ನನ್ನ ಪುಸ್ತಕ, 'ಕಿರಿಯರ ಕಥಾಸರಿತ್ಸಾಗರ' ಸಪ್ನ ಬುಕ್ ಹೌಸ್ ಪ್ರಕಟಿಸಿದ್ದು, ಈಗ ಮೂರು ಮುದ್ರಣಗಳನ್ನು ಕಂಡಿದೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತಿದೆ!ಕಥಾಸರಿತ್ಸಾಗರವು ಹುಟ್ಟಿದ್ದು ಕಾಶ್ಮೀರದಲ್ಲಿ!ಗುಣಾಢ್ಯನೆಂಬ ಮಹಾಕವಿ ಪೈಶಾಚ ಭಾಷೆಯಲ್ಲಿ ರಚಿಸಿದ ಬೃಹತ್ಕಥೆಯೆಂಬ ಪ್ರಾಚೀನ ಲೋಕಕಥೆಗಳ ಬೃಹತ್ ಸಂಗ್ರಹ(ಇಂದು ಉಪಲಬ್ಧವಿಲ್ಲ)ವನ್ನು ಮೂರು ಕವಿಗಳು ಸಂಸ್ಕೃತಕ್ಕೆ ರೂಪಾಂತರಿಸಿದರು.ಆ ಮೂರು ಗ್ರಂಥಗಳು,ಸೋಮದೇವನ ಕಥಾಸರಿತ್ಸಾಗರ,ಕ್ಷೇಮೇಂದ್ರನ ಬೃಹತ್ಕಥಾಮಂಜರಿ,ಹಾಗೂ ಬುಧಸ್ವಾಮಿಯ ಬೃಹತ್ಕಥಾಶ್ಲೋಕಸಂಗ್ರಹ.ಮೊದಲಿಬ್ಬರು ಕವಿಗಳು ಕಾಶ್ಮೀರದವರಾದರೆ,ಮೂರನೆಯವನು ನೇಪಾಳದವನು.ಹಾಗಾಗಿ,ಕಥಾಸರಿತ್ಸಾಗರವು ಕಾಶ್ಮೀರದ ಅನನ್ಯ ಕೊಡುಗೆ!ಇದೊಂದು ಬೃಹತ್ ಕಥಾಸಂಗ್ರಹವಾಗಿದ್ದು,ಇದರಲ್ಲಿ,ರಾಜರ,ರಾಜಪುತ್ರರ,ಪ್ರೇಮಿಗಳ,ವಂಚಕ ಸ್ತ್ರೀ,ಪುರುಷರ,ಮಾಂತ್ರಿಕರ,ಬೇತಾಳಗಳ,ಪ್ರಾಣಿಪಕ್ಷಿಗಳ,ಬುದ್ಧಿವಂತರ,ಮೂರ್ಖರ,ವೇಶ್ಯೆಯರ,ಕಳ್ಳಕಾಕರ,ಹೀಗೆ ಹಲವಾರು ಬಗೆಗಳ ಕಥೆಗಳಿವೆ.ಪಂಚತಂತ್ರ,ಬೇತಾಳನ ಕಥೆಗಳು,ಅರೇಬಿಯನ್ ನೈಟ್ಸ್ ಮೊದಲಾದ ಅನೇಕ ಕಥಾಸಂಕಲನಗಳಿಗೆ ಇದೇ ಆಕರ.ಮೂಲ ಗ್ರಂಥದಲ್ಲಿ ಇಪ್ಪತ್ತೆರಡು ಸಾವಿರ ಶ್ಲೋಕಗಳಿದ್ದು,ಇದೊಂದು ಬಹುದೊಡ್ಡ ಗ್ರಂಥವಾಗಿದೆ!ರಾಮಾಯಣ,ಮಹಾಭಾರತ,ಭಾಗವತಗಳಂಥ ಧಾರ್ಮಿಕ ಗ್ರಂಥಗಳ ನಂತರ,ಓದಲೇಬೇಕಾದ ಲೌಕಿಕ ವಿಚಾರಗಳ ಮಹತ್ವಪೂರ್ಣ ಗ್ರಂಥವಿದು.ಆಂಗ್ಲ ಭಾಷೆಯಲ್ಲಿ ಸಿ.ಎಚ್.ಟಾನಿಯವರು ಇದನ್ನು ಅನುವಾದಿಸಿ,ಎನ್.ಎಮ್.ಪೆಂಜರ್ ಅವರು ಟಿಪ್ಪಣಿಗಳನ್ನು ಬರೆದು ಪ್ರಕಟವಾಗಿರುವ Ocean of streams of Stories ಎಂಬ ಹತ್ತು ದೊಡ್ಡ ಸಂಪುಟಗಳಿವೆ,ಹಾಗೂ ಅರ್ಷಿಯಾ ಸೆಟ್ಟರ್ ರವರು ಸರಳವಾಗಿ,ಸಂಕ್ಷಿಪ್ತವಾಗಿ ಬರೆದಿರುವ Tales from the Kathasaritsagara ಎಂಬ ಗ್ರಂಥವೂ ಇದೆ. ಕನ್ನಡದಲ್ಲಿ ಎ.ಆರ್.ಕೃಷ್ಣಶಾಸ್ತ್ರಿಗಳು ಸಂಗ್ರಹವಾಗಿ ಬರೆದಿರುವ ಕಥಾಮೃತವೆಂಬ ಗ್ರಂಥವೂ ಕುವೆಂಪು ಭಾಷಾಭಾರತಿ ಪ್ರಾಧಿಕಾರದವರು ಮೂಲದೊಂದಿಗೆ ಕನ್ನಡಾನುವಾದವನ್ನು ಹೊರತಂದಿರುವ ಹತ್ತು ಸಂಪುಟಗಳ ಗ್ರಂಥವೂ ಇವೆ.ಆದರೆ,ಇನ್ನೂ ಸ್ವಲ್ಪ ಸರಳವಾಗಿ,ಕಿರಿಯರಿಗಾಗಿ ಈ ಗ್ರಂಥ ಇರದುದನ್ನು ನೋಡಿ ಈ ಕೆಲಸಕ್ಕೆ ಕೈ ಹಾಕಿದ್ದೇನೆ ಹಾಗೂ ಸಪ್ನ ಬುಕ್ ಹೌಸ್ ನವರು ಪ್ರಕಟಿಸಿದ್ದಾರೆ.ಇಲ್ಲಿ ಕಿರಿಯರೆಂದರ ಕೇವಲ ಮಕ್ಕಳೆಂದಲ್ಲ.ದೊಡ್ಡವರಿಗೂ ಇದೊಂದು ಪ್ರವೇಶಿಕ ಗ್ರಂಥವಾಗಬಲ್ಲದು.ಮೂಲದಲ್ಲಿ ಮುಖ್ಯ ಕಥೆ ಸಾಗುತ್ತಾ ಅದರಲ್ಲಿನ ಹಲವು ಪಾತ್ರಗಳು ಅನೇಕ ಕಥೆಗಳನ್ನು ಹೇಳುತ್ತಾ ಮುಖ್ಯ ಕಥೆಯೇ ಕಳೆದುಹೋದಂತಾಗುತ್ತದೆ.ಇಲ್ಲಿ ಮುಖ್ಯ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿ,ಅನಂತರ ಒಂದಷ್ಟು ಪ್ರಮುಖವಾದ ಚಿಕ್ಕ,ದೊಡ್ಡ ಉಪಕಥೆಗಳನ್ನು ಹೇಳಿದ್ದೇನೆ.ಹಾಗಾಗಿ,ಕಥಾಸರಿತ್ಸಾಗರದ ಒಂದು ಸ್ಥೂಲ ಪರಿಚಯ,ಸರಳವಾಗಿ ಆಗಬಹುದೆಂದು ನಂಬಿದ್ದೇನೆ. ಈ ಗ್ರಂಥವನ್ನು ಓದಿ,ಮಕ್ಕಳಿಂದಲೂ ಓದಿಸಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ ನನ್ನ ಶ್ರಮ ಸಾರ್ಥಕ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ