ಸೋಮವಾರ, ಜನವರಿ 15, 2024

ಪುಸ್ತಕ ಪರಿಚಯ: ಜನಪ್ರಿಯ ಜಾತಕ ಕಥೆಗಳು

ಜನಪ್ರಿಯ ಜಾತಕ ಕಥೆಗಳು ಎಂಬ ನನ್ನ ಹೊಸ ಪುಸ್ತಕ ಸಪ್ನ ಬುಕ್ ಹೌಸ್ ನಿಂದ ಇತ್ತೀಚೆಗೆ ಪ್ರಕಟವಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ! ಇದರಲ್ಲಿ ನಾನು ಎಪ್ಪತ್ತೆರಡು ಜಾತಕ ಕಥೆಗಳನ್ನು ಸಂಗ್ರಹಿಸಿ ಸರಳವಾಗಿ ನಿರೂಪಿಸಿದ್ದೇನೆ.ಜಾತಕ ಕಥೆಗಳು ಭಾರತೀಯ ಕಥಾಸಾಹಿತ್ಯಕ್ಕೆ ಬೌದ್ಧ ಧರ್ಮದ ಅತ್ಯಂತ ಸೊಗಸಾದ ಕೊಡುಗೆ.ಬೌದ್ಧ ಧರ್ಮವು ಭಾರತೀಯ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ.ಇದರಲ್ಲಿ ಕಥಿಸಾಹಿತ್ಯವೂ ಇದೆ, ಆಧ್ಯಾತ್ಮಿಕ ಸಾಹಿತ್ಯವೂ ಇದೆ.ಜಾತಕ ಕಥೆಗಳೆಂಬ ಗ್ರಂಥ ಒಟ್ಟು 547 ಕಥೆಗಳ ಒಂದು ಬೃಹತ್ ಸಂಕಲನ.ಇವು ತ್ರಿಪಿಟಕಗಳೆಂಬ ಬೌದ್ಧ ಗ್ರಂಥಗಳ ಒಂದು ಭಾಗ.ಪಿಟಕ ಎಂದರೆ ಬುಟ್ಟಿ.ಹಾಗಾಗಿ ತ್ರಿಪಿಟಕಗಳೆಂದರೆ ಮೂರು ಗ್ರಂಥ ಬುಟ್ಟಿಗಳು.ಇವು ಪಾಳೀಭಾಷೆಯಲ್ಲಿವೆ.ಪಾಳಿಯೆಂದರೆ ಅರ್ಧಮಾಗಧೀ ಪ್ರಾಕೃತ ಭಾಷೆಯೇ ಆಗಿದ್ದು ಅದು ಸಂಸ್ಕೃತದ ಆಡುಭಾಷೆಯಾಗಿದೆ.ಈ ತ್ರಿಪಿಟಕಗಳೆಂದರೆ, ಸುತ್ತ ಪಿಟಕ, ವಿನಯ ಪಿಟಕ, ಮತ್ತು ಅಭಿಧಮ್ಮ ಪಿಟಕ.ಸುತ್ತ ಪಿಟಕದಲ್ಲಿ, ದೀಘ ನಿಕಾಯ, ಮಜ್ಝಿಮ ನಿಕಾಯ, ಅಂಗುತ್ತರ ನಿಕಾಯ, ಸಂಯುತ್ತ ನಿಕಾಯ, ಮತ್ತು ಖುದ್ದಕ ನಿಕಾಯ ಎಂಬ ಐದು ನಿಕಾಯ ಗ್ರಂಥಗಳಿವೆ.ಇವುಗಳಲ್ಲಿ ಖುದ್ದಕ ನಿಕಾಯದಲ್ಲಿ ಹದಿನೈದು ಗ್ರಂಥಗಳಿದ್ದು, ಅವುಗಳಲ್ಲಿ ಜಾತಕ ಒಂದಾಗಿದೆ.
        ಜನ್ಮದಿಂದ ಜಾತಕ ಪದ ಬಂದಿದೆ.ಈ ಜಾತಕ ಕಥೆಗಳು, ಬುದ್ಧನ ಪೂರ್ವಜನ್ಮಗಳ ಕಥೆಗಳಾಗಿವೆ.ಬುದ್ಧನು ಮೊದಲು ಬೋಧಿಸತ್ತ್ವ ಎಂಬ ಪ್ರಜ್ಞಾವಂತ ವ್ಯಕ್ತಿಯಾಗಿದ್ದು, ಅವನು ಹಲವಾರು ಜನ್ಯಗಳನ್ನೆತ್ತಿ ವಿವಿಧ ಅನುಭವಗಳನ್ನು ಪಡೆದುಕೊಂಡು ಅನಂತರ ಬುದ್ಧನಾಗಿ ಜನಿಸುತ್ತಾನೆ.ಇಲ್ಲಿ ಸುಮೇಧನೆಂಬ ಬ್ರಾಹ್ಮಣನು ಮೊದಲಿಗೆ ಇದ್ದ ದೀಪಂಕರ ಬುದ್ಧನೆಂಬ ಬುದ್ಧನ (ಒಟ್ಟು ಇಪ್ಪತ್ತೈದು ಬುದ್ಧರು ಆಗಿದ್ದಾರೆ ಎಂದು ಹೇಳಲಾಗಿದೆ) ಸೇವೆ ಮಾಡಿ ಅವನಿಂದ ಬೋಧಿಸತ್ವನಾಗುವನೆಂದು ಆಶೀರ್ವಾದ ಪಡೆದು ಬೋಧಿಸತ್ವನಾಗಿ ಹಲವಾರು ಜನ್ಯಗಳನ್ನೆತ್ತಿ ಅನಂತರ ಸಿದ್ಧಾರ್ಥ ಗೌತಮ ಬುದ್ಧನಾಗುತ್ತಾನೆ.ಈ ಹಲವಾರು ಜನ್ಮಗಳಲ್ಲಿ ಅವನು ಪ್ರಾಣಿ, ಪಕ್ಷಿ, ವೃಕ್ಷ ದೇವತೆ, ಬ್ರಾಹ್ಮಣ, ರಾಜ, ಶೂದ್ರ, ಕೊನೆಗೆ ಕಳ್ಳನಾಗಿಯೂ ಹುಟ್ಟುತ್ತಾನೆ.ಈ ಪೂರ್ವಜನ್ಮಗಳ ಕಥೆಗಳೇ ಜಾತಕ ಕಥೆಗಳು.ಈ ಕಥೆಗಳು ಬಹಳ ಸ್ವಾರಸ್ಯಕರವಾಗಿದ್ದು ಹಲವಾರು ನೀತಿಗಳನ್ನು ಹೇಳುತ್ತವೆ.ಇವು ಬಹುತೇಕ ಅಂದಿನ ದಿನಗಳ ಜಾನಪದ ಕಥೆಗಳೇ ಆಗಿದ್ದು ಬೌದ್ಧ ಧರ್ಮದ ಲೇಪನ ನೀಡಲಾಗಿದೆ.ಹಾಗಾಗಿ ಇವುಗಳಲ್ಲಿ ಅನೇಕ ಕಥೆಗಳು ಪಂಚತಂತ್ರದಲ್ಲಿ ಕೂಡ ಕಾಣಿಸಿಕೊಳ್ಳುತ್ತವೆ.ಮೂಲ ಗ್ರಂಥದಲ್ಲಿ ಇಂದಿನ ಕಥೆ ಮತ್ತು ಹಿಂದಿನ ಕಥೆ ಎಂಬ ರೀತಿಯಲ್ಲಿ ಈ ಕಥೆಗಳಿವೆ.ಅಂದರೆ, ಬುದ್ಧನ ಶಿಷ್ಯರು ಯಾವುದೋ ಒಂದು ಘಟನೆಯನ್ನು ಚರ್ಚಿಸುತ್ತಾರೆ.ಅದು ಇಂದಿನ ಕಥೆ.ಆಗ ಬುದ್ಧನು ಬಂದು ಅದೇನೆಂದು ವಿಚಾರಿಸಿ, ಇದೇ ರೀತಿ ಹಿಂದೆ ನಡೆದಿತ್ತು ಎಂದು ಹಿಂದಿನ ಜನ್ಮದ ಕಥೆ ಹೇಳುತ್ತಾನೆ.ಇಂದಿನ ಬುದ್ಧ ಮತ್ತು ಅವನ ಶಿಷ್ಯರು ಆ ಹಿಂದಿನ ಕಥೆಯಲ್ಲಿ ಏನೇನಾಗಿದ್ದರು ಎಂದು ಹೇಳುತ್ತಾನೆ.ಇದು ಹಿಂದಿನ ಕಥೆ.ಇದೇ ವಾಸ್ತವವಾಗಿ ಜಾತಕ ಕಥೆ. ನಾನು ಈ ಹಿಂದಿನ ಕಥೆಗಳನ್ನು ಮಾತ್ರ ನಿರೂಪಿಸಿದ್ದೇನೆ.
        ಜಾತಕದ ಕಥೆಗಳು ಪಾಲೀ ಭಾಷೆಯಲ್ಲಿದ್ದರೂ ಸಂಸ್ಕೃತದಲ್ಲೂ ಇವೆ.ಆರ್ಯಶೂರನ ಹಾಗೂ ಹರಿಭಟ್ಟನ ಜಾತಕಮಾಲಾ ಎಂಬ ಎರಡು ಸಂಸ್ಕೃತ ಜಾತಕ ಕಥಾಸಂಕಲನಗಳಿವೆ.ಜಾತಕ ಕಥೆಗಳಲ್ಲದೇ ಬೌದ್ಧ ಸಾಹಿತ್ಯದಲ್ಲಿ ಅವದಾನ ಕಥೆಗಳೆಂಬ ಕಥೆಗಳಿವೆ.ಇವು ಪಾಳಿ ಹಾಗೂ ಸಂಸ್ಕೃತ ಎರಡರಲ್ಲೂ ಇವೆ.ಪಾಳಿಯಲ್ಲಿ ಇದನ್ನು ಅಪದಾನ ಎನ್ನುತ್ತಾರೆ.ಇದು ಆಗಲೇ ಹೇಳಿದ ಖುದ್ದಕ ನಿಕಾಯದ ಒಂದು ಭಾಗ.ಸಂಸ್ಕೃತದಲ್ಲಿ ದಿವ್ಯಾವದಾನ, ಅಶೋಕಾವದಾನ, ಅವದಾನಶತಕ, ಕಾಶ್ಮೀರದ ಕವಿ ಕ್ಷೇಮೇಂದ್ರನ ಅವದಾನ ಕಲ್ಪಲತಾ ಮೊದಲಾದ ಅನೇಕ ದೊಡ್ಡ ಅವದಾನ ಕಥಾಸಂಕಲನಗಳಿವೆ.ಅವದಾನವೆಂದರೆ ಏನಾದರೂ ಒಂದು ಸಾಹಸದ ಅಥವಾ ಪ್ರಮುಖವಾದ ಕಾರ್ಯ.ಇಂಥ ಕಾರ್ಯವನ್ನು ಮಾಡಿ ಯಾರಾದರೂ ಬುದ್ಧನಾಗುವುದು ಅಥವಾ ಬುದ್ಧನ ಶಿಷ್ಯನಾಗುವುದು  ಅವದಾನ ಕಥೆಗಳ ವಸ್ತು.ಹಾಗಾಗಿ ಇವು ಬುದ್ಧರ ಮತ್ತು ಅವರ ಶಿಷ್ಯರ ಪೂರ್ವಜನ್ಮಗಳ ಕಥೆಗಳು.
         ಖುದ್ದಕ ನಿಕಾಯದಲ್ಲಿ ವಿಮಾನ ವತ್ತು ಮತ್ತು ಪೇತವತ್ತು ಎಂಬ ಗ್ರಂಥಗಳೂ ಇವೆ.ವಿಮಾನವತ್ತು ಪುಣ್ಯ ಕಾರ್ಯಗಳನ್ನು ಮಾಡಿ ವಿಮಾನ ಅಥವಾ ಸ್ವರ್ಗ ಪಡೆದವರ ಕಥೆಗಳ ಗ್ರಂಥವಾದರೆ, ಪೇತವತ್ತು, ಪಾಪ ಕಾರ್ಯಗಳನ್ನು ಮಾಡಿ ಪ್ರೇತಗಳಾಗಿ ನರಕಕ್ಕೆ ಹೋಗುವ ಕಥೆಗಳ ಗ್ರಂಥ.ಹೀಗೆ ಬೌದ್ಧರಲ್ಲೂ ಪುಣ್ಯ, ಪಾಪ, ಸ್ವರ್ಗ,ನರಕಗಳ ಕಲ್ಪನೆಯಿದೆ.
         ಖುದ್ದಕ ನಿಕಾಯದಲ್ಲಿ ಬರುವ ಥೇರಾಗಾಥಾ (ಪುರುಷ ಬೌದ್ಧ ಶಿಷ್ಯರ ಉಪದೇಶಗಳು) ಮತ್ತು ಥೇರೀಗಾಥಾ( ಸ್ತ್ರೀ ಬೌದ್ಧ ಶಿಷ್ಯೆಯರ ಉಪದೇಶಗಳು) ಗ್ರಂಥಗಳಲ್ಲೂ ಕಥೆಗಳಿವೆ.
        ಖುದ್ದಕ ನಿಕಾಯದ ಇನ್ನೊಂದು ಮುಖ್ಯ ಗ್ರಂಥ ಧಮ್ಮಪದ.ಇದು ಬುದ್ಧನ ನಾನ್ನೂರ ಉಪದೇಶಗಳ ಸಂಗ್ರಹ.ಈ ನಾನ್ನೂರು ಉಪದೇಶಗಳಿಗೂ ವ್ಯಾಖ್ಯಾನವಾಗಿ ನಾನ್ನೂರು ಸ್ವಾರಸ್ಯಕರ ಕಥೆಗಳಿವೆ.
       ಇವಲ್ಲದೇ ತ್ರಿಪಿಟಕಗಳಲ್ಲಿ ಬುದ್ಧನ ಉಪದೇಶಗಳಲ್ಲಿ ಹಲವಾರು ಕಥೆಗಳು ಬರುತ್ತವೆ.ಕಥಾಸರಿತ್ಸಾಗರದಲ್ಲೂ ಬೌದ್ಧ ಕಥೆಗಳಿವೆ.ಅಶ್ವಘೋಶನ ಬುದ್ಧಚರಿತ ಮತ್ತು ಸೌಂದರನಂದ ಎಂಬ ಸಂಸ್ಕೃತ ಕಾವ್ಯಗಳೂ, ಮಹಾವಂಶ,ಚುಲ್ಲವಂಶ ಎಂಬ ಪಾಲೀ ಭಾಷೆಯ ಶ್ರೀಲಂಕಾದ ಬೌದ್ಧ ಗ್ರಂಥಗಳೂ ಇವೆ.
         ಹೀಗೆ ಬೌದ್ಧ ಕಥಾಲೋಕ ಒಂದು ದೊಡ್ಡ ಪ್ರಪಂಚ. ಅದರಲ್ಲಿ ಜಾತಕ ಕಥೆಗಳ ನನ್ನ ಪುಸ್ತಕದಲ್ಲಿ ಎಪ್ಪತ್ತೆರಡು ಪ್ರಮುಖ ಹಾಗೂ ಜನಪ್ರಿಯ ಜಾತಕ ಕಥೆಗಳನ್ನು ಸಂಗ್ರಹಿಸಿ ಸರಳವಾಗಿ ನಿರೂಪಿಸಿದ್ದೇನೆ.ಈ ಕೃತಿ ಓದುಗರಾದ ನಿಮಗೆ ಇಷ್ಟವಾದರೆ ನನ್ನ ಶ್ರಮ ಸಾರ್ಥಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ