ತ್ರಿಶಂಕು ಸ್ವರ್ಗ, ತ್ರಿಶಂಕು ಸ್ಥಿತಿ, ಮೊದಲಾದ ಪದಗಳನ್ನು ನಾವು ಸಾಮಾನ್ಯವಾಗಿ ಉಪಯೋಗಿಸುತ್ತಿರುತ್ತೇವೆ. ಇಲ್ಲೂ ಇಲ್ಲ, ಅಲ್ಲೂ ಇಲ್ಲ ಎಂಬ ಎರಡು ಸ್ಥಿತಿಗಳ ನಡುವಿನ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಾಗ ಈ ನುಡಿಗಟ್ಟನ್ನು ಬಳಸುತ್ತೇವೆ.ಇದಕ್ಕೆ ಕಾರಣವಾದ ಪೌರಾಣಿಕ ಕಥೆ ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ.ಇಕ್ಷ್ವಾಕು ವಂಶದ ತ್ರಿಶಂಕು ಎಂಬ ರಾಜನಿಗೆ ಸಶರೀರವಾಗಿ ಸ್ವರ್ಗಕ್ಕೆ ಹೋಗುವ ಆಸೆಯಿರುತ್ತದೆ.ಅದಕ್ಕಾಗಿ ಒಂದು ಯಜ್ಞವನ್ನು ಮಾಡಿಸಬೇಕೆಂದು ಅವನು ತನ್ನ ಕುಲಗುರುಗಳಾದ ವಸಿಷ್ಠರನ್ನು ಕೇಳಿಕೊಂಡಾಗ ಅವರು ಅದು ಸಾಧ್ಯವಾಗದು ಎನ್ನುತ್ತಾರೆ.ಆಗ ಅವನು ಅವರ ನೂರು ಮಕ್ಕಳ ಬಳಿ ಹೋಗಿ ಕೇಳಿದಾಗ ಅವರು ಕುಪಿತರಾಗಿ ಅವನಿಗೆ ಚಂಡಾಲನಾಗುವಂತೆ ಶಪಿಸುತ್ತಾರೆ! ಅವನು ಆ ಸ್ಥಿತಿಯಲ್ಲೇ ವಿಶ್ವಾಮಿತ್ರರ ಬಳಿ ಹೋಗಿ ತನ್ನ ಆಸೆ ಹೇಳಿಕೊಂಡಾಗ, ಅವರು ಅವನಿಗೆ ಆಶ್ವಾಸನೆ ನೀಡಿ ಯಜ್ಞವನ್ನು ಆರಂಭಿಸಿದರು.ಆ ಯಜ್ಞಕ್ಕೆ ಆಹ್ವಾನ ನೀಡಲಾದ ವಸಿಷ್ಠಪುತ್ರರು ಬರದೇ ವಿಶ್ವಾಮಿತ್ರರನ್ನೂ ಅವರ ಯಾಗವನ್ನೂ ನಿಂದಿಸಲು, ವಿಶ್ವಾಮಿತ್ರರು ಅವರಿಗೆ ನಾಯಿ ಮಾಂಸ ತಿನ್ನುವ ಹೀನ ಕುಲದಲ್ಲಿ ಹುಟ್ಟುವಂತೆ ಶಪಿಸಿದರು. ಅನಂತರ, ಯಜ್ಞದ ಹವಿರ್ಭಾಗ ತೆಗೆದುಕೊಳ್ಳಲು ವಿಶ್ವಾಮಿತ್ರರು ದೇವತೆಗಳನ್ನು ಆಹ್ವಾನಿಸಲು, ಅವರೂ ಬರಲಿಲ್ಲ. ಆಗ ವಿಶ್ವಾಮಿತ್ರರು ತಮ್ಮ ತಪೋಬಲದಿಂದ ತ್ರಿಶಂಕುವನ್ನು ಸ್ವರ್ಗಕ್ಕೆ ಕಳಿಸಿಯೇಬಿಟ್ಟರು! ಆದರೆ ಇಂದ್ರನು, ಗುರುಶಾಪದಿಂದ ಚಂಡಾಲನಾದವನು ಸ್ವರ್ಗಕ್ಕೆ ಯೋಗ್ಯನಲ್ಲನೆಂದು ಅವನನ್ನು ತಲೆಕೆಳಗಾಗಿ ಭೂಮಿಗೆ ಬೀಳುವಂತೆ ಆದೇಶಿಸಿದನು! ಅವನು ಹಾಗೆ ತಲೆಕೆಳಗಾಗಿ ಬೀಳತೊಡಗಲು, ವಿಶ್ವಾಮಿತ್ರರು ಅವನನ್ನು,"ನಿಲ್ಲು!" ಎಂದು ತಮ್ಮ ತಪೋಬಲದಿಂದ ಅಲ್ಲಿಯೇ ನಿಲ್ಲಿಸಿ, ಅಲ್ಲಿಯೇ ಒಂದು ಸ್ವರ್ಗವನ್ನೂ ನಕ್ಷತ್ರಮಂಡಲವನ್ನೂ ಸಪ್ತರ್ಷಿಗಳನ್ನೂ ಸೃಷ್ಟಿಸಿಬಿಟ್ಟರು! ಇದರಿಂದ ಗಾಬರಿಗೊಂಡ ಇಂದ್ರಾದಿ ದೇವತೆಗಳು ಬಂದು, "ತ್ರಿಶಂಕುವು ಗುರುಶಾಪದಿಂದ ಚಂಡಾಲನಾಗಿರುವ ಕಾರಣ, ಸ್ವರ್ಗಕ್ಕೆ ಯೋಗ್ಯನಲ್ಲ!" ಎಂದು ಹೇಳಿದನು.ಆಗ ವಿಶ್ವಾಮಿತ್ರರು," ಹಾಗಿದ್ದರೆ ಅವನು ಈಗ ಇರುವ ಸ್ಥಿತಿಯಲ್ಲೇ ಸ್ವರ್ಗಸುಖ ಅನುಭವಿಸುವಂತಾಗಬೇಕು!" ಎಂದರು.ಅದಕ್ಕೆ ದೇವತೆಗಳು ಒಪ್ಪಿದರು.ಹೀಗೆ ತ್ರಿಶಂಕು ತಲೆಕೆಳಗಾಗಿಯೇ ಸ್ವರ್ಗಸುಖ ಅನುಭವಿಸತೊಡಗಿದನು.ಈ ಕಾರಣಕ್ಕಾಗಿಯೇ ತ್ರಿಶಂಕು ಸ್ವರ್ಗ ಅಥವಾ ತ್ರಿಶಂಕು ಸ್ಥಿತಿ ಎಂಬ ನುಡಿಗಟ್ಟು ಬಳಕೆಗೆ ಬಂದಿತು.ಈ ಕಥೆ ವಾಲ್ಮೀಕಿ ರಾಮಾಯಣದಲ್ಲಿ ಬರುತ್ತದೆ.ಆದರೆ ಈ ತ್ರಿಶಂಕುವಿಗೆ ಆ ಹೆಸರು ಹೇಗೆ ಬಂದಿತು ಎನ್ನುವುದು ಇನ್ನೊಂದು ಸ್ವಾರಸ್ಯಕರ ಕಥೆ.ಇದು ಮಹಾಭಾರತದ ಖಿಲಭಾಗವಾದ ಹರಿವಂಶದಲ್ಲಿ ಬರುತ್ತದೆ.ಅಂತೆಯೇ ವಿಷ್ಣುಪುರಾಣ ಮೊದಲಾದ ಪುರಾಣಗಳಲ್ಲಿ ಇಷ್ಟು ದೀರ್ಘವಲ್ಲದಿದ್ದರೂ ಸಂಕ್ಷಿಪ್ತವಾಗಿ ಹೇಳಿದೆ.
ತ್ರಿಶಂಕುವಿನ ಮೂಲ ಹೆಸರು ಸತ್ಯವ್ರತ.ಅವನು ಇಕ್ಷ್ವಾಕು ವಂಶದ ರಾಜನಾದ ತ್ರಯ್ಯಾರುಣನ ಮಗ.ಇವನಿಗೆ ಒಂದು ದುಷ್ಟ ಅಭ್ಯಾಸ ಇತ್ತು.ಅದೆಂದರೆ, ಸ್ವಯಂವರ ನಡೆಯುತ್ತಿದ್ದಾಗ ಹೋಗಿ ಕನ್ಯಾಪಹರಣ ಮಾಡುತ್ತಿದ್ದ! ಪಾಣಿಗ್ರಹಣವಾಗಿದ್ದರೂ ಸಪ್ತಪದಿಯಾದ ನಂತರವಷ್ಟೇ ವಿವಾಹ ಸಂಪೂರ್ಣವಾಗುತ್ತದೆ. ಇವನು ಸಪ್ತಪದಿಯಾಗುವ ಮೊದಲು ವಧುವನ್ನು, ಅಂದರೆ ಕನ್ಯೆಯನ್ನು ಅಪಹರಿಸುತ್ತಿದ್ದ! ಅವನ ಪ್ರಕಾರ ವಧುವು ಇನ್ನೂ ಕನ್ಯೆಯಾಗಿದ್ದರಿಂದ ಅದು ಸರಿ ಎಂಬ ಭಾವನೆ ಇದ್ದಿರಬಹುದು.ಹೀಗೆ ಅವನು ಅನೇಕ ಕನ್ಯೆಯರನ್ನು ಅಪಹರಿಸುತ್ತಿದ್ದ ಅಪರಾಧಕ್ಕೆ ಇಂದ್ರನು ಅವನ ರಾಜ್ಯದಲ್ಲಿ ಹನ್ನೆರಡು ವರ್ಷಗಳ ಕಾಲ ಮಳೆಗರೆಯಲಿಲ್ಲ! ಅವನ ಈ ಅಪರಾಧಗಳಿಂದ ಬೇಸತ್ತ ಅವನ ತಂದೆ ಅವನಿಗೆ," ಕುಲಕಳಂಕನೇ! ನನ್ನ ರಾಜ್ಯದಿಂದ ತೊಲಗಿಹೋಗು! ನಿನ್ನಿಂದ ನಾನು ಪುತ್ರವಂತನೆನಿಸಿಕೊಳ್ಳಲು ಇಚ್ಛಿಸುವುದಿಲ್ಲ!" ಎಂದು ಅವನನ್ನು ರಾಜ್ಯದಿಂದಲೇ ಬಹಿಷ್ಕರಿಸಿದನು! ಆಗ ಚಿಂತಿತನಾದ ಸತ್ಯವ್ರತನು," ನಾನು ಎಲ್ಲಿಗೆ ಹೋಗಲಿ?" ಎಂದು ಕೇಳಿದನು.ಅದಕ್ಕೆ ತಂದೆಯು ಕೋಪದಿಂದ," ಚಂಡಾಲರ ಕೇರಿಯಲ್ಲಿ ವಾಸಮಾಡು ಹೋಗು!" ಎಂದನು.ಅದರಂತೆ ಸತ್ಯವ್ರತನು ದು:ಖಿತನಾಗಿ ಉಪಾಂಶುವ್ರತ (ಮೌನವ್ರತ) ಧರಿಸಿ ಚಂಡಾಲರೊಂದಿಗೆ ವಾಸಿಸತೊಡಗಿ ಅವರಂತೆಯೇ ಆದನು.ಇದನ್ನು ವಸಿಷ್ಠರು ತಡೆಯಲಿಲ್ಲ.ಆದರೆ ಅವರು ಏಕೆ ತಡೆಯಲಿಲ್ಲವೆಂದರೆ ಅವನು ಮೌನವ್ರತದಿಂದ ಹನ್ನೆರಡು ವರ್ಷಗಳು ಕಳೆದರೆ ಅವನ ಪಾಪ ಪರಿಹಾರವಾಗುತ್ತದೆ ಹಾಗೂ ಅವನ ವಂಶ ಉದ್ಧಾರವಾಗುತ್ತದೆ ಎಂದು ಅವರು ಯೋಚಿಸಿದರು.ಆದರೆ ಇದನ್ನರಿಯದ ಸತ್ಯವ್ರತನು ಅವರನ್ನು ವಿನಾಕಾರಣ ದ್ವೇಷಿಸತೊಡಗಿದನು! ಆಗ ತ್ರಯ್ಯಾರುಣನೂ ವಿರಕ್ತನಾಗಿ ತಪಸ್ಸು ಮಾಡಲು ಕಾಡಿಗೆ ಹೋದನು.ಹೀಗಿರಲು ಸತ್ಯವ್ರತನು ಒಮ್ಮೆ ವಿಶ್ವಾಮಿತ್ರರ ಕುಟುಂಬವನ್ನು ಭೇಟಿಯಾದನು.ವಿಶ್ವಾಮಿತ್ರರು ಸಮುದ್ರದ ತೀರದಲ್ಲಿ ತಪಸ್ಸು ಮಾಡಲು ಹೋದಾಗ ತಮ್ಮ ಹೆಂಡತಿ, ಮಕ್ಕಳನ್ನು ಅವನ ರಾಜ್ಯದಲ್ಲೇ ಇರಿಸಿದ್ದರು.ಕಡುಬಡತನದಲ್ಲಿದ್ದ ಅವರ ಹೆಂಡತಿ ತನ್ನ ಒಬ್ಬ ಮಗನನ್ನು ಮಾರಿ ಜೀವನ ಮಾಡಲು ಅವನ ಕುತ್ತಿಗೆಗೆ ಹಗ್ಗ ಕಟ್ಟಿ ಪೇಟೆಗೆ ಕರೆತಂದಿದ್ದಳು.ಆಗ ಇದನ್ನು ಕಂಡ ಸತ್ಯವ್ರತನು ಅವನನ್ನು ಮಾರಾಟದಿಂದ ಬಿಡಿಸಿ ವಿಶ್ವಾಮಿತ್ರರ ಒಲುಮೆ ಗಳಿಸಲು ಅವರ ಪೋಷಣೆಯನ್ನು ತಾನು ವಹಿಸಿಕೊಂಡನು.ಹೀಗೆ ಕುತ್ತಿಗೆಗೆ (ಗಲ) ಹಗ್ಗ ಬಿದ್ದ ಕಾರಣಕ್ಕೆ ಅವನಿಗೆ ಗಾಲವ ಎಂದು ಹೆಸರಾಯಿತು.ಅನಂತರ, ಸತ್ಯವ್ರತನು ದಿನವೂ ಜಿಂಕೆ, ಕಾಡೆಮ್ಮೆ,ಕಾಡು ಹಂದಿ, ಮೊದಲಾದ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ವಿಶ್ವಾಮಿತ್ರರ ಆಶ್ರಮದ ಮುಂದೆ ನೇತುಹಾಕುತ್ತಿದ್ದನು.ಅವನು ಮೌನವ್ರತದಲ್ಲಿದ್ದುದರಿಂದಲೂ ಚಂಡಾಲರೊಂದಿಗಿದ್ದುದರಿಂದಲೂ ವಿಶ್ವಾಮಿತ್ರರ ಹೆಂಡತಿ, ಮಕ್ಕಳಿಗೆ ನೇರವಾಗಿ ಕೊಡದೇ ಹಾಗೂ ಅವರೊಂದಿಗೆ ಮಾತನಾಡದೇ ಹೀಗೆ ಮಾಡುತ್ತಿದ್ದನು.ಅವರು ಆ ಮಾಂಸಗಳನ್ನು ತೆಗೆದುಕೊಂಡು ಸೇವಿಸುತ್ತಿದ್ದರು.ಹೀಗಿರಲು, ಒಮ್ಮೆ ಅವನಿಗೆ ಯಾವ ಪ್ರಾಣಿಯೂ ಕಾಣದಿರಲು, ವಸಿಷ್ಠರ ಕಾಮಧೇನುವನ್ನು ಕಂಡು ಅದನ್ನೇ ಕೊಂದುಬಿಟ್ಟನು! ಅನಂತರ ಅದರ ಮಾಂಸವನ್ನು ಸಂಸ್ಕರಿಸದೆಯೇ ತಾನೂ ತಿಂದು ವಿಶ್ವಾಮಿತ್ರರ ಮಕ್ಕಳಿಗೂ ತಿನ್ನಿಸಿದನು.ಇದನ್ನು ತಿಳಿದ ವಸಿಷ್ಠರು ಅತ್ಯಂತ ಕುಪಿತರಾದರು! ಅವರು ಅವನಿಗೆ," ಇದೊಂದು ತಪ್ಪು ಮಾಡದಿದ್ದರೆ ನಿನ್ನ ಉಪಾಂಶುವ್ರತದಿಂದ ನಿನ್ನ ಪಾಪ ಪರಿಹಾರವಾಗುತ್ತಿತ್ತು! ಆದರೆ ನೀನು ದೊಡ್ಡ ತಪ್ಪನ್ನೇ ಮಾಡಿದೆ! ತಂದೆಗೆ ಸದಾಚಾರದಿಂದ ಸಂತೋಷವುಂಟುಮಾಡದಿರುವುದು, ಗುರುವಿನ ಕಾಮಧೇನುವನ್ನು ಕೊಂದುದು, ಹಾಗೂ ಅದರ ಮಾಂಸವನ್ನು ಮಂತ್ರಗಳಿಂದ ಸಂಸ್ಕರಿಸದೆಯೇ ತಿಂದುದು, ಈ ಮೂರು ಪಾಪಗಳಿಂದ ( ಶಂಕುಗಳಿಂದ) ನೀನು ಇನ್ನು ಮುಂದೆ ತ್ರಿಶಂಕು ಎಂದು ಕುಖ್ಯಾತನಾಗುವೆ!" ಎಂದರು.
ಹೀಗೆ ಸತ್ಯವ್ರತನಿಗೆ ತ್ರಿಶಂಕು ಎಂಬ ಹೆಸರೇ ಉಳಿದುಕೊಂಡು ಅವನು ಮಾಡಿದ ತಪ್ಪುಗಳನ್ನು ಸದಾ ಹೇಳುವಂತಾಯಿತು! ಹನ್ನೆರಡು ವರ್ಷಗಳ ನಂತರ ವಿಶ್ವಾಮಿತ್ರರು ತಪಸ್ಸಿನಿಂದ ಹಿಂದಿರುಗಿ ತಮ್ಮ ಕುಟುಂಬವನ್ನು ಪೋಷಿಸಿದ ಕಾರಣಕ್ಕೆ ತ್ರಿಶಂಕುವಿನಲ್ಲಿ ಸಂತುಷ್ಟರಾಗಿ ಅವನನ್ನು ಸಿಂಹಾಸನಕ್ಕೇರಿಸಿದರು.ಆ ಹೊತ್ತಿಗೆ ತ್ರಯ್ಯಾರುಣನೂ ತಪಸ್ಸಿಗೆ ಹೊರಟುಹೋಗಿದ್ದನು.ವಿಶ್ವಾಮಿತ್ರರು ತಮ್ಮ ತಪೋಬಲದಿಂದ ಆಗ ಹನ್ನೆರಡು ವರ್ಷಗಳ ಅನಾವೃಷ್ಟಿಯನ್ನೂ ನಿವಾರಿಸಿ ಮಳೆಬರಿಸಿದರು. ತ್ರಿಶಂಕುವಿಗೆ ಏನಾದರೂ ವಾರ ಕೇಳುವಂತೆ ಹೇಳಿದಾಗ ಅವನು ತಾನು ಸಶರೀರನಾಗಿ ಸ್ವರ್ಗಕ್ಕೆ ಹೋಗಬೇಕೆಂದು ಕೇಳಿಕೊಂಡನು.ಆಗ ವಿಶ್ವಾಮಿತ್ರರು ಯಜ್ಞವನ್ನು ಮಾಡಿ ಅವನನ್ನು ಸಶರೀರವಾಗಿ ಸ್ವರ್ಗಕ್ಕೆ ಕಳಿಸಿದರು.
ಹೀಗೆ ರಾಮಾಯಣ ಮತ್ತು ಹರಿವಂಶಾದಿ ಪುರಾಣಗಳಲ್ಲಿ ತ್ರಿಶಂಕುವಿನ ಕಥೆ ಭಿನ್ನವಾಗಿದೆ.ರಾಮಾಯಣದಲ್ಲಿ ವಸಿಷ್ಠಪುತ್ರರ ಶಾಪದಿಂದ ತ್ರಿಶಂಕು ಚಂಡಾಲನಾದರೆ, ಪುರಾಣಗಳಲ್ಲಿ ಅವನು ತಂದೆಯ ಆಜ್ಞೆಯಂತೆ ಚಂಡಾಲರ ಕೇರಿಯಲ್ಲಿರುತ್ತಾ ಅವರಂತಾದನು ಅಷ್ಟೇ! ರಾಮಾಯಣದಲ್ಲಿ ಅವನು ತಲೆಕೆಳಗಾಗಿ ವಿಶ್ವಾಮಿತ್ರರ ಸೃಷ್ಟಿಯ ಬೇರೊಂದು ಸ್ವರ್ಗದಲ್ಲಿರುವ ಹಾಗೆ ಪುರಾಣಗಳಲ್ಲಿ ಇಲ್ಲದೇ ಸಶರೀರವಾಗಿ ಸ್ವರ್ಗಕ್ಕೆ ಹೋದನೆಂದಷ್ಟೇ ಇದೆ.ಹೀಗೆ ಪೌರಾಣಿಕ ಕಥೆಗಳು ವಿಭಿನ್ನವಾಗಿ ಬರುವುದು ಒಂದು ರೀತಿಯ ಸ್ವಾರಸ್ಯವಾಗಿರುತ್ತದೆ.ಪುರಾಣಗಳಲ್ಲಿಯೇ ಇದಕ್ಕೆ ಕಾರಣ ಹೇಳುವುದು, ಇವು ವಿವಿಧ ಕಲ್ಪಗಳಲ್ಲಿ ನಡೆದುದರಿಂದ ವಿಭಿನ್ನವಾಗಿವೆ ಎಂದು.
ಅನೇಕರಿಗೆ ಗೊತ್ತಿರದ ಇನ್ನೊಂದು ಸ್ವಾರಸ್ಯವೆಂದರೆ, ಸತ್ಯವನ್ನೇ ಹೇಳುವವನೆಂದು ಖ್ಯಾತನಾದ ಹರಿಶ್ಚಂದ್ರ, ಈ ತ್ರಿಶಂಕುವಿನ ಮಗ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ