ಋಗ್ವೇದದ ಐತರೇಯ ಬ್ರಾಹ್ಮಣದಲ್ಲಿ ಬರುವ ಒಂದು ಪ್ರಸಿದ್ಧವಾದ ಆದರೆ ಹೆಚ್ಚು ಜನರಿಗೆ ತಿಳಿಯದ ಒಂದು ಆಖ್ಯಾನ, ಶುನಶ್ಶೇಪನ ಆಖ್ಯಾನ.ನರಬಲಿಯ ಆಶ್ಚರ್ಯಕರ ಕಥೆಯನ್ನು ಹೊಂದಿರುವ ಇದು, ಅದನ್ನು ತಪ್ಪಿಸಲು ರಚಿತವಾಗಿರುಬಹುದು.ಹರಿಶ್ಚಂದ್ರ ರಾಜನು ವರುಣನ ಉಪಾಸನೆ ಮಾಡಿ, ತನಗೆ ಮಗುವಾದರೆ ಆ ಮಗುವನ್ನೇ ವರುಣನಿಗೆ ಅರ್ಪಿಸುವೆನೆಂದು ಸಂಕಲ್ಪ ಮಾಡುತ್ತಾನೆ.ಅಂತೆಯೇ ಅವನಿಗೆ ರೋಹಿತನೆಂಬ ಮಗನು ಹುಟ್ಟಲು, ವರುಣನು ಮತ್ತೆ ಮತ್ತೆ ಬಂದು ಅವನನ್ನು ಅರ್ಪಿಸಲು ಕೇಳುತ್ತಲೂ ಹರಿಶ್ಚಂದ್ರನು ಏನಾದರೂ ನೆಪ ಮಾಡಿ ಕಾಲ ತಳ್ಳುತ್ತಾನೆ.ಇದರಿಂದ ಅವನಿಗೆ ಜಲೋದರ ರೋಗ ಬರುತ್ತದೆ.ಅಷ್ಟರಲ್ಲಿ ವಿಷಯ ತಿಳಿದ ರೋಹಿತನು ಮನೆ ಬಿಟ್ಟು ಹೋಗಿ, ತನ್ನ ಬದಲಿಗೆ, ಆಂಗಿರಸ ಗೋತ್ರದ ಅಜೀಗರ್ತನೆಂಬ ಬಡ ಬ್ರಾಹ್ಮಣನ ಮೂರು ಗಂಡು ಮಕ್ಕಳ ಪೈಕಿ ಮಧ್ಯದವನಾದ ಶುನಶ್ಶೇಪನನ್ನು ನೂರು ಗೋವುಗಳನ್ನು ಕೊಟ್ಟು ಪಡೆದು ತರುತ್ತಾನೆ.ಅಪ್ಪನಿಗೆ ವಿಷಯ ತಿಳಿಸಿ, ಅವನು ಯಜ್ಞಕ್ಕೆ ಸಿದ್ಧಪಡಿಸಿ, ವಿಶ್ವಾಮಿತ್ರರು ಹಾಗೂ ಇತರ ಋತ್ವಿಜರು ಬಲಿಪಶುವನ್ನು ಕೇಳಲು,ಶುನಶ್ಶೇಪನನ್ನು ಕರೆತರಲಾಗುತ್ತದೆ.ಯಾರೂ ಅವನನ್ನು ಯೂಪಸ್ತಂಭಕ್ಕೆ ಕಟ್ಟಲಾಗಲೀ ತಲೆ ಕತ್ತರಿಸಲಾಗಲೀ ಒಪ್ಪುವುದಿಲ್ಲ.ಆಗ ಅವನ ತಂದೆಯೇ ನೂರು ನೂರು ಗೋವುಗಳನ್ನು ಕೊಡುವುದಾದರೆ ತಾನೇ ಆ ಕೆಲಸ ಮಾಡಲು ಮುಂದಾಗುತ್ತಾನೆ.ಆಗ ಧೈರ್ಯಗೆಡದ ಶುನಶ್ಶೇಪ, ಉಶಸ್ಸನ್ನು ಒಳಗೊಂಡು ಹಲವು ದೇವತೆಗಳನ್ನು ಮಂತ್ರಗಳ ಮೂಲಕ ಸ್ತುತಿಸುತ್ತಾನೆ.ಕೂಡಲೇ ಅವನ ಕಟ್ಟುಗಳು ಬಿಚ್ಚಿಹೋಗಿ ಸ್ವಯಂ ವರುಣನೇ ಪ್ರತ್ಯಕ್ಷನಾಗಿ ತನಗೆ ಯಾವ ಬಲಿಯೂ ಬೇಡವೆನ್ನುತ್ತಾನೆ.ಇದು ವರುಣನ ಪರೀಕ್ಷೆಯಷ್ಟೇ ಎಂದು ಎಲ್ಲರಿಗೂ ತಿಳಿಯುತ್ತದೆ.ಹರಿಶ್ಚಂದ್ರನ ಜಲೋದರ ರೋಗವೂ ವಾಸಿಯಾಗುತ್ತದೆ.ಸಂತೋಷಗೊಂಡ ವಿಶ್ವಾಮಿತ್ರರು ಶುನಶ್ಶೇಪನನ್ನು ತಮ್ಮ ಪುತ್ರನೆಂದು ಅಂಗೀಕರಿಸುತ್ತಾರೆ. ಇಂಥ ಅಪರೂಪದ ವೇದದ ಕಥೆಯನ್ನು ಸುಂದರವಾದ ಚಿತ್ರಗಳ ಸಹಿತವಾಗಿ ಪ್ರಕಟಿಸಿರುವ ಅಮರ ಚಿತ್ರ ಕಥಾ ಮಾಲಿಕೆ ಬಹಳ ಶ್ಲಾಘನೀಯ!