ಶ್ರೀ ಕೃಷ್ಣನು ಯಮುನಾ ನದಿಯಲ್ಲಿದ್ದ ಕಾಳಿಂಗ ಸರ್ಪವನ್ನು ಮರ್ದಿಸಿದ ಕಥೆ ಜನಪ್ರಿಯವಾಗಿದೆ.ಇದು ಭಾಗವತ ಪುರಾಣದಲ್ಲಿ ಬರುತ್ತದೆ.ಕಾಳಿಯ ಅಥವಾ ಕಾಳಿಂಗನೆಂಬ ಸಾವಿರ ಹೆಡೆಗಳ ವಿಷಪೂರಿತ ಸರ್ಪ, ಯಮುನಾ ನದಿಯಲ್ಲಿನ ಒಂದು ಕುಂಡದಲ್ಲಿ ತನ್ನ ಪರಿವಾರದೊಂದಿಗೆ ವಾಸಿಸುತ್ತಾ ಯಮುನಾ ನದಿಯ ನೀರನ್ನೆಲ್ಲಾ ವಿಷಮಯವಾಗಿಸಿರುತ್ತಾನೆ.ಅವನಿರುವ ಕುಂಡದ ಮೇಲೆ ಹಾರಾಡುವ ಪಕ್ಷಿಗಳಿಗೂ ವಿಷದ ಗಾಳಿ ಸೋಕಿ ಸಾಯುತ್ತಿರುತ್ತವೆ.ಒಮ್ಮೆ ಕೆಲವು ಗೊಲ್ಲ ಬಾಲಕರು ಯಮುನೆಯ ಆ ನೀರನ್ನು ಕುಡಿದು ಸತ್ತೇ ಹೋಗುತ್ತಾರೆ!ಆಗ ಶ್ರೀಕೃಷ್ಣನು ಅವರನ್ನು ತನ್ನ ದಯಾಪೂರಿತ ನೋಟದಿಂದಲೇ ಬದುಕಿಸಿ,ಕಾಳಿಂಗನಿಗೆ ಪಾಠ ಕಲಿಸಬೇಕೆಂದು ಸನಿಹದ ಕದಂಬ ವೃಕ್ಷದಿಂದ ನೀರಲ್ಲಿ ಜಿಗಿದು,ಮಡುವನ್ನು ಕಲಕಿ, ಕಾಳಿಂಗನನ್ನು ಕೆರಳಿಸಿ, ಅವನೊಡನೆ ಯುದ್ಧ ಮಾಡಿ ಅವನ ಹೆಡೆಗಳ ಮೇಲೆ ನರ್ತನ ಮಾಡುತ್ತಾನೆ.ಆಗ ಕಾಳಿಂಗನ ಪತ್ನಿಯರು ಬೇಡಿಕೊಳ್ಳಲು, ಕೃಷ್ಣನು ಅವನನ್ನು ಬಿಟ್ಟು, ಅವನಿಗೆ ಪರಿವಾರಸಮೇತವಾಗಿ ಯಮುನೆಯನ್ನು ತೊರೆದು ಸಮುದ್ರದ ರಮಣಕ ದ್ವೀಪಕ್ಕೆ ಹೋಗಬೇಕೆಂದು ಆಜ್ಞೆ ಮಾಡುತ್ತಾನೆ.ತನ್ನ ಹೆಜ್ಜೆ ಗುರುತುಗಳು ಅವನ ಹೆಡೆಗಳ ಮೇಲೆ ಬಿದ್ದಿರುವುದನ್ನು ನೋಡಿದ ಗರುಡನು ಅವರಿಗೇನೂ ತೊಂದರೆ ಮಾಡುವುದಿಲ್ಲ ಎಂದು ಧೈರ್ಯ ಹೇಳಿ ಕಳುಹಿಸುತ್ತಾನೆ.
ಕಾಳಿಂಗ ಏಕೆ ಯಮುನಾ ನದಿಯಲ್ಲಿದ್ದ ಎಂಬ ವಿಷಯ ಅನೇಕರಿಗೆ ತಿಳಿದಿಲ್ಲ.ಇದಕ್ಕೆ ಕಾರಣವೂ ಭಾಗವತದಲ್ಲೇ ಇದೆ.ಅದೇನೆಂದರೆ,ಗರುಡನಿಗೂ ಸರ್ಪಗಳಿಗೂ ವೈರವಿತ್ತು.ಏಕೆಂದರೆ,ಸರ್ಪಗಳ ತಾಯಿ ಕದ್ರುವು ಸರ್ಪಗಳ ಸಹಾಯದಿಂದ ಗರುಡನ ತಾಯಿ ವಿನತೆಯನ್ನು ಒಂದು ಪಂದ್ಯದಲ್ಲಿ ಸೋಲಿಸಿ ತನ್ನ ದಾಸಿಯನ್ನಾಗಿ ಮಾಡಿಕೊಂಡಿದ್ದಳು.ಗರುಡನು ಅವಳನ್ನು ದಾಸ್ಯದಿಂದ ಬಿಡಿಸಿ, ಸರ್ಪಗಳನ್ನು ದ್ವೇಷಿಸುತ್ತಾ ತನ್ನ ಆಹಾರವನ್ನಾಗಿ ಮಾಡಿಕೊಂಡಿದ್ದನು.ಸರ್ಪಗಳು ಸಮುದ್ರದ ಮಧ್ಯದ ರಮಣಕವೆಂಬ ದ್ವೀಪದಲ್ಲಿ ವಾಸಿಸುತ್ತಿದ್ದವು.ಗರುಡನು ಆಗಿಂದಾಗ್ಗೆ ಸರ್ಪಗಳ ಮೇಲೆ ದಾಳಿ ಮಾಡುತ್ತಾ ಅವನ್ನು ಕೊಲ್ಲುತ್ತಿರಲು,ಹೆದರಿದ ಸರ್ಪಗಳು, ತಮ್ಮ ರಾಜ ವಾಸುಕಿಯೊಂದಿಗೆ,ಗರುಡನ ಬಳಿ ಒಂದು ಒಪ್ಪಂದ ಮಾಡಿಕೊಂಡಿದ್ದವು.ಅದೇನೆಂದರೆ,ಸರ್ಪಗಳೇ ಪ್ರತಿ ಅಮಾವಾಸ್ಯೆಯ ದಿನದಂದು ತಮ್ಮ ಎಲ್ಲಾ ಕುಟುಂಬಗಳಿಂದ ಒಂದೊಂದು ಸರ್ಪವನ್ನು ಕಳಿಸುವೆವೆಂಬ ಒಪ್ಪಂದ.ಅವು ಅಂತೆಯೇ ಮಾಡುತ್ತಿದ್ದವು.ಆದರೆ ಗರುಡನನ್ನು ಲೆಕ್ಕಿಸದ ಕಾಳಿಂಗನು, ತನ್ನ ಪರಿವಾರದಿಂದ ಯಾರನ್ನೂ ಕಳಿಸುತ್ತಿರಲಿಲ್ಲ.ಅಲ್ಲದೇ,ಇತರ ಪರಿವಾರಗಳ ಕೆಲವು ಸರ್ಪಗಳನ್ನು ತಾನೇ ತಿಂದುಬಿಡುತ್ತಿದ್ದನು! ಇದನ್ನು ತಿಳಿದ ಗರುಡ,ಅವನ ಮೇಲೆ ಯುದ್ದ ಮಾಡಿದ.ಕಾಳಿಂಗನು ತನ್ನ ಸಾವಿರ ಹೆಡೆಗಳಿಂದ ಗರುಡನನ್ನು ಕಚ್ಚಿದರೂ,ಅವನ ರೆಕ್ಕಗಳ ಬಲವಾದ ಏಟುಗಳನ್ನು ತಾಳಲಾರದೇ ಸೋತು ಓಡಿ ಯಮುನಾ ನದಿಯನ್ನು ಸೇರಿಕೊಂಡನು.ಯಮುನಾ ನದಿಯೊಳಗೆ ಗರುಡನು ಬರುವಂತಿರಲಿಲ್ಲ.ಇದಕ್ಕೆ ಇನ್ನೊಂದು ಕಥೆಯಿತ್ತು.
ಒಮ್ಮೆ ಗರುಡನು ಬಹಳ ಹಸಿವೆಯಿಂದ ಯಮುನಾ ನದಿಗೆ ಬಂದು ಅಲ್ಲಿನ ಮೀನುಗಳನ್ನು ಹಿಡಿದು ತಿನ್ನತೊಡಗಿದನು.ಆಗ ಅಲ್ಲಿ ತಪಸ್ಸು ಮಾಡುತ್ತಿದ್ದ ಸೌಭರಿ ಎಂಬ ಮಹರ್ಷಿಯು ಅವನಿಗೆ ಮೀನುಗಳನ್ನು ತಿನ್ನಬಾರದೆಂದು ಹೇಳಿದನು.ಆದರೆ ಗರುಡನು ಅವನ ಮಾತು ಕೇಳದೇ ಮೀನುಗಳ ರಾಜನನ್ನೇ ಹಿಡಿದು ತಿಂದು ಬಿಟ್ಟನು! ಇದರಿಂದ ಮೀನುಗಳಿಗೆ ಬಹಳ ದುಃಖವಾಯಿತು.ಆಗ ಸೌಭರಿ ಮಹರ್ಷಿಯು ಕುಪಿತಗೊಂಡು ಗರುಡನಿಗೆ ಯಮುನಾ ನದಿಯೊಳಗೆ ಬಂದರೆ ಸಾಯಲೆಂದು ಶಾಪವಿತ್ತನು!ಈ ವಿಷಯ ಕಾಳಿಂಗನಿಗೆ ಮಾತ್ರ ಗೊತ್ತಿತ್ತು.ಹಾಗಾಗಿ ಅವನು ಗರುಡನಿಂದ ತಪ್ಪಿಸಿಕೊಳ್ಳಲು ಯಮುನಾ ನದಿಯೊಳಗೆ ಹೋಗಿ ಸೇರಿಕೊಂಡನು, ಹಾಗೂ ಅದನ್ನು ವಿಷಪೂರಿತವಾಗಿಸಿದನು.ಶ್ರೀಕೃಷ್ಣನು ಅವನ ಹೆಡೆಗಳ ಮೇಲೆ ನರ್ತಿಸಿ ತನ್ನ ಹೆಜ್ಜೆ ಗುರುತುಗಳು ಮೂಡಿದುದರಿಂದ ತನ್ನ ವಾಹನವಾದ ಗರುಡನು ಅವನ್ನು ನೋಡಿ ಅವನನ್ನು ಕೊಲ್ಲುವುದಿಲ್ಲವೆಂದು ಆಶ್ವಾಸನೆ ನೀಡಿ ಸಮುದ್ರದ ರಮಣಕ ದ್ವೀಪಕ್ಕೆ ಕಳಿಸಿದನು.