ನಾವು ಮಹಾಭಾರತವನ್ನು ಆಳವಾಗಿ ಓದುತ್ತಿದ್ದಂತೆ, ನಮಗೆ ಹಲವಾರು ನೀತಿಭೋಧಕ ಹಾಗೂ ರಂಜನೀಯ ಉಪಕಥೆಗಳು ಸಿಗುತ್ತವೆ. ಅಂಥ ಒಂದು ಕಥೆಯನ್ನು ಈಗ ನೋಡೋಣ.ಇದನ್ನು ಮಾರ್ಕಂಡೇಯ ಮಹರ್ಷಿಗಳು ಪಾಂಡವರಿಗೆ ಹೇಳುತ್ತಾರೆ.ನಾವು ಕೀರ್ತಿಯನ್ನು ಗಳಿಸಬೇಕೆಂದರೆ ಸಾಧ್ಯವಾದಷ್ಟು ಲೋಕೋಪಯೋಗಿ ಪರೋಪಕಾರಿ ಕಾರ್ಯಗಳನ್ನು ಮಾಡಬೇಕೆಂದು ಇದು ಸೂಚಿಸುತ್ತದೆ.
ಹಿಂದೆ, ಇಂದ್ರದ್ಯುಮ್ನನೆಂಬ ಒಬ್ಬ ಮಹಾನ್ ರಾಜನಿದ್ದನು.ಅವನು ತನ್ನ ಆಯುಷ್ಯ ಮುಗಿದ ಬಳಿಕ, ತಾನು ಮಾಡಿದ್ದ ಪುಣ್ಯಕಾರ್ಯಗಳ ಫಲಗಳನ್ನು ಅನುಭವಿಸಲು ಸ್ವರ್ಗಕ್ಕೆ ಹೋದ.ಅಲ್ಲಿ ಅವನು ಸಾಕಷ್ಟು ಕಾಲ ಸುಖವನ್ನು ಅನುಭವಿಸಿದ ಬಳಿಕ, ಅವನ ಪುಣ್ಯ ಕ್ಷಯವಾಗಲು, ಅವನು ಪುನಃ ಭೂಮಿಗೆ ಬಿದ್ದ! ಆಗ ದೇವತೆಗಳು ಅವನಿಗೊಂದು ನಿಬಂಧನೆ ಹಾಕಿದರು, "ಭೂಮಿಯ ಮೇಲೆ ಯಾರಿಗಾದರೂ ನಿನ್ನ ಸ್ಮರಣೆಯಿದ್ದರೆ ನೀನು ಸ್ವರ್ಗಕ್ಕೆ ಹಿಂದಿರುಗಬಹುದು!"
ಆಗ ರಾಜನು, ಮಾರ್ಕಂಡೇಯ ಮಹರ್ಷಿಗಳು ಚಿರಂಜೀವಿಗಳಾದುದರಿಂದ ಅವರು ಅತಿ ದೀರ್ಘ ಕಾಲ ಬದುಕಿದ್ದಿರಬಹುದೆಂದು ಭಾವಿಸಿ ಅವರ ಬಳಿಗೆ ಹೋದನು.ಹಾಗೆ ಹೋಗಿ ಅವರನ್ನು, "ನಾನಾರೆಂದು ಬಲ್ಲಿರಾ? ಅಥವಾ ಇಂದ್ರದ್ಯುಮ್ನನೆಂಬ ನನ್ನ ಹೆಸರನ್ನು ಕೇಳಿರುವಿರಾ?" ಎಂದು ಕೇಳಿದನು.ಆದರೆ ಮಾರ್ಕಂಡೇಯರು, " ನಾನು ಒಂದು ಕಡೆ ಹೆಚ್ಚು ಕಾಲ ನಿಲ್ಲದ ಕಾರಣ, ನಿನ್ನ ಬಗ್ಗೆ ತಿಳಿದಿಲ್ಲ!" ಎಂದರು. ಅದಕ್ಕೆ ರಾಜನು, "ನಿಮಗಿಂತ ಹಿರಿಯರನ್ನಾರಾದರೂ ಬಲ್ಲಿರಾ?" ಎಂದು ಕೇಳಿದನು. ಆಗ ಮಹರ್ಷಿಗಳು, " ನನಗೆ ಹಿಮಾಲಯದಲ್ಲಿರುವ ಪ್ರಾವಾರಕರ್ಣನೆಂಬ ಗೂಬೆ ಗೊತ್ತು! ಅದು ನನಗಿಂತ ಹಿರಿಯ ಜೀವಿ!" ಎಂದರು.ಆಗ ರಾಜನು ತನ್ನ ಶಕ್ತಿಯಿಂದ ಕುದುರೆಯಾಗಿ ಮಾರ್ಪಟ್ಟು ಮಹರ್ಷಿಗಳನ್ನು ತನ್ನ ಬೆನ್ನ ಮೇಲೆ ಹತ್ತಿಸಿಕೊಂಡು ಹಿಮಾಲಯದ ಆ ಗೂಬೆಯ ಬಳಿಗೆ ಹೋದನು.ಅವನು ಗೂಬೆಯನ್ನು ಅದೇ ಪ್ರಶ್ನೆ ಕೇಳಲು, ಅದೂ ತನಗೆ ರಾಜನು ತಿಳಿಯದೆಂದು ಹೇಳಿ, ತನಗಿಂತ ಹಿರಿಯನಾದ ನಾಡೀಜಂಘನೆಂಬ ಒಂದು ಕೊಕ್ಕರೆಯನ್ಪು ಕೇಳಬಹುದೆಂದಿತು.
ಎಲ್ಲರೂ ಕೆರೆಯ ಬಳಿಯಿದ್ದ ಆ ನಾಡೀಜಂಘನೆಂಬ ಕೊಕ್ಕರೆಯ ಬಳಿಗೆ ಹೋದರು.ರಾಜನು ಕೊಕ್ಕರೆಯನ್ಪು ಅದೇ ಪ್ರಶ್ನೆ ಕೇಳಲು, ಅದೂ ರಾಜನು ತನಗೆ ಗೊತ್ತಿಲ್ಲವೆಂದು ಹೇಳುತ್ತಾ, ಅದೇ ಕೆರೆಯ ಆಳದಲ್ಲರುವ ಆಕುಪಾರನೆಂಬ ತನಗಿಂತ ಹಿರಿಯನಾದ ಆಮೆಯನ್ನು ಕೇಳಬಹುದೆಂದಿತು. ರಾಜನು ಒಪ್ಪಲು, ಕೊಕ್ಕರೆಯು ಆಮೆಯನ್ನು ಕೂಗಿ ಕರೆಯಿತು. ಅದು ಹೊರಬರಲು, ಎಲ್ಲರೂ ರಾಜನ ಬಗ್ಗೆ ಕೇಳಿದರು.ರಾಜಾ ಇಂದ್ರದ್ಯುಮ್ನನ ಹೆಸರು ಕೇಳಿದ ಕೂಡಲೇ ಆಮೆಯ ಕಣ್ಣುಗಳಲ್ಲಿ ನೀರೂರಿತು! ಅದು ಮೂರ್ಛೆ ಬೀಳುವಂತಾಯಿತು! ಅನಂತರ ಅದು ಚೇತರಿಸಿಕೊಂಡು ಹೇಳಿತು , "ಆ ಮಹಾನ್ ರಾಜನ ಬಗ್ಗೆ ಯಾರಿಗೆ ಗೊತ್ತಿಲ್ಲ? ಅವನು ಅದೆಷ್ಟು ಯಜ್ಞ ಯಾಗಗಳನ್ನು ಮಾಡಿ ಅದೆಷ್ಟು ಜನರಿಗೆ ದಾನ ಮಾಡಿಲ್ಲ? ಈ ಕೆರೆ ಉಂಟಾಗಿದ್ದಾದರೂ ಹೇಗೆ ಗೊತ್ತೇ? ಅವನು ಬ್ರಾಹ್ಣಣರಿಗೆ ದಾನ ಮಾಡಿದ ಸಾವಿರಾರು ಗೋವುಗಳ ಗೊರಸುಗಳ ಹಳ್ಳಗಳಿಂದ ಆದುದು ಈ ಕೆರೆ! ಹಾಗಾಗಿಯೇ ಈ ಸರೋವರಕ್ಕೆ ಇಂದ್ರದ್ಯುಮ್ನ ಸರೋವರವೆಂದೇ ಹೆಸರಾಗಿದೆ! ಇದು ನಮ್ಮಂಥ ಎಷ್ಟೋ ಜಲರಗಳಿಗೆ ಮನೆಯಾಗಿದೆ!"
ಆಮೆಯು ಹೀಗೆ ಹೇಳಿದ ಕೂಡಲೇ, ಆಕಾಶದಲ್ಲಿ ಒಂದು ದಿವ್ಸ ವಿಮಾನ ಕಾಣಿಸಿಕೊಂಡಿತು! ಅದು ಭೂಮಿಗೆ ಇಳಿದು ಬರಲು, ಒಂದು ಅಶರೀರವಾಣಿಯಾಯಿತು," ಎಲೈ ರಾಜನೇ! ಈ ವಿಮಾನವನ್ನು ಹತ್ತು! ಒಬ್ಬ ಮನುಷ್ಯನ ಒಳ್ಳೆಯ ಕಾರ್ಯಗಳನ್ನು ಎಲ್ಲಿಯವರೆಗೆ ಜನರು ನೆನೆಸಿಕೊಳ್ಳುವರೋ, ಅಲ್ಲಿಯವರೆಗೆ ಅವನು ಸ್ವರ್ಗದಲ್ಲಿರುತ್ತಾನೆ! ಅಂತೆಯೇ, ಎಲ್ಲಿಯವರೆಗೆ ಒಬ್ಬ ಮನುಷ್ಯನ ದುಷ್ಕೃತ್ಯಗಳನ್ನು ಜನರು ನೆನೆಸಿಕೊಳ್ಳುವರೋ ಅಲ್ಲಿಯವರೆಗೆ ಅವನು ನರಕದಲ್ಲಿರುತ್ತಾನೆ!"
ರಾಜನು ಅದರಂತೆ ವಿಮಾನ ಹತ್ತಿ ಪುನಃ ಸ್ವರ್ಗಕ್ಕೆ ಹೋದನು.
ಈ ಕಥೆಯ ತಾತ್ಪರ್ಯವಿಷ್ಟೇ! ನಾವು ಸದಾ ಕಾಲ ಜನರು ನಮ್ಮನ್ನು ನೆನೆಸಿಕೊಳ್ಳುವಂಥ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರಬೇಕು.