ಕಿಂ ಕೃತಮನೇನ ಮರುತಾ ಮಾಧವಿಕಾಕುಸುಮಸೌರಭಂ ವಹತಾ ।
ಆಶ್ಲಿಷ್ಟಭ್ರಮರೀಕೋऽಪ್ಯೌತ್ಕಂಠ್ಯಂ ಮಧುಕರೋ ನೀತ: ।।
ಕನ್ನಡ ಅನುವಾದ
" ಆಹಾ! ಮಾಧವಿಕಾಲತೆಯ ಕುಸುಮಗಳ ಸೌರಭವನ್ನು ಹೊತ್ತು ತಂದ ಈ ಮಂದಮಾರುತವು ಏನು ಮಾಡಿತು?! ಭ್ರಮರಿಯನ್ನು ಆಲಿಂಗಿಸಿದ್ದ ಭ್ರಮರವನ್ನೂ ಉತ್ಕಂಠವಾಗಿಸಿತು!"
ಮತ್ತೊಂದು ಸುಂದರ ಅನ್ಯೋಕ್ತಿಯಿಂದ ಶೃಂಗಾರರಸವನ್ನು ಹರಿಸಿದ್ದಾನೆ ಕವಿ! ಇಲ್ಲಿ ಭ್ರಮರವು ಭ್ರಮರಿಯನ್ನು ಈಗಾಗಲೇ ಆಲಿಂಗಿಸಿದೆ! ಆದರೆ ಮಾಧವಿಕಾಲತೆಯ ಹೂಗಳ ಸೌರಭವನ್ನು ಹೊತ್ತು ತಂದ ಮಂದಮಾರುತವು ಆ ಭ್ರಮರವನ್ನೂ ಉತ್ಕಂಠವಾಗಿಸಿದೆ! ಅಂದರೆ ನಾಯಕನು ನಾಯಕಿಯನ್ನು ಈಗಾಗಲೇ ಆಲಿಂಗಿಸಿದ್ದಾನೆ. ಆದರೆ ಮಾಧವಿಕಾ ಲತೆಯ ಪುಷ್ಪಗಳ ಸುಗಂಧವನ್ನು ಹೊತ್ತು ತಂದ ಮಂದಮಾರುತದಿಂದ ಅವನ ಕಾಮ ಇನ್ನಷ್ಟು ಹೆಚ್ಚಿ ಅವನು ಉತ್ಕಂಠಿತನಾಗಿದ್ದಾನೆ!
ಭರತನು ತನ್ನ ನಾಟ್ಯಶಾಸ್ತ್ರದಲ್ಲಿ,' 'ವಿಭಾವಾನುಭಾವವ್ಯಭಿಚಾರಸಂಯೋಗಾತ್ ರಸನಿಷ್ಪತ್ತಿ:' ಎಂದು ಹೇಳಿದ್ದಾನೆ. ಅಂದರೆ, ವಿಭಾವ, ಅನುಭಾವ, ಮತ್ತು ವ್ಯಭಿಚಾರಿ ಭಾವ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸವುಂಟಾಗುತ್ತದೆ ಎಂದು ಅರ್ಥ. ವಿಭಾವ ಎಂದರೆ ರಸಕ್ಕೆ ಮೂಲ ಕಾರಣ. ಇದರಲ್ಲಿ ಆಲಂಬನ ವಿಭಾವ ಮತ್ತು ಉದ್ದೀಪನ ವಿಭಾವ ಎಂದು ಎರಡು ಬಗೆಗಳಿವೆ. ಆಲಂಬನ ವಿಭಾವ, ಮುಖ್ಯ ಕಾರಣ ಅಥವಾ ಆಧಾರ. ಇಲ್ಲಿನ ಶೃಂಗಾರ ರಸದಲ್ಲಿ ನಾಯಕ, ನಾಯಕಿಯರೇ ಆಲಂಬನ ವಿಭಾವದ ಅಂಗಗಳು. ಉದ್ದೀಪನ ವಿಭಾವವೆಂದರೆ ಪ್ರೇಮವನ್ನು ಪ್ರಚೋದಿಸುವ ಅಂಶಗಳು. ಅಂದರೆ ಇಲ್ಲಿ, ಮಾಧವಿಕಾ ಲತೆಯ ಪುಷ್ಪಗಳ ಸುಗಂಧವನ್ನು ಹೊತ್ತು ತರುವ ಮಂದಮಾರುತ. ಅನುಭಾವವೆಂದರೆ ಬಾಹ್ಯ ಅಭಿವ್ಯಕ್ತಿ. ಇಲ್ಲಿ ನಾಯಕ, ನಾಯಕಿಯರ ಆಲಿಂಗನ. ವ್ಯಭಿಚಾರಿ ಅಥವಾ ಸಂಚಾರಿಭಾವವೆಂದರೆ, ಬಂದು ಹೋಗುವ ಭಾವಗಳು. ವ್ಯಭಿಚಾರಿ ಭಾವ ಎಂದರೆ ಬದಲಾವಣೆ ಎಂದಷ್ಟೇ ಅರ್ಥ. ಇಲ್ಲಿ ವ್ಯಭಿಚಾರಿ ಭಾವ, ನಾಯಕನ ಉತ್ಕಂಠತೆ. ಹೀಗೆ ಈ ಪದ್ಯದಲ್ಲಿ ಶೃಂಗಾರ ರಸದ ಸೊಗಸಾದ ನಿರೂಪಣೆಯಿದೆ.