ಶನಿವಾರ, ಜನವರಿ 20, 2024

ಪುರಾಣ ಕುತೂಹಲ -ಸೀತೆಯು ರಾವಣನ ಮಗಳು, ಹೇಗೆ?

       ಸೀತೆಯು ರಾವಣನ ಮಗಳು ಎಂದು ಹೇಳುತ್ತಾರೆ.ಹೇಗೆ?
      ಸೀತೆಯು ರಾವಣನ ಮಗಳು ಎಂದು ಅನೇಕರು ಹೇಳುತ್ತಾರೆ.ಆದರೆ ಹೇಗೆ ಎಂದು ಕೇಳಿದರೆ ಗೊತ್ತಿರುವುದಿಲ್ಲ.ಈ ವಿಷಯವಾಗಿ ನಮ್ಮ ಗ್ರಂಥಗಳಲ್ಲಿ ಏನಿದೆ ನೋಡೋಣ.ಮೊದಲನೆಯದಾಗಿ ವಾಲ್ಮೀಕಿ ರಾಮಾಯಣದಲ್ಲಿನ ಉತ್ತರಕಾಂಡದಲ್ಲಿ ರಾವಣನ ಪೂರ್ವಕಥೆ ವಿಸ್ತ್ರತವಾಗಿ ಬರುತ್ತದೆ.ಅಲ್ಲಿ ರಾವಣನಿಗೆ ಸೀತೆಯು ಮಗುವಾಗಿದ್ದಾಗಲೇ ಸಿಗುತ್ತಾಳೆ! ಹಾಗಾಗಿ ಅವಳು ರಾವಣನ ಮಗಳೆಂಬಂತೆ ಎನ್ನಬಹುದು.ಆ ಕಥೆ ನೋಡೋಣ.ಧರ್ಮಧ್ವಜ ಮತ್ತು ಕುಶಧ್ವಜರೆಂಬ ಸಹೋದರರು ಲಕ್ಷ್ಮಿಯೇ ತಮಗೆ ಮಗಳಾಗಲೆಂದು ತಪಸ್ಸು ಮಾಡಿದರು.ಆಗ ಲಕ್ಷ್ಮಿಯು ತನ್ನ ಒಂದಂಶದಿಂದ ಧರ್ಮಧ್ವಜನಿಗೆ ತುಳಸಿಯಾಗಿ ಹುಟ್ಟಿದರೆ, ಕುಶಧ್ವಜನಿಗೆ ವೇದವತಿಯಾಗಿ ಹುಟ್ಟಿದಳು.ಇಬ್ಬರೂ ವಿಷ್ಣುವನ್ನೇ ಮದುವೆಯಾಗಬೇಕೆಂದು ತಪಸ್ಸು ಮಾಡಿದರು.ವೇದವತಿಯು ತಪಸ್ಸು ಮಾಡುತ್ತಿದ್ದಾಗ, ರಾವಣನು ಒಮ್ಮೆ ಅವಳನ್ನು ಕಂಡು ತನ್ನನ್ನು ಮದುವೆಯಾಗಲು ಆಗ್ರಹಿಸಿದನು.ಆದರೆ ಅವಳು ಒಪ್ಪದಿದ್ದಾಗ ಅವನು ಅವಳ ಕೇಶವನ್ನು ಹಿಡಿದೆಳೆದನು! ತಪಶ್ಶಕ್ತಿಯಿಂದ ತನ್ನ ಕೈಯನ್ನೇ ಖಡ್ಗದಷ್ಟು ಶಕ್ತಿಯುತವಾಗಿ ಮಾಡಿಕೊಕಡಿದ್ದ ವೇದವತಿ, ತನ್ನ ಕೈಯಿಂದಲೇ ತನ್ನ ಆ  ಭಾಗದ ಕೇಶವನ್ನು ಕತ್ತರಿಸಿ, ರಾವಣನಿಂದ ಬಿಡಿಸಿಕೊಂಡು ಅಗ್ನಿಪ್ರವೇಶ ಮಾಡಿದಳು! ಆಗ ಅವಳು ತಾನು ಪುನಃ ಹುಟ್ಟಿ ರಾವಣನ ವಧೆಗೆ ಕಾರಣವಾಗುವೆನೆಂದು ಶಾಪವಿತ್ತಳು! ಅನಂತರ ಅವಳು ಲಂಕೆಯಲ್ಲೇ ಒಂದು ಸರೋವರದಲ್ಲಿ ಒಂದು ಕಮಲಪುಷ್ಪದಲ್ಲಿ ಹುಟ್ಟಿದಳು! ಆಗ ಅವಳನ್ನು ಮೊದಲು ನೋಡಿದ್ದೇ ರಾವಣ! ಸುಂದರವಾದ ಮಗುವು ದೊರೆಯಿತೆಂದು ಅವನು ಅದನ್ನು ಅರಮನೆಗೆ ತಂದನು.ಆಗ ಅವನ ಜ್ಯೋತಿಷಿಗಳು ಆ ಮಗುವೇ ಅವನ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.ಅದನ್ನು ಕೇಳಿ ಅವನು ಕೂಡಲೇ ಆ ಮಗುವನ್ನು ಸಮುದ್ರಕ್ಕೆ ಎಸೆದುಬಿಟ್ಟನು! ಅದು ಹೋಗಿ ಮಿಥಿಲೆಯ ಭೂಮಿಯಲ್ಲಿ ಸೇರಿಕೊಂಡು ಜನಕನಿಗೆ ದೊರೆಯಿತು.ಹೀಗೆ ಸೀತೆ ಒಂದು ರೀತಿಯಲ್ಲಿ ರಾವಣನ ಮಗಳು.
     ಸಂಸ್ಕೃತದಲ್ಲಿ ವಾಲ್ಮೀಕಿ ರಾಮಾಯಣವಲ್ಲದೇ ಅದ್ಭುತ ರಾಮಾಯಣ, ಆನಂದ ರಾಮಾಯಣ, ಹಾಗೂ ಅಧ್ಯಾತ್ಮ ರಾಮಾಯಣ ಎಂಬ ಮೂರು ಗ್ರಂಥಗಳಿದ್ದು ಇವನ್ನೂ ವಾಲ್ಮೀಕಿ ಮಹರ್ಷಿಗಳೇ ರಚಿಸಿದರೆಂದು ಪ್ರತೀತಿಯಿದೆ.ಆದರೆ ಅವು ಅನೇಕ ವಿಷಯಗಳಲ್ಲಿ ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿದ್ದು ಅನೇಕ ಸ್ವಾರಸ್ಯಕರ ಕಥೆಗಳನ್ನೊಳಗೊಂಡಿವೆ.ಅದ್ಭುತ ರಾಮಾಯಣದಲ್ಲಿ ಸೀತೆಯು ರಾವಣನ ಮಗಳೆಂಬುದಕ್ಕೆ ಸ್ವಾರಸ್ಯಕರವಾದ ಒಂದು ಕಥೆಯಿದೆ.ಅದರಂತೆ, ಒಮ್ಮೆ ರಾವಣನು ಹಲವು ಋಷಿಗಳು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬಂದನು.ಬಡಪಾಯಿಗಳಾದ ಅವರನ್ನು ಕೊಲ್ಲದೇ ಜಯಿಸಬೇಕೆಂದು ಅವನು ಯೋಚಿಸಿ, ಅದಕ್ಕೊಂದು ಉಪಾಯ ಮಾಡಿದನು.ಒಂದು ಬಾಣದಿಂದ ಎಲ್ಲರ ದೇಹಗಳನ್ನು ಚುಚ್ಚಿ ಅವರ ರಕ್ತವನ್ನು ಒಂದು ಮಡಕೆಯಲ್ಲಿ ಸಂಗ್ರಹಿಸಿಕೊಂಡನು.ಆ ಋಷಿಗಳ ಪೈಕಿ, ನೂರು ಪುತ್ರರ ತಂದೆಯಾದ ಗೃತ್ಸಮದನೆಂಬ ಋಷಿಯು ತನ್ನ ಪತ್ನಿಯೊಂದಿಗೆ ಲಕ್ಷ್ಮಿಯೇ ತಮಗೆ ಮಗಳಾಗಲೆಂದು ತಪಸ್ಸು ಮಾಡಿ ಆ ಮಡಕೆಯಲ್ಲಿ ಸ್ವಲ್ಪ ಹಾಲನ್ನು ಮಂತ್ರಿಸಿಟ್ಟು ಸ್ನಾನಕ್ಕೆ ಹೋಗಿದ್ದನು.ರಾವಣನು ಆ ಮಡಕೆಯಲ್ಲೇ ರಕ್ತವನ್ನು ಸಂಗ್ರಹಿಸಿ ಲಂಕೆಗೆ ಹಿಂದಿರುಗಿದನು.ತನ್ನ ಪತ್ನಿ ಮಂದೋದರಿಗೆ ಅದೊಂದು ವಿಷದ ಮಡಕೆಯೆಂದೂ ಜೋಪಾನವಾಗಿ ಇಡಬೇಕೆಂದೂ ಹೇಳಿದನು.ಅನಂತರ ಒಮ್ಮೆ ರಾವಣನು ಇಲ್ಲದಿದ್ದಾಗ ಅವನ ದುರಾಚಾರಗಳಿಂದ ಬೇಸತ್ತ ಮಂದೋದರಿಯು ಆತ್ಮಹತ್ಯೆ ಮಾಡಿಕೊಳ್ಳಲೆಂದು ಆ ಮಡಿಕೆಯಲ್ಲಿದ್ದ ಹಾಲು ಸಹಿತವಾದ ರಕ್ತವನ್ನು ಕುಡಿದುಬಿಟ್ಟಳು! ಆದರೆ ಅವಳು ಸಾಯದೇ ಗರ್ಭಿಣಿಯಾದಳು! ಇದರಿಂದ ಆಶ್ಚರ್ಯ,ಲಜ್ಜೆಗಳಿಗೊಳಗಾಗಿ ಅವಳು ಆಗ ಗರ್ಭವನ್ನು ವಿಸರ್ಜಿಸಬೇಕೆಂದು ಪುಷ್ಪಕ ವಿಮಾನದಲ್ಲಿ ಕುರುಕ್ಷೇತ್ರಕ್ಕೆ ಹೋಗಿ ಅಲ್ಲಿ ಗರ್ಭವನ್ನು ವಿಸರ್ಜಿಸಿ ಭೂಮಿಯಲ್ಲಿ ಹೂತುಬಿಟ್ಟಳು! ಮುಂದೆ ಆದು ಬೆಳೆದು ಯಜ್ಞಕ್ಕಾಗಿ ನೆಲ ಉಳುತ್ತಿದ್ದ ಜನಕನಿಗೆ ಸಿಕ್ಕಿತು.ಜನಕನು ಮಗುವಿಗೆ ಸೀತೆಯೆಂದು ಹೆಸರಿಟ್ಟು ಬೆಳೆಸಿದನು.ಹೀಗೆ ಸೀತೆಯು ರಾವಣನ ಮಗಳು.ಈ ಅದ್ಭುತ ರಾಮಾಯಣದ ಪ್ರಕಾರ, ರಾವಣನು ತಾನು ತನ್ನ ಮಗಳನ್ನೇ ಕಾಮಿಸಿದಾಗ ಸಾಯಲೆಂದು ಬ್ರಹ್ಮನ ಬಳಿ ವರ ಪಡೆದಿದ್ದನು.ಹಾಗಾಗಿ ಅವನು ಸೀತೆಯನ್ನು ಕಾಮಿಸಿದಾಗ ಸತ್ತನು.
       ಆನಂದ ರಾಮಾಯಣದಲ್ಲಿ ಬರುವ ಒಂದು ಕಥೆಯ ಪ್ರಕಾರ, ಪದ್ಮಾಕ್ಷನೆಂಬ ರಾಜನು ವಿಷ್ಣುವನ್ನು ಕುರಿತು ತಪಸ್ಸು ಮಾಡಿ ಲಕ್ಷ್ಮಿಯೇ ತನಗೆ ಮಗಳಾಗಿ ಹುಟ್ಟಲೆಂದು ವರ ಪಡೆದಿದ್ದನು.ಅದರಂತೆ, ಲಕ್ಷ್ಮಿಯು ಅವನಿಗೆ ಪದ್ಮಾ ಎಂಬ ಮಗಳಾಗಿ ಹುಟ್ಟಿದಳು.ಅವಳಿಗೆ ಅವನು ಸ್ವಯಂವರ ಏರ್ಪಡಿಸಿದಾಗ ಅವಳಿಗಾಗಿ ದೇವತೆಗಳಿಗೂ ರಾಕ್ಷಸರಿಗೂ ಯುಧ್ಧವಾಗಿ ಆ ಯುದ್ಧದಲ್ಲಿ ಪದ್ಮಾಕ್ಷನೇ ಸತ್ತುಹೋದನು! ಆಗ ಪದ್ಮೆಯು ಅಗ್ನಿಪ್ರವೇಶ ಮಾಡಿದಳು! ಆಗ ಅಲ್ಲಿ ಬಂದ ರಾವಣನು ಅವಳನ್ನು ಹಿಡಿಯಲು ಅಗ್ನಿಯನ್ನು ನೀರಿನಿಂದ ಆರಿಸಿದನು.ಆದರೆ ಅಲ್ಲಿ ಅವಳು ಕಾಣದೇ ಐದು ರತ್ನಗಳಿದ್ದವು! ಆಗ ರತ್ನಗಳನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿಕೊಂಡು ಲಂಕೆಗೆ ಹೋಗಿ ಒಂದು ದೇವಾಲಯದಲ್ಲಿರಿಸಿ ಮನೆಗೆ ಹೋದನು.ಆನಂತರ ಅವನು ತನ್ನ ಪತ್ನಿ ಮಂದೋದರಿಗೆ ಆ ಪೆಟ್ಟಿಗೆಯನ್ನು ಆ ದೇವಾಲಯದಿಂದ ತರಲು ಹೇಳಲು ಅವಳು ಹೋದಳು.ಆ ಪೆಟ್ಟಿಗೆ ಬಹಳ ಭಾರವಿದ್ದುದರಿಂದ ಅದನ್ನು ಅವಳು ತೆಗೆದು ನೋಡಿದರೆ ಅಲ್ಲಿ ರತ್ನಗಳಿರದೇ ಒಂದು ಹೆಣ್ಣು ಮಗುವಿತ್ತು! ಅದನ್ನು ಅವಳು ಮನೆಗೆ ತರಲು, ರಾವಣನು ಪದ್ಮೆಯ ಕಥೆ ಹೇಳಿದನು.ಈ ಮಗುವಿನಿಂದ ಖಂಡಿತ ತಮ್ಮ ಸರ್ವನಾಶವಾಗುತ್ತದೆಯೆಂದು ಬಗೆದು ಮಂದೋದರಿಯು ಅದನ್ನು ಕಾಡಿನಲ್ಲಿ ಹೂತುಬಿಡುವಂತೆ ಸೇವಕರಿಗೆ ಹೇಳಿದಳು! ರಾವಣನ ಮಂತ್ರಿಗಳೂ ಹಾಗೆಯೇ ಅಭಿಪ್ರಾಯಪಟ್ಟರು! ಅಂತೆಯೇ ಸೇವಕರು ಆ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಾಗ, ಆ ಮಗುವು ತಾನು ಪುನಃ ರಾವಣನ ವಧೆಗೆ, ಮೂರನೆಯ ಬಾರಿಗೆ ಕುಂಭಕರ್ಣನ ಮಗ ಮೂಲಕಾಸುರನ ವಧೆಗೆ, ಹಾಗೂ ನಾಲ್ಕನೆಯ ಬಾರಿಗೆ ಸಹಸ್ರ ತಲೆಗಳ ರಾವಣನ ವಧೆಗೆ ಬರುವೆನೆಂದು ಹೇಳಿತು! ಇದನ್ನು ಕೇಳಿ ರಾವಣನು ಕೂಡಲೇ ಆ ಮಗುವನ್ನು ಕೊಲ್ಲಲು ಹೊರಟನು! ಆದರೆ ಮಂದೋದರಿಯು ಅವನನ್ನು ತಡೆದು ಸೇವಕರನ್ನು ಕಳಿಸಿದಳು.ಅವರು ಆ ಮಗುವನ್ನು ಮಿಥಿಲೆಯ ಕಾಡಿನ ಭೂಮಿಯಲ್ಲಿ ಹೂತುಬಿಟ್ಟರು! ಅನಂತರ, ಆ ಮಗುವು ಯಜ್ಞಕ್ಕಾಗಿ ನೆಲ ಉಳುತ್ತಿದ್ದ ಜನಕನಿಗೆ ಸಿಕ್ಕಿತು.ಅವನು ಅದನ್ನು ಸೀತೆಯೆಂಬ ಹೆಸರಿನಿಂದ ಸಾಕಿ ಬೆಳೆಸಿದನು.ಹೀಗೆ ಸೀತೆಯು ಒಂದು ರೀತಿಯಲ್ಲಿ ರಾವಣನ ಮಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ