ಮಂಗಳವಾರ, ಡಿಸೆಂಬರ್ 5, 2023

ಪುಸ್ತಕ ಪರಿಚಯ -ಪಂಚತಂತ್ರ

ಪಂಚತಂತ್ರದ ಕಥೆಗಳು ಯಾರಿಗೆ ಗೊತ್ತಿಲ್ಲ? ಕಪಿ ಮತ್ತು ಮೊಸಳೆ, ಮೊಲ ಮತ್ತು ಸಿಂಹ,ಧರ್ಮಬುದ್ಧಿ ಮತ್ತು ಪಾಪಬುದ್ಧಿ, ಮೊದಲಾದ ಕಥೆಗಳು ನಮಗೆ ಬಾಲ್ಯದಿಂದಲೂ ಚಿರಪರಿಚಿತ! ಅಷ್ಟೇ ಅಲ್ಲದೇ, ಭಾರತದ ಈ ಅದ್ಭುತ ಕೃತಿ, ಸಂಸ್ಕೃತದಲ್ಲಿ ರಚಿತವಾಗಿದ್ದರೂ ವಿಶ್ವದ ಐವತ್ತಕ್ಕೂ ಹೆಚ್ಚು ಭಾಷೆಗಳಿಗೂ ಅನುವಾದವಾಗಿದ್ದು, ಅತ್ಯಂತ ಪ್ರಸಿದ್ಧವಾಗಿದೆ! ಇಷ್ಟಾದರೂ ಪಂಚತಂತ್ರವನ್ನು ಆಮೂಲಾಗ್ರವಾಗಿ ಓದಿರುವವರು ಬಹಳ ಕಡಿಮೆ ಎಂದರೆ ಉತ್ಪ್ರೇಕ್ಷೆಯಲ್ಲ! ಸಂಸ್ಕೃತ ಉಪನ್ಯಾಸಕರೂ ಮೂಲ ಸಂಸ್ಕೃತ ಗ್ರಂಥವನ್ನು ಸಮಗ್ರವಾಗಿ ಓದಿರುವುದು ವಿರಳವೆಂದೇ ಹೇಳಬಹುದು! ಪಂಚತಂತ್ರದ ಹೆಸರನ್ನು ಎಲ್ಲರೂ ಕೇಳಿದ್ದರೂ ಪಂಚತಂತ್ರ ಎಂದರೆ ಏನು, ಅದರ ಐದು ತಂತ್ರಗಳು ಯಾವುವು ಎಂದು ತಿಳಿದಿರುವವರು ಬಹಳ ಕಡಿಮೆ! ಬಾಲ್ಯದಲ್ಲಿ ಕೇಳಿದ ಅಥವಾ ಓದಿದ ಕೆಲವು ಕಥೆಗಳನ್ನು ಬಿಟ್ಟರೆ, ಈ ಗ್ರಂಥದ ಸ್ವರೂಪ ಏನು, ಇದರಲ್ಲಿ ಎಷ್ಟು ಕಥೆಗಳಿವೆ, ಇದರ ಉದ್ದೇಶವೇನು ಎಂದು ಬಹುತೇಕ ಜನರಿಗೆ ತಿಳಿದಿಲ್ಲ.ಹಾಗಾಗಿ ಇದೊಂದು ಮಕ್ಕಳ ಪುಸ್ತಕವಾಗಿಯಷ್ಟೇ ಸೀಮಿತವಾಗಿದೆ.ಹಾಗಾಗಿ, ದೊಡ್ಡವರಿಗೆ ಪಂಚತಂತ್ರದ ಯಥಾವತ್ತಾದ ಕನ್ನಡಾನುವಾದದ ಅವಶ್ಯಕತೆ ಇದೆ. ಆ ಆವಶ್ಯಕತೆಯನ್ನು ಪ್ರಸ್ತುತ ಪಂಚತಂತ್ರದ ಕನ್ನಡಾನುವಾದ ಗ್ರಂಥ ಪೂರೈಸುತ್ತದೆ.ಇದನ್ನು ಯಶಸ್ವಿಯಾಗಿ ಭರತ್ ಬಿ.ರಾವ್ ಎಂಬುವರು ಮಾಡಿದ್ದಾರೆ.ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಇವರು ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದು ಪಂಚತಂತ್ರವನ್ನು ಆಮೂಲಾಗ್ರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
       ಪಂಚತಂತ್ರದಲ್ಲಿ ಅನೇಕ ಆವೃತ್ತಿಗಳಿದ್ದು, ವಿಷ್ಣುಶರ್ಮನ ಪಂಚತಂತ್ರವು ಅತ್ಯಂತ ಜನಪ್ರಿಯವಾಗಿದೆ.ಪಂಚತಂತ್ರವೆಂದರೆ, ಮಿತ್ರಭೇದ (ಮಿತ್ರರ ನಡುವೆ ಒಡಕುಂಟು ಮಾಡುವುದು), ಮಿತ್ರಸಂಪ್ರಾಪ್ತಿ(ಮಿತ್ರರನ್ನು ಸಂಪಾದಿಸುವುದು), ಕಾಕೋಲೂಕೀಯ (ಕಾಗೆಗಳ ಮತ್ತು ಗೂಬೆಗಳ ವೈರದ ಕಥನ), ಲಬ್ಧಪ್ರಣಾಶ (ಲಭಿಸಿದ್ದನ್ನು ಕಳೆದುಕೊಳ್ಳುವುದು), ಮತ್ತು ಅಪರೀಕ್ಷಿತಕಾರಕ (ಪರೀಕ್ಷಿಸದೇ ದುಡುಕಿ ಕಾರ್ಯಪ್ರವೃತ್ತನಾಗುವುದು) ಎಂಬ ಐದು ತಂತ್ರಗಳು.ಪಂಚತಂತ್ರವೆಂಬುದು ಒಂದು ರಾಜನೀತಿಯ ಗ್ರಂಥವಾಗಿದ್ದು, ರಾಜರು ಹೇಗೆ ರಾಜನೀತಿಯನ್ನು ಸಂದರ್ಭಕ್ಕೆ ತಕ್ಕಂತೆ ಬಳಸಬೇಕೆಂದು ಕಥೆಗಳ ಮೂಲಕ ಹೇಳುತ್ತದೆ.ಆದರೆ ಇದರ ಮೂಲ ಉದ್ದೇಶ ಧರ್ಮ ಅಥವಾ ಒಳ್ಳೆಯತನವನ್ನು ಬೆಳೆಸುವುದೇ ಆಗಿದೆ.ಆದರೆ ಅಷ್ಟಲ್ಲದೇ ದುಷ್ಟರ, ನೀಚರ ಕೃತ್ರಿಮತೆಯಿಂದ ಹೇಗೆ ತಪ್ಪಿಸಿಕೊಳ್ಳಬೇಕು ಮತ್ತು ಜಾಣರಾಗಿರಬೇಕು ಎಂದೂ ಹೇಳುತ್ತದೆ.ಹೀಗೆ ಇದು ಜನಸಾಮಾನ್ಯರೂ ನಿತ್ಯಜೀವನಕ್ಕೆ ಬಳಸಬಹುದಾದ ನೀತಿಗಳನ್ನುಳ್ಳ ಗ್ರಂಥವಾಗಿದೆ.ಇದನ್ನು ಓದಿದವನನ್ನು ಇಂದ್ರನು ಕೂಡ ಸೋಲಿಸಲಾರ ಎಂದು ಇದರಲ್ಲಿ ಹೇಳಲಾಗಿದೆ.ಇದರ ಮುಖ್ಯ ಕಥೆಯೆಂದರೆ ಅಮರಶಕ್ತಿ ಎಂಬ ರಾಜನ ಮೂವರು ಮಕ್ಕಳು ವಿದ್ಯಾಭ್ಯಾಸ ಮಾಡದೇ ದಡ್ಡರಾಗಿ ಬೆಳೆಯಲು, ಹಾಗೂ ರಾಜನು ಚಿಂತಾಕ್ರಾಂತನಾಗಲು, ವಿಷ್ಣುಶರ್ಮನೆಂಬ ವೃದ್ಧ ಪಂಡಿತನು ಅವರನ್ನು ತನಗೊಪ್ಪಿಸಿದರೆ ಆರು ತಿಂಗಳುಗಳಲ್ಲಿ ಪಂಡಿತರನ್ನಾಗಿ ಮಾಡುವುನೆಂದನು.ಅಂತೆಯೇ ರಾಜನು ಅವರಿಗೆ ತನ್ನ ಮಕ್ಕಳನ್ನು ಒಪ್ಪಿಸಲು, ಅವನು ಅವರಿಗೆ ತಾನು ರಚಿಸಿದ ಪಂಚತಂತ್ರದ ಕಥೆಗಳನ್ನು ಹೇಳಿ ಅವರನ್ನು ರಾಜನೀತಿಜ್ಞರನ್ನಾಗಿ ಮಾಡಿದನು.ಪ್ರಸ್ತುತ ಗ್ರಂಥವು ವಿಷ್ಣುಶರ್ಮನ ಆವೃತ್ತಿಯ ಅನುವಾದವಾಗಿದ್ದು, ಪ್ರತಿ ತಂತ್ರದಲ್ಲೂ ಮುಖ್ಯ ಕಥೆ ಹಾಗೂ ಉಪಕಥೆಗಳು ಸೇರಿ ಒಟ್ಟು ಎಪ್ಪತ್ತು ಕಥೆಗಳಿವೆ.ವಿಷ್ಣುಶರ್ಮನ ಆವೃತ್ತಿಯಲ್ಲದೇ, ಪಂಚತಂತ್ರದ ಅನೇಕ ಆವೃತ್ತಿಗಳಿದ್ದು, ಕಾಶ್ಮೀರದ ತಂತ್ರಾಖ್ಯಾಯಿಕಾ ಅತ್ಯಂತ ಪ್ರಚೀನವಾದುದೆಂದು ಹೇಳಲಾಗಿದೆ.ಅದಲ್ಲದೇ ವಸುಭಾಗಭಟ್ಟನ ಆವೃತ್ತಿಯೊಂದಿದ್ದು, ಅದು ಸಂಸ್ಕೃತದಲ್ಲಿ ಲುಪ್ತವಾಗಿದ್ದರೂ ಅದೃಷ್ಟವಶಾತ್ ಹಳಗನ್ನಡದಲ್ಲಿ ದುರ್ಗಸಿಂಹನು ಮಾಡಿರುವ ಅನುವಾದವಿದೆ! ಇದರ ಇನ್ನೊಂದು ರೂಪಾಂತರ ಸಂಸ್ಕೃತ ಹಾಗೂ ತಮಿಳಿನಲ್ಲಿ ಇರುವ ತಂತ್ರೋಪಾಖ್ಯಾನ ಎಂಬ ಗ್ರಂಥವಾಗಿದ್ದು, ಇದರ ಆಧಾರದಿಂದ ಥೈಲ್ಯಾಂಡ್, ಜಾವಾ, ಬಾಲಿಗಳ ಪಂಚತಂತ್ರ ಆವೃತ್ತಿಗಳು ರಚಿತವಾಗಿವೆ.ಪಂಚತಂತ್ರವನ್ನು ಪರ್ಷಿಯನ್ ಭಾಷೆಗೆ ಕವಿಯೊಬ್ಬ ಅನುವಾದ ಮಾಡಲು, ಅದರಿಂದ ಅರೇಬಿಯಾ ಭಾಷೆಗೆ ಕಲಿಲ ವಾ ದಿಮ್ನ ಎಂಬ ಹೆಸರಿಂದ ಅನುವಾದವಾಗಿ ಅದರ ಮೂಲಕ ಅದು ಪಿಳ್ಪಾಯ್ ಕಥೆಗಳು ಅಥವಾ ಬಿಡ್ಪಾಯ್ ಕಥೆಗಳೆಂದು ಐರೋಪ್ಯ ಭಾಷೆಗಳಿಗೆ ಅನುವಾದವಾಯಿತು.ಕಲಿಲ ಮತ್ತು ದಿಮ್ನ ಎಂದರೆ ಪಂಚತಂತ್ರದ ಕಥೆಗಳ ಎರಡು ನರಿಗಳಾದ ಕರಟಕ ಮತ್ತು ದಮನಕ ಎಂಬ ಪಾತ್ರಗಳು.ಬಿಡ್ಪಾಯ್ ಎಂದರೆ ವಿದ್ಯಾಪತಿ ಎಂದು ಹೆಸರಾದ ವಿಷ್ಣುಶರ್ಮನೇ ಆಗಿದ್ದಾನೆ.
    ವಿಷ್ಣುಶರ್ಮನ ಈ ಸಂಸ್ಕೃತ ಆವೃತ್ತಿಯನ್ನು ಭರತ್ ಬಿ ರಾವ್ ಕನ್ನಡಕ್ಕೆ ಬಹಳ ಸೊಗಸಾಗಿ, ಸುಲಲಿತವಾಗಿ ಅನುವಾದಿಸಿದ್ದಾರೆ.ಮೂಲ ಪಂಚತಂತ್ರದಲ್ಲಿ ಅನೇಕ ಸುಭಾಷಿತ ಶ್ಲೋಕಗಳಿದ್ದು ಕಥೆಗಳು ಸರಳವಾದ ಗದ್ಯದಲ್ಲಿದೆ.ಭರತ್ ಅವರು ಎಲ್ಲವನ್ನೂ ಕನ್ನಡ ಗದ್ಯದಲ್ಲಿ ಸುಲಭವಾಗಿ ಓದುವಂತೆ ಅನುವಾದ ಮಾಡಿದ್ದಾರೆ.ಬೇಕಿದ್ದರೆ ಸಂಸ್ಕೃತ ಮೂಲ ಗ್ರಂಥವನ್ನು ಜೊತೆಗಿಟ್ಟುಕೊಂಡು ಈ ಗ್ರಂಥವನ್ನು ಹೋಲಿಸಿಕೊಂಡು ಓದಬಹುದು.ಎರಡು ಮುದ್ರಣಗಳಾಗಿರುವ ಈ ಗ್ರಂಥವನ್ನು ಎಲ್ಲರೂ ಕೊಂಡು ಓದಬೇಕು.
ಲೇಖಕರು ಭರತ್ ಬಿ.ರಾವ್
ಪ್ರಕಾಶಕರು: ಸ್ವಯಂಪ್ರಕಾಶನ 
ಪುಟಗಳು:೩೦೨
ಬೆಲೆ:೨೭೫/-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ