ಮಹಾವಿಷ್ಣುವಿನ ಅವತಾರಗಳ ಕಥೆಗಳು ಸುಪ್ರಸಿದ್ಧ.ಆದರೆ ಅವನ ಕೆಲವು ಅವತಾರಗಳ ಕಥೆಗಳು ಅಷ್ಟಾಗಿ ಪರಿಚಿತವಲ್ಲ.ಅಂಥ ಒಂದು ಅವತಾರ ಹಯಗ್ರೀವ.ವಿಷ್ಣುವಿನ ಈ ಹಯಗ್ರೀವಾವತಾರದ ಕಥೆ ದೇವೀಭಾಗವತದಲ್ಲಿದೆ.ಅದರಂತೆ, ಒಮ್ಮೆ ದೇವದೇವನಾದ ಮಹಾವಿಷ್ಣುವು ದೈತ್ಯರೊಂದಿಗೆ ಸಾವಿರಾರು ವರ್ಷಗಳ ಕಾಲ ಹೋರಾಡಿ ದಣಿದು ವೈಕುಂಠದಲ್ಲಿ ವಿಶ್ರಮಿಸಿದನು.ಹಾಗೆ ವಿಶ್ರಮಿಸುತ್ತಾ ಗಾಢ ನಿದ್ರೆಗೆ ಜಾರಿದನು.ಆಗ ಅವನು ತನ್ನ ತಲೆಗೆ ತನ್ನ ಧನುಸ್ಸನ್ನು ಆಧಾರವಾಗಿರಿಸಿ ಮಲಗಿದ್ದನು.ಈ ಸಮಯದಲ್ಲಿ ದೇವತೆಗಳೆಲ್ಲರೂ ಬ್ರಹ್ಮೇಂದ್ರಶಂಕರಸಮೇತರಾಗಿ ಒಂದು ಯಜ್ಞವನ್ನು ಆಚರಿಸಬೇಕೆಂದು ಶ್ರೀ ಹರಿಯ ಸಲಹೆ ಪಡೆಯಲು ವೈಕುಂಠಕ್ಕೆ ಬಂದರು.ಆದರೆ ವಿಷ್ಣುವು ನಿದ್ರಿಸುತ್ತಿದ್ದುದರಿಂದ ಅವರಿಗೆ ಅವನ ದರ್ಶನವಾಗಲಿಲ್ಲ.ಇದರಿಂದ ದೇವತೆಗಳು ಕಳವಳಗೊಂಡರು.ಆಗ ದೇವೇಂದ್ರನು,"ಮಹಾವಿಷ್ಣುವು ನಿದ್ರಾವಶನಾಗಿದ್ದಾನೆ.ಆದರೆ ಯಜ್ಞದ ವಿಷಯದಲ್ಲಿ ಅವನ ಸಲಹೆ ಪಡೆಯಲು ಅವನ ನಿದ್ರಾಭಂಗ ಮಾಡಲೇಬೇಕಾಗಿದೆ!" ಎಂದನು.ಶಿವನು ಹೇಳಿದನು,"ಯಾರ ನಿದ್ರೆಯನ್ನೂ ಭಂಗಗೊಳಿಸಬಾರದು.ವಿಷ್ಣುವು ಯೋಗನಿದ್ರೆಯಲ್ಲಿ ಧ್ಯಾನಸಮಾಧಿಯಲ್ಲಿದ್ದಾನೆ.ಹಾಗಾಗಿ ಅವನ ನಿದ್ರಾಭಂಗ ಮಾಡುವುದು ಅನುಚಿತವಾಗಿದೆ.ಆದರೆ ಯಜ್ಞದ ಸಲಹೆಗಾಗಿ ಅವನನ್ನು ಎಚ್ಚರಿಸಲೇಬೇಕಾಗಿದೆ.ಆದ್ದರಿಂದ ಈ ವಿಷಯದಲ್ಲಿ ಯೋಚಿಸಿ ಮುನ್ನಡೆಯಬೇಕಾಗಿದೆ" ಎಂದನು.ಆಗ ಬ್ರಹ್ಮನು ಸ್ವಲ್ಪ ಯೋಚಿಸಿ ಒಂದು ಉಪಾಯ ಮಾಡಿ ಹೇಳಿದನು,"ಶ್ರೀಹರಿಯು ತನ್ನ ತಲೆಯನ್ನು ತನ್ನ ಧನುಸ್ಸಿನ ಮೇಲಿರಿಸಿ ಮಲಗಿದ್ದಾನೆ. ನಾನೊಂದು ವಮ್ರಿಕ್ರಿಮಿಯನ್ನು ನಿರ್ಮಿಸುತ್ತೇನೆ.ಅದು ಅವನ ಧನುಸ್ಸಿನ ಹೆದೆಯನ್ನು ಕತ್ತರಿಸುತ್ತದೆ.ಆಗ ಉಂಟಾಗುವ ಆಘಾತದಿಂದ ಅವನ ಎಚ್ಚೆತ್ತುಕೊಳ್ಳುತ್ತಾನೆ!"
ಅದರಂತೆ ಬ್ರಹ್ಮನು ಒಂದು ವಮ್ರಿಕ್ರಿಮಿಯನ್ನು ನಿರ್ಮಿಸಿ ಬಿಟ್ಟನು.ಅದು ವಿಷ್ಣುವಿನ ಬಿಲ್ಲಿನ ಹೆದೆಯನ್ನು ಕತ್ತರಿಸಿತು.ಆದರೆ ಆಗ ಬಿಲ್ಲಿನ ತುದಿ ಹಾರಿ ವಿಷ್ಣುವಿನ ಶಿರವನ್ನೇ ಕತ್ತರಿಸಿಬಿಟ್ಟಿತು! ಆ ಶಿರ ಸಮುದ್ರದಲ್ಲಿ ಬಿದ್ದಿತು!ದೇಹವು ಮಾತ್ರ ಅಲ್ಲೇ ಇತ್ತು.ಕೂಡಲೇ ಮಹಾಶಬ್ದವಾಗಿ ಎಲ್ಲೆಲ್ಲೂ ಅಂಧಕಾರ ಕವಿಯಿತು! ದೇವತೆಗಳು ಗಾಬರಿಯಾದರು!ಈಗೇನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ!ಆಗ ಬ್ರಹ್ಮನು ಹೇಳಿದನು,"ಇದು ಕಾಲಪ್ರೇರಿತವಾಗಿ ಆಯಿತು! ಹಿಂದೆ ಕಾಲನ ಪ್ರೇರಣೆಯಿಂದಲೇ ಶಿವನು ನನ್ನ ತಲೆಯೊಂದನ್ನು ಕತ್ತರಿಸಿದ! ಈಗ ಅದೇ ಕಾಲನ ಪ್ರೇರಣೆಯಿಂದ ವಿಷ್ಣುವಿನ ಶಿರವು ಕತ್ತರಿಸಲ್ಪಟ್ಟಿದೆ! ಕಾಲನ ಪ್ರೇರಣೆಯಿಂದಲೇ ಇಂದ್ರನು ಸಹಸ್ರಾಕ್ಷನಾದ ಹಾಗೂ ಒಮ್ಮೆ ಬ್ರಹ್ಮಹತ್ಯಾದೋಷಕ್ಕೊಳಗಾಗಿ ಕಮಲದ ನಾಳದಲ್ಲಿ ಅವನು ಅಡಗಿಕೊಳ್ಳುವಂತಾಯಿತು! ಆದ್ದರಿಂದ ನೀವು ಶೋಕಿಸದೇ ಸನಾತನಮಯಿಯೂ ತ್ರಿಮೂರ್ತಿಗಳಿಗೆ ಶಕ್ತಿದಾಯಿನಿಯೂ ಆದ ಆ ಆದಿಶಕ್ತಿ ಮಹಾಮಾಯೆಯನ್ನು ಪ್ರಾರ್ಥಿಸಿ! ಎಲ್ಲೆಲ್ಲೂ ಇರುವ ಅವಳೇ ಈ ಜಗತ್ತನ್ನು ಧರಿಸಿದ್ದಾಳೆ! ಅವಳೇ ನಿಮ್ಮ ಕಾರ್ಯವನ್ನು ಪೂರೈಸುವಳು!"
ಅಂತೆಯೇ ದೇವತೆಗಳು ಆದಿಶಕ್ತಿಯನ್ನು ವೇದಗಳ ಮೂಲಕ ಪ್ರಾರ್ಥಿಸಿದರು,"ಅಮ್ಮಾ! ನೀನು ಮಹಾಮಾಯೆ! ಇಡೀ ಜಗತ್ತು ನಿನ್ನ ಶಾಸನವನ್ನು ಪಾಲಿಸುವುದು!ನೀನೇ ಈ ಜಗತ್ತನ್ನು ಸೃಷ್ಟಿಸಿರುವೆ! ನೀನು ಓಂಕಾರಸ್ವರೂಪಿಣಿ! ತ್ರಿಮೂರ್ತಿಗಳ ಸೃಷ್ಟಿ ಸ್ಥಿತಿ ಲಯ ಕಾರ್ಯಗಳು ನಿನ್ನ ಶಕ್ತಿಯಿಂದಲೇ ನಡೆಯುವವು! ನಿನ್ನ ವಿಭೂತಿತತ್ವಗಳನ್ನೂ ಗುಣಮಹಿಮೆಗಳನ್ನೂ ಅರಿಯಲು ದೇವತೆಗಳಿಗೂ ಶೃತಿಗಳಿಗೂ ಸಾಧ್ಯವಿಲ್ಲ!ಈಗ ಮಹಾವಿಷ್ಣುವು ಮಸ್ತಕಹೀನನಾಗಿರುವುದನ್ನು ನೀನರಿಯೆಯಾ?ಲಕ್ಷ್ಮೀದೇವಿಯು ಪತಿಹೀನಳಾಗಬೇಕೆ? ಅವಳ ಯಾವ ತಪ್ಪಿಗೆ ಈ ಶಿಕ್ಷೆ? ಅವಳದೇನಾದರೂ ತಪ್ಪಿದ್ದರೂ ಕ್ಷಮಿಸಿ ಶ್ರೀ ಹರಿಗೆ ಶಿರ ಪ್ರದಾನ ಮಾಡಿ ಅವನನ್ನು ಪುನಃ ಜಗತ್ತಿನ ಸ್ಥಿತಿ ಕಾರ್ಯದಲ್ಲಿ ನಿಯೋಜಿಸು ತಾಯಿ!"
ದೇವತೆಗಳ ಸ್ತುತಿಗೆ ಮೆಚ್ಚಿ ಜಗನ್ಮಾತೆಯು ಆಕಾಶವಾಣಿಯ ಮೂಲಕ ಉತ್ತರಿಸಿದಳು,"ದೇವತೆಗಳೇ! ಚಿಂತಿಸಬೇಡಿ! ನಿಮ್ಮ ವೇದಸ್ತುತಿಯಿಂದ ನಾನು ಪ್ರಸನ್ನಳಾದೆನು! ನಿಮ್ಮ ಸ್ಥಾನಗಳಿಗೆ ನಿಶ್ಚಿಂತೆಯಿಂದ ಹೋಗಿ!ಯಾವ ಕಾರ್ಯವೂ ಕಾರಣವಿಲ್ಲದೇ ನಡೆಯುವುದಿಲ್ಲ!ಈಗ ವಿಷ್ಣುವು ಮಸ್ತಕಹೀನನಾಗಿರುವುದಕ್ಕೆ ಕಾರಣವಿದೆ! ಹಿಂದೊಮ್ಮೆ ಶ್ರೀಮನ್ನಾರಾಯಣನು ಲಕ್ಷ್ಮೀಸಮೇತನಾಗಿ ಆದಿಶೇಷನ ಮೇಲೆ ಪವಡಿಸಿದ್ದಾಗ,ಅವನು ಅದೇಕೋ ಲಕ್ಷ್ಮಿಯ ಮುಖವನ್ನು ನೋಡಿ ಗಹಗಹಿಸಿ ನಗತೊಡಗಿದನು.ಆಗ ಲಕ್ಷ್ಮಿಯು ತನ್ನ ಮುಖವು ಕುರೂಪವಾಗಿದೆಯೆಂದು ಅವನು ನಗುತ್ತಿರುವನೆಂದು ಭಾವಿಸಿ ಕುಪಿತಳಾಗಿ ಅವನ ಶಿರಚ್ಛೇದನವಾಗಲೆಂದು ಶಪಿಸಿದಳು! ಆದ್ದರಿಂದಲೇ ಇಂದು ಹೀಗಾಯಿತು! ಆದರೆ ಇದರಿಂದ ಒಳ್ಳೆಯದೇ ಆಗುವುದು! ಅದು ಹೇಗೆಂದರೆ,ಹಯಗ್ರೀವನೆಂಬ ಒಬ್ಬ ದಾನವನಿದ್ದಾನೆ.ಅವನು ಒಮ್ಮೆ ಸರಸ್ವತೀ ನದೀತೀರದಲ್ಲಿ ಕುಳಿತು ನನ್ನ ಏಕಾಕ್ಷರಬೀಜಮಂತ್ರವನ್ನು ಜಪಿಸುತ್ತಾ ದೀರ್ಘಕಾಲ ಉಪಾಸನೆ ಮಾಡಿದನು.ಅದಕ್ಕೆ ಮೆಚ್ಚಿ ಅವನಿಗೆ ವರವನ್ನು ಕೊಡಲು ನಾನು ಮುಂದಾದೆನು.ಆಗ ಅವನು ತನ್ನ ಹೆಸರಿನವನಿಂದಲೇ ಮರಣ ಹೊಂದಬೇಕೆಂಬ ವಿಶಿಷ್ಟ ವರ ಪಡೆದನು.ಮಹಾಪರಾಕ್ರಮಿಯೂ ಲೋಕಕಂಟಕನೂ ಆದ ಅವನನ್ನು ಸಂಹರಿಸಲು ಈಗ ಸಕಾಲವಾಗಿದೆ.ನೀವು ಒಂದು ಕುದುರೆಯ ಶಿರವನ್ನು ಕತ್ತರಿಸಿ ವಿಷ್ಣುವಿನ ದೇಹಕ್ಕೆ ಜೋಡಿಸಿ.ಆಗ ವಿಷ್ಣುವು ಹಯಗ್ರೀವನಾಗಿ ದೈತ್ಯ ಹಯಗ್ರೀವ ನನ್ನು ಸಂಹರಿಸುವನು!ಇದರಿಂದ ಲೋಕಕಲ್ಯಾಣವಾಗುವುದು!"
ಇದನ್ನು ಕೇಳಿ ದೇವತೆಗಳು ಸಂತೋಷಭರಿತರಾದರು! ವಿಷ್ಣುವಿನ ದೇಹಕ್ಕೆ ಹಯಶಿರವನ್ನು ಜೋಡಿಸಲು ಬ್ರಹ್ಮನನ್ನು ಪ್ರಾರ್ಥಿಸಿದರು.ಅಂತೆಯೇ ಬ್ರಹ್ಮನು ಒಂದು ಕುದುರೆಯ ಶಿರವನ್ನು ಖಡ್ಗದಿಂದ ಕತ್ತರಿಸಿ ವಿಷ್ಣುವಿನ ದೇಹಕ್ಕೆ ಜೋಡಿಸಿದನು! ಹೀಗೆ ದೇವಿಯ ಕೃಪೆಯಿಂದ ಹಯಗ್ರೀವಾವತಾರವಾಯಿತು! ದೇವತೆಗಳು ಜಯಘೋಷ ಮಾಡುತ್ತಿದ್ದಂತೆ ಭಗವಾನ್ ಹಯಗ್ರೀವನು ದೈತ್ಯ ಹಯಗ್ರೀವನ ಬಳಿಗೆ ತೆರಳಿ ಅವನೊಂದಿಗೆ ಘೋರ ಯುದ್ಧದಲ್ಲಿ ತೊಡಗಿದನು.ದೀರ್ಘ ಯುದ್ಧದ ಬಳಿಕ ತನ್ನ ಸುದರ್ಶನ ಚಕ್ರದಿಂದ ಆ ದೈತ್ಯನ ಶಿರವನ್ನು ಕತ್ತರಿಸಿ ಅವನನ್ನು ಸಂಹರಿಸಿದನು! ಹರ್ಷಭರಿತರಾದ ದೇವತೆಗಳು ಹರ್ಷೋದ್ಗಾರ ಮಾಡಿದರು!ಅನಂತರ ವಿಷ್ಣುವಿನ ಸಲಹೆ ಪಡೆದು ಯಜ್ಞಾಚರಣೆ ಮಾಡಿದರು.
ಭಾಗವತದಲ್ಲಿ ಹಯಗ್ರೀವಾವತಾರದ ಪ್ರಸ್ತಾಪವಷ್ಟೇ ಬಂದಿದೆ.ಅಲ್ಲಿ ಎರಡನೆಯ ಸ್ಕಂಧದಲ್ಲಿ ಬ್ರಹ್ಮನು ನಾರದರಿಗೆ ನಾರಾಯಣನ ಇಪ್ಪತ್ತು ನಾಲ್ಕು ಅವತಾರಗಳ ಸಂಕ್ಷಿಪ್ತ ಕಥನ ಮಾಡುತ್ತಾ ಹಯಗ್ರೀವಾವತಾರದ ಬಗ್ಗೆ ಹೀಗೆ ಹೇಳುತ್ತಾನೆ,"ಆ ಯಜ್ಞಪುರುಷನಾದ ಮಹಾವಿಷ್ಣುವು ನಾನು ಮಾಡಿದ ಯಜ್ಞದಲ್ಲಿ ಚಿನ್ನದ ಕಾಂತಿಯಿಂದ ಹೊಳೆಯುವ ಹಯಶಿರದ ಹಯಗ್ರೀವ ರೂಪದಲ್ಲಿ ಅವತರಿಸಿದನು!ಭಗವಂತನ ಆ ರೂಪವು ವೇದಮಯವಾದುದು.ಅವನ ನಿ:ಶ್ವಾಸವಾಯುವಿನ ರೂಪದಲ್ಲಿ ಸಮಸ್ತ ವೇದವೂ ಪ್ರಕಟವಾಯಿತು!"
ಹೀಗೆ ಹಯಗ್ರೀವ ಅವತಾರ ಜ್ಞಾನದ ಸಂಕೇತ.ಮಧ್ವಪರಂಪರೆಯಲ್ಲಿ ಬಂದು ವಾದಿರಾಜಸ್ವಾಮಿಗಳು ಹಯಗ್ರೀವಸ್ವಾಮಿಯ ಉಪಾಸಕರಾಗಿದ್ದರು.ಅವರು ಅರ್ಪಿಸುತ್ತಿದ್ದ ಬೆಲ್ಲದ ಹುಗ್ಗಿಯನ್ನು ಹಯಗ್ರೀವ ಸ್ವಾಮಿಯೇ ಕುದುರೆಯ ರೂಪದಲ್ಲಿ ಬಂದು ಸೇವಿಸುತ್ತಿದ್ದನೆಂದು ಕಥೆಗಳಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ