ಸೋಮವಾರ, ಸೆಪ್ಟೆಂಬರ್ 18, 2023

ಗಣೇಶನನ್ನು ಕುರಿತ ರಸಪ್ರಶ್ನೆ

ಗಣೇಶಚತುರ್ಥಿಯ ಪ್ರಯುಕ್ತ ಒಂದು ಸಣ್ಣ ರಸಪ್ರಶ್ನೆ

೧.ಯಾವ ಪುರಾಣದ ಪ್ರಕಾರ ಗಣೇಶನು ಶ್ರೀ ಕೃಷ್ಣನ ಅವತಾರ?
೨.ಪತಿಯ, ಅಂದರೆ ನಾಯಕನಿಲ್ಲದೇ ಕೇವಲ ನಾಯಕಿಯಿಂದ (ಪಾರ್ವತಿಯಿಂದ) ಹುಟ್ಟಿದ ಕಾರಣ, ಗಣೇಶನಿಗೆ ಬಂದ ಹೆಸರೇನು?
೩.ಪದ್ಮಪುರಾಣದ ಪ್ರಕಾರ, ಪಾರ್ವತಿಯು ಒಂದು ಬೊಂಬೆಯನ್ನು ಮಾಡಿ ಗಂಗೆಯಲ್ಲಿ ಬಿಡಲು, ಅದಕ್ಕೆ ಜೀವ ಬಂದು, ಗಣೇಶನಾಯಿತು.ಹಾಗಾಗಿ, ಪಾರ್ವತಿ ಮತ್ತು ಗಂಗೆ, ಇಬ್ಬರು ತಾಯಂದಿರನ್ನು ಪಡೆದ ಗಣೇಶನಿಗೆ ಬಂದ ಹೆಸರೇನು?
೪.ಸಂಪೂರ್ಣವಾಗಿ ಗಣೇಶನಿಗೆಂದೇ ಇರುವ ಎರಡು ಪುರಾಣಗಳು ಯಾವುವು?
೫.ಯಾವ ರಾಕ್ಷಸನನ್ನು ನುಂಗಿದ ಕಾರಣ ಗಣೇಶನಿಗೆ ತಾಪವುಂಟಾಗಿ ಗರಿಕೆ ಹುಲ್ಲನ್ನು ಹಾಕಿ ತಾಪವನ್ನು ಆರಿಸಲಾಯಿತು?
೬.ಯಾವ ಗಂಧರ್ವನು ಶಾಪದಿಂದ ಇಲಿಯಾಗಿ ಗಣೇಶನ ವಾಹನವಾದನು?
೭.ಗಣೇಶನು ಯಾವ ಋಷಿಗೆ ಯಾವ ಗ್ರಂಥವನ್ನು ಕೇಳುತ್ತಾ ಬರೆದುಕೊಟ್ಟನು?
೮.ಗಣೇಶನ ಇಬ್ಬರು ಪತ್ನಿಯರು ಯಾರೆಂದು ಹೇಳಲಾಗಿದೆ?
೯.ಗಣೇಶನ ಇಬ್ಬರು ಮಕ್ಕಳು ಯಾರೆಂದು ಹೇಳಲಾಗಿದೆ?
೧೦.ಯಾವ ಸಾಹಿತ್ಯದಲ್ಲಿ ಬ್ರಹ್ಮಣಸ್ಪತಿ ಎಂದು ಗಣಪತಿಯ ಉಲ್ಲೇಖ ಇದೆ?
೧೧.ಗಣಪತಿಯ ಹೆಸರಿನಲ್ಲಿರುವ ಉಪನಿಷತ್ತು ಯಾವುದು?
೧೨.ಗಣಪತಿಯ ಸ್ತ್ರೀ ರೂಪಗಳು ಯಾವುವು?
೧೩.ಯಾವ ರಾಕ್ಷಸನಿಂದ ಗಣೇಶನು ವಟುರೂಪದಲ್ಲಿ ಬಂದು ಆತ್ಮಲಿಂಗವನ್ನು ತೆಗೆದುಕೊಂಡು ಗೋಕರ್ಣ ಕ್ಷೇತ್ರದಲ್ಲಿ ಸ್ಥಾಪಿಸಿದನು?
೧೪.ಗಣಪತಿಯ ಭಕ್ತರ ಯಾವ ಪಂಗಡ ಹಿಂದೆ ಇತ್ತು?
೧೫.ತಾಂತ್ರಿಕ ಪಂಗಡದವರು ಪೂಜಿಸುವ ಗಣೇಶನ ಕೆಲವು ರೂಪಗಳು ಯಾವುವು

ಗಣೇಶಚತುರ್ಥಿಯ ರಸಪ್ರಶ್ನೆ ಉತ್ತರಗಳು

೧.ಬ್ರಹ್ಮವೈವರ್ತಪುರಾಣ-ಇದರ ಕಥೆಯಂತೆ ಶಿವ,ಪಾರ್ವತಿಯರು ಶ್ರೀ ಕೃಷ್ಣನ ಕುರಿತ ವ್ರತವನ್ನು ಆಚರಿಸಿದುದರಿಂದ ಶ್ರೀ ಕೃಷ್ಣನೇ ಗಣೇಶನಾಗಿ ಅವತರಿಸಿದನು.
೨.ವಿನಾಯಕ
೩.ದ್ವೈಮಾತುರ
೪.ಗಣೇಶಪುರಾಣ ಮತ್ತು ಮುದ್ಗಲಪುರಾಣ
೫.ಅನಲಾಸುರ
೬.ಕ್ರೌಂಚ- ಇವನು ವಾಮದೇವ ಋಷಿಯ ಪಾದವನ್ನು ತುಳಿದ ಕಾರಣ, ಅವನಿಂದ ಶಾಪಗ್ರಸ್ತನಾಗಿ ಇಲಿಯಾಗಿ ಅನಂತರ ಗಣೇಶನ ವಾಹನವಾದನು.
೭.ವೇದವ್ಯಾಸರು, ಮಹಾಭಾರತ
೮.ಸೀದ್ಧಿ, ಬುದ್ಧಿ (ರಿದ್ಧಿ)
೯.ಕ್ಷೇಮ, ಲಾಭ
೧೦.ಋಗ್ವೇದ
೧೧.ಗಣಪತಿ ಅಥರ್ವಶೀರ್ಷ ಉಪನಿಷತ್ತು
೧೨.ವಿನಾಯಕಿ, ವ್ಯಾಘ್ರಪಾದ ಗಣೇಶಾನಿ
೧೩.ರಾವಣ
೧೪.ಗಾಣಾಪತ್ಯ
೧೫.ಶಕ್ತಿಗಣಪತಿ, ಹೇರಂಬಗಣಪತಿ,ಉಚ್ಛಿಷ್ಟ ಗಣಪತಿ, ಲಕ್ಷ್ಮೀ ಗಣಪತಿ, ಮಹಾಗಣಪತಿ, ಇತ್ಯಾದಿ

ಶುಕ್ರವಾರ, ಸೆಪ್ಟೆಂಬರ್ 1, 2023

ಸಂಸ್ಕೃತ ಅಂತರಾಲಾಪಗಳು


ಸಂಸ್ಕೃತ ಅಂತರಾಲಾಪಗಳು

ಹಿಂದಿನ ಒಂದು ಸಂಚಿಕೆಯಲ್ಲಿ ನಾವು ಸಂಸ್ಕೃತದಲ್ಲಿನ ಪ್ರಹೇಲಿಕೆಗಳ ಬಗ್ಗೆ ಪರಿಚಯಿಸಿಕೊಂಡೆವು.ಇವು ಒಗಟುಗಳಾಗಿದ್ದು ಇಂಥವು ಎಲ್ಲಾ ಭಾಷೆಗಳಲ್ಲೂ ಸಿಗುತ್ತವೆ.ಆದರೆ ಸಂಸ್ಕೃತದಲ್ಲಿ ಇನ್ನೂ ಹಲವಾರು ಬಗೆಯ ಸಾಹಿತ್ಯ ಕ್ರೀಡೆಗಳಿವೆ.ಇವು, ನಾವು ಆಂಗ್ಲ ಭಾಷೆಯಲ್ಲಿ ಪಜಲ್ಸ್(Puzzles) ಎನ್ನುವೆವಲ್ಲವೇ? ಅಂಥವು! ಪ್ರಹೇಲಿಕೆಗಳೂ ಸೇರಿದಂತೆ ಇಂಥವನ್ನು ಚಿತ್ರಸೂಕ್ತಿಗಳೆಂದು ಕರೆಯುತ್ತಾರೆ.ಈ ಸಂಚಿಕೆಯಲ್ಲಿ ಅಂಥ ಒಂದು ಚಿತ್ರಸೂಕ್ತಿಯನ್ನು ಪರಿಚಯಿಸಿಕೊಳ್ಳೋಣ.ಅದು ಅಂತರಾಲಾಪ.
     ಅಂತರಾಲಾಪಗಳಲ್ಲಿ , ಶ್ಲೋಕಗಳಲ್ಲಿ ವಿವಿಧ ಪ್ರಶ್ನೆಗಳಿರುತ್ತವೆ ಹಾಗೂ ಆ ಶ್ಲೋಕಗಳಲ್ಲೇ ಉತ್ತರಗಳಿರುತ್ತವೆ.ಮೊದಲ ಮೂರು ಪಾದಗಳಲ್ಲಿ ಪ್ರಶ್ನೆಗಳಿದ್ದರೆ ಕಡೆಯ ಪಾದದಲ್ಲಿ ಉತ್ತರಗಳಿರುತ್ತವೆ.ಕೊನೆಯ ಪಾದವನ್ನು ಮಾತ್ರ ಹೇಳಿದರೆ ಅದು ವ್ಯಾಕರಣಬದ್ಧವಾಗಿದ್ದರೂ ಅಸಂಬದ್ಧ ಅರ್ಥ ಹೊಂದಿರುತ್ತದೆ.ಕ್ರೀಡೆಗಾಗಿ ಈ ಒಂದು ಪಾದವನ್ನು ಮಾತ್ರ ಕೊಟ್ಟರೆ ಅದೊಂದು ಸಮಸ್ಯೆಯಾಗುತ್ತದೆ.ಆಗ ಇತರ ಮೂರು ಪಾದಗಳನ್ನು ಆ ನಾಲ್ಕನೆಯ ಪಾದಕ್ಕೆ ಸರಿಹೊಂದುವ ಪ್ರಶ್ನೆಗಳಂತೆ ರಚಿಸಿ ಸಮಸ್ಯಾಪೂರ್ಣ ಮಾಡಬೇಕು.
     ಈಗ ಕೆಲವು ಅಂತರಾಲಾಪಗಳನ್ನು ನೋಡೋಣ.
೧.ಕಸ್ತೂರೀ ಜಾಯತೇ ಕಸ್ಮಾತ್ಕೋ ಹಂತಿ ಕರಿಣಾಂ ಕುಲಮ್/
    ಕಿಂ ಕುರ್ಯಾತ್ಕಾತರೋ ಯುದ್ಧೇ ಮೃಗಾತ್ಸಿಂಹ:         ಪಲಾಯನಮ್//
ಅನುವಾದ :  ಕಸ್ತೂರಿಯು ಯಾವುದರಿಂದ ಹುಟ್ಟುತ್ತದೆ? ಆನೆಗಳ ಕುಲವನ್ನು ಯಾರು ಸಂಹರಿಸುತ್ತಾರೆ? ಯುದ್ಧದಲ್ಲಿ ಭಯಗೊಂಡಿರುವವನು ಏನು ಮಾಡುತ್ತಾನೆ? ಮೃಗದಿಂದ, ಸಿಂಹ, ಪಲಾಯನ.
ವಿವರಣೆ: ಇಲ್ಲಿ 'ಮೃಗಾತ್ಸಿಂಹ: ಪಲಾಯನಮ್' ಎಂದಷ್ಟೇ ಹೇಳಿದರೆ 'ಮೃಗದಿಂದ ಸಿಂಹಪಲಾಯನ ' ಎಂಬ ಸಮಸ್ಯೆ ಕೊಟ್ಟಂತಾಗುತ್ತದೆ.ಆಗ ಇತರ ಮೂರು ಪಾದಗಳನ್ನು ರಚಿಸಿ ಇದರೊಂದಿಗೆ ಹೊಂದುವಂತೆ ಮಾಡಬೇಕು.ಅಂದರೆ, ಆ ಮೂರು ಪಾದಗಳಲ್ಲಿ ಪ್ರಶ್ನೆಗಳು ಬರುವಂತೆ ಮಾಡಿ ಈ ಪದಗುಚ್ಛದ ಪದಗಳು ಆ ಒಂದೊಂದು ಪ್ರಶ್ನೆಗೂ ಉತ್ತರವಾಗಬೇಕು.ಇಲ್ಲಿನ ಶ್ಲೋಕದಲ್ಲಿ, ಕಸ್ತೂರೀ ಜಾಯತೇ ಕಸ್ಮಾತ್( ಕಸ್ತೂರಿ ಯಾವುದರಿಂದ ಹುಟ್ಟುತ್ತದೆ) ಎಂಬ ಪ್ರಶ್ನೆಗೆ ಮೃಗಾತ್ (ಜಿಂಕೆಯಿಂದ) ಎಂಬ ಉತ್ತರ ಬರುತ್ತದೆ.ಕೋ ಹಂತಿ ಕರಿಣಾಂ ಕುಲಮ್ (ಆನೆಗಳ ಕುಲವನ್ನು ಯಾರು ಕೊಲ್ಲುತ್ತಾನೆ/ಕೊಲ್ಲುತ್ತದೆ) ಎಂಬ ಪ್ರಶ್ನೆಗೆ ಸಿಂಹ:(ಸಿಂಹ) ಎಂಬ ಉತ್ತರ, ಮತ್ತು ಕಿಂ ಕುರ್ಯಾತ್ಕಾತರೋ ಯುದ್ಧೇ (ಯುದ್ಧದಲ್ಲಿ ಭಯಗೊಂಡಿರುವವನು ಏನು ಮಾಡುತ್ತಾನೆ) ಎಂಬ ಪ್ರಶ್ನೆಗೆ ಪಲಾಯನಂ (ಪಲಾಯನ) ಎಂಬ ಉತ್ತರ ಬರುತ್ತವೆ.ಹೀಗೆ ಅಂತರಾಲಾಪ ಸಮಸ್ಯೆಗಳಲ್ಲಿ ಶ್ಲೋಕದಲ್ಲೇ ಪ್ರಶ್ನೆ ಮತ್ತು ಉತ್ತರ ಎರಡೂ ಇರುತ್ತವೆ.
೨.ಕ: ಖೇ ಚರತಿ ಕಾ ರಮ್ಯಾ ಕಾ ಜಪ್ಯಾ ಕಿಂ ವಿಭೂಷಣಮ್/
   ಕೋ ವಂದ್ಯ: ಕೀದೃಶೀ ಲಂಕಾ ವೀರಮರ್ಕಟಕಂಪಿತಾ//
   ಅನುವಾದ: ಆಕಾಶದಲ್ಲಿ ಯಾವುದು ಚಲಿಸುತ್ತದೆ? ಯಾರು.   ರಮ್ಯಳಾಗಿದ್ದಾಳೆ? ಯಾವುದು ಜಪಿಸತಕ್ಕದ್ದು? ಯಾವುದು ಭೂಷಣವಾಗಿರುತ್ತದೆ? ಯಾರು ವಂದ್ಯರು? ಲಂಕೆಯು ಹೇಗಿದೆ? ವೀರಮರ್ಕಟಕಂಪಿತಾ!
ವಿವರಣೆ: ಈ ಶ್ಲೋಕದ ಎಲ್ಲಾ ಪ್ರಶ್ನೆಗಳಿಗೂ 'ವೀರಮರ್ಕಟಕಂಪಿತಾ' ಎಂಬ ಪದದಲ್ಲಿ ಉತ್ತರಗಳಿವೆ.ಪದವನ್ನು ವಿಭಜಿಸುವುದರಿಂದ ಉತ್ತರಗಳು ದೊರೆಯುತ್ತವೆ.'ಕ: ಖೇ ಚರತಿ '- ಆಕಾಶದಲ್ಲಿ ಯಾವುದು ಚಲಿಸುತ್ತದೆ ಎಂಬ ಪ್ರಶ್ನೆಗೆ ಉತ್ತರ, ವಿ:, ಅಂದರೆ ಪಕ್ಷಿ.
'ಕಾ ರಮ್ಯಾ '-ಯಾರು ರಮ್ಯಳಾಗಿದ್ದಾಳೆ ಎಂಬ ಪ್ರಶ್ನೆಗೆ ಉತ್ತರ ರಮಾ, ಅಂದರೆ ಲಕ್ಷ್ಮಿ.
'ಕಾ ಜಪ್ಯಾ '- ಯಾವುದು ಜಪಿಸತಕ್ಕದ್ದು ಎಂಬ ಪ್ರಶ್ನೆಗೆ ಉತ್ತರ,ಋಕ್, ಅಂದರೆ ವೇದದ ಮಂತ್ರ.
'ಕಿಂ ವಿಭೂಷಣಮ್ '- ಯಾವುದು ಭೂಷಣ ಅಥವಾ ಅಲಂಕಾರ ಎಂಬ ಪ್ರಶ್ನೆಗೆ ಉತ್ತರ, ಕಟಕಂ, ಅಂದರೆ ಬಳೆ.
'ಕೋ ವಂದ್ಯ:'- ಯಾರು ವಂದ್ಯರು ಎಂಬ ಪ್ರಶ್ನೆಗೆ ಉತ್ತರ, ಪಿತಾ, ಅಂದರೆ ತಂದೆ.
'ಕೀದೃಶೀ ಲಂಕಾ '-ಲಂಕೆಯು ಹೇಗಿದೆ ಎಂಬ ಪ್ರಶ್ನೆಗೆ ಉತ್ತರ, ಇಡಿಯ ಪದವೇ ಆಗುತ್ತದೆ -'ವೀರಮರ್ಕಟಕಂಪಿತಾ', ಅಂದರೆ, ವೀರವಾನರನಾದ ಹನುಮಂತನಿಂದ ಕಂಪನಕ್ಕೊಳಗಾಗಿದೆ ಎಂದು ಅರ್ಥ.
೩.ಸೀಮಂತಿನೀಷು ಕಾ ಶಾಂತಾ ರಾಜಾ ಕೋsಭೂದ್ಗುಣೋತ್ತಮ:/
ವಿದ್ವದ್ಭಿ: ಕಾ ಸದಾ ವಂದ್ಯಾ ಅತ್ರೈವೋಕ್ತಂ ನ ಬುಧ್ಯತೇ//
ಅನುವಾದ: ಹೆಂಗಸರಲ್ಲಿ ಶಾಂತಳಾಗಿರುವವಳು ಯಾರು? ರಾಜರಲ್ಲಿ ಗುಣೋತ್ತಮನಾಗಿರುವವನು ಯಾರು? ವಿದ್ವಜ್ಜನರಿಂದ ಸದಾ ವಂದ್ಯವಾದುದು ಯಾವುದು? ಉತ್ತರಗಳು ಇಲ್ಲೇ ಹೇಳಲ್ಪಟ್ಟಿವೆ! ಆದರೆ ತಿಳಿಯುವುದಿಲ್ಲ!
ವಿವರಣೆ: ಈ ಶ್ಲೋಕದಲ್ಲಿ, ಪ್ರತಿ ಚರಣದ ಮೊದಲ ಮತ್ತು ಕೊನೆಯ ಅಕ್ಷರಗಳನ್ನು ಸೇರಿಸಿದರೆ, ಮೂರೂ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತವೆ.
    'ಸೀಮಂತಿನೀಷು ಕಾ ಶಾಂತಾ '-ಈ ಚರಣದಲ್ಲಿ ಸೀ ಮತ್ತು ತಾ ಸೇರಿಸಿದರೆ, ಸೀತಾ ಎಂಬ ಉತ್ತರ ಸಿಗುತ್ತದೆ.
    'ರಾಜಾ ಕೋsಭೂದ್ಗುಣೋತ್ತಮ:' - ಈ ಚರಣದಲ್ಲಿ ರಾ ಮತ್ತು ಮ: ಸೇರಿಸಿದರೆ ರಾಮ: , ಅಂದರೆ ರಾಮ ಎಂಬ ಉತ್ತರ ಸಿಗುತ್ತದೆ.
    'ವಿದ್ವದ್ಭಿ: ಕಾ ಸದಾ ವಂದ್ಯಾ ' ಎಂಬ ಚರಣದಲ್ಲಿ ವಿ ಮತ್ತು ದ್ಯಾ ಸೇರಿಸಿದರೆ ವಿದ್ಯಾ, ಅಂದರೆ ವಿದ್ಯೆ ಎಂಬ ಉತ್ತರ ಸಿಗುತ್ತದೆ.
೪.ಯುಧಿಷ್ಠಿರ: ಕಸ್ಯ ಪುತ್ರೋ ಗಂಗಾ ವಹತಿ ಕೀದೃಶೀ/
    ಹಂಸಸ್ಯ ಶೋಭಾ ಕಾ ವಾಸ್ತಿ ಧರ್ಮಸ್ಯ ತ್ವರಿತಾ ಗತಿ://
   ಅನುವಾದ: ಯುಧಿಷ್ಠಿರನು ಯಾರ ಪುತ್ರ? ಗಂಗೆಯು ಹೇಗೆ ಹರಿಯುತ್ತದೆ? ಹಂಸದ ಶೋಭೆಯು ಯಾವುದಾಗಿರುತ್ತದೆ? ಧರ್ಮನ ವೇಗಗತಿ!
   ವಿವರಣೆ: ಇಲ್ಲಿ, ಮೂರು ಪ್ರಶ್ನೆಗಳಿಗೆ ಕೊನೆಯ ಚರಣದ ಮೂರು ಪದಗಳು ಉತ್ತರಗಳಾಗಿವೆ.ಯುಧಿಷ್ಠಿರನು ಯಾರ ಪುತ್ರ ಎಂಬ ಪ್ರಶ್ನೆಗೆ ಧರ್ಮನ, ಅಂದರೆ ಯಮಧರ್ಮನ ಎಂಬುದು ಉತ್ತರ.ಗಂಗೆಯು ಹೇಗೆ ಹರಿಯುತ್ತದೆ ಎಂಬ ಪ್ರಶ್ನೆಗೆ ತ್ವರಿತಾ, ಅಂದರೆ ವೇಗವಾಗಿ ಎಂಬುದು ಉತ್ತರ.ಹಂಸದ ಶೋಭೆಯು ಯಾವುದಾಗಿರುತ್ತದೆ ಎಂಬ ಪ್ರಶ್ನೆಗೆ ಗತಿ, ಅಂದರೆ ನಡಿಗೆ ಎಂಬುದು ಉತ್ತರ.
೫.ಭೋಜನಾಂತೇ ಚ ಕಿಂ ಪೇಯಂ ಜಯಂತ: ಕಸ್ಯ ವೈ ಸುತ: /
    ಕಥಂ ವಿಷ್ಣುಪದಂ ಪ್ರೋಕ್ತಂ ತಕ್ರಂ ಶಕ್ರಸ್ಯ ದುರ್ಲಭಮ್ //
    ಅನುವಾದ: ಭೋಜನದ ಕೊನೆಗೆ ಏನನ್ನು ಕುಡಿಯಬೇಕು? ಜಯಂತನು ಯಾರ ಮಗನು? ವಿಷ್ಣುಪದವು ಹೇಗೆ ಹೇಳಲ್ಪಟ್ಟಿದೆ? ಮಜ್ಜಿಗೆ ಇಂದ್ರನ ದುರ್ಲಭ (ವಸ್ತು).
   ವಿವರಣೆ: ಕೊನೆಯ ಚರಣದ ಪದಗಳು ಪ್ರಶ್ನೆಗಳಿಗೆ ಉತ್ತರಗಳಾಗಿವೆ.
ಭೋಜನದ ಕೊನೆಗೆ ಏನನ್ನು ಕುಡಿಯಬೇಕು?- ತಕ್ರಂ, ಅಂದರೆ ಮಜ್ಜಿಗೆ.
ಜಯಂತನು ಯಾರ ಮಗನು?- ಇಂದ್ರನ ಮಗ.
ವಿಷ್ಣುಪದವು ಹೇಗೆ ಹೇಳಲ್ಪಟ್ಟಿದೆ?- ದುರ್ಲಭ(ಲಭಿಸುವುದು ಕಷ್ಟ).
ತಕ್ರಂ ಶಕ್ರಸ್ಯ ದುರ್ಲಭಮ್ ಎಂಬ ಪದಗುಚ್ಛವನ್ನು ಒಂದು ಸಮಸ್ಯೆಯಾಗಿ ಕೊಡಬಹುದು.
                                   ಡಾ.ಬಿ.ಆರ್.ಸುಹಾಸ್