ಒಮ್ಮೆ ಕೈಲಾಸದಲ್ಲಿ ಪಾರ್ವತಿಯು ಶಿವನನ್ನು ಯಾರೂ ಕೇಳಿರದ ಒಂದು ಅಪೂರ್ವ ಕಥೆಯನ್ನು ಹೇಳಬೇಕೆಂದು ಕೇಳಿಕೊಂಡಳು.ಆಗ ಪರಶಿವನು,"ದೇವತೆಗಳು ನಿತ್ಯ ಸುಖಿಗಳು.ಮನುಷ್ಯರು ನಿತ್ಯ ದು:ಖಿಗಳು.ಆದ್ದರಿಂದ ಇವರಿಬ್ಬರನ್ನೂ ಬಿಟ್ಟು, ವಿದ್ಯಾಧರರ ಕಥೆಗಳನ್ನು ಹೇಳುತ್ತೇನೆ ಕೇಳು!" ಎಂದು ನಂದಿಗೆ ಒಳಗೆ ಯಾರನ್ನೂ ಬಿಡಬಾರದೆಂದು ಹೇಳಿ ಕಥೆಯನ್ನು ಹೇಳಲು ಆರಂಭಿಸಿದನು.ಆಷ್ಟರಲ್ಲಿ ಪುಷ್ಪದಂತನೆಂಬ ಗಣನು ಶಿವನ ದರ್ಶನಕ್ಕಾಗಿ ಬಂದನು.ಆದರೆ ನಂದಿಯು ಅವನನ್ನು ಒಳಗೆ ಬಿಡದಿರಲು, ಅವನು ದುಂಬಿಯ ರೂಪ ತಾಳಿ ನಂದಿಗೆ ತಿಳಿಯದಂತೆ ಒಳಹೊಕ್ಕನು! ಅಲ್ಲಿ ಮರೆಯಲ್ಲಿ ನಿಂತು ಶಿವನು ಪಾರ್ವತಿಗೆ ಹೇಳಿದ ಅಪೂರ್ವ ಕಥೆಗಳನ್ನು ಕೇಳಿದನು.ಅನಂತರ ಮನೆಗೆ ಹೋಗಿ,ತಡೆಯಲಾರದೇ ಆ ಕಥೆಗಳನ್ನು ತನ್ನ ಪತ್ನಿ ಜಯೆಗೆ ಹೇಳಿದನು.ಮರುದಿನ, ಪಾರ್ವತಿಯ ದಾಸಿಯೇ ಆಗಿದ್ದ ಜಯೆ, ಅಪೂರ್ವ ಕಥೆಯೆಂದು ಅದನ್ನೇ ಪಾರ್ವತಿಗೆ ಹೇಳಿದಳು! ಪಾರ್ವತಿಗೆ ಕೋಪ ಬಂದು, ಶಿವನನ್ನು,"ಅಪೂರ್ವ ಕಥೆಯೆಂದು ಹೇಳಿದೆನಲ್ಲಾ? ಅದು ನಮ್ಮ ಜಯೆಗೂ ಗೊತ್ತಿದೆ!" ಎಂದು ಗದರಿಕೊಂಡಳು! ಆಗ ಆಶ್ಚರ್ಯಚಕಿತನಾದ ಶಿವನು ದಿವ್ಯ ದೃಷ್ಟಿಯಿಂದ ನಡೆದುದನ್ನು ತಿಳಿದು ಪಾರ್ವತಿಗೆ ಹೇಳಿದನು.ಇದರಿಂದ ಕುಪಿತಳಾದ ಪಾರ್ವತಿಯು ಪುಷ್ಪದಂತನನ್ನು ಕರೆಸಿ,"ಕಥೆಗಳನ್ನು ಕದ್ದು ಕೇಳಿದ ತಪ್ಪಿಗೆ ಮನುಷ್ಯಲೋಕದಲ್ಲಿ ಹುಟ್ಟು, ಹೋಗು!" ಎಂದು ಶಪಿಸಿದಳು! ಆಗ ಮಾಲ್ಯವಂತನೆಂಬ ಇನ್ನೊಬ್ಬ ಗಣ, ಇಷ್ಟು ಸಣ್ಣ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆಯೇ ಎಂದು ಪುಷ್ಪದಂತನನ್ನು ಸಮರ್ಥಿಸಿಕೊಂಡನು.ಅದರಿಂದ ಮತ್ತಷ್ಟು ಕುಪಿತಳಾದ ಪಾರ್ವತಿಯು ಅವನಿಗೂ ಮನುಷ್ಯಲೋಕದಲ್ಲಿ ಹುಟ್ಟುವಂತೆ ಶಪಿಸಿದಳು! ಆಗ ಇಬ್ಬರೂ ಗಣಗಳು ತಪ್ಪಾಯಿತೆಂದು ಪಾರ್ವತಿಯ ಕಾಲಿಗೆ ಬೀಳಲು, ಪಾರ್ವತಿಯು ಕರಗಿ, ಅವರಿಗೆ ಉಶ್ಶಾಪವನ್ನು ನೀಡಿದಳು,"ಪುಷ್ಪದಂತನು ವಿಂಧ್ಯಾಟವಿಗೆ ಬಂದು ಕಾಣಭೂತಿಯೆಂಬ ಶಾಪಗ್ರಸ್ತ ಪಿಶಾಚನನ್ನು ಕಂಡಾಗ ತನ್ನ ಪೂರ್ವಜನ್ಮ ಹಾಗೂ ಈ ಕಥೆಗಳು ನೆನಪಾಗುತ್ತವೆ.ಆಗ ಅವನು ಆ ಪಿಶಾಚನಿಗೆ ಈ ಕಥೆಗಳನ್ನು ಹೇಳಲು ತನ್ನ ಶಾಪವಿಮೋಚನೆಯಾಗುತ್ತದೆ.ಮುಂದೆ, ಮಾಲ್ಯವಂತನು ಅದೇ ಕಾಡಿಗೆ ಬಂದು ಆ ಪಿಶಾಚನನ್ನು ಕಾಣಲು, ಆ ಪಿಶಾಚನು ಈ ಕಥೆಗಳನ್ನು ಅವನಿಗೆ ಹೇಳಲು ಪಿಶಾಚನ ಶಾಪವಿಮೋಚನೆಯಾಗಿ ಅವನು ಯಕ್ಷನಾಗುತ್ತಾನೆ.ಅನಂತರ, ಮಾಲ್ಯವಂತನು ಈ ಕಥೆಗಳನ್ನು ಲೋಕದಲ್ಲಿ ಪ್ರಚಾರ ಮಾಡಲು,ಅವನ ಶಾಪವಿಮೋಚನೆಯಾಗುತ್ತದೆ!"
ಅಂತೆಯೇ ಪುಷ್ಪದಂತನು ವರರುಚಿಯೆಂಬ ಬ್ರಾಹ್ಮಣನಾಗಿ ಹುಟ್ಟಿ ಬೆಳೆದು ಮಹಾಪಂಡಿತನಾದನು.ಅವನದು ದೊಡ್ಡ ಕಥೆ.ಅದನ್ನು ಇನ್ನೊಂದು ಸಂಚಿಕೆಯಲ್ಲಿ ನೋಡೋಣ.ಸಂಕ್ಷೇಪವಾಗಿ ಅವನು ಯೋಗನಂದನ ಮಂತ್ರಿಯಾಗಿ ಜೀವನದಲ್ಲಿ ಬೇಸರ ಹೊಂದಿ ವಿಂಧ್ಯಾಟವಿಗೆ ಬಂದನು.ಅಲ್ಲಿ ಕಾಣಭೂತಿಯೆಂಬ ಪಿಶಾಚನನ್ನು ಕಾಣಲು, ಅವನಿಗೆ ಪೂರ್ವಜನ್ಮದ ನೆನಪಾಗಿ ಶಿವನು ಹೇಳಿದ ಆ ಅಪೂರ್ವ ಕಥೆಗಳನ್ನು ಹೇಳಿದನು.ಇದರಿಂದ ಅವನ ಶಾಪವಿಮೋಚನೆಯಾಗಿ ಅವನು ಪುನಃ ಪುಷ್ಪದಂತ ಗಣನಾದನು.
ಮಾಲ್ಯವಂತನು ಗುಣಾಢ್ಯನೆಂಬ ಬ್ರಾಹ್ಮಣನಾಗಿ ಜನಿಸಿ, ಪ್ರತಿಷ್ಠಾನದ ರಾಜ ಸಾತವಾಹನನ ಮಂತ್ರಿಯಾದನು.ಒಮ್ಮೆ, ಸಾತವಾಹನನು ತನ್ನ ರಾಣಿಯರೊಂದಿಗೆ ಜಲಕ್ರೀಡೆಯಾಡುತ್ತಾ ಅವರು ಮೇಲೆ ನೀರೆರೆಚಲು,ಅವರಲ್ಲಿನ ಪ್ರಧಾನ ರಾಣಿ,"ಮೋದಕೈಸ್ತಾಡಯ!" ಎಂದು ಸಂಸ್ಕೃತದಲ್ಲಿ ಹೇಳಿದಳು.ಸ್ಥೂಲವಾಗಿ ನೋಡಿದರೆ ಇದರ ಅರ್ಥ, ಮೋದಕಗಳಿಂದ ಹೊಡೆ ಎಂದಾಗುತ್ತದೆ.ಹಾಗೆಯೇ ತಿಳಿದುಕೊಂಡ ರಾಜ, ಸೇವಕರಿಂದ ಮೋದಕಗಳನ್ನು ತರಿಸಿ ಅವಳಿಗೆ ಹೊಡೆಯಲು ಹೊರಟ! ಆಗ ರಾಣಿಯು ನಗುತ್ತಾ,"ಹೇ ರಾಜಾ! ಮೋದಕಗಳನ್ನೇಕೆ ತರಿಸಿದೆ? ನಾನು ಹೇಳಿದ್ದು, ಮಾ ಉದಕೈ: ತಾಡಯ, ಅಂದರೆ, ನೀರಿನಿಂದ ಹೊಡೆಯಬೇಡ ಎಂದು! ಸಂದರ್ಭ ತಿಳಿಯಬೇಡವೇ?"ಎಂದಳು.ಇದರಿಂದ ಸಾತವಾಹನನಿಗೆ ಅವಮಾನವಾದಂತಾಯಿತು.ತಾನು ಒಳ್ಳೆಯ ಪಂಡಿತನಾಗಬೇಕೆಂದು ಯೋಚಿಸಿ, ಕಷ್ಟಪಟ್ಟು ಕಲಿತರೆ ಎಷ್ಟು ಬೇಗ ಸಂಸ್ಕೃತ ಪಾಂಡಿತ್ಯ ಪ್ರಾಪ್ತವಾಗುವುದೆಂದು ಗುಣಾಢ್ಯನನ್ನೂ ಶರ್ವರ್ಮನೆಂಬ ಪಂಡಿತನನ್ನೂ ಕೇಳಿದ.ಆಗ ಗುಣಾಢ್ಯನು, "ಅದಕ್ಕೆ ವ್ಯಾಕರಣ ಕಲಿಯಬೇಕು. ಅದನ್ನು ಕಲಿಯಲು ಹನ್ನೆರಡು ವರ್ಷಗಳು ಬೇಕು.ಆದರೆ ನಾನು ನಿನಗೆ ಆರು ವರ್ಷಗಳಲ್ಲಿ ಕಲಿಸುತ್ತೇನೆ", ಎಂದನು.ಆಗ ಶರ್ವವರ್ಮನು,"ನಾನು ಆರೇ ತಿಂಗಳುಗಳಲ್ಲಿ ಕಲಿಸುತ್ತೇನೆ ", ಎಂದನು.ಆಗ ಸಿಟ್ಟಿಗೆದ್ದ ಗುಣಾಢ್ಯನು,"ನೀನೇನಾದರೂ ಆರು ತಿಂಗಳುಗಳಲ್ಲಿ ಕಲಿಸಿದರೆ ನಾನು ಸಂಸ್ಕೃತ, ಪ್ರಾಕೃತ, ಮತ್ತು ದೇಶಭಾಶೆಗಳನ್ನು ಬಿಟ್ಟುಬಿಡುತ್ತೇನೆ!" ಎಂದು ಪ್ರತಿಜ್ಞೆ ಮಾಡಿದನು.ಅದಕ್ಕೆ ಶರ್ವವರ್ಮನು,"ನಾನು ಆರು ತಿಂಗಳುಗಳಲ್ಲಿ ಕಲಿಸಲಾಗದಿದ್ದರೆ ನಿನ್ನ ಪಾದುಕೆಗಳನ್ನು ಹನ್ನೆರಡು ವರ್ಷಗಳು ನನ್ನ ತಲೆಯ ಮೇಲೆ ಹೊರುತ್ತೇನೆ!" ಎಂದನು.
ಶರ್ವವರ್ಮನು ಆ ರಾತ್ರಿಯೇ ಕುಮಾರಸ್ವಾಮಿಯ ಮಂದಿರಕ್ಕೆ ಹೋಗಿ ತಪಸ್ಸು ಮಾಡಿದನು.ಅವನ ತಪಸ್ಸಿಗೆ ಒಲಿದ ಕುಮಾರಸ್ವಾಮಿಯು ಪ್ರತ್ಯಕ್ಷನಾಗಿ ಅವನಿಗೆ ಕಾತಂತ್ರ ಮತ್ತು ಕಾಲಾಪಕ ಎಂಬ ಹೆಸರುಗಳ ಚಿಕ್ಕ ವ್ಯಾಕರಣವನ್ನು ದಯಪಾಲಿಸಿದನು.ಅದರಿಂದ ಶರ್ವವರ್ಮನು ಸಾತವಾಹನನಿಗೆ ಕ್ಷಣಮಾತ್ರದಲ್ಲಿ ಮನಸ್ಸಿನ ಮೂಲಕವೇ ಎಲ್ಲಾ ವಿದ್ಯೆಗಳನ್ನೂ ನೀಡಿದನು! ಸಂತೋಷಗೊಂಡ ರಾಜನು ಅವನನ್ನು ಸನ್ಮಾನಿಸಿ ಮರುಕಚ್ಛ ಎಂಬ ಸ್ಥಳಕ್ಕೆ ರಾಜನನ್ನಾಗಿಯೂ ಮಾಡಿದನು! ಇದರಿಂದ ಮನನೊಂದ ಗುಣಾಢ್ಯನು ತಾನು ಮೊದಲೇ ಹೇಳಿದಂತೆ ಎಲ್ಲಾ ಭಾಷೆಗಳನ್ನೂ ಬಿಟ್ಟು ಮೌನವಾಗಿ ವಿಂಧ್ಯಾಟವಿಗೆ ತನ್ನ ಇಬ್ಬರು ಶಿಷ್ಯರೊಂದಿಗೆ ಹೊರಟುಹೋದನು.ಅಲ್ಲಿ ಅವನು ಪಿಶಾಚಗಳಿಂದ ಪೈಶಾಚೀ ಭಾಷೆಯನ್ನು ಕಲಿತು ಕಾಣಭೂತಿಯೆಂಬ ಪಿಶಾಚನಿಂದ ಶಿವನು ಹೇಳಿದ್ದ ಆ ದಿವ್ಯ ಕಥೆಗಳನ್ನು ಕೇಳಿದನು.ಹಾಗೆಯೇ ಅರಣ್ಯದಲ್ಲಿ ಮಸಿಯಿಲ್ಲದ ಕಾರಣ,ತನ್ನ ರಕ್ತದಲ್ಲೇ ಆ ಎಲ್ಲಾ ಕಥೆಗಳನ್ನೂ ಏಳು ವರ್ಷಗಳಲ್ಲಿ ಬೃಹತ್ಕಥೆಯೆಂಬ ಗ್ರಂಥವಾಗಿ ಬರೆದನು.ಅದು ಏಳು ಲಕ್ಷ ಶ್ಲೋಕಗಳುಳ್ಳ ಏಳು ವಿದ್ಯಾಧರರ ಕಥೆಯಾಗಿತ್ತು. ಅದನ್ನು ನೋಡಿ ಕಾಣಭೂತಿಯು ಶಾಪಮುಕ್ತನಾದನು.ತನ್ನ ಪೂರ್ವಜನ್ಮವನ್ನು ನೆನೆಸಿಕೊಂಡ ಗುಣಾಢ್ಯನು ತನ್ನ ಗ್ರಂಥವನ್ನು ಪ್ರಚಾರ ಮಾಡಿದರೆ ತನ್ನ ಶಾಪಮುಕ್ತಿಯಾಗುವುದೆಂದು ಅರಿತು ಅದನ್ನು ತನ್ನ ಶಿಷ್ಯರ ಮೂಲಕ ಸಾತವಾಹನನಿಗೆ ಕಳಿಸಿದನು.ಪೈಶಾಚೀಭಾಷೆಯ, ರಕ್ತದಲ್ಲಿ ಬರೆದ, ಏಳು ಲಕ್ಷ ಶ್ಲೋಕಗಳ ಆ ದೊಡ್ಡ ಗ್ರಂಥವನ್ನು ನೀರಸವೆಂದು ಉಪೇಕ್ಷಿಸಿ ರಾಜನು ತಿರಸ್ಕರಿಸಿದನು! ಶಿಷ್ಯರು ಪುನಃ ಅದನ್ನು ಗುಣಾಢ್ಯನ ಬಳಿಗೆ ತರಲು,ಬಹಳ ದುಃಖಗೊಂಡ ಗುಣಾಢ್ಯನು ಒಂದು ಅಗ್ನಿಕುಂಡವನ್ನು ನಿರ್ಮಿಸಿ, ತನ್ನ ಗ್ರಂಥದ ಒಂದೊಂದು ಪತ್ರವನ್ನೂ ಓದುತ್ತಾ ಬೆಂಕಿಗೆ ಹಾಕತೊಡಗಿದನು!
ಈ ಮಧ್ಯೆ, ಸಾತವಾಹನ ರಾಜನು ಯಾವುದೋ ಕಾರಣಕ್ಕೆ ಅಸ್ವಸ್ಥನಾದನು.ಇದಕ್ಕೆ ಕಾರಣ, ಒಣಗಿದ ಮಾಂಸ ತಿಂದದ್ದು ಎಂದು ವೈದ್ಯರು ಹೇಳಿದರು.ಅದೇಕೆ ಒಣಗಿದ ಮಾಂಸದ ಅಡುಗೆ ಮಾಡುತ್ತಿರುವರೆಂದು ಅಡುಗೆಯವರು ನನ್ನು ವಿಚಿರಿಸಿದಾಗ, ಅವರು, ಬೇಡರು ಅಂಥ ಮಾಂಸವನ್ನೇ ಕೊಡುತ್ತಿರುವರೆಂದು ಹೇಳಿದರು.ಬೇಡರನ್ನು ವಿಚಾರಿಸಲು, ಅವರು,"ಇಲ್ಲಿಗೆ ಸ್ವಲ್ಪ ದೂರದಲ್ಲಿ ಒಬ್ಬ ಬ್ರಾಹ್ಮಣನು ಒಂದೊಂದೇ ಪತ್ರ ಓದುತ್ತಾ ಅದನ್ನು ಬೆಂಕಿಗೆ ಹಾಕುತ್ತಿದ್ದಾನೆ.ಅವನ ಕಥೆಯನ್ನು ಕೇಳುತ್ತಾ ಎಲ್ಲಾ ಪ್ರಾಣಿಗಳೂ ಆಹಾರ, ನೀರು ಬಿಟ್ಟು ಅಲ್ಲೇ ನಿಂತು ಕೇಳುತ್ತಿವೆ.ಅದರಿಂದ ಅವುಗಳ ಮಾಂಸ ಒಣಗಿದೆ!" ಎಂದರು.ಇದನ್ನು ಕೇಳಿ ಆಶ್ಚರ್ಯಗೊಂಡ ಸಾತವಾಹನನು ಆ ಬೇಡರೊಂದಿಗೆ ಹೋಗಿ ಗುಣಾಢ್ಯನನ್ನು ಕಂಡ! ಅವನಿಗೆ ನಮಸ್ಕರಿಸಿ ಅವನ ವೃತ್ತಾಂತವನ್ನು ಕೇಳಲು, ಅವನು ತನ್ನ ಶಾಪದ ಕಥೆಯನ್ನು ಹೇಳಿದನು.ಆಗ ತನ್ನ ತಪ್ಪನ್ನರಿತ ಸಾತವಾಹನನು, ಶಿವನು ಹೇಳಿದ ಆ ದಿವ್ಯ ಕಥೆಯನ್ನು ತನಗೆ ಕೊಡಲು ಕೇಳಿದನು.ಆಗ ಗುಣಾಢ್ಯನು,"ಆರು ಲಕ್ಷ ಶ್ಲೋಕಗಳ ಗ್ರಂಥವನ್ನು ನಾನಾಗಲೇ ಸುಟ್ಟುಹಾಕಿಬಿಟ್ಟೆನಪ್ಪ! ಇನ್ನು ಉಳಿದಿರುವುದು ಒಂದು ಲಕ್ಷ ಶ್ಲೋಕಗಳಷ್ಟು ಗ್ರಂಥ ಮಾತ್ರ! ಅದನ್ನೇ ನಿನಗೆ ಕೊಡುತ್ತೇನೆ! ತೆಗೆದುಕೋ!" ಎಂದು ಅವನಿಗೆ ಆ ತನ್ನ ಗ್ರಂಥವನ್ನು ಕೊಟ್ಟು ಯೋಗದಿಂದ ತನ್ನ ಶರೀರವನ್ನು ಬಿಟ್ಟು ಹಿಂದಿನಂತೆ ಗಣನಾದನು.
ಸಾತವಾಹನನು, ನರವಾಹನದತ್ತನ ಅದ್ಭುತ ಕಥೆಯುಳ್ಳ ಬೃಹತ್ಕಥೆಯೆಂಬ ಆ ಗ್ರಂಥಕ್ಕೆ ಈ ಕಥೆಯ ಪೀಠೀಕೆಯಾಗಿ ಆ ಭಾಷೆಯಲ್ಲೇ ಕಥಾಪೀಠವನ್ನು ಬರೆದನು.ಅಲ್ಲಿಂದ ಮುಂದೆ ಆ ಗ್ರಂಥ ಆ ನಗರದಲ್ಲಿ ಪ್ರಸಿದ್ಧವಾಗಿ ಮೂರು ಲೋಕಗಳಲ್ಲೂ ವಿಖ್ಯಾತವಾಯಿತು.
ಹೀಗೆ ಶಿವನು ಹೇಳಿದ ಬೃಹತ್ಕಥೆ , ಗುಣಾಢ್ಯನ ಮೂಲಕ ಭೂಮಿಗೆ ಬಂದಿತು.ಆದರೆ ಬೃಹತ್ಕಥೆ ಈಗ ಉಪಲಬ್ಧವಿಲ್ಲ.ಆದರೆ ಅದರ ಸಂಸ್ಕೃತ ಅನುವಾದಗಳಾದ ಸೋಮದೇವನ ಕಥಾಸರಿತ್ಸಾಗರ, ಕ್ಷೇಮೇಂದ್ರನ ಬೃಹತ್ಕಥಾಮಂಜರಿ, ಮತ್ತು ಬುಧಸ್ವಾಮಿಯ ಬೃಹತ್ಕಥಾಶ್ಲೋಕಸಂಗ್ರಹ, ಈ ಮೂರು ಗ್ರಂಥಗಳು ಲಭ್ಯವಿದ್ದು, ಇವುಗಳಿಂದ ನಾವು ಬೃಹತ್ಕಥೆಯ ಸ್ವರೂಪವನ್ನು ಅರಿಯಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ