ಅವಂತೀ ನಗರಿಯಲ್ಲಿ ವಿಕ್ರಮಾದಿತ್ಯನೆಂಬ ರಾಜನು ಆಳುತ್ತಿದ್ದನು.ಅವನಿಗೆ ಪ್ರಿಯಂಗುಸುಂದರಿ ಎಂಬ ಮಗಳಿದ್ದಳು.ಅವಳನ್ನು ಅಧ್ಯಯನಕ್ಕಾಗಿ ವರರುಚಿ ಎಂಬ ಪಂಡಿತನಿಗೆ ಒಪ್ಪಿಸಲಾಯಿತು.ಅವಳು ತನ್ನ ಬುದ್ಧಿವಂತಿಕೆಯಿಂದ ಕೆಲವೇ ದಿನಗಳಲ್ಲಿ ಸಕಲ ಶಾಸ್ತ್ರಗಳನ್ನೂ ಕಲಿತುಬಿಟ್ಟಳು! ಅವಳಿಗೆ ಯೌವನವು ತುಂಬಿರಲು, ಅವಳು ದಿನವೂ ತನ್ನ ತಂದೆಯನ್ನು ಆರಾಧಿಸುತ್ತಿದ್ದಳು.ಹೀಗಿರಲು, ವಸಂತಕಾಲದ ಒಂದು ದಿನ, ಅವಳು ಮಧ್ಯಾಹ್ನದ ಹೊತ್ತಿನಲ್ಲಿ ಕಿಟಕಿಯ ಬಳಿ ಸುಖಾಸೀನಳಾಗಿ ಕುಳಿತಿರಲು, ಸೂರ್ಯನು ಜನರ ಹಣೆಗಳನ್ನು ಸುಡುತ್ತಿದ್ದಾಗ, ತನ್ನ ಉಪಾಧ್ಯಾಯನು ದಾರಿಯಲ್ಲಿ ಬರುತ್ತಿದ್ದುದನ್ನು ನೋಡಿದಳು.ಅವನು ಕಿಟಕಿಯ ಬಳಿ ವಿಶ್ರಮಿಸಿಕೊಳ್ಳಲು, ಅವಳು ಅವನಿಗೆ ರಸದಿಂದ ತುಂಬಿ ಮಾಗಿದ್ದ ಕೆಲವು ಮಾವಿನ ಹಣ್ಣುಗಳನ್ನು ತೋರಿಸುತ್ತಾ, ಅವನಿಗೆ ಅವುಗಳ ಮೇಲೆ ಆಸೆಯಿತ್ತೆಂದು ಗೊತ್ತಿದ್ದು ಕೇಳಿದಳು,"ನಿಮಗೆ ಈ ಹಣ್ಣುಗಳು ಬಿಸಿಯಾಗಿ ಇಷ್ಟವೋ ತಣ್ಣಗೆ ಇಷ್ಟವೋ?"
ಅವಳ ಮಾತಿನ ಚಾತುರ್ಯವನ್ನರಿಯದೇ ಅವನು,"ಬಿಸಿಯಾದ ಹಣ್ಣುಗಳನ್ನೇ ಇಷ್ಟಪಡುತ್ತೇನೆ!" ಎಂದನು.ಆಗ ಅವಳು,ಮಾವಿನ ಹಣ್ಣುಗಳನ್ನು ಆಯ್ದುಕೊಳ್ಳಲು ಅವನು ಹಿಡಿದಿದ್ದ ವಸ್ತ್ರದ ತುದಿಗೆ ಹಣ್ಣುಗಳನ್ನು ಎಸೆದಳು! ಹಾಗಾಗಿ ಅವು ನೆಲದ ಮೇಲೆ ಬಿದ್ದು ಧೂಳಿನಿಂದ ಆವೃತವಾಗಲು, ಪಂಡಿತನು ಅವುಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಧೂಳನ್ನು ತೆಗೆಯಲು ತನ್ನ ಬಾಯಿಂದ ಗಾಳಿಯೂದತೊಡಗಿದನು.ಆಗ ಆ ರಾಜಕನ್ಯೆಯು ಅವನನ್ನು ಅಪಹಾಸ್ಯ ಮಾಡುತ್ತಾ,"ಬಾಯ ಗಾಳಿಯಿಂದ ತಣ್ಣಗೆ ಮಾಡುವಷ್ಟು ಬಿಸಿಯಿವೆಯೇ ಹಣ್ಣುಗಳು?"ಎಂದಳು.ಅವಳ ಆ ಅಪಹಾಸ್ಯದ ಮಾತಿನಿಂದ ಆ ಬ್ರಾಹ್ಮಣನಿಗೆ ಕೋಪ ಬಂದು ಅವನು ಹೇಳಿದನು,"ಬುದ್ಧಿಯಿದೆಯೆಂದು ಗರ್ವಿತಳಾಗಿರುವ ಎಲೈ ಹೆಣ್ಣೇ! ಗುರುವಿಗೇ ವಿತರ್ಕ ಮಾಡುವ ನಿನಗೆ ಒಬ್ಬ ದನಗಾಹಿಯು ಪತಿಯಾಗುವನು!"
ಅವನ ಈ ಶಾಪೋಕ್ತಿಯನ್ನು ಕೇಳಿ ಅವಳೂ ಹೇಳಿದಳು,"ನಿಮ್ಮ ಮೂರು ವೇದಗಳ ವಿದ್ಯೆಗಿಂತಲೂ ಅಧಿಕವಾದ ವಿದ್ಯೆಯಿಂದ ಪರಮಗುರುವಾದವನನ್ನೇ ನಾನು ಮದುವೆಯಾಗುತ್ತೇನೆ!"
ಹೀಗೆ ಅವಳು ಪ್ರತಿಜ್ಞೆ ಮಾಡಿದಳು.
ಹೀಗಿರಲು, ವಿಕ್ರಮನು ಅವಳಿಗೆ ಸೂಕ್ತ ವರನನ್ನು ಅನ್ವೇಷಿಸುವ ವಿಷಯದಲ್ಲಿ ಚಿಂತಾಸಾಗರದಲ್ಲಿ ಮುಳುಗಿದ್ದನು.ಒಮ್ಮೆ ಅವನು ವರಾನ್ವೇಷಣೆಯಲ್ಲಿ ಬಹಳ ಉತ್ಸುಕನಾಗಿ ಆ ಪಂಡಿತನಿಗೆ ಅದಕ್ಕಾಗಿ ಆಜ್ಞೆ ಮಾಡಲು, ಅವನು ಕಾಡಿಗೆ ಬಂದನು.ಅಲ್ಲಿ ಅವನು ಬಹಳ ಬಾಯಾರಿ ನೀರಿಗಾಗಿ ಎಲ್ಲೆಲ್ಲೂ ನೋಡಿದನು.ಆದರೆ ಎಲ್ಲೂ ನೀರು ಕಾಣದಿರಲು, ಅವನು ಒಬ್ಬ ದನಗಾಹಿಯನ್ನು ನೋಡಿ ಅವನನ್ನು ನೀರು ಕೇಳಿದನು.ಅವನೂ,"ನೀರಿಲ್ಲ! ಹಾಲು ಕುಡಿ!" ಎಂದು ಕರಚಂಡೀ ಮಾಡಲು ಹೇಳಿದನು.ತಾನು ಕೇಳಿರುವ ಪದಗಳಲ್ಲೆಲ್ಲಾ ಈ ಪದವನ್ನು ಕೇಳಿರದ ಪಂಡಿತನಿಗೆ ಈ ಪದವನ್ನು ಕೇಳಿ ಚಿಂತೆಯಾಯಿತು! ಆಗ ಆತ ದನಗಾಹಿಯು ತನ್ನ ಹಸ್ತವನ್ನು ಪಂಡಿತನ ತಲೆಯ ಮೇಲಿಟ್ಟು ಅವನನ್ನು ಒಂದು ಎಮ್ಮೆಯ ಕೆಳಗೆ ಕರೆದೊಯ್ದು, ಅವನ ಎರಡೂ ಹಸ್ತಗಳನ್ನು ಜೋಡಿಸಿ ಬೊಗಸೆಯಾಗಿಸಿ ಕರಚಂಡಿಯೆಂಬ ಮುದ್ರೆ ಮಾಡಿಸಿ ಕಂಠಪೂರ್ತಿ ಹಾಲನ್ನು ಕುಡಿಸಿದ! ಆಗ ಆ ಪಂಡಿತನು, ತನ್ನ ತಲೆಯ ಮೇಲೆ ಆ ದನಗಾಹಿಯು ಹಸ್ತವನ್ನು ಇಟ್ಟುದರಿಂದಲೂ ಕರಚಂಡೀ ಎಂಬ ವಿಶೇಷ ಶಬ್ದವನ್ನು ಕಲಿಸಿದ್ದರಿಂದಲೂ ಅವನನ್ನು ತನ್ನ ಗುರುಪ್ರಾಯವಾಗಿ ಭಾವಿಸಿ, ರಾಜಕುಮಾರಿಗೆ ಸೂಕ್ತ ಪತಿಯಾಗುವನೆಂದು ಭಾವಿಸಿದನು.ಅವನನ್ನು ಎಮ್ಮೆಯ ಸನಿಹದಿಂದ ಬಿಡಿಸಿ ತನ್ನ ಸೌಧಕ್ಕೆ ಕರೆತಂದು, ಆರು ತಿಂಗಳ ಕಾಲ ಅವನ ರೀತಿ ನೀತಿಗಳನ್ನು ತಿದ್ದಿ, 'ಓಂ ನಮಃ ಶಿವಾಯ ' ಎಂಬ ಆಶೀರ್ವಚನವನ್ನು ಕಲಿಸಿದ.ಆರು ತಿಂಗಳುಗಳಲ್ಲಿ ಆ ಅಕ್ಷರಗಳು ಅವನಿಗೆ ಕಂಠಸ್ಥವಾಗಿವೆಯೆಂದು ಮನಗಂಡು, ಶುಭಮುಹೂರ್ತದಲ್ಲಿ ಅವನನ್ನು ಶೃಂಗರಿಸಿ, ಪಂಡಿತನು ಅವನನ್ನು ರಾಜಸಭೆಗೆ ಕರೆತಂದನು.ಆಗ ಆ ದನಗಾಹಿಯು ಸಭೆಯನ್ನು ನೋಡಿ ಕ್ಷೋಭೆಗೊಂಡು, ಚೆನ್ನಾಗಿ ಅಭ್ಯಾಸ ಮಾಡಿದ್ದ ಆಶೀರ್ವಚನವನ್ನು 'ಉಶರಟ' ಎಂದು ಹೇಳಿಬಿಟ್ಟನು! ಅವನ ಈ ತೊದಲುನುಡಿಯಿಂದ ರಾಜನು ವಿಸ್ಮಿತನಾಗಲು, ಆ ಅರ್ಥಹೀನ ಅಕ್ಷರಗಳಿಗೆ ಚಾತುರ್ಯವನ್ನು ಆರೋಪಿಸಲು ಆ ಪಂಡಿತನು ಆ ಒಂದೊಂದು ಅಕ್ಷರವನ್ನೂ ಬಳಸಿ ಒಂದು ಶ್ಲೋಕವನ್ನು ಅಲ್ಲೇ ರಚಿಸಿ ಹೇಳಿದನು -
ಉಮಯಾ ಸಹಿತೋ ರುದ್ರ: ಶಂಕರ: ಶೂಲಪಾಣಿಭೃತ್ /
ರಕ್ಷತು ತ್ವಾಂ ಮಹೀಪಾಲ ಟಂಕಆರಬಲಗರ್ವಇತ: //
'ಎಲೈ ಮಹೀಪಾಲ! ಉಮಾಸಹಿತನಾದ, ರುದ್ರನಾದ, ಶೂಲಪಾಣಿಯಾದ, ತನ್ನ ಟಂಕಾರಬಲದಿಂದ ಗರ್ವಿತನಾದ ಶಂಕರನು ನಿನ್ನನ್ನು ರಕ್ಷಿಸಲಿ!'
ಹೀಗೆ ಶ್ಲೋಕವನ್ನು ಹೇಳಿ, ಪಂಡಿತನು ಆ ದನಗಾಹಿಯ ಪಾಂಡಿತ್ಯದ ಗಾಂಭೀರ್ಯವನ್ನು ವಿಸ್ತರಿಸಿ ವ್ಯಾಖ್ಯಾನಿಸಿದನು! ಅವನ ಪಾಂಡಿತ್ಯದ ನಿರೂಪಣೆಯಿಂದ ಸುಪ್ರೀತನಾದ ರಾಜನು ತನ್ನ ಪುತ್ರಿಯನ್ನು ಆ ದನಗಾಹಿಗೆ ಮದುವೆಮಾಡಿಕೊಟ್ಟನು.ಪಂಡಿತನು ಉಪದೇಶ ಮಾಡಿದ್ದಂತೆ ಅವನು ಸರ್ವಥಾ ಮೌನವಾಗಿಯೇ ಇದ್ದನು! ರಾಜಕನ್ಯೆಯು ಅವನ ಪಾಂಡಿತ್ಯವನ್ನು ಪರೀಕ್ಷಿಸಲು, ಹೊಸದಾಗಿ ಬರೆಯಲಾಗಿದ್ದ ಒಂದು ಪುಸ್ತಕವನ್ನು ಶೋಧಿಸಲು ಅವನಿಗೆ ಕೊಟ್ಟಳು.ಅವನು ಅದನ್ನು ತನ್ನ ಕೈಯಲ್ಲಿ ಹಿಡಿದು, ಅದರ ಅಕ್ಷರಗಳ ಬಿಂದು, ಮಾತ್ರೆಗಳನ್ನು ತೆಗೆದುಹಾಕಿ ಅವನ್ನು ಕೇವಲ ಅಕ್ಷರಗಳನ್ನಾಗಿಸಲು, ಒಂದು ಉಗುರುಕತ್ತರಿಯಿಂದ ಆ ಬಿಂದು, ಮಾತ್ರೆಗಳನ್ನು ಕೆರೆಯತೊಡಗಿದನು! ಇದನ್ನು ನೋಡಿ ಅವನೊಬ್ಬ ಮೂರ್ಖನೆಂದು ನಿರ್ಣಯಿಸಿದಳು! ಅಂದಿನಿಂದ ಜಾಮಾತೃಶುದ್ಧಿ(ಅಳಿಯಶುದ್ಧಿ) ಎಂಬ ವಿಚಾರವು ಎಲ್ಲೆಲ್ಲೂ ಪ್ರಸಿದ್ಧವಾಯಿತು!
ಹೀಗಿರಲು, ಒಂದು ದಿನ, ಒಂದು ಚಿತ್ರಭಿತ್ತಿಯಲ್ಲಿ ಎಮ್ಮೆಗಳ ಹಿಂಡನ್ನು ಅವನಿಗೆ ತೋರಿಸಲಾಗಿ, ಅವನು ಆನಂದಿತನಾಗಿ, ತನ್ನ ಉನ್ನತ ಸ್ಥಾನವನ್ನು ಮರೆತು, ಎಮ್ಮೆಗಳನ್ನು ಕರೆಯಲು ಬಳಸುವ ವಿಕೃತ ಪದಗಳನ್ನು ಉಚ್ಚರಿಸತೊಡಗಿದನು! ಅದನ್ನು ನೋಡಿ ರಾಜಕನ್ಯೆಯು ಅವನೊಬ್ಬ ಎಮ್ಮೆ ಕಾಯುವವನೆಂದು ನಿಶ್ಚಯಿಸಿದಳು.ಹಾಗಾಗಿ ಅವಳು ಅವನ ಅವಜ್ಞೆ ಮಾಡಲು, ಅದನ್ನು ಯೋಚಿಸಿ ಅವನು ವಿದ್ವತ್ಪ್ರಾಪ್ತಿಗಾಗಿ ಕಾಳಿಕಾದೇವಿಯನ್ನು ಆರಾಧಿಸಿದನು.ಆಗ ರಾಜನು, ಅವನು ಭಕ್ತ್ಯಾವೇಶದಲ್ಲಿ ತನ್ನನ್ನೇ ಕೊಂದುಕೊಂಡು ಸತ್ತು ತನ್ನ ಮಗಳಿಗೆ ವೈಧವ್ಯ ಪ್ರಾಪ್ತಿಯಾಗಬಹುದೆಂಬ ಭಯದಿಂದ, ರಾತ್ರಿಯಲ್ಲಿ ತನ್ನ ಒಬ್ಬ ದಾಸಿಯನ್ನು ಕಾಳಿಕಾದೇವಿಯ ವೇಷದಿಂದ ಅವನ ಬಳಿಗೆ ಕಳಿಸಿದನು.ಅವಳು, ಮಲಗಿದ್ದ ಅವನನ್ನು ಎಬ್ಬಿಸಿ,"ನಾನು ನಿನ್ನಿಂದ ಸಂತುಷ್ಟಳಾಗಿದ್ದೇನೆ!" ಎಂದಳು. ಆಗ ಸಾಕ್ಷಾತ್ ಕಾಳಿಕಾದೇವಿಯೇ ಏನಾದರೂ ವಿಪತ್ತು ಸಂಭವಿಸೀತೆಂಬ ಭಯದಿಂದ ಪ್ರತ್ಯಕ್ಷಳಾಗಿ ಅವನನ್ನು ಅನುಗ್ರಹಿಸಿದಳು!
ಈ ವೃತ್ತಾಂತವನ್ನು ಕೇಳಿ ರಾಜಕನ್ಯೆಯು ಸಂತೋಷಗೊಂಡು ಅಲ್ಲಿಗೆ ಬಂದು,'ಅಸ್ತಿ ಕಶ್ಚಿದ್ವಾಗ್ವಿಶೇಷ:?' (ಏನಾದರೂ ವಿಶೇಷ ಮಾತು ಇದೆಯೇ?) ಎಂದು ಅವನನ್ನು ಕೇಳಿದಳು.ಆಗ ಅವನು ಕಾಳಿದಾಸನೆಂಬ ಹೆಸರಿನಿಂದ ಪ್ರಸಿದ್ಧನಾಗಿ ಕುಮಾರಸಂಭವವೇ ಮೊದಲಾದ ಮೂರು ಮಹಾಕಾವ್ಯಗಳನ್ನೂ ಆರು ಪ್ರಬಂಧಗಳನ್ನೂ (ಕೃತಿಗಳನ್ನು ಅಥವಾ ನಾಟಕಗಳನ್ನು) ರಚಿಸಿದನು.
ರಾಜಕನ್ಯೆಯು ಅಸ್ತಿ ಕಶ್ಚಿದ್ವಾಗ್ವಿಶೇಷ: ? ಎಂದು ಕೇಳಿದ್ದರಿಂದ, ಕಾಳಿದಾಸನು, 'ಅಸ್ತಿ' ಎಂಬ ಪದದಿಂದ, 'ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ' ಎಂದು ಆರಂಭಿಸಿ ಕುಮಾರಸಂಭವವನ್ನೂ , 'ಕಶ್ಚಿತ್' ಎಂಬ ಪದದಿಂದ, 'ಕಶ್ಚಿತ್ ಕಾಂತಾ ವಿರಹಗುರುಣಾ ' ಎಂದು ಆರಂಭಿಸಿ ಮೇಘದೂತವನ್ನೂ, 'ವಾಕ್' ಎಂಬ ಪದದಿಂದ 'ವಾಗರ್ಥಾವಿವ ಸಂಪೃಕ್ತೌ ' ಎಂದು ಆರಂಭಿಸಿ ರಘುವಂಶವನ್ನೂ , ಹೀಗೆ ಮೂರು ಕಾವ್ಯಗಳನ್ನು ರಚಿಸಿದನೆಂದು ಹೇಳುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ