ಸಂಸ್ಕೃತದಲ್ಲಿ ಕೂಟ ಸಮಸ್ಯೆಗಳು
ಹಿಂದಿನ ಕೆಲವು ಸಂಚಿಕೆಗಳಲ್ಲಿ ಸಂಸ್ಕೃತದ ಚಿತ್ರಸೂಕ್ತಿಗಳ, ಅಂದರೆ, ಪ್ರಹೇಲಿಕೆಗಳು, ಅಂತರಾಲಾಪಗಳು, ಮೊದಲಾದ ರೀತಿಯ ಒಗಟಿನಂಥ ಶ್ಲೋಕಗಳ ಬಗ್ಗೆ ಪರಿಚಯ ಮಾಡಿಕೊಂಡೆವು.ಈಗ ಕೂಟಗಳು ಎಂಬ ಬಗೆಯ ಸಮಸ್ಯೆಗಳ ಸ್ವಾರಸ್ಯವನ್ನು ನೋಡೋಣ.ಈ ಕೂಟ ಶ್ಲೋಕಗಳನ್ನು ನೇರವಾಗಿ ಓದಿದಾಗ, ವಿಚಿತ್ರವಾದ, ಅಸಂಬದ್ಧ ಅರ್ಥ ಕಂಡು, ಅವುಗಳಲ್ಲಿನ ಪದಗಳನ್ನು ಬೇರೆ ರೀತಿಯಲ್ಲಿ ವಿಭಜಿಸಿದಾಗ, ಸರಿಯಾದ,ಸಮಂಜಸವಾದ ಅರ್ಥ ಕಾಣುತ್ತದೆ.ಹೀಗೆ ಕೂಟ ಶ್ಲೋಕಗಳು ಒಳಗೆ ಬೇರೊಂದು ಅರ್ಥವಿರುವ ಒಗಟಿನ ಶ್ಲೋಕಗಳು.ಮಹಾಭಾರತದಲ್ಲೂ ಇಂಥ ಅನೇಕ ಕೂಟ ಶ್ಲೋಕಗಳು ಇವೆ.ಈಗ ಇಂಥ ಕೆಲವು ಕೂಟ ಶ್ಲೋಕಗಳನ್ನು ನೋಡೋಣ.
೧.ಕೇಶವಂ ಪತಿತಂ ದೃಷ್ಟ್ವಾ ದ್ರೋಣೋ ಹರ್ಷಮುಪಾಗತ: /
ರುದಂತಿ ಕೌರವಾ: ಸರ್ವೇ ಹಾ ಕೇಶವ ಕಥಂಗತ: //
ಅನುವಾದ:' ಕೇಶವನು (ಕೃಷ್ಣನು) ಬಿದ್ದುದನ್ನು ನೋಡಿ ದ್ರೋಣನು ಹರ್ಷಗೊಂಡನು! ಕೌರವರೆಲ್ಲರೂ,'ಹಾ ಕೇಶವ! ಹೇಗೆ ಹೋದೆ?' ಎಂದು ಅಳುತ್ತಾರೆ!'
ವಿವರಣೆ: ಇಲ್ಲಿ ಕೇಶವ ಎಂಬುದು ಕೂಟ ಶಬ್ದ.ಇದನ್ನು ಕೇ-ಶವಂ ಎಂದು ವಿಭಜಿಸಿ ಓದಿಕೊಳ್ಳಬೇಕು.ಸಂಸ್ಕೃತದಲ್ಲಿ 'ಕಂ' ಎಂದರೆ ನೀರು ಎಂಬ ಅರ್ಥವಿದೆ.ಹಾಗಾಗಿ, ಕೇ ಎಂದರೆ, ನೀರಿನಲ್ಲಿ ಎಂದು ಅರ್ಥ.ದ್ರೋಣ ಎಂದರೆ ಕಪ್ಪು ಕಾಗೆ ಎಂಬ ಅರ್ಥವಿದೆ.ಕೌರವ ಎಂದರೆ ನರಿ ಎಂಬ ಅರ್ಥವಿದೆ.ಹೀಗೆ ಶ್ಲೋಕದ ಅರ್ಥ, ನೀರಿನಲ್ಲಿ ಶವವು ಬಿದ್ದಾಗ, ಕಾಗೆಗೆ ಬಹಳ ಸಂತೋಷವಾಯಿತು.ನರಿಗಳು,'ಹಾ ! ನೀರಿನಲ್ಲಿ ಶವವು ಹೇಗೆ ಬಿತ್ತು?' ಎಂದು ಅಳುತ್ತವೆ, ಎಂದಾಗುತ್ತದೆ!
೨.ಪಾನೀಯಂ ಪಾತುಮಿಚ್ಛಾಮಿ ತ್ವತ್ತ: ಕಮಲಲೋಚನೇ /
ಯದಿ ದಾಸ್ಯಸಿ ನೇಚ್ಛಾಮಿ ನೋ ದಾಸ್ಯಸಿ ಪಿಬಾಮ್ಯಹಮ್ //
ಅನುವಾದ: 'ಎಲೈ ಕಮಲಲೋಚನೆ! ನಿನ್ನಿಂದ ನೀರು ಕುಡಿಯಲು ಇಚ್ಛಿಸುತ್ತೇನೆ! ನೀನು ಕೊಟ್ಟರೆ ಇಚ್ಛಿಸುವುದಿಲ್ಲ! ಕೊಡದಿದ್ದರೆ ಕುಡಿಯುತ್ತೇನೆ!'
ವಿವರಣೆ: ಇಲ್ಲಿ ದಾಸ್ಯಸಿ ಎಂಬುದು ಕೂಟ ಶಬ್ದ.ದಾಸ್ಯಸಿ ಎಂದರೆ ಕೊಟ್ಟರೆ ಎಂದು ಅರ್ಥ.ಆದರೆ ಇದನ್ನು ದಾಸೀ+ಅಸಿ ಎಂದು ವಿಭಜಿಸಿದರೆ, ದಾಸಿಯಾಗಿದ್ದರೆ ಎಂದು ಅರ್ಥವುಂಟಾಗಿ, ಶ್ಲೋಕದ ಅರ್ಥ,'ಎಲೈ ಕಮಲಲೋಚನೆ! ನಿನ್ನಿಂದ ನೀರು ಕುಡಿಯಲು ಇಚ್ಛಿಸುತ್ತೇನೆ! ನೀನು ದಾಸಿಯಾಗಿದ್ದರೆ ಇಚ್ಛಿಸುವುದಿಲ್ಲ! ದಾಸಿಯಾಗಿಲ್ಲದಿದ್ದರೆ ಕುಡಿಯುತ್ತೇನೆ!' ಎಂದಾಗುತ್ತದೆ.
೩.ವಿಷಂ ಭುಂಕ್ಷ್ವ ಮಹಾರಾಜ ಸ್ವಜನೈ: ಪರಿವಾರತ: /
ವಿನಾ ಕೇನ ವಿನಾ ನಾಭ್ಯಾಂ ಕೃಷ್ಣಾಜಿನಮಕಂಟಕಮ್ //
ಅನುವಾದ: 'ಮಹಾರಾಜ! ನಿನ್ನ ಸ್ವಜನರೊಂದಿಗೆ ಸೇರಿ ವಿಷವನ್ನು ಸೇವಿಸು! ತಲೆ (ಕಂ ಎಂದರೆ ತಲೆ) ಇಲ್ಲದೇ, ಯಾರಿಬ್ಬರೂ ಇಲ್ಲದೇ, ಕಂಟಕವಿಲ್ಲದೇ ಕೃಷ್ಣಾಜಿನವನ್ನು ಅನುಭವಿಸು!'
ವಿವರಣೆ: ಇಲ್ಲಿ ವಿಷಂ ಎಂದರೆ ವಿಗತ: ಷಕಾರ:, ಅಂದರೆ ಷಕಾರವಿಲ್ಲದೇ ಎಂದು ಅರ್ಥೈಸಿಕೊಳ್ಳಬೇಕು.ಹಾಗೆಯೇ ಕೇನ ವಿನಾ ಎಂದರೆ ಕಕಾರವಿಲ್ಲದೇ ಎಂದು ತೆಗೆದುಕೊಳ್ಳಬೇಕು.ನಾಭ್ಯಾಂ ವಿನಾ ಎಂದರೆ, ಎರಡು ನಕಾರಗಳಿಲ್ಲದೇ ಎಂದು ತೆಗೆದುಕೊಳ್ಳಬೇಕು.ಈಗ, 'ಕೃಷ್ಣಾಜಿನಮ್'' ಶಬ್ದದಲ್ಲಿ ಇದನ್ನು ಅಳವಡಿಸಿದರೆ, ಕಕಾರ, ಷಕಾರ, ಎರಡು ನಕಾರಗಳು (ಣ ಮತ್ತು ನ) ಇಲ್ಲವಾದರೆ, ಋ, ಆಜಿ, ಮತ್ತು ಅಮ್ ಎಂಬ ಪ್ರತ್ಯಗಳುಳಿದು ಅವನ್ನು ಸಂಧಿ ಮಾಡಿದರೆ, ರಾಜ್ಯಮ್ ಎಂದಾಗುತ್ತದೆ.ಆಗ ಶ್ಲೋಕದ ಅರ್ಥ, 'ಕಂಟಕವಿಲ್ಲದ ನಿನ್ನ ಸ್ವಜನರೊಂದಿಗೆ ರಾಜ್ಯವನ್ನು ಸೇವಿಸು ರಾಜಾ!' ಎಂದಾಗುತ್ತದೆ.
೪.ಅರ್ಜುನಸ್ಯ ಇಮೇ ಬಾಣಾ ನೇಮೇ ಬಾಣಾ: ಶಿಖಂಡಿನ: /
ಸೀದಂತಿ ಮಮ ಗಾತ್ರಾಣಿ ಮಾಘಮಾ ಸೇಗವಾ ಇವ //
ಅನುವಾದ: ಮಹಾಭಾರತದಲ್ಲಿ ಭೀಷ್ಮನು ಹೇಳುವ ಮಾತು:'ಇವು ಅರ್ಜುನನ ಬಾಣಗಳು! ಶಿಖಂಡಿಯ ಬಾಣಗಳಲ್ಲ! ಏಡಿಯ ಮರಿಗಳಂತೆ ಇವು ನನ್ನ ಅಂಗಾಂಗಗಳನ್ನು ಸೀಳುತ್ತಿವೆ!'
ವಿವರಣೆ: ಮಾಘಮಾ ಎಂದರೆ ಏಡಿ. ಸೇಗವಾ ಎಂದರೆ ಅದರ ಮರಿಗಳು.ಏಡಿಯ ಮರಿಗಳು ಹುಟ್ಟುವಾಗ, ತಾಯಿಯ ಮೈಯನ್ನು ಸೀಳಿಕೊಂಡು ಹೊರಬರುತ್ತವೆ! ಆ ರೀತಿ ಬಾಣಗಳು ನನ್ನ ಅಂಗಗಳನ್ನು ಸೀಳುತ್ತಿವೆಯೆಂದು ಅರ್ಥ.
೫. ಸಮರೇ ಹೇಮರೇಖಾಂಕಂ ಬಾಣಂ ಮುಂಚತಿ ರಾಘವೇ /
ಸರಾವಣೋsಪಿ ಮುಮುಚೇ ಮಧ್ಯೇ ರೀತಿಧರಂ ಶರಮ್ //
ಅನುವಾದ: 'ಯುದ್ಧದಲ್ಲಿ ರಾಮನು ಚಿನ್ನದ ರೇಖೆಯುಳ್ಳ ಬಾಣವನ್ನು ಬಿಡಲು, ಆ ರಾವಣನೂ ಮಧ್ಯದಲ್ಲಿ ಹಳದಿ ಬಣ್ಣವಿದ್ದ ಶರವನ್ನು (ಬಾಣವನ್ನು) ಬಿಟ್ಟ!'
ವಿವರಣೆ: ರೀತಿ ಎಂದರೆ ಹಳದಿ.ಹಾಗಾಗಿ ಮಧ್ಯೇ ರೀತಿಧರಂ ಶರಮ್ ಎಂದರೆ ಮಧ್ಯದಲ್ಲಿ ಹಳದಿ ಬಣ್ಣವಿರುವ ಬಾಣ ಎಂದಾಯಿತು.ಅದನ್ನೇ ಮಧ್ಯದಲ್ಲಿ ರೀಕಾರವಿರುವ ಶರ ಎಂದು ತೆಗೆದುಕೊಂಡರೆ, ಶರೀರ ಎಂದಾಗುತ್ತದೆ.ಆಗ ರಾವಣನು ಶರೀರವನ್ನು ಬಿಟ್ಟನು, ಅಂದರೆ ಸತ್ತುಹೋದನು ಎಂದಾಗುತ್ತದೆ!
ಹೀಗೆ ಸಂಸ್ಕೃತದಲ್ಲಿ ಅನೇಕ ಸ್ವಾರಸ್ಯಕರ ಕೂಟ ಶ್ಲೋಕಗಳಿವೆ.
ಡಾ.ಬಿ.ಆರ್.ಸುಹಾಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ