ಶನಿವಾರ, ಜನವರಿ 6, 2024

ಪುರಾಣ ಕುತೂಹಲ


ಮಂಥರೆಯು ಕೈಕೇಯಿಗೆ ರಾಮನನ್ನು ಕಾಡಿಗೆ ಕಳಿಸುವಂತೆ ಏಕೆ ಆಗ್ರಹಿಸಿದಳು?

ಸ್ಥೂಲವಾಗಿ ರಾಮಾಯಣದ ಕಥೆ ಗೊತ್ತಿರುವವರೆಲ್ಲರಿಗೂ ರಾಮನ ಪಟ್ಟಾಭಿಷೇಕದ ತಯಾರಿ ನಡೆಯುತ್ತಿರುವ ಹೊತ್ತಿಗೆ ದಶರಥನ ಮೂರನೆಯ ರಾಣಿ ಕೈಕೇಯಿಗೆ ಅವಳ ದಾಸಿ ಮಂಥರೆಯು ದುರ್ಬೋಧೆ ಮಾಡಿ ರಾಮನನ್ನು ಕಾಡಿಗೆ ಕಳಿಸಿ ಅವಳ ಮಗ ಭರತನಿಗೆ ಪಟ್ಟಾಭಿಷೇಕ ಮಾಡುವ ವರಗಳನ್ನು ಕೇಳಬೇಕೆಂದು ಆಗ್ರಹಿಸುವ ವಿಷಯ ತಿಳಿದಿರುತ್ತದೆ.ಇದು ರಾಮಾಯಣದಲ್ಲೊಂದು ಮುಖ್ಯ ತಿರುವು.ಈ ಘಟನೆ ನಡೆಯದಿದ್ದರೆ ಮುಂದಿನ ಕಥೆ ಸಹಜವಾಗಿರುತ್ತಿತ್ತು ಅಷ್ಟೇ! ರಾಮ ಕಾಡಿಗೆ ಹೋಗುವುದು, ಸೀತಾಪಹರಣವಾಗುವುದು, ರಾವಣನ ವಧೆಯಾಗುವುದು, ಇದಾವುದೂ ಆಗುತ್ತಲೇ ಇರಲಿಲ್ಲವೇನೋ! ಹಾಗಾಗಿ ರಾಮಾಯಣದ ಕಥೆಗೆ ಇದೊಂದು ಮುಖ್ಯ ತಿರುವು. ಹಾಗೆ ನೋಡಿದರೆ, ಕೈಕೇಯಿಗೆ ರಾಮನಲ್ಲಿ ವಿಶೇಷವಾದ ಪ್ರೀತಿಯಿದ್ದು, ಮಂಥರೆಯು ಅವಳಿಗೆ ರಾಮಪಟ್ಟಾಭಿಷೇಕದ ವಿಷಯ ಹೇಳಿದಾಗ ಸಂತೋಷಗೊಂಡು ಅವಳಿಗೆ ಒಂದು ಹಾರವನ್ನು ಉಡುಗೊರೆಯಾಗಿ ನೀಡುತ್ತಾಳೆ.ಆದರೆ ಮಂಥರೆ ಅದನ್ನು ಬಿಸುಟು, ರಾಮನಿಗೆ ಪಟ್ಟಭಿಷೇಕವಾದರೆ, ದಶರಥನ ದೃಷ್ಟಿಯಲ್ಲಿ ಅವನ ತಾಯಿ ಕೌಸಲ್ಯೆ ಹೆಚ್ಚಿನವಳಾಗಿ ಕೈಕೇಯಿ ಕನಿಷ್ಠಳಾಗಿ, ಕ್ರಮವಾಗಿ ಕೈಕೇಯಿ ಮತ್ತು ಅವಳ ಮಗ ಭರತ ಕೌಸಲ್ಯೆ ಮತ್ತು ರಾಮನಿಗೆ ದಾಸರಂತಾಗಿಬಿಡುತ್ತಾರೆಂದು ಹೇಳಿ ಹೆದರಿಸಿ, ನಿಧಾನವಾಗಿ ರಾಮಪಟ್ಟಾಭಿಷೇಕದ ವಿಷಯದಲ್ಲಿ ದುರ್ಭಾವನೆಯುಂಟುಮಾಡುತ್ತಾಳೆ! ಮೊದಮೊದಲು ಕೈಕೇಯಿ ಒಪ್ಪದಿದ್ದರೂ ಕೊನೆಗೆ, ಸವತಿಯ ವಿಷಯದಲ್ಲಿ ದಾಸಿಯಂತಾಗಿ ತನ್ನ ಪ್ರಾಧಾನ್ಯತೆ ಕುಸಿಯುತ್ತದೆ ಎನಿಸಿದಾಗ ಮಂಥರೆಯ ಮಾತಿಗೆ ಸೋತು ದಶರಥನ ಬಳಿ ತನ್ನ ಹಳೆಯ ಎರಡು ವರಗಳನ್ನು ಕೇಳಿ, ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸ ಮತ್ತು ಭರತನಿಗೆ ಪಟ್ಟಾಭಿಷೇಕವನ್ನು ನೆರವೇರಸುತ್ತಾಳೆ.
     ಮಂಥರೆ ಹೀಗೇಕೆ ಮಾಡಿದಳು? ವಾಲ್ಮೀಕಿ ರಾಮಾಯಣದಲ್ಲಿ ಇದಕ್ಕೆ ನೇರವಾಗಿ ಏನೂ ಕಾರಣವಿಲ್ಲ.ಕೆಲವು ವ್ಯಕ್ತಿಗಳ ಸ್ವಭಾವವೇ ಹಾಗಿರುತ್ತದೆ.ಸೊಗಸಾದ ಸಮಾರಂಭ ಅಥವಾ ಯಾರದಾದರೂ ಅಭ್ಯುದಯ ಆಗುತ್ತಿರುವಾಗ ಅದನ್ನು ಸಹಿಸದೇ ಏನಾದರೂ ಅಪಸ್ವರ ಹಾಡುತ್ತಾರೆ ಇಂಥವರು! ಇಂಥ ಅಸಮಾಧಾನದ ವ್ಯಕ್ತಿಗಳನ್ನು ಇಂದೂ ಕಾಣಬಹುದು! ವಾಲ್ಮೀಕಿಯು ಮಾನವಸ್ವಭಾವಗಳನ್ನು ಸಹಜವಾಗಿ ಚಿತ್ರಿಸಿದ್ದಾನೆ.ಆದರೆ ಕೆಲವರಿಗೆ ಈ ಉತ್ತರ ಸಾಕಾಗುವುದಿಲ್ಲ.ಆಗ ಪೌರಾಣಿಕ ಸ್ವಾರಸ್ಯಗಳನ್ನು ನೋಡಿದರೆ ಸಮಾಧಾನವಾಗುತ್ತದೆ. ಈ ವಿಷಯದಲ್ಲಿ ಮಹಾಭಾರತದಲ್ಲಿ ಒಂದು ಸ್ವಾರಸ್ಯಕರ ಕಥೆಯಿದೆ.ಮಹಾಭಾರತದ ವನಪರ್ವದಲ್ಲಿ ರಾಮೋಪಾಖ್ಯಾನ ಬರುತ್ತದೆ. ಮಾರ್ಕಂಡೇಯ ಮಹರ್ಷಿಗಳು ಪಾಂಡವರಿಗೆ ಶ್ರೀರಾಮನ ಕಥೆ ಹೇಳುತ್ತಾರೆ.ಅದರಂತೆ, ದೇವತೆಗಳು ವಿಷ್ಣುವಿನ ಬಳಿ ಹೋಗಿ ರಾವಣನ ಉಪಟಳದ ಬಗ್ಗೆ ಹೇಳಿ, ಅದರಿಂದ ತಮ್ಮನ್ನು ಕಾಪಾಡುವಂತೆ ಬೇಡಿದಾಗ, ವಿಷ್ಣುವು ರಾಮಾವತಾರ ಮಾಡಿ ರಾವಣನನ್ನು ವಧಿಸುತ್ತೇನೆಂದು ಹೇಳಿ ಅಭಯ ನೀಡುತ್ತಾನೆ.ಆಗ ಬ್ರಹ್ಮನು ದೇವತೆಗಳಿಗೆ ತಮ್ಮ ತಮ್ಮ ಅಂಶಗಳಿಂದ ಕಪಿ, ಕರಡಿಗಳಲ್ಲಿ ಹುಟ್ಟಿ, ರಾಮನಿಗೆ ಸಹಾಯಕರಾಗಬೇಕೆಂದು ಆದೇಶಿಸುತ್ತಾನೆ.ಆಗಲೇ ಅವನು ದುಂದುಭಿ ಎಂಬ ಗಾಂಧರ್ವ ಕನ್ಯೆಯನ್ನು ಕರೆದು ಅವಳಿಗೆ ಗೂನು ಬೆನ್ನಿನ ದಾಸಿಯಂತೆ ಹುಟ್ಟಿ ರಾಮನ ಪಟ್ಟಾಭಿಷೇಕವನ್ನು ತಡೆಯಬೇಕೆಂದು ಆದೇಶಿಸುತ್ತಾನೆ.ಅದರಂತೆ ಅವಳು ಮಂಥರೆಯಾಗಿ ಹುಟ್ಟಿ ಕೈಕೇಯಿಗೆ ದುರ್ಬೋಧೆ ಮಾಡಿ ರಾಮನ ಪಟ್ಟಾಭಿಷೇಕವನ್ನು ತಪ್ಪಿಸಿ ಅವನು ಕಾಡಿಗೆ ಹೋಗುವಂತೆ ಮಾಡುತ್ತಾಳೆ! ಅವಳು ಹೀಗೆ ಮಾಡದಿದ್ದರೆ ರಾಮನು ಕಾಡಿಗೆ ಹೋಗುತ್ತಿರಲಿಲ್ಲ ಹಾಗೂ ರಾವಣನನ್ನು ಕೊಲ್ಲುತ್ತಿರಲಿಲ್ಲ, ಮತ್ತು ದೇವತಾಕಾರ್ಯ ಆಗುತ್ತಿರಲಿಲ್ಲ! ಹಾಗಾಗಿ ಮಂಥರೆಯ ಘಟನೆ ರಾಮಾಯಣದ ಕಥೆಯಲ್ಲಿ ಒಂದು ಮುಖ್ಯ ತಿರುವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ