್ರಗಳ ಹೆಗ್ಗಳಿಕೆಯೂ ರಾಜಕುಮಾರರಿಗಿದೆ.ತಾವೇ ಒಳ್ಳೆಯ ಗಾಯಕರಾಗಿ ಅನೇಕ ಹಾಡುಗಳನ್ನು ಹಾಡಿಯೂ ಅನೇಕ ಉತ್ತಮ ಗಾಯಕರಿಂದ ಹಾಡಿಸಿಕೊಂಡ ಹೆಗ್ಗಳಿಕೆಯೂ ರಾಜಕುಮಾರರಿಗಿದೆ.ಹೀಗೆ ಡಾ.ರಾಜಕುಮಾರ್ ಒಬ್ಬ ಪರಿಪೂರ್ಣ ಕಲಾವಿದ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ