ಕೃಷ್ಣ ಎಂಬ ಪದದ ಅರ್ಥವೇ ಕಪ್ಪು ಎಂದು.ಕೃಷ್ಣ ಎಂದರೆ ಆಕರ್ಷಣೆ ಎಂದೂ ಆಗುತ್ತದೆ.ಕಪ್ಪು ಬಣ್ಣ,ಆಳ ಹಾಗೂ ನಿಗೂಢತೆಯನ್ನು ಸೂಚಿಸುತ್ತದೆ.ಭಗವಂತ ಬಹಳ ಆಳ ಹಾಗೂ ನಿಗೂಢವಾಗಿರುವುದರಿಂದ ಕೃಷ್ಣ ಕಪ್ಪು ಬಣ್ಣದಲ್ಲಿಅವತರಿಸಿದ ಎನ್ನಬಹುದು.ಕೃಷ್ಣನ ಮೂಲವಾದ ವಿಷ್ಣುವನ್ನೂ ಕಪ್ಪಾಗಿಯೇ ತೋರಿಸಲಾಗುತ್ತದೆ.ಬಲರಾಮನು ವಿಷ್ಣುವು ಮಲಗಿರುವ ಆದಿಶೇಷ ಸರ್ಪದ ಅವತಾರ.ಆದಿಶೇಷ ಬಿಳಿಯ ಸರ್ಪ.ಅಲ್ಲದೇ ಬಿಳಿ ಶುಭ್ರತೆಯ ಸಂಕೇತ.ಹಾಗಾಗಿ,ವಿಷ್ಣುವಿನ ಅಂಶಾವತಾರವಾದ ಬಲರಾಮನು ಬಿಳಿಯಾಗಿದ್ದ ಎನ್ನಬಹುದು.
ವಿಷ್ಣುಪುರಾಣದಲ್ಲಿ,ಕೃಷ್ಣ,ಬಲರಾಮರು ಕಪ್ಪು,ಬಿಳುಪಾಗಿದ್ದುದಕ್ಕೆ ಕಾರಣವಾಗಿ ಒಂದು ಸ್ವಾರಸ್ಯವಾದ ಕಥೆಯಿದೆ.ಅದೆಂದರೆ,ದೇವತೆಗಳೆಲ್ಲರೂ ಭೂದೇವಿಯ ಸಹಿತವಾಗಿ ಮಹಾವಿಷ್ಣುವಿನ ಬಳಿ ಹೋಗಿ,ಭೂಮಿಯಲ್ಲಿ ಅನೇಕ ದುಷ್ಟರು ಜನಿಸಿ ಭೂಭಾರ ಹೆಚ್ಚಿರುವುದರಿಂದ ಅವನು ಅವತರಿಸಿ ಅವರನ್ನು ಸಂಹರಿಸಬೇಕೆಂದು ಪ್ರಾರ್ಥಿಸಿದರು.ಆಗ ಮಹಾವಿಷ್ಣುವು,ತನ್ನ ತಲೆಯಿಂದ ಒಂದು ಕಪ್ಪಾದ ಮತ್ತು ಒಂದು ಬಿಳಿಯಾದ ಕೂದಲುಗಳನ್ನು ಭೂಮಿಯ ಮೇಲೆ ಹಾಕಿದನು.ಕಪ್ಪು ಕೂದಲು,ಕೃಷ್ಣನಾಯಿತು,ಹಾಗೂ ಬಿಳಿಯ ಕೂದಲು ಬಲರಾಮನಾಯಿತು!ಹಾಗಾಗಿ ಕೃಷ್ಣ,ಬಲರಾಮರ ಬಣ್ಣ,ಕಪ್ಪು,ಬಿಳುಪಾಯಿತು.ದುಷ್ಟರ ಸಂಹಾರ ಮಾಡಿ ಭೂಭಾರ ಇಳಿಸಲು ಭಗವಂತನ ಎರಡು ಕೂದಲುಗಳೇ ಸಾಕೆಂದೂ ಈ ಕಥೆ ತೋರಿಸುತ್ತದೆ.