ಇಲ್ಲಿ ಪುರಾಣ,ಅಧ್ಯಾತ್ಮ,ಪ್ರಾಚೀನ ಭಾರತದ ವಿಚಾರಗಳು,ಇತಿಹಾಸ,ಸಂಸ್ಕೃತಿ,ಪರಂಪರೆ,ಹಾಗೂ ಪ್ರವಾಸ ಲೇಖನಗಳು ಲಭ್ಯ
ಬುಧವಾರ, ಡಿಸೆಂಬರ್ 28, 2022
ಬೆಂಗಳೂರಿನಲ್ಲಿ ಸಂಗೀತಕ್ಕೊಂದು ಸಂಗ್ರಹಾಲಯ
ಬೆಂಗಳೂರಿನ ಜೆ.ಪಿ.ನಗರದ ಬ್ರಿಗೇಡ್ ಮಿಲೆನಿಯಂ ರಸ್ತೆಯ ಬಳಿ,ವುಡ್ ರೋಸ್ ಕ್ಲಬ್ ನ ಎದುರು,ಸಂಗೀತಕ್ಕಾಗಿ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯೆನ್ಸ್(ಭಾರತೀಯ ಸಂಗೀತದ ಅನುಭವ) ಎಂಬ ಅದ್ಭುತವಾದ ಒಂದು ಸಂಗ್ರಹಾಲಯ ಆರಂಭವಾಗಿದೆ!ಇಂಡಿಯನ್ ಮ್ಯೂಸಿಕ್ ಎಕ್ಸಪೀರಿಯೆನ್ಸ್ ಟ್ರಸ್ಟ್ ನ ವತಿಯಿಂದ, ಬ್ರಿಗೇಡ್ ಗ್ರೂಪ್ ಅವರ ಸಹಕಾರದೊಂದಿಗೆ,ಸಂಗೀತಜ್ಞರಾದ ಮಾನಸೀಪ್ರಸಾದ್ ಹಾಗೂ ಡಾ.ಪಪ್ಪು ವೇಣುಗೋಪಾಲ ರಾವ್ ಅವರ ನೇತೃತ್ವದಲ್ಲಿ ನಿರ್ಮಾಣವಾಗಿರುವ ಇದು,ಭಾರತದಲ್ಲೇ ಪ್ರಪ್ರಥಮವಾದ ಸಂಗೀತ ಸಂಗ್ರಹಾಲಯವಾಗಿದೆ!50,000 ಚದರ ಅಡಿಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ತಲೆಯೆತ್ತಿರುವ ಈ ಬೃಹತ್ ಸಂಗ್ರಹಾಲಯ,ಒಂಬತ್ತು ವಿಸ್ತಾರ ಪ್ರದರ್ಶನಾಲಯಗಳನ್ನು ಹೊಂದಿದೆ!ಈ ಪ್ರದರ್ಶನಾಲಯಗಳಲ್ಲಿ ಕರ್ನಾಟಕ ಶಾಸ್ತ್ರೀಯ,ಹಿಂದೂಸ್ತಾನಿ ಶಾಸ್ತ್ರೀಯ,ಜಾನಪದ,ಚಲನಚಿತ್ರ,ಸಮಕಾಲೀನ,ಮಿಶ್ರ,ಹೀಗೆ ಭಾರತದ ಎಲ್ಲ ಸಂಗೀತ ಪ್ರಕಾರಗಳ ಚಿತ್ರಸಹಿತವಾದ ಮಾಹಿತಿಯಿದೆ.ಸಂಗೀತದ ಇತಿಹಾಸ,ಅದರ ಪಯಣ,ಅದರ ವಿವಿಧ ಸಂಪ್ರದಾಯಗಳು,ಇವೆಲ್ಲವೂ ಬಹಳ ಅಚ್ಚುಕಟ್ಟಾಗಿ,ಸುಂದರವಾದ ಹಿತವಾದ ಬೆಳಕಿನ,ವೈಭವಯುತ ಪ್ರದರ್ಶನಾಲಯಗಳಲ್ಲಿ ನಿರೂಪಿತವಾಗಿವೆ.ಅಷ್ಟೇ ಅಲ್ಲದೇ,ಪ್ರತಿಯೊಂದು ವಿಭಾಗದಲ್ಲೂ ಸ್ಪರ್ಶದೃಶ್ಯಯಂತ್ರಗಳಿದ್ದು(ಟಚ್ ಸ್ಕ್ರೀನ್),ಶ್ರವಣಸಾಧನಗಳಿಂದ(ಹೆಡ್ ಫೋನ್) ಸಂಗೀತದ ತುಣುಕುಗಳನ್ನು ಆರಿಸಿಕೊಂಡು ಕೇಳಬಹುದಾಗಿದೆ!ನೂರಕ್ಕೂ ಹೆಚ್ಚು ವಿವಿಧ ಸಂಗೀತ ವಾದ್ಯಗಳೂ ಇಲ್ಲಿದ್ದು,ಅವುಗಳ ವಾದನದ ದೃಶ್ಯಗಳನ್ನು ನೋಡಬಹುದಾಗಿದೆ!ಅಂತೆಯೇ,ಗ್ರಾಮಾಫೋನ್ ಮತ್ತು ಅದರ ಹಳೆಯ ಅಡಕ ಮುದ್ರಿಕೆಗಳು,ವಿವಿಧ ರೇಡಿಯೋಗಳು,ಟಿ.ವಿ.ಗಳು,ಇತ್ತೀಚಿನ ಅಡಕ ಮುದ್ರಿಕೆಗಳು,ಕೆಲವು ಪ್ರಸಿದ್ಧ ಸಂಗೀತಗಾರರ ವಸ್ತ್ರ ಮೊದಲಾದ ಅಮೂಲ್ಯ ವಸ್ತುಗಳು,ಮೊದಲಾದವುಗಳ ಅಪೂರ್ವ ಸಂಗ್ರಹವನ್ನು ಇಲ್ಲಿ ಕಾಣಬಹುದು!ಇಲ್ಲಿ ಮೂರು ಪುಟ್ಟ ಚಿತ್ರಮಂದಿರಗಳೂ ಇದ್ದು ಇವುಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದ ಕಿರು ಚಿತ್ರಗಳು ಪ್ರದರ್ಶನಗೊಳ್ಳುತ್ತಿರುತ್ತವೆ!ಸಂಗ್ರಹಾಲಯದ ಹೊರಗೆ,ಅಂದರೆ ದ್ವಾರದ ಆವರಣದಲ್ಲೇ ಒಂದು ವಿಶಿಷ್ಟ ಶಬ್ದೋದ್ಯಾನ(ಸೌಂಡ್ ಗಾರ್ಡನ್)ವಿದ್ದು,ಇಲ್ಲಿ ಕೆಲವು ಸಂಗೀತಯಂತ್ರಗಳಿವೆ.ಇವುಗಳನ್ನು ಪ್ರವಾಸಿಗರೇ ಬಳಸಿ ಸಂಗೀತದ ಅನುಭವ ಪಡೆಯಬಹುದು!ಇಲ್ಲಿಯೇ ಒಂದು ಪುಟ್ಟ ಉಪಾಹಾರ ಮಂದಿರವೂ ಇದೆ.ಇಷ್ಟಲ್ಲದೇ ಇಲ್ಲಿ ಮಾರಾಟ ಮಳಿಗೆ,ಪ್ರವಚನ ಕೊಠಡಿ,ತರಬೇತಿ ಕೋಣೆಗಳೂ ಇವೆ.ಸಂಗೀತ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.ಆಗಾಗ ಇಲ್ಲಿ ಸಂಗೀತ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ.ಹೀಗೆ ಸಂಗೀತಪ್ರಿಯರು ನೋಡಲೇಬೇಕಾದ ಸುಂದರ ತಾಣವಿದು.
ಗುರುವಾರ, ಡಿಸೆಂಬರ್ 22, 2022
ಕಿರಿಯರ ಕಥಾಸರಿತ್ಸಾಗರ
ನನ್ನ ಪುಸ್ತಕ, 'ಕಿರಿಯರ ಕಥಾಸರಿತ್ಸಾಗರ' ಸಪ್ನ ಬುಕ್ ಹೌಸ್ ಪ್ರಕಟಿಸಿದ್ದು, ಈಗ ಮೂರು ಮುದ್ರಣಗಳನ್ನು ಕಂಡಿದೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತಿದೆ!ಕಥಾಸರಿತ್ಸಾಗರವು ಹುಟ್ಟಿದ್ದು ಕಾಶ್ಮೀರದಲ್ಲಿ!ಗುಣಾಢ್ಯನೆಂಬ ಮಹಾಕವಿ ಪೈಶಾಚ ಭಾಷೆಯಲ್ಲಿ ರಚಿಸಿದ ಬೃಹತ್ಕಥೆಯೆಂಬ ಪ್ರಾಚೀನ ಲೋಕಕಥೆಗಳ ಬೃಹತ್ ಸಂಗ್ರಹ(ಇಂದು ಉಪಲಬ್ಧವಿಲ್ಲ)ವನ್ನು ಮೂರು ಕವಿಗಳು ಸಂಸ್ಕೃತಕ್ಕೆ ರೂಪಾಂತರಿಸಿದರು.ಆ ಮೂರು ಗ್ರಂಥಗಳು,ಸೋಮದೇವನ ಕಥಾಸರಿತ್ಸಾಗರ,ಕ್ಷೇಮೇಂದ್ರನ ಬೃಹತ್ಕಥಾಮಂಜರಿ,ಹಾಗೂ ಬುಧಸ್ವಾಮಿಯ ಬೃಹತ್ಕಥಾಶ್ಲೋಕಸಂಗ್ರಹ.ಮೊದಲಿಬ್ಬರು ಕವಿಗಳು ಕಾಶ್ಮೀರದವರಾದರೆ,ಮೂರನೆಯವನು ನೇಪಾಳದವನು.ಹಾಗಾಗಿ,ಕಥಾಸರಿತ್ಸಾಗರವು ಕಾಶ್ಮೀರದ ಅನನ್ಯ ಕೊಡುಗೆ!ಇದೊಂದು ಬೃಹತ್ ಕಥಾಸಂಗ್ರಹವಾಗಿದ್ದು,ಇದರಲ್ಲಿ,ರಾಜರ,ರಾಜಪುತ್ರರ,ಪ್ರೇಮಿಗಳ,ವಂಚಕ ಸ್ತ್ರೀ,ಪುರುಷರ,ಮಾಂತ್ರಿಕರ,ಬೇತಾಳಗಳ,ಪ್ರಾಣಿಪಕ್ಷಿಗಳ,ಬುದ್ಧಿವಂತರ,ಮೂರ್ಖರ,ವೇಶ್ಯೆಯರ,ಕಳ್ಳಕಾಕರ,ಹೀಗೆ ಹಲವಾರು ಬಗೆಗಳ ಕಥೆಗಳಿವೆ.ಪಂಚತಂತ್ರ,ಬೇತಾಳನ ಕಥೆಗಳು,ಅರೇಬಿಯನ್ ನೈಟ್ಸ್ ಮೊದಲಾದ ಅನೇಕ ಕಥಾಸಂಕಲನಗಳಿಗೆ ಇದೇ ಆಕರ.ಮೂಲ ಗ್ರಂಥದಲ್ಲಿ ಇಪ್ಪತ್ತೆರಡು ಸಾವಿರ ಶ್ಲೋಕಗಳಿದ್ದು,ಇದೊಂದು ಬಹುದೊಡ್ಡ ಗ್ರಂಥವಾಗಿದೆ!ರಾಮಾಯಣ,ಮಹಾಭಾರತ,ಭಾಗವತಗಳಂಥ ಧಾರ್ಮಿಕ ಗ್ರಂಥಗಳ ನಂತರ,ಓದಲೇಬೇಕಾದ ಲೌಕಿಕ ವಿಚಾರಗಳ ಮಹತ್ವಪೂರ್ಣ ಗ್ರಂಥವಿದು.ಆಂಗ್ಲ ಭಾಷೆಯಲ್ಲಿ ಸಿ.ಎಚ್.ಟಾನಿಯವರು ಇದನ್ನು ಅನುವಾದಿಸಿ,ಎನ್.ಎಮ್.ಪೆಂಜರ್ ಅವರು ಟಿಪ್ಪಣಿಗಳನ್ನು ಬರೆದು ಪ್ರಕಟವಾಗಿರುವ Ocean of streams of Stories ಎಂಬ ಹತ್ತು ದೊಡ್ಡ ಸಂಪುಟಗಳಿವೆ,ಹಾಗೂ ಅರ್ಷಿಯಾ ಸೆಟ್ಟರ್ ರವರು ಸರಳವಾಗಿ,ಸಂಕ್ಷಿಪ್ತವಾಗಿ ಬರೆದಿರುವ Tales from the Kathasaritsagara ಎಂಬ ಗ್ರಂಥವೂ ಇದೆ. ಕನ್ನಡದಲ್ಲಿ ಎ.ಆರ್.ಕೃಷ್ಣಶಾಸ್ತ್ರಿಗಳು ಸಂಗ್ರಹವಾಗಿ ಬರೆದಿರುವ ಕಥಾಮೃತವೆಂಬ ಗ್ರಂಥವೂ ಕುವೆಂಪು ಭಾಷಾಭಾರತಿ ಪ್ರಾಧಿಕಾರದವರು ಮೂಲದೊಂದಿಗೆ ಕನ್ನಡಾನುವಾದವನ್ನು ಹೊರತಂದಿರುವ ಹತ್ತು ಸಂಪುಟಗಳ ಗ್ರಂಥವೂ ಇವೆ.ಆದರೆ,ಇನ್ನೂ ಸ್ವಲ್ಪ ಸರಳವಾಗಿ,ಕಿರಿಯರಿಗಾಗಿ ಈ ಗ್ರಂಥ ಇರದುದನ್ನು ನೋಡಿ ಈ ಕೆಲಸಕ್ಕೆ ಕೈ ಹಾಕಿದ್ದೇನೆ ಹಾಗೂ ಸಪ್ನ ಬುಕ್ ಹೌಸ್ ನವರು ಪ್ರಕಟಿಸಿದ್ದಾರೆ.ಇಲ್ಲಿ ಕಿರಿಯರೆಂದರ ಕೇವಲ ಮಕ್ಕಳೆಂದಲ್ಲ.ದೊಡ್ಡವರಿಗೂ ಇದೊಂದು ಪ್ರವೇಶಿಕ ಗ್ರಂಥವಾಗಬಲ್ಲದು.ಮೂಲದಲ್ಲಿ ಮುಖ್ಯ ಕಥೆ ಸಾಗುತ್ತಾ ಅದರಲ್ಲಿನ ಹಲವು ಪಾತ್ರಗಳು ಅನೇಕ ಕಥೆಗಳನ್ನು ಹೇಳುತ್ತಾ ಮುಖ್ಯ ಕಥೆಯೇ ಕಳೆದುಹೋದಂತಾಗುತ್ತದೆ.ಇಲ್ಲಿ ಮುಖ್ಯ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿ,ಅನಂತರ ಒಂದಷ್ಟು ಪ್ರಮುಖವಾದ ಚಿಕ್ಕ,ದೊಡ್ಡ ಉಪಕಥೆಗಳನ್ನು ಹೇಳಿದ್ದೇನೆ.ಹಾಗಾಗಿ,ಕಥಾಸರಿತ್ಸಾಗರದ ಒಂದು ಸ್ಥೂಲ ಪರಿಚಯ,ಸರಳವಾಗಿ ಆಗಬಹುದೆಂದು ನಂಬಿದ್ದೇನೆ. ಈ ಗ್ರಂಥವನ್ನು ಓದಿ,ಮಕ್ಕಳಿಂದಲೂ ಓದಿಸಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದರೆ ನನ್ನ ಶ್ರಮ ಸಾರ್ಥಕ.
ಭಾನುವಾರ, ಡಿಸೆಂಬರ್ 18, 2022
ಚಾಣಕ್ಯ ನೀತಿ
ಚಾಣಕ್ಯ ನೀತಿ ಒಂದು ಸುಪ್ರಸಿದ್ಧ ಸಂಸ್ಕೃತ ಸುಭಾಷಿತ ಗ್ರಂಥ.ಇದರಲ್ಲಿ ಒಟ್ಟು ಆರು ಪಾಠಗಳಿದ್ದು ಅವುಗಳಲ್ಲಿ ಕೆಲವು ಸುಭಾಷಿತಗಳು ಪುನರಾವರ್ತನೆಯಾದರೂ ಅನೇಕ ಬೇರೆ ಬೇರೆ ಸುಭಾಷಿತಗಳಿವೆ.ಅವುಗಳೆಂದರೆ, ಲಘು ಚಾಣಕ್ಯ, ವೃದ್ಧ ಚಾಣಕ್ಯ, ಚಾಣಕ್ಯ ನೀತಿಶಾಸ್ತ್ರ, ಚಾಣಕ್ಯ ನೀತಿದರ್ಪಣ, ಚಾಣಕ್ಯ ರಾಜನೀತಿಶಾಸ್ತ್ರ, ಮತ್ತು ಚಾಣಕ್ಯ ಸಾರಸಂಗ್ರಹ.ಇವುಗಳಲ್ಲದೇ ಚಾಣಕ್ಯ ನೀತಿಸೂತ್ರಗಳು ಎಂಬ ಗ್ರಂಥವೂ ಇದೆ.ಇವೆಲ್ಲವನ್ನೂ ಒಟ್ಟಾಗಿ ಸಂಕಲಿಸಿ ಮೊದಲಿಗೆ ಪ್ರಕಟಿಸಿದ್ದು ಲುಡ್ವಿಕ್ ಸ್ಟರ್ನ್ ಬ್ಯಾಕ್ ಎಂಬ ಆಂಗ್ಲ ವಿದ್ವಾಂಸರು.ಅನಂತರ, ಸಂಸ್ಕೃತ ವಿದ್ವಾಂಸರಾದ ಶ್ರೀ ಆ.ರಾ.ಪಂಚಮುಖಿ ಅವರು ಇವನ್ನು ಕನ್ನಡಾನುವಾದದೊಂದಿಗೆ ಚಾಣಕ್ಯ ಸಂಪುಟ ಎಂಬ ಬೃಹತ್ ಗ್ರಂಥವಾಗಿ ಪ್ರಕಟಿಸಿದರು.ಈಗ ನಾನು ಚಾಣಕ್ಯ ನೀತಿಯ ಆರು ಗ್ರಂಥಗಳನ್ನು ಎರಡು ಸಂಪುಟಗಳಲ್ಲಿ ಕನ್ನಡಾನುವಾದ, ಮತ್ತು ಸೂಕ್ತ ವಿವರಣೆಗಳೊಂದಿಗೆ ಬರೆದು ಸಪ್ನ ಬುಕ್ ಹೌಸ್ ಮೂಲಕ ಪ್ರಕಟಿಸಿದ್ದೇನೆ.ಮೊದಲನೆಯ ಭಾಗದಲ್ಲಿ, ಲಘು ಚಾಣಕ್ಯ, ವೃದ್ಧ ಚಾಣಕ್ಯ, ಚಾಣಕ್ಯ ನೀತಿಶಾಸ್ತ್ರ, ಮತ್ತು ಚಾಣಕ್ಯ ಸಾರಸಂಗ್ರಹ ಎಂಬ ನಾಲ್ಕು ಪಾಠಗಳನ್ನು ಪ್ರಕಟಿಸಿದ್ದೇನೆ.ಈಗ ಎರಡನೆಯ ಭಾಗದಲ್ಲಿ, ಚಾಣಕ್ಯ ನೀತಿದರ್ಪಣ ಮತ್ತು ಚಾಣಕ್ಯ ರಾಜನೀತಿಶಾಸ್ತ್ರ ಎಂಬ ಎರಡು ಪಾಠಗಳನ್ನು ಪ್ರಕಟಿಸಿದ್ದೇನೆ.ಸಪ್ನ ಬುಕ್ ಹೌಸ್ ಬಹಳ ಸೊಗಸಾದ ಮುದ್ರಣದೊಂದಿಗೆ ಹೊರತಂದಿದೆ.ಸಪ್ನ ಬುಕ್ ಹೌಸ್ ನ ಎಲ್ಲಾ ಶಾಖೆಗಳಲ್ಲೂ ಸಿಗುತ್ತದೆ.ಆಸಕ್ತರು ಖರೀದಿಸಿ ಓದಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)