ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ /
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ //
" ಎಲೈ ಭರತರ್ಷಭ! ಧರ್ಮ,ಅರ್ಥ,ಕಾಮ, ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ವಿಷಯದಲ್ಲಿ ಇಲ್ಲಿರುವುದೇ ಇನ್ನೆಲ್ಲಿಯೂ ಇರುವುದು! ಇಲ್ಲಿಲ್ಲದಿರುವುದು ಇನ್ನೆಲ್ಲಿಯೂ ಇಲ್ಲ!"
ಹೀಗೆ ಮಹಾಭಾರತದಲ್ಲಿ ಇಲ್ಲದ ವಿಷಯವೇ ಇಲ್ಲ ಎನ್ನಬಹುದು.ಒಮ್ಮೆ ದೇವತೆಗಳು ಮಹಾಭಾರತವನ್ನೂ ವೇದಗಳನ್ನೂ ತಕ್ಕಡಿಯ ಒಂದೊಂದು ತಟ್ಟೆಯಲ್ಲಿಟ್ಟು ತೂಗಿದಾಗ, ಮಹಾಭಾರತವೇ ಹೆಚ್ಚು ತೂಗಿತಂತೆ! ಹೀಗೆ ಮಹಾಭಾರತವು ವೇದಗಳ ಸಾರವೂ ಆಗಿದೆ.ಹಾಗಾಗಿಯೇ ಮಹಾಭಾರತವನ್ನು ಪಂಚಮ ವೇದ ಎನ್ನುತ್ತಾರೆ.
ಇಂಥ ಅದ್ಭುತ ಗ್ರಂಥವಾದ ಮಹಾಭಾರತವನ್ನು ರಚಿಸಿದವರು ವೇದವ್ಯಾಸ ಮುನಿಗಳು.ಅವರ ಮೈಬಣ್ಣ ಕಪ್ಪಾದುದರಿಂದ ಕೃಷ್ಣನೆಂದೂ ದ್ವೀಪದಲ್ಲಿ ಹುಟ್ಟಿದುದರಿಂದ ದ್ವೈಪಾಯನನೆಂದೂ ಹೀಗೆ ಕೃಷ್ಣ ದ್ವೈಪಾಯನರೆಂದು ಹೆಸರಾದ ಅವರು, ಒಂದೇ ಆಗಿದ್ದ ವೇದವನ್ನು ಅಧ್ಯಯನದ ಅನುಕೂಲಕ್ಕಾಗಿ ನಾಲ್ಕಾಗಿ ವಿಭಾಗಿಸಿದುದರಿಂದ ವೇದವ್ಯಾಸರೆಂದು ಹೆಸರಾದರು.ಅವರು ಸಂಸ್ಕೃತದಲ್ಲಿ ರಚಿಸಿದ ಮಹಾಭಾರತ, ಔತ್ತರೇಯ, ದಾಕ್ಷಿಣಾತ್ಯ, ಮೊದಲಾದ ಪಾಠಗಳಲ್ಲಿ ದೊರೆಯುತ್ತದೆ.ಈ ಪಾಠಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ.ವ್ಯಾಸರು ಮಹಾಭಾರತವನ್ನು ಹೇಗೆ ರಚಿಸಿದರು ಎಂಬ ಕಥೆ ದಾಕ್ಷಿಣಾತ್ಯ ಪಾಠದಲ್ಲಿ ಕಂಡುಬರುತ್ತದೆ.ಆ ಕಥೆಯನ್ನು ಈಗ ನೋಡೋಣ.
ಕೌರವ,ಪಾಂಡವರ ಜೀವನ ಹಾಗೂ ಯುದ್ಧಗಳಿಗೆ ಪ್ರತ್ಯಕ್ಷದರ್ಶಿಗಳಾದ ವ್ಯಾಸರು ಅವರ ಇಡೀ ಕಥೆಯನ್ನು ಕಾವ್ಯದ ರೂಪದಲ್ಲಿ ದಾಖಲಿಸಬೇಕೆಂದು ಯೋಚಿಸಿದರು.ಆದರೆ ಅವರಿಗೆ ಅದನ್ನು ಬರೆದುಕೊಳ್ಳಬಲ್ಲ ಯೋಗ್ಯ ಲಿಪಿಕಾರ ಬೇಕೆನಿಸಿತು.ಅಂಥ ಲಿಪಿಕಾರ ಯಾರೆಂದು ಅವರಿಗೆ ಹೊಳೆಯಲಿಲ್ಲ.ಈ ವಿಷಯವಾಗಿಯೇ ಅವರು ಯೋಚಿಸುತ್ತಿದ್ದಾಗ ಸೃಷ್ಟಿಕರ್ತನಾದ ಬ್ರಹ್ಮದೇವನು ಪ್ರತ್ಯಕ್ಷನಾದ! ವ್ಯಾಸರು ಬ್ರಹ್ಮದೇವನನ್ನು ಸತ್ಕರಿಸಿ, ತಾವು ಕಾವ್ಯವೊಂದನ್ನು ರಚಿಸಲು ನಿರ್ಧರಿಸಿರುವುದಾಗಿಯೂ ಅದಕ್ಕೆ ಯೋಗ್ಯ ಲಿಪಿಕಾರ ಯಾರೆಂದು ತಿಳಿಯುತ್ತಿಲ್ಲವೆಂದೂ ಹೇಳಿದರು.ಆಗ ಬ್ರಹ್ಮನು ಅವರ ಕಾವ್ಯವು ಮಹಾಕಾವ್ಯವೇ ಆಗುವುದೆಂದು ಹೇಳಿ,ವಿದ್ಯಾಧಿದೇವತೆಯಾದ ಗಣೇಶನೇ ಅದಕ್ಕೆ ಯೋಗ್ಯ ಲಿಪಿಕಾರನಾಗಬಹುದೆಂದು ಸೂಚಿಸಿ ಹೊರಟುಹೋದನು.ಆಗ ವ್ಯಾಸರು ಗಣೇಶನನ್ನು ಧ್ಯಾನಿಸಲು, ಕೂಡಲೇ ಗಣೇಶನು ಪ್ರತ್ಯಕ್ಷನಾದನು.ವ್ಯಾಸರು,"ದೇವ! ನಾನು ಮಹಾಭಾರತವೆಂಬ ಕಾವ್ಯವನ್ನು ರಚಿಸಲು ನಿರ್ಧರಿಸಿದ್ದೇನೆ! ನಾನು ಅದನ್ನು ಹೇಳುತ್ತಿರುವಂತೆ ನೀನು ಕೃಪೆ ಮಾಡಿ ಬರೆದುಕೊಳ್ಳಬೇಕು", ಎಂದು ಕೇಳಿಕೊಂಡರು.ಅದಕ್ಕೆ ಗಣೇಶನು,"ಆಗಲಿ ಋಷಿವರ್ಯ! ಆದರೆ ನನ್ನದೊಂದು ನಿಬಂಧನೆಯಿದೆ.ನಾನು ಒಮ್ಮೆ ಬರೆಯಲು ಆರಂಭಿಸಿದರೆ ನಿಲ್ಲಿಸುವುದಿಲ್ಲ.ಆದ್ದರಿಂದ ನೀವು ನಿಲ್ಲಿಸದೇ ಹೇಳುತ್ತಿದ್ದರೆ ನಾನು ಬರೆದುಕೊಡುತ್ತೇನೆ!" ಎಂದನು.ಆಗ ವ್ಯಾಸರು,"ನನ್ನದೂ ಒಂದು ನಿಬಂಧನೆಯಿದೆ.ನಾನು ಏನು ಹೇಳಿದರೂ ನೀನು ಅದನ್ನು ಅರ್ಥ ಮಾಡಿಕೊಳ್ಳದೇ ಬರೆಯಬಾರದು", ಎಂದರು.ಅದಕ್ಕೆ ಗಣೇಶನು ಓಂಕಾರದ ಮೂಲಕ ಒಪ್ಪಿಗೆಯಿತ್ತನು.
ಹೀಗೆ ಒಪ್ಪಂದ ಮಾಡಿಕೊಂಡು ಇಬ್ಬರೂ ಮಹಾಭಾರತದ ರಚನೆಗೆ ತೊಡಗಿದರು.ವ್ಯಾಸರು ಶ್ಲೋಕಗಳನ್ನು ರಚಿಸುತ್ತಿದ್ದಂತೆ ಗಣೇಶನು ಅವುಗಳನ್ನು ಅರ್ಥ ಮಾಡಿಕೊಂಡು ಬರೆಯತೊಡಗಿದನು.ಆದರೆ ಮಧ್ಯೆ ಮಧ್ಯೆ ವ್ಯಾಸರು ಕಷ್ಟಕರವಾದ, ರಹಸ್ಯಾರ್ಥವನ್ನು ಹೊಂದಿದ್ದ ಅನೇಕ ಕೂಟಶ್ಲೋಕಗಳನ್ನು ರಚಿಸತೊಡಗಿದರು.ಅಂಥವನ್ನು ಅರ್ಥ ಮಾಡಿಕೊಳ್ಳಲು ವಿದ್ಯಾಧಿದೇವತೆಯಾದ ಗಣೇಶನೂ ಸ್ವಲ್ಪ ಹೊತ್ತು ಕಾಯಬೇಕಾಯಿತು! ಅಷ್ಟರಲ್ಲಿ ವ್ಯಾಸರು ಮುಂದಿನ ಶ್ಲೋಕಗಳನ್ನು ರಚಿಸಿಕೊಂಡು ಹೋಗಿಬಿಡುತ್ತಿದ್ದರು! ಅಂತೂ ಆ ಕೂಟ ಶ್ಲೋಕಗಳನ್ನೂ ಅರ್ಥ ಮಾಡಿಕೊಂಡು,ಮುಂದಿನ ಶ್ಲೋಕಗಳನ್ನೂ ಸ್ಮರಣೆಯಲ್ಲಿಟ್ಟುಕೊಂಡು ಗಣೇಶನು ವ್ಯಾಸರ ಮಹಾಭಾರತವನ್ನು ಬರೆದುಕೊಟ್ಟನು.ಹೀಗೆ ವ್ಯಾಸರು ಮಹಾಭಾರತವನ್ನು ಮೂರು ವರ್ಷಗಳಲ್ಲಿ ರಚಿಸಿದರು.ಸ್ವಯಂ ವ್ಯಾಸರೇ ತಾವು ರಚಿಸಿರುವ ರಹಸ್ಯಮಯವಾದ ಆ ಕೂಟ ಶ್ಲೋಕಗಳು ಒಟ್ಟು ೮,೮೦೦ ಎಂದು ಹೇಳಿಕೊಂಡಿದ್ದಾರೆ.ಅವುಗಳ ಅರ್ಥ, ತಮಗೆ ಗೊತ್ತು, ತಮ್ಮ ಪುತ್ರರಾದ ಶುಕರಿಗೆ ಗೊತ್ತು, ಹಾಗೂ ಸಂಜಯನಿಗೆ ಗೊತ್ತಿದ್ದರೂ ಗೊತ್ತಿರಬಹುದು,ಗೊತ್ತಿಲ್ಲದೆಯೂ ಇರಬಹುದು ಎಂದು ಹೇಳಿದ್ದಾರೆ.ಉಪಕಥೆಗಳನ್ನು ಬಿಟ್ಟು ಮೂಲಕಥೆಯುಳ್ಳ ಗ್ರಂಥ ಒಟ್ಟು ಇಪ್ಪತ್ತು ನಾಲ್ಕು ಸಾವಿರ ಶ್ಲೋಕಗಳಷ್ಟಾಗುತ್ತದೆ ಎಂದು ಹೇಳಲಾಗಿದ್ದು, ಜ್ಞಾನಿಗಳು ಇದನ್ನೇ ಮಹಾಭಾರತವೆನ್ನುತ್ತಾರೆ ಎಂದು ಹೇಳಲಾಗಿದೆ.ಉಪಕಥೆಗಳೂ ಸೇರಿ ಒಂದು ಲಕ್ಷ ಶ್ಲೋಕಗಳಷ್ಟು ಪ್ರಮಾಣದ ಗ್ರಂಥವಾಗುತ್ತದೆ.ಇದಲ್ಲದೇ ವ್ಯಾಸರು ಅರವತ್ತು ಲಕ್ಷ ಶ್ಲೋಕಗಳ ಇನ್ನೊಂದು ಗ್ರಂಥವನ್ನೂ ರಚಿಸಿದರೆಂದು ಹೇಳಲಾಗಿದೆ! ಇವುಗಳಲ್ಲಿ, ಮೂವತ್ತು ಲಕ್ಷ ಶ್ಲೋಕಗಳು ದೇವಲೋಕದಲ್ಲೂ, ಹದಿನೈದು ಲಕ್ಷ ಶ್ಲೋಕಗಳು ಪಿತೃಲೋಕದಲ್ಲೂ ಹದಿನಾಲ್ಕು ಲಕ್ಷ ಶ್ಲೋಕಗಳು ಗಂಧರ್ವಲೋಕದಲ್ಲೂ ಒಂದು ಲಕ್ಷ ಶ್ಲೋಕಗಳು ಮನುಷ್ಯ ಲೋಕದಲ್ಲೂ ಪ್ರಚಲಿತವಾಗಿವೆ ಎಂದು ಹೇಳಲಾಗಿದೆ.ಮಹಾಭಾರತವನ್ನು ರಚಿಸಿದ ಬಳಿಕ, ವ್ಯಾಸರು ಅದನ್ನು ತಮ್ಮ ಪುತ್ರರಾದ ಶುಕರಿಗೂ ನಾಲ್ವರು ಶಿಷ್ಯರಾದ ವೈಶಂಪಾಯನ,ಪೈಲ, ಜೈಮಿನಿ, ಮತ್ತು ಸುಮಂತು, ಇವರಿಗೂ ಉಪದೇಶಿಸಿದರು.
ಈ ಸಂದರ್ಭದಲ್ಲಿ, ಪಾಂಡವರಲ್ಲಿ ಮೂರನೆಯವನಾದ ಅರ್ಜುನನ ಮರಿಮಗನೂ ಅಭಿಮನ್ಯುವಿನ ಮೊಮ್ಮಗನೂ ಪರೀಕ್ಷಿತನ ಮಗನೂ ಆದ ಜನಮೇಜಯನು ಸರ್ಪಯಾಗವೆಂಬ ಒಂದು ವಿಶಿಷ್ಟ ಯಜ್ಞವನ್ನು ಆಚರಿಸತೊಡಗಿದನು.ಅದನ್ನು ನೋಡಲು, ವ್ಯಾಸರು ತಮ್ಮ ಶಿಷ್ಯರೊಂದಿಗೆ ಆಗಮಿಸಲು, ಜನಮೇಜಯನು ತನ್ನ ಮುತ್ತಾತಂದಿರಾದ ಕೌರವ, ಪಾಂಡವರ ಕಥೆಯನ್ನು ಹೇಳಬೇಕೆಂದು ಅವರನ್ನು ಕೇಳಿಕೊಂಡನು.ಆಗ ವ್ಯಾಸರು ತಮ್ಮ ಶಿಷ್ಯರಾದ ವೈಶಂಪಾಯನರಿಗೆ ತಾವು ಉಪದೇಶಿಸಿದ ಮಹಾಭಾರತದ ಕಥೆಯನ್ನು ಹೇಳಲು ಹೇಳಿದರು.ಅದರಂತೆ, ವೈಶಂಪಾಯನರು ಜನಮೇಜಯನಿಗೆ ಮಹಾಭಾರತದ ಕಥೆಯನ್ನು ಸಮಗ್ರವಾಗಿ ಹೇಳಿದರು.ಆಗ ಆ ಯಾಗದ ಸಭೆಯಲ್ಲಿದ್ದ ಉಗ್ರಶ್ರವರೆಂಬ ಸೂತಪುರಾಣಿಕರು ಆ ಮಹಾಭಾರತದ ಕಥೆಯನ್ನು ಕೇಳಿ, ಮುಂದೆ, ಶೌನಕರೆಂಬ ಮಹರ್ಷಿಗಳು ಅನೇಕ ಋಷಿಗಳೊಂದಿಗೆ ಸತ್ರಯಾಗ ಮಾಡುತ್ತಿದ್ದಾಗ,ಅವರ ಕೋರಿಕೆಯಂತೆ ಅವರಿಗೆ ಹೇಳಿದರು.ಹೀಗೆ ಮಹಾಭಾರತದ ಕಥೆ ಭೂಲೋಕದಲ್ಲಿ ಪ್ರಚಲಿತವಾಯಿತು.