ಮಂಗಳವಾರ, ಜನವರಿ 16, 2024

ಪುರಾಣ ಕುತೂಹಲ -ರಾವಣನು ಏಕೆ ಸೀತೆಯನ್ನು ಬಲಾತ್ಕರಿಸಲಿಲ್ಲ?

ರಾವಣನು ಏಕೆ ಸೀತೆಯನ್ನು ಬಲಾತ್ಕರಿಸಲಿಲ್ಲ?

ಇದೊಂದು ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆ.ರಾವಣನು ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟರೂ ಅವಳನ್ನು ಬಲಾತ್ಕರಿಸಲಿಲ್ಲ ಏಕೆ ಎಂದು.ಕೆಲವರು ಅವನು ಹೀಗೆ ಮಾಡಿದ್ದರಿಂದ ವಾಸ್ತವವಾಗಿ ಒಳ್ಳೆಯವನೆಂದೂ ರಾಮ, ಲಕ್ಷ್ಮಣರು ತನ್ನ ತಂಗಿ ಶೂರ್ಪಣಖಿಯನ್ನು ಅವಮಾನಿಸಿದ್ದರಿಂದ ಅವರನ್ನು ಶಿಕ್ಷಿಸಲು, ತನ್ನ ಶೌರ್ಯ ತೋರಿಸಲೆಂದಷ್ಟೇ ಸೀತೆಯನ್ನು ಅಪಹರಿಸಿದನೆಂದು ದುರ್ವ್ಯಾಖ್ಯಾನ ಮಾಡುತ್ತಾರೆ.ಇನ್ನು ಕೆಲವರು, ರಾವಣನು ಮಹಾಶಿವಭಕ್ತ, ವೇದಪಾರಂಗತ, ಬಹಳ ಶ್ರೇಷ್ಠ, ಆದರೆ ಸೀತೆಯನ್ನು ಅಪಹರಿಸಿದ ಒಂದೇ ಒಂದು ತಪ್ಪು ಮಾಡಿ ಸತ್ತ ಎಂದೂ ವಾದ ಮಾಡುತ್ತಾರೆ.ದುರದೃಷ್ಟವಶಾತ್, ಇವರಾರೂ ಮೂಲ ವಾಲ್ಮೀಕಿ ರಾಮಾಯಣವನ್ನು ಓದದೆಯೇ ಹೀಗೆ ಮಾತನಾಡುತ್ತಾರೆ! ರಾವಙನು ಸತ್ತಾಗ, ಸ್ವಯಂ ಅವನ ಪತ್ನಿ ಮಂದೋದರಿಯೇ ಅವನ ಅತ್ಯಾಚಾರಗಳನ್ನೆಲ್ಲಾ ಹೇಳುತ್ತಾ ಅವನು ಹಾಗೆಲ್ಲಾ ಮಾಡಿದ್ದೇ ಅವನ ಅವನತಿಗೆ ಕಾರಣವಾಯಿತೆಂದು ವಿಲಪಿಸುತ್ತಾಳೆ.ರಾವಣನ ಈ ಅತ್ಯಾಚಾರಗಳ ವಿಸ್ತ್ರತ ಕಥನ ರಾಮಾಯಣದ ಉತ್ತರಕಾಂಡದಲ್ಲಿ ದೊರೆಯುತ್ತದೆ.ಅದನ್ನು ಅಗಸ್ತ್ಯರು ರಾಮನಿಗೆ ಅವನು ಅಯೋಧ್ಯೆಗೆ ಹಿಂತಿರುಗಿದಾಗ ಹೇಳುತ್ತಾರೆ.ಆ ಕಥನ ಬಹಳ ರೋಚಕವಾಗಿಯೂ ಇದೆ.ರಾಮನ ಕಥೆ ಹೇಗೋ ಎಲ್ಲರಿಗೂ ತಿಳಿದಿರುತ್ತದೆ.ಆದರೆ ರಾವಣನ ಈ ಪೂರ್ವ ಚರಿತ್ರೆ ಬಹುತೇಕ ಮಂದಿಗೆ ತಿಳಿದಿಲ್ಲ.ಇದನ್ನು ಓದಿದಾಗ ಅವನು ಎಂಥ ದುಷ್ಟನೆಂದು ತಿಳಿಯುತ್ತದೆ.ರಾವಣನು ತನ್ನ ತಂಗಿ ಶೂರ್ಪಣಖಿಯ ಮೇಲಿನ ಪ್ರೀತಿಗಾಗಿ ರಾವಣನು ಸೀತಾಪಹರಣ ಮಾಡಿದನೆಂದು ವಾದಿಸುವವರಿಗೆ, ಅವನು ತನ್ನ ತಂಗಿಯ ಗಂಡನನ್ನೇ ಕೊಂದು ಅವಳನ್ನು ವಿಧವೆ ಮಾಡಿದನೆಂದು ಗೊತ್ತಿಲ್ಲ! ಅದು ಇವನ ಭಗಿನೀವಾತ್ಸಲ್ಯ! ರಾವಣನು ತನ್ನ ದಿಗ್ವಿಜಯ ಕಾಲದಲ್ಲಿ ವರುಣನ ನಗರಿಯನ್ನು ಆಕ್ರಮಿಸಲು ಹೋದಾಗ, ಕಾಲಕೇಯರೆಂಬ ರಾಕ್ಷಸರೊಂದಿಗೆ ಯುದ್ಧ ಮಾಡುತ್ತಾ ಅವರಲ್ಲೊಬ್ಬನಾಗಿದ್ದ ವಿದ್ಯುಜ್ಜಿಹ್ವನೆಂಬುವನನ್ನು ನಿರ್ದಯವಾಗಿ ಕತ್ತಿಯಿಂದ ಕತ್ತರಿಸಿ ಕೊಂದನು! ಅವನೇ ಶೂರ್ಪನಖಿಯ ಗಂಡನಾಗಿದ್ದನು! ಅನಂತರ ಈ ವಿಷಯವಾಗಿ ಶೂರ್ಪನಖಿಯು ರಾವಣನ ಬಳಿ ಗೋಳಾಡಿದಾಗ, ಯುದ್ಧದಲ್ಲಿ ಇದೆಲ್ಲಾ ಸಹಜವೆಂದು ಅವಳನ್ನು ಸಮಾಧಾನಪಡಿಸಿ ದಂಡಕಾರಣ್ಯವೆಂಬ ಅರಣ್ಯದಲ್ಲಿ ಖರ,ದೂಷಣರೆಂಬ ರಾಕ್ಷಸರೊಂದಿಗೆ ಸ್ವಚ್ಛಂದವಾಗಿ ಓಡಾಡಿಕೊಂಡಿರಲು ಅನುಮತಿಯಿತ್ತನು.ಅವರು ಅಲ್ಲಿಗೆ ಹೋಗಿ ರಾಕ್ಷಸ ರಾಜ್ಯ ಕಟ್ಟಿದರು.ಅಲ್ಲಿದ್ದಾಗಲೇ ಶೂರ್ಪನಖಿಯು ರಾಮನನ್ನು ನೋಡಿ ಮೋಹಿಸಿ, ಅವನಿಂದ ನಿರಾಕೃತಳಾಗಿ ಲಕ್ಷಮಣನ ಬಳಿ ಹೋಗಿ ಅವನಿಂದಲೂ ನಿರಾಕೃತಳಾಗಿ ಕೊನೆಗೆ ತನ್ನನ್ನು ನಿರಾಕರಿಸಲು ಸೀತೆಯೇ ಕಾರಣಳೆಂದು ಅವಳನ್ನು ಕೊಲ್ಲಲು ಹೊರಡಲು, ಲಕ್ಷ್ಮಣನು ಅವಳ ಕಿವಿ,ಮೂಗುಗಳನ್ನು ಕತ್ತರಿಸಿ ಓಡಿಸಿದನು! ಆಗ ಅವಳು ರಾವಣನ ಬಳಿಗೆ ಹೋಗಿ ತನಗಾದ ಅವಸ್ಥೆಯನ್ನು ಹೇಳಿ ಸೀತೆಯ ಸೌಂದರ್ಯವನ್ನು ವರ್ಣಿಸಲು, ಅವನು ರಾಮ,ಲಕ್ಷ್ಮಣರಿಲ್ಲದ ವೇಳೆಯಲ್ಲಿ ಸೀತೆಯನ್ನು ಅಪಹರಿಸಿದನು.ಇದಕ್ಕೆ ಮೊದಲು ಅವನು ಸಾವಿರಾರು ದೇವ,ದಾನವ,ಮಾನವ,ಯಕ್ಷ,ನಾಗಕನ್ಯೆಯರನ್ನು ಅಪಹರಿಸಿ ಬಲಾತ್ಕರಿಸಿದ್ದನು. ಅವನು ಯಾವದೇ ಸುಂದರವಾದ ಸ್ತ್ರೀಯನ್ನು ನೋಡಿದರೂ ಅವಳ ಬಂಧುಬಾಂಧವರನ್ನು ಕೊಂದು ಆ ಸ್ತ್ರೀಯನ್ನು ಅಪಹರಿಸುತ್ತಿದ್ದನು! ಆ ಸ್ತ್ರೀಯರೆಲ್ಲಾ ತಮ್ಮ ಬಂಧುಬಾಂಧವರಿಗಾಗಿ ಅಳುತ್ತಾ ಪುಷ್ಪಕ ವಿಮಾನವು ಅವರ ಕಣ್ಣೀರಿನಿಂದ ತುಂಬಿಹೋಯಿತು ಎಂದು ಬರೆಯುತ್ತಾರೆ ವಾಲ್ಮೀಕಿ ಮಹರ್ಷಿಗಳು! ಹೀಗೆ ಅಪಹೃತರಾದ ಸ್ತ್ರೀಯರು ರಾವಣನಿಗೆ ಪರಸ್ತ್ರೀಯ ಕಾರಣದಿಂದಲೇ ಅವನು ಸಾಯಲೆಂದು ಶಾಪವಿತ್ತರು! ಆಗ ಅವನಿಗೆ ಶಕ್ತಿ ಸ್ವಲ್ಪ ಕುಂದಿತು!
     ರಾವಣನು ಸೀತೆಯನ್ನು ಮಾತ್ರ ಬಲಾತ್ಕರಿಸಲಿಲ್ಲ.ಇದಕ್ಕೆ ಕಾರಣ ಒಂದು ಶಾಪ ‌ಒಮ್ಮೆ ರಾವಣನು ಸ್ವರ್ಗವನ್ನು ಗೆದ್ದು ಬರುತ್ತಿದ್ದಾಗ ರಂಭೆ ಎಂಬ ಅಪ್ಸರೆಯನ್ನು ಕಂಡನು.ಚೆನ್ನಾಗಿ ಅಲಂಕರಿಸಿಕೊಂಡು ಹೋಗುತ್ತಿದ್ದ ಅವಳನ್ನು ಯಾರು, ಎಲ್ಲಿಗೆ ಹೋಗುತ್ತಿರುವಳೆಂದು ವಿಚಾರಿಸಿದಾಗ ಅವಳು ತಾನು ರಂಭೆಯೆಂದೂ ಕುಬೇರನ ಮಗನಾದ ನಳಕೂಬರನ ಬಳಿಗೆ ಹೋಗುತ್ತಿರುವುದಾಗಿಯೂ ಹೇಳಿದಳು.ತಾನು ಅವನನ್ನು ಮದುವೆಯಾಗಲು ಹೊರಟಿರುವುದರಿಂದ ಹಾಗೂ ರಾವಣನು ಕುಬೇರನ ಅಣ್ಣನಾಗಬೇಕಾದುದರಿಂದ ಅವನು ತನಗೆ ಮಾವನಾಗಬೇಕೆಂದಳು.ಆದರೆ ರಾವಣನು ಅವಳು ಎಲ್ಲರನ್ನೂ ಸೇವಿಸಲು ಇರುವ ಅಪ್ಸರೆಯಾದ್ದರಿಂದ ತನ್ನನ್ನು ಸೇವಿಸಬೇಕೆಂದು ಆಗ್ರಹಿಸಿದನು.ಆದರೆ ರಂಭೆಯು ಇದಕ್ಕೆ ಒಪ್ಪದಿರಲು, ರಾವಣನು ಅವಳನ್ನು ಬಲಾತ್ಕರಿಸಿದನು! ಅನಂತರ ರಂಭೆ ಆಳುತ್ತಾ ಹೋಗಿ ನಳಕೂಬರನ ಬಳಿ ಈ ವಿಷಯವನ್ನು ಹೇಳಿದಾಗ ಕುಪಿತನಾದ ನಳಕೂಬರನು ರಾವಣನಿಗೆ ಇನ್ನು ಮುಂದೆ ಅವನು ತನ್ನನ್ನು ಇಷ್ಟಪಡದ ಸ್ತ್ರೀಯನ್ನು ಬಲಾತ್ಕರಿಸಲು ಹೋದರೆ ಕೂಡಲೇ ಸಾಯಲೆಂದು ಶಾಪವಿತ್ತನು! ಇದನ್ನು ಕೇಳಿದ ರಾವಣನು ಅಂದಿನಿಂದ ಯಾವ ಸ್ತ್ರೀಯನ್ನೂ ಬಲಾತ್ಕರಿಸಲಿಲ್ಲ.ಸೀತೆಯನ್ನು ಅಪಹರಿಸಿದ ಬಳಿಕ ದಿನವೂ ಅವಳನ್ನು ತನ್ನನ್ನು ಮದುವೆಯಾಗಲು ಒತ್ತಾಯಪಡಿಸುತ್ತಿದ್ದನು.ಆದರೆ ಅವಳು ಅವನನ್ನು ಕಣ್ಣೆತ್ತಿ ಕೂಡ ನೋಡದೇ ಒಂದು ಹುಲ್ಲು ಕಡ್ಡಿಯನ್ನು ರಾವಣನೆಂಬಂತೆ ನೋಡಿ ಮಾತನಾಡುತ್ತಿದ್ದಳು.ಒಮ್ಮೆ ಹನುಮಂತನು ಅಶೋಕವನದಲ್ಲಿ ಸೀತೆಯನ್ನು ಕಂಡಾಗ, ಸೀತೆಯು ತನ್ನನ್ನು ಮದುವೆಯಾಗಲು ಒಪ್ಪದಿದ್ದಾಗ ವಿಪರೀತ ಕ್ರುದ್ಧನಾದ ರಾವಣನು ಅವಳನ್ನು ಕೊಲ್ಲುವೆನೆಂದು ಹೆದರಿಸಲು ಖಡ್ಗ ಸೆಳೆದು ಹೊರಟನು.ಆಗ ಅವನ ಪತ್ನಿ ಮಂದೋದರಿಯು ಅವನನ್ನು ತಡೆದಳು.
      ಹೀಗೆ ರಾವಣನು ಸೀತೆಯನ್ನು ಅಪಹರಿಸಿದರೂ ಅವಳನ್ನು ಬಲಾತ್ಕರಿಸಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ