ದುಷ್ಟಶಿಕ್ಷಣ,ಶಿಷ್ಟರಕ್ಷಣ ಮಾಡಲು ಅವತಾರವೆತ್ತಿದ ಶ್ರೀಕೃಷ್ಣನ ಕಥೆಯಲ್ಲಿ ರಾಸಲೀಲೆ ಒಂದು ಮುಖ್ಯ ಪ್ರಸಂಗ.ಒಂದು ಬೆಳದಿಂಗಳ ರಾತ್ರಿಯಂದು ಕೃಷ್ಣನ ಕೊಳಲಿನ ನಾದಕ್ಕೆ ಮನಸೋತ ಗೋಪಿಕಾಸ್ತ್ರೀಯರು ಓಡೋಡಿ ಬಂದು,ಅವನು ಹಿಂದಿರುಗಲು ಹೇಳಿದರೂ ಕೇಳದೇ ಅವನೊಂದಿಗೆ ಹಾಡು,ನರ್ತನಗಳಲ್ಲಿ ತೊಡಗಿ,ಆಲಿಂಗನ,ಚುಂಬನ,ಜಲಕ್ರೀಡೆಗಳಿಂದ ಸಂತೃಪ್ತರಾದರೆಂಬ ವಿಸ್ತೃತ ಕಥಾನಕ,ಭಾಗವತದ ಐದು ಅಧ್ಯಾಯಗಳಲ್ಲಿ ನಿರೂಪಿಸಲ್ಪಟ್ಟಿದೆ.ಇವನ್ನು ರಾಸಪಂಚಾಧ್ಯಾಯಗಳೆಂದೇ ಕರೆಯುತ್ತಾರೆ.ಇಂದಿನವರೆಗೂ ಶ್ರೀಕೃಷ್ಣನು ಹೀಗೇಕೆ ಮಾಡಿದನೆಮದು ಚರ್ಚಿಸುತ್ತಲೇ ಬಂದಿದ್ದಾರೆ.ಭಾಗವತದಲ್ಲೇ ಕಥೆಯನ್ನು ಕೇಳುತ್ತಿದ್ದ ಪರೀಕ್ಷಿತ ಮಹಾರಾಜನು,ಶುಕಮುನಿಗಳನ್ನು ,ದುಷ್ಟರನ್ನು ಸಂಹರಿಸಿ ಭೂಭಾರ ಇಳಿಸಲು ಅವತರಿಸಿದ ಶ್ರೀಕೃಷ್ಣನು ಹೀಗೇಕೆ ಮಾಡಿದನೆಂದು ಕೇಳುತ್ತಾನೆ.ಅದಕ್ಕೆ ಶುಕಮುನಿಗಳು,ಭಗವಂತನ ಕಾರ್ಯಗಳನ್ನು ಲೌಕಿಕ ಮಟ್ಟದಲ್ಲಿ ಅಳೆಯಬಾರದೆಂದು ಹೇಳುತ್ತಾ,ಅವನು ಮಾಡುವ ಯಾವ ಕಾರ್ಯವೂ ಅವನಿಗೆ ಲೇಪಿತವಾಗುವುದಿಲ್ಲ,ಲೋಕದ ನಿಯಮಾವಳಿಗಳನ್ನು ಮೀರಿದ ದೇವತೆಗಳೇ ಇರುವಾಗ,ಭಗವಂತನಿಗೆ ಆ ನಿಯಮಗಳು ಅನ್ವಯಿಸುವುದಿಲ್ಲವೆನ್ನುತ್ತಾರೆ.ಭಕ್ಭತರು ಮತ್ಕ್ತತೆ ಮತ್ರಿತೆ ಈ ಲೀಲೆಗಳನ್ಗೆನು ನೆನೆಯುತ್ತಾ ಪುನೀತರಾಗಲೆಂದು ಅವನು ಇಂಥ ಲೀಲೆಗಳನ್ನು ಮಾಡುತ್ತಾನೆ.ಆದರೆ ಅವನ್ನು ಅನುಕರಿಸಲು ಹೋಗಬಾರದು.ಉದಾಹರಣೆಗೆ ಶಿವನು ವಿಷ ಕುಡಿದನೆಂದು ಸಾಮಾನ್ಯ ಜನರೂ ವಿಷ ಕುಡಿಯಬಾರದು.ಹಾಗಾಗಿಯೇ,ನ ದೇವಚರಿತಂ ಚರೇತ್,ಅಂದರೆ ದೇವರ ನಡತೆಯನ್ನು ಅನುಕರಿಸಬಾರದು ಎಂದಿದ್ದಾರೆ.ಅವರ ಉಪದೇಶಗಳನ್ನು ಕೇಳಿ ಅವುಗಳಂತೆ ನಡೆಯಬೇಕಷ್ಟೆ.ಭಗವಂತನು ಯಾವುದೋ ಲೋಕೋಪಕಾರಿಯಾದ ಉದ್ದೇಶಕ್ಕೇ ಹಾಗೆ ಮಾಡಿರುತ್ತಾನೆ.ಅದು ನಿಧಾನವಾಗಿ ನಮಗೆ ಅರ್ಥವಾಗುತ್ತದೆ.ಒಂದು ಮುಖ್ಯ ಕಾರಣವೆಂದರೆ,ಭಗವಂತನು ಭಕ್ತರಿಗೆ ಅವರಿಗಿಷ್ಟವಾದ ಭಾವದಲ್ಲೇ ಒಲಿಯುತ್ತಾನೆ.ಭಗವದ್ಗೀತೆಯಲ್ಲಿ ಕೃಷ್ಣನು,'ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್',ಅಂದರೆ,'ಯಾರು ಹೇಗೆ ನನ್ನನ್ನು ಆರಾಧಿಸುವರೋ,ನಾನು ಅದೇ ರೀತಿ ಅವರನ್ನು ಸೇವಿಸುತ್ತೇನೆ' ಎಂದು ಅರ್ಥ.ಹೀಗೆ,ಕಂಸ,ಹಿರಣ್ಯಕಶಿಪುಗಳು ವೈರಭಾವದಲ್ಲಿ,ಹನುಮಂತನು ದಾಸ್ಯಭಾವದಲ್ಲಿ,ವಸುದೇವ,ದೇವಕಿ,ನಂದ,ಯಶೋದೆಯರು,ವಾತ್ಸಲ್ಯಭಾವದಲ್ಲಿ,ಅರ್ಜುನನು ಸಖ್ಯಭಾವದಲ್ಲಿ,ರುಕ್ಮಿಣಿ ಮೊದಲಾದವರು ಪತಿಭಾವದಲ್ಲಿ,ಹಾಗೆಯೇ ಗೋಪಿಯರು ಕಾಮಭಾವದಲ್ಲಿ ಭಗವಂತನನ್ನು ಸದಾ ಸ್ಮರಿಸುತ್ತಾ ಅವನಲ್ಲೇ ತನ್ಮಯರಾಗಿ ಮೋಕ್ಷ ಪಡೆದರು.ಕಾಮವೂ ಸರಿಯಾಗಿ,ಭಗವಂತನ ಸೇವೆಗೆ ಬಳಸಿದರೆ ಉನ್ನತಮಟ್ಟ ತಲುಪುತ್ತದೆ.ಅಲ್ಲದೇ,ಗೋಪಿಯರಿಗೆ,ಕೃಷ್ಣನು ಸಾಕ್ಷಾತ್ ಭಗವಂತ ಎಂದು ತಿಳಿದಿತ್ತು.ಅವರೇ ಹೇಳುತ್ತಾರೆ,'ನ ಖಲು ಗೋಪಿಕಾನಂದನೋ ಭವಾನ್ ಅಖಿಲದೇಹಿನಾಮಂತರಾತ್ಮದೃಕ್',ಅಂದರೆ,'ನೀನು ಖಂಡಿತವಾಗಿಯೂ ಗೋಪಿಯ ಮಗನಲ್ಲ,ಸಕಲ ಜೀವಿಗಳ ಅಂತರಾತ್ಮದ್ರಷ್ಟಾ'ಎಂದು.ಗೋಪಿಯರಿಗೆ ಶೃಂಗಾರಭಾವ ಇಷ್ಟವಾದ್ದರಿಂದ ಭಗವಂತ ಅವರಿಗೆ ಆ ರೀತಿ ಒಲಿದ.ಭವಗಳಲ್ಲಿ ಅತ್ಯುನ್ನತವಾದುದು ಶೃಂಗಾರವೇ ಹೌದು.ಸ್ತ್ರೀ,ಪುರುಷರ ಪ್ರೇಮಮಿಲನಕ್ಕಿಂತ ದೊಡ್ಡ ತನ್ಮಯತೆ ಬೇರಾವುದೂ ಇಲ್ಲ.ಹಾಗಾಗಿ ಈ ರೀತಿ ಭಗವಂತನನ್ನು ಪ್ರೀತಿಸಲು ಬಹಳ ಪುಣ್ಯ ಬೇಕು.ಅದು ಮುಗ್ಧ,ಸರಳ ಸ್ವಭಾವದ ಗೋಪಿಯರಿಗೆ ದೊರೆಯಿತು.ಅಲ್ಲದೇ ಲೌಕಿಕವಾಗಿ ತೆಗೆದುಕೊಂಡರೂ,ರಾಸಲೀಲೆ ಒಂದು ಕಲಾತ್ಮಕವಾದ ಶೃಂಗಾರ ನರ್ತನ.ಕೃಷ್ಣನು ಅದನ್ನು ಮಾಡಿದಾಗ ಇನ್ನೂ ಏಳು ವರ್ಷದ ಬಾಲಕ.ಇನ್ನೂ ಕಾಮವು ಚಿಗುರಿರದ ವಯಸ್ಸು ಗೋಪಿಯರು ಅವನಿಗಿಂತ ಸ್ವಲ್ಪ ದೊಡ್ಡವರೂ ಕೆಲವರು ಬೇಗನೆ ವಿವಾಹಿತರೂ ಆಗಿದ್ದರೂ ಅವರೂ ಚಿಕ್ಕವರೇ!ವೃಂದಾವನ,ದ್ವಾರಕೆಗಳ ಪ್ರಾಂತ್ಯಗಳಲ್ಲಿ ಈಗಲೂ ಅನೇಕ ಸ್ತ್ರೀಯರ ಮಧ್ಯೆ ಒಬ್ಬ ಪುರುಷನು ಕುಣಿಯುವ ಗರ್ಭಾ,ಕೋಲಾಟ ಮೊದಲಾದ ಹಳ್ಳಿಯ ನೃತ್ಯಗಳನ್ನನ ಕಾಣಬಹುದು.ಆಗಲೂ ಇಂಥ ನರ್ತನಗಳಿದ್ದು,ಕೃಷ್ಣನು ಅಂಥ ನರ್ತನವನ್ನು ಮಾಡಿರಬಹುದು.ಭಾಗವತವು,'ಆತ್ಮನ್ಯವರುದ್ಧ ಸೌರತಃ',ಅಂದರೆ,ತನ್ನಲ್ಲಿ ಕಾಮವನ್ನು ನಿಗ್ರಹಿಸಿಕೊಂಡಿದ್ದ ಎಂದು ಕೃಷ್ಣನ ಬಗ್ಗೆ ಹೇಳುತ್ತದೆ.ಹಾಗಾಗಿ ಕೃಷ್ಣನು ಒಬ್ಬ ಕಲಾವಿದನಂತೆ ಶೃಂಗಾರನರ್ತನ,ಕ್ರೀಡೆಗಳನ್ನು ಗೋಪಿಯರೊಂದಿಗೆ ಮಾಡಿದನೇ ಹೊರತು,ಕಾಮಕ್ಕೆ ವಶನಾಗಲಿಲ್ಲ ಎಂದು ಅರ್ಥ.ಇನ್ನೊಂದು ವಿಷಯವೆಂದರೆ ಗೋಪಿಯರೆಲ್ಲರೂ ಒಂದು ವರ್ಷದ ಹಿಂದೆ ಕಾತ್ಯಾಯಿನೀವ್ರತ ಮಾಡುತ್ತಾ ಕೃಷ್ಣನೇ ತಮಗೆ ಪತಿಯಾಗಲೆಂದು ಬೇಡಿಕೊಳ್ಳುತ್ತಿದ್ದರು.ಆಗೊಮ್ಮೆ ಅವರು ಪೂರ್ಣ ನಗ್ನರಾಗಿ ಯಮುನಾನದಿಯಲ್ಲಿ ಸ್ನಾನ ಮಾಡಲು,ಆ ತಪ್ಪಿಗಾಗಿ ಕೃಷ್ಣನು ಅವರ ವಸ್ತ್ರಗಳನ್ನು ಕದ್ದು ನಗ್ನರಾಗಿ ನಮಸ್ಕರಿಸುವಂತೆ ಮಾಡಿ ಅವನ್ನು ಹಿಂದಿರುಗಿಸಿದ್ದ.ಲೌಕಿಕವಾಗಿ ಇವು ಬಹಳ ಚಿಕ್ಕ ಮಕ್ಕಳ ಆಟ.ಆಧ್ಯಾತ್ಮಿಕವಾಗಿ,ಕೃಷ್ಣನು ಅವರಲ್ಲಿದ್ದ ನಾನು ಎಂಬ ಭಾವವನ್ನು ನಗ್ನತೆಯ ಮೂಲಕ ಸಂಪೂರ್ಣವಾಗಿ ತೊಡೆದುಹಾಕಿಸಿ,ಪೂರ್ಣ ಸಮರ್ಪಣಾಭಾವವನ್ನು ತಂದು,ಆ ಮೂಲಕ,ಪತಿಭಾವವನ್ನು ಕರುಣಿಸಿದ್ದ.ಆದರೆ ಕಾಮಕ್ಕೆ ಒಳಗಾಗದೇ,ವಸ್ತ್ರಗಳನ್ನು ಸುಮ್ಮನೆ ಹಿಂದಿರುಗಿಸಿದ್ದ.ಅಲ್ಲದೇ,ನದಿಗಳಲ್ಲಿ ಪೂರ್ಣ ನಗ್ನರಾಗಿ ಇಳಿದರೆ ವರುಣನಿಗೆ ಅಪಚಾರವಾಗುತ್ತದೆ ಎಂಬ ಪಾಠವನ್ನೂ ಕಲಿಸಿದ್ದ.ಸಾರ್ವಜನಿಕ ನದಿ,ಕೊಳಗಳಲ್ಲಿ ಪೂರ್ಣ ನಗ್ನರಾಗಿ ಸ್ನಾನ ಮಾಡಬಾರದೆಂದು ತೋರಿಸಿದ್ದ.ಆ ಸಂದರ್ಭದಲ್ಲಿ,ಅವರ ಭಾವವನ್ನು ಗ್ರಹಿಸಿದ ಕೃಷ್ಣನು,ಮುಂದಿನ ಶರತ್ಕಾಲದಲ್ಲಿ ಅವರ ಆಸೆಯನ್ನು ಪೂರೈಸುವೆನೆಂದೂ ಅದಕ್ಕಾಗಿ ಪ್ರತೀಕ್ಷಿಸಬೇಕೆಂದೂ ಹೇಳಿದ.ತನ್ನಲ್ಲಿ ಕಾಮವನ್ನು ತಾಳಿದರೆ ಅದು ಕಾಮವಲ್ಲ ಎಂದು ಹೇಳಿದ.ಏಕೆಂದರೆ ಒಣಗಿದ,ಹುರಿದ,ಧಾನ್ಯಗಳು ಮಳಕೆಯೊಡೆಯುವುದಿಲ್ಲ.ಅಂತೆಯೇ ಕೃಷ್ಣನ ಪ್ರೀತಿಯಲ್ಲಿ ಕರ್ಮಗಳೆಲ್ಲವೂ ಕಳೆದುಹೋಗುತ್ತವೆ.ಹಾಗಾಗಿ ಅವನ ಮೇಲಿನ ಕಾಮ,ಲೌಕಿಕ ಕಾಮದಂತೆ ಕರ್ಮವನ್ನು ಅಂಟಿಸುವುದಿಲ್ಲ.ಹೀಗೆ,ತಾನು ಮಾತು ಕೊಟ್ಟಿದ್ದಂತೆ ಕೃಷ್ಣನು ಆ ಶರತ್ಕಾಲದ ರಾತ್ರಿ,ಗೋಪಿಯರೊಂದಿಗೆ ರಾಸಲೀಲೆಯಾಡಿದ.ಕೆಲವು ಗೋಪಿಯರನ್ನು ಪತಿಯಂದಿರು ಹೋಗಲು ಬಿಡದಿರಲು,ಅವರು ಕೃಷ್ಣನ ಧ್ಯಾನದಲ್ಲೇ ಮೈಮರೆತು ಆನಂದವನ್ನನುಭವಿಸಿದರೆಂದು ಭಾಗವತ ಹೇಳುತ್ತದೆ.ಇನ್ನು ಇತರರು ಕೃಷ್ಣನೊಂದಿಗೆ ನರ್ತಿಸುತ್ತಿದ್ದರೂ,ಅವನ ಮಾಯೆಯಿಂದ ಅವರ ಪತಿಯರಿಗೆ ಅವರು ತಮ್ಮೊಂದಿಗೇ ಇದ್ದಂತೆ ಭಾಸವಾಯಿತು ಎಂದೂ ಹೇಳುತ್ತದೆ ಭಾಗವತ.ಅಂದರೆ,ಗೋಪಿಯರು ಆತ್ಮಭಾವದಲ್ಲಿ ಕೃಷ್ಣನೊಂದಿಗೆ ನರ್ತಿಸಿದರು.ಅವರ ದೇಹಗಳು ಮನೆಯಲ್ಲೇ ಇದ್ದವು.ಇನ್ನೊಂದು ಸ್ವಾರಸ್ಯವೆಂದರೆ,ಕೃಷ್ಣನು,ಎಷ್ಟು ಗೋಪಿಕೆಯರಿದ್ದರೋ ಅಷ್ಟಾಗಿ ವಿಸ್ತರಿಸಿಕೊಂಡು ನರ್ತಿಸಿದನು.ಹಾಗಾಗಿ,ಪ್ರತಿಯೊಬ್ಬ ಗೋಪಿಕಾಸ್ತ್ರೀಗೂ ತನ್ನೊಂದಿಗೆ ಕೃಷ್ಣನು ನರ್ತಿಸುತ್ತಿದ್ದನೆಂಬ ಭಾವವುಂಟಾಯಿತು.ಹಾಗಾಗಿ,ಇದು,ಜೀವಾತ್ಮರು ಪರಮಾತ್ಮನೊಂದಿಗೆ ನರ್ತಿಸಿದ ದೈವೀನೃತ್ಯವಾಗಿತ್ತು.
ಕೃಷ್ಣನು ಗೋಪಿಯರೊಂದಿಗೆ ರಾಸಲೀಲೆಯಾಡಿದುದಕ್ಕೆ,ಒಂದು ಸ್ವಾರಸ್ಯವಾದ ಕಥೆಯಿದೆ.ಇದು,ಕೃಷ್ಣೋಪನಿಷತ್ತೆಂಬ ಚಿಕ್ಕ ಉಪನಿಷತ್ತಿನಲ್ಲಿ ಬರುತ್ತದೆ.ಅದರಂತೆ,,ಶ್ರೀರಾಮನು ದಂಡಕಾರಣ್ಯಕ್ಕೆ ಬಂದಾಗ,ಅಲ್ಲಿದ್ದ ಋಷಿಮುನಿಗಳಿಗೆ ಅವನ ಮನೋಹರವಾದ ರೂಪವನ್ನು ನೋಡಿ ಅವನನ್ನು ಆಲಂಗಿಸಿಕೊಳ್ಳಬೇಕೆಂದು ಆಸೆಯಾಯಿತು.ಆಗ ಶ್ರೀರಾಮನು,"ಈಗ ಬೇಡ.ನನ್ನ ಮುಂದಿನ ಅವತಾರವಾದ ಕೃಷ್ಣಾವತಾರದಲ್ಲಿ ನೀವು ಗೋಪಿಕಾಸ್ತ್ರೀಯರಾಗಿ ಹುಟ್ಟುವಿರಿ.ಆಗ ನಿಮ್ಮ ಆಸೆಯನ್ನು ಪೂರೈಸುವೆ.ಶೃಂಗಾರಭಾವಕ್ಕೆ ಸ್ತ್ರೀಪುರುಷ ಪ್ರೇಮವೇ ಹೆಚ್ಚು ನಿಕಟ",ಎಂದು ವರವಿತ್ತನು.ಆ ಹಿಂದಿನ ಋಷಿಮುನಿಗಳೇ ಗೋಪಿಕಾಸ್ತ್ರೀಯರಾಗಿ ಹುಟ್ಟಿ,ತಮ್ಮ ಅಪರಿಮಿತವಾದ ತಪಸ್ಸಿನ ಫಲದಿಂದ ಸಾಕ್ಷಾತ್ ಪರಬ್ರಹ್ಮನಾದ ಶ್ರೀಕೃಷ್ಣನೊಂದಿಗೆ ರಾಸಲೀಲೆಯಾಡಿದರು.