ಮಹಾಭಾರತದಲ್ಲೂ ವಾಮನಪುರಾಣದಲ್ಲೂ ತೀರ್ಥಕ್ಷೇತ್ರಗಳ ವರ್ಣನೆಯಲ್ಲಿ ಬರುವ ಒಂದು ಸ್ವಾರಸ್ಯಕರ ಕಥೆ,ಮಂಕಣಕನ ಕಥೆ.ಒಂದು ಸಣ್ಣ ಸಿದ್ಧಿ ಬಂದ ಕೂಡಲೇ ಮನುಷ್ಯ ತಾನು ತುಂಬಾ ದೊಡ್ಡದನ್ನು ಸಾಧಿಸಿಬಿಟ್ಟೆನೆಂದು ಬಹಳ ಹೆಮ್ಮೆ ಪಡುತ್ತಾನೆ.ಆದರೆ ತನಗಿಂತ ಹೆಚ್ಚಿನ ಸಿದ್ಧಿಯನ್ನು ಪಡೆದವರನ್ನು ಕಂಡಾಗ ಶಾಂತನಾಗುತ್ತಾನೆ.ಇದನ್ನು ಈ ಕಥೆ ತೋರಿಸುತ್ತದೆ.
ಕುರುಕ್ಷೇತ್ರದಲ್ಲಿ ಸಪ್ತಸಾರಸ್ವತ ತೀರ್ಥವೆಂಬ ಕ್ಷೇತ್ರದಲ್ಲಿ ಮಂಕಣಕನೆಂಬ ಮಹರ್ಷಿ ತಪಸ್ಸು ಮಾಡಿ ಲೋಕವಿಖ್ಯಾತನಾದನು.ಒಮ್ಮೆ ಅವನು ದರ್ಭೆಯನ್ನು ತರುವಾಗ,ಆ ಚೂಪಾದ ದರ್ಭೆಯು ಚುಚ್ಚಿ ಅವನ ಕೈಗೆ ಗಾಯವಾಯಿತು.ಆದರೆ ಆಶ್ಚರ್ಯವೆಂಬಂತೆ ಆ ಗಾಯದಿಂದ ರಕ್ತ ಬರುವ ಬದಲು ಶಾಕರಸ ಒಸರಿತು!ಇದರಿಂದ ಆಶ್ಚರ್ಯಚಕಿತನಾದ ಮಂಕಣಕ ಮುನಿ,ತನಗೆ ಮಹಾಸಿದ್ಧಿಯಾಗಿದೆಯೆಂದು ಅತ್ಯಾನಂದಿತನಾಗಿ ಕುಣಿದಾಡತೊಡಗಿದನು!ಅವನ ತಪಸ್ಸಿನ ಪ್ರಭಾವದಿಂದ,ಸುತ್ತಮುತ್ತಲಿನ ಸ್ಥಾವರಜಂಗಮಗಳೆಲ್ಲವೂ ಕುಣಿಯತೊಡಗಿದವು!ಇದನ್ನು ನೋಡಿದ ದೇವತೆಗಳಿಗೆ ಇಡೀ ಪ್ರಪಂಚವೇ ಕುಣಿಯುತ್ತಿದೆಯೆಂಬ ಭ್ರಾಂತಿಯುಂಟಾಯಿತು!ಕೂಡಲೇ ಅವರು ಬ್ರಹ್ಮನನ್ನು ಮುಂದಿಟ್ಟುಕೊಂಡು ಶಿವನ ಬಳಿ ಹೋಗಿ ಮಂಕಣಕನ ನರ್ತನವನ್ನು ಕೂಡಲೇ ನಿಲ್ಲಿಸಬೇಕೆಂದೂ ಮುಂದೆ ಅವನು ನರ್ತಿಸದಂತೆ ಮಾಡಬೇಕೆಂದೂ ಕೇಳಿಕೊಂಡರು.ಶಿವನು ಒಪ್ಪಿ ಒಬ್ಬ ಬ್ರಾಹ್ಮಣನ ರೂಪದಲ್ಲಿ ಮಂಕಣಕನ ಬಳಿ ಹೋದನು.ಮಂಕಣಕನನ್ನು,"ಅಯ್ಯಾ ತಪಸ್ವಿ!ಏಕೆ ಹೀಗೆ ನರ್ತಿಸುತ್ತಿರುವೆ?ಇಷ್ಟೊಂದು ಆನಂದಕ್ಕೇನು ಕಾರಣ?"ಎಂದು ಕೇಳಿದನು.ಅದಕ್ಕೆ ಮಂಕಣಕನು,"ನನ್ನ ಗಾಯವನ್ನು ನೋಡು!ಅದರಿಂದ ರಕ್ತ ಬರುವ ಬದಲು ಶಾಕರಸ ಬರುತ್ತಿದೆ!ಇದೇ ನನ್ನ ಆನಂದಕ್ಕೆ ಕಾರಣ!"ಎಂದನು.ಆಗ ಪರಶಿವನು,"ಇದರಿಂದ ನನಗೇನೂ ಆಶ್ಚರ್ಯವಾಗುತ್ತಿಲ್ಲ!ನೀನು ನನ್ನ ಹಸ್ತವನ್ನೊಮ್ಮೆ ನೋಡು!"ಎಂದು ತನ್ನ ಬಲಗೈ ಬೆರಳಿನಿಂದ ಎಡಗೈ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒತ್ತಿ ಗಾಯ ಮಾಡಿಕೊಂಡನು!ಆಗ ಅವನ ಕೈಯಲ್ಲೂ ಗಾಯವಾಗಿ ಅದರಿಂದ ರಕ್ತ ಬರುವ ಬದಲು ಮಂಜುಗಡ್ಡೆಯಂತೆ ಬೆಳ್ಳಗಿದ್ದ ಭಸ್ಮ ಬಂದಿತು!ಇದನ್ನು ನೋಡಿ ಮಂಕಣಕನ ಅಹಂಕಾರವೆಲ್ಲಾ ಒಮ್ಮೆಲೇ ಇಳಿದುಹೋಗಿ,ಬಂದಿರುವವನು ಪರಶಿವನೇ ಎಂದು ಅವನು ಅರಿತನು.ಕೂಡಲೇ ಅವನ ಕಾಲಿಗೆ ಬಿದ್ದು,"ಸೃಷ್ಟಿ,ಸ್ಥಿತಿ,ಲಯಗಳನ್ನು ಮಾಡುವವನು ನೀನೇ!ದೇವತೆಗಳೇ ನಿನ್ನನ್ನು ಅರಿಯಲಾರರೆಂದಮೇಲೆ ನನ್ನಂಥವನು ಹೇಗೆ ಅರಿತಾನು?ನನ್ನ ತಪಸ್ಸನ್ನು ಹೆಚ್ಚಿಸು ಪ್ರಭು!"ಎಂದು ಬೇಡಿಕೊಂಡನು.ಆಗ ಶಿವನು,"ನಿನ್ನ ತಪಸ್ಸು ಸಾವಿರಪಾಲಾಗಲಿ!ನಾನು ಈ ಸಪ್ತಸಾರಸ್ವತ ಕ್ಷೇತ್ರದಲ್ಲೇ ನೆಲೆಸುತ್ತೇನೆ.ಇಲ್ಲಿ ಸ್ನಾನ ಮಾಡಿ ನನ್ನನ್ನು ಪೂಜಿಸುವವರು ಇಹ,ಪರಗಳಲ್ಲಿ ಸಕಲವನ್ನೂ ಪಡೆದು ಸಾರಸ್ವತಲೋಕಕ್ಕೆ ಹೋಗುತ್ತಾರೆ!"ಎಂದು ಹರಸಿ ಅಂತರ್ಧಾನನಾದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ