ಬೃಹತ್ಕಥೆಯ ಉಗಮದ ಕಥೆಯನ್ನು ಕಳೆದ ಸಂಚಿಕೆಯಲ್ಲಿ ನೋಡಿದೆವು.ಅಲ್ಲಿ ಪುಷ್ಪದಂತನೆಂಬ ಶಿವಗಣನು ಶಿವನು ಪಾರ್ವತಿಗೆ ಹೇಳಿದ ಅಪೂರ್ವ ಕಥೆಗಳನ್ನು ಕದ್ದು ಕೇಳಿದ ತಪ್ಪಿಗೆ ಮನುಷ್ಯಲೋಕದಲ್ಲಿ ಹುಟ್ಟುವಂತೆ ಪಾರ್ವತಿಯಿಂದ ಶಾಪಗ್ರಸ್ತನಾದನೆಂದು ನೋಡಿದೆವು.ಹಾಗೆ ಶಾಪಗ್ರಸ್ತನಾಗಿ ಅವನು, ವರರುಚಿಯೆಂಬ ಬ್ರಾಹ್ಮಣಕುಮಾರನಾಗಿ ಹುಟ್ಟಿದನು.ವರರುಚಿಯ ಕಥೆಗಳು ಸ್ವಾರಸ್ಯಕರವಾಗಿವೆ.ಈಗ ಅವನ್ನು ನೋಡೋಣ.ವರರುಚಿಯು ಕೌಶಾಂಬಿಯಲ್ಲಿ ಸೋಮದತ್ತನೆಂಬ ಬ್ರಾಹ್ಮಣನಿಗೆ ಅವನ ಪತ್ನಿ ವಸುದತ್ತೆಯಲ್ಲಿ ಮಗನಾಗಿ ಹುಟ್ಟಿದನು.ಅವನು ಚಿಕ್ಕವನಾಗಿದ್ದಾಗಲೇ ತಂದೆ ಸತ್ತುಹೋಗಲು, ಅವನ ತಾಯಿಯು ಅವನನ್ನು ಕಷ್ಟಪಟ್ಟು ಬೆಳೆಸತೊಡಗಿದಳು.
ಒಮ್ಮೆ ಅವನ ಮನೆಗೆ ಇಂದ್ರದತ್ತ ಮತ್ತು ವ್ಯಾಡಿ ಎಂಬ ಇಬ್ಬರು ಬ್ರಾಹ್ಮಣರು ಬಂದರು.ಪ್ರಯಾಣದಿಂದ ಬಳಲಿದ್ದ ಅವರು ಅಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಬಂದಿದ್ದರು.ಆಗ ಹೊರಗೆ ಒಂದು ನರ್ತನ ನಡೆಯತೊಡಗಿತು.ವರರುಚಿಯು ತನ್ನ ತಾಯಿಗೆ, "ಅಮ್ಮ, ನಾನು ನರ್ತನವನ್ನು ನೋಡಲು ಹೋಗುತ್ತೇನೆ! ಅನಂತರ ಬಂದು ಅದನ್ನು ಸಾಹಿತ್ಯಸಮೇತವಾಗಿ ನಿನಗೆ ಮಾಡಿ ತೋರಿಸುತ್ತೇನೆ!" ಎಂದನು.ಇದನ್ನು ಕೇಳಿ ಆ ಇಬ್ಬರು ಬ್ರಾಹ್ಮಣರು ಆಶ್ಚರ್ಯಗೊಳ್ಳಲು, ವರರುಚಿಯ ತಾಯಿಯು, "ಮಕ್ಕಳೇ! ಇದರಲ್ಲೇನೂ ಆಶ್ಚರ್ಯವಿಲ್ಲ! ಇವನು ಒಮ್ಮೆ ಏನನ್ನಾದರೂ ಕೇಳಿದರೆ, ಅದನ್ನು ಹಾಗೆಯೇ ನೆನಪಿನಲ್ಲಿಟ್ಟುಕೊಳ್ಳುತ್ತಾನೆ!" ಎಂದಳು.ಆಗ ಆ ಬ್ರಾಹ್ಮಣರು ವರರುಚಿಯನ್ನು ಪರೀಕ್ಷಿಸಲು ಪ್ರಾತಿಶಾಖ್ಯವನ್ನು ಪಠಿಸಿದರು.ವರರುಚಿಯು ಅದನ್ನು ಕೇಳಿ ಹಾಗೆಯೇ ಹೇಳಿದನು! ಅನಂತರ ಅವರು ನರ್ತನ ನೋಡಿಕೊಂಡು ಬರಲು, ವರರುಚಿಯು ಅದನ್ನು ತನ್ನ ತಾಯಿಯ ಮುಂದೆ ಹಾಗೆಯೇ ಮಾಡಿ ತೋರಿಸಿದನು.ಆಗ ಆ ಬ್ರಾಹ್ಮಣರಲ್ಲೊಬ್ಬನಾದ ವ್ಯಾಡಿಯು ವರರುಚಿಯನ್ನು ಒಮ್ಮೆ ಕೇಳಿದ್ದನ್ನು ಹಾಗೆಯೇ ನೆನಪಿನಲ್ಲಿಟ್ಟುಕೊಳ್ಳಬಲ್ಲ ಏಕಶ್ರುತಧರನೆಂದು ನಿರ್ಧರಿಸಿ, ಅವನ ತಾಯಿಗೆ ತಮ್ಮ ಕಥೆ ಹೇಳಿದನು,"ಅಮ್ಮ! ನಾವಿಬ್ಬರೂ ವೇತಸಪುರದ ಇಬ್ಬರು ಬ್ರಾಹ್ಮಣ ಸೋದರರ ಮಕ್ಕಳು.ನಾನು ವ್ಯಾಡಿ ಹಾಗೂ ಇವನು ಇಂದ್ರದತ್ತ ! ನಾವಿಬ್ಬರೂ ಹುಟ್ಟಿದಾಗಲೇ ನಮ್ಮ ತಂದೆ,ತಾಯಿಯರು ಸಾಯಲು, ನಾವು ಅನಾಥರಾಗಿ ಹಣವಿದ್ದರೂ ವಿದ್ಯೆಯನ್ನರಸುತ್ತಾ ಕುಮಾರಸ್ವಾಮಿಯನ್ನು ಕುರಿತು ತಪಸ್ಸು ಮಾಡಿದೆವು.ಕುಮಾರಸ್ವಾಮಿಯು ನಮಗೆ ಕನಸಿನಲ್ಲಿ ಕಾಣಿಸಿಕೊಂಡು ಪಾಟಲಿಪುತ್ರದಲ್ಲಿದ್ದ ವರ್ಷನೆಂಬ ಬ್ರಾಹ್ಮಣನಿಂದ ಸಂಪೂರ್ಣ ವಿದ್ಯೆಯನ್ನು ಪಡೆಯಲು ಆದೇಶಿಸಿದನು! ಆದರೆ ನಾವು ಪಾಟಲಿಪುತ್ರಕ್ಕೆ ಹೋಗಿ ವಿಚಾರಿಸಿದಾಗ ವರ್ಷನು ಒಬ್ಬ ಮೂರ್ಖನೆಂದು ಜನರು ಹೇಳಿದರು! ವರ್ಷನ ಮನೆಗೆ ನಾವು ಹೋಗಿ ನೋಡಲು, ಅವನ ಮನೆ ಬಹಳ ಶಿಥಿಲವಾಗಿತ್ತು! ಅಲ್ಲಿ ವರ್ಷನು ಧ್ಯಾ ನಾವಸ್ಥೆಯಲ್ಲಿದ್ದುದರಿಂದ ಅವನ ಪತ್ನಿಯನ್ನು ಅವನ ಬಗ್ಗೆ ವಿಚಾರಿಸಿದೆವು.ಆಗ ಅವಳು ಅವನ ಕಥೆ ಹೇಳಿದಳು,'ಈ ನಗರದಲ್ಲಿ ಶಂಕರಸ್ವಾಮಿ ಎಂಬ ಶ್ರೇಷ್ಠ ಬ್ರಾಹ್ಮಣನಿದ್ದನು.ಅವನ ಇಬ್ಬರು ಪುತ್ರರು, ನನ್ನ ಪತಿಯಾದ ಈ ವರ್ಷ ಹಾಗೂ ಅವನ ತಮ್ಮ ಉಪವರ್ಷ.ನನ್ನ ಪತಿ ವರ್ಷನು ಮೂರ್ಖನೂ ದರಿದ್ರನೂ ಆದರೆ, ಅವನ ತಮ್ಮ ಉಪವರ್ಷನು ತದ್ವಿರುದ್ಧ! ಅವನು ತನ್ನ ಪತ್ನಿಯನ್ನು ಇವನು ಗೃಹಪೋಷಣೆಗೆ ನಿಯೋಜಿಸಿದ್ದನು.ಇಲ್ಲೊಂದು ವಿಚಿತ್ರವೂ ಕುತ್ಸಿತವೂ ಆದ ಸಂಪ್ರದಾಯವಿದೆ.ಅದರಂತೆ ಮಳೆಗಾಲದಲ್ಲಿ ಒಬ್ಬ ಮೂರ್ಖ ಬ್ರಾಹ್ಮಣನಿಗೆ ಅಸಹ್ಯಕರ ಆಕಾರದ ತಂಬಿಟ್ಟನ್ನು ದಾನ ಮಾಡಿದರೆ ಚಳಿಗಾಲ ಮತ್ತು ಬೇಸಿಗೆಗಳಲ್ಲಿ ಸ್ನಾನದಿಂದ ಆಗುವ ಕ್ಲೇಶವಾಗುವುದಿಲ್ಲವಂತೆ! ಅದರಂತೆ ನನ್ನ ಮೈದುನನ ಹೆಂಡತಿ ನನ್ನ ಪತಿಗೆ ಅಂಥ ಜುಗುಪ್ಸಿತ ದಾನ ಮಾಡಿದಳು! ಅದನ್ನು ಇವನು ಮನೆಗೆ ತರಲು ಇವನನ್ನು ಚೆನ್ನಾಗಿ ನಿಂದಿಸಿದೆನು! ಇದರಿಂದ ದು:ಖಿತನಾದ ಇವನು ಕುಮಾರಸ್ವಾಮಿಯನ್ನು ಕುರಿತು ತಪಸ್ಸು ಮಾಡಿದನು.ಸಂತುಷ್ಟನಾದ ಕುಮಾರಸ್ವಾಮಿಯು ಇವನಿಗೆ ಸಮಸ್ತ ವಿದ್ಯೆಗಳನ್ನೂ ಅನುಗ್ರಹಿಸಿ ಅವನ್ನು ಒಬ್ಬ ಏಕಶ್ರುತಧರನು ದೊರಕಿದಾಗ ಪ್ರಕಾಶಪಡಿಸಲು ಆದೇಶಿಸಿದನು.ಹೀಗೆ ವಿದ್ವಾಂಸನಾದ ನನ್ನ ಪತಿ ವರ್ಷನು ಅಂದಿನಿಂದ ಜಪ,ಧ್ಯಾನಗಳಲ್ಲಿ ತೊಡಗಿದ್ದಾನೆ.ಏಕಶ್ರುತಧರನು ಸಿಗುವವರೆಗೂ ಅವನು ಪಾಠ ಹೇಳುವಂತಿಲ್ಲ.ಆದ್ದರಿಂದ ನೀವಿಬ್ಬರೂ ಎಲ್ಲಾದರೂ ಹುಡುಕಿ ಒಬ್ಬ ಏಕಶ್ರುತಧರನನ್ನು ಕರೆತನ್ನಿ! ಅದರಿಂದ ನೀವೂ ನನ್ನ ಪತಿಯಿಂದ ವಿದ್ಯೆಯನ್ನು ಪಡೆಯಬಹುದು!'
"ಹೀಗೆ ಅವಳು ವರ್ಷನ ಕಥೆ ಹೇಳಲು, ಅವರ ಬಡತನ ನೀಗಲೆಂದು ನಾವು ಅವಳಿಗೆ ನೂರು ಚಿನ್ನದ ನಾಣ್ಯಗಳನ್ನು ಕೊಟ್ಟು ಹೊರಟೆವು. ಅಂದಿನಿಂದ ಒಬ್ಬ ಏಕಶ್ರುತಧರನನ್ನು ಹುಡುಕುತ್ತಾ ಭೂಮಿಯೆಲ್ಲಾ ಅಲೆದರೂ ಅಂಥವನು ಎಲ್ಲೂ ಸಿಗಲಿಲ್ಲ! ಕೊನೆಗೆ ಬಳಲಿ ನಿನ್ನ ಮನೆಗೆ ಬಂದ ನಮಗೆ ಇಲ್ಲಿ ಏಕಶ್ರುತಧರನಾದ ನಿನ್ನ ಮಗನು ಸಿಕ್ಕಿದ್ದಾನೆ! ಅಮ್ಮ! ನೀನು ದಯೆಯಿಟ್ಟು ಇವನನ್ನು ನಮಗೊಪ್ಪಿಸಿದರೆ ನಾವು ವಿದ್ಯೆಯೆಂಬ ಸಂಪತ್ತನ್ನು ಪಡೆಯಲು ಹೊರಡುತ್ತೇವೆ!"
ಆಗ ವರರುಚಿಯ ತಾಯಿಯು ಹೇಳಿದಳು,"ನೀವು ಹೇಳಿದ್ದು ಸರಿ! ನನ್ನ ಈ ಮಗನು ಹುಟ್ಟಿದ ಕೂಡಲೇ ಆಕಾಶದಿಂದ,'ಏಕಶ್ರುತಧರನಾದ ಇವನು ವರ್ಷನಿಂದ ವಿದ್ಯೆ ಕಲಿಯುವನು! ಅಲ್ಲದೇ ಜಗತ್ತಿನಲ್ಲಿ ವ್ಯಾಕರಣವನ್ನು ಸ್ಥಿರಗೊಳಿಸುವನು!ಯಾವುದು ವರವೋ (ಶ್ರೇಷ್ಠವೋ) ಅದೆಲ್ಲವೂ ಇವನಿಗೆ ರುಚಿಸುವುದರಿಂದ ಇವನಿಗೆ ವರರುಚಿ ಎಂದು ಹೆಸರಾಗುತ್ತದೆ!' ಎಂದು ಅಶರೀರವಾಣಿಯಾಯಿತು! ಆದ್ದರಿಂದ ಇವನು ಬೆಳೆದು ದೊಡ್ಡವನಾಗುತ್ತಿದ್ದಂತೆ ಈ ವರ್ಷೋಪಾಧ್ಯಾಯನು ಎಲ್ಲಿರುವನೆಂದು ಚಿಂತಿಸುತ್ತಿದ್ದೆ! ಈಗ ನಿಮ್ಮಿಂದ ಆ ವರ್ಷೋಪಾಧ್ಯಾಯನ ಬಗ್ಗೆ ತಿಳಿದು ಸಂತೋಷವಾಯಿತು! ಹಾಗಾಗಿ ಇವನನ್ನು ನಿಮ್ಮೊಂದಿಗೆ ಕರೆದೊಯ್ಯಿರಿ! ಇವನು ನಿಮಗೆ ತಮ್ಮನಂತೆ!"
ಹೀಗೆ ವರರುಚಿಯ ತಾಯಿಯು ಹೇಳಿ ಅವನನ್ನು ಅವರೊಂದಿಗೆ ಕಳಿಸಿಕೊಟ್ಟಳು.ಅವರು ವರ್ಷನ ಮನೆಯನ್ನು ತಲುಪಲು, ವರ್ಷನು ಸಂತೋಷದಿಂದ ಅವರನ್ನು ಸ್ವಾಗತಿಸಿ, ವಿದ್ಯಾಭ್ಯಾಸವನ್ನು ಆರಂಭಿಸಿದನು.ಅವನು ವೇದ,ವೇದಾಂಗ ಗಳನ್ನು ವರರುಚಿಗೆ ಪಾಠ ಹೇಳತೊಡಗಿದನು.ವರರುಚಿಯು ಕೇಳಿದ ಕೂಡಲೇ ಅದನ್ನು ಕಲಿತು ಹೇಳುತ್ತಿದ್ದನು! ಎರಡು ಬಾರಿ ಕೇಳಿ ವ್ಯಾಡಿಯೂ ಮೂರು ಬಾರಿ ಕೇಳಿ ಇಂದ್ರದತ್ತನೂ ಕಲಿಯುತ್ತಿದದರು! ಆ ಅಪೂರ್ವ ವೇದಘೋಷವನ್ನು ಕೇಳಿ ಊರಿನ ಜನರೆಲ್ಲರೂ ಬಂದು ವರ್ಷನನ್ನು ಸಂಪೂಜಿಸಿದರು! ಉಪವರ್ಷನೂ ಸೇರಿದಂತೆ ಎಲ್ಲರೂ ಮಹೋತ್ಸವವನ್ನು ಆಚರಿಸಿದರು! ನಂದ ಮಹಾರಾಜನೂ ಕುಮಾರಸ್ವಾಮಿಯ ವರಪ್ರಭಾವವನ್ನು ನೋಡಿ ಆತ್ಮಾನಂದಗೊಂಡು ವರ್ಷನ ಮನೆಯನ್ನು ಸಂಪತ್ತಿನಿಂದ ತುಂಬಿಸಿದನು!
ಹೀಗೆ ವಿದ್ಯಾಭ್ಯಾಸ ಮುಗಿಸುವಷ್ಟರಲ್ಲಿ ವರರುಚಿಯ ಬಾಲ್ಯ ಕಳೆದಿತ್ತು.ಒಮ್ಮೆ ಅವನು ವ್ಯಾಡಿ,ಇಂದ್ರದತ್ತರ ಜೊತೆ ಇಂದ್ರೋತ್ಸವವನ್ನು ನೋಡಲು ಹೋಗಿದ್ದಾಗ, ಉಪವರ್ಷನ ಮಗಳು ಉಪಕೋಶೆಯನ್ನು ನೋಡಿ ಮೋಹಿತನಾದನು! ಅವಳೂ ಅವನಲ್ಲಿ ಮೋಹಿತಳಾದಳು! ಆ ರಾತ್ರಿ ಅವನು ಕಷ್ಟದಿಂದ ನಿದ್ರಿಸಿದಾಗ, ಅವನ ಕನಸಿನಲ್ಲಿ ಸಾಕ್ಷಾತ್ ಸರಸ್ವತಿಯು ಬಂದು,"ವತ್ಸ! ಈ ಉಪಕೋಶೆಯು ನಿನ್ನ ಪೂರ್ವಜನ್ಮದ ಪತ್ನಿ! ನಿನ್ನ ಸದ್ಗುಣಗಳನ್ನು ತಿಳಿದಿರುವ ಅವಳು ನಿನ್ನನ್ನು ಬಿಟ್ಟು ಬೇರಾರನ್ನೂ ವರಿಸುವುದಿಲ್ಲ! ನಾನು ಸದಾ ನಿನ್ನ ದೇಹದಲ್ಲಿ ವಾಸಿಸುತ್ತಿರುವ ಸರಸ್ವತಿ! ನಿನ್ನ ದು:ಖ ನೋಡಲಾರೆ!"
ಇದರಿಂದ ಅವನು ಸ್ವಲ್ಪ ಸಮಾಧಾನಗೊಂಡನು.ಮರುದಿನ, ಉಪಕೋಶೆಯ ಸಖಿಯೊಬ್ಬಳು ಅವನ ಬಳಿ ಬಂದು, ಅವನಿಂದ ಉಪಕೋಶೆಗೆ ಮನ್ಮಥಬಾಧೆಗೆ ಒಳಗಾಗಿದ್ದಳೆಂದೂ ಅವನೇ ಅವಳನ್ನು ಉಳಿಸಬೇಕೆಂದೂ ಹೇಳಿದಳು.ಆಗ ಅವನು ಹಿರಿಯರನ್ನು ಒಪ್ಪಿಸಿ ತಾನು ಉಪಕೋಶೆಯನ್ನು ಸ್ವೀಕರಿಸಬೇಕೆಂದನು.ಅದರಂತೆ ಅವಳು ಹಿಂದಿರುಗಿ ಉಪಕೋಶೆಯ ತಾಯಿಗೆ ವಿಷಯ ಹೇಳಲು, ಅವಳು ಉಪವರ್ಷನಿಗೆ ಹೇಳಿದಳು.ಅವನಿಂದ ಅದು ವರ್ಷನಿಗೆ ತಿಳಿಯಲು, ಅವನು ಸಂತೋಷದಿಂದ ವರರುಚಿ,ಉಪಕೋಶೆಯರ ವಿವಾಹವನ್ನು ನಿಶ್ಚಯಿಸಿದನು.ಆಗ ಅವನ ಆದೇಶದಂತೆ ವ್ಯಾಡಿಯು ಕೌಶಾಂಬಿಗೆ ಹೋಗಿ ವರರುಚಿಯ ತಾಯಿಯನ್ನು ಕರೆತಂದನು.ಅನಂತರ, ವರರುಚಿ, ಉಪಕೋಶೆಯರ ಮದುವೆ ವಿಧ್ಯುಕ್ತವಾಗಿ ನಡೆಯಿತು.
ಹೀಗಿರಲು, ವರ್ಷೋಪಾಧ್ಯಾಯನ ಶಿಷ್ಯವರ್ಗ ದೊಡ್ಡದಾಯಿತು.ಆ ಶಿಷ್ಯರಲ್ಲಿ ಪಾಣಿನಿ ಎಂಬ ಒಬ್ಬ ಮೂರ್ಖ ವಿದ್ಯಾರ್ಥಿಯಿದ್ದನು.ವಿದ್ಯೆಯನ್ನು ಪಡೆಯಲು ಅವನು ಕಷ್ಟಪಟ್ಟು ಗುರುಸೇವೆ ಮಾಡುತ್ತಿದ್ದನು.ಆಗ ವರ್ಷನ ಹೆಂಡತಿ ಅವನಿಗೆ ವಿದ್ಯೆಯನ್ನು ಪಡೆಯಲು ತಪಸ್ಸು ಮಾಡಲು ಹೇಳಿದಳು.ಅದರಂತೆ ಅವನು ಹಿಮಾಲಯಕ್ಕೆ ಹೋಗಿ ಶಿವನನ್ನು ಕುರಿತು ದುಷ್ಕರ ತಪಸ್ಸು ಮಾಡಲು, ಶಿವನು ಒಲಿದು ಅವನಿಗೆ ಸಕಲ ವಿದ್ಯೆಗಳಿಗೂ ಆಶ್ರಯವಾದ ಹೊಸ ವ್ಯಾಕರಣವನ್ನು ದಯಪಾಲಿಸಿದನು.ಅವನು ಹಿಂದಿರುಗಿ, ವರರುಚಿಯನ್ನು ವಾದಕ್ಕೆ ಕರೆದನು.ವಾದವು ಏಳು ದಿನಗಳು ನಡೆದು ಎಂಟನೆಯ ದಿನ, ವರರುಚಿಯು ಪಾಣಿನಿಯನ್ನು ಸೋಲಿಸಿದನು. ಆಗ ಆಕಾಶದಲ್ಲಿ ಶಿವನು ಭಯಂಕರವಾದ ಹುಂಕಾರ ಮಾಡಿದನು! ಇದರಿಂದ ಭೂಲೋಕದ ಐಂದ್ರ ವ್ಯಾಕರಣ ನಷ್ಟವಾಯಿತು! ಇದರಿಂದ ವರರುಚಿಯು ಪಾಣಿನಿಗೆ ಸೋತನು! ಇದರಿಂದ ವರರುಚಿಗೆ ಬೇಸರವಾಗಿ, ಶಿವನನ್ನು ಒಲಿಸಿಕೊಳ್ಳಲು ತಪಸ್ಸಿಗೆ ಹೊರಟನು.ಹಿರಣ್ಯಗುಪ್ತನೆಂಬ ಒಬ್ಬ ವ್ಯಾಪಾರಿಗೆ ಸ್ವಲ್ಪ ಹಣ ಕೊಟ್ಟು ತನ್ನ ಮನೆಯನ್ನು ನಡೆಸಲು ಹೇಳಿ, ಉಪಕೋಶೆಗೆ ವಿಷಯ ತಿಳಿಸಿ ಹಿಮಾಲಯಕ್ಕೆ ಹೊರಟನು.
ವರರುಚಿಯು ಹೀಗೆ ತಪಸ್ಸಿಗೆ ಹೋಗಿದ್ದಾಗ, ಉಪಕೋಶೆಯು ವ್ರತವನ್ನು ಆಚರಿಸುತ್ತಿರಲು, ರಾಜಪುರೋಹಿತನೂ,ಸೇನಾಧಿಪತಿಯೂ ,ಕುಮಾರಸಚಿವನೂ , ವ್ಯಾಪಾರಿ ಹಿರಣ್ಯಗುಪ್ತನೂ ಅವಳನ್ನು ನೋಡಿ ಕಾಮಮೋಹಿತರಾಗಿ ಅವಳನ್ನು ಅನುಭವಿಸಲು ಯತ್ನಿಸಿದರು! ಆದರೆ ಅವಳೇ ತನ್ನ ಬುದ್ಧಿವಂತಿಕೆಯಿಂದ ಅವರನ್ನು ಮೂರ್ಖರನ್ನಾಗಿಸಿದಳು!(ಈ ಕಥೆಯನ್ನು ಇನ್ನೊಂದು ಸಂಚಿಕೆಯಲ್ಲಿ ನೋಡೋಣ) ಇದರಿಂದ ರಾಜನಿಗೆ ಸಂತೋಷವಾಗಿ ಅವನು ಉಪಕೋಶೆಯನ್ನು ತನ್ನ ತಂಗಿಯೆಂದು ಸ್ವೀಕರಿಸಿ ಅವಳಿಗೆ ಸಾಕಷ್ಟು ಸಂಪತ್ತನ್ನು ನೀಡಿದನು.ಈ ವಿಷಯ ತಿಳಿದ ವರ್ಷೋಪವರ್ಷರಿಗೆ ಬಹಳ ಸಂತೋಷವಾಯಿತು.ಈ ಮಧ್ಯೆ, ವರರುಚಿಯು ಹಿಮಾಲಯದಲ್ಲಿ ದುಷ್ಕರ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳಲು, ಶಿವನು ಅವನಿಗೂ ಪಾಣಿನೀಯ ವ್ಯಾಕರಣ ಶಾಸ್ತ್ರವನ್ನು ಅನುಗ್ರಹಿಸಿದನು.ಅಲ್ಲಿಂದ ಹಿಂದಿರುಗಿದ ಅವನು ತನ್ನ ಪತ್ನಿಯ ಪಾತಿವ್ರತ್ಯದ ಬಗ್ಗೆ ತಿಳಿದು ಸಂತೋಷಗೊಂಡನು.ಆಗ ವರ್ಷನು ಹೊಸ ವ್ಯಾಕರಣವನ್ನು ಕೇಳಲು ಇಷ್ಟಪಡಲು, ಕುಮಾರಸ್ವಾಮಿಯೇ ಅದನ್ನು ಪ್ರಕಾಶಪಡಸಿದನು.
-ಕಥಾಸರಿತ್ಸಾಗರದಿಂದ
ಮುಂದುವರೆಯುತ್ತದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ